Sunday, 15th December 2024

ವಿಪಕ್ಷಗಳ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ?

ವಿಶ್ಲೇಷಣೆ

ಡಾ.ಜಗದೀಶ್ ಮಾನೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಪ್ರಧಾನಿಯಾಗಬೇಕೆಂಬ ಕನಸಿದೆ. ರಾಜ್ಯದಲ್ಲಿ ದಶಕಗಳಿಂದ ತಳವೂರಿದ್ದ ಕಮ್ಯುನಿಸ್ಟ್ ಪಕ್ಷವನ್ನು ಬೇರುಸಮೇತ ಕಿತ್ತೊಗೆದು ಗದ್ದುಗೆಯೇರಿದ ಗಟ್ಟಿಗಿತ್ತಿ ಈಕೆ. ಆದರೆ ಮಮತಾರ ಟಿಎಂಸಿ ಪಕ್ಷಕ್ಕೆ ಪಶ್ಚಿಮ ಬಂಗಾಳ ಹೊರತುಪಡಿಸಿ ದೇಶದ ಮಿಕ್ಕಾವ ರಾಜ್ಯದಲ್ಲೂ ಹೇಳಿಕೊಳ್ಳುವಷ್ಟು ಪ್ರಭಾವವಿಲ್ಲ.

ವಿಶ್ವದ ಜನಪ್ರಿಯ ನಾಯಕರ ಸಾಲಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಅಗ್ರಗಣ್ಯ ಸ್ಥಾನದಲ್ಲಿದೆ. ಹೀಗಾಗಿ ಮೋದಿಯವರ ಜನಪ್ರಿಯತೆ ಹಾಗೂ ವರ್ಚ ಸ್ಸಿಗೆ ಸರಿಸಾಟಿಯಾಗಿ ನಿಲ್ಲುವಂಥ ನಾಯಕರನ್ನು ಮುನ್ನೆಲೆಗೆ ತರುವ ಅನಿವಾರ್ಯ ಮತ್ತು ಅಗತ್ಯ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳಿಗೂ ಎದುರಾಗಿದೆ. ಕಳೆದೆರಡು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದಾಗಲೂ ಅವರನ್ನು ಚುನಾವಣೆಯಲ್ಲಿ ಕಟ್ಟಿ ಹಾಕಲು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಒಟ್ಟಾಗಿ ಸೇರಿ ತಂತ್ರಗಳನ್ನು ರೂಪಿ ಸಿದ್ದು ಹೌದಾದರೂ ಅದರಲ್ಲಿ ಯಶ ಕಾಣಲಿಲ್ಲ ಎಂಬುದು ಜಗಜ್ಜಾಹೀರು.

ಹೀಗೆ ಸತತ ಸೋಲುಗಳಿಂದ ಕಂಗೆಟ್ಟ ಕಾಂಗ್ರೆಸ್ ಪಕ್ಷವು ಮಲ್ಲಿಕಾರ್ಜುನ ಖರ್ಗೆಯವರಿಗೆ ತನ್ನ ಸಾರಥ್ಯದ ಹೊಣೆ ಹೊರಿಸಿ ಗೇಮ್ ಪ್ಲ್ಯಾನ್ ಸಿದ್ಧಪಡಿಸಲು ಮುಂದುಮಾಡಿದೆ. ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ವನ್ನು ಸೋಲಿಸಿಯೇ ತೀರಬೇಕೆಂದು ಪಣತೊಟ್ಟವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್. ಈಗ, ೨೬ ಪಕ್ಷಗಳನ್ನೊಳ ಗೊಂಡ ವಿಪಕ್ಷ ಗಳ ಮಹಾಮೈತ್ರಿಕೂಟಕ್ಕೆ ‘ಇಂಡಿಯ’ ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಮೇಲ್ನೋಟಕ್ಕೆ ಇದರ ನೇತೃತ್ವವನ್ನು ಕಾಂಗ್ರೆಸ್ ವಹಿಸಿದ್ದರೂ, ನೇಪಥ್ಯದಲ್ಲಿದ್ದು ಕಾರ್ಯಾಚರಿಸುತ್ತಿರುವುದು ನಿತೀಶ್ ಕುಮಾರರೇ.

ರಾಜಕೀಯದ ವಿಷಯಗಳನ್ನು ಯಾವಾಗಲೂ ಪ್ರಾಕ್ಟಿಕಲ್ ಆಗಿ ಯೋಚಿಸುವ ನಿತೀಶ್, ಅಧಿಕಾರ ಹಿಡಿಯುವ ವಿಷಯದಲ್ಲಿ ಬಿಜೆಪಿ ಬೆಂಬಲ ಪಡೆಯುವುದಕ್ಕೂ ಹಿಂದು-ಮುಂದು ನೋಡಿದವರಲ್ಲ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಿಂದ ಹೊರಬಂದ ಮೇಲೂ ತಮ್ಮ ಸಿಎಂ ಸ್ಥಾನವನ್ನು ಉಳಿಸಿಕೊಳ್ಳುವುದರಲ್ಲಿ ವಿಫಲರಾದವರಲ್ಲ! ಇವರು ಮಮತಾ ಬ್ಯಾನರ್ಜಿ ಯಂತೆ ಟಿಎಂಸಿ ನೇತೃತ್ವದಲ್ಲಿ ಅಥವಾ ತೆಲಂಗಾಣದ ಕೆ. ಚಂದ್ರಶೇಖರರಾವ್ ರೀತಿಯಲ್ಲಿ ತಮ್ಮ ಪಕ್ಷದ ಹೆಸರು ಬದಲಿಸಿ ಕೊಂಡು ತಾವೇ ಅದರ ನೇತಾ ರರಾಗುವ ರೀತಿಯಲ್ಲಂತೂ ಯೋಚಿಸಿಲ್ಲ.

ದೇಶಾದ್ಯಂತ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಮೈತ್ರಿಕೂಟದ ಸ್ವರೂಪ ಹೇಗಿರಬೇಕೆಂಬ ಸ್ಪಷ್ಟ ಕಲ್ಪನೆಯೊಂದಿಗೆ ಅದರ ನೀಲನಕ್ಷೆಯನ್ನು ಅವರು ರೂಪಿಸಿದರು. ‘ನಾವು ಯುಪಿಎ ಮೂಲಕ ಮತ್ತೆ ಎನ್‌ಡಿಎ ಮೈತ್ರಿಕೂಟವನ್ನು ಎದುರಿಸುವುದು ಅಸಾಧ್ಯ; ಯುಪಿಎ ಅಂದರೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಎಂದು ಜನಸಾಮಾನ್ಯರ ತಲೆಯಲ್ಲಿ ಅಚ್ಚೊತ್ತಿದೆ. ಅದರಲ್ಲೂ ಮುಖ್ಯವಾಗಿ, ಕಾಂಗ್ರೆಸ್‌ನ ಸತತ ಸೋಲುಗಳಿಂದಾಗಿ ಜನರ ಮನಸ್ಸಿನಲ್ಲಿ ನೆಗೆಟಿವ್ ಅಂಶಗಳೇ ಹೆಚ್ಚಾಗಿ ಬಿಂಬಿತವಾಗಿವೆ. ಆದ್ದರಿಂದ ಮೈತ್ರಿಕೂಟಕ್ಕೆ ಹೊಸರೂಪ ನೀಡುವ ಮೂಲಕ ರಾಜಕೀಯದಲ್ಲಿ ಹೊಸತನ ತರಬೇಕಿದೆ’ ಎಂದು ನಿತೀಶರು ಅಭಿ ಪ್ರಾಯ ಪಟ್ಟಿದ್ದು ಈ ಹಿನ್ನೆಲೆಯಲ್ಲಿಯೇ. ನಿತೀಶರ ಈ ಸಲಹೆಯಿಂದಾಗಿ ಕಾಂಗ್ರೆಸ್‌ಗೂ ತನ್ನ ತಪ್ಪಿನ ಅರಿವಾಯಿತು ಎನಿಸುತ್ತದೆ. ಹೀಗಾಗಿ, ತಾನು ದೊಡ್ಡಣ್ಣನ ಸ್ಥಾನದಲ್ಲಿ ನಿಂತು ಮೈತ್ರಿಕೂಟವನ್ನು ಮುನ್ನಡೆಸುವ ಯತ್ನಕ್ಕೆ ಎಂದಿನಂತೆ ಕೈಹಾಕಿದರೆ, ಮಿಕ್ಕ ಪಕ್ಷಗಳು ತನಗೆ ಉತ್ಸಾಹದಿಂದ ಸಾಥ್ ನೀಡುವುದಿಲ್ಲ ಎಂಬ ಸತ್ಯವನ್ನೂ ಕಾಂಗ್ರೆಸ್ ಅರ್ಥಮಾಡಿಕೊಂಡಿತು.

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸೋಲು ಒದಗಿದ ನಂತರವಂತೂ ಕಾಂಗ್ರೆಸ್‌ಗೆ ಹೊಸಪಕ್ಷಗಳ ಶಕ್ತಿ ಬಹಳ ಚೆನ್ನಾ ಗಿಯೇ ಅರಿವಾಯಿತು ಎನ್ನಲಡ್ಡಿಯಿಲ್ಲ. ಆದರೆ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ದಕ್ಕಿ ಅಧಿಕಾ ರದ ಗದ್ದುಗೆ ಏರಿದ ನಂತರ ಕಾಂಗ್ರೆಸ್ ಮತ್ತಷ್ಟು ಪುಟಿದು ನಿಂತಿದೆ. ಹೀಗಾಗಿ ನಿತೀಶ್ ಕುಮಾರ್ ಅವರ ಪರಿಶ್ರಮದಿಂದಾಗಿ ಮೈಕೊಡವಿಕೊಂಡು ನಿಂತಿರುವ ಮಹಾಮೈತ್ರಿಕೂಟದ ನೇತೃತ್ವ ಕಾಂಗ್ರೆಸ್ ಕಡೆಗೆ ವಾಲಿಕೊಳ್ಳುವ ಲಕ್ಷಣಗಳು ತೋರುತ್ತಿವೆ. ಆದರೆ ಈ  ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ; ‘ಮೊದಲು ಗೆಲ್ಲೋಣ, ಆಮೇಲೆ ನಾಯಕನನ್ನು ಆರಿಸೋಣ’ ಎಂಬುದು ಬೆಂಗಳೂರಿನ ಮಹಾಮೈತ್ರಿಕೂಟದ ಸಭೆಗೂ ಮುನ್ನ ನಾಯಕರಿಂದ  ನೌಪಚಾರಿಕವಾಗಿ ಘೋಷಣೆ ಯಾಗಿರುವ ನಿಲುವು ಎನ್ನಲಾಗುತ್ತಿದೆ.

ಆದರೆ, ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಸತತ ಸೋಲುಗಳನ್ನು ದಾಖಲಿಸಿದ್ದರಿಂದ, ಪ್ರಧಾನಿ ಅಭ್ಯರ್ಥಿಯ ಕಣದಿಂದ ಅವರು ಹಿಂದೆ ಸರಿದಂತೆ ತೋರುತ್ತದೆ. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರಿಗೂ ಪ್ರಧಾನಿ ಯಾಗುವ ಬಹುದೊಡ್ಡ ಬಯಕೆಯಿದೆ; ಆದರೆ ಕೇಜ್ರಿವಾಲ್ ಮಾದರಿಯ ಆಡಳಿತ ಮತ್ತು ರಾಜಕೀಯವನ್ನು ‘ಸಾಂಪ್ರ ದಾಯಿಕ’ ರಾಜಕೀಯ ಪಕ್ಷಗಳು ಒಪ್ಪಿಕೊಳ್ಳುವುದಿಲ್ಲ. ತಮ್ಮ ಪಕ್ಷದೊಳಗಿನ ಎದುರಾಳಿಗಳನ್ನು ಎದುರಿಸಲಾಗದೆ ಅವರನ್ನೆಲ್ಲ ಹೊರ ಹಾಕಿದ ಕೇಜ್ರಿವಾಲ್ ಅವರಿಗೆ ಮಹಾಮೈತ್ರಿಕೂಟವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವಿಲ್ಲ ಎಂಬುದು ಈ ಮಿಕ್ಕ ಪಕ್ಷಗಳ ಗ್ರಹಿಕೆ.

ಇನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಪ್ರಧಾನಿಯಾಗಬೇಕೆಂಬ ಕನಸಿದೆ. ರಾಜ್ಯದಲ್ಲಿ ದಶಕಗಳಿಂದ ತಳವೂರಿದ್ದ ಕಮ್ಯುನಿಸ್ಟ್ ಪಕ್ಷವನ್ನು ಬೇರುಸಮೇತ ಕಿತ್ತೊಗೆದು ಗದ್ದುಗೆಯೇರಿದ ಗಟ್ಟಿಗಿತ್ತಿ ಈಕೆ. ಆದರೆ ಮಮತಾರ ಟಿಎಂಸಿ ಪಕ್ಷಕ್ಕೆ ಪಶ್ಚಿಮ ಬಂಗಾಳ ಹೊರತುಪಡಿಸಿ ದೇಶದ ಮಿಕ್ಕಾವ ರಾಜ್ಯದಲ್ಲೂ ಹೇಳಿಕೊಳ್ಳುವಷ್ಟು ಪ್ರಭಾವ ವಿಲ್ಲ ಮತ್ತು ಅವರೊಬ್ಬ ರಾಷ್ಟ್ರೀಯ ನಾಯಕಿಯಾಗಿಯೂ ಗುರುತಿಸಿಕೊಂಡಿಲ್ಲ. ಸಾಲದೆಂಬಂತೆ ಅವರ ವರ್ತನೆ ಕೂಡ ಉಳಿದ ರಾಜಕೀಯ ನಾಯಕರಿಗೆ ಹಿಡಿಸುವುದಿಲ್ಲ. ಎಲ್ಲವೂ ತಾನು ಹೇಳಿದಂತೆಯೇ ನಡೆಯಬೇಕು, ತಾವು ಮಾಡಿದ್ದೇ ಶಾಸನ ಎಂಬ ಆಕೆಯ ಸರ್ವಾಧಿಕಾರಿ ಧೋರಣೆಯಂತೂ ಯಾರಿಗೂ ಹಿಡಿಸುವುದಿಲ್ಲ. ಜತೆಗೆ ಮಮತಾರಿಗೆ ಮುಂಗೋಪಿ, ಜಗಳಗಂಟಿ ಎಂಬ ಹಣೆಪಟ್ಟಿಯಿದೆ.

ಹೀಗಾಗಿ ಮಮತಾರ ನಾಯಕತ್ವದಲ್ಲಿ ವಿಪಕ್ಷಗಳ ಒಕ್ಕೂಟ ಅಥವಾ ಅವುಗಳ ಸರಕಾರ (ಒಂದೊಮ್ಮೆ ಅಧಿಕಾರಕ್ಕೆ ಬಂದರೆ!) ಉಳಿಯುವುದು ಮತ್ತು ಮುನ್ನಡೆಯುವುದು ಬಹಳ ಕಷ್ಟ. ಈ ಎಲ್ಲ ಕಾರಣಗಳಿಂದ ಪ್ರಧಾನಿಯಾಗಬೇಕೆಂಬ ಮಮತಾರ ಕನಸು ಈಡೇರುವುದು ಕಷ್ಟ. ಪ್ರಸ್ತುತ ಬಿಹಾರದ ಮುಖ್ಯಮಂತ್ರಿಯಾಗಿರುವ ಮತ್ತು ಈ ಮಹಾಮೈತ್ರಿಕೂಟದ ಹಿಂದಿನ ಸೂತ್ರಧಾರ ರಾಗಿರುವ ನಿತೀಶ್ ಕುಮಾರ್ ಪ್ರಧಾನಿ ಹುದ್ದೆಯ ಮತ್ತೊಬ್ಬ ಮಹತ್ವಾಕಾಂಕ್ಷಿ. ಇವರ ಆಡಳಿತ ಸಾಮರ್ಥ್ಯದ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯವಿದೆ.

ಅನೇಕ ವರ್ಷಗಳ ರಾಜ್ಯಾಡಳಿತದ ನಂತರವೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣದ ಕಳಂಕವನ್ನು ನಿತೀಶರು ಅಂಟಿಸಿಕೊಂಡಿಲ್ಲ. ಇವರು ಹಿಂದುಳಿದ ವರ್ಗದ ನಾಯಕರಾಗಿರುವುದರಿಂದ ಮೋದಿಯವರಿಗೆ ಪೈಪೋಟಿ ನೀಡ ಬಲ್ಲರು ಮತ್ತು ಹಿಂದಿ ಭಾಷಿಕ ಪ್ರದೇಶಗಳಲ್ಲಿ ಜನರನ್ನು ತಮ್ಮತ್ತ ಸೆಳೆಯುವ ಕಲೆಯೂ ನಿತೀಶರಿಗೆ ಕರಗತ. ಎಲ್ಲಕ್ಕಿಂತ
ಮುಖ್ಯವಾಗಿ, ಅಗತ್ಯಾನುಸಾರ ಒಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮತ್ತು ಕ್ಷಣಾರ್ಧದಲ್ಲಿ ಆ ಮೈತ್ರಿಯನ್ನು ಮುರಿದು ಮತ್ತೊಂದು ಪಕ್ಷದೊಂದಿಗೆ ಕೈಜೋಡಿಸುವ ಜಾಣ್ಮೆ ನಿತೀಶರಲ್ಲಿ ಹರಳುಗಟ್ಟಿದೆ. ಆದರೆ, ಅವರು ಪ್ರತಿನಿಧಿಸುವ ಸಂಯುಕ್ತ ಜನತಾದಳ ಪಕ್ಷವು ಬಿಹಾರಕ್ಕಷ್ಟೇ ಸೀಮಿತವಾಗಿದೆ.

ಜತೆಗೆ, ಮೈತ್ರಿಕೂಟವನ್ನು ಪದೇಪದೆ ಬದಲಿಸುವ ಮೂಲಕ ದೇಶದ ಮೇಲೆ ಪ್ರಭಾವ ಬೀರುವ ಫೇಸ್‌ವ್ಯಾಲ್ಯೂವನ್ನು ನಿತೀಶರು ಕಳೆದುಕೊಂಡಿದ್ದಾರೆ. ನಂಬಿಕೆಗೆ ಅರ್ಹರಲ್ಲದ ವ್ಯಕ್ತಿ ಎಂಬ ಹಣೆಪಟ್ಟಿ ಅವರಿಗೆ ಅಂಟಿಕೊಂಡುಬಿಟ್ಟಿದೆ. ಹೀಗಾಗಿ ಅವರ ಮೇಲೆ
ಮೈತ್ರಿಕೂಟದ ಮಿಕ್ಕ ನಾಯಕರಿಗೆ ವಿಶ್ವಾಸವಿಲ್ಲ ಮತ್ತು ಈ ಕಾರಣಕ್ಕಾಗಿ ನಿತೀಶರು ಪ್ರಧಾನಿಯಾಗುವುದು ಕಷ್ಟ. ಆದರೆ, ಲೋಕಸಭಾ ಚುನಾವಣೆಗೂ ಮುನ್ನ ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಬೇಕಾದ ಅನಿವಾರ್ಯವಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರಲ್ಲೊಬ್ಬರೂ, ಎಐಸಿಸಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆಯವರು ಉತ್ತಮ ಆಯ್ಕೆ
ಯಾಗಬಹುದು.

ಕಳೆದ ೯ ವರ್ಷಗಳಿಂದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ ಅನುಭವವಿರುವ ಖರ್ಗೆಯವರು, ರಾಜಕೀಯ ಅಖಾಡದ ಆಳ-ಅಗಲಗಳನ್ನು ಚೆನ್ನಾಗಿ ಅರಿತಿರುವುದಂತೂ ಸತ್ಯ. ೨೦೨೪ರ ಲೋಕಸಭಾ ಚುನಾ
ವಣೆಯಲ್ಲಿ ಮಹಾಮೈತ್ರಿಕೂಟವು ತಾನಂದುಕೊಂಡಂತೆ ಒಂದೊಮ್ಮೆ ಗೆದ್ದರೆ ಖರ್ಗೆಯವರು ಪ್ರಧಾನಿಯಾಗುವ ಎಲ್ಲಾ ಲಕ್ಷಣ ಗಳಿವೆ. ಹೀಗಾಗಿ ಚುನಾವಣೆಗೂ ಮೊದಲೇ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಕಾಂಗ್ರೆಸ್ ಪಕ್ಷಕ್ಕೂ, ಮಹಾ ಮೈತ್ರಿಕೂಟಕ್ಕೂ ಒಂದಿಷ್ಟು ಲಾಭಗಳಾಗಬಹುದು.

ಅತಿಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ, ದೆಹಲಿ ಗದ್ದುಗೆಯ ಕೀಲಿಕೈನಂತಿರುವ ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ದಲಿತ ಮತಗಳಿವೆ. ಖರ್ಗೆಯವರು ದಲಿತ ನಾಯಕರಾಗಿರುವುದರಿಂದ, ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಸೆಳೆಯುವಲ್ಲಿ
ಅವರು ಪ್ರಬಲ ಅಸವಾಗಬಲ್ಲರು. ಹಿಂದಿ ಭಾಷೆಯ ಮೇಲೂ ಅವರಿಗೆ ಹಿಡಿತವಿರುವುದರಿಂದ ಮಹಾಮೈತ್ರಿಕೂಟದ ಧ್ಯೇಯೋ ದ್ದೇಶ ಗಳನ್ನು ಹಿಂದಿ ಭಾಷಿಕರಿಗೆ ಮನಮುಟ್ಟುವಂತೆ ತಿಳಿಸುವುದು ಅವರಿಗೆ ಕಷ್ಟವಾಗಲಾರದು. ಈ ಎಲ್ಲಾ ಅಂಶಗಳನ್ನು ಗಮನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಹೆಚ್ಚು ಒಲವು ಮತ್ತು ಅವರ ಸಾಮರ್ಥ್ಯದ ಮೇಲೆ ನಂಬಿಕೆ ಇರುವಂತಿದೆ.

ಹೀಗಾಗಿಯೇ ನಿರ್ಣಾಯಕ ಸಂದರ್ಭ ಮತ್ತು ವಿಷಯಗಳಲ್ಲಿ ಖರ್ಗೆಯವರನ್ನು ಪಕ್ಷ ಮುಂದುಮಾಡುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಮಹಾಮೈತ್ರಿಕೂಟದ ಸಾಧನೆ-ಸಾಮರ್ಥ್ಯ ಯಾವ ರೀತಿಯಲ್ಲಿ ಹೊರಹೊಮ್ಮಲಿದೆ ಹಾಗೂ ಮಿಕ್ಕ ಸಹಭಾಗಿ ಪಕ್ಷಗಳು ಖರ್ಗೆಯವರ ವಿಷಯದಲ್ಲಿ ಸಹಮತ ವ್ಯಕ್ತಪಡಿಸುತ್ತವೆಯೇ ಎಂಬುದರ ಮೇಲೆ ಈ ಸಾಧ್ಯತೆಗೊಂದು ತಾರ್ಕಿಕ ಅಂತ್ಯ ಸಿಗಲಿದೆ. ಅಲ್ಲಿಯವರೆಗೂ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಎದುರಾಗಿ ವಿಪಕ್ಷಗಳ ಕೂಟದಿಂದ ಪ್ರಧಾನಿ ಹುದ್ದೆಗೆ ಯಾರು ಸ್ಪರ್ಧಿ? ಎಂಬ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿಯಲಿದೆ.