Friday, 22nd November 2024

ಮರಣೋತ್ತರ ಪ್ರಶಸ್ತಿಗಳಿಂದೇನು ಪುರುಷಾರ್ಥ?

ಅಭಿವ್ಯಕ್ತಿ
ಕೆ.ಪಿ.ಪುತ್ತುರಾಯ

ನಮ್ಮ ದೇಶದಲ್ಲಿ ಅಲ್ಲಲ್ಲಿ, ಆಗಾಗ ನಾನಾ ಕ್ಷೇತ್ರಗಳಲ್ಲಿ ಗಣನೀಯವಾದ ಹಾಗೂ ಗುಣನೀಯವಾದ ಸಾಧನೆಗೈದವರಿಗೆ ಸರಕಾರದ ವತಿಯಿಂದ ಇಲ್ಲವೆ ಸಂಘ – ಸಂಸ್ಥೆೆಗಳಿಂದ ಪ್ರಶಸ್ತಿಗಳು ಪ್ರದಾನವಾಗುತ್ತಿರುತ್ತವೆ. ಇದೊಂದು ಸತ್ ಸಂಪ್ರದಾಯ
ವೇ ಆಗಿದ್ದರೂ, ಕೆಲವೊಮ್ಮೆ ಪ್ರಶಸ್ತಿ ಪುರಸ್ಕೃತರ ಆಯ್ಕೆಯ ವೇಳೆ, ಅರ್ಹತೆಯೇ ಮಾಯವಾಗಿ ಅಪಚಾರಗಳು, ಅಚಾತುರ್ಯ ಗಳು ನಡೆದು ಹೋಗುವುದುಂಟು.

ಇಂಥ ಸಂದರ್ಭದಲ್ಲಿ ಅಪ್ರಾಪ್ತಸ್ಯ ಪ್ರಾಪ್ತಿ ಯೋಗಃ ಪ್ರಾಪ್ತಸ್ಯ ಪರಿ ರಕ್ಷಾಣಾಂ ಕ್ಷೇಮಃ ಎಂಬ ಸಂಸ್ಕೃತ ಚತುರೋಕ್ತಿಯಂತೆ
ಪ್ರಾಪ್ತವಲ್ಲದ್ದು ಸಿಕ್ಕಿದರೆ, ಅದು ನಮ್ಮ ಯೋಗ: ಸಿಕ್ಕಿದ್ದನ್ನು ರಕ್ಷಿಸಿಕೊಳ್ಳೋದು ಕ್ಷೇಮವೆಂದು ತಿಳಿಯುತ್ತಾ ಪ್ರಶಸ್ತಿ ಪುರಸ್ಕೃತರು ಜಾಣಮನಿಗಳಾಗುತ್ತಾರೆ. ಆದರೆ, ಯಾವ ಅರ್ಹತೆ – ಯೋಗ್ಯತೆಯೂ ಇಲ್ಲದೆ, ಹೇಗೋ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡವ ರನ್ನು ಈ ಪ್ರಶಸ್ತಿ ಪಡೆಯಲು ಯಾರನ್ನು ಹಿಡಿದಿರಿ? ಇಲ್ಲವೇ, ಎಷ್ಟು ಖರ್ಚಾಯಿತು? ಎಂದು ಜನ ಕೇಳುವಂತಾದರೆ, ಅಂತಹ ಪ್ರಶಸ್ತಿಗಳಿಗೇನು ಬೆಲೆ? ಆಗ “It is better to deserve an honour and not have it, rather than have it and not deserve it” ಎಂಬ ಮಾತಿನಂತೆ, ಅರ್ಹತೆ ಇಲ್ಲದೆ ಪಡೆಯುವ ಪ್ರಶಸ್ತಿಗಳಿಗಿಂತ, ಅರ್ಹತೆ ಇದ್ದು ಪಡೆಯದಿರೋದೇ ಲೇಸು ಎಂಬುದಾಗಿ ತಿಳಿದುಕೊಂಡು ಸುಮ್ಮನಾಗೋದೇ ಲೇಸಲ್ಲವೇ? ಏನೋ ಒಂದು ತರಾತುರಿಯಲ್ಲಿ ಇಲ್ಲವೇ, ಯಾವುದೋ ಅವೈಜ್ಞಾನಿಕ ಲೆಕ್ಕಾಚಾರದ ಮೇಲೆ ಅಥವಾ ಯಾವುದೋ ಒಂದು ಲಾಭದ / ಲೋಭದ ದೃಷ್ಟಿಯಿಂದ ನೀಡಿದ ಪ್ರಶಸ್ತಿಗಳು ಜನರ ಆಕ್ಷೇಪ ಗಳನ್ನು, ಆಪಾದನೆಗಳನ್ನು, ಟೀಕೆಗಳನ್ನು ಎದುರಿಸಬೇಕಾಗುತ್ತದೆ.

ಹೀಗಾಗದೆ, ಪ್ರಶಸ್ತಿ ಗಳು ತಮ್ಮ ಮೌಲ್ಯವನ್ನು, ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕಾದರೆ, ಹಲವಾರು ಮಾನದಂಡಗಳಿಗೆ
ಒಳಪಡಬೇಕಾಗುತ್ತದೆ. ಪ್ರಶಸ್ತಿಗಳ ವಿಚಾರದಲ್ಲಿ 5 ವಿಚಾರಗಳು ಸ್ವಚ್ಛವಾಗಿರಬೇಕು.

1.ಏಕೆ ಬೇಕು ಈ ಪ್ರಶಸ್ತಿಗಳು? ಸಮಾಜದಲ್ಲಿ ಪಂಡಿತರನ್ನು, ಪ್ರತಿಭಾವಂತರನ್ನು, ಸಮರ್ಥರನ್ನು, ಸಮಾಜ ಸುಧಾರಕರನ್ನು, ಸಾಧಕರನ್ನು (ಸಮಯ ಸಾಧಕರನ್ನಲ್ಲ!) ಗುರುತಿಸಿ, ಪ್ರಶಸ್ತಿ ಮುಖೇನ ಪುರಸ್ಕರಿಸಿ, ಪ್ರೋತ್ಸಾಹಿಸೋದು ಒಂದು ಸದ್ಗುಣ, ಸತ್ಕಾರ್ಯ ಹಾಗೂ ಸುಸಂಸ್ಕೃತ ಸಮಾಜದ ಲಕ್ಷಣ. ನಮ್ಮೆಲ್ಲರ ತಲೆಯ ಮೇಲಿರುವ ಸಮಾಜ ಋಣವನ್ನು ಒಂದಿಷ್ಟು ತೀರಿಸುವ ಅತ್ಯುತ್ತಮ ವಿಧಾನದು!. ದಿಗ್ಗಜರನ್ನು, ಮಹಾನ್ ವ್ಯಕ್ತಿಗಳನ್ನು ಸನ್ಮಾನಿಸುವುದರಿಂದ ಕೆಲವೊಮ್ಮೆ ನಮ್ಮನ್ನು ನಾವೇ ಸನ್ಮಾನಿಸಿ ಕೊಂಡಂತಾಗುತ್ತದೆ. ಸಾಧಕರಿಗೆ ಮಾಡುವ ಸನ್ಮಾನ, ಯುವ ಜನತೆಗೆ, ಅವರನ್ನು ಪ್ರೇರೇಪಿಸುವ ಮೂಲಕ ಒಂದು ಒಳ್ಳೆಯ ಸಂದೇಶವನ್ನು ರವಾನಿಸುತ್ತದೆ. ಎಲ್ಲದಕ್ಕೂ ಮಿಗಿಲಾಗಿ, ಪ್ರಶಸ್ತಿ ಪುರಸ್ಕೃತರಿಗೆ ಸಾಧಿಸಿದುದು ಕೈಅಗಲ; ಸಾಧಿಸಬೇಕಾ ದುದು ಜಗದಗಲ ಎಂಬ ಅರಿವನ್ನು ಮೂಡಿಸಿ, ಅವರ ಜವಬ್ದಾರಿಯನ್ನು ಹೆಚ್ಚಿಸುತ್ತಾ, ಇನ್ನಷ್ಟು ಮಹತ್ತರವಾದುದನ್ನು ಗೈಯಲು ಪ್ರೋತ್ಸಾಹವನ್ನು ನೀಡುತ್ತದೆ.

2.ಪ್ರಶಸ್ತಿಗಳನ್ನು ಯಾರಿಗೆ ನೀಡಬೇಕು? ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಪ್ರಚಾರವಿಲ್ಲದೆ ಅಪರಿಮಿತ ಅಪೂರ್ವ ಸಾಧನೆ ಗಳನ್ನು ಮಾಡಿದ ನಿಷ್ಕಾಮ ಕರ್ಮ ಯೋಗಿಗಳಿಗೆ ಪ್ರಶಸ್ತಿಗಳು ಪ್ರಾಪ್ತವಾಗಬೇಕೇ ಹೊರತು, ತಮ್ಮ ಜಾತಿ, ಹಣ, ಸಂಪರ್ಕ, ಬಲಗಳ ಇಲ್ಲವೇ ಶಿಫಾರಸ್ಸುಗಳ ಮೂಲಕ ಪ್ರಯತ್ನಿಸುವವರಿಗಲ್ಲ! ಪ್ರಶಸ್ತಿ ಎಂದ ಮೇಲೆ ಜಿಲ್ಲೆ, ಜಾತಿ – ಮತ, ಮೇಲು ಕೀಳು ಗಳನ್ನು ಮೀರಿದ ಪ್ರತಿಭೆಯೊಂದೇ ಮಾನದಂಡವಾಗಬೇಕೇ ಹೊರತು ಇನ್ನಿತರ ಯಾವ ಲೆಕ್ಕಾಚಾರಗಳು ಅಲ್ಲ! ಇಲ್ಲವಾದರೆ, ಪ್ರಶಸ್ತಿಗಳ ಪಾವಿತ್ರ್ಯತೆಗೆ ಅಪಚಾರವಾದಂತೆ! ಒಟ್ಟಿನಲ್ಲಿ, ಪ್ರಶಸ್ತಿಗಳನ್ನು ಅರಸಿಕೊಂಡು ಹೋಗುವ ವರಿಗಲ್ಲ: ಪ್ರಶಸ್ತಿಗಳೇ ಅವರನ್ನು ಅರಸಿಕೊಂಡು ಬರುವವರಿಗೆ ಪ್ರಶಸ್ತಿ ಪ್ರದಾನವಾಗಬೇಕು.

3.ಪ್ರಶಸ್ತಿಗಳು ಯಾವ ರೂಪದಲ್ಲಿರಬೇಕು? ಸಾಮಾನ್ಯವಾಗಿ ಪ್ರಶಸ್ತಿಗಳೆಂದರೆ ನಗದು ಹಣ, ಸ್ಮರಣಿಕೆ, ಅಭಿನಂದನಾ ಪತ್ರ, ಬೆಲೆ ಬಾಳುವ ವಸ್ತು – ಒಡವೆ, ಹಾರ – ತುರಾಯಿ, ಹಣ್ಣು ಹಂಪಲುಗಳನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪುರಸ್ಕೃತರು ತೀರ ಬಡವರಾಗಿದ್ದರೆ ಇಲ್ಲವೇ ಪಡೆದ ಹಣವನ್ನು ಮತ್ತೆ ತಮ್ಮ ಸಂಸ್ಥೆಗೇ ನೀಡುವವರಾದರೆ, ನಗದು ರೂಪದಲ್ಲೂ ನೀಡುವ ಪ್ರಶಸ್ತಿ ಅವರಿಗೆ ನೆರವಾಗುತ್ತದೆ ಹಾಗೂ ಸದ್ವಿನಿಯೋಗಿಸಲ್ಪಡುತ್ತದೆ. ಪ್ರಶಸ್ತಿಯು ಒಂದು ಮರೆಯಲಾಗದ ಸ್ಮರಣಿಕೆ, ಅಭಿನಂದನಾ ಪತ್ರವನ್ನೊಳಗೊಂಡಿದ್ದರೆ ಅದುವೆ ಸಾಧಕರ ಪಾಲಿಗೆ, ಶಾಶ್ವತವಾದ ಆಸ್ತಿ ಎಂದೆನಿಸಿಕೊಳ್ಳುತ್ತದೆ. ಇದನ್ನು ನೀಡಲು ಮರೆಯ ಬಾರದು.

4.ಯಾರಿಂದ ಪ್ರಶಸ್ತಿ ಪ್ರಧಾನವಾಗಬೇಕು? ಎಲ್ಲಿ ಪ್ರಶಸ್ತಿ ಪುರಸ್ಕೃತರ ಆಯ್ಕೆಯು ಪಾರದರ್ಶಕವಾಗಿದ್ದು, ಸರ್ವ ಸಮ್ಮತವಾಗಿರು ತ್ತದೋ, ಹಾಗೂ ಯಾವ ಸಂಘ ಸಂಸ್ಥೆಗಳಿಂದ ಕೊಡ ಮಾಡುವ ಪ್ರಶಸ್ತಿಗೆ ಘನತೆ ಗೌರವವಿದೆಯೋ ಅಂತಹ ಪ್ರಶಸ್ತಿಗೆ ಮಾತ್ರ ಬೆಲೆ. ನಿಮಗೊಂದು ಪ್ರಶಸ್ತಿ ನೀಡಬೇಕೆಂದಿದ್ದೇವೆ, ಎಷ್ಟು ಹಣ ಕೊಡುತ್ತೀರಿ? ಇಲ್ಲವೇ ಸಮಾರಂಭದ ಊಟದ ಖರ್ಚನ್ನು ವಸುತ್ತೀರಾ? ಎಂದು ಕೇಳುವ, ಪ್ರಶಸ್ತಿಗಳನ್ನು ಮಾರಾಟಕ್ಕಿಡುವ ಸಂಘ ಸಂಸ್ಥೆಗಳು ಕೂಡಾ ಇದ್ದಾವೆ.

ಅಂತೆಯೇ, ಇದಕ್ಕೆ ಒಪ್ಪಿ ಪ್ರಶಸ್ತಿಗಳನ್ನು ಪಡೆಯುವರೂ ಇದ್ದಾರೆ. ಒಟ್ಟಿನಲ್ಲಿ, ಪ್ರಶಸ್ತಿಗಳು ವ್ಯಾಪಾರೀಕರಣಗೊಳ್ಳಲೇಬಾರದು. ಹಾಗಾದರೆ ಅವು ಪ್ರಶಸ್ತಿಗಳೆಂದೆನಿಸುವುದಿಲ್ಲ: ದುಡ್ಡು ಕೊಟ್ಟು ಪಡೆದ ಪ್ರದರ್ಶನಕ್ಕೆ ಯೋಗ್ಯವಾದ ಫಲಕಗಳೆನಿಸುತ್ತವೆ. ಅಂತೆಯೇ ಯಾರ ಕೈಯಿಂದ ಪ್ರಶಸ್ತಿ ಪ್ರಧಾನವಾಗುತ್ತದೆ ಎಂಬುದೂ ಅಷ್ಟೇ ಮುಖ್ಯ. ಇವರು ಪ್ರಶಸ್ತಿ ಪುರಸ್ಕೃತರಿಗಿಂತಲೂ, ಹಿರಿಯರು, ದೊಡ್ಡ ವಿದ್ವಾಂಸರು, ಗಣ್ಯ ವ್ಯಕ್ತಿಗಳಾಗಿರಬೇಕೆಂಬುದನ್ನು ಬೇರೆ ಹೇಳಬೇಕಾಗಿಲ್ಲ.

5.ಪ್ರಶಸ್ತಿಗಳನ್ನು ಯಾವಾಗ ನೀಡಬೇಕು? ಇದು ಬಹಳ ಮುಖ್ಯವಾದ ವಿಚಾರ, ಮಾಸ್ಟರ್ ಹಿರಣ್ಯಯ್ಯನವರು ಹೇಳುತ್ತಿದ್ದಂತೆ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಜೀವದಲ್ಲಿರುವಾಗ ವ್ಯಕ್ತಿಯ ಬಗ್ಗೆ ಅನುಮಾನ ನಂತರ ಅಪಮಾನ – ಸತ್ತ ಮೇಲೆ ಅವನ ಗುಣಗಾನ, ಮರಣೋತ್ತರ ಪ್ರಶಸ್ತಿ ಪ್ರಧಾನ..!

ಪ್ರಶಸ್ತಿಗಳನ್ನು ಸಕಾಲದಲ್ಲಿ ನೀಡಬೇಕು; ಅಕಾಲದಲ್ಲಿ ನೀಡಬಾರದು. ಯಾವುದು ಸಕಾಲ? ಸಾಧಕರ ಸಾಧನೆಗಳು ಒಂದು ಹಳೇ ಕತೆಯಾಗುವ ಮುನ್ನ; ಇಲ್ಲವೇ ಅವು ಜನರ ಮನಸ್ಸಿನಿಂದ ಮರೆಯಾಗುವ ಮುನ್ನ ಹಾಗೂ ಸಾಧಕರೇ ಈ ಜಗತ್ತಿನಿಂದ ಮರೆ ಯಾಗುವ ಮುನ್ನ ಪ್ರಶಸ್ತಿಗಳನ್ನು ನೀಡಬೇಕು. ತಾವು ಜೀವದಲ್ಲಿ ಇದ್ದಾಗ ಪಡೆದ ಪ್ರಶಸ್ತಿಯಿಂದ, ಪ್ರಶಸ್ತಿ ಪುರಸ್ಕೃತರು ಆನಂದ, ಸಂತಸಪಟ್ಟುಕೊಳ್ಳೋದೇ ಅಲ್ಲದೆ, ಪ್ರೋತ್ಸಾಹವನ್ನು ಪಡೆದು ತಮ್ಮ ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಗೈಯಲು
ಉತ್ಸುಕರಾಗುತ್ತಾರೆ; ಇದರಿಂದ ಲಾಭ ಮತ್ತೆ ಸಮಾಜಕ್ಕೇನೇ. ವ್ಯಕ್ತಿ ಸತ್ತ ಮೇಲೆ ನೀಡುವ ಮರಣೋತ್ತರ ಪ್ರಶಸ್ತಿಗಳು ಅಕಾಲದಲ್ಲಿ ನೀಡುವ ಪ್ರಶಸ್ತಿಗಳು ಕಾರಣ ಪ್ರಶಸ್ತಿಯ ಕುರಿತಾಗಿ ಆನಂದಿಸುವ ಇಲ್ಲವೇ ಪ್ರೇರಣೆಯನ್ನು ಪಡೆಯುವ ಅವಕಾಶವೇ ಈತನಿಗೆ ಇಲ್ಲವಾಗುತ್ತದೆ.

ಮರಣೋತ್ತರ ಪ್ರಶಸ್ತಿಗಳಿಂದ ಎಲ್ಲೋ ಇರುವ ಯಾರೂ ಕಾಣದ ಅವನ ಆತ್ಮ ಹಾಗೂ ಅವನ ಅಭಿಮಾನಿಗಳು ಖುಷಿ ಪಟ್ಟಾ ರೇನೋ ನಿಜ; ಆದರೆ ವ್ಯಕ್ತಿಯೇ ಇಲ್ಲದ ಮೇಲೆ ಈ ಸಂತೋಷಕ್ಕೆ ಏನು ಅರ್ಥ? ಜೀವದಲ್ಲಿ ಇದ್ದಾಗ ಅಪ್ಪ – ಅಮ್ಮನಿಗೆ ತುತ್ತು ಅನ್ನ ಕೊಡದ ಮಗ ಅವರು ಸತ್ತ ಮೇಲೆ, ಊರಿಗೇ ಭೂರಿ ಭೋಜನ ಉಣ ಬಡಿಸುತ್ತಾನೆ. ಏನು ಪ್ರಯೋಜನ? ಜೀವದಲ್ಲಿ ಇದ್ದಾಗ, ತಿರುಗಿ ನೋಡದ ಮಕ್ಕಳು, ಸತ್ತಮೇಲೆ ಅವರ ಪೋಟೋಗಳಿಗೆ ಹಾರ ಹಾಕಿ ನಿತ್ಯ ಆರತಿ ಬೆಳಗಿದರೆ ಏನು ಬಂತು? ಏನಾದರೂ ಮಾಡೋದಿದ್ದರೆ, ಜನರು ಜೀವಂತರುವಾಗಲೇ ಮಾಡಬೇಕು.

ವ್ಯಕ್ತಿ ತೀರಿಕೊಂಡ ಮೇಲೆ, ಏನು ಮಾಡಿದರೆ, ಏನು ಕೊಟ್ಟರೆ ಏನು ಪುರುಷಾರ್ಥ? ಈ ಹಿನ್ನೆಲೆಯಲ್ಲಿ ಮರಣೋತ್ತರ ಪ್ರಶಸ್ತಿ ಗಳೆಂದರೆ, ಅವರ ಸಾಧನೆಗಳನ್ನು ನಾವು ತಡವಾಗಿ ತಿಳಿದುಕೊಂಡೆವು ಎಂಬರ್ಥ. ಇಷ್ಟಕ್ಕೂ ತನಗೆ ಅರ್ಹತೆವುಳ್ಳ ಪ್ರಶಸ್ತಿಯನ್ನು ಪಡೆಯಲು ಒಬ್ಬ ವ್ಯಕ್ತಿ ಸಾಯಲೇಬೇಕೆ? ಒಂದರ್ಥದಲ್ಲಿ ನೋಡಿದರೆ ಜೀವದಲ್ಲಿದ್ದಾಗಲೇ ಅರ್ಹತೆ ಪಡೆದಿದ್ದ ವ್ಯಕ್ತಿಗೆ ಪ್ರಶಸ್ತಿ ಯನ್ನು ನೀಡಲು ನಾವು ಆತ ಸಾಯುವುದನ್ನೇ ಕಾಯುತ್ತಿದ್ದೇವೆಂದಾಯಿತು. ಈ ಹಿನ್ನೆಲೆಯಲ್ಲಿ ಮರಣೋತ್ತರ ಪ್ರಶಸ್ತಿಗಳೆಂದರೆ ವ್ಯಕ್ತಿಗೂ, ಪ್ರಶಸ್ತಿಗೂ ಮಾಡುವ ಒಂದು ಅಪಚಾರವೇ ಸರಿ.

ಜೀವಂತ ಇದ್ದಾಗ ತನ್ನ ಸಾಧನೆಗಳಿಂದ ಅರ್ಹನಾಗದ ವ್ಯಕ್ತಿ, ಸತ್ತ ಮೇಲೆ ಮಾತ್ರ ಹೇಗೆ ಧಿಡೀರ್ ಅರ್ಹನಾಗುತ್ತಾನೆ? ಹಾಗೆಂದು ದೇಶಕ್ಕಾಗಿ ಹೋರಾಡಿ, ದೇಶವನ್ನು ರಕ್ಷಿಸಿ, ಯುದ್ಧದಲ್ಲಿ ಮಡಿದ ವೀರ ಯೋಧರಿಗೂ ಮರಣೋತ್ತರ ಪ್ರಶಸ್ತಿ ನೀಡೋದುಂಟು. ಇದು ಅವರ ಬಲಿದಾನಕ್ಕೆ ಮತ್ತು ಅವರ ಕುಟುಂಬದವರಿಗೆ ಸಲ್ಲಿಸುವ ಗೌರವ; ದೇಶ ಪ್ರೇಮಿಗಳಿಗೆ ನಾವು ಮಾಡುವ ನಮನ.

ಆದರೆ ಇವರಲ್ಲೂ ತಮ್ಮ ಜೀವಿತ ಕಾಲದಲ್ಲೇ ಅಭೂತಪೂರ್ವ ಸಾಹಸ, ಶೌರ್ಯವನ್ನು ಪ್ರದರ್ಶಿಸಿದ ಸೇನಾನಿಗಳೇ ಮೊದಲಾಗಿ ಅಪೂರ್ವ, ಅದ್ವಿತೀಯ, ಅಸಾಮಾನ್ಯ ಸಾಧನೆಗೈದ ಎಲ್ಲ ಸಾಧಕರಿಗೂ ಅವರ ಜೀವಿತ ಕಾಲದಲ್ಲೇ ಪ್ರಶಸ್ತಿ ಪ್ರಧಾನ ಮಾಡೋದು
ಎಂದೂ ಅರ್ಥಪೂರ್ಣ.