Thursday, 12th December 2024

ಜಗತ್ತನ್ನಾಳಲಿವೆ ಭಾರತೀಯ ಸಮರ ವಾಹನಗಳು

ಸಮರಾಂಗಣ

ಗಿರೀಶ್ ಲಿಂಗಣ್ಣ

ರಕ್ಷಣಾ ಕ್ಷೇತ್ರದಲ್ಲಿನ ‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಆತ್ಮನಿರ್ಭರ ಭಾರತದ ಅಂಗವಾಗಿದ್ದು, ವಿನ್ಯಾಸದ ವಿಷಯದಲ್ಲಿದು ಪ್ರಬಲ ಎನಿಸಿ ಕೊಂಡಿದೆ. ದೇಶೀಯ ತಂತ್ರಜ್ಞಾನದ ಅಭಿವೃದ್ಧಿಗಾಗಿ ಹಲವು ಕ್ರಮ ಕೈಗೊಂಡಿರುವುದರಿಂದ, ಕಳೆದ 4 ವರ್ಷಗಳಲ್ಲಿ 2500ಕ್ಕೂ ಹೆಚ್ಚು ಪೇಟೆಂಟ್ ಅರ್ಜಿಗಳು ಸಲ್ಲಿಕೆಯಾಗಿವೆ.

ಭಾರತವು ಕಳೆದ 8 ವರ್ಷಗಳಲ್ಲಿ ತನ್ನ ರಕ್ಷಣಾ ವಲಯದ ಉತ್ಪಾದನಾ ಕ್ಷೇತ್ರದಲ್ಲಿ ದಾಪುಗಾಲಿಟ್ಟು ಮುನ್ನಡೆ ಯುತ್ತಿದೆ. ಭಾರತ ಸರಕಾರದ ‘ಮೇಕ್ ಇನ್ ಇಂಡಿಯಾ’ ಯೋಜನೆಯು ಅಂತಾರಾಷ್ಟ್ರೀಯ ಗುಣಮಟ್ಟದ ಶಸಾಸಗಳು, ಸಮರ ವಾಹನಗಳನ್ನು ಉತ್ಪಾದಿಸುವುದಕ್ಕೆ ಕಾರಣವಾಗಿದೆ. ಈ ಉತ್ಪನ್ನ ಗಳು ಜಾಗತಿಕ ಗುಣಮಟ್ಟವನ್ನೂ ಮೀರಿಸಿರುವ ಎಷ್ಟೋ ನಿದರ್ಶನಗಳಿವೆ. ಅವನ್ನು ಹಲವು ದೇಶಗಳು ಬಳಸುತ್ತಿರುವುದೇ ಈ ಮಾತಿಗೆ ಸಾಕ್ಷಿ.

* ಶಕ್ತಿದಾಯಕ ಆವಿಷ್ಕಾರಗಳು: ಇದೇ ಮೊದಲ ಬಾರಿಗೆ ಭಾರತೀಯ ರಕ್ಷಣಾ ಉದ್ಯಮವು ಜಾಗತಿಕ ಪೂರೈಕೆ ವಲಯದಲ್ಲಿ ಮಹತ್ವದ ಪಾತ್ರ ವಹಿಸು ತ್ತಿದ್ದು, ಜಗತ್ತಿನ ಪ್ರಮುಖ ‘ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನು ಫ್ಯಾಕ್ಚರರ್ಸ್’ಗಳಿಗೆ (ಒಇಎಂ) ಅವು ಪೂರೈಕೆ ಮಾಡುತ್ತಿರುವುದು ನಮ್ಮ ಉತ್ಪನ್ನಗಳ ಗುಣಮಟ್ಟ ಮತ್ತು ತಯಾರಿಕಾ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಭಾರತೀಯ ರಕ್ಷಣಾ ರಫ್ತಿನ ಶೇ. 50ರಷ್ಟು ಪಾಲು ಅಮೆರಿಕದ ಒಇಎಂಗಳಿಗೆ ಪೂರೈಕೆಯಾಗುತ್ತದೆ ಎಂಬುದು ಇದನ್ನು ಪುಷ್ಟೀಕರಿಸುತ್ತದೆ. ಭಾರತೀಯ ಶಿಪ್ ಯಾರ್ಡ್ ಗಳಿಗೆ ಹಡಗುಗಳನ್ನು ಕಳುಹಿಸಲು ಆರಂಭಿಸಿದ ಅಮೆರಿಕದ ಸೀಲಿ- ಕಮಾಂಡ್‌ಗೆ, ಜಾಗತಿಕವಾಗಿ ನಮಗಿರುವ ಶ್ರೇಷ್ಠ ಗುಣಮಟ್ಟದ ಅರಿವಾಗಿದೆ. ರಕ್ಷಣಾ ಉತ್ಪನ್ನಗಳು ಮಾತ್ರವಲ್ಲದೆ, ಐಡಿಇಎಕ್ಸ್ ಕಾರ್ಯಕ್ರಮ, ಮೇಕ್-2 ಯೋಜನೆ ಹಾಗೂ ಡಿಆರ್ ಡಿಒ ಯೋಜನೆಗಳಲ್ಲಿ ನಿರ್ಮಿಸಲಾದ ಆವಿಷ್ಕಾರಕ ವ್ಯವಸ್ಥೆಗಳು ಅಮೆರಿಕ, ಬ್ರಿಟನ್ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳ ಗಮನ ಸೆಳೆಯುತ್ತಿವೆ.

ಭಾರತ ಅಭಿವೃದ್ಧಿಪಡಿಸುತ್ತಿರುವ ರಕ್ಷಣಾ ತಂತ್ರಜ್ಞಾನವು ಜಾಗತಿಕವಾಗಿ ಅತ್ಯುತ್ತಮವೆನಿಸಿರುವ ತಂತ್ರಜ್ಞಾನಗಳನ್ನೂ ಮೀರಿಸುವಂತಿರುವುದು ಹೆಮ್ಮೆಯ ಸಂಗತಿ. ಉದಾಹರಣೆಗೆ, ಭಾರತದ ಸ್ಟಾರ್ಟಪ್ ಸಂಸ್ಥೆಯೊಂದು ನಿರ್ಮಿಸಿರುವ, ಹ್ಯಾಕ್ ಮಾಡಲು ಸಾಧ್ಯವಿಲ್ಲದ, 150 ಕಿ.ಮೀ. ಟೆರೆಸ್ಟ್ರಿಯಲ್ ಆಪ್ಟಿಕಲ್ ಫೈಬರ್ ಹಾಪ್ ಹೊಂದಿರುವ ಕ್ವಾಂಟಮ್ ಚಾನಲ್, ಇದೇ ರೀತಿಯ ಜಗತ್ತಿನ ಇತರ ಆಪ್ಟಿಕಲ್ ಫೈಬರ್ ವ್ಯವಸ್ಥೆಗಳನ್ನು ಮೀರಿಸುತ್ತದೆ.

ಈ ವರ್ಷದ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ 1000 ಡ್ರೋನ್‌ಗಳನ್ನು ಬಳಸಿ ‘ಡ್ರೋನ್ ಸ್ವಾರ್ಮ್’ ಪ್ರದರ್ಶಿಸಿದ್ದ ಭಾರತವೀಗ, 3500 ಡ್ರೋನ್‌ ಗಳನ್ನು ಬಳಸಿ ಇಂಥದೇ ಪ್ರದರ್ಶನ ನೀಡಲು ತಯಾರಿ ನಡೆಸುತ್ತಿದೆ. ಇಂಥ ಸಾಧನೆ ಜಗತ್ತಿನ ಇನ್ನಾವ ದೇಶದಿಂದಲೂ ಇಲ್ಲಿಯವರೆಗೆ ಹೊಮ್ಮಿಲ್ಲ.

* ದೇಶೀಯ ಉತ್ಪಾದನೆಯೇ ಕೀಲಿಕೈ: ಭಾರತೀಯ ಸೇನಾಪಡೆಗಳು ‘ಮೇಕ್ ಇನ್ ಇಂಡಿಯಾ’ ನಿರ್ಮಿತ ಶಸ್ತ್ರಾಸ್ತ್ರಗಳು, ಸಮರ ವಾಹನಗಳು ಮತ್ತು ಪ್ಲಾಟ್ ಫಾರ್ಮ್ ಗಳನ್ನು ಹೊಂದಿದಾಗ, ಅವುಗಳ ಸಾಮರ್ಥ್ಯಕ್ಕೆ ಒಂದು ಹೊಸ ಆಯಾಮ ಲಭಿಸುತ್ತದೆ. ಇಂಥ ಶಸ್ತ್ರಾಸ್ತ್ರಗಳ ಸಾಮರ್ಥ್ಯ ಮತ್ತು ಬಳಕೆಯ ಕುರಿತು ಶತ್ರುದೇಶಗಳಗೆ ಮಾಹಿತಿ ಇಲ್ಲದಿರುವುದರಿಂದ ಅವುಗಳ ಬಳಕೆಯಿಂದ ನಮ್ಮ ಸೇನೆ ಶತ್ರುಗಳಿಗೆ ಅಚ್ಚರಿ-ಆಘಾತ ಉಂಟು ಮಾಡ ಬಲ್ಲದು. ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಶಸಾಸಗಳಿಂದ ಇದನ್ನು ಸಾಧಿಸಲಾಗುವುದಿಲ್ಲ.

ಭಾರತದ ಮೂರೂ ಸೇನಾಪಡೆಗಳು ಕಳೆದ 2 ವರ್ಷಗಳಿಂದ ಕೈಗೊಂಡ ಉಪಕ್ರಮಗಳ ಫಲವಾಗಿ ಭಾರತವೀಗ ಇಂಥ ಸಾಮರ್ಥ್ಯವನ್ನು ದಕ್ಕಿಸಿ ಕೊಂಡಿದೆ. ಇತ್ತೀಚೆಗೆ ಲೋಕಾ ರ್ಪಣೆಗೊಂಡ ವಿಮಾನವಾಹಕ ಯುದ್ಧನೌಕೆಯು ದೇಶೀಯ ನಿರ್ಮಾಣದ ಪ್ರಯತ್ನದ ಇನ್ನೊಂದು ನೂತನಫಲ ಎನ್ನಬೇಕು. ಭಾರತೀಯ ನೌಕಾಪಡೆ ವಿನ್ಯಾಸಗೊಳಿಸಿದ ಈ ನೌಕೆಯನ್ನು ಕೊಚಿನ್ ಶಿಪ್ ಯಾರ್ಡ್ ಸಂಸ್ಥೆ ನಿರ್ಮಿಸಿತು. ತನ್ಮೂಲಕ, ವಿಮಾನವಾಹಕ
ನೌಕೆಗಳ ವಿನ್ಯಾಸ ಮತ್ತು ನಿರ್ಮಾಣ ಸಾಮರ್ಥ್ಯ ಹೊಂದಿರುವ ಜಗತ್ತಿನ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರುವಂತಾಯಿತು.

*ಸ್ವಾವಲಂಬನೆಯ ಮಂತ್ರಜಪ: ಭಾರತದ ರಕ್ಷಣಾ ಸಚಿವರು ಕೃತಕ ಬುದ್ಧಿಮತ್ತೆಯ ೭೫ ಅಪ್ಲಿಕೇಷನ್‌ಗಳನ್ನು ಇತ್ತೀಚೆಗೆ ಸೇವೆಗೆ ಮುಕ್ತಗೊಳಿಸಿದರು. ಭಾರತೀಯ ಸೇನಾಪಡೆಗಳು ದೇಶೀಯ ನಿರ್ಮಾಣ ಉದ್ಯಮದ ಮೇಲೆ ನಂಬಿಕೆಯಿಡಲು, ಭಾರತದಲ್ಲಿ ಅತ್ಯಂತ ಕ್ಷಿಪ್ರವಾಗಿ ನಡೆಯುತ್ತಿರುವ ಆವಿಷ್ಕಾರ ಗಳೇ ಕಾರಣವಾಗಿವೆ ಮತ್ತು ಇದು ಭಾರತ ಸರಕಾರವು ತೆಗೆದುಕೊಳ್ಳುತ್ತಿರುವ ನೀತಿ-ನಿಲುವುಗಳ ಪರಿಣಾಮವೇ ಆಗಿದೆ. ಈ ಹಿಂದೆ, ಏಕಕಾಲದಲ್ಲಿ ಕೆಲವು ತಂತ್ರಜ್ಞಾನಗಳಷ್ಟೇ ದೇಶೀಯವಾಗಿ ನಿರ್ಮಾಣವಾಗುತ್ತಿದ್ದವು; ಆದರೀಗ ಭಾರತೀಯ ಸೇನಾಪಡೆಗಳು ಏಕಕಾಲದಲ್ಲಿ ನೂರಾರು ತಂತ್ರಜ್ಞಾನಗಳನ್ನು ಹುಟ್ಟುಹಾಕುತ್ತಿವೆ.

ಭಾರತೀಯ ಸ್ಟಾರ್ಟಪ್ ಕಂಪನಿಗಳು ಇತ್ತೀಚೆಗೆ ಅತ್ಯಂತ ಕಡಿಮೆ ಅವಽಯಲ್ಲಿ ಅಭಿವೃದ್ಧಿಪಡಿಸಿದ 14 ವಿನೂತನ ತಂತ್ರಜ್ಞಾನಗಳನ್ನು ಪಡೆದುಕೊಳ್ಳಲು ಭಾರತೀಯ ಸೇನಾಪಡೆಗಳು ನಿರ್ಧರಿಸಿವೆ. ಮೊದಲೆಲ್ಲ ಇಂಥ ರಕ್ಷಣಾ ತಂತ್ರಜ್ಞಾನದ ಅಭಿವೃದ್ಧಿಗೆ ದಶಕಗಳೇ ಹಿಡಿಯುತ್ತಿದ್ದವು; ಆದರೆ ಈ ನೂತನ ತಂತ್ರಜ್ಞಾನಗಳು 18-24 ತಿಂಗಳ ಅವಧಿಯಲ್ಲಿ ಸಿದ್ಧವಾಗಿವೆ ಹಾಗೂ ಅಂದಾಜು ವೆಚ್ಚಕ್ಕಿಂತಲೂ ಕಡಿಮೆ ಮೊತ್ತದಲ್ಲಿ ರೂಪುಗೊಂಡಿವೆ ಎಂಬುದು ಗಮನಿಸಬೇಕಾದ ಸಂಗತಿ.

* ಎಚ್‌ಎಎಲ್‌ಗೆ ಆಕಾಶವೇ ಮಿತಿ: ವರ್ಷಕ್ಕೆ 16 ಯುದ್ಧವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರುವ ಸರಕಾರಿ ಸ್ವಾಮ್ಯದ ಹಿಂದೂಸ್ತಾನ್
ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆಯು, ಇನ್ನೂ ಹೆಚ್ಚಿನ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ವರ್ಷಕ್ಕೆ 30 ಯುದ್ಧವಿಮಾನಗಳನ್ನು ತಯಾರಿಸುವ ಸಾಮರ್ಥ್ಯವನ್ನು ದಕ್ಕಿಸಿಕೊಳ್ಳುವ ಹಂತದಲ್ಲಿದೆ. ಹಲವು ದೇಶಗಳಿಂದಲೂ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆಂದು ವಿಮಾನಗಳನ್ನು ನಿರ್ಮಿಸಲು ಎಚ್‌ಎಎಲ್ ಸಜ್ಜುಗೊಳ್ಳುತ್ತಿದೆ.

ಪ್ರಸ್ತುತ ಎಲ್‌ಸಿಎ ಯುದ್ಧವಿಮಾನಗಳ ನಿರ್ಮಾಣದ ವೇಗವು ಭಾರತೀಯ ವಾಯುಪಡೆ ನಿರೀಕ್ಷಿಸಿದ ರೀತಿಯಲ್ಲೇ ಇದೆ. ಅಗತ್ಯ ಬಿದ್ದಾಗ ಈ ಸಾಮರ್ಥ್ಯ ವನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ. ಎಚ್‌ಎಎಲ್ ಈಗಾಗಲೇ ‘ಲೈಟ್ ಯುಟಿಲಿಟಿ ಹೆಲಿಕಾಪ್ಟರ್’ (ಎಲ್‌ಯುಎಚ್) ಅನ್ನು ವಿನ್ಯಾಸಗೊಳಿಸಿ ನಿರ್ಮಿಸಿದ್ದು, ಇವನ್ನು ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ ಗಳ ಬದಲಿಗೆ ಕಾರ್ಯಾಚರಿಸುವಂತೆ ಮಾಡಲು ಆಲೋಚಿಸಲಾಗಿದೆ.

ಇದಕ್ಕಾಗಿ 2021ರ ಫೆಬ್ರವರಿಯಲ್ಲಿ ಭಾರ ತೀಯ ಭೂಸೇನೆ ಮತ್ತು ವಾಯುಪಡೆಗಳು ‘ಇನಿಷಿಯಲ್ ಆಪರೇಷನಲ್ ಕ್ಲಿಯರೆನ್ಸ್’ (ಐಒಸಿ) ನೀಡಿವೆ. ಎಲ್
ಯುಎಚ್ ನಿರ್ಮಾಣ ಈಗಾಗಲೇ ಆರಂಭಗೊಂಡಿದ್ದು, ೨೦೨೨ರ ಆಗಸ್ಟ್‌ನಲ್ಲಿ ಮೊದಲ ಹಂತದ ನಿರ್ಮಾಣ ಸಂಪನ್ನಗೊಂಡಿದೆ.

ರಕ್ಷಣಾ ಕ್ಷೇತ್ರದಲ್ಲಿನ ನೂತನ ‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಆತ್ಮನಿರ್ಭರ ಭಾರತದ ಅಂಗವಾಗಿದ್ದು, ವಿನ್ಯಾಸದ ವಿಷಯದಲ್ಲಿದು ಅತ್ಯಂತ ಪ್ರಬಲ ಎನಿಸಿಕೊಂಡಿದೆ. ದೇಶೀಯ ತಂತ್ರಜ್ಞಾನದ ಅಭಿವೃದ್ಧಿಗಾಗಿ ಹಲವು ಕ್ರಮ ಕೈಗೊಂಡಿರುವುದರಿಂದ, ಕಳೆದ 4 ವರ್ಷಗಳಲ್ಲಿ 2500ಕ್ಕೂ ಹೆಚ್ಚು ಪೇಟೆಂಟ್ ಅರ್ಜಿಗಳು ಸಲ್ಲಿಕೆಯಾಗಿವೆ. ಇಂತಹ ಪ್ರಯತ್ನಗಳು ರಕ್ಷಣಾ ಪ್ಲಾಟ್ ಫಾರ್ಮ್‌ಗಳ ನಿರ್ಮಾಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಬಲ್ಲವು.

ಇವು ಭವಿಷ್ಯದಲ್ಲಿ ಭಾರತೀಯ ಸೇನಾ ಪಡೆಗಳ ಅಗತ್ಯವನ್ನು ಸಮರ್ಥವಾಗಿ ಪೂರೈಸಲಿವೆ. ಈ ಯೋಜನೆಗಳಿಗೆ ಅನುಗುಣವಾಗಿ, ಉದ್ಯಮ ಆಧರಿತ
ವಿನ್ಯಾಸ ಮತ್ತು ಅಭಿವೃದ್ಧಿಯ ಹೆಚ್ಚಳಕ್ಕಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯ ಬಜೆಟ್ ಅನ್ನು ಶೇ.25ರಷ್ಟು ಹೆಚ್ಚಿಸಲಾಗಿದೆ. ಇನ್ನು ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ, ಕಳೆದ 20 ವರ್ಷಗಳಲ್ಲಿ 300 ಹೆಲಿಕಾಪ್ಟರ್‌ಗಳನ್ನು ನಿರ್ಮಿಸಿದ ಎಚ್‌ಎಎಲ್ ಈಗ ವರ್ಷಕ್ಕೆ ೫೦ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದ್ದು, ಅವುಗಳ ರಫ್ತಿನ ಕುರಿತೂ ಆಲೋಚಿಸುತ್ತಿದೆ.

ದೇಶೀಯ ಮಾರುಕಟ್ಟೆಯಿಂದಲೇ ಹೆಚ್ಚಿನ ಉಪಕರಣಗಳನ್ನು ಖರೀದಿಸಬೇಕೆಂಬುದು ಭಾರತೀಯ ಸೇನಾಪಡೆಗಳ ಆಲೋಚನೆ; ಒಂದೊಮ್ಮೆ ಆ ಉಪಕರಣಗಳ ದೇಶೀಯ ನಿರ್ಮಾಣ ಸಾಧ್ಯವಾಗದಿದ್ದರೆ, ಅವುಗಳನ್ನು ಉತ್ಪಾದಿಸುವ ಜಾಗತಿಕ ಒಇಎಂಗಳನ್ನು ಭಾರತಕ್ಕೆ ಕರೆಸಿಕೊಂಡು ಇಲ್ಲೇ
ಉತ್ಪಾದಿಸುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ. ಏರ್ ಬಸ್ ಮತ್ತು ಟಾಟಾ ಸಂಸ್ಥೆಗಳ ಸಹಯೋಗದಲ್ಲಿ ಸಿ-295 ವಿಮಾನಗಳನ್ನು ಭಾರತದಲ್ಲಿ ನಿರ್ಮಿಸಲು ನಿರ್ಧರಿಸಿರುವುದು ಇದಕ್ಕೊಂದು ಉದಾಹರಣೆ. ಒಂದೊಮ್ಮೆ ಇಂಥ ನಿರ್ಮಾಣ ಆರ್ಥಿಕವಾಗಿ ಕಷ್ಟಕರವಾಗಿದ್ದರೆ, ಅಂಥ ಅಗತ್ಯ
ಉಪಕರಣಗಳನ್ನು ವಿದೇಶಿ ಒಇಎಂಗಳಿಂದ ಆಮದು ಮಾಡಿಕೊಳ್ಳುವ ಆಲೋಚನೆಯೂ ಸರಕಾರಕ್ಕಿದೆ. ಆದರೆ ಭಾರತೀಯ ರಕ್ಷಣಾ ಉದ್ಯಮ ದಾಪು ಗಾಲಿಟ್ಟು ಮುಂದುವರಿಯುತ್ತಿರುವುದರಿಂದ ಇಂಥ ಪರಿಸ್ಥಿತಿ ಎದುರಾಗುವ ಸಂಭವ ಕಮ್ಮಿ ಎನ್ನಬೇಕು.

* ಬೆಳೆಯುತ್ತಿದೆ ಆತ್ಮನಿರ್ಭರ ಭಾರತ: ಭಾರತವು ರಕ್ಷಣಾ ಉತ್ಪನ್ನಗಳ ವಲಯದ ಸ್ವಾವಲಂಬನೆಯ ಮೇಲೆ ಇಟ್ಟಿರುವ ನಂಬಿಕೆ ಸರಿಯಾಗಿಯೇ ಇದೆ ಎಂಬುದನ್ನು ಇತ್ತೀಚಿನ ಭೂರಾಜಕೀಯ ಪರಿಸ್ಥಿತಿಯು ಸಾಬೀತುಪಡಿಸುತ್ತಿದೆ. ಕಾರ್ಯತಂತ್ರದ ಸಾರ್ವಭೌಮತ್ವಕ್ಕೆ, ಶಸ್ತ್ರಾಸ್ತ್ರಗಳ/ ಯುದ್ಧವಾಹನಗಳ ದೀರ್ಘಕಾಲಿಕ ನಿರ್ವಹಣೆ ಮತ್ತು ಮೇಲ್ದರ್ಜೆಗೆ ಏರಿಸುವುದಕ್ಕೆ ದೇಶೀಯ ನಿರ್ಮಾಣವೇ ಕೀಲಿಕೈ ಆಗಿದೆ. ಉತ್ಪಾದನೆ ಹೆಚ್ಚಿಸಲು ಮತ್ತು ಸರಿಯಾದ
ಸಮಯದಲ್ಲಿ ಶಸಾಸಗಳು, ಉಪಕರಣಗಳನ್ನು ಪೂರೈಸಲು ಸರಕಾರಿ ಸ್ವಾಮ್ಯದ ಹಾಗೂ ಖಾಸಗಿ ವಲಯದ ಉದ್ಯಮಗಳ ಸಾಮರ್ಥ್ಯವನ್ನು ಹೆಚ್ಚಿಸ ಲಾಗುತ್ತಿದೆ. ಈ ಪ್ರಯತ್ನಗಳು ಭಾರತಕ್ಕೆ ದೀರ್ಘಕಾಲಿಕವಾಗಿ ಬಹುದೊಡ್ಡ ಲಾಭ ತಂದುಕೊಡಲಿರುವುದಂತೂ ದಿಟ.