Saturday, 14th December 2024

ಜಪಾನ್’ನಲ್ಲಿ ಭಾರತೀಯನ ನ್ಯಾಯ’ಪಾಲ’ನ ಸ್ಮರಣೆ

ಪರಿಚಯ

ಮಂಜುಳಾ ಡಿ.

ಜಪಾನಿನ ಪ್ರಧಾನಿಯಾಗಿದ್ದ ಶೀನ್ಜೋ ಅಬೆ ಭಾರತಕ್ಕೆ ಭೇಟಿ ನೀಡಿದ ವೇಳೆ ಸಮಯ ಹೊಂದಿಸಿಕೊಂಡು, ಕೊಲ್ಕತ್ತಾಕ್ಕೆ ಖುದ್ದು ಭೇಟಿ ನೀಡಿ ರಾಧಾ ಬಿನೋದ್ ಪಾಲ್ ಅವರ ಮಗನನ್ನು ಕಂಡು, ಜಪಾನ್ ಎಂದೆಂದಿಗೂ ಪಾಲ್ ಅವರನ್ನು ಸ್ಮರಿಸುತ್ತದೆ ಎಂದು ಹೇಳಿದರು. ಇದಲ್ಲದೇ ನಮ್ಮ ಪಾರ್ಲಿಮೆಂಟ್ ಉದ್ದೇಶಿಸಿ ಮಾತಾಡುವಾಗ ಪಾಲ್ ಅವರು ಜಪಾನಿಗಾಗಿ ಮಾಡಿದ್ದು ಸದಾ ಸ್ಮರಣೀಯ ಎಂದು ಉಲ್ಲೇಖಿಸಿದರು.

ಜಪಾನ್ ನಲ್ಲಿರುವ ನಾಲ್ಕು ಭಾರತೀಯರ ಪುತ್ತಳಿಗಳನ್ನು ಊಹಿಸಿ ಎಂದರೆ ಯಾರಾದರೂ ಊಹಿಸಬಹುದು. ಹೌದು ಅವರ ಆರಾಧ್ಯ ದೈವ ಬುದ್ದ, ನಮ್ಮೆಲ್ಲರ ಮತ್ತು ಜಗತ್ತು ಕಂಡ ಮಹಾತ್ಮ ಗಾಂಧಿ, ಅಂಬೇಡ್ಕರ್ ಮತ್ತು ಸುಭಾಷ್ ಚಂದ್ರ ಬೋಸ್. ಈ ನಾಲ್ಕೂ ಹೆಸರು ಎಲ್ಲಾ ಹೆಸರು ಭಾರತೀಯರ ಮನಗಳಲ್ಲಿ ವಿಶೇಷ ಸ್ಥಾನ ಪಡೆದಂತಹ ಹೆಸರುಗಳೇ. ಈ ನಾಲ್ಕೂ ಸ್ಟ್ಯಾಚೂ ಅಲ್ಲದೇ ಇನ್ನೊಂದು ಸ್ಟ್ಯಾಚೂ ಇದೆ. ಆದರೆ ಆ ಹೆಸರು ಕೇಳಿದ ಭಾರತೀಯರು ಬಹು ವಿರಳ. ಆದರೆ ಜಪಾನಿನ ಪಾಲಿಗೆ ಅದೊಂದು ಬಹು ಗೌರವಾನ್ವಿತ ಹೆಸರು.

ಎಷ್ಟೆಂದರೆ ಜಪಾನ್ ಸುಪ್ರೀಂ ಕೋರ್ಟ್ ಮುಂದೆ ಆತನ ದೊಡ್ಡ ಪುತ್ತಳಿಯಿದೆ. ಟೋಕಿಯೋದ ಎರಡು ಅತೀ ಮುಖ್ಯ ರಸ್ತೆಗಳಿಗೆ ಆತನ ಹೆಸರು ಇಡಲಾಗಿದೆ. ಈತ ಯಾರಿರಬಹುದು ಎಂಬ ಬಗ್ಗೆ ನಮ್ಮ ಊಹೆ ಸ್ವತಂತ್ರ ಸೇನಾನಿ, ದೊಡ್ಡ ರಾಜಕಾರಣಿ ಅಥವಾ ಯಾವುದೋ ರಾಜಮನೆತನದವರನ್ನು ಒಂದು ಸುತ್ತು ಅರಸಿ ಬರುತ್ತದೆ. ಇದ್ಯಾ ವುದೂ ಅಲ್ಲದಿದ್ದರೂ ಜಪಾನಿನ ಯಾವುದೋ ಒಂದು ವ್ಯವಸ್ಥೆಯ ಅಗಾಧ ಬದಲಾವಣೆಗೆ ಕಾರಣಿಕರ್ತ ಇರಬಹುದು ಎಂದು ನಮ್ಮ ಊಹೆ ಸಾಗುತ್ತದೆ.

ಆದರೆ ಇದ್ಯಾವ ಕೆಟಗರಿಗೆ ಸೇರದ ಆತ ಹುಟ್ಟಿದ್ದು ಕೊಲ್ಕತ್ತಾದ ಈಗಿನ 24 ಪರಗಣ ಜಿಲ್ಲೆಯ ಮಗೂರ್ತಿ ಶ್ರೀರಾಂಪುರ ಎಂಬ ಕಡು ಹಳ್ಳಿಯ ಹೊತ್ತಿನ ಊಟಕ್ಕೂ ನಿಲುಕದ ಕುಟುಂಬದಲ್ಲಿ. ಆತನೇ ರಾಧಾ ಬಿನೋದ್ ಪಾಲ! ಚಿಕ್ಕ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಪಾಲ್‌ನ ತಾಯಿ ಬೇರೆಯವರ ಮನೆಯ ಕೆಲಸ ಮಾಡುತ್ತಿದ್ದರೆ, ಪಾಲ್ ಹಸು ಮೇಯಿಸುತ್ತಿದ್ದ. ಪ್ರಾಥಮಿಕ ಶಾಲೆಯ ಸುತ್ತ ಹಸುಗಳನ್ನು ಮೇಯಿಸುವಾಗ ಶಾಲೆಯ ಕಿಟಕಿಯತ್ತಲೇ ಅವನ ಚಿತ್ತ ನೆಟ್ಟಿರುತ್ತಿತ್ತು. ಒಮ್ಮೆ ಶಾಲೆಯ ತಪಾಸಣೆಗೆ ಬಂದ ಮೇಲಽಕಾರಿ ಮಕ್ಕಳಿಗೆ ನಾಲ್ಕೈದು ಪ್ರಶ್ನೆಗಳನ್ನು ಕೇಳುತ್ತಾರೆ. ಒಮ್ಮೆಲೆ ಶಾಲಾ ಕೊಠಡಿಯನ್ನು ಹಿಮಾಲಯದ ಶೀತಲತೆ ಆವರಿಸುತ್ತದೆ. ಒಬ್ಬ ವಿದ್ಯಾರ್ಥಿಗೂ ಉತ್ತರ ಗೊತ್ತಿಲ್ಲ.

‘ನನಗೆ ಗೊತ್ತು’ ಎಂದು ಇದ್ದಕ್ಕಿದ್ದಂತೆ ಕಿಟಕಿಯಿಂದ ಬಂದ ಶಬ್ದ ಕೊಠಡಿಯ ಎಲ್ಲಾ ಗೋಡೆಗಳಿಗೂ ಪ್ರತಿಫಲಿಸಿ ಎಲ್ಲರ ನೋಟ ಒಮ್ಮೆಲೇ ಕಿಟಕಿಯತ್ತ ಕೇಂದ್ರೀಕೃತವಾಯಿತು. ತಡವರಿಸದೇ ಮೇಲಾಧಿಕಾರಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವ ಪಾಲನ ಬಗ್ಗೆ ಪೂರ್ತಿ ಮಾಹಿತಿ ಪಡೆದು ಅವನ ವಿದ್ಯಾಭ್ಯಾಸಕ್ಕೆ ದಾರಿಯಾಗುತ್ತದೆ. ಬ್ರಿಟಿಷ್ ಇಂಡಿಯಾ ಸರಕಾರದಲ್ಲಿ ಹಲವು ಪ್ರಮುಖ ಘಟ್ಟಗಳಲ್ಲಿ ಕೆಲಸ ಮಾಡಿದ ಪಾಲ್ 1922ರ ಬ್ರಿಟಿಷ್ ಇಂಡಿಯನ್ ಇನ್ಕಂ ಟ್ಯಾಕ್ಸ್ ಆಪ್ ನ ಕರಡು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1927 ರಲ್ಲಿ ಬ್ರಿಟಿಷ್ ಇಂಡಿಯಾ ಸರಕಾರ ಅವರನ್ನು ಕಾನೂನು ಸಲಹೆಗಾರರಾಗಿ ನೇಮಿಸಿತು. ಭಾರತದ ಹೊಸ ಕಾನೂನು ರಚನಾ ಸಮಿತಿಯಲ್ಲಿಯೂ ಪ್ರಮುಖರಾಗಿದ್ದರು.

ಆದರೆ ಪಾಲ್ ಅವರನ್ನು ಜಪಾನಿನ ಜನರು ಟೋಕಿಯೋದ ಎರಡು ಪ್ರಮುಖ ಬೀದಿಗಳಿಗಿಟ್ಟು ನೆನೆಯುವಂತೆ ಮಾಡಿದ್ದು ಇವ್ಯಾವುದೂ ಅಲ್ಲ. ಎರಡನೇ ಮಹಯುದ್ದದ ನಂತರ ವಿಜಯ ಸಾಧಿಸಿದ ಅಲೈಡ್ ಪವರ‍್ಸ್, ಯುದ್ಧದಲ್ಲಿ ಭಾಗಿಯಾಗಿ ಶಾಂತಿ
ಮತ್ತು ಮಾನವೀಯತೆಯ ಕಗ್ಗೊಲೆಗೈದ ಜಪಾನಿನ ಒಟ್ಟು 80 ಜನರ ಪೈಕಿ 25 ಜನರಿಗೆ ಶಿಕ್ಷೆಯನ್ನು ಕ್ಲಾಸ್ ‘ಎ’,‘ಬಿ’ ಮತ್ತು ‘ಸಿ’ ಎಂದು ವರ್ಗೀಕರಿಸಿರುತ್ತದೆ.

25 ಜನರಲ್ಲಿ ಜಪಾನಿನ ಮುಖ್ಯ ಮಿಲಿಟರಿ ಅಧಿಕಾರಿಗಳು, ರಾಜತಾಂತ್ರಿಕರು, ಮಂತ್ರಿಗಳು, ದೇಶದ ಪ್ರಮುಖರ ಪಟ್ಟಿ ಯಾಗಿತ್ತು. ಇದನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಇಂಟರ್ ನ್ಯಾಷನಲ್ ಮಿಲಿಟರಿ ಟ್ರಿಬ್ಯುನಲ್ ಫಾರ್ ಈಸ್ಟ್ 1946 ಏಪ್ರಿಲ್ 29 ರಂದು ರಚಿಸಿ ಇದಕ್ಕೆ ಅಲೈಡ್ ಪವರ್ಸ್ ಸಹಯೋಗದಲ್ಲಿದ್ದ 11 ದೇಶಗಳಿಂದ ಜಡ್ಜ್ ಗಳನ್ನು ನೇಮಕ ಮಾಡಲಾಗುತ್ತದೆ. ಹೀಗೆ ನೇಮಕ ಮಾಡಲಾದ 11 ದೇಶಗಳ ಜಡ್ಜ್ ಗಳಲ್ಲಿ ಬ್ರಿಟೀಷ್ ಭಾರತದಿಂದ ರಾಧಾ ಬಿನೋದ್ ಪಾಲ್ ಇವರನ್ನು ಕಳುಹಿಸ ಲಾಗಿರುತ್ತದೆ. ಯುದ್ಧ ಮುಗಿದಿತ್ತು. ಅಲೈಡ್ ಪವರ್ಸ್ ಸೂಪರ್ ಪವರ್ ಎಂದು ಘೋಷಣೆಯೂ ಆಗಿತ್ತು.

ಅಲೈಡ್ ಪವರ್ಸ್ ಗೆ ಪ್ರಮುಖರನ್ನು ಶಿಕ್ಷಿಸಿ ಮೆರೆಯುವುದೊಂದು ಬಾಕಿಯಿತ್ತು. 25 ಜನರ ಮೇಲೆ ಅಂತಿಮಗೊಂಡ ಪಟ್ಟಿಯ ತೀರ್ಪು ಒಂದಷ್ಟು ಟ್ರಯಲ್ ನಂತರ ಅಂತಿಮವಾಗುವ ತೀರ್ಮಾನದಲ್ಲಿ ಯಾವ ಅಚ್ಚರಿಯೂ ಉಳಿದಿರಲಿಲ್ಲ. ಆದರೆ ಟ್ರಯಲ್ ಆರಂಭವಾದ ನಂತರ ಭಾರತದ ಪ್ರತಿನಿಧಿಯಾಗಿ 11 ಜಡ್ಜ್’ಗಳಲ್ಲಿ ಒಬ್ಬರಾಗಿ ಸೇರಿದ ಬಿನೋದ್ ಪಾಲ್ ಇಡೀ ಜಗತ್ತು ದಿಗ್ಬ್ರಮೆಯಾಗುವಂತೆ ಮಾಡಿದ್ದಾದರೂ ಏನು? ಟೋಕಿಯೋ ಟ್ರಯಲ್‌ನಲ್ಲಿದ್ದ ಎಂಟು ಜನ ಜಡ್ಜ್’ಗಳು 25 ಜನರ ಮೇಲೆ ಮಾಡಿದ್ದ ಶಿಕ್ಷೆಯ ತೀರ್ಪುನ್ನು ಸಾರಾಸಗಟಾಗಿ ಒಪ್ಪಿದರು. ಆದರೆ ಪಾಲ್ ಮಾತ್ರ ನಾಲ್ಕು ದಿಗ್ಗಜ ರಾಷ್ಟ್ರಗಳು ಸೇರಿ ರಚಿಸಿದ ಟೋಕಿಯೋ ಟ್ರಯಲ್ ಪೀಠದಲ್ಲಿ ಕುಳಿತು ಎಲ್ಲಾ ಯುದ್ಧ ಅಪರಾಽಗಳ ಮೇಲೆ ಮಾಡಿರುವ ಆಪಾದನೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಘೋಷಿಸಿಬಿಟ್ಟರು.

ಕೆನಡಾ- ಆಸ್ಟ್ರೇಲಿಯಾದಂತಹ ದೇಶಗಳ ಜಡ್ಜ್’ಗಳು ಒಪ್ಪಿದ ತೀರ್ಪಿನ ವಿರುದ್ಧ ಮತ್ತು ನಾಲ್ಕೂ ದಿಗ್ಗಜ ರಾಷ್ಟ್ರಗಳ ಎದುರು ಇಂತಹ ತೀರ್ಪು ಮುಂದಿಡುವುದು ಸಾಧಾರಣ ಮಾತಾಗಿರಲಿಲ್ಲ. ತನ್ನ1235 ಪುಟಗಳ ಪ್ರಬಲ ಅಂಶಗಳ ತೀರ್ಪಿನಲ್ಲಿ ಪಾಲ್
ನೀಡಿದ ವಿಸ್ತೃತ ವಿವರಣೆ ಪೋರ್ಚುಗೀಸ್ ಮತ್ತು ಡಚ್ ನ್ಯಾಯಾಧೀಶರು ಮರು ಆಲೋಚಿಸುವಂತಾಯಿತು. ಮಾನವೀಯತೆಯ ಕಗ್ಗೊಲೆ ಮಾಡಿದವರು ಎಂದು ತೀರ್ಮಾನಿಸಿ ಶಿಕ್ಷೆ ಘೋಷಿಸಲಾಗಿದೆ. ಆದರೆ ಹಿರೋಷಿಮಾ ನಾಗಾಸಾಕಿ ಮೇಲೆ ಅಣುಬಾಂಬ್
ಪ್ರಯೋಗಕ್ಕಿಂತ ಮಾನವೀಯ ಕಗ್ಗೊಲೆ ಇನ್ಯಾವುದಿದೆ ಎಂದು ಪ್ರಶ್ನಿಸಿದ ಪಾಲ್‌ನ ಛಾತಿ ಜಪಾನಿನ ಜನಮಾನಸದಲ್ಲಿ ಎಂದೆಂದಿಗೂ ಹಸಿರಾಗಿ ನಿಂತಿದೆ.

ಟೋಕಿಯೋ ಟ್ರಯಲ್ ಸತತ 932 ದಿನಗಳು ಜರುಗಿ, ಆಸ್ಟ್ರೇಲಿಯಾದ ಜಡ್ಜ್’ರವರಿಂದ ಒಬ್ಬ ಜಡ್ಜ್’ ನ ವಿರುದ್ದ ಅಭಿಪ್ರಾಯ ದೊಂದಿಗೆ ಬಹುಮತದ ಮೇರೆಗೆ ಶಿಕ್ಷೆಯ ತೀರ್ಪು ಮಂಡನೆಯಾಯಿತು. ಜನರಿಗೆ ಸಿಗದಂತೆ ಮಾಡಲಾಗಿದ್ದ 1235 ಪುಟಗಳ
ಪಾಲ್ ಅವರ ತೀರ್ಪನ್ನು 1952ರಲ್ಲಿ ಸ್ವಾತಂತ್ರ್ಯವಾದ ಜಪಾನ್ ಗೌರವಾದರ ಪೂರ್ವಕವಾಗಿ ಪ್ರತಿ ಪುಟವನ್ನು ಎತ್ತಿ ಹಿಡಿಯಿತು. ಪಾಲ್‌ನ ಪ್ರಬಲ ಮಂಡನೆಗಳು ಎಂದೆಂದಿಗೂ ಜಪಾನ್ ಆತನನ್ನು ಪೂಜನೀಯವಾಗಿ ಕಾಣುವಂತಾಯಿತು. ತನ್ನ  ಮಂಡನೆಯ ವಿಶಿಷ್ಟ ರೀತಿಯಿಂದಾಗಿ ಪಾಲ್‌ ಅವರನ್ನು ಯುನೈಟೆಡ್ ನೇಷನ ಇಂಟರ್ ನ್ಯಾಷನಲ್ ಲಾ ಕಮಿಷನ್‌ಗೆ ಆಯ್ಕೆಯಾಗಿ, 1958-1966 ರವರೆಗೆ ಕಾರ್ಯನಿರ್ವಹಿಸಿದರು.

2007ರಲ್ಲಿ ಅಂದಿನ ಜಪಾನಿನ ಪ್ರಧಾನಿ ಶೀನ್ಜೋ ಅಬೆ ಭಾರತಕ್ಕೆ ಭೇಟಿ ನೀಡಿದ ವೇಳೆ ಸಮಯ ಹೊಂದಿಸಿಕೊಂಡು, ಕೊಲ್ಕತ್ತಾಕ್ಕೆ ಖುದ್ದು ಭೇಟಿ ನೀಡಿ ಪಾಲ್ ಅವರ ಮಗನನ್ನು ಕಂಡು, ಜಪಾನ್ ಎಂದೆಂದಿಗೂ ಪಾಲ್ ಅವರನ್ನು ಸ್ಮರಿಸುತ್ತದೆ ಎಂದು ಹೇಳಿದರು. ಇದಲ್ಲದೇ ನಮ್ಮ ಪಾರ್ಲಿನೆಂಟ್ ಉದ್ದೇಶಿಸಿ ಮಾತಾಡುವಾಗ ಪಾಲ್ ಅವರು ಜಪಾನಿಗಾಗಿ ಮಾಡಿದ್ದು ಸದಾ ಸ್ಮರಣೀಯ ಎಂದು ಉಖಿಸಿದರು. ಜಪಾನಿನ ಅತ್ಯುನ್ನತ ಗೌರವ ಆರ್ಡರ್ ಆಫ್ ಸೇಕ್ರೆಡ್ ಟ್ರೆಷರ್ ಸೇರಿದಂತೆ ಹಲವಾರು ಮಹತ್ತರ ಗೌರವ ನೀಡಿ ಗೌರವಿಸಲಾಗಿದೆ. ಇದುವರೆಗೂ ಲಕ್ಷಾಂತರ ಜಡ್ಜ್’ – ಜಡ್ಜ್’ಮೆಂಟ್ ಗಳೂ ಹಾಸು ಹೊದ್ದಿವೆ. ಆದರೆ ಅತ್ಯಂತ ದುರ್ಭರ ಸ್ಥಿತಿಯಲ್ಲಿ ಇಡೀ ಜಪಾನಿನ ಪ್ರಮುಖರು ಘೋರವುಂಡು ನಿಂತಗಳಿಗೆ, ಹೀಗೆ ಪಾಲ್ ನಿರ್ಭಯವಾಗಿ ಅವರ ಪರ ಅತ್ಯಂತ ಪ್ರಬಲವಾಗಿ ನಿಂತು, ಬಲಿಷ್ಠ ಅಲೈಡ್ ಪವರ್ಸ್‌ಗೆ, ‘ಹಿರೋಷಿಮಾ ನಾಗಾಸಾಕಿ ಮೇಲೆ ಬಾಂಬ್ ಪ್ರಯೋಗ ವಿರೋಧಿಸಿದ’ ಛಾತಿ ತೋರಿದ್ದು- ಮಾನವೀಯತೆ ಎತ್ತಿ ಹಿಡಿಯುವ ಅಗಾಧ ಅತ್ಯಾಕರ್ಷಕ ಪ್ರಯತ್ನಗಳಂದು.

ಇಂದು ಮಾಡಿದ್ದು ನಾಳೆಗೆ ಮರೆತು ನೀನೇನು ಮಾಡಿದೆ!? ಎನ್ನುವಂತ ಕೃತಘ್ನ ಕಾಲಘಟ್ಟದಲ್ಲಿ ಜಪಾನ್ ಹೀಗೆ ನೆನೆಯುತ್ತಿರು ವುದು ಇನ್ನೊಂದು ಮಾನವೀಯ ಸ್ಪರ್ಶ ಎನ್ನಿಸುವುದು.