Saturday, 27th July 2024

ದೇಶದ ರಕ್ಷಣೆಗೆ ನೌಕಾಪಡೆ ಕೊಟ್ಟ ಕೊಡುಗೆ ನೆನೆದು..

ವಿರಾಜಯಾನ

ವಿರಾಜ್ ಕೆ ಅಣಜಿ

A ship is safe in harbor, but that’s not ships are made for ಎಂಬ ಮಾತಿದೆ. ಅದರಂತೆಯೇ ಇಷ್ಟು ದಿನ ಕಾದಿದ್ದ, ಶತಕೋಟಿಗೂ ಮಿಕ್ಕಿದ ಭಾರತೀಯರು ಬಯಸಿದ್ದ, ಭಾರತಕ್ಕೆ ಅವಶ್ಯವಾಗಿದ್ದ ಯುದ್ಧ ನೌಕೆ ಐಎನ್‌ಎಸ್- ವಿಕ್ರಾಂತ್ ಕಳೆದ ವಾರವಷ್ಟೇ ಕಡಲಿಗೆ ಇಳಿದಿದ್ದು, ಯಶಸ್ವಿಯಾಗಿ ತನ್ನ ಪ್ರಯೋಗಾರ್ಥ ಸಂಚಾರವನ್ನು ಮುಗಿಸಿ ಕೊಚ್ಚಿಗೆ ವಾಪಾಸಾಗಿದೆ.

IAC-1 (Indigenous Aircraft Carrier) ಅಂದರೆ ದೇಶದ ಪ್ರಥಮ ದೇಶೀಯ ನಿರ್ಮಿತ ನೌಕೆ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದು, 2022ರಲ್ಲಿ ಭಾರತೀಯ ಸೇನೆಗೆ ಐಎನ್‌ಎಸ್ ವಿಕ್ರಾಂತ್ ಎಂಬ ಹೆಸರಿನಲ್ಲಿ ಭಾರತೀಯ ಕಡಲ ಗಡಿ ಕಾಯಲು ನಿಯೋಜನೆ ಆಗಲಿದೆ.

ಈ ಯಶಸ್ವಿ ಪ್ರಯೋಗವು ವಿಶ್ವದ ದೈತ್ಯ ರಾಷ್ಟ್ರಗಳು ಭಾರತದತ್ತ ಒಮ್ಮೆ ಕಣ್ಣರಳಿಸಿ ನೋಡುವಂತೆ ಮಾಡಿರು ವುದು ಸುಳ್ಳಲ್ಲ. ಅದರಲ್ಲೂ ಮುಖ್ಯವಾಗಿ ಭಾರತದ ಅಕ್ಕಪಕ್ಕದಲ್ಲೇ ನೆಲೆಸಿರುವ ಪಾಕಿಸ್ತಾನ ಮತ್ತು ಚೀನಾ ಎಂಬ ಎರಡು ನರಿ ಬುದ್ಧಿ ದೇಶಗಳಿಗೆ ನಿದ್ದೆಗೆಡಿಸಿರುವುದು, ರಣಾಂಗಣಕ್ಕೆ ಇಳಿಯುವ ಮುನ್ನವೇ ವಿಕ್ರಾಂತ್ ಮಾಡಿರುವ ಕಮಾಲ್ ಎಂದರೆ ತಪ್ಪಾಗದು. 75ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ನಾವೆಲ್ಲರೂ ನಿಂತಿರುವ ಹೊತ್ತಲ್ಲಿ ದೇಶಕ್ಕೆ ಇದಕ್ಕಿಂಥ ದೊಡ್ಡ ಗಿಫ್ಟ್ ಬೇರೇನಿರಲು ಸಾಧ್ಯ?

40 ಸಾವಿರ ಟನ್ ಭಾರವಿರುವ ವಿಕ್ರಾಂತ್, ಕನಿಷ್ಠ 1600 ಸಿಬ್ಬಂದಿಯನ್ನು ಹೊತ್ತು, ಮಿಗ್ 29ಕೆ, ಕೆಎ-31, ಎಂಎಚ್ 60 ಆರ್, ಎಚ್‌ಎಎಲ್ ನಿರ್ಮಿತ ಧ್ರುವ ಯುದ್ಧ ಹೆಲಿಕ್ಯಾಫ್ಟರ್‌ ಗಳಂಥ ದೈತ್ಯರನ್ನೆಲ್ಲ ತನ್ನ ಮೇಲೆ ಕೂರಿಸಿಕೊಂಡು ಕಡಲಿನಲ್ಲಿ ತೇಲಬಲ್ಲದು. 262 ಮೀಟರ್ ಉದ್ದದ, 62ಮೀಟರ್ ಅಗಲದ, 59 ಮೀಟರ್ ಎತ್ತರ, 14 ಅಂತಸ್ತು, 2300 ವಿವಿಧ ವಿಭಾಗ ಹೊಂದಿದೆ. ಒಮ್ಮೆ ಸರ್ವ ಸನ್ನದ್ಧವಾಗಿ ಹೊರಟರೆ 7500 ಕಿಮೀ ನಾಟಿಕಲ್ ಮೈಲ್‌ಗಳನ್ನು ಒಂದೇ ಬಾರಿಗೆ ಸಾಗಬಲ್ಲದು. ಬರೋಬ್ಬರಿ 23 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆತ್ಮ ನಿರ್ಭರ್ ಭಾರತ್ ಅಭಿಯಾನದಲ್ಲಿ ತಯಾರಾಗಿ, ಸೇನೆಗೆ ಲಕ್ಷ ಆನೆಗಳ ಬಲವನ್ನು ತಂದುಕೊಟ್ಟ ಹೆಗ್ಗಳಿಕೆಗೆ ವಿಕ್ರಾಂತ್ ಪಾತ್ರವಾಗಿದೆ.

ಒಂದು ಯುದ್ಧನೌಕೆ ಸಿದ್ಧವಾದಾಕ್ಷಣ ಇಷ್ಟೊಂದು ಸಂಚಲನ ಉಂಟಾಗಲು ಕಾರಣವೂ ನೂರಾರಿವೆ. ವಿಕ್ರಾಂತ್ ನೌಕೆಯ ಯಶಸ್ವಿ ಪ್ರಯೋಗವು ಭಾರತವನ್ನು ಮಹಾಸಾಗರದಲ್ಲಿ ಮಹಾ ಶಕ್ತಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಿಸಿದೆ. ಈ ಮೊದಲು ಅಮೆರಿಕ, ಬ್ರಿಟನ್, ಜಪಾನ್, ರಷ್ಯಾ, ಫ್ರಾನ್ಸ್, ಚೀನಾ ಜಲಸೇನೆಯಲ್ಲಿ ತಮ್ಮ ಸಾಮರ್ಥ್ಯ ತೋರಿದ್ದವು. ಈಗ ಭಾರತವೂ ಕೂಡ ತನ್ನ ದೇಶ ರಕ್ಷಣೆಯಲ್ಲಿ ಹಿಂದೆ ಬೀಳುವುದಿಲ್ಲ ಎಂಬುದನ್ನು ಸಾರಿ ಹೇಳಿದೆ.

ಈ ಯುದ್ಧನೌಕೆ ಕನಸು ನಿನ್ನೆ ಮೊನ್ನೆಯದ್ದಲ್ಲ. ಇದು ಆರಂಭವಾಗಿದ್ದು 2003ರಲ್ಲಿ. ಅಂದು ಈ ನೌಕೆಗೆ ಮೀಸಲಿಟ್ಟಿದ್ದ ಮೊತ್ತ 3216 ಕೋಟಿ. ಒಂದು ವಿಮಾನವಾಹಕ ನೌಕೆಯು ಒಂದು ದೇಶದ ಶಕ್ತಿ ಮತ್ತು ಸಾಮರ್ಥ್ಯದ ಹೆಗ್ಗುರುತು. ದೇಶಗಳು ಯುದ್ಧಕ್ಕೆ ನಿಂತರೆ, ಮುಖ್ಯವಾಗಿ ಸಮರ ನಡೆಯುವುದೇ ಕಡಲಿನಲ್ಲಿ, ಹೀಗಾಗಿ ಒಂದು ನೌಕೆ ಹೊಂದಿದ್ದರೂ ಕೂಡ ಅದು ಎದುರಾಳಿ ರಾಷ್ಟ್ರದ ಜಂಘಾಬಲ ಕುಸಿಯುವಂತೆ ಮಾಡಬಲ್ಲದು. ಒಂದೇ ಮಾತಿನಲ್ಲಿ ಹೇಳುವುದಾದರೆ, ಇದೊಂದು ಚಲಿಸುವ ವಾರ್‌ಫೀಲ್ಡ್‌. ಯುದ್ಧ ವಿಮಾನವೇ ಹಾರಾಟ ಮಾಡಲು ಅನುಕೂಲ ಆಗಬಲ್ಲ ಮಿನಿ ರನ್‌ವೇ ಹೊಂದಿರುತ್ತದೆ. ನೌಕೆ ತೇಲುತ್ತ ಹೋಗುತ್ತಿದ್ದರೆ, ಇಲ್ಲಿಂದಲೇ ಹೆಲಿಕಾಫ್ಟರ್, ಯುದ್ಧ ವಿಮಾನಗಳು ಹಾರಿ ಹೋಗಿ ಎದುರಾಳಿ ಪಡೆಗೆ ಮಣ್ಣು ಮುಕ್ಕಿಸಿ ವಾಪಾಸ್ ಬಂದು ಇಳಿದು ಬಿಡಬಹುದು. ಅಷ್ಟು ಯುದ್ಧ ಸಜ್ಜಿತವಾಗಿ ನೌಕೆಯನ್ನು ನಿರ್ಮಾಣ ಮಾಡಲಾಗಿರುತ್ತದೆ.

ಭಾರತೀಯರಿಗೆ ನೌಕಾಪಡೆ ಹೊಸದೇನೂ ಅಲ್ಲ. ಸುಮಾರು ಆರು ಸಾವಿರ ವರ್ಷಗಳ ಹಿಂದೆಯೇ ಕಡಲನ್ನು ದಾಟಿ ಹೋಗಬಲ್ಲ ಸಾಮರ್ಥ್ಯ ನಮ್ಮವರಿಗಿತ್ತು. ಐದನೇ ಶತಮಾನದ ಹೊತ್ತಿಗೆ ಚೋಳರು ಸಮುದ್ರದಾಚೆಗಿನ ಜಾವಾ ಮತ್ತು ಸುಮಾತ್ರ ದ್ವೀಪಗಳನ್ನು ಗೆದ್ದು ಕೊಂಡಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಸ್ವಾತಂತ್ರ್ಯ ನಂತರ ಭಾರತಕ್ಕೆ ಬಲಿಷ್ಟ ನೌಕಾಪಡೆ ಅಗತ್ಯವಿರುವುದನ್ನು ಮನಗಂಡ ಸರಕಾರ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿತು. 1947ರಲ್ಲಿಯೇ ನಮಗೆ ಸ್ವಾತಂತ್ರ್ಯ ಬಂದಿದ್ದರೂ ಪೋರ್ಚುಗೀಸರು ಮಾತ್ರ ಗೋವಾದಿಂದ ತಮ್ಮ ಅಂಗಡಿಗಳನ್ನು ಖಾಲಿ ಮಾಡಿರಲಿಲ್ಲ. ಇವರನ್ನು ಗೋವಾದಿಂದ ಓಡಿಸಲು ಆಪರೇಷನ್ ವಿಜಯ್ ಕಾರ್ಯಾಚರಣೆಯನ್ನು 1961ರಲ್ಲಿ ಕೈಗೊಳ್ಳಲಾಯಿತು. ಇದರ ಯಶಸ್ಸಿನಲ್ಲಿ ಮುಖ್ಯ ಪಾಲು ಭಾರತೀಯ ನೌಕಾಪಡೆಗೇ ಸೇರಬೇಕು. ಡಿಸೆಂಬರ್ 18ರಂದು ಐಎನ್‌ಎಸ್ ಬೆಟ್ವಾ ಮತ್ತು ಬೀಸ್ ಎಂಬ ಎರಡು ಯುದ್ಧ ನೌಕೆಗಳು ನೇರವಾಗಿ ಮಡಗಾವ್‌ನ ಬಂದರಿಗೆ ನುಗ್ಗಿ, ಪೋರ್ಚುಗಲ್ ಹಡಗಿನ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯಿಂದ ದಿಕ್ಕಾಪಾಲಾದ ಪೋರ್ಚುಗೀಸರ ಪಡೆ, ಕೊನೆಗೆ ಗೋವಾ ಖಾಲಿ ಮಾಡುವ ನಿರ್ಧಾರಕ್ಕೆ ಬರಬೇಕಾಯ್ತು. ಆನಂತರವೇ ಗೋವಾ ಕೂಡ ಒಂದು ರಾಜ್ಯವಾಗಿ ಅಧಿಕೃತವಾಗಿ ಭಾರತದ ಆಡಳಿತಕ್ಕೆ ಸಂಪೂರ್ಣವಾಗಿ ಒಳಪಟ್ಟಿತ್ತು.

ದೇಶದ ಯುದ್ಧ ಇತಿಹಾಸದಲ್ಲಿ 1971ಕ್ಕೆ ವಿಶೇಷ ಸ್ಥಾಾನವಿದೆ. ಬರೀ ಹಾವಾಡಿಸುವವರೇ ತುಂಬಿರುವ ಕೊಂಪೆ ಎಂದು ಜರಿದಿದ್ದ ಪಾಶ್ಚಾತ್ಯರೂ ಕೂಡ, ದೇಶವಾಗಿ ಭಾರತ ಎಷ್ಟು ಬಲಿಷ್ಠವಾಗಿ ರೂಪುಗೊಳ್ಳುತ್ತಿದೆ ಎಂಬುದನ್ನು ಅರಿಯಲು ಆರಂಭಿಸಿದ ವರ್ಷವದು. ಕಮಕ್ ಗಿಮಕ್ ಎಂದರೆ, ಭಾರತವೂ ಕೂಡ ತಟ್ದದೇ ಬಿಡದು ಎಂದು ಜಗತ್ತೂ ಕೂಡ ಆಗಲೇ ತಣ್ಣಗೆ ಬೆಚ್ಚಗಾದವು.

ತನ್ನ ಹುಟ್ಟಿನಿಂದಲೂ ಭಾರತಕ್ಕೆ ಮಗ್ಗಲ ಮುಳ್ಳಾಗಿಯೇ ಇರುವ ಪಾಕಿಸ್ತಾನ ಬಾಂಗ್ಲಾದೇಶದ ಜನರನ್ನು ಹಿಡಿದು ಹಿಪ್ಪೆ ಮಾಡಿ ಹಿಂಸಿಸುತ್ತಿತ್ತು. ಅತ್ತ ಕಾಶ್ಮೀರದ ಕಡೆಯಿಂದ ಇತ್ತ ಬಂಗಾಳ ಕೊಲ್ಲಿ ಕಡೆಯಿಂದ ಭಾರತಕ್ಕೆ ತೊಂದರೆ ಕೊಡಲು ಪಾಕ್ ಹವಣಿಸುತ್ತಿತ್ತು. ಇದಕ್ಕೆಲ್ಲ ಅಂತ್ಯ ಹಾಡಲೆಂದು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿ ನಿಂತಿತ್ತು. ಪೂರ್ವ ಪಾಕಿಸ್ತಾನ(ಇಂದಿನ ಬಾಂಗ್ಲಾ)ದಲ್ಲಿ ಪಾಕಿಸ್ತಾನದರಿಂದ ನಡೆಯುತ್ತಿದ್ದ ಹಿಂಸಾಚಾರ, ಹತ್ಯಾಕಾಂಡದ ಅನಾಹುತಗಳು ನಿಲ್ಲುವ ಲಕ್ಷಣಗಳು ಕಾಣಿಸಲಿಲ್ಲ. ಇದರಿಂದ ಭಾರತದ ಒಳಕ್ಕೆೆ ನುಸುಳುವ ನಿರಾಶ್ರಿತರನ್ನು ತಡೆಯುವುದು ನಮ್ಮ ಯೋಧರಿಗೆ ದೊಡ್ಡ ಚಿಂತೆಯಾಯಿತು. ಪಾಕ್ ಸೇನೆಯ ಈ ಅನಾಗರೀಕ ಕೃತ್ಯ ವಿರೋಧಿಸಿದ ಬಾಂಗ್ಲಾದೇಶಕ್ಕೆ ಪ್ರಧಾನಿ ಇಂದಿರಾ ಬೆಂಬಲ ನೀಡಿದರು. ಬಂದ ಬಂದವರಿಗೆಲ್ಲ ನಮ್ಮ ದೇಶದ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ನೀಡುತ್ತ ಹೋದರೆ, ಇದು ಮುಗಿಯದ ಕತೆ ಆಗಲಿದೆ ಎಂದು ಅರಿತು, ಯುದ್ಧ ಸನ್ನದ್ಧವಾಗಿ ಎಂದು ಸೇನಗೆ ಸೂಚನೆ ಕೊಟ್ಟರು.

ಬಾಂಗ್ಲಾದೇಶ ವಿಮೋಚನೆಗೆ ಭಾರತ ನೀಡಿದ ಈ ಬೆಂಬಲ ಕಂಡು ಅಂದಿನ ಪಾಕಿಸ್ತಾನದ ಸೇನಾ ಆಡಳಿತಗಾರ ಜನರಲ್ ಅಯೂಬ್ ಖಾನ್ ಕಣ್ಣೆಲ್ಲ ಕಂಪಗಾಗಿಸಿಕೊಂಡ. ಪಾಕಿಸ್ತಾನದ ವಾಯು ಪಡೆ (ಪಿಎಎ್) ತನ್ನ ದೇಶದ ಗಡಿಯಿಂದ 480 ಕಿ.ಮೀ. ದೂರದ ಆಗ್ರಾದ ಭಾರತದ ವಾಯುನೆಲೆ ಹಾಗೂ ವಾಯವ್ಯ ಭಾಗದ ಸರಿಸುಮಾರು 11 ವಿವಿಧ ವಾಯುನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡುವಂಥ ಹುಂಬತನ ತೋರಿದ್ದ.
ಭಾರತೀಯ ವಾಯುನೆಲೆಯನ್ನೇ ವಶಪಡಿಸಿಕೊಂಡು ಬಿಡುತ್ತೇವೆ ಎಂದುಕೊಂಡು, ಅಂದಿನ ಪಾಕ್ ಅಧ್ಯಕ್ಷ ಯಹ್ಯಾ ಖಾನ್ ಮಾತು ಕೇಳಿದ ಪಾಕ್ ಪಡೆ ಭಾರತದ ಮೇಲೆ ದಾಳಿ ಮಾಡಿತು. 1967ರಲ್ಲಿ ಇಸ್ರೇಲ್ ಅನುಸರಿಸಿದ ತಂತ್ರ ಅನುಸರಿಸಿದರೆ ತಾನೂ ಕೂಡ ಭಾರತದ ವಾಯು ಪಡೆಯ ರೆಕ್ಕೆ ಮುರಿಯಬಹುದು ಎಂಬ ದಡ್ಡ ಆಲೋಚನೆ ಆತನದ್ದಾಗಿತ್ತು.

ಆದರೆ, ಇಂಥ ನರಿಗಳ ಬುದ್ಧಿ ಅರಿತು, ಮೊದಲೇ ಜಾಗ್ರತವಾಗಿದ್ದ ಭಾರತೀಯ ಸೇನೆ, ಮುಟ್ಟಿ ನೋಡಿಕೊಳ್ಳುವಂತೆ ಪಾಕ್ ಸೇನೆಗೆ ಉತ್ತರ ನೀಡಿತು.
ಇತ್ತ ಐಎನ್‌ಎಸ್ ವಿಕ್ರಾಂತ್ ಸಮುದ್ರ ಮಾರ್ಗದ ಮೂಲಕ ಯುದ್ಧ ಬಾಂಬರ್ ಹೊತ್ತು ಬಾಂಗ್ಲಾದ ಚಿತ್ತಗಾಂಗ್ ಮತ್ತು ಕಾಕ್‌ಸ್‌ ಬಜಾರ್‌ನತ್ತ ಮುನ್ನಡೆಯಿತು. ಇದಕ್ಕೆ ಪ್ರತಿ ದಾಳಿ ನಡೆಸಲು ಪಾಕಿಸ್ತಾನವು ತನ್ನ ಪಿಎನ್‌ಎಸ್ ಘಾಜಿ ಸಬ್ ಮರೈನ್ ಅನ್ನು ಛೂ ಬಿಟ್ಟಿತ್ತು. ತಾನೇನೋ ಮಾಡಿಬಿಡುವೆ ಎಂದು ಬಂದ ಘಾಜಿ ಕೊನೆಗೆ ಏನೋ ಮಾಡಲು ಹೋಗಿ ವಿಶಾಖಪಟ್ಟಣಂ ಕರಾವಳಿಯ ಗಡಿಯ ಬಳಿ ಇನ್ನೆಂದೂ ಮೇಲೇಳದಂತೆ ಅಜ್ಞಾತವಾಯಿತು.

ಇನ್ನೊಂದೆಡೆ ನಮ್ಮ ಸೇನಾಪಡೆ ಬಾಂಗ್ಲಾಾದೊಳಗೆ ನುಗ್ಗಿ ಪಾಕ್ ಸೈನ್ಯವನ್ನು ಹೆಡೆಮುರಿ ಕಟ್ಟುತ್ತಿತ್ತು. ಮತ್ತೊಂದೆಡೆ ಆಪರೇಷನ್ ಟ್ರೈಟೆಂಡ್ ಹೆಸರಿನಲ್ಲಿ ಐಎನ್‌ಎಸ್ ನಿರ್ಗಾಟ್, ನಿಪಾಟ್, ವೀರ್ ಹೆಸರಿನ ಯುದ್ಧ ನೌಕೆಗಳು ಪಾಕಿಸ್ತಾಾನದ ಕರಾಚಿ ಬಂದರಿನತ್ತ ನುಗ್ಗಿದ್ದವು. ನಮ್ಮ ದೇಶಕ್ಕೆ ಸದಾ ತೊಂದರೆ ಕೊಡುವ ನಿಮಗೆ ಇಂದು ಸುಮ್ಮನೇ ಬಿಡುವುದಿಲ್ಲ ಎಂಬಂತೆ ನಮ್ಮ ನೌಕಾಪಡೆ ಯೋಧರು ನಿರ್ಧರಿಸಿ ಹೋಗಿದ್ದರು. ನಿರ್ಗಾಟ್ ಹಾರಿಸಿದ ಎರಡು ಮಿಸೈಲ್ ಗೆ ಪಾಕ್‌ನ ಖೈಬರ್ ನೌಕೆ ಪುಡಿಪುಡಿಯಾಗಿ ಕಡಲಾಳ ಸೇರಿ ಹೋಯಿತು. ನಿಪಾಟ್ ಹಾರಿಸಿದ ಎರಡು ಮಿಸೈಲ್‌ಗೆ ಇನ್ನೆರೆಡು ಹಡಗುಗಳು ಉರಿದು ಹೋದವು. ಅಂತ್ಯದಲ್ಲಿ ವೀರ್ ನೌಕೆಯ ಒಂದೇ ಹೊಡೆತಕ್ಕೆ ಪಾಕ್‌ನ ತೈಲ ಸಂಗ್ರಹಾರವೇ ಧಗಧಗನೇ ಉರಿಯಿತು. ತನ್ನ ನೌಕೆಗಳಿಗೆ ತೈಲ ತುಂಬಲಾಗದೇ ಕೊನೆಗೆ ಪಾಕ್ ತಬ್ಬಿಬ್ಬಾಾಗಿ ಹೋಗಿತ್ತು. ಕರಾಚಿಯಲ್ಲಿ ನಮ್ಮ ನೌಕಾಸೇನೆ ಕೊಟ್ಟ ಈ ಆರಂಭಿಕ ಹೊಡೆತದಿಂದ ಪಾಕ್ ಚೇತರಿಕೆ ಕಾಣಲೇ ಇಲ್ಲ.
ಇದಾಗಿ ನಾಲ್ಕೇ ದಿನದಲ್ಲಿ ಆಪರೇಷನ್ ಪೈಥಾನ್ ಎಂಬ ಮತ್ತೊಂದು ತಂತ್ರದೊಂದಿಗೆ ಭಾರತೀಯ ನೌಕಾಪಡೆ ಪಾಕ್ ಮೇಲೆ ದಾಳಿಗೆ ಇಳಿದಿತ್ತು. ಐಎನ್‌ಎಸ್ ವಿನಾಶ್, ತಲ್ವಾರ್, ತ್ರಿಶೂಲ್ ಹೆಸರಿನ ಸಣ್ಣ ನೌಕೆಗಳು ಪಾಕ್ ನಿದ್ದೆ ಮಾಡದಂತೆ ಮಾಡಿಬಿಟ್ಟವು. ಪಾಕ್‌ನ ಕೇಮಾರಿ ಎಂಬಲ್ಲಿರುವ ತೈಲ ಸಂಗ್ರಹಗಾರವೂ ಕೂಡ ಭಾರತದ ದಾಳಿಗೆ ಧ್ವಂಸವಾಯಿತು. ಪಿಎನ್‌ಎಸ್ ಡಕ್ಕಾ ಎಂಬ ಹಡಗಿಗೆ ಮೈ ತುಂಬಾ ಪೆಟ್ಟಾಯಿತು. ಇಂಥದ್ದೊಂದು ದೊಡ್ಡ ನಷ್ಟವನ್ನು ಅಂದಾಜಿಸಿದ ಪಾಕ್, ಅಕ್ಷರಶಃ ಬಡವಾಗಿತ್ತು.

ಆದರೆ, ಭಾರತದ ಐಎನ್‌ಎಸ್ ಖುಕ್ರಿ ನೌಕೆಯು ಪಾಕ್ ದಾಳಿಯಿಂದಾಗಿ ಅರಬ್ಬೀ ಸಮುದ್ರದಲ್ಲಿ ಮುಳುಗಿತು. ಇದರಿಂದ 18 ಅಧಿಕಾರಿಗಳು, 176 ನಾವಿಕರು ಮೃತಪಟ್ಟಿದ್ದರು. ಇದೊಂದೇ ಅಂದು ಭಾರತಕ್ಕಾದ ಬಹುದೊಡ್ಡ ನಷ್ಟ. ಅಂದಿನ ಸೇನಾ ವೀರರ ಮಾತಿನಲ್ಲೇ ಹೇಳುವುದಾದರೆ, ಅಂದು ಪಾಕಿಸ್ತಾಾನ ನೈತಿಕ ಸ್ಥೈರ್ಯವೇ ಮುಳುಗಿ ಹೋಗಿತ್ತು. ಬಾಂಗ್ಲಾ ಹೋದರೆ ಹೋಗಲಿ ದೇಶವಾಗಿ ಭೂಪಟದಲ್ಲಿ ತಾವು ಉಳಿದರೆ ಸಾಕು ಎಂಬಷ್ಟರ ಮಟ್ಟಿಗೆ ಪಾಕ್ ಮಾನಸಿಕವಾಗಿ ಕುಸಿದು ಹೋಗಿತ್ತು.

ಸುಮಾರು 13 ದಿನ ನಡೆದ ಯುದ್ಧದಿಂದಾಗಿ ಪಾಕಿಸ್ತಾನವು ಅಪಾರ ಪ್ರಮಾಣದಲ್ಲಿ ತನ್ನ ನಾಗರಿಕರನ್ನು, ಸೈನಿಕರನ್ನು ಕಳೆದುಕೊಂಡಿತು. ಕೊನೆಗೆ ಡಿ.16ರಂದು ಪಾಕಿಸ್ತಾಾನದ ಸೇನೆಯ ಮುಖ್ಯಸ್ಥ ಜನರಲ್ ಅಮಿರ್ ಅಬ್ದುಲ್ಲಾ ಖಾನ್ ನಿಯಾಜಿ ನೇತೃತ್ವದಲ್ಲಿ 93 ಸಾವಿರ ಸೈನಿಕರ ಪಡೆಯು ಭಾರತೀಯ ಸೇನೆ-ಮುಕ್ತಿ ಬಾಹಿನಿ ಜಂಟಿ ಪಡೆಗೆ ಶರಣಾಯಿತು. ಆ ಪತ್ರಕ್ಕೆ ಢಾಕಾದ ರಾಮ್ನಾ ರೇಸ್ ಕೋರ್ಸ್‌ನಲ್ಲಿ ಪಾಕ್ ಸಹಿ ಹಾಕಿತು. ಪಾಕಿಸ್ತಾನದ ಸೈನಿಕರು ಮತ್ತು ಅವರ ಪರವಾಗಿದ್ದ ಪೂರ್ವ ಪಾಕಿಸ್ತಾಾನದ ನಾಗರಿಕರನ್ನು ಭಾರತ ಯುದ್ಧ ಕೈದಿಗಳನ್ನಾಗಿ ತನ್ನ ವಶಕ್ಕೆ ಪಡೆದಿತ್ತು. ಸುಮ್ಮನರದೇ ಯುದ್ಧೋನ್ಮಾದದಲ್ಲಿ ಯುದ್ಧಕ್ಕೆ ಬಂದ ಪಾಕ್, ಕೊನಗೆ ಭಾರತದ ಮುಂದೆ ಶರಣಾಗತಿ ಆದದ್ದು, ಬಾಂಗ್ಲಾ ವಿಮೋಚನೆ ಆದದ್ದೆಲ್ಲೂ ರೋಮಾಂಚನ ಹುಟ್ಟಿಸುವ ಕ್ಷಣಗಳು.

ಇಷ್ಟೆಲ್ಲ ವೀರಾವೇಶ ತೋರುವ ಭಾರತೀಯ ಸೇನೆ ಅಪಾಯ ಸಿಲುಕಿದವರ ಪ್ರಾಣ ರಕ್ಷಣೆಗೆ ಬಂದಾಗ ಸಹಾಯಕ್ಕೆ ಎಂದೂ ಹಿಂದೆ ಮುಂದೆ ನೋಡುವುದಿಲ್ಲ, 2015ರಲ್ಲಿ ಆಪರೇಷನ್ ರಾಹತ್ ಹೆಸರಿನಲ್ಲಿ ಯಮನ್‌ನಲ್ಲಿ ಉಂಟಾದ ಬಿಕ್ಕಟ್ಟಿನ ವೇಳೆ ಭಾರತೀಯ ನೌಕಾ ಪಡೆ ತನ್ನ ಸಹಾಯ ಹಸ್ತ ಚಾಚಿತ್ತು. 41 ದೇಶಗಳ ಒಟ್ಟು ಮೂರು ಸಾವಿರಕ್ಕೂ ಹೆಚ್ಚಿನ ನಾಗರಿಕರಿಗೆ ನಮ್ಮ ಸೈನ್ಯ ಮರುಜನ್ಮ ಕೊಟ್ಟತ್ತು. ಕರೋನಾ ಸಂಕಷ್ಟದ ಸಮಯದಲ್ಲೂ ಕೂಡ ಜಗತ್ತಿನ ನಾನಾ ರಾಷ್ಟ್ರಗಳಲ್ಲಿದ್ದ ನಾಗರಿಕರನ್ನು ರಕ್ಷಿಸಿ ತರುವ ಹೊಣೆಯನ್ನೂ ಸೇನೆ ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆಗೆ ಪಾತ್ರವಾಗಿತ್ತು.

75ನೇ ಸ್ವಾತಂತ್ರ್ಯ ದಿನದ ಸಂಭ್ರಮ ಮುಂದಿದೆ, ಬ್ರಿಟನ್‌ನಿಂದ ಖರೀದಿಸಿದ ನಂತರ ಐಎನ್‌ಎಸ್ ವಿಕ್ರಾಂತ್ ಹೆಸರಿನಲ್ಲಿ ಸೇವೆ ಸಲ್ಲಿಸಿದ್ದ ವಿಮಾನ ನೌಕೆಯನ್ನು ಗುಜರಾತ್‌ನಲ್ಲಿ ಗುಜರಿ ಎಂದು ಒಡೆಯಲಾಗುತ್ತಿದೆ. ಇನ್ನೊಂದೆಡೆ ಇದೇ ಹೆಸರಿನಲ್ಲಿ ಹೊಸ ರೂಪದಲ್ಲಿ ಭಾರತದಲ್ಲೇ ಜನ್ಮ ತಾಳಿದ ಐಎನ್‌ಎಸ್ ವಿಕ್ರಾಂತ್ ತನ್ನ ಮೊದಲ ಯಾನ ಯಶಸ್ವಿಯಾಗಿ ಪೂರೈಸಿದೆ. ನಮ್ಮನ್ನೆಲ್ಲ ಕಾಯುತ್ತಿರುವ ಇಂಥ ಸಮರ ನೌಕೆಗಳು ಮತ್ತು ಸಮರ ವೀರರಿಗೆ ಕೃತಜ್ಞತೆ ಹೇಳೋಣ.

Leave a Reply

Your email address will not be published. Required fields are marked *

error: Content is protected !!