Sunday, 15th December 2024

ರಾಜಕಾರಣಿಗಳು ನೈತಿಕತೆ ಮರೆಯುತ್ತಿದ್ದಾರೆಯೇ ?

ಅಭಿಮತ

ಪ್ರವೀಣ ವಿವೇಕ

ಈ ದೇಶದ ಇತಿಹಾಸವನ್ನು ಒಮ್ಮೆ ಇಣುಕಿ ನೋಡಿದಾಗ ರಾಜ್ಯಕ್ಕಾಗಿ, ರಾಷ್ಟ್ರಕ್ಕಾಗಿ ಸರ್ವವನ್ನು ತ್ಯಾಗ ಮಾಡಿರುವ ಅನೇಕ ಮಹಾನ್ ನಾಯಕರ ಪಟ್ಟಿಯೇ ಸಿಗುತ್ತದೆ.

ಆದರೆ ಈಗಿನ ರಾಜಕಾರಣಿಗಳು ಯಾವ ತ್ಯಾಗಕ್ಕೂ ಸಿದ್ಧವಿಲ್ಲ. ಅಧಿಕಾರದ ಅವಧಿಯಲ್ಲಿ ಸಿಕ್ಕಷ್ಟು ಬಾಚಿಕೊಳ್ಳುವ, ಅಧಿಕಾರದಲ್ಲಿದ್ದಾಗ ಎಲ್ಲವನ್ನು ಅನುಭವಿಸುವ ತವಕದಲ್ಲಿದ್ದಾರೆ. ಇನ್ನೂ ಕೆಲವರು ನಾವು ಒಂದು ಕ್ಷೇತ್ರವನ್ನು ಪ್ರತಿನಿಧಿಸುವ ನಾಯಕರು ಎಂಬ ಪರಿವೇಯಿಲ್ಲದೆ ವರ್ತಿಸುತ್ತಿದ್ದಾರೆ.

ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಹಣ, ಹೆಂಡದ ಆಮಿಷಗಳಿಗೆ ಒಳಗಾಗದೇ ಸಮರ್ಥ ರಾಜಕೀಯ ನೇತಾರರನ್ನು ಆಯ್ಕೆ ಮಾಡಿಕೊಳ್ಳುವ ಸುವರ್ಣ ಅವಕಾಶವನ್ನು ನೀಡಿದೆ. ಆದರೆ ಜನರಿಂದ ಆಯ್ಕೆಯಾದ ವ್ಯಕ್ತಿಗಳು ಸಮಾಜದ ಮೌಲ್ಯಗಳನ್ನಿರಿಸಿಕೊಂಡು ಸಂವಿಧಾನದ ಆಶಯಕ್ಕೆ ಧಕ್ಕೆಯಾಗದೇ ಇರಬೇಕೆಂಬ ಚಿಂತನೆಯನ್ನು ಕಾಲಾನಂತರದಲ್ಲಿ ಮರೆಯುತ್ತಿದ್ದಾರೆ.

ಚಿಂತಕರ ಚಾವಡಿ, ಹಿರಿಯರ ಮನೆ ಎಂಬ ಅಂಕಿತನಾಮದಿಂದ ಗುರುತಿಸಿಕೊಂಡಿರುವ ಜತೆಗೆ ಹಿರಿಯರಿಂದಲೇ ತುಂಬಿ ಕೊಂಡಿರುವ ವಿಧಾನ ಪರಿಷತ್‌ನಲ್ಲಿ ಕೆಲವು ತಿಂಗಳ ಹಿಂದೆ ಉಪಸಭಾಪತಿಯನ್ನು ಎಳದಾಡಿದ್ದು, ಸದಸ್ಯರೇ ಕೈ ಕೈ ಮಿಲಾಯಿಸವ ಮಟ್ಟಕ್ಕೆ ವರ್ತನೆ ತೋರಿದ್ದು ನಿಜಕ್ಕೂ ಅಸಹ್ಯಕರವಾಗಿತ್ತು. ಈ ಘಟನೆ ಮಾಸುವ ಮುನ್ನವೇ, ರಾಜ್ಯ ರಾಜಕಾರಣ ಸೀಡಿ ಮೂಲಕ ಸುದ್ದಿಯಾಗಿದೆ. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ಆಡಳಿತ ಚುಕ್ಕಾಣಿ ಹಿಡಿಯಲು ಕಾರಣಿಕರ್ತರಾಗಿದ್ದ, ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆಯ ಸೀಡಿ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಸೀಡಿ ಬಹಿರಂಗಗೊಂಡ ಮಾರನೇ ದಿನವೇ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ.

ಈಗೇನಿದ್ದರೂ ಅದು ಕಾನೂನಿನ ಚೌಕಟ್ಟಿನಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಎಂಬುದು ನಿರ್ಧಾರವಾಗಬೇಕಿದೆ. ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಆ ಪ್ರತಿಭಟನೆ ಕಾನೂನಿನ ಚೌಕಟ್ಟಿನ್ನು ಮೀರದೆ, ನೈತಿಕ ಮೌಲ್ಯಗಳಿಗೆ ಧಕ್ಕೆ ತರದ ರೀತಿಯಲ್ಲಿ ಇರಬೇಕು. ವಿಧಾನಸೌಧವನ್ನು ದೇವರ ಮನೆಯೆಂದೆ ಹೇಳಲಾಗುತ್ತದೆ. ಆ ದೇವಸ್ಥಾನದಲ್ಲಿ ಅಂಗಿಯನ್ನು ಬಿಚ್ಚಿ ನನಗೆ ಅನ್ಯಾಯವಾಗುತ್ತಿದೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ? ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ ಎನ್ನುವುದಾದರೆ ಅದನ್ನು ಸರಿಯಾದ ರೀತಿಯಲ್ಲಿ ಕುಳಿತು ಮಾತನಾಡಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಕ್ಷೇತ್ರಕ್ಕೆ ಬರಬೇಕಾಗಿರುವ ಅನುದಾನವನ್ನು ಪಡೆದುಕೊಳ್ಳಬೇಕು.

ಅದನ್ನು ಬಿಟ್ಟು ರಾಜ್ಯದ ಜನರೇ ಕಣ್ತೆರೆದು ವೀಕ್ಷಿಸುತ್ತಿರುವ ಕಲಾಪದಲ್ಲಿ ಈ ರೀತಿ ಅಸಹ್ಯಕರವಾಗಿ ನಡೆದುಕೊಂಡರೆ ಇದು ರಾಜಕಾರಣಿಗಳಿಗೆ ಶೋಭೆ ತರುತ್ತದೆಯೇ? ಇವೆಲ್ಲವೂ ಒಂದು ಬದಿಯಾದರೆ, ಮತ್ತೊಂದು ಕಡೆಯಿಂದ ವಿಚಾರ ಮಾಡಿದಾಗ ನಮ್ಮನ್ನು ಆಳಲು ನಾವು ಇವರನ್ನು ಆಯ್ಕೆ ಮಾಡಿದೇವಾ? ಎಂಬ ಪ್ರಶ್ನೆ ಎದುರಾಗುತ್ತದೆ. ರಾಜಕಾರಣಿಯಾದವರು ಕೇವಲ ಅಧಿಕಾರದ ಅಮಲಿನಲ್ಲಿ ತೆಲಬಾರದು, ಓರ್ವ ನಾಯಕನಿಗೆ ಸರಿಯಾದ ನೈತಿಕ, ಸಾಮಾಜಿಕ, ಅಧ್ಯಾತ್ಮಿಕ ಜ್ಞಾನದ ಅರಿವು ತುಂಬಾ ಅವಶಕವಾದದ್ದು.

ಯಾವುದೇ ಪಕ್ಷವಾಗಿರಲಿ, ಯಾವುದೇ ಸಿದ್ದಾಂತವಾಗಿರಲಿ, ಯಾವುದೇ ತತ್ತ್ವವನ್ನು ಹೊಂದಿರುವ ವ್ಯಕ್ತಿ ಸಮಾಜದಲ್ಲಿ ಬೆಳೆದು ನಿಂತಾಗ ಆ ವ್ಯಕ್ತಿಯನ್ನು ಹಲವಾರು ಜನರು ಅನುಸರಿಸುತ್ತಿದ್ದಾರೆ ಎಂಬ ಕನಿಷ್ಠ ಜ್ಞಾನ ಇರಬೇಕು. ಒಬ್ಬ ವ್ಯಕ್ತಿ ರಾಜಕಾರಣಿ ಭ್ರಷ್ಟಾಚಾರದಲ್ಲಿ ತೊಡಗಿ, ಮತ್ತೊಬ್ಬರ ಶ್ರಮದಿಂದ ಬಂದ ಹಣವನ್ನು ಆಕ್ರಮವಾಗಿ ಗಳಿಸಿ, ಒಂದು ಶಾಲೆಯ ಕಾರ್ಯಕ್ರದಲ್ಲಿ
ಅತಿಥಿಯಾಗಿ ಭಾಗವಹಿಸಿ ನೈತಿಕತೆಯ ಕುರಿತು ಭಾಷಣ ಮಾಡಲು ಆರಂಭಿಸಿದರೆ ಏನಾಗಬಹುದು ವಿಚಾರ ಮಾಡಿ. ಆ ಕಾರ್ಯಕ್ರಮದಲ್ಲಿರುವ ಯಾವುದಾದರೂ ವಿದ್ಯಾರ್ಥಿ ನೀವೆ ಭ್ರಷ್ಟಾಚಾರದಂಥ ಹೇಯ ಕೃತ್ಯದಲ್ಲಿ ತೊಡಗಿದ್ದೀರಿ ಮೊದಲು ನೀವು ಸರಿಯಾಗಿ ಎಂದು ಹೇಳಿ ಬಿಟ್ಟರೆ ಆ ಅತಿಥಿಯ ಕಥೆ ಏನಾಗಬಹುದು ಊಹಿಸಿಕೊಳ್ಳಿ.

ಈ ದೇಶದಲ್ಲಿ ತಮಗಿಷ್ಟವಾದ ಆಸೆಗಳನ್ನು ಈಡೇರಿಸಿಕೊಳ್ಳಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ಆದರೆ ಅದು ತನ್ನದೆಯಾದ ಚೌಕಟ್ಟಿನಲ್ಲಿ ಇರಬೇಕು. ಸಾರ್ವಜನಿಕ ಜೀವನದಲ್ಲಿ ಇರುವವರು ಆಗಿರಲಿ ನೈತಿಕ ಮೌಲ್ಯಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಕಚ್ಚೆ ಬಾಯಿ ಹಾಗೂ ಕೈ ಹೆಚ್ಚು ಶುದ್ಧವಾಗಿರದಿದ್ದರೆ ಸಾರ್ವಜನಿಕ ಜೀವನದಿಂದ ದೂರ ಇರಬೇಕು.