ಸುಪ್ತ ಸಾಗರ
ರಾಧಾಕೃಷ್ಣ ಎಸ್.ಭಡ್ತಿ
rkbhadti@gmail.com
ತುಂಬಿ ಹರಿಯುವ ನದಿಯ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎಂದು ನಾವು ಮೊದಲಿನಿಂದಲೂ ಲೊಚಗುಟ್ಟುತ್ತ ಬರುತ್ತಿದ್ದೇವೆ. ಇಂಥ ಗೊಣಗಾಟದ ಪರಿಣಾಮವೇ ನದಿ ಜೋಡಣೆಗೆ ನಾವು ಹಾಡಿರುವ ನಾಂದಿ. ಪ್ರಕೃತಿ ವ್ಯಾಪಾರದಲ್ಲಿನ ಇಂಥ ಅಪವ್ಯಯಗಳ ಹಿಂದೆ ವ್ಯವಸ್ಥಿತ, ನಿಖರ, ವೈಜ್ಞಾನಿಕ ಉದ್ದೇಶ ಸಾಧನೆಯ ಗುರಿಯಿದೆ ಎಂಬುದು ಗಣನೆಗೆ ಬಾರದಿರುವುದು ದುರಂತ.
ಅದೇನು ಮದುವೆಗೆ ಕೆಟ್ಟು ಹೋಯಿತೇ? ಯಾವುದೋ ಊರಿನ ಯಾರದೋ ಮನೆಯ ಹುಡುಗಿ, ಇನ್ಯಾರದ್ದೋ ಮನೆಯ ಹುಡುಗನನ್ನು ಮದುವೆ ಮಾಡಿ, ಇಬ್ಬರೂ ಹೊಂದಿಕೊಂಡು ಸಂಸಾರ ಮಾಡಿಕೊಂಡುಹೋಗಿ ಎನ್ನಲು! ಹಾಗೊಮ್ಮೆ ಮದುವೆ ಮಾಡುವಾಗಲೂ ನಮಗೆ ಗೊತ್ತಿರುವ, ನಮ್ಮದೇ ಜಾತಿಯ, ನಮ್ಮದೇ ಸಂಸ್ಕೃತಿಯ, ನಮ್ಮ ಭಾಷೆಯ ಹುಡುಗ-ಹುಡುಗಿಯನ್ನೇ ಹುಡುಕುತ್ತೇವೆ. ಅಂಥದ್ದರಲ್ಲಿ ಎಲ್ಲೋ ಹುಟ್ಟಿ, ಇನ್ನೆಲ್ಲೋ ಹರಿದು, ಮತ್ತೆಲ್ಲೋ ಸಮುದ್ರ ಸೇರುವ ನದಿಗಳನ್ನು ಒಟ್ಟಿಗೇ ಕೂಡಿಕೊಂಡು ಹರಿಯಿರಿ ಎಂದರೆ? ಇಂಥಾ ಪರಿ ಕಾಡುಗಳನ್ನು ಸೀಳುವ, ನದಿಗಳ ಪಾತ್ರ ಬರಿದಾಗಿ ಸುವ, ಮನೆಯ ನಲ್ಲಿಯ ಪೈಪ್ ಬಗ್ಗಿಸಿ, ತಿರುಗಿಸಿ ದಂತೆ ನೀರ ಅಭಿವೃದ್ಧಿ ನಮಗೆ ಬೇಕೆ? ನದಿ ಜೋಡಣೆಯ ಪರಿಕಲ್ಪನೆಗೆ ಸರಿ ಸುಮಾರು ಒಂದೂವರೆ ಶತಮಾ ನದ ಇತಿಹಾಸವೇ ಇದೆ.
ದೇಶದ ಉತ್ತರವನ್ನು ಪೊರೆಯುತ್ತಿರುವ ಗಂಗೆಯನ್ನು ದಕ್ಷಿಣಾಭಿಮುಖಗೊಳಿಸಿ, ಇತರ ರಾಜ್ಯಗಳನ್ನೂ ಪಾವನ ಗೊಳಿಸುವ ವಿಚಾರ ಮುನ್ನೆಲೆಗೆ ಬರುವುದು, ವಿರೋಧ ವ್ಯಕ್ತವಾಗುವುದು ನಡೆಯುತ್ತಲೇ ಬಂದಿದೆ. ಗಂಗಾ ನದಿಯ ನೀರನ್ನು ದಕ್ಷಿಣದತ್ತ ಹರಿಸಬೇಕೆಂಬ ವಿಚಾರಕ್ಕೆ ಬಿಹಾರ್ ಮತ್ತು ಪಶ್ಚಿಮ ಬಂಗಾಳಗಳು ಯಾವಾಗ ಲಿಂದಲೂ ವಿರೋಧಿಸುತ್ತಲೇ ಬರುತ್ತಿವೆ. ಇನ್ನೂ ಹೇಳ ಹೊರಟರೆ ಗಂಗಾ ನದಿಯ ನೀರಿಗೆ ನೇಪಾಳ ಹಾಗೂ ಬಾಂಗ್ಲಾ ದೇಶಗಳೂ ಬೇಡಿಕೆ ಇಟ್ಟಿವೆ. ಮುಂದೊಮ್ಮೆ ಆ ಕೂಗೂ ಹೆಚ್ಚಾಗಬಹುದು. ಒಂದೊಮ್ಮೆ ಅದನ್ನೂ ಪರಿಗಣಿಸಿ ನದಿ ಜೋಡಣೆ ಯೋಜನೆ ಆಕಾರ ತಳೆದರೆ, ಅಂತಾರಾಜ್ಯ ಮಾತ್ರವೇ ಅಲ್ಲ, ಅಂತರ್ ದೇಶೀಯ ನೀರು ಹಂಚಿಕೆ ವಿವಾದಗಳು ತಲೆ ಎತ್ತುವು ದರಲ್ಲೂ ಅನುಮಾನವಿಲ್ಲ.
ಇರಲಿ, ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕ ಹೊರಟರೆ, ೧೯ನೇ ಶತಮಾನದ ಮಧ್ಯ ಭಾಗದಲ್ಲಿ ರೂಪುಗೊಂಡದ್ದು ಸರ್ ಆರ್ಥರ್ ಕಾಟನ್ ಯೋಜನೆ. ಅದು ೧೮೫೮ರಲ್ಲಿ. ಆಗಿನ್ನೂ ಸ್ವಾತಂತ್ರ್ಯ ಸಿಕ್ಕಿರಲಿಲ್ಲ ಬಿಡಿ. ಹೀಗಾಗಿ ದೇಶದ ಬಹುಮುಖ್ಯ ನಿರ್ಧಾರಗಳು, ಅದರ ಅನುಷ್ಠಾನಗಳು ಬ್ರಿಟಿಷರ ಕೈಯಲ್ಲೇ ಇದ್ದವು. ಸಹಜವಾಗಿ ಬ್ರಿಟಿಷ್ ಎಂಜಿನಿಯರ್ ಸರ್ ಆರ್ಥರ್ ಕಾಟನ್ ಭಾರತಕ್ಕೆ ಬಂದು ಇಲ್ಲಿ ತನ್ನ ಪ್ರೌಢಿಮೆ ಮೆರೆಯಲು ಹವಣಿಸಿದ. ಕಂಪನಿ ಸರಕಾರ ಅದಕ್ಕೆ ‘ನೀರೆರೆಯಿತು’. ಎಂಬಲ್ಲಿಗೆ ಕೃಷ್ಣಾ ಹಾಗೂ ಗೋದಾವರಿ ನದಿಗಳಿಗೆ ಅಣೆಕಟ್ಟುಗಳು ಸಿದ್ಧಗೊಂಡಿದ್ದವು. ಆದರೂ ಭಾರತದ ನದಿಗಳು ಮೈದುಂಬಿ ಹರಿಯು ತ್ತಿದ್ದುದು ಆತನ ಕಣ್ಣು ಕುಕ್ಕಿರಬೇಕು. ಉಕ್ಕಿ ಹರಿಯುತ್ತಿದ್ದ ನದಿಗಳನ್ನು ಕೆಳಗಿನ ಕೃಷ ನದಿಗಳೊಡನೆ ಬೆಸೆದುಬಿಡ ಬಾರದೇಕೆ? ಯೋಚಿಸಿದ.
ಮಾತ್ರವಲ್ಲ, ಅದನ್ನು ಪ್ರಸ್ತಾಪಿಸಿಯೂಬಿಟ್ಟ. ಹಾಗೆಂದು ಆತ ಸಾಮಾನ್ಯನೇನೂ ಅಲ್ಲ. ಇಂಗ್ಲೆಂಡ್ ಹಾಗೂ ಯುರೋಪ್‌ಗಳಲ್ಲಿ ಹಲವಾರು ನದಿ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಆ ಮೂಲಕವೇ ‘ಸರ್’ ಅಬಿಧಾನಕ್ಕೆ ಪಾತ್ರನಾಗಿದ್ದವ. ಆದರೆ ಆತನ ಅನುಭವಗಳೇನಿದ್ದರೂ ಪಾಶ್ಚಿಮಾತ್ಯ ನದಿಗಳ ಜತೆಗಿನದ್ದು. ಗುಣ, ಸಂಸ್ಕೃತಿಗಳಿಂದಲೂ ಆತನ ಅನುಭವ ಪಾಶ್ಚಿಮಾತ್ಯವೇ. ನಮ್ಮ ನದಿಗಳೋ, ಮಳೆಗಾಲದಲ್ಲಿ ಉಕ್ಕಿ ಹರಿಯುವಂಥದ್ದು, ಬೇಸಿಗೆಯಲ್ಲಿ? ಬೇಸಿಗೆಯಲ್ಲೂ ಹಿಮಾಲಯದ ತಪ್ಪಲಿನ ನದಿಗಳು ಬಿಸಿಲ ಬಿಸಿಗೆ ಹಿಮಕರಗಿಸಿಕೊಂಡು ಒಡಲು ತುಂಬಿಸಿಕೊಳ್ಳುವಂಥದ್ದು.
ಹೇಗೇ ನೋಡಿದರೂ ಭಾರತೀಯ ನದಿಗಳ ಗುಣವೇ ಬೇರೆ. ಇಲ್ಲಿ ಸೊರಗುತ್ತವೆ. ಮತ್ತೆ ಮೈದುಂಬುತ್ತವೆ. ಕರುಗುತ್ತವೆ, ಕಾಣೆಯಾಗುತ್ತವೆ. ಮತ್ತೆಲ್ಲೋ ಉಕ್ಕುತ್ತವೆ; ಸೊಕ್ಕುತ್ತವೆ. ಅಲ್ಲಿನ, ಅಂದರೆ ಯೂರೋಪ್‌ನ ನದಿಗಳಲ್ಲಿನ ಸ್ಥಿತಪ್ರಜ್ಞತೆ ನಮ್ಮ ನದಿಗಳಲ್ಲಿಲ್ಲ; ನಮ್ಮಂತೆಯೇ! ಹೀಗೆ ಇಡೀ ವರ್ಷಾವಧಿ ಉಬ್ಬರವಿಳಿತಗಳಲ್ಲೇ ಕಳೆಯುವ ಭಾರತೀಯ ನದಿಗಳನ್ನು ಯೂರೋಪ್ ರಾಷ್ಟ್ರಗಳಲ್ಲಿನ ಅಧ್ಯಯನ, ಅನುಭವದ ಆಧಾರದಲ್ಲಿ ಬೆಸೆದುಬಿಡಬೇಕೆಂದು ಹೇಳಿದ್ದ.
ಭಾರತದ ನದಿಗಳ ಹರಿವಿನಲ್ಲಿ ವರ್ಷದ ಬಹುತೇಕ ತಿಂಗಳುಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಮಾತ್ರವಲ್ಲ ಇದು ನದಿಯಿಂದ ನದಿಗೆ ಭಿನ್ನ ವಾಗಿರುತ್ತದೆ. ಪ್ರತಿಯೊಂದು ನದಿಗೂ ಅದರದೇ ಆದ ಪ್ರತ್ಯೇಕ ವ್ಯಕ್ತಿತ್ವವಿದೆ. ದೇವನದಿಯೆಂದು ಆರಾಧಿಸುವ ಗಂಗೆಯದ್ದೇ ಉದಾಹರಣೆಯನ್ನು ತೆಗೆದುಕೊಂಡರೆ ಮೂರು ಪ್ರಮುಖ ನದಿಗಳ ಸ್ರೋತ ಸೇರಿ ದೇವ ಪ್ರಯಾಗದಿಂದ ಮುಂದೆ ಗಂಗೆಯಾಗುತ್ತದೆ. ಅಲ್ಲಿಂದ ನಂತರ ಗಂಗೆಯ ಸ್ವಭಾವವೇ ರೆ.
ಅಲ್ಲಿಯವರೆಗೆ ಮಂದಾಕಿನಿ ಹೆಸರಿಗೆ ತಕ್ಕಂತೆ ಅತ್ಯಂತ ನಿರ್ಮಲವಾದ ಹರಿವನ್ನು ತೋರುತ್ತದೆ. ಹಾಗೆಯೇ ಭಾಗೀರಥಿಯದ್ದು ಗಾಂಭೀರ್ಯ. ಅಲಕಾನಂದೆ ಹರೆಯದ ಹುಡುಗಿಯ ಹುಚ್ಚುಕೋಡಿ ಮನಸು.
ಹೀಗೆ ಪ್ರತಿ ನದಿಗಳೂ ಶೇ.80ರಷ್ಟು ಏರಿಳಿತವನ್ನು ಇಡೀ ವರ್ಷದುದ್ದಕ್ಕೂ ಪ್ರದರ್ಶಿಸುತ್ತವೆ. ಅದರಲ್ಲೂ ಈ ವರ್ಷ ಮುಂಗಾರಿನಲ್ಲಿ ಇರವಂತೆ ಮುಂದಿನ ವರ್ಷ ಇರುವುದಿಲ್ಲ ನದಿಯ ಹರಿವು. ಆಯಾ ವರ್ಷಗಳಲ್ಲಿನ ಹವಾಮಾನಕ್ಕೆ ತಕ್ಕಂತೆ ನದಿಯೂ ವರ್ತಿಸುತ್ತವೆ. ಆದರೆ ಇಂಗ್ಲೆಂಡ್ ಸೇರಿದಂತೆ ಯೂರೋಪ್‌ನಲ್ಲಿ ಹುಟ್ಟಿ ಹರಿಯುವ ನದಿಗಳ ಹರಿವಲ್ಲಿ ಇಂಥ ಹೆಚ್ಚಿನ ಸ್ಥಿತ್ಯಂತರಗಳಿರುವುದಿಲ್ಲ. ಅಂದ ಮೇಲೆ ಆರ್ಥರ್ ಅನುಭವ ಇಲ್ಲಿ ಹೇಗೆ ಲೆಕ್ಕಕ್ಕೆ ಬಂದೀತು? ಅಲ್ಲಿಂದ ಇಲ್ಲಿಯವರೆಗೂ ನದಿ ಜೋಡಣೆಯ ಬಗೆಗೆ ಮಾತನಾಡುತ್ತ ಬಂದವರೆಲ್ಲರೂ ತಮ್ಮ ವಾದಕ್ಕೆ ಕೊಟ್ಟ ಏಕೈಕ ಪುಷ್ಟೀಕರಣ ಕೇವಲ ಹೆಚ್ಚುವರಿ ನೀರಿನ ಸಮರ್ಥ ಬಳಕೆ ಎಂಬುದನ್ನೇ ಹೊರತೂ, ನದಿಯ ಭೌತಿಕ ಅಥವಾ ಅಂತರಿಕ ಹರಿವಿನ ಗುಣಗಳನ್ನು ಪರಿಗಣನೆಗೆ
ಯಾರೊಬ್ಬರೂ ತೆಗೆದುಕೊಂಡಂತೆಯೇ ಇಲ್ಲ.
ಉಷ್ಣವಲಯದ ನದಿಗಳ ಕತೆಯೇ ಬೇರೆ, ಭಾರತದಂಥ ವೈವಿಧ್ಯಮಯ ಭೂ ಪ್ರದೇಶಗಳಲ್ಲಿ ಹುಟ್ಟಿ, ಇನ್ನೆಲ್ಲಿಗೋ ಹರಿವ ನದಿಗಳ ಗುಣ ಲಕ್ಷಣಗಳೇ ಬೇರೆ. ನೀರು ಮತ್ತು ಹರಿವುಗಳೆರಡೇ ನದಿ ಅಲ್ಲ. ಅದಕ್ಕಿಂತ ಭಿನ್ನವಾದ ಅದಷ್ಟೋ ಸಂಗತಿಗಳು ನದಿಯ ಹಿಂದೆ ಕೆಲಸ ಮಾಡುತ್ತಿರುತ್ತದೆ. ಬೇರೆಡೆಗಳಲ್ಲಿ ಹೆಚ್ಚು ನೀರಿನ ಹರಿವಿರುವ ನದಿ ಹಾಗೂ ಕಡಿಮೆ ನೀರಿನ ಹರಿವಿರುವ ನದಿ ಎಂಬ ಪ್ರಶ್ನೆಯೇ ಇಲ್ಲ. ಇಲ್ಲಿ ನದಿ ಎಂಬ ಪರಿಕಲ್ಪನೆಗೂ ಮುನ್ನವೇ ಕೆರೆ,
ತೊರೆ, ಹಳ್ಳ, ಕೊಳ್ಳಗಳೇನಕವು ನದಿಯ ಸ್ವಭಾವ, ಸ್ವರೂಪಗಳನ್ನು ನಿರ್ಧರಿಸುತ್ತವೆ. ಹಾಗಾಗಿಯೇ ನಮ್ಮಲ್ಲಿ ತುಸು ಮಳೆಗೂ ನದಿಯ ನೀರಿನ ಮಟ್ಟ ಹೆಚ್ಚುತ್ತದೆ. ಮಳೆ ಹೆಚ್ಚಾದರೆ ನದಿಗಳಲ್ಲಿ ಪ್ರವಾಹ ಉಕ್ಕುತ್ತದೆ.
ಅದೇ ಬೇಸಿಗೆಯಲ್ಲಿ ನದಿಗಳಲ್ಲಿ ನೀರೇ ಇಲ್ಲದೇ ಒಂದೆಡೆಯಿಂದ ಇನ್ನೊಂದೆಡೆಗೆ ನಡೆದುಕೊಂಡೇ ದಾಟಬಹುದಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ನಮಲ್ಲಿಗೆ ನದಿಜೋಡಣೆಗಳಿಗಿಂತಲೂ ಪುಟ್ಟ ಪುಟ್ಟ ಒಡ್ಡುಗಳು, ಕಟ್ಟೆಗಳಂಥವೇ ಉತ್ತಮ ಪರಿಹಾರವೆನಿಸುತ್ತದೆ. ಮಳೆನೀರು ಶೇಖರಣೆ ಯಂಥ ಮಾರ್ಗಗಳನ್ನು ಬಿಟ್ಟು ನಾವು ಇಂಥ ದೀರ್ಘಕಾಲೀನ, ಅತಿ ದುಬಾರಿ ವೆಚ್ಚದ ಯೋಜನೆಗಳನ್ನು ಪರಿಹಾರವೆಂದು ಭಾವಿಸುವುದೇಕೋ?
ನದಿ ಜೋಡಣೆ ಎಂದರೆ ಒಂದೆರಡು ಲಕ್ಷ, ಕೋಟಿಗಳಲ್ಲಿ ಆಗುವಂಥದ್ದೇ? ಈಗಾಗಲೇ ನಿಗದಿ ಪಡಿಸಿದ ಬಜೆಟ್ ಅನುದಾನ 44605 ಕೋಟಿ ರು. ಏನೊಂದಕ್ಕೂ ಸಾಲದು.
ಇದರ ಮೂರು ಪಟ್ಟು ಅನುದಾನ ಇದಕ್ಕೆ ಅಗತ್ಯ. ಇಂಥ ಬೃಹತ್ ಆರ್ಥಿಕ ಮೊತ್ತ ಬೇಡುವ ಯೋಜನೆಗೆ ಮುನ್ನ ಅದರ ಅನುಷ್ಠಾನದ ಬಳಿಕ ಆಗ ಬಹುದಾದ ಅವಾಂತರಗಳನ್ನೂ ಯೋಚಿಸಬೇಲ್ಲವೇ. ಯಾವುದೇ ನೈಸರ್ಗಿಕ ಸ್ತಿತ್ಯಂತರದ ಪರಿಣಾಮ ಅರಿವಿಗೆ ಬರಲು ಕನಿಷ್ಠ ಎರಡು ದಶಕಗಳು ಅಗತ್ಯ. ಆ ಇಪ್ಪತ್ತು ವರ್ಷಗಳಲ್ಲಿ ಏನಾಗಬಾರದೋ ಅದಾಗಿರುತ್ತದೆ. ಅದಕ್ಕೆ ಸಾಕ್ಷಿಗಳಿವೆ. ಯಾವ ದೇಶಗಳನ್ನು ನಂಬಿ, ನೋಡಿ ನಾವು ಇಮದು
ನದಿ ಗಳನ್ನು ಬೆಸೆಯಲು ಹೊರಟಿದ್ದೇವೆಯೋ ಅಲ್ಲೆಲ್ಲ ಶತಮಾನದ ಹಿಂದೆಯೇ ಎಸಗಿದ ಇಂಥ ಪಾಪಕ್ಕೆ ಇಂದು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿರುವುದು ಕಾಣಿಸುತ್ತಿಲ್ಲವೇ? ಅಮೆರಿಕ, ಕೆನಡಾ, ಫ್ರಾನ್ಸ್, ಬ್ರಿಟನ್, ಜರ್ಮನಿ, ಡೆನ್ಮಾರ್ಕ್ ಕೊನೆಗೆ ರಷ್ಯಾ ಹಾಗೂ ಚೀನಾಗಳಲ್ಲೂ ನದಿ ತಿರುವಿಗಾಗಿ ಕಟ್ಟಿದ ಅಣೆಕಟ್ಟೆಗಳನ್ನೆಲ್ಲ ಒಡೆದು ಹಾಕುವ ‘ಘನಕಾರ‍್ಯ’ ಇದೀಗ ನಡೆಯುತ್ತಿದೆ.
ಅದಕ್ಕವರು ‘ರಿವರ್ ರಿವೈವಲ್’ (ನದಿಗಳ ಪುನಶ್ಚೇತನ) ಎಂಬ ಹೆಸರನ್ನು ಕೊಟ್ಟಿದ್ದಾರೆ. ಒಂದಲ್ಲ, ಎರಡಲ್ಲ. ಬರೋಬ್ಬರಿ ಐವತ್ತಕ್ಕೂ ಹೆಚ್ಚು ಇಂಥ ದುಸ್ಸಾಹಸದ ಇತಿಹಾಸ ಇಂದು ನಮ್ಮೆದುರೇ ಸಿಗುತ್ತಿರುವಾಗಲೇ ನಾಡಿನ ಜೀವನದಿಗಳನ್ನು ಇತಿಹಾಸವಾಗಿಸುವ ‘ಐತಿಹಾಸಿಕ’ ಯೋಜನೆಗೆ ನಾವು ಅಡಿ ಇಡುತ್ತಿದ್ದೇವೆ. ನದಿಯ ನೀರು ಸಮುದ್ರ ಸೇರುವ ಕುರಿತು ‘ಅಪ್ಪನ ಗಂಟು’ ಖರ್ಚಾಗುತ್ತಿರುವಂತೆ ಮಾತನಾಡುವ ಅಭಿವೃದ್ಧಿ ಪರರು ಸ್ವಲ್ಪ ಕತ್ತೆತ್ತಿ ರಷ್ಯಾದ ಕಡೆ ನೋಡಿದರೊಳಿತು.
‘ಅರಲ್ ಸಮುದ್ರ’ ವಿಶ್ವ ಭೂ ಪಟದಲ್ಲಿ ಎದ್ದು ಕಾಣುವ ಹೆಸರು. ಜಗತ್ತಿನ ನಾಲ್ಕನೇ ಬೃಹತ್ ಜಲನಿಧಿಯೆಂಬ ಖ್ಯಾತಿಯ ಅರಲ್ ಇನ್ನಿಲ್ಲದಂತೆ ಆರಲಾರಂಭಿಸಿದಾಗಲೇ ರಷ್ಯನ್ನರಿಗೆ ತಮ್ಮ ‘ಘನಾಂದಾರಿ’ ತಪ್ಪಿನ ಅರಿವಾಗಲಾರಂಭಿಸಿದ್ದು. ಭತ್ತದ ಕಣಜ ತುಂಬಿಸಿಕೊಳ್ಳುವ ಕನಸು ಕಂಡ ರಷ್ಯನ್ನರ ಕಣ್ಣಿಗೆ ಬಿದ್ದದ್ದು ಅಮು ದರಿಯಾ ಹಾಗೂ ಸಿರ್ ದರಿಯಾ ಎಂಬ ನದಿಗಳು. ಮೂವತ್ತು ಮೂವತ್ತೈದು ವರ್ಷ ಎಡೆ ಬಿಡದೇ ‘ದರಿಯಾದ್ವಯ’ ದಿಂದ ನೀರು ತಿರುಗಿಸಿಕೊಂಡು ಮೊಗೆ ಮೊಗೆದು ಬಳಸಿದರು. ಬಂಪರ್ ಬೆಳೆಯೇನೋ ದಕ್ಕಿತ್ತು. ಆದರೆ ಅದೊಂದು ದಿನ, ದರಿಯಾಗಳು ಹೋಗಿ ಸೇರುತ್ತಿದ್ದ ಅರಲ್ ಸಮುದ್ರವೇ ಆಕಳಿಸತೊಡಗಿತು.
ವಿಶಾಲ ಜಲರಾಶಿ ಕೃಶವಾಯಿತು. ಆಳ, ಅಗಲದಲ್ಲಿ ಮೂರರಲ್ಲೆರಡು ಭಾಗ ಕಾಣೆಯಾಗಿತ್ತು. ಮುಯಾರಿಕ್ ಬಂದರಿನಲ್ಲಿ ನೀರಿಗೆ ಹಾಹಾಕಾರ. ಸರಿ ಸುಮಾರು ಅಲ್ಲಿಂದ 40 ಕಿ.ಮೀ.ನವರೆಗೆ ಸಮುದ್ರವೇ ಬತ್ತಿ ಹೋಗಿತ್ತು ಎಂದರೆ ಭೀಕರತೆ ಅರಿವಾಗಬಹುದು. ನೆಲದ ಮೇಲೆ ಹಡಗುಗಳ ಅವಶೇಷಗಳು ರಾಶಿ ಬಿದ್ದವು. ಅರವತ್ತೆಪ್ಪತ್ತು ಸಾವಿರ ಮೀನುಗಾರರು ಗಬರೆದ್ದು ಹೋದರು. ಇದಕ್ಕಿಂತ ಭೀಕರವೆಂದರೆ ಸಮುದ್ರದಂಗಳದ ಮೇಲಿಂದ ಬೀಸಿ ಬಂದ ನಂಜುಗಾಳಿ ಇಡೀ ಪರಿಸರವನ್ನೇ ನರಕವಾಗಿಸಿದ್ದು ತೀರಾ ಹಿಂದಿನ ಸಂಗತಿಯೇನಲ್ಲ.
ಪ್ರಗತಿ, ಅಭಿವೃದ್ಧಿಯ ಹೆಸರಿನ ಅವೈಜ್ಞಾನಿಕ ಆತುರಗಳಿಂದ ಮುಂದೊಂದು ದಿನ ಮುನಿಸಿಕೊಳ್ಳುವ ಪೆನ್ನಾರ್ ಕಾವೇರಿಯರೂ ಖಂಡಿತಾ ಇನ್ನೊಂದು ‘ಅರಲ್ ಸಿ ಟ್ರ್ಯಾಜಿಡಿ’ಯನ್ನು ಸೃಷ್ಟಿಸದೇ ಬಿಡವು. ಆಸೆಗೆ ಬಿದ್ದು ‘ಆತ್ಮಹತ್ಯೆ’ ಮಾಡಿಕೊಳ್ಳುವ ಮುನ್ನ ನಮಗೆ ಇದು ಅರ್ಥವಾಗಬೇಕು. ಸರಿ ಸುಮಾರು ೬೦೦ ಅಡಿ ಎತ್ತರ, ಒಂದು ಮೈಲಿಗೂ ಹೆಚ್ಚು ಉದ್ದದ ತ್ರಿಗೋರ್ಜೆಸ್‌ಗಾಗಿ 25 ಶತಕೋಟಿ ಡಾಲರ್‌ಗಳ ವೆಚ್ಚ ಮಾಡಿ 400 ಮೈಲು ವಿಸ್ತೀರ್ಣದ
ಅಗಾಧ ಜಲರಾಶಿಯನ್ನುಸೃಷ್ಟಿಸಿದ್ದ ಚೀನಾ ‘ಯಾಂಗ್ ತ್ಸೆ’ ಎಂಬ ನದಿಯನ್ನು ತಿರುಗಿಸಿಕೊಂಡು ಬಂದಿತ್ತು. ಆದರೆ ಈ ಯೋಜನೆ ಉದ್ಘಾಟನೆಯ ದಿನವೇ ಹಳ್ಳ ಹಿಡಿದದ್ದು ಇಡೀ ಜಗತ್ತಿಗೇ ಗೊತ್ತಿದೆ.
ಅದು ಒತ್ತೊಟ್ಟಿಗಿರಲಿ. ಇಸ್ತಮಸ್ ಯೋಜನೆಯ ಬಗ್ಗೆ ಕೇಳಿರಬಹುದು. ಪನಾಮಾ ಕಾಲುವೆಗೆ ಇರುವ ‘ಲಾಕ್’ ವ್ಯವಸ್ಥೆಯನ್ನು ತೆಗೆದು ಹಾಕಿ ಎರಡು ಸಮುದ್ರಗಳನ್ನು ಬೆಸೆದು ಬಿಡುವುದು ‘ಇಸ್ತಮಸ್’ ಯೋಜನೆಯ ಉದ್ದೇಶ. ಅಟ್ಲಾಂಟಿಕ್ ಸಾಗರ ಮತ್ತು ಶಾಂತಸಾಗರಗಳು ಇದರಿಂದಾಗಿ ಒಂದೇ ಸಮುದ್ರವಾಗಿ ಅಸ್ತಿತ್ವ ಪಡೆಯಲಿದೆ. ಯೋಜಿತ ರೀತಿಯಲ್ಲಿ ಅದು ಅನುಷ್ಠಾನಗೊಂಡಿದ್ದರೆ ವಿಶ್ವದ ಎಲ್ಲ ದೇಶಗಳಿಗೂ ಸಾಕಷ್ಟು ‘ಲಾಭ’ ವಾಗಲಿದೆ ಎಂಬುದೇನೋ ನಿಜ. ಆದರೆ ಅದರಿಂದಾಗುವ ಭಯಂಕರ ಅನಾಹುತವನ್ನು ನೆನೆದೇ ವಿಜ್ಞಾನಿಗಳು, ಪರಿಸರ ತಜ್ಞರು ಬೆಚ್ಚಿ ಬಿದ್ದರು. ಅತ್ಯಂತ ವೈಜ್ಞಾನಿಕವಾಗಿ ತಮ್ಮ ನಿಲುವು ಪ್ರತಿಪಾದಿಸಿ, ಸುಮಾರು 5 ಸಾವಿರ ಜೀವಪ್ರಭೇದಗಳ ನಾಶಕ್ಕೆ ಕಾರಣವಾಗುವ ಇಂಥ ‘ಅಪಾಯ ಕಾರಿ’ಯೋಜನೆಗೆ ಅಲ್ಪ ವಿರಾಮ ಹಾಕಿಸಿದ್ದಾರೆ.
1972ರಲ್ಲಿ ಉತ್ತರ-ದಕ್ಷಿಣಗಳನ್ನು ನದಿಗಳ ಮೂಲಕ ಬೆಸೆಯುವ ಪ್ರಸ್ತಾಪ ಇಟ್ಟವರು ಡಾ. ಕೆ.ಎಲ್. ರಾವ್. ಅಂದಿನ ಕೇಂದ್ರ ಸಚಿವ ಸಂಪುಟದಲ್ಲಿ ನೀರಾವರಿ ರಾಜ್ಯ ಸಚಿವರಾಗಿದ್ದವರು. ಸ್ವತಃ ನೀರಾವರಿ ತಜ್ಞರು. ಗಂಗಾ- ಕಾವೇರಿ ನದಿ ಜೋಡಣೆ ಯೋಜನೆಯನ್ನು ಡಾ. ರಾವ್ ಮುಂದಿಟ್ಟರು. 1977ರಲ್ಲಿ ಪ್ರಸ್ತಾವನೆಗೆ ಬಂದದ್ದು ಕ್ಯಾಪ್ಟನ್ ದಿಲ್ಶಾದ್ ದಸ್ತೂರ್ ಅವರ ಕಾಲುವೆ ಮಾಲಾ (ಗಾರ್ಲೆಂಡ್ ಚಾನೆಲ್) ಯೋಜನೆ. ಅದಕ್ಕೂ ಹಿಂದಕ್ಕೆ
ನೋಡುತ್ತ ಹೊರಟರೆ ನದಿಗಳನ್ನು ಜೋಡಿಸಿಬಿಡಬೇಕೆಂದು ಹೇಳಿರುವುದಕ್ಕೆ ಒಂದೂವರೆ ಶತಮಾನಕ್ಕೂ ಮೀರಿದ ಇತಿಹಾಸವಿದೆ.
ಆದರೆ, ಯಾವೊಂದು ಸಂದರ್ಭದಲ್ಲೂ ಸರಕಾರವನ್ನು ಹೊರತುಪಡಿಸಿ ಬೇರಾರೂ ಈ ಪರಿಕಲ್ಪನೆ ಸಾಧುವಾದದ್ದು ಎಂದಿದ್ದಿಲ್ಲ. ವಿಶೇಷವೆಂದರೆ
ಏತ್ಮನಧ್ಯೆಯೇ ಮೂರು ಮುಖ್ಯ ಯೋಜನೆಗಳನ್ನು ಕಾರ್ಯಸಾಧುವಲ್ಲ ಎಂದು ಕೈಬಿಟ್ಟಿದ್ದನ್ನು ಮರೆಯುವಂತಿಲ್ಲ. ಹಾಗೆ ನೋಡಿದರೆ, ನಮ್ಮ ದೇಶದ ವಾತಾವರಣದ ಸರಾಸರಿ 35 ಡಿಗ್ರಿ ಸೆಂಟಿಗ್ರೇಡ್‌ನ ತಾಪಮಾನ ನದಿಯಲ್ಲೂ ಪ್ರತಿಫಲನಗೊಳ್ಳುತ್ತದೆ. ನದಿಯೊಡಲು ಒಂದೆಡೆ ಬಿಸಿಯೇರಿಸಿಕೊಳ್ಳುತ್ತದೆ. ಇನ್ನೊಂದೆಡೆಯ ನದಿ ತಣ್ಣಗೆ ಹರಿಯುತ್ತಿರುತ್ತದೆ.
ಇಂಥ ವಿಭಿನ್ನ ಸನ್ನಿವೇಶದಲ್ಲಿ ಒಂದು ನದಿಯನ್ನು ಮತ್ತೊಂದಕ್ಕೆ ಬೆಸೆಯುವ ಹಂತದಲ್ಲಿ ಸಾವಿರಾರು ಕಿ.ಮೀ.ನಷ್ಟು ಕಾಲುವೆಗಳ ನಿರ್ಮಾಣ ಅತ್ಯಂತ ಅಗತ್ಯ. ಇಂಥ ಕಾಲುವೆಗಳಿಗೆ ನೀರು ಹರಿಸುವ ಮುನ್ನ ಅಲ್ಲಲ್ಲಿ ಒಡ್ಡು ಕಟ್ಟು ನೀರು ನಿಲ್ಲಿಸಿಕೊಳ್ಳುವುದೂ ಅನಿವಾರ್ಯ. ಈ ಎಲ್ಲ ಸಂದರ್ಭದಲ್ಲಿ ನದಿಯಲ್ಲಿನ ಬಹು ಪಾಲು ನೀರು ಆವಿಯಾಗದೇ ಉಳಿದೀತೇ? ಮೇಲಿಂದ ಭರಿಸುವ ಬಿಸಿಲಿಗೆ ಕೆಳಗಿನ ಭೂಮಿಯೂ ಕಾಯುತ್ತದೆ.
ಹಾಗೆ ಕಾದ ಭೂಮಿ ನೀರು ಕುಡಿಯದೇ ಉಳಿದೀತೇ? ‘ನದಿ ನೀರು ಪೋಲಾಗಿ ಸಮುದ್ರ ಸೇರುತ್ತಿದೆ’ ಎಂಬುದು ನದಿ ಜೋಡಣೆಯ ಚಿಂತನೆಗೆ ನೀಡುತ್ತಿರುವ
ಇನ್ನೊಂದು ಕಾರಣ. ಅಸಲಿಗೆ ಸಮುದ್ರಕ್ಕೆ ಸೇರುವ ನೀರು ಪೋಲು ಎಂಬ ಕಲ್ಪನೆಯೇ ಅಪಾಯಕಾರಿಯಾದುದು. ಒಂದೊಮ್ಮೆ ನಿಗದಿತ ಪ್ರಮಾಣದ ನದಿ ನೀರು ಸಮುದ್ರವನ್ನು ಸೇರದೇ ಹೋದಲ್ಲಿ ಇಡೀ ಭೌಗೋಳಿಕ ಸನ್ನಿವೇಶ, ಪ್ರಾಕೃತಿಕ ಚಿತ್ರಣವೇ ಬುಡಮೇಲಾಗುತ್ತದೆ ಎಂಬುದರ ಅರಿವಿಲ್ಲವೇ? ಸಮುದ್ರದ ಲವಣಯುಕ್ತ ನೀರು ಭೂ ಪ್ರದೇಶದೊಳಕ್ಕೆ ನುಗ್ಗಿ ಇಡೀ ಅಂತರ್ಜಲ ಠೇವಣಿಯೇ ಅಯೋಗ್ಯವಾಗುವುದು ತಿಳಿಯದ್ದೇ? ಗುಜರಾತ್
ರಾಜ್ಯವೊಂದರಲ್ಲೇ ಪ್ರತಿ ವರ್ಷವೂ ೫೫೦ ಚದರ ಕಿ. ಮೀ.ನಷ್ಟು ಕಡಲತೀರ ಇಂಥ ಸಮಸ್ಯೆಗೆ ಈಡಾಗುತ್ತಿದೆ.
ಇನ್ನು 7400 ಕಿ.ಮೀ.ನಷ್ಟು ಕಡಲತೀರವನ್ನು ಹೊಂದಿರುವ ಇಡೀ ಭಾರತದ ಪರಿಸ್ಥಿತಿ ಏನಾಗಬಹುದು? ಒಂದೊಮ್ಮೆ ಪ್ರತಿ ವರ್ಷ ಪ್ರವಾಹದಿಂದ ಉಕ್ಕುವ ಕೋಶಿ, ಮಹಾನದಿ, ಬ್ರಹ್ಮಪುತ್ರಾದಂಥವನ್ನು ತಿರುಗಿಸುವುದರಲ್ಲಿ ಅರ್ಥವಿದೆಯೇನೋ? ಆದರೆ, ದೇಶಾದ್ಯಂತ ಹೆಚ್ಚಿನ ನೀರಿರಲೀ, ಕಡಿಮೆ ನೀರಿರಲಿ ಎಲ್ಲ ನದಿಗಳನ್ನು ಜೋಡಿಸಿಬಿಡುತ್ತೇವೆಂದು ಹೊರಟಿರುವುದು ನಿಜಕ್ಕೂ ಅವೈಜ್ಞಾನಿಕ. ದಿವಗಂತ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಯವರ ಕಾಲದಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೇ ನಡೆದಿತ್ತು. ಇದೀಗ ಮೋದಿಯವರ ನೇತೃತ್ವದಲ್ಲಿ ಮತ್ತೆ ಬೆಜೆಟ್ ಅನುದಾನ ಮೀಸಲಿಡುವ ಹಂತದ ವರೆಗೆ ಬರಲಾಗಿದೆ. ಬಹುಶಃ ಯೋಜನೆಯನ್ನು ತಡೆಯುವ ಮಟ್ಟಿಗಿನ ಚಳವಳಿ ಈ ನೆಲದಲ್ಲಿ ಹುಟ್ಟಲಿಕ್ಕಿಲ್ಲ.
ಏಕೆಂದರೆ ಮೂಲಭೂತ ಅರಿವಿನ ಕೊರತೆ ಬಹುತೇಕರನ್ನು ಕಾಡುತ್ತಿದೆ. ಇರುವ ಅಲ್ಪಸಂಖ್ಯಾತ(ಜಾತಿ ಧರ್ಮದಿಂದಲ್ಲ)ರ ದನಿ ಗಟ್ಟಿ ಇಲ್ಲ. ಬಹುಶಃ ಪಂಜಾಬ್ ರೈತರಿಗೆ ಸಿಕ್ಕಂಥ ರಾಜಕೀಯ ಬೆಂಬಲವಾಗಲೀ, ವಿದೇಶೀ ಲಾಬಿಯಾಗಲೀ ಇದಕ್ಕೆ ಕೈಜೋಡಿಸಲಿಕ್ಕಿಲ್ಲ. ಒಂದೊಮ್ಮೆ ಸಿಕ್ಕರೂ ಅದರ
ಹಿಂದಿನ ಹುನ್ನಾರ ಬೇರೆಯದೇ. ಬಿಡಿ, ಕೊನೇ ಪಕ್ಷ ಒಂದಷ್ಟು ಮಂದಿಯಲ್ಲಿ ಅರಿವು ಮೂಡಿಸುವ ಸದಾಶಯ ಈ ಲೇಖನದ್ದು. ಸುಸ್ಥಿರ ಸನ್ನಿವೇಶದ ಆಶಯವಷ್ಟೇ. ಹಾಗಾಗಿ, ಕೋಟ್ಯಂತರ ರು. ಬಂಡವಾಳ ಬೇಡುವ, ಅನೇಕ ಅನಿಶ್ಚಿತತೆಗೆ ಕಾರಣವಾಗಬಲ್ಲ, ಅವೈಜ್ಞಾನಿಕ, ಅಸಾಂಪ್ರದಾಯಿಕ ಬೃಹತ್ ನದಿಗಳ ಜೋಡಣೆಯಂತಹ ಯೋಜನೆಗಳ ಬದಲಿಗೆ ದೇಸೀಯವಾಗೇ ಲಭ್ಯವಿರುವ ಹಲವು ಪಾರಂಪರಿಕ ಜಲಪದ್ಧತಿಗಳನ್ನು ಪ್ರೋತ್ಸಾಹಿಸು ವಂತಾಗಲಿ.
ದೇಶದ ಹಲವು ಗ್ರಾಮೀಣ ಭಾಗಗಳಲ್ಲಿ ಬರ ನಿರೋಧಕ ಜಾಣ್ಮೆ(ರಾಜ್ಯದ ಮಳೆಕೊಯ್ಲು ತಜ್ಞ ಶ್ರೀಪಡ್ರೆ ಇದನ್ನು ಸುಂದರವಾಗಿ ‘ಬನಿಜಾ’ ಎಂದಿದ್ದಾರೆ) ಯ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಸಮುದಾಯ ಕೇಂದ್ರಿತ ಅವೆಷ್ಟೋ ಯೋಜನೆಗಳು ಯಶಸ್ವಿಯಾಗಿವೆ. ಮಳೆ ನೀರು ಕೊಯ್ಲು ಹಾಗೂ ಅಂತರ್ಜಲದ ಪುನಶ್ಚೇತನ ಅನೇಕ ಪ್ರಯತ್ನಗಳಿವೆ. ಇಂಥ ಪ್ರಯತ್ನಗಳು, ಆಂದೋಲನಗಳು ಒಂದಿಡೀ ನದಿಯನ್ನೇ ಪುನಶ್ಚೇತನ ಗೊಳಿಸಿದ್ದಿದೆ. ರಾಜಸ್ಥಾನದ ಅರಾವಳಿ ಬೆಟ್ಟ ಸಾಲಿನಲ್ಲಿ ರಾಜೇಂದ್ರಸಿಂಗ್ ನದಿಗಳನ್ನು ಹೀಗೆ ಮತ್ತೆ ಹರಿಸಿದ್ದಾರೆ. ಮಹಾರಾಷ್ಟ್ರದ ರಾಲೇಗಣ ಸಿದ್ಧಿಯಲ್ಲಿ ಅಣ್ಣಾ ಹಜಾರೆ ಈ ಕೆಲಸ ಮಾಡಿದ್ದಾರೆ.
ರಾಜಸ್ಥಾನದ ಲಕ್ಷ್ಮಣ್ ಸಿಂಗ್ ಜಿಲ್ಲೆಗೆ ಜಿಲ್ಲೆಯನ್ನೇ ಬರದಿಂದ ಪಾರು ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ‘ಧನ್’ ಪ್ರತಿಷ್ಠಾನ, ಗುಜರಾತಿನಲ್ಲಿ ಹಲವಾರು ಸರಕಾರೇತರ ಸಂಸ್ಥೆಗಳು, ಕರ್ನಾಟಕದಲ್ಲಿ ಬೈ-, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವೆಲ್ಲವೂ ಈ ಕೆಲಸ ಮಾಡಿವೆ. ಕನಿಷ್ಠ ಪಕ್ಷ ಯೋಜನೆಗಳ ಸಿಂಧುತ್ವದ ಬಗ್ಗೆ ಸಂವಾದ, ಚರ್ಚೆಗಳಾದರೂ ಆಗುವಂತಾಗಲಿ. ಈ ಸೌಜನ್ಯವನ್ನು ನಮ್ಮ ‘ಪ್ರಜಾಪ್ರತಿನಿಽತ್ವ ವ್ಯವಸ್ಥೆ’ ಉಳಿಸಿಕೊಂಡಿಲ್ಲ. ತುಂಬಿ ಹರಿಯುವ ನದಿಯ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎಂದು ನಾವು ಮೊದಲಿನಿಂದಲೂ ಲೊಚಗುಟ್ಟುತ್ತ ಬರುತ್ತಿದ್ದೇವೆ.
ಇಂಥ ಗೊಣಗಾಟದ ಪರಿಣಾಮವೇ ನದಿ ಜೋಡಣೆಗೆ ನಾವು ಹಾಡಿರುವ ನಾಂದಿ. ಪ್ರಕೃತಿ ವ್ಯಾಪಾರದಲ್ಲಿನ ಇಂಥ ಅಪವ್ಯಯಗಳ ಹಿಂದೆ ವ್ಯವಸ್ಥಿತ,
ನಿಖರ, ವೈeನಿಕ ಉದ್ದೇಶ ಸಾಧನೆಯ ಗುರಿಯಿದೆ ಎಂಬುದು ಗಣನೆಗೆ ಬಾರದಿರುವುದು ದುರಂತ. ಇಂಥ ಹೊಣೆಗೇಡಿ ಅವಜ್ಞೆಯ ಫಲ ಕಾಣುವುದೇ ಇಡೀ ಮನುಕುಲದ ಸಂತಾಪದಲ್ಲಿ. ಆದರೆ ಅಷ್ಟರಲ್ಲಾಗಲೇ ಏನನ್ನು ಮಾಡಬಾರದಿತ್ತೋ ಅದನ್ನು ಮಾಡಿ ಬಿಟ್ಟಿರುತ್ತೇವೆ. ಅಭಿವೃದ್ಧಿಯ ಮರೀಚಿಕೆ, ಅಧಿಕಾರ, ರಾಜಕಾರಣದ ಹುನ್ನಾರಗಳೂ ಸೇರಿಕೊಂಡು ವಾಸ್ತವವನ್ನು ಮರೆಮಾಚಿ ಬಿಡುತ್ತವೆ. ಹೀಗಾಗಿಯೇ ನದಿ ಜೋಡಣೆಯ ಬಗ್ಗೆ ನಕಾರಾತ್ಮಕ ವರದಿಗಳು ಕಾಣುವುದೇ ಇಲ್ಲ. ಇಲ್ಲದಿದ್ದರೆ ಕಳೆದ ಶತಮಾನ (೬೦ರದಶಕ)ದಲ್ಲೇ ಫಿರೋಜ್ ದಸ್ತೂರ್ ಎಂಬಾತ ರೆಕ್ಕೆಪುಕ್ಕ ಕಟ್ಟಿ ಹಾರಿಬಿಟ್ಟ ಇಂಥ ಯೋಜನೆಯ ಹಕ್ಕಿ ಇಷ್ಟರಲ್ಲಾಗಲೇ ಸೋತು ಬೀಳಬೇಕಿತ್ತು. ದುರದೃಷ್ಟ ಇಂದಿಗೂ ಅದು ಭ್ರಮಾಲೋಕದಲ್ಲಿ ಹಾರುತ್ತಲೇ ಇದೆ.