Thursday, 12th December 2024

ಭಾರತಕ್ಕೆ ಅನಿವಾರ್ಯ ನರೇಂದ್ರ ಮೋದಿ

ಆಶಾಕಿರಣ

ಉತ್ಕರ್ಷ ಕೆ.ಎಸ್

ಪ್ರಧಾನಿ ನರೇಂದ್ರ ಮೋದಿಯವರು, ಭಾರತದ ರಾಜಕಾರಣದ ಇತಿಹಾಸದಲ್ಲೇ ಪ್ರಭಾವಶಾಲಿ ವ್ಯಕ್ತಿ. ಅವರು ತಮ್ಮ ಕ್ರಾಂತಿಕಾರಿ ಪರಿಕಲ್ಪನೆಗಳನ್ನು ಎದ್ದುಕಾಣುವ ವಾಸ್ತವಕ್ಕೆ ಪರಿವರ್ತಿಸುವ ಮೂಲಕ, ತಾವು ಹಮ್ಮಿಕೊಂಡ ಧ್ಯೇಯವನ್ನು ಸಾಧಿಸುವ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಭಾರತವು ನಿಜಾರ್ಥದಲ್ಲಿ ಒಂದು ವಿಶಿಷ್ಟ ದೇಶವೇ ಸರಿ. ಕಾರಣ, ವಿವಿಧ ಧರ್ಮಗಳನ್ನು ಆಚರಿಸುವ ಮತ್ತು ಬಗೆಬಗೆಯ ಭಾಷೆಗಳನ್ನು ಆಡುವ
ಜನರನ್ನು ಒಳಗೊಂಡಿದ್ದರೂ ಭಾರತವು ಏಕತೆ ಮತ್ತು ಅಖಂಡತೆಯನ್ನು ಸಾಽಸಿಕೊಂಡು ಬಂದಿದೆ. ಯಾವುದೇ ಒಂದು ದೇಶದಲ್ಲಿ ಕಾಣಬರುವಂತೆ
ಶ್ರೀಮಂತರು ಮತ್ತು ಬಡವರ ನಡುವಿನ ಅಂತರವು ನಮ್ಮಲ್ಲೂ ಸ್ಪಷ್ಟಗೋಚರವಾಗಿದ್ದರೂ, ಒಂದು ದೇಶವಾಗಿ ಒಗ್ಗಟ್ಟನ್ನು ಮೆರೆಯುವಲ್ಲಿ ಅದು
ತಡೆಗೋಡೆಯಾಗಿ ಪರಿಣಮಿಸಿಲ್ಲ.

ಭಾರತವು ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲಿ ಬಗೆಬಗೆಯ ಉದ್ವಿಗ್ನತೆಯನ್ನು ಎದುರಿಸುತ್ತಿದ್ದರೂ, ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಗಳ ನಡುವಿನ ಅಧಿಕಾರದ ಸ್ಪಷ್ಟ ಹಂಚಿಕೆಯು ದೃಢವಾದ ಪ್ರಜಾಪ್ರಭುತ್ವವನ್ನು ಖಾತ್ರಿಪಡಿಸಿದೆ. ಆರ್ಥಿಕ ಬೆಳವಣಿಗೆಯು ಭಾರತದಂಥ ದೇಶಕ್ಕೆ ತುಂಬಾ ನಿರ್ಣಾಯಕವಾಗಿದೆ; ಏಕೆಂದರೆ ಇದು ಪ್ರತಿವರ್ಷ ಲಕ್ಷಾಂತರ ಜನರನ್ನು ಮೇಲೆತ್ತಲು ಸಹಾಯ ಮಾಡುತ್ತದೆ. ಆದರೆ ಕೇಂದ್ರದಲ್ಲಿನ ಸ್ಥಾಪಿತ ವ್ಯವಸ್ಥೆ ಮತ್ತು ಅದರ ನೇತೃತ್ವ ವಹಿಸಿದವರು ದಕ್ಷತೆಯಿಂದ ಕಾರ್ಯನಿರ್ವಹಿಸದಿದ್ದಲ್ಲಿ ಆರ್ಥಿಕತೆಯ ಅಭಿವೃದ್ಧಿಗೆ ಸಂಚಕಾರ ಒದಗಬಹುದು.

ಪ್ರಧಾನಿ ನರೇಂದ್ರ ಮೋದಿಯವರು, ಭಾರತದ ರಾಜಕಾರಣದ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದರೆ ಅತಿಶಯೋಕ್ತಿ ಆಗಲಾರದು.
ಅವರು ತಮ್ಮ ವಿನೂತನ ಮತ್ತು ಕ್ರಾಂತಿಕಾರಿ ಪರಿಕಲ್ಪನೆಗಳನ್ನು ಎದ್ದುಕಾಣುವ ವಾಸ್ತವಕ್ಕೆ ಪರಿವರ್ತಿಸುವ ಮೂಲಕ, ತಾವು ಹಮ್ಮಿಕೊಂಡ
ಧ್ಯೇಯವನ್ನು ಸಾಧಿಸುವ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರನ್ನು ಕೇವಲ ‘ಅಭಿ ವೃದ್ಧಿಯ ಚಾಂಪಿಯನ್’ ಎಂದಷ್ಟೇ ಕರೆದರೆ, ಅವರ
ಒಟ್ಟಾರೆ ಸಾಮರ್ಥ್ಯವನ್ನು ಅವಮಾನಿಸಿದಂತೆ ಅಥವಾ ಕೀಳಂದಾಜು ಮಾಡಿದಂತೆ ಆಗಿಬಿಡುತ್ತದೆ.

ಏಕೆಂದರೆ, ಓರ್ವ ಆದರ್ಶ ಪ್ರಧಾನಮಂತ್ರಿಗೆ ಇರಬೇಕಾದ ಎಲ್ಲಾ ಲಕ್ಷಣಗಳಲ್ಲಿಯೂ ಮತ್ತು ಹೆಗಲೇರಿದ ಹೊಣೆಗಾರಿಕೆಗಳ ನಿರ್ವಹಣೆಯಲ್ಲಿಯೂ ಮೋದಿ ಉತ್ತಮರಾಗಿದ್ದಾರೆ. ಪ್ರಧಾನಮಂತ್ರಿಯ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ೨೦೦೨ರಲ್ಲಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಗೋಧ್ರಾ ಗಲಭೆ ಭುಗಿಲೆದ್ದು ಗಣನೀಯ ಸಂಖ್ಯೆಯ ಜನರು ಅದಕ್ಕೆ ಬಲಿಯಾಗಬೇಕಾಗಿ ಬಂತು. ಆಗಿನ್ನೂ ಮೊದಲ ಬಾರಿಗೆ ಮುಖ್ಯಮಂತ್ರಿಯ ಸ್ಥಾನದ ಹೊಣೆಯನ್ನು ಹೊತ್ತಿದ್ದರೂ, ಮೋದಿಯವರು ಈ ಉದ್ವಿಗ್ನ ಪರಿಸ್ಥಿತಿಯನ್ನು ಸಮರ್ಥವಾಗೇ ನಿಭಾಯಿ ಸಿದ್ದನ್ನು ನಾವೆಲ್ಲರೂ ಕಂಡಿದ್ದೇವೆ.

ಸ್ವಾತಂತ್ರ್ಯಾನಂತರದಲ್ಲಿ ೯೦ಕ್ಕೂ ಹೆಚ್ಚು ಹತ್ಯಾಕಾಂಡಗಳು ಮತ್ತು ನೂರಾರು ಗಲಭೆಗಳು ನಡೆದಿವೆ; ಆದರೆ, ಈ ಸಂಬಂಧವಾಗಿ ತನಿಖೆ ನಡೆಸಿ
ತಪ್ಪಿತಸ್ಥರನ್ನು ಜೈಲಿಗಟ್ಟಲು ನ್ಯಾಯಾಲಯವನ್ನು ಸ್ಥಾಪಿಸಿದ ಏಕೈಕ ರಾಜ್ಯ ಗುಜರಾತ್. ಅಲ್ಲಿ ನಡೆದ ಗಲಭೆಗಳಲ್ಲಿ ಮೋದಿಯವರ ಸಕ್ರಿಯ ಪಾತ್ರವಿದೆ
ಎಂದು ಆರೋಪಿಸಲಾಯಿತು ಮತ್ತು ಈ ಸಂಬಂಧವಾಗಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯನ್ನೂ ಮೋದಿಯವರು ಎದುರಿಸಬೇಕಾಯಿತು. ಆದರೆ ಅಂತಿಮವಾಗಿ ಅವರಿಗೆ ಕ್ಲೀನ್ ಚಿಟ್ ನೀಡಲಾಯಿತು.

ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದಮೇಲೆ, ಅವರಿಗೆ ಭಾರಿ ಜನಸ್ಪಂದನ ಸಿಕ್ಕಿತು. ಅವರ ಮಾತನ್ನು ಕೇಳಲು ಜನಸಮೂಹ ದೊಡ್ಡ ಸಂಖ್ಯೆಯಲ್ಲಿ ಸೇರುತ್ತದೆ; ಕಳೆದ ಹತ್ತು ವರ್ಷಗಳಲ್ಲಿ ಅವರು ಜನಸಾಮಾನ್ಯರಿಗಾಗಿ ಜಾರಿಗೆ ತಂದಿರುವ ಹಲವು ಯೋಜನೆಗಳೇ ಇದಕ್ಕೆ ಕಾರಣ. ಸ್ವಚ್ಛ
ಭಾರತ್ ಮಿಷನ್, ಉಜ್ವಲಾ, ಜನಧನ್, ಪಿಎಂ ಆವಾಸ್, ಗರೀಬ್ ಕಲ್ಯಾಣ, ಆಯುಷ್ಮಾನ್, ‘ಹರ್ ಘರ್ ಟೀಕಾ’ ಹಣೆಪಟ್ಟಿಯ ಅತಿದೊಡ್ಡ ಲಸಿಕಾ ಕಾರ್ಯಾಚರಣೆ ಹೀಗೆ ಹೇಳುತ್ತ ಹೋದರೆ ಸಮಾಜದ ವಿವಿಧ ಸ್ತರಗಳ ಜನರಿಗಾಗಿ ಮತ್ತು ಶ್ರೀಸಾಮಾನ್ಯರಿಗಾಗಿ ಮೋದಿಯವರ ಹೃದಯ ಮಿಡಿದಿದೆ.

ಹೀಗಾಗಿಯೇ, ಅವರ ಮಾತುಗಳಿಗೆ ಕಿವಿಯಾಗುವುದಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಾರೆ. ಹೀಗೆ ವೈವಿಧ್ಯಮಯ ಯೋಜನೆಗಳ ಮೂಲಕ ಕೋಟ್ಯಂತರ ರುಪಾಯಿ ಹಣವು ಜನರನ್ನು ಸೇರಿದೆ; ವಿಶೇಷವಾಗಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಜನರೇ ಈ ಯೋಜನೆಗಳ ಫಲಾನು ಭವಿಗಳಾಗಿದ್ದಾರೆ. ಇವರೆಲ್ಲ ಪ್ರತಿಪಕ್ಷಗಳ ಅಪಪ್ರಚಾರವನ್ನು ಲೆಕ್ಕಿಸದೆ ಮೋದಿಯವರಿಗೆ ಓಗೊಡುತ್ತಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆ. ಸಮಾಜ ಕಲ್ಯಾಣ ಯೋಜನೆಗಳು ಭಾರತಕ್ಕೆ ಹೊಸದಲ್ಲ; ಆದರೆ ಆ ಯೋಜನೆಗಳ ಅನುಷ್ಠಾನದ ವಿಧಾನ ಮತ್ತು ವಿತರಣೆಯಲ್ಲಿ ತೋರಿದ ದಕ್ಷತೆಯೇ ಇಲ್ಲಿ ಉದ್ದೇಶಿತ ಪರಿಣಾಮವನ್ನು ಉಂಟುಮಾಡಿದೆ ಎನ್ನಬೇಕು. ಮೋದಿಯವರ ದಕ್ಷತೆ ಮತ್ತು ಸಾಮರ್ಥ್ಯ ಎದ್ದುಕಾಣುವುದು ಇಲ್ಲೇ.

ಇಂಥ ಹತ್ತು ಹಲವು ಮಹತ್ವಾಕಾಂಕ್ಷಿ ಯೋಜನೆಗಳು ಅಗಾಧ ಗಾತ್ರ ಮತ್ತು ಪ್ರಮಾಣವನ್ನು ಹೊಂದಿರುವುದರ ಹೊರತಾಗಿಯೂ, ಅವನ್ನು ಮೋದಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ಹೀಗಾಗಿ ಫಲಾನುಭವಿಗಳಿಗೆ ಆಯಾ ಯೋಜನೆಗಳ ಪ್ರಯೋಜನವು ಸೋರಿಕೆಗಳಿಲ್ಲದಂತೆ ದಕ್ಕಿದೆ ಎನ್ನಬೇಕು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೃಷಿ ವಲಯಕ್ಕೆ ಅಭೂತಪೂರ್ವ ಗಮನ ನೀಡಿದೆ. ಉತ್ಪಾದಕತೆಯನ್ನು ಸುಧಾರಿಸಲು, ರೈತರನ್ನು ರಕ್ಷಿಸಿ
ಅವರ ಆದಾಯವನ್ನು ಹೆಚ್ಚಿಸಲು ಮತ್ತು ಅವರ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಅದು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.

ಸರಕಾರದ ಈ ಮಹತ್ವದ ಹೆಜ್ಜೆಗಳಲ್ಲಿ, ರೈತರಿಗೆ ರಸಗೊಬ್ಬರಗಳ ಸುಲಭ ಲಭ್ಯತೆ, ನೀರಾವರಿ ಸೌಲಭ್ಯಗಳ ಸುಧಾರಣೆ, ಸುಲಭ ರೀತಿಯ ಸಾಲಸೌಲಭ್ಯ,
ವೈಜ್ಞಾನಿಕ ಸಹಾಯ, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಮುಂತಾದವು ಸೇರಿವೆ. ಪ್ರಧಾನಿ ಮೋದಿ ಸರಕಾರವು ಮೂಲಸೌಕರ್ಯ ವಲಯಕ್ಕೆ ಹೆಚ್ಚಿನ
ಉತ್ತೇಜನ ನೀಡುತ್ತ ಬಂದಿರುವುದು ಗೊತ್ತಿರುವ ಸಂಗತಿಯೇ. ರೈಲ್ವೆ, ರಸ್ತೆಗಳು ಮತ್ತು ಹಡಗು ಸಾರಿಗೆಗೆ ಸಂಬಂಧಿಸಿ ಮೂಲಸೌಕರ್ಯ ಹೆಚ್ಚಿಸಲು
ಮತ್ತು ಸಂಪರ್ಕಶೀಲತೆಯಲ್ಲಿ ನೆರವಾಗಲು ಈ ಸರಕಾರ ಸಾಕಷ್ಟು ಶ್ರಮಿಸಿದೆ.

ಅದರಲ್ಲೂ ನಿರ್ದಿಷ್ಟವಾಗಿ ರೈಲ್ವೆ ವಲಯದಲ್ಲಿ ರಚನಾತ್ಮಕ ಸುಧಾರಣೆಗಳ ಮೇಲೆ ಗಮನ ಕೇಂದ್ರೀಕರಿಸಿ, ವಾರ್ಷಿಕ ಆಧಾರದ ಮೇಲೆ ಹೊಸ ರೈಲು ಗಳನ್ನು ಹೆಚ್ಚು ಸಂಖ್ಯೆಯಲ್ಲಿ ಘೋಷಿಸಿದ್ದು ಮೋದಿ ಸರಕಾರದ ಹೆಗ್ಗಳಿಕೆ. ಇನ್ನು, ‘ಉಡಾನ್’ ಯೋಜನೆಯ ಮೂಲಕ ಶ್ರೀಸಾಮಾನ್ಯರೂ ವಿಮಾನದಲ್ಲಿ ಪಯಣಿಸುವಂಥ ಅವಕಾಶವನ್ನೂ ಈ ಸರಕಾರ ಕಲ್ಪಿಸಿಕೊಟ್ಟಿದ್ದು ಹಾಗೂ ಹೊಸದಾಗಿ ೧೪೮ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದು ಗೊತ್ತೇ ಇದೆ.
ಗರ್ಭಿಣಿಯರ ಆರಾಮದಾಯಕ ಹೆರಿಗೆಗೆ ಅನುವುಮಾಡಿಕೊಡಲು ಹಾಗೂ ಹಾಲೂಡಿಸುವ ತಾಯಂದಿರಿಗೆ ನೆರವು ನೀಡಲು ಪ್ರಧಾನಿ ಮೋದಿ ವಿಶೇಷ ಉಪಕ್ರಮಗಳನ್ನು ಕೈಗೊಂಡಿದ್ದಾರೆ.

ಪ್ರಧಾನಮಂತ್ರಿ ಮಾತೃತ್ವ ವಂದನಾ ಯೋಜನೆಯು ಗರ್ಭಿಣಿಯರಿಗೆ ಅವರ ಮೊದಲ ಹೆರಿಗೆಯಲ್ಲಿ ೬,೦೦೦ ರು. ನೆರವು ನೀಡುತ್ತಿದೆ. ಇದಲ್ಲದೆ,
ಪ್ರಧಾನಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ ಎಂಬ ಮತ್ತೊಂದು ಯೋಜನೆಯು, ಪ್ರತಿ ತಿಂಗಳ ೯ರಂದು ಎಲ್ಲಾ ಗರ್ಭಿಣಿಯರಿಗೆ ಖಚಿತವಾದ,
ಸಮಗ್ರ ಮತ್ತು ಗುಣಮಟ್ಟದ ಪ್ರಸವಪೂರ್ವ ಆರೈಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇಷ್ಟು ಮಾತ್ರವಲ್ಲದೆ, ಬೇಟಿ ಬಚಾವೋ ಬೇಟಿ ಪಢಾವೋ, ಒನ್ ಸ್ಟಾಪ್ ಸೆಂಟರ್, ಮಹಿಳಾ ಸಹಾಯವಾಣಿ, ನಾರಿಶಕ್ತಿ ಪುರಸ್ಕಾರ ಈ ರೀತಿಯ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮೋದಿ ಸರಕಾರವು ಹೆಣ್ಣು ಮಕ್ಕಳ ಸಶಕ್ತೀಕರಣಕ್ಕೆ ಅಹರ್ನಿಶಿ ದುಡಿದಿದೆ.

೨೦೧೫ರ ಜುಲೈನಲ್ಲಿ ಪ್ರಾರಂಭವಾದ ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ, ಪಿಎಂ ಕೌಶಲ್ ವಿಕಾಸ್ ಯೋಜನೆಯು ಎರಡು ತರಬೇತಿ ಘಟಕಗಳ ಮೂಲಕ ಕೌಶಲಾಭಿವೃದ್ಧಿ ತರಬೇತಿ ಯನ್ನು ನೀಡುತ್ತದೆ. ೨೦೧೫ರಲ್ಲಿ ಪ್ರಾರಂಭವಾದಾಗಿನಿಂದ ೨೦೨೩ರ ಅಕ್ಟೋಬರ್‌ವರೆಗೆ ೧.೪ ಕೋಟಿ ಯುವಜನರು ಈ ಯೋಜನೆಯಡಿ ತರಬೇತಿ ಪಡೆದಿದ್ದಾರೆ. ಶಿಕ್ಷಣದಲ್ಲಿ ಕೌಶಲದ ತರಬೇತಿಗಿರುವ ಮಹತ್ವವನ್ನು ಅರಿತಿರುವ ರಾಷ್ಟ್ರೀಯ ಶಿಕ್ಷಣ ನೀತಿಯು, ಕೌಶಲಾಧಾರಿತ ಕಲಿಕೆಗೆ ಒತ್ತುನೀಡುತ್ತದೆ ಹಾಗೂ ಕಸುಬುಗಾರಿಕೆಯನ್ನು ಉತ್ತೇಜಿಸಲು
ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಈ ವಿಶಿಷ್ಟ ತರಬೇತಿಯಿಂದಾಗಿ ವಿದ್ಯಾರ್ಥಿಗಳು ಸಮಾಜದ ‘ಉತ್ಪಾದನಾಶೀಲ ಸದಸ್ಯ’ರಾಗಲು ಅಽಕಾರವನ್ನು
ಪಡೆಯುತ್ತಾರೆ.

ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯು ಪ್ರವರ್ಧಮಾನಕ್ಕೆ ಬಂದಿದ್ದು, ಭಾರತವು ಈಗ ೧.೧೫ ಲಕ್ಷ ನೋಂದಾಯಿತ ಸ್ಟಾರ್ಟ್ ಅಪ್‌ಗಳನ್ನು ಆಯೋಜಿ ಸುತ್ತಿದೆ. ೨೦೧೪ರಲ್ಲಿ ಕೇವಲ ೩೫೦ರಷ್ಟು ಇದ್ದುದು ಈಗ ಹೀಗೆ ಭಾರಿ ಸಂಖ್ಯೆಯನ್ನು ಮುಟ್ಟಿರುವುದು ನಿಬ್ಬೆರಗಾಗಿಸುವ ಸಂಗತಿಯೇ ಸರಿ. ಸ್ಟಾರ್ಟ್ ಅಪ್
ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾದಂಥ ಉಪಕ್ರಮಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಕಳೆದ ೧೦ ವರ್ಷಗಳಲ್ಲಿ ೭
ಐಐಟಿಗಳು, ೭ ಐಐಎಂಗಳು, ೧೫ ಎಐಐಎಂಎಸ್ ಗಳು ಮತ್ತು ೩೯೦ ವಿಶ್ವವಿದ್ಯಾಲಯಗಳು, ೩೦೦೦ ಹೊಸ ಐಟಿಐಗಳನ್ನು ಸ್ಥಾಪಿಸಲಾಗಿದೆ. ಖೇಲೋ
ಇಂಡಿಯಾ, ಫಿಟ್ ಇಂಡಿಯಾ ಮೂವೆಂಟ್ ರೀತಿಯ ಅನೇಕ ಯೋಜನೆಗಳು ಕ್ರೀಡಾಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿವೆ.

ಇತ್ತೀಚೆಗೆ, ವಿಶ್ವನಾಯಕರ ಜಿ-೨೦ ಶೃಂಗಸಭೆಯನ್ನು ಆಯೋಜಿಸಿದ ಭಾರತವು ಅಮೆರಿಕದೊಂದಿಗೆ ರಕ್ಷಣೆ, ಕಾರ್ಯತಂತ್ರ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಗಾಢಸಂಬಂಧಗಳನ್ನು ರೂಪಿಸಿದೆ, ವಿಶ್ವದ ಐದನೇ ಅತಿದೊಡ್ಡ  ಆರ್ಥಿಕತೆ ಎನಿಸಿಕೊಂಡಿದೆ ಮತ್ತು ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದೆ. ಪಾಶ್ಚಾತ್ಯರ ಟೀಕೆ ಮತ್ತು ಒತ್ತಡದ ಹೊರತಾಗಿಯೂ, ಉಕ್ರೇನ್‌ನಲ್ಲಿ ಯುದ್ಧ ಆರಂಭವಾದಾಗಿನಿಂದಲೂ ಭಾರತವು ರಷ್ಯಾ ದಿಂದ ದಾಖಲೆಯ ಪ್ರಮಾಣದ ಕಚ್ಚಾತೈಲವನ್ನು ಖರೀದಿಸಿದೆ ಮತ್ತು ಮಾಸ್ಕೋದೊಂದಿಗಿನ ನಿಕಟ ಸಂಬಂಧವನ್ನು ಇನ್ನೂ ಉಳಿಸಿಕೊಂಡಿದೆ. ಇದು ಈಗಿನ ಭಾರತ ಸರಕಾರಕ್ಕೆ ವಿದೇಶಾಂಗ ವ್ಯವಹಾರಗಳ ಬಗ್ಗೆ ಇರುವ ಸ್ಪಷ್ಟತೆಯನ್ನು ತೋರಿಸುತ್ತದೆ. ಸಂವಿಧಾನದ ೩೭೦ನೇ ವಿಽಯನ್ನು ತೆಗೆದುಹಾಕಿದ್ದು, ಸಿಎಎ ಮತ್ತು ಎನ್‌ಆರ್‌ಸಿಯನ್ನು ಜಾರಿಮಾಡಿದ್ದು, ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಿದ್ದು ಇವೆಲ್ಲವೂ ಮೋದಿಯವರ ದಿಟ್ಟ ದೃಷ್ಟಿಕೋನಗಳ ದ್ಯೋತಕವಾಗಿವೆ.

ಹೀಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಮೋದಿಯವರ ನಾಯಕತ್ವವು ಈ ದೇಶಕ್ಕೆ ಅತ್ಯವಶ್ಯಕವಾಗಿದೆ. ಅವರ ನಾಯಕತ್ವದ
ಶೈಲಿ ಮತ್ತು ದೇಶದ ಕುರಿತಾದ ಅವರ ದೃಷ್ಟಿಕೋನವು, ಅಗಾಧ ಸಂಖ್ಯೆಯ ಜನರೊಂದಿಗೆ ಅನುರಣಿಸುತ್ತದೆ. ಜಾಗತಿಕ ಮಟ್ಟದಲ್ಲಿ ಭಾರತದ ಏಳಿಗೆಯ ನ್ನು ಸಹಿಸದ ಕೆಲ ಪಾಶ್ಚಾತ್ಯ ಮತ್ತು ಮುಸ್ಲಿಂ ರಾಷ್ಟ್ರಗಳು ಇಂದು ಭಾರತದ ಮುಂದೆ ಮಂಡಿಯೂರುವಂಥ ಪರಿಸ್ಥಿತಿ ಒದಗಿದೆ. ಭಾರತದ ಕೀತಿಯನ್ನು ಹೀಗೆ ಮುಗಿಲು ಮುಟ್ಟಿಸಿರುವ ಮೋದಿಯವರು, ಮೂರನೇ ಬಾರಿಗೆ ಗೆಲ್ಲುವ ಮೂಲಕ ಭಾರತದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ತರ ಅಧ್ಯಾಯವನ್ನು ಸೇರಿಸಲು ದಾಪುಗಾಲು ಇಡುತ್ತಿದ್ದಾರೆ. ಇವರ ನಾಯಕತ್ವದಡಿ ಭಾರತವು ೨೦೪೭ರ ಹೊತ್ತಿಗೆ ‘ವಿಕಸಿತ ಭಾರತ’ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

(ಲೇಖಕರು ಹವ್ಯಾಸಿ ಬರಹಗಾರರು)