ವೀಕೆಂಡ್ ವಿತ್ ಮೋಹನ್
camohanbn@gmail.com
ಕಳೆದ ಕೆಲವು ವರ್ಷಗಳಿಂದ ಜಗತ್ತಿನ ಅನೇಕ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹಾಳಾಗಿವೆ. ಕೋವಿಡ್ ಪಿಡುಗಿನಿಂದಾಗಿ ಕುಸಿದಿದ್ದ
ಆರ್ಥಿಕತೆಯ ಚೇತರಿಕೆಯ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ವಿದ್ಯಮಾನಗಳು ನಡೆದವು. ಉಕ್ರೇನ್ ಮತ್ತು ರಷ್ಯಾ ನಡುವೆ ಪ್ರಾರಂಭವಾದ ಯುದ್ಧ ಇಂದಿಗೂ ನಿಂತಿಲ್ಲ. ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಯುದ್ಧ ಇನ್ನೂ ನಡೆಯುತ್ತಿದೆ.
ಇಸ್ರೇಲಿಗರ ಮೇಲೆ ಲೆಬನಾನ್ ದೇಶದ ಹಿಜ್ಬುಲ್ಲಾಗಳು ದಾಳಿ ನಡೆಸಿ ಇಸ್ರೇಲಿನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಾಂಗ್ಲಾದಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದಕ್ಕೆ ಅಲ್ಲಿನ ಪ್ರಧಾನಿ ಶೇಖ್ ಹಸೀನಾ ದೇಶಬಿಡುವ ಪರಿಸ್ಥಿತಿ ಎದುರಾಯಿತು. ಶ್ರೀಲಂಕಾ ಆರ್ಥಿಕವಾಗಿ ದಿವಾಳಿ ಯಾಯಿತು, ಫ್ರಾನ್ಸ್‌ನಲ್ಲಿ ದಂಗೆಗಳಾದವು, ಜರ್ಮನಿಯಲ್ಲಿ ಹಿಂದೆಂದೂ ಕಂಡರಿಯದ ಜಲಪ್ರಳಯವಾಯಿತು. ಜಗತ್ತಿನಲ್ಲಿ ಹೀಗೆ ಅನೇಕ ವಿದ್ಯಮಾನಗಳು ನಡೆಯುತ್ತಿರುವ ಸಂದರ್ಭದಲ್ಲಿ ಭಾರತದ ಪರಿಸ್ಥಿತಿ ತುಸು ಭಿನ್ನವಾಗಿತ್ತು. ಕೋವಿಡ್ ಮಹಾಮಾರಿಯಿಂದಾಗಿ ಸೃಷ್ಟಿಯಾದ ಆರ್ಥಿಕ ಹೊಡೆತಕ್ಕೆ ಸಿಲುಕಿದ ದೇಶಗಳಲ್ಲಿ ಭಾರತವೂ ಸೇರಿತ್ತು. ಆದರೆ ಇತರ ದೇಶಗಳಿಗಿಂತಲೂ ಬೇಗನೆ ಚೇತರಿಸಿಕೊಂಡ ಭಾರತ ಮತ್ತೊಮ್ಮೆ ಅಭಿವೃದ್ಧಿಯ ಹಳಿಗೆ ಮರಳಿತು. ಭಾರತವು ಬಹಳ ಕಾಲದಿಂದಲೂ ರಷ್ಯಾ ಮತ್ತು ಅಮೆರಿಕಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದೆ.
ಜಗತ್ತಿನ ಈ ೨ ಸೂಪರ್‌ಪವರ್ ದೇಶಗಳಿಗೂ ಭಾರತ ಬೇಕೇ ಬೇಕು. ಪಾಕಿಸ್ತಾನದ ವಿರುದ್ಧದ ಯುದ್ಧದ ಸಂದರ್ಭದಲ್ಲೆಲ್ಲಾ ಭಾರತದ ಪರವಾಗಿ ನಿಂತಿ ರುವ ರಷ್ಯಾ, ದಶಕಗಳಿಂದಲೂ ಭಾರತಕ್ಕೆ ಅನೇಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಾ ಬಂದಿದೆ. ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ
ಭಾಗವಾಗಿದ್ದ ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದ ಭೀಕರತೆಗೆ ಇಡೀ ಉಕ್ರೇನ್ ದೇಶವೇ ನಲುಗಿಹೋಗಿದೆ. ಈ ಯುದ್ಧದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ‘ನ್ಯಾಟೋ’ ದೇಶಗಳು ರಷ್ಯಾ ವಿರುದ್ಧ ವ್ಯಾಪಾರ ನಿಷೇಧ ಹೇರಿದಾಗ, ಭಾರತ ಕ್ಯಾರೆ ಎನ್ನದೆ ರಷ್ಯಾದಿಂದ ತೈಲವನ್ನು ಆಮದು ಮಾಡಿ ಕೊಂಡಿತ್ತು. ಹಾಗಂತ ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ದೇಶಗಳ ಜತೆಗಿನ ತನ್ನ ಸಂಬಂಧವನ್ನು ಭಾರತ ಕಡಿದುಕೊಳ್ಳಲಿಲ್ಲ; ಅವಕ್ಕೆ ಕಳುಹಿಸ ಬೇಕಿರುವ ಸಂದೇಶವನ್ನೂ ಕಳುಹಿಸಿ, ರಷ್ಯಾ ಜತೆಗಿನ ಸಂಬಂಧವನ್ನೂ ಉತ್ತಮಪಡಿಸಿಕೊಂಡಿತು.
ಪ್ರಧಾನಿ ಮೋದಿಯವರ ರಷ್ಯಾ ಭೇಟಿಯನ್ನು ಉಕ್ರೇನ್ ಅಧ್ಯಕ್ಷರು ತೀವ್ರವಾಗಿ ಖಂಡಿಸಿದ್ದರು. ಮೋದಿಯವರು ೩ನೇ ಬಾರಿಗೆ ಪ್ರಧಾನಿಯಾದ ಬಳಿಕ ಪುಟಿನ್‌ರನ್ನು ಭೇಟಿಮಾಡಿ ಹಲವು ವಿಷಯಗಳನ್ನು ಚರ್ಚಿಸಿದ್ದರು. ಉಕ್ರೇನ್ ಮೇಲಿನ ಯುದ್ಧವನ್ನು ನಿಲ್ಲಿಸಿ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿ ಕೊಳ್ಳುವುದನ್ನು ತಾನು ಬಯಸುವುದಾಗಿ ಭಾರತ ಹೇಳಿತ್ತು. ರಷ್ಯಾ ನಂತರ ಮೋದಿ ಉಕ್ರೇನ್‌ಗೆ ಭೇಟಿ ನೀಡಿದ್ದರು. ಯುದ್ಧಪೀಡಿತ ಪ್ರದೇಶವಾದ ಕಾರಣ ಅವರು ಪೋಲೆಂಡ್‌ನಿಂದ ಉಕ್ರೇನ್‌ಗೆ ೧೦ ಗಂಟೆಗಳ ಅವಧಿಯ ರೈಲುಪ್ರಯಾಣ ಕೈಗೊಂಡರು. ಮೋದಿಯವರ ರಷ್ಯಾ ಭೇಟಿಯನ್ನು ಖಂಡಿಸಿದ್ದ ಉಕ್ರೇನ್ ಅಧ್ಯಕ್ಷರು, ಮೋದಿ ತಮ್ಮಲ್ಲಿಗೆ ಬಂದಾಗ ಆತ್ಮೀಯವಾಗಿ ಸ್ವಾಗತಿಸಿದರು.
ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದ ಮಕ್ಕಳ ಸ್ಮಾರಕಕ್ಕೆ ಮೋದಿ ಭೇಟಿ ನೀಡಿದ್ದರು. ಮೋದಿಯವರ ಪ್ರಯಾಣದ ಸಂದರ್ಭದಲ್ಲಿ ಎರಡೂ ದೇಶಗಳು ಕದನ ವಿರಾಮವನ್ನು ಘೋಷಿಸಿದ್ದವು. ಮೋದಿ ಉಕ್ರೇನಿಗೆ ಭೇಟಿ ನೀಡಿದ ಸಂದರ್ಭದಲ್ಲೂ, ಉಭಯ ದೇಶಗಳ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಭಾರತ ಹೇಳಿತು. ವ್ಯಾಸಂಗಕ್ಕೆಂದು ಉಕ್ರೇನ್‌ಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಯುದ್ಧದ ಸಂದರ್ಭದಲ್ಲಿ ಭಾರತಕ್ಕೆ ವಾಪಸ್ ಕರೆತರುವಲ್ಲಿ ಎರಡೂ ದೇಶಗಳು ಸಹಕರಿಸಿದ್ದನ್ನು ಇಲ್ಲಿ ನೆನೆಯಬೇಕು. ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ಒತ್ತಡ ಹೇರಿದ್ದರೂ, ಉಕ್ರೇನ್-ರಷ್ಯಾ ನಡುವಿನ ಯುದ್ಧಕ್ಕೆ ಸಂಬಂಧಿಸಿ ತನ್ನ ಸ್ಪಷ್ಟ ನಿಲುವನ್ನು ಹೇಳುವ ಮೂಲಕ ಭಾರತವು ಜಾಣ ರಾಜತಾಂತ್ರಿಕತೆ ಯನ್ನು ಪ್ರದರ್ಶಿಸಿದೆ.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಯುದ್ಧದ ತೀವ್ರತೆಯನ್ನು ಅರಿತಿದ್ದ ಭಾರತ, ಇಸ್ರೇಲ್ ಮೇಲಿ ದಾಳಿಯನ್ನು ಖಂಡಿಸಿತ್ತು. ಒಂದು ದೇಶವಾಗಿ ತನ್ನ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವ ಸಂದರ್ಭ ಬಂದರೆ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು ಎಂದು ಭಾರತ ಹೇಳಿತ್ತು, ಅತ್ತ ಪ್ಯಾಲೆಸ್ತೀನ್‌ನಲ್ಲಿರುವ ಅಮಾಯಕರ ಮೇಲಿನ ದಾಳಿಯನ್ನೂ ಖಂಡಿಸಿತ್ತು. ಇಸ್ರೇಲ್ ಭಾರತದ ಸಾವಿರಾರು ವರ್ಷಗಳ ಹಿಂದಿನ ಸ್ನೇಹಿತ; ಯೆಹೂದಿಗಳ
ಮೇಲೆ ದಾಳಿಯಾದ ಸಂದರ್ಭದಲ್ಲಿ ಅವರಿಗೆ ಆಶ್ರಯ ನೀಡಿದ ಜಗತ್ತಿನ ಏಕೈಕ ದೇಶ ಭಾರತ. ಪಾಕಿಸ್ತಾನದ ಉಗ್ರರ ನೆಲೆ ‘ಬಾಲಾಕೋಟ್’ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಭಾರತೀಯ ಸೇನೆಯು ಇಸ್ರೇಲ್-ನಿರ್ಮಿತ ‘ಲೇಸರ್ ಗೈಡೆಡ್’ ಬಾಂಬುಗಳನ್ನು ಬಳಸಿತ್ತು.
ನಮ್ಮ ಸೇನೆಯ ಹಲವು ವಿನೂತನ ತಂತ್ರಜ್ಞಾನಗಳು ಇಸ್ರೇಲ್-ನಿರ್ಮಿತವೇ. ಇಸ್ರೇಲ್ ಜತೆಗಿನ ಬಾಂಧವ್ಯದ ನಿರ್ವಹಣೆ ಒಂದು ಕಡೆಯಾದರೆ, ಪ್ಯಾಲೆಸ್ತೀನ್‌ಗೆ ಭೇಟಿನೀಡಿದ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂಬುದು ಮತ್ತೊಂದು ವಿಷಯ. ಮೋದಿ ಪ್ರಧಾನಿಯಾದ ನಂತರ, ಭೂತಾನ್, ಬಾಂಗ್ಲಾ, ಶ್ರೀಲಂಕಾ, ನೇಪಾಳದಂಥ ಸುತ್ತಲಿನ ಸಣ್ಣಪುಟ್ಟ ರಾಷ್ಟ್ರಗಳಿಗೆ ಮೊದಲ ಆದ್ಯತೆ ನೀಡಿದರು, ಅವನ್ನು ಹಲವು ಕಾರ್ಯಕ್ರಮಗಳಿಗೆ ಆಹ್ವಾನಿಸಿ ಚೀನಾ ಮತ್ತು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ಕಳಿಸಿದ್ದರು. ಭೂತಾನ್ ಪುಟ್ಟದೇಶವಾಗಿದ್ದರೂ, ಅದರೊಂದಿಗಿನ ರಾಜತಾಂತ್ರಿಕ ಸಂಬಂಧ ‘ಡೋಕ್ಲಾಂ’ ವಿಷಯದಲ್ಲಿ ಭಾರತಕ್ಕೆ ಪ್ರಮುಖವಾಗಲಿದೆ.
ಚೀನಾ ತನ್ನ ಸಾಮ್ರಾಜ್ಯ ವಿಸ್ತರಣಾ ನೀತಿಯಿಂದಾಗಿ, ಅಕ್ಕಪಕ್ಕದ ದೇಶದ ಗಡಿಪ್ರದೇಶಗಳು ತನಗೆ ಸೇರಬೇಕೆಂದು ಕಾಲುಕೆರೆದು ಜಗಳಕ್ಕೆ ಬರುವ ಚಾಳಿಯನ್ನು ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದೆ. ಈಶಾನ್ಯ ಭಾರತದ ರಾಜ್ಯಗಳ ಸುರಕ್ಷತೆಯ ದೃಷ್ಟಿಯಿಂದ ‘ಡೋಕ್ಲಾಂ’ ಭೂಭಾಗ ಭಾರತಕ್ಕೆ ಪ್ರಮುಖವಾಗಿದೆ. ಈ ಪ್ರದೇಶ ಭೂತಾನ್‌ಗೆ ಸೇರಿದ್ದು, ಅದನ್ನು ಆಕ್ರಮಿಸಿಕೊಳ್ಳಲು ಚೀನಾ ಸದಾ ಹವಣಿಸುತ್ತಿರುತ್ತದೆ. ಇದನ್ನು ವಶಪಡಿಸಿ ಕೊಂಡರೆ, ಈಶಾನ್ಯ ಭಾರತವನ್ನು ಸಂಪರ್ಕಿಸುವ ‘ಚಿಕನ್ ನೆಕ್’ ಭಾಗ ಚೀನಾಕ್ಕೆ ಹತ್ತಿರವಾಗುತ್ತದೆ. ಹಾಗಾಗಿ ಭೂತಾನ್‌ನೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವುದು ಭಾರತಕ್ಕೆ ಅನಿವಾರ್ಯ.
ಮೋದಿ ಪ್ರಧಾನಿಯಾದ ನಂತರ ಭೂತಾನ್ ಗೆ ೫,೩೦೦ ಕೋಟಿ ರು. ಆರ್ಥಿಕ ನೆರವನ್ನು ಘೋಷಿಸಿದ್ದರು. ಎಡಚರ ಬೆಂಬಲಿತ ಕೆಲ ಮಾಧ್ಯಮಗಳು ಅದನ್ನೇ ರಾಜಕೀಯ ವಸ್ತುವನ್ನಾಗಿಸಿ ಮೋದಿ ವಿರುದ್ಧ ಸುಳ್ಳುಸುದ್ದಿಗಳನ್ನು ಪ್ರಸಾರ ಮಾಡಿದ್ದವು. ಪೂರ್ವ ಪಾಕಿಸ್ತಾನದಲ್ಲಿ ನರಮೇಧ ನಡೆಸಿದ
ಪಾಕಿಸ್ತಾನದ ಸೇನೆಯ ವಿರುದ್ಧ ಭಾರತ ಕಾರ್ಯಾಚರಣೆ ನಡೆಸಿ ಬಾಂಗ್ಲಾದ ಹುಟ್ಟಿಗೆ ಕಾರಣವಾಗಿದ್ದು ಗೊತ್ತಿರುವಂಥದ್ದೇ. ಶೇಖ್ ಹಸೀನಾರ ತಂದೆಯ ಕಾಲದಿಂದಲೂ ಬಾಂಗ್ಲಾ ಮತ್ತು ಭಾರತದ ನಡುವೆ ಉತ್ತಮ ರಾಜತಾಂತ್ರಿಕ ಸಂಬಂಧವಿದೆ. ಬಾಂಗ್ಲಾದ ಗಡಿಯ ಮೂಲಕ ನುಸುಳುಕೋರರು ಭಾರತಕ್ಕೆ ಬಂದು ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಶೇಖ್ ಹಸೀನಾ ಬಾಂಗ್ಲಾದ ಪ್ರಧಾನಿಯಾದ ನಂತರ ಇಂಥ ನುಸುಳುಕೋರರ ಸಂಖ್ಯೆಯಲ್ಲಿ
ಭಾರಿ ಇಳಿಕೆಯಾಗಿತ್ತು. ಬಾಂಗ್ಲಾದಲ್ಲಿ ತಮ್ಮ ವಿರುದ್ಧ ನಡೆದ ಪ್ರತಿಭಟನೆಯಿಂದಾಗಿ ಹಸೀನಾ ದೇಶ ಬಿಟ್ಟು ಆಶ್ರಯ ಬಯಸಿ ಭಾರತಕ್ಕೆ ಬರಬೇಕಾಯಿ ತು.
ಬಾಂಗ್ಲಾದಲ್ಲಿ ಹಸೀನಾ ಸರಕಾರ ಬಿದ್ದ ನಂತರ, ಮೊಹಮ್ಮದ್ ಯೂನಿಸ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಹಸೀನಾರಿಗೆ ಆಶ್ರಯ ನೀಡುವುದರ ಜತೆಗೆ, ಬಾಂಗ್ಲಾದ ನೂತನ ಸರಕಾರದ ಜತೆಗಿನ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವ ಹೇಳಿಕೆಗಳನ್ನೂ ನೀಡುವ ಮೂಲಕ ಭಾರತ ಮತ್ತೊಮ್ಮೆ ತನ್ನ ರಾಜತಾಂತ್ರಿಕ ಚಾಣಾಕ್ಷತೆಯನ್ನು ಪ್ರದರ್ಶಿಸಿದೆ. ಒಂದೆಡೆ ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ, ಪಾಶ್ಚಾತ್ಯ ದೇಶಗಳ ಒತ್ತಡ, ಮತ್ತೊಂದೆಡೆ ಇಸ್ರೇಲ್ ಯುದ್ಧ, ಚೀನಾದ ಕೆಲ ಉತ್ಪಾದನೆಗಳ ಆಮದಿನ ಮೇಲಿನ ನಿಷೇಧದ ನಡುವೆ ಸರ್ವರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ರಾಜತಾಂತ್ರಿಕ ಹೆಜ್ಜೆಯನ್ನು ಭಾರತ ಕಳೆದ ಒಂದು ದಶಕದಿಂದ ಇಡುತ್ತಾ ಬಂದಿದೆ. ಜಾಗತಿಕ ಒತ್ತಡದ ನಡುವೆ ‘ವಸುಧೈವ ಕುಟುಂಬಕಂ’ ಶೀರ್ಷಿಕೆ ಯಡಿ ದೆಹಲಿಯಲ್ಲಿ ೨೦೨೩ರ ಸೆಪ್ಟೆಂಬರ್‌ನಲ್ಲಿ ಜಿ-೨೦ ಶೃಂಗಸಭೆ ನಡೆಸುವ ಮೂಲಕ, ಜಾಗತಿಕ ಮಟ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ದೇಶವಾಗಿ ಭಾರತ ಹೊರಹೊಮ್ಮಿದೆ.
ಅಮೆರಿಕವು ಜಗತ್ತಿನ ‘ಸೂಪರ್ ಪವರ್’ ಆಗುವುದರ ಹಿಂದೆ ಭಾರತೀಯ ಮೂಲದ ಹಲವು ವ್ಯಕ್ತಿಗಳ ಪರಿಶ್ರಮವಿದೆ. ‘ಆಪಲ್’ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಭಾರತೀಯ ಮೂಲದ ಕೇವನ್ ಪರೇಖ್ ಇತ್ತೀಚೆಗೆ ನೇಮಕವಾದರು. ಸತ್ಯ ನಾಡೆಲ್ಲಾ ಅವರು ಪ್ರತಿಷ್ಠಿತ ‘ಮೈಕ್ರೋಸಾಫ್ಟ್’ ಸಂಸ್ಥೆಗೆ, ಸುಂದರ್ ಪಿಚೈ ಮತ್ತೊಂದು ದಿಗ್ಗಜ ಸಂಸ್ಥೆ ‘ಗೂಗಲ್’ಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತೀ ಯರ ಪ್ರಭಾವ ಆಳವಾಗಿ ಬೇರೂರಿದೆ. ನೂತನ ತಂತ್ರಜ್ಞಾನಗಳ ಅನುಷ್ಠಾನದಲ್ಲಿ ಭಾರತೀಯರು ನಿಸ್ಸೀಮರು. ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ಎಷ್ಟೇ ಒತ್ತಡ ಹೇರಿದರೂ, ಭಾರತೀಯರ ಬುದ್ಧಿವಂತಿಕೆ ಮತ್ತು ಛಲ ಅವಕ್ಕೆ ಗೊತ್ತಿದ್ದೆ.
ಮೋದಿ ಅಧಿಕಾರಕ್ಕೆ ಬಂದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಾಜತಾಂತ್ರಿಕತೆಯ ಯೋಚನಾಲಹರಿ ಬದಲಾಗಿದೆ. ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ರಾಜಿಮಾಡಿಕೊಳ್ಳದೆ ಭವ್ಯಭಾರತದ ವಿಚಾರಗಳನ್ನು ಜಗತ್ತಿನ ಮುಂದೆ ಇಡಲಾಗುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಶುರುವಾದ ನಂತರ ಜಗತ್ತಿನ ಅನೇಕ ದೇಶಗಳು ಯೋಗವನ್ನು ತಮ್ಮ ಪಠ್ಯಕ್ರಮದಲ್ಲಿ ಸೇರಿಸಿಕೊಂಡಿವೆ. ಪಾಶ್ಚಾತ್ಯರ ಸಂಸ್ಕೃತಿಯ ಜಾಲಕ್ಕೆ ಬಿದ್ದು ಭಾರತೀಯ ಮೂಲಪರಂಪರೆಯನ್ನೇ ಮರೆಮಾಚಲಾಗಿತ್ತು; ಆದರೆ ಮೋದಿ ಭಾರತೀಯತೆಯನ್ನೇ ಮುಂದಿಟ್ಟುಕೊಂಡು, ರಾಜಿ ಮಾಡಿಕೊಳ್ಳದೆ, ಶತ್ರುಗಳೊಂದಿಗೂ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದಾರೆ.
ವಿದೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರು ಒಂದು ಟ್ವೀಟ್ ಮಾಡಿ ಸರಕಾರವನ್ನು ಸಂಪರ್ಕಿಸಿದರೆ ತಕ್ಷಣ ಸ್ಪಂದಿಸಿ ರಾಜತಾಂತ್ರಿಕ ಕಚೇರಿಗಳ ಮೂಲಕ ಅವರ ಸಮಸ್ಯೆ ಬಗೆಹರಿಸಿರುವ ಅನೇಕ ಉದಾಹರಣೆಗಳಿವೆ. ಯುದ್ಧಪೀಡಿತ ಯೆಮೆನ್ ಮತ್ತು ಇಸ್ರೇಲ್‌ನಿಂದ ಸಾವಿರಾರು ಭಾರತೀಯರನ್ನು ವಿಮಾನಗಳ ಮೂಲಕ ದೇಶಕ್ಕೆ ಕರೆತಂದಿದ್ದು ಇದಕ್ಕೆ ಸಾಕ್ಷಿ. ಭಾರತೀಯರ ರಕ್ಷಣಾ ಕಾರ್ಯಾಚರಣೆ ವೇಳೆ ಯುದ್ಧಪೀಡಿತ ದೇಶಗಳು ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ‘ಸೇಫ್ ಪ್ಯಾಸೇಜ್’ ನಿರ್ಮಿಸಿ ದಾರಿಮಾಡಿಕೊಟ್ಟಿವೆ. ಮೋದಿಯವರ ವಿದೇಶ ಪ್ರವಾಸದ ಬಗ್ಗೆ ಕುಹಕವಾಡುವ ವಿಪಕ್ಷಗಳಿಗೆ, ಅವರ ರಾಜತಾಂತ್ರಿಕ ನಿರ್ಧಾರಗಳಿಂದ ಭಾರತದಲ್ಲಾಗಿರುವ ಭಾರಿ ಬದಲಾವಣೆಯ ಬಗ್ಗೆ ಮಾತಾಡುವ ಧೈರ್ಯವಿಲ್ಲ.
ಒಟ್ಟಿನಲ್ಲಿ, ಭಾರತದ ರಾಜತಾಂತ್ರಿಕ ನಿರ್ಧಾರಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರ್ಜರಿ ಚರ್ಚೆಯಾಗುತ್ತಿರುವುದಂತೂ ನಿಜ.