Saturday, 14th December 2024

ಚೀನಾದ ಕುತಂತ್ರಕ್ಕೆ ಭಾರತ ಹೆಣೆಯಿತು ಪ್ರತಿತಂತ್ರ !

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಭಾರತ ಮತ್ತು ಚೀನಾದ ನಡುವಿನ ರಾಜತಾಂತ್ರಿಕ ಸಂಬಂಧ ಬಹಳಷ್ಟು ಹದಗೆಟ್ಟಿದೆ. ಚೀನಾ ಮತ್ತು ಭಾರತದ ಗಡಿವಿವಾದ ಇಂದು ನಿನ್ನೆಯದಲ್ಲ. ನಮ್ಮ ದೇಶದ ಅರುಣಾಚಲಪ್ರದೇಶದ ಮೇಲೆ ಚೀನಾ ಕಣ್ಣಿಟ್ಟಿದೆ. ಭಾರತದ ಈ ಭೂಪ್ರದೇಶದ ಮೇಲೆ ಏಕಪಕ್ಷೀಯ ಹಕ್ಕು ಸಾಧಿಸಲು ಚೀನಾ ಯತ್ನಿಸುತ್ತಿದೆ. ಈ ಕಾರ್ಯತಂತ್ರದ ಭಾಗವಾಗಿ, ಈ ಪ್ರದೇಶದ ಸ್ಥಳಗಳಿಗೆ ಚೀನಿ ಹೆಸರುಗಳನ್ನು ನೀಡಲು ಪ್ರಯತ್ನಿಸಿದೆ.

ಜಾಗತಿಕ ಮಟ್ಟದ ಪ್ರಚಲಿತ ವಿದ್ಯಮಾನವನ್ನು ಗಮನಿಸಿದರೆ ಗಮನಾರ್ಹ ಸಂಗತಿಗಳು ಕಂಡುಬರುತ್ತವೆ. ‘ಪಾಕ್ ಆಕ್ರಮಿತ ಕಾಶ್ಮೀರ ನೆಹರು ಮಾಡಿದ ಬ್ಲಂಡರ್’ ಎಂದು ಭಾರತದ ಗೃಹಮಂತ್ರಿ ಅಮಿತ್ ಶಾ ಸಂಸತ್ತಿನಲ್ಲಿ ಪುನರುಚ್ಚರಿಸಿದ್ದಾರೆ. ಭಾರತದಲ್ಲಿ ಮೋದಿಯವರ ಕಾರ್ಯವೈಖರಿಯನ್ನು ಹತ್ತಿಕ್ಕುವ ಹುನ್ನಾರವನ್ನು ನಮ್ಮ ನೆರೆಯ ರಾಷ್ಟ್ರಗಳು ಮಾಡುತ್ತಲೇ ಇವೆ. ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಆರ್ಥಿಕ ನೆಲೆಯಲ್ಲಿ ಹಿಂದಿಕ್ಕಲು ಚೀನಾ ಅಡ್ಡಹಾದಿಗೆ ಇಳಿದಿದೆ. ಇದಕ್ಕೆ ಸಾಕ್ಷಿಯಾಗಿದೆ ಚೀನಾದ ‘ಒನ್ ಬೆಲ್ಟ್, ಒನ್ ರೋಡ್’ ಯೋಜನೆಯ ಭಾಗವಾಗಿರುವ ‘ಚೀನಾ-ಪಾಕ್ ಇಕನಾಮಿಕ್ ಕಾರಿಡಾರ್’ (ಸಿಪಿಇಸಿ). ಸದಾ ದಂಗೆ ಏಳುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಬಲೂಚಿಸ್ತಾನದ ಮೂಲಕ ಇದು ಹಾದುಹೋಗುತ್ತದೆ.

ಇದು ಚೀನಾವನ್ನು ಯುರೋಪ್ ದೇಶಗಳಿಗೆ ಸಂಪರ್ಕಿಸುತ್ತದೆ. ಭಾರತ ಈ ಕಾರಿಡಾರ್ ಅನ್ನು ವಿರೋಽಸುತ್ತಲೇ ಬಂದಿದ್ದರೂ ನಿರ್ಮಾಣ ಕಾರ್ಯ ನಡೆಯುತ್ತಿದೆ. ಒಂದು ವೇಳೆ ಈ ಯೋಜನೆಯಲ್ಲಿ ಯಶಸ್ಸು ಪಡೆದರೆ ಪಾಕಿಸ್ತಾನವು ಕಾಶ್ಮೀರವನ್ನು ತನ್ನದಾಗಿಸಿಕೊಳ್ಳುತ್ತದೆ. ಚೀನಾ ಭಾರತಕ್ಕೆ ಹಾನಿಯಾಗುವಂತೆ ಬೇರೆ ದೇಶಗಳನ್ನು ನಮ್ಮ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಚೀನಾ ಆರ್ಥಿಕವಾಗಿ ಸದೃಢವಾಗಿದ್ದರೂ ಕೋವಿಡ್‌ನ ಏಟಿನಿಂದ ಇನ್ನೂ ಹೊರಬಂದಿಲ್ಲ. ಅಲ್ಲದೆ ಇತರ ರಾಷ್ಟ್ರಗಳೊಂದಿಗಿನ ಅದರ ಸಂಬಂಧ ಮೊದಲಿನಂತೆ ಉಳಿದಿಲ್ಲ.

ಅದರ ಮಹತ್ವಾಕಾಂಕ್ಷಿ ಯೋಜನೆ ‘ಬೆಲ್ಟ್ ಆಂಡ್ ರೋಡ್’ ಕೂಡ ಹಳ್ಳ ಹಿಡಿಯುತ್ತಿದೆ. ಒಂದೊಂದೇ ದೇಶಗಳು ಕೈ ತಪ್ಪುತ್ತಿವೆ, ಅನೇಕ ರಾಷ್ಟ್ರಗಳು ಚೀನಾ ಬಿಗಿಮುಷ್ಟಿಯಿಂದ ಹೊರಬರುವ ಯೋಚನೆ ಮಾಡುತ್ತಿವೆ. ಇಷ್ಟಾದರೂ ಚೀನಾ ಬುದ್ಧಿಯನ್ನು ಕಲಿತಂತೆ ಕಾಣುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಚೀನಾದ ತಂತ್ರಗಾರಿಕೆ. ಆದರೆ ಈಗ ಯೋಜನೆ, ತಂತ್ರಗಾರಿಕೆ ಎರಡೂ ತಲೆಕೆಳಗಾಗುತ್ತಿವೆ. ಇಷ್ಟೇ ಅಲ್ಲದೆ ಮತ್ತೊಂದು ಪ್ರಮುಖ ಬೆಳವಣಿಗೆ ಎಂದರೆ, ಜಗತ್ತಿನ ಅಭಿವೃದ್ಧಿ ಹೊಂದಿದ ಜಿ-೭ ರಾಷ್ಟ್ರಗಳಲ್ಲಿ ಒಂದಾಗಿರುವ ಇಟಲಿಯು ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ವಿಶ್ವದ ಕಾರ್ಖಾನೆ ಎಂದು ಕರೆಯಲ್ಪಡುವ ಚೀನಾದ ‘ಬೆಲ್ಟ್ ಆಂಡ್ ರೋಡ್ ಇನಿಷಿಯೆಟಿವ್’ನಿಂದ ಹೊರಬಂದಿದೆ.

ಇದರಿಂದ ಚೀನಾ ದೇಶಕ್ಕೆ ಭಾರಿ ಹಿನ್ನೆಡೆಯಾದಂತಾಗಿದೆ. ಇಟಲಿಯು ೨೦೨೧ರಲ್ಲಿ ಶೇ.೬.೯೯ರಷ್ಟು ಜಿಡಿಪಿ ದರವನ್ನು ಸಾಧಿಸಿತ್ತು; ೨೦೨೨ರಲ್ಲಿ ಅದರ ವಾರ್ಷಿಕ ಜಿಡಿಪಿ ದರ ಶೇ.೩.೬೭ಕ್ಕೆ ಕುಸಿತ ಕಂಡಿದೆ. ಇದು ಕೂಡ ಇಟಲಿಯು ಈ ‘ಬಿಆರ್‌ಐ’ನಿಂದ ಹೊರಬರಲು ಗಮನಾರ್ಹ ಕಾರಣವಾಗಿದೆ. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆ ‘ಬೆಲ್ಟ್ ಆಂಡ್ ರೋಡ್ ಇನಿಷಿಯೆಟಿವ್’ (ಬಿಆರ್‌ಐ) ಅನ್ನು ೨೦೧೩ರಲ್ಲಿ ಆರಂಭಿಸಲಾಯಿತು. ೧೫೦ ದೇಶಗಳೊಂದಿಗೆ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯ ಸಾಧಿಸಲು ಹುನ್ನಾರ ನಡೆಸಿರುವ ಚೀನಾದ ಈ ಯೋಜನೆಗೆ ಸುಮಾರು ಒಂದು ಟ್ರಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಲಾಗಿದೆ. ಈ ಯೋಜನೆಯ ಅನುಸಾರ ಚೀನಾ ಮತ್ತು ಇಟಲಿ ನಡುವಿನ ಬಿಆರ್‌ಐ ಒಪ್ಪಂದ ೨೦೨೪ರಲ್ಲಿ ಸ್ವಯಂ ನವೀಕರಣ ಗೊಳ್ಳುತ್ತದೆ. ಆದರೆ ಇಟಲಿ ಅದಕ್ಕಿಂತ ಮೊದಲೇ ಆ ಒಪ್ಪಂದದಿಂದ ಹೊರ ನಡೆದಿದೆ.

ಇದರಿಂದಾಗಿ ಭಾರತದ ಸುತ್ತ ಆರ್ಥಿಕ ಪಥವನ್ನು ನಿರ್ಮಿಸಿ ಹಿಡಿತ ಸಾಧಿಸುವ ಚೀನಾದ ಹುನ್ನಾರ ಈಗ ತಲೆಕೆಳಗಾಗಿದೆ. ಇಟಲಿ ಬಿಆರ್‌ಐಗೆ ಸಹಿ ಹಾಕಿದ ಮೇಲೆ ತನ್ನ ರಫ್ತು ವ್ಯವಹಾರ ಮತ್ತು ಹೂಡಿಕೆಯಲ್ಲಿ ಅಂಥ ನಿರೀಕ್ಷಿತ ಮಟ್ಟದ ಬದಲಾವಣೆಯನ್ನೇನೂ ಕಾಣಲಿಲ್ಲ, ಬದಲಾಗಿ ಅದು ಚೀನಾಕ್ಕೆ ಹೆಚ್ಚು ಲಾಭದಾಯಕವಾಯಿತು. ಇಟಲಿಯಿಂದ ಚೀನಾಕ್ಕೆ ಆದ ರಫ್ತು ವ್ಯವಹಾರದ ಪ್ರಮಾಣ ೧೪.೫ರಿಂದ ೧೮.೫ ಶತಕೋಟಿ ಯುರೋಗೆ ತಲುಪಿದ್ದರೆ, ಚೀನಾದಿಂದ ಇಟಲಿಗೆ ಆದ ರಫ್ತು ವ್ಯವಹಾರದ ಪ್ರಮಾಣವು ೩೫.೫ ಶತಕೋಟಿ ಯುರೋನಿಂದ ೫೦.೯ ಶತಕೋಟಿ ಯುರೋಗೆ ಏರಿಕೆ ಕಂಡಿತ್ತು. ಹಾಗಾಗಿ ಸಹಜವಾಗಿಯೇ ಇಟಲಿ ಈ ಯೋಜನೆಯಿಂದ ಹೆಜ್ಜೆಯನ್ನು ಹಿಂದಿಟ್ಟಿದೆ.

ಬಿಆರ್‌ಐ ಯೋಜನೆಯ ಒಪ್ಪಂದಕ್ಕೆ ಸುಮಾರು ೧೫೦ ದೇಶಗಳು ಸಹಿ ಹಾಕಿವೆ ಎಂದು ಚೀನಾ ಹೇಳುತ್ತಿದೆಯಾದರೂ ಫಿಲಿಪೈನ್ಸ್ ದೇಶ ಇಟಲಿಗಿಂತ ಮೊದಲೇ ಈ ಒಪ್ಪಂದದಿಂದ ಹಿಂದೆ ಸರಿದಿತ್ತು. ಈಗ ಇಟಲಿ, ಫಿಲಿಪೈನ್ಸ್ ನಂತೆ ಇತರ ದೇಶಗಳು ತಮ್ಮ ಸಹಭಾಗಿತ್ವ ಹಿಂಪಡೆಯುತ್ತಿವೆ. ಮುಂದೆ ಅರ್ಜೆಂಟೀನಾ ಕೂಡಾ ಬಿಆರ್‌ಐ ಯೋಜನೆಯಿಂದ ಹೊರಬರುವ ಸಾಧ್ಯತೆ ಇದೆ. ಈಗಾಗಲೇ ಗೊತ್ತಿರುವಂತೆ ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲದೆ ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಮಲೇಷ್ಯಾ, ಮಾಲ್ಡೀವ್ಸ್‌ಗಳು ಚೀನಾದ ಸಾಲದ ಸುಳಿಗೆ ಸಿಲುಕಿವೆ. ಈ ಪರಿಪಾಠಕ್ಕೆ ‘ಡೆಟ್ ಟ್ರ್ಯಾಪ್ ಡಿಪ್ಲೊಮೆಸಿ’ ಎಂಬ ಕುಖ್ಯಾತಿಯಿದೆ.

ಈಗ ಚೀನಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಾರಣ ಈಗಿನ ಅಧ್ಯಕ್ಷ ಷಿ ಜಿನ್‌ಪಿಂಗ್‌ರ ಆರ್ಥಿಕ ಮತ್ತು ಆಡಳಿತ ನೀತಿಗಳು ಚೀನಾವನ್ನು ನೆಲಕಚ್ಚುವಂತೆ ಮಾಡುತ್ತಿವೆ. ದೇಶದ ಅಭಿವೃದ್ಧಿಗೆ ಬೆನ್ನೆಲುಬಾಗಿರಬೇಕಾಗಿದ್ದ ಯುವ ಸಮುದಾಯ ಉದ್ಯೋಗವಿಲ್ಲದೆ ಆರ್ಥಿಕ ದಿವಾಳಿತನ ಎದುರಿಸುತ್ತಿದೆ. ಕೋವಿಡ್‌ನ ನಂತರ ರಿಯಲ್ ಎಸ್ಟೇಟ್ ಉದ್ಯಮ ಕೈಕೊಟ್ಟಿದೆ. ಬಂಡವಾಳ ಹೂಡಿಕೆದಾರರು ಬೇರೆ ದೇಶದತ್ತ ಮುಖ ಮಾಡುತ್ತಿದ್ದಾರೆ. ೧೮ ಟ್ರಿಲಿಯನ್ ಡಾಲರ್ ನಷ್ಟು ವ್ಯವಹಾರದಲ್ಲಿ ಶೇ.೨೫ರಷ್ಟು ಭಾಗವು ರಿಯಲ್ ಎಸ್ಟೇಟ್ ಉದ್ಯಮದ್ದೇ ಆಗಿತ್ತು. ಆದರೆ ಕಳೆದ ೨೯ ವರ್ಷಗಳಲ್ಲಿ ಇದೇ ಮೊದಲಿಗೆ ಚೀನಾ ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಕಳೆದ ನವೆಂಬರ್ ವೇಳೆಗೆ ಶೇ.೫ರಷ್ಟು ಜನರು ಖರೀದಿಸುವ ಶಕ್ತಿಯನ್ನು ಕಳೆದುಕೊಂಡಿದ್ದರು. ಚೀನಾದ ಜಿಡಿಪಿ ದರವನ್ನು ಗಮನಿಸಿದರೆ, ಅದು ನಿರಂತರ ಕುಸಿತ ಕಂಡಿರುವುದು ಅರಿವಾಗುತ್ತದೆ. ಕಳೆದ ತ್ರೈಮಾಸಿಕ ಜಿಡಿಪಿ ದರ ಶೇ.೪.೯ರಷ್ಟು ಇತ್ತು. ನಿರೀಕ್ಷಿತ ಬೆಳವಣಿಗೆಯನ್ನು ಕಾಣದಿರುವುದು ಚೀನಾದ ಆರ್ಥಿಕತೆಯ ಇಂದಿನ ಪರಿಸ್ಥಿತಿಯನ್ನು ತಿಳಿಸುತ್ತದೆ. ಇನ್ನು, ಭಾರತ ಮತ್ತು ಚೀನಾದ ನಡುವೆ ಸಾಮಾನ್ಯ ವ್ಯವಹಾರ ಸಂಬಂಧವಿದ್ದರೂ, ಉಭಯ ರಾಷ್ಟ್ರಗಳ
ರಾಜತಾಂತ್ರಿಕ ಸಂಬಂಧ ಬಹಳಷ್ಟು ಹದಗೆಟ್ಟಿದೆ. ಚೀನಾ ಮತ್ತು ಭಾರತದ ಗಡಿವಿವಾದ ಇಂದು ನಿನ್ನೆಯದಲ್ಲ. ನಮ್ಮ ದೇಶದ ಅರುಣಾಚಲಪ್ರದೇಶದ ಮೇಲೆ ಚೀನಾ ಕಣ್ಣಿಟ್ಟಿದೆ. ಭಾರತದ ಈ ಭೂಪ್ರದೇಶದ ಮೇಲೆ ಏಕಪಕ್ಷೀಯ ಹಕ್ಕು ಸಾಧಿಸಲು ಚೀನಾ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಈ ಕಾರ್ಯತಂತ್ರದ ಭಾಗವಾಗಿ, ಈ ಪ್ರದೇಶದ ಸ್ಥಳಗಳಿಗೆ ಚೀನಿ ಹೆಸರುಗಳನ್ನು ನೀಡಲು ಪ್ರಯತ್ನಿಸಿದೆ.

ಆದರೆ ಇದನ್ನು ಭಾರತ ವಿರೋಽಸಿದೆಯಲ್ಲದೆ, ಇದು ನಮ್ಮ ದೇಶದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದೆ. ಇನ್ನೊಂದು ಮುಖ್ಯ ವ್ಯವಹಾರದ ಕೊಂಡಿ
‘ಚೀನಾ-ಪಾಕ್ ಇಕನಾಮಿಕ್ ಕಾರಿಡಾರ್’ (ಸಿಪಿಇಸಿ). ಭಾರತದ ವಿರೋಧದ ನಡುವೆಯೂ ಇದು ನಿರ್ಮಾಣವಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)-ಗಿಲ್ಗಿಟ್ ಬಾಲ್ಟಿಸ್ತಾನದ ಮಧ್ಯೆ ಹಾದುಹೋಗುವ ಈ ಕಾರಿಡಾರ್ ಭಾರತಕ್ಕೆ ಸದಾ ಅಪಾಯ ತಂದೊಡ್ಡುವ ಆತಂಕ ಇದ್ದೇ ಇದೆ. ‘ಸಿಪಿಇಸಿ’ಯು ‘ಒನ್ ಬೆಲ್ಟ್, ಒನ್ ರೋಡ್’ ಯೋಜನೆಯ ಭಾಗವಾಗಿದೆ. ಈ ಕಾರಿಡಾರ್‌ಗೆ ಬಲೂಚಿಸ್ತಾನ್ ದಂಗೆಕೋರರ ವಿರೋಧವೂ ಇದೆ. ಚೀನಾದ ಕಾರ್ಮಿಕರು ಪಾಕಿಸ್ತಾನದ ಗ್ವಾದರ್-ಬಾಡಿನ್‌ನ ಬಂದರಿಗೆ ಹೋಗುವ ವಾಹನದ ಮೇಲೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಎರಡು ಬಾರಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಚೀನಾದ ಹಲವಾರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಯಾದ ‘ಭಾರತ -ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (ಐಎಂಇಸಿ) ಏಷ್ಯಾ, ಪರ್ಷಿಯನ್ ಗಲ್ ಮತ್ತು ಯುರೋಪ್ ನಡುವೆ ವ್ಯವಹಾರಾಭಿವೃದ್ದಿಗೆ ಉತ್ತೇಜನ ನೀಡುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ , ಸೌದಿ ಅರೇಬಿಯಾ, ಜೋರ್ಡಾನ್, ಇಸ್ರೇಲ್, ಗ್ರೀಸ್ ಮತ್ತು ಇಟಲಿ ಮೂಲಕ ಭಾರತದಿಂದ ಯುರೋಪ್‌ಗೆ ಈ ಕಾರಿಡಾರ್ ತಲುಪುತ್ತದೆ. ಇದು ಬಹುಪ್ರಯೋಜನಕಾರಿ ಯೋಜನೆಯಾಗಿದ್ದು, ಹಡಗು, ರೈಲ್ವೆ ಮತ್ತು ರಸ್ತೆಮಾರ್ಗಗಳ ಮೂಲಕ ವ್ಯವಹಾರಕ್ಕೆ ಉತ್ತೇಜನ ನೀಡುತ್ತದೆ.

ಇಟಲಿ ಮತ್ತು ಭಾರತದ ನಡುವಿನ ವ್ಯಾವಹಾರಿಕ ಹಾಗೂ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಸದೃಢವಾಗುತ್ತಿದೆ. ಇಟಲಿಯನ್ನು ವ್ಯವಹಾರದ ಮುಖ್ಯದ್ವಾರ ವನ್ನಾಗಿಸಿಕೊಂಡು ಯೋಜಿಸಿದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‌ಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಸಹಿ ಹಾಕಿದ್ದಾರೆ. ಸದ್ಯ ಈ ಕಾರಿಡಾರ್ ಯೋಜನೆಯು ಇಸ್ರೇಲ್- ಹಮಾಸ್ ಸಂಘರ್ಷದ ಪರಿಣಾಮ ನಿಧಾನಗತಿಯಲ್ಲಿ ಸಾಗುತ್ತಿದೆ. ಆದರೆ ಮುಂದೆ ಈ ‘ಐಎಂಇಸಿ’ ಯೋಜನೆ ಆರ್ಥಿಕ ಅಭಿವೃದ್ಧಿಗೆ ಪುಷ್ಟಿ ನೀಡಲಿದೆ. ಭಾರತವು ಕಳೆದ ತ್ರೈಮಾಸಿಕ ಅವಧಿಯಲ್ಲಿ (ಸೆಪ್ಟೆಂಬರ್) ಶೇ.೭.೬ರಷ್ಟು ಜಿಡಿಪಿ ದರವನ್ನು ಸಾಧಿಸಿದೆ.

ಈ ಯೋಜನೆ ಭಾರತದ ಅಭಿವೃದ್ಧಿಗೆ ಒಂದು ಗಮನಾರ್ಹ ಮೈಲುಗಲ್ಲು ಆಗುವುದರಲ್ಲಿ ಸಂದೇಹವಿಲ್ಲ. ಭಾರತ ಇತರ ಜಾಗತಿಕ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದುತ್ತಿದ್ದು, ಆರ್ಥಿಕವಾಗಿ ಪ್ರಾಬಲ್ಯವನ್ನು ಸಾಽಸುತ್ತಿದೆ. ಭಾರತವು ತನ್ನ ರಾಜತಾಂತ್ರಿಕ ನಿಪುಣತೆಯನ್ನು ಬಳಸಿ, ಚೀನಾದ ಆರ್ಥಿಕ ನೀತಿಯ
ಪರಿಽಯೊಳಗಿಂದ ಜಗತ್ತಿನ ವಿವಿಧ ದೇಶಗಳನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನದಲ್ಲಿ ಮೇಲುಗೈ ಸಾಧಿಸಿದೆ ಎನ್ನುವುದಕ್ಕೆ ಪಾಶ್ಚಿಮಾತ್ಯ ದೇಶ ಇಟಲಿ ಹಾಗೂ ಭಾರತದ ನಡುವಿನ ಸಂಬಂಧವೇ ಸಾಕ್ಷಿ ಯಾಗಿದೆ. ಸಾಲದ ಹೊರೆಯನ್ನು ಹೇರಿ ದೇಶಗಳ ನಾಶಕ್ಕೆ ಕಾರಣವಾಗುತ್ತಿರುವ ಚೀನಾಕ್ಕೆ, ಭಾರತವು ನೀಡಿದ ‘ಒಳ ಏಟು’ ಆಗಿದೆ ಯೋಜನೆಯಿಂದ ಇಟಲಿಯ ನಿರ್ಗಮನ. ಜಗತ್ತನ್ನು ಪ್ರೀತಿ-ವಿಶ್ವಾಸದಿಂದ ಗೆಲ್ಲಬೇಕೆ ಹೊರತು ಆರ್ಥಿಕ ಸುಳಿಯಿಂದಲ್ಲ ಎಂಬ ರಾಜತಾಂತ್ರಿಕ
ಪಾಠವನ್ನು ಭಾರತವು ಚೀನಾಕ್ಕೆ ‘ಐಎಂಇಸಿ’ ಮೂಲಕ ಪರೋಕ್ಷವಾಗಿ ಕಲಿಸಿದೆ.