Thursday, 31st October 2024

Shashi Shekher Column: ಜನಮನ ಗೆದ್ದ ಇಂದಿರಾ ಗಾಂಧಿ ಎಂಬ ʼಉಕ್ಕಿನ ಮಹಿಳೆʼ

ಸಂಸ್ಮರಣೆ

ಶಶಿ ಶೇಖರ್

ಜನರು ಏನೇ ಮಾತಾಡಿಕೊಳ್ಳಬಹುದು, ಆದರೆ ಭಾರತಕ್ಕೆ ಇಂದಿರಾ ನೀಡಿದ ಕೊಡುಗೆ ಮಹತ್ತರವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಆಕೆ ಗದ್ದುಗೆಯೇರಿದಾಗ ಭಾರತದಲ್ಲಿ ಆಹಾರದ ಕೊರತೆಯಿತ್ತು.
ಅಮೆರಿಕದಿಂದ ಗೋಧಿಯನ್ನು ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಆದರೆ, ಇಂದಿರಾ ಸಾರಥ್ಯದಲ್ಲಾದ ‘ಹಸಿರು ಕ್ರಾಂತಿ’ಯು ದೇಶವನ್ನು ಈ ವಿಷಮಸ್ಥಿತಿಯಿಂದ ಹೊರತಂದಿದ್ದು ನಿಜ.

ಅಕ್ಟೋಬರ್ 31, ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಕರಾಳದಿನ. ಕಾರಣ, ಭಾರತದ ಪ್ರಧಾನ ಮಂತ್ರಿ ಯಾಗಿದ್ದ ಇಂದಿರಾ ಗಾಂಧಿ ಎಂಬ ಧೀಮಂತ ಹೆಣ್ಣಿನ ಹತ್ಯೆಯಾದ ದಿನವದು. ಇಂದಿರಾ ಹತ್ಯೆಯಾಗಿ ಇಂದಿಗೆ ಭರ್ತಿ 40 ವರ್ಷ.

ಅವರನ್ನು ಸುತ್ತುವರಿದಿದ್ದ ವಿವಾದಗಳೇನೇ ಇರಲಿ, ಆಕೆಯನ್ನು ಇಂದೂ ನೆನಪಿಸಿಕೊಳ್ಳುತ್ತಿದ್ದೇವೆ, ಮುಂದೆಯೂ ಆಕೆ ನೆನಪಲ್ಲಿ ಉಳಿಯುತ್ತಾರೆ ಎಂಬುದು ಖರೆ. ಕಾರಣ, ಸ್ವತಂತ್ರ ಭಾರತ ಇಟ್ಟ ಅನುಪಮ ಹೆಜ್ಜೆಗಳಲ್ಲಿ ಆಕೆಯ ಅನನ್ಯ ಕೊಡುಗೆಯಿದೆ. ಕೊಂಚ ಫ್ಲ್ಯಾಷ್‌ಬ್ಯಾಕ್‌ಗೆ ತೆರಳೋಣ. ಇದು ಬರೋಬ್ಬರಿ 50 ವರ್ಷಗಳ ಹಿಂದಿನ ಕಥೆ. ಉತ್ತರ ಪ್ರದೇಶದ ಶಿಕೋಹಾಬಾದ್‌ನಲ್ಲಿ 1974ರ ಫೆಬ್ರವರಿಯ ಒಂದು ಮಟಮಟ ಮಧ್ಯಾಹ್ನವದು. ಅದು ವಿಧಾನ ಸಭಾ ಚುನಾವಣೆಯ ಕಾಲಘಟ್ಟ. ಆಗ ಪ್ರಧಾನಿ ಗದ್ದುಗೆಯಲ್ಲಿದ್ದ ಇಂದಿರಾ ತಮ್ಮ ರಾಜಕೀಯ ಜೀವನದ ಉತ್ತುಂಗದಲ್ಲಿದ್ದರು.

ಚುನಾವಣಾ ಪ್ರಚಾರಸಭೆಗೆಂದು ಬಂದ ಇಂದಿರಾ ಚಕಚಕನೆ ವೇದಿಕೆಯೇರಿದರು. ಮರುಕ್ಷಣವೇ, ಅದ್ಯಾರೋ ಹಿರಿಯ ಕಾಂಗ್ರೆಸ್ ನಾಯಕರ ಹಿಂದೆ ನಿಂತಿದ್ದ ಮಹಿಳಾ ಅಭ್ಯರ್ಥಿಯನ್ನು ಸನ್ನೆಮಾಡಿ ಕರೆದು, ವೇದಿಕೆಯ ಮುಂಭಾಗದಲ್ಲಿ ನಿಲ್ಲುವಂತೆ ಸೂಚಿಸಿದರು ಇಂದಿರಾ. ನಂತರ ನಡೆದಿದ್ದೇ ಚಮತ್ಕಾರ. ಆಕೆಯೊಂದಿಗೆ ಮಾತಿ
ಗಿಳಿದ ಇಂದಿರಾ, “ಅಲ್ಲಾ ಕಣಮ್ಮಾ, ನೀನು ಇಷ್ಟೊಂದು ಸಂಕೋಚದವಳಾಗಿಬಿಟ್ಟರೆ ಜನರನ್ನು ಹೇಗೆ ಮುನ್ನಡೆಸು
ತ್ತೀಯ? ಜನನಾಯಕಿ ಹೇಗಾಗುತ್ತೀಯ?” ಎಂದು ತಮಾಷೆಯ ದನಿಯಲ್ಲೇ ಬುದ್ಧಿವಾದ ಹೇಳಿ ಎಚ್ಚರಿಸಿದರು. ಸಾಲ
ದೆಂಬಂತೆ, ಆಕೆಯ ಭುಜದ ಮೇಲೆ ತಮ್ಮ ಕೈಯಿರಿಸಿ, “ಕೈಕಟ್ಟಿಕೊಂಡು ನೇರವಾಗಿ ನಿಂತು, ಆ ಜನರೆಲ್ಲಾ ನಿನ್ನನ್ನೇ
ಹೇಗೆ ದಿಟ್ಟಿಸಿ ನೋಡುತ್ತಿದ್ದಾರೆ ಎಂಬುದನ್ನೊಮ್ಮೆ ಅವಲೋಕಿಸು” ಎಂದರು. ಅಧಿನಾಯಕಿಯ ಈ ನಡೆ-ನುಡಿ ಯನ್ನು ಪ್ರತ್ಯಕ್ಷ ಕಂಡ ಜನರ ಹರ್ಷೋದ್ಗಾರ ಮುಗಿಲುಮುಟ್ಟಿತು!

ಇದಾಗಿ 10 ವರ್ಷಗಳ ನಂತರ ಇಂದಿರಾ ಕಣ್ಮರೆಯಾದರು. ಹೌದು, 1984ರ ಅಕ್ಟೋಬರ್ 31ರಂದು ಅವರ
ಹತ್ಯೆಯಾಯಿತು. ಅಷ್ಟು ಹೊತ್ತಿಗಾಗಲೇ ಪತ್ರಕರ್ತನಾಗಿದ್ದ ನನಗೆ ಅಂದು ಬೆಳಗ್ಗೆ ಸುಮಾರು 11 ಗಂಟೆಗೆ ನನ್ನ
ಕಚೇರಿಯಿಂದ ಕರೆ ಬಂತು- ಇಂದಿರಾರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಬರೋಬ್ಬರಿ 30 ಗುಂಡುಗಳು ಆಕೆಯ ದೇಹವನ್ನು ಹೊಕ್ಕಿದ್ದವು. ಸಾವಿನ ಅಧಿಕೃತ ಘೋಷಣೆಯಾಗಿದ್ದು ಸಂಜೆ ೬ರ ನಂತರವೇ.
ಆದರೆ, ಅಂದು ಮಧ್ಯಾಹ್ನದ ಹೊತ್ತಿಗಾಗಲೇ ದೇಶದ ವಿವಿಧೆಡೆ ಗಲಭೆ-ಹಿಂಸಾಚಾರ ಭುಗಿಲೆದ್ದಿದ್ದವು. ಆ ಘಟ್ಟದಲ್ಲಿ, ಅಲಹಾಬಾದ್‌ನಲ್ಲಿ (ಈಗಿನ ಪ್ರಯಾಗ್‌ರಾಜ್ ನಲ್ಲಿ) ಕಂಡ ರಕ್ತಸಿಕ್ತ ಘೋರ ದೃಶ್ಯಗಳನ್ನು ನನಗಿನ್ನೂ ಮರೆಯ ಲಾಗುತ್ತಿಲ್ಲ. ಜನರು ಇಂದಿರಾರನ್ನು ಅತಿಯಾಗಿ ಪ್ರೀತಿಸುತ್ತಿದ್ದುದರಿಂದ, ಆಕೆಯ ಸಾವಿನ ನಂತರ ಹೀಗೆ ಕಂಡ ದೃಶ್ಯಗಳು ಸಹಜವಾಗಿಯೇ ಆ ಭುಗಿಲೆದ್ದ ಜನರ ಕೋಪದ ಫಲಶ್ರುತಿಗಳೇ ಆಗಿದ್ದವು, ಅದೊಂದು ‘ಸ್ವಯಂಪ್ರೇರಿತ ಸ್ಪೋಟ’ವಾಗಿತ್ತು. ಸ್ಥಿತಪ್ರಜ್ಞರೂ ಅಂದು ಕೋಪೋದ್ರಿಕ್ತ ರಾಗಿದ್ದನ್ನು ನಾನು ಕಂಡೆ.

ಇಂದಿರಮ್ಮನ ಜನಪ್ರಿಯತೆ ಯಾವ ಮಟ್ಟಿಗಿತ್ತು ಎಂಬುದನ್ನು ಚಿತ್ರಸದೃಶವಾಗಿ ಕಟ್ಟಿಕೊಡಲು ಈ ಎರಡು ಘಟನೆಗಳನ್ನಿಲ್ಲಿ ಉಲ್ಲೇಖಿಸಬೇಕಾಯಿತು. ಏಕೆಂದರೆ, ಮಹಾನ್ ವ್ಯಕ್ತಿಗಳ ಕುರಿತು ನಿರ್ಣಯಿಸುವಾಗ, ‘ಪ್ರತಿ ಯೊಂದು ಮಹತ್ವದ ಘಟನೆಯೂ, ಘಟನಾವಳಿಗಳ ಸರಣಿಯ ಒಂದು ಪರಾಕಾಷ್ಠೆಯೇ ಆಗಿರುತ್ತದೆ’ ಎಂದರಿಯದೆ ಸಂದರ್ಭಗಳನ್ನು ‘ಸರಿ-ತಪ್ಪುಗಳ’ ಕನ್ನಡಕದ ಮೂಲಕ ನೋಡಿ ‘ಇದಮಿತ್ಥಂ’ ಎಂದು ನಿರ್ಧರಿಸಿಬಿಡುವ ಪ್ರವೃತ್ತಿ ನಮ್ಮಲ್ಲಿದೆ. ಜನರು ಏನೇ ಮಾತಾಡಿಕೊಳ್ಳಬಹುದು, ಆದರೆ ಭಾರತಕ್ಕೆ ಇಂದಿರಾ ನೀಡಿದ ಕೊಡುಗೆ ಮಹತ್ತರ ವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಆಕೆ ಗದ್ದುಗೆಯೇರಿದಾಗ ಭಾರತದಲ್ಲಿ ಆಹಾರದ ಕೊರತೆಯಿತ್ತು. ಅಮೆರಿಕದಿಂದ ಗೋಧಿಯನ್ನು ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ದೇಶ ಸಿಲುಕಿತ್ತು; ಆ ಗೋಧಿ ಕೂಡ ಅಮೆರಿಕದಲ್ಲಿ ಕೋಳಿಗಳಿಗೆ ಉಣಿಸುವಂಥ ಗುಣಮಟ್ಟದ್ದಾಗಿತ್ತು ಎನ್ನಿ!

ಆದರೆ, ಇಂದಿರಾ ಸಾರಥ್ಯದಲ್ಲಾದ ‘ಹಸಿರು ಕ್ರಾಂತಿ’ಯು ದೇಶವನ್ನು ಈ ವಿಷಮಸ್ಥಿತಿಯಿಂದ ಹೊರತಂದಿದ್ದು ನಿಜ.
ಮಿಕ್ಕಂತೆ, ಪಾಕಿಸ್ತಾನವನ್ನು ಒಡೆದು ಬಾಂಗ್ಲಾದೇಶವನ್ನು ಹುಟ್ಟುಹಾಕುವ ಯಜ್ಞಕ್ಕೆ ಅಧ್ವರ್ಯುವಾಗಿದ್ದು, ಆ ಪ್ರದೇಶದಲ್ಲಿ ಭಾರತದ ಪ್ರಾಬಲ್ಯವನ್ನು ಸ್ಥಾಪಿಸಿದ್ದು ಆಕೆಯೇ. ಭಾರತ ಒಕ್ಕೂಟಕ್ಕೆ ಸಿಕ್ಕಿಂ ಪ್ರದೇಶವು ಸೇರ್ಪಡೆ ಯಾಗಿದ್ದು ಆಕೆಯ ಸಾಧನಾ ಕಿರೀಟಕ್ಕೆ ಸಂದ ಮತ್ತೊಂದು ಗರಿ. ಈ ಎಲ್ಲ ಕಸರತ್ತುಗಳನ್ನು ನಿರ್ವಹಿಸುವಾಗ ಬಾಹ್ಯ ಮತ್ತು ಆಂತರಿಕ ನೆಲೆಯಲ್ಲಿ ಸಹಜವಾಗೇ ಎದುರಾದ ತೀವ್ರ ಒತ್ತಡಗಳನ್ನು ಸಮರ್ಥವಾಗಿಯೇ ಎದುರಿಸಿ ನಿಭಾಯಿಸಿದ ಗಟ್ಟಿಗಿತ್ತಿ ಇಂದಿರಮ್ಮ.

ಭಾರತ-ಪಾಕಿಸ್ತಾನಗಳ ನಡುವೆ ಉದ್ವಿಗ್ನ ಸ್ಥಿತಿ ರೂಪುಗೊಂಡಿದ್ದಾಗ, ಅಮೆರಿಕದ ಅಂದಿನ ಅಧ್ಯಕ್ಷ ರಿಚರ್ಡ್
ನಿಕ್ಸನ್‌ರೊಂದಿಗಿನ ‘ಸೌಹಾರ್ದಯುತವಲ್ಲದ’ ಮಾತುಕತೆ ಯನ್ನು ಇಂದಿರಾ ನಿರುದ್ವಿಗ್ನವಾಗಿಯೇ ನಿರ್ವಹಿಸಿ ಗಟ್ಟಿ
ನಿಲುವು ತಳೆದಿದ್ದು ಆಕೆಯೊಬ್ಬ ‘ಉಕ್ಕಿನ ಮಹಿಳೆ’ ಎಂಬುದನ್ನು ಸಾಬೀತುಪಡಿಸಿತ್ತು. ಭಾರತದ ಮೇಲೆ ಅಪಾರ
ಪ್ರೇಮವಿದ್ದ ಈ ಮಹಿಳೆ, ತಾನೇ ಶಕ್ತಿಶಾಲಿ ಎಂದು ಮೆರೆಯುತ್ತಿದ್ದ ಅಮೆರಿಕದ ಅಧ್ಯಕ್ಷನ ಸೊಕ್ಕನ್ನು ಇಳಿಸಿದ್ದು
ದಿಟ. ಅದೇ ವೇಳೆಗೆ, ಹಿಂದಿನ ಸೋವಿಯತ್ ಒಕ್ಕೂಟದೊಂದಿಗೆ ಆಕೆ ಮಾಡಿಕೊಂಡ ಒಡಂಬಡಿಕೆಯಿಂದಾಗಿಯೇ
ಭಾರತಕ್ಕೊಬ್ಬ ಕಾಯಂ ಗೆಳೆಯ ಸಿಕ್ಕಂತಾಯಿತು.

ಅಂದಿನಿಂದ ಇಂದಿನವರೆಗೂ ಭಾರತದ ಆಪ್ತಮಿತ್ರನಾಗಿರುವ ರಷ್ಯಾ, ಭದ್ರತಾ ಸಾಧನ-ಸಲಕರಣೆಗಳು ಮತ್ತು ಶಸಾಸಗಳನ್ನು ಭಾರಿ ಪ್ರಮಾಣದಲ್ಲಿ ನಮಗೆ ಪೂರೈಸುತ್ತಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಹಸಿದು ಕಂಗೆಟ್ಟಿದ್ದ ಲಕ್ಷಾಂತರ ಬಾಯಿಗಳಿಗೆ ಆಹಾರ ಉಣಿಸಿದ್ದು, ಭಾರತದ ಭೂಸೀಮೆಯನ್ನು ವಿಸ್ತರಿಸಿದ್ದು, ‘ಬದ್ಧವೈರಿ’ ಪಾಕಿಸ್ತಾನ ವನ್ನು ವಿಭಜಿಸಿದ್ದು, ವಿವಿಧ ರಾಷ್ಟ್ರಗಳ ಜತೆಗಿನ ಬಾಂಧವ್ಯದಲ್ಲಿ ಭಾರತಕ್ಕೊಂದು ವಿಶಿಷ್ಟ ಸ್ಥಾನಮಾನ
ಕಲ್ಪಿಸಿದ್ದು- ಈ ಎಲ್ಲ ಸಾಧನೆಗಳು ಇಂದಿರಾರನ್ನು ಭಾರತದ ಮಹೋನ್ನತ ನಾಯಕರ ಸಾಲಿನಲ್ಲಿ ನಿಲ್ಲಿಸಿವೆ. ಹಿಂದೆ ಭಾರತವನ್ನು ಆಳುತ್ತಿದ್ದ ರಾಜಮನೆತನಗಳಿಗೆ ನೀಡಲಾಗುತ್ತಿದ್ದ ‘ರಾಜಧನ’ವನ್ನು ನಿಲ್ಲಿಸಿದ್ದು ಕೂಡ ಪ್ರಜಾಪ್ರಭುತ್ವ ದಲ್ಲಿ ಇರಬೇಕಾದ ಸಮಾನತೆಯಲ್ಲಿ ಆಕೆಗಿದ್ದ ನಂಬಿಕೆಯ ದ್ಯೋತಕವೇ.

ಆದಾಗ್ಯೂ, ಇವೆಲ್ಲವೂ ಆಕೆಯ ವ್ಯಕ್ತಿತ್ವದ ಒಂದು ಮಗ್ಗುಲಿನ ಪ್ರತಿಬಿಂಬಗಳಷ್ಟೇ. ಏಕೆಂದರೆ ಇಂದಿರಾ ಒಬ್ಬ
ನಿರಂಕುಶಾಧಿಕಾರಿಯೂ ಆಗಿದ್ದರು, ಅದರಲ್ಲಿ ಲವಲೇಶವೂ ಸಂದೇಹವಿಲ್ಲ. 1966-1977ರ ನಡುವೆ, ಪ್ರಜಾಸತ್ತಾತ್ಮಕ ವಾಗಿ ಚುನಾಯಿತವಾಗಿದ್ದ 39 ರಾಜ್ಯ ಸರಕಾರಗಳನ್ನು ಸಂವಿಧಾನದ 356ನೇ ವಿಧಿಯನ್ನು ಬಳಸಿಕೊಂಡು ಆಕೆ ಕಿತ್ತೆಸೆದಿದ್ದು ಇದಕ್ಕೆ ಸಾಕ್ಷಿ.

ಭಾರತದ ಪ್ರಧಾನಿಯಾಗಿದ್ದ ಅವಧಿಯುದ್ದಕ್ಕೂ ಆಕೆ 356ನೇ ವಿಧಿಯನ್ನು ಒಟ್ಟು 48 ಬಾರಿ ಬಳಸಿಕೊಂಡರು ಎನ್ನುತ್ತದೆ ‘ಲೀಗಲ್ ಇಂಡಿಯಾ’ ಎಂಬ ಜಾಲತಾಣ. 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾರನ್ನು ಕೆಳಗಿಳಿಸಿ ಗದ್ದುಗೆಯೇರಿದ ಜನತಾ ಪಕ್ಷವೂ, ಕಾಂಗ್ರೆಸ್‌ನ ಆಡಳಿತವಿದ್ದ ೯ ರಾಜ್ಯ ಸರಕಾರಗಳನ್ನು ವಜಾಗೊಳಿಸಿ ತಾದರೂ, ಅದು ಇಂದಿರಾರ ದಾಖಲೆಯ ಸನಿಹಕ್ಕೂ ಬರಲಿಲ್ಲ ಎನ್ನಿ! ದೇಶದ ಮೇಲೆ ತುರ್ತು ಪರಿಸ್ಥಿತಿ
ಹೇರುವ ನಿರ್ಧಾರವು ಇಂದಿರಮ್ಮನ ಅತಿದೊಡ್ಡ ತಪ್ಪಾಗಿದ್ದರ ಜತೆಗೆ, ಆಕೆಯ ಎಲ್ಲಾ ಮಹತ್ತರ ಸಾಧನೆಗಳನ್ನೂ ಮಸು ಕಾಗಿಸಿಬಿಟ್ಟಿತು.

‘ಆಪರೇಷನ್ ಬ್ಲೂ ಸ್ಟಾರ್’ ಎಂಬ ಕಾರ್ಯಾಚರಣೆ ಆಕೆಯಿಂದಾದ ಮತ್ತೊಂದು ಪ್ರಮಾದ. ಆಂತರಿಕ ಸಮಸ್ಯೆ ಯೊಂದನ್ನು ಹಣಿ ಯಲು ಆಕೆ ಸೇನೆಯನ್ನು ಬಳಸಿದ್ದು, ಸರಕಾರಿ ಯಂತ್ರದ ದೌರ್ಬಲ್ಯದ ಪರಿಯನ್ನು ತೋರಿಸಿ ಬಿಟ್ಟಿತು. ಅಲ್ಲಿಂದೀಚೆಗೆ ರಾಜೀವ್ ಗಾಂಧಿಯವರಿಂದ ಮೊದಲ್ಗೊಂಡು ಪ್ರತಿಯೊಬ್ಬ ಪ್ರಧಾನಿಯೂ ಇಂಥ ನಡೆಯಿಂದ ಹಿಂದೆ ಸರಿದಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ನಲ್ಲಿ ಕಾಣುತ್ತಿರುವ ಗೋಜಲು-ಗೊಂದಲ, ಅವ್ಯವಸ್ಥೆಗಳ ಬೀಜವು ಬಿತ್ತಲ್ಪಟ್ಟಿದ್ದು ಇಂದಿರಮ್ಮನ ಕಾಲದಲ್ಲೇ.

ನೆಹರು-ಗಾಂಧಿ ಕುಟುಂಬದ ಸಮ್ಮುಖದಲ್ಲಿ ಒಂದಿಡೀ ಪಕ್ಷವೇ ಮೊಣಕಾಲು ಊರುವಂಥ ಪದ್ಧತಿ ಶುರುವಾಗಿದ್ದು ಆಕೆಯ ಕಾಲದಲ್ಲೇ! ಇದೆಲ್ಲವನ್ನೂ ಓದಿದ ನಂತರ, “ಹಾಗಾದರೆ, ಇಂದಿರಾ ಒಬ್ಬ ನಾಯಕಿಯೋ ಅಥವಾ ಖಳ ನಾಯಕಿಯೋ” ಎಂದು ಪ್ರಶ್ನೆ ನಿಮ್ಮಲ್ಲಿ ಸುರಿಸಬಹುದು. ನಾಯಕರೆನಿಸಿಕೊಂಡವರು ದಿಟ್ಟ ಹಾಗೂ ನಿಷ್ಠುರ ನಿರ್ಣಯಗಳನ್ನು ಕೈಗೊಳ್ಳಲು ನೆರವಾಗುವ ಸ್ಥಿರಸಂಕಲ್ಪವೇ, ತಮ್ಮ ಸಾಮರ್ಥ್ಯಗಳನ್ನು ಅತಿಯಾಗಿ ಅಂದಾಜಿಸು ವಂಥ ಭ್ರಮೆಗೂ ಅವರನ್ನು ತಳ್ಳಿಬಿಡುತ್ತದೆ. ಹೊಸಹಾದಿಯಲ್ಲಿ ಹೆಜ್ಜೆಹಾಕುವಂಥ ಧೈರ್ಯ ತೋರುವ ಪ್ರತಿಯೊಬ್ಬ ನಾಯಕನೂ ಇಂಥ ಟೀಕೆ-ಟಿಪ್ಪಣಿಯನ್ನು ಎದುರಿಸಲೇಬೇಕಾಗುತ್ತದೆ.

ಮಾತ್ರವಲ್ಲ, ಇತಿಹಾಸದ ದಿಕ್ಕನ್ನು ಬದಲಿಸುವ ನಿಟ್ಟಿನಲ್ಲಿ ಅನ್ವೇಷಣೆಗೆ ಹೊರಟ ಮಹಾನ್ ನಾಯಕರು ಕೂಡ,
ಇತಿಹಾಸದ ಶಾಪಕ್ಕೆ ಒಳಗಾಗುತ್ತಾರೆ ಎಂಬುದು ದಿಟ.

(ಲೇಖಕರು ಹಿರಿಯ ಪತ್ರಕರ್ತರು)

ಇದನ್ನೂ ಓದಿ: Shashidhara Halady Column: ಹಕ್ಕಿ ಫೋಟೋ ತೆಗೆಯದೇ ವಾಪಸಾದೆ !