Thursday, 12th December 2024

ಬರಿಯ ಮಾತು ಅಷ್ಟೇ!

ಅಭಿಮತ

ಕೆ.ಎಸ್.ನಾಗರಾಜ್

ಭಾರತ ದೇಶವನ್ನು ರಕ್ಷಿಸುವಲ್ಲಿ ಮತ್ತು ಪಾಕಿಸ್ತಾನಕ್ಕೆ ಪಾಠ ಕಲಿಸುವಲ್ಲಿ ಕಾಂಗ್ರೆಸ್‌ಗಿರುವ ದಿಟ್ಟತನದ ಮುಂದೆ ಬಿಜೆಪಿಯ ವರದು ಬರಿಯ ಮಾತಷ್ಟೇ. ಪಾಕಿಸ್ತಾನದ ವಿರುದ್ಧ ಬಿಜೆಪಿಯ ಪಂಚಾಯಿತಿ ಸದಸ್ಯರಿಂದ ಹಿಡಿದು ಪಾರ್ಲಿಮೆಂಟ್ ಸದಸ್ಯರ ತನಕ ಎಲ್ಲರೂ ಆವೇಶದ ಮಾತುಗಳನ್ನಾಡುತ್ತಾರೆ; ಆದರೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವಂಥ, ಅವರ ಹೀನಕೃತ್ಯಗಳಿಗೆ ಸರಿಯಾಗಿ ಎಚ್ಚರಿಕೆ ನೀಡುವಂಥ ವರ್ತನೆಗಳನ್ನು ಬಿಜೆಪಿಗಿಂತ ಮೊದಲೇ ಕಾಂಗ್ರೆಸ್ ಪಕ್ಷವು ಕಳೆದ ೭೫ ವರ್ಷಗಳಲ್ಲಿ ಹೆಚ್ಚು
ಪರಿಣಾಮಕಾರಿಯಾಗಿ ಪ್ರದರ್ಶಿಸಿರುವುದಕ್ಕೆ ಹಲವಾರು ಉದಾಹರಣೆಗಳಿವೆ.

೧೯೪೭ರಲ್ಲಿ ದೇಶ ವಿಭಜನೆಯಾದ ಸಂದರ್ಭದಲ್ಲಿ, ಭಾರತದಲ್ಲಿದ್ದ ೫೪೨ಕ್ಕೂ ಹೆಚ್ಚು ರಾಜರನ್ನು ಮತ್ತು ಅವರ ಸಂಸ್ಥಾನ ಗಳನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿಸಿ ಭಾರತದ ಸಮಗ್ರತೆಯನ್ನು ಜಗತ್ತಿಗೆ ಸಾರಿದ್ದು ಸರ್ದಾರ್ ವಲ್ಲಭಭಾಯಿ ಪಟೇಲರು ಮತ್ತು ಕಾಂಗ್ರೆಸ್ ಸರಕಾರ.

೧೯೪೮ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ (ಇದಕ್ಕೆ ಮೊದಲ ಕಾಶ್ಮೀರ ಯುದ್ಧ ಎಂದೂ ಹೆಸರಿದೆ) ಅದಕ್ಕೆ ಮಣ್ಣು ಮಕ್ಕಿಸಿದ್ದು ನೆಹರುರವರ ಸರಕಾರ; ೧೯೬೫ರಲ್ಲೂ ಲಾಲ್ ಬಹಾದುರ್ ಶಾಸ್ತ್ರಿಯವರ ನೇತೃತ್ವದಲ್ಲಿ ಪಾಕಿಗಳನ್ನು ಹಿಮ್ಮೆಟ್ಟಿಸಿ ಪಾಠ ಕಲಿಸಿದ್ದೂ ಅಂದಿನ ಕಾಂಗ್ರೆಸ್ ಸರಕಾರವೇ. ಅಂದು ಬಿಜೆಪಿಯೂ ಇರಲಿಲ್ಲ, ಮೋದಿಯವರೂ ಇರಲಿಲ್ಲ. ೧೯೭೧ರಲ್ಲಿ ಬಾಂಗ್ಲಾದೇಶದ ರಚನೆಗೆ ಕಾರಣಕರ್ತರಾಗಿ, ಪಾಕಿಸ್ತಾನವನ್ನು ಎರಡು ಭಾಗವಾಗಿ ಸೀಳಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದು; ತನ್ಮೂಲಕ ಪಾಕಿಸ್ತಾನದ ಹುಟ್ಟಡಗಿಸಿ ದಿಟ್ಟತನ ಪ್ರದರ್ಶಿಸಿದ ಇಂದಿರಾ ಗಾಂಧಿಯವರ ಸಾಹಸದ ಮುಂದೆ ಬೇರೆಯವರ ವಿಚಾರ  ಯಾವು ದಿದೆ? ಅಮೆರಿಕದ ಅಧ್ಯಕ್ಷರ ಮಾತನ್ನು ಧಿಕ್ಕರಿಸಿ, ಬಾಂಗ್ಲಾದೇಶದ ವಿಮೋಚನೆಗೆ ಪಾಕಿಸ್ತಾನದ ವಿರುದ್ಧ ಯುದ್ದವನ್ನು ಸಾರಿ, ಒಂದು ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನು ಸೆರೆಯಾಳಾಗಿಸಿಕೊಂಡು ಅವರ ಅಹಂಕಾರವನ್ನು ಮೆಟ್ಟಿದವರು ಇಂದಿರಾ ಗಾಂಧಿ.

ಈ ಕಾರಣಕ್ಕೆ ಸಾಕ್ಷಾತ್ ಅಟಲ್ ಬಿಹಾರಿ ವಾಜಪೇಯಿಯವರಿಂದ ಅವರು ‘ದುರ್ಗಾ ಮಾತೆ’ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು ಎಂಬುದು ನೆನಪಿರಲಿ. ಇಂದಿರಾ ಅವರು ೧೯೭೪ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ಅಣುಬಾಂಬ್ ಪರೀಕ್ಷೆ ಕೈಗೊಳ್ಳುವ ಮೂಲಕ ‘ಭಾರತದ ತಂಟೆಗೆ ಯಾರಾದರೂ ಬಂದರೆ ನಮ್ಮ ಉತ್ತರ ಏನಿರುತ್ತದೆ’ ಎಂಬ ಎಚ್ಚರಿಕೆಯ ಸಂದೇಶವನ್ನು ಜಗತ್ತಿಗೆ ರವಾನಿಸಿದರು. ಮಾತ್ರವಲ್ಲ, ಚೀನಾ ದೇಶದ ಠೇಂಕಾರವನ್ನು ಧಿಕ್ಕರಿಸಿ, ಸಿಕ್ಕಿಂ ಅನ್ನು ಭಾರತದ ರಾಜ್ಯವೆಂದು ಘೋಷಿಸಿ ‘ಡ್ರ್ಯಾಗನ್’ನ ದುರಹಂಕಾರಕ್ಕೆ ಸರಿಯಾದ ಉತ್ತರ ನೀಡಿದ್ದು ಮತ್ತು ಪಂಜಾಬ್‌ನಲ್ಲಿ ಭಿಂದ್ರನ್‌ವಾಲೆ ಎಂಬ ತೀವ್ರವಾದಿಯನ್ನು ಹತ್ಯೆ ಮಾಡಿ, ‘ಬ್ಲೂ ಸ್ಟಾರ್’ ಕಾರ್ಯಾಚರಣೆಯ ಮೂಲಕ ಭಯೋತ್ಪಾದಕರಿಗೆ ಚುರುಕು ಮುಟ್ಟಿಸಿದ್ದು ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರಕಾರವೇ.

ಇಂಥ ನಡೆಗಳ ಮೂಲಕ, ದೇಶದ ಭದ್ರತೆ, ಸಮಗ್ರತೆ ಮತ್ತು ಏಕತೆಯ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಕಾಂಗ್ರೆಸ್ ಸಾಬೀತುಪಡಿಸಿದೆ. ಇನ್ನು, ೨೦೦೮ರಲ್ಲಿ ಭಾರತದಲ್ಲಿ ಭಯೋತ್ಪಾದಕರ ಚಟುವಟಿಕೆಯನ್ನು ನಿಯಂತ್ರಿಸುವ ಸಲು ವಾಗಿ ಮತ್ತು ಇಂಥ ಘಟನೆಗಳ ತನಿಖೆಗಾಗಿ ‘ರಾಷ್ಟ್ರೀಯ ತನಿಖಾದಳ’ ಎಂಬ ವಿಶೇಷ ಪಡೆಯನ್ನು ರಚಿಸಿದ್ದು ಮತ್ತು ತನ್ಮೂಲಕ ಭಯೋತ್ಪಾದಕರಿಗೆ ಕಠಿಣ ಸಂದೇಶ ನೀಡಿದ್ದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ.

ಇಷ್ಟಾಗಿಯೂ ಬಿಜೆಪಿಯವರು ದೇಶರಕ್ಷಣೆಯಲ್ಲಿ ಎಲ್ಲರಿಗಿಂತ ತಾವೇ ಶಕ್ತಿವಂತರೆಂದು ಹೇಳಿಕೊಳ್ಳುತ್ತಾರೆ; ಆದರೆ, ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿಯಾಗಿದ್ದು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಹಾಗೂ ಭಯೋತ್ಪಾದಕರನ್ನು ವಿಮಾನ ದಲ್ಲಿ ಕಂದಹಾರ್ ಪ್ರದೇಶಕ್ಕೆ ಬಿಟ್ಟುಬಂದವರು ಕೇಂದ್ರ ಬಿಜೆಪಿ ಸರಕಾರದ ಮಂತ್ರಿಗಳು ಎಂಬುದನ್ನು ಇವರು ಮರೆತು ಬಿಡುತ್ತಾರೆ! ಇನ್ನು ಪುಲ್ವಾಮಾ ದಾಳಿಯಲ್ಲಿ ಭಾರತದ ೪೦ಕ್ಕೂ ಹೆಚ್ಚು ಸೈನಿಕರು ಪ್ರಾಣ ಕಳೆದುಕೊಂಡಿದ್ದು ಆಂತರಿಕ ಭದ್ರತಾ ವೈಫಲ್ಯದ ಕಾರಣದಿಂದ; ಈ ಘಟನೆ ನಡೆದಿದ್ದು ಕೂಡ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ.

ಇತ್ತೀಚೆಗೆ ಸಂಸತ್ ಭವನದೊಳಗೆ ಪ್ರವೇಶಿಸಿದ ಕೆಲವರು ಹೊಗೆ ಬಾಂಬ್‌ನಿಂದ ಆತಂಕದ ವಾತಾವರಣವನ್ನು ನಿರ್ಮಿಸಿದ ಘಟನೆ ನಡೆದಿದ್ದೂ ಬಿಜೆಪಿಯವರ ಅಧಿಕಾರಾವಧಿಯಲ್ಲೇ. ಜಮ್ಮು ಮತ್ತು ಕಾಶ್ಮೀರವು ೧೯೪೭ರಲ್ಲಿಯೇ ಭಾರತದ ಅವಿಭಾಜ್ಯ
ಅಂಗವಾಗಿತ್ತು. ಅಂದಿನ ರಾಜ ಹರಿಸಿಂಗರ ಮನವಿಯ ಮೇರೆಗೆ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಕೆಲವು ರಿಯಾಯಿತಿಗಳನ್ನು
ನೀಡಲಾಗಿತ್ತು. ಆದರೆ ಬಿಜೆಪಿಯವರು ‘ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಮಾಡುವುದರ ಮೂಲಕ ನಾವು ಜಮ್ಮು-ಕಾಶ್ಮೀರವನ್ನು ಭಾರತದ ಭಾಗವನ್ನಾಗಿ ಸೇರಿಸಿಕೊಂಡೆವು’ ಎಂಬ ರೀತಿಯಲ್ಲಿ ಸುಳ್ಳುಗಳನ್ನು ಹೇಳುತ್ತಾ, ಜನರನ್ನು ನಂಬಿಸುವ ದಾರಿಯಲ್ಲಿ ಸಾಗಿದ್ದಾರೆ.

ನೆಹರುರವರಿಂದ ಮನಮೋಹನ್ ಸಿಂಗ್ ರವರೆಗೆ ‘ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’ ಎಂಬ ನಿಲುವನ್ನು ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗಟ್ಟಿಯಾಗಿ ಹೇಳಲಾಗಿದೆ. ಮಾತ್ರವಲ್ಲ, ಈ ವಿಚಾರದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯ ಅವಶ್ಯಕತೆ ಇಲ್ಲವೆಂದು ಹೇಳುವ ಮೂಲಕ, ಭಾರತದ ವಿಚಾರದಲ್ಲಿ ಯಾರೂ ಮಧ್ಯಪ್ರವೇಶಿಸಬಾರದು ಎಂಬ ಪರೋಕ್ಷ ಸಂದೇಶವನ್ನು ಸಾರಿ ಆಗಿದೆ.

೧೯೬೨ರಲ್ಲಿ ಚೀನಾ ದೇಶವು ಭಾರತದ ಮೇಲೆ ಮೋಸದಿಂದ ಯುದ್ಧವನ್ನು ಸಾರಿತು; ಅಂದು ದೇಶದ ಸೈನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ದೇಶದ ಆರ್ಥಿಕ ಪರಿಸ್ಥಿತಿ ಸದೃಢವಾಗಿರಲಿಲ್ಲ. ಕಾರಣ, ಸ್ವಾತಂತ್ರ್ಯ ಬಂದು ಕೇವಲ ೧೫ ವರ್ಷ ಗಳಾಗಿದ್ದವು. ಇಂಥ ಸಂದರ್ಭದಲ್ಲಿ ಸೈನಿಕರ ನಿಧಿಗಾಗಿ ಕರೆನೀಡಿ, ದೇಶದ ಪ್ರತಿಯೊಬ್ಬ ನಾಗರಿಕರ ಉದಾರ ನೆರವಿನಿಂದ ಸೈನಿಕ ರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಯಿತು.

ಇಂಥ ಹಲವಾರು ವಿಚಾರಗಳು ಜನರಿಗೆ ನೆನಪಿಲ್ಲವೆಂಬ ಭಾವನೆಯಲ್ಲಿ ಬಿಜೆಪಿಯು, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡದೆ ಮತ್ತು ಚೀನಾ ದೇಶವು ಭಾರತದ ಕೆಲ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದರೂ ಅವರಿಗೆ ತಕ್ಕ ಪ್ರತ್ಯುತ್ತರ ಹೇಳದೆ, ತಾನು ಮಾತ್ರವೇ ದೇಶಭಕ್ತ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ ಹಾಗೂ ತಾನಿಲ್ಲದಿದ್ದರೆ ದೇಶದ ರಕ್ಷಣೆಗೆ ಸಂಚಕಾರ ಒದಗಿಬಿಡುತ್ತದೆ ಎಂಬ
ರೀತಿಯಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ.

ದೇಶದ ಪ್ರತಿಯೊಬ್ಬ ನಾಗರಿಕರು ಮತ್ತು ಹಗಲಿರುಳೆನ್ನದೆ ದೇಶ ಕಾಯುವ ಸಿಪಾಯಿಗಳು ಭಾರತದ ರಕ್ಷಣೆಗೆ ದುಡಿಯುತ್ತಿರು ವವರೇ; ದೇಶದ ಏಕತೆ ಮತ್ತು ಭದ್ರತೆಯ ವಿಷಯ ಬಂದಾಗ ಪ್ರತಿಯೊಬ್ಬ ಭಾರತೀಯರೂ ಒಗ್ಗಟ್ಟಾಗಿ ದೇಶದ ರಕ್ಷಣೆಗೆ ನಿಲ್ಲುತ್ತಾರೆ. ದೇಶಪ್ರೇಮ ಮತ್ತು ದೇಶಸೇವೆ ಯಾವೊಂದು ಪಕ್ಷದ ಆಸ್ತಿಗಳೂ ಅಲ್ಲ. ಅವು ಪ್ರತಿಯೊಬ್ಬ ಭಾರತೀಯರ  ಕಣಕಣ ದಲ್ಲಿವೆ.

(ಲೇಖಕರು ಹವ್ಯಾಸಿ ಬರಹಗಾರರು)