Saturday, 14th December 2024

ಶಿಸ್ತಿನ ಪಕ್ಷದಲ್ಲಿನ ಅಶಿಸ್ತಿಗೆ ಕಾರಣವೇನು ?

ಅಶ್ವತ್ಥಕಟ್ಟೆ

ranjith.hoskere@gmail.com

ಈ ಹಿಂದೆ, ರಾಜ್ಯದ ಹಿಡಿತ ಯಾರ ಬಳಿಯಿರಬೇಕು ಎನ್ನುವ ವಿಷಯಕ್ಕೆ ಯಡಿಯೂರಪ್ಪ ಮತ್ತು ಅನಂತಕುಮಾರ್ ನಡುವೆ ಪೈಪೋಟಿಯಿತ್ತು. ಅದಕ್ಕಾಗಿ ಹಲವು ತಂತ್ರಗಾರಿಕೆಯನ್ನು ಅವರು ಮಾಡುತ್ತಿದ್ದರು. ಆದರೆ ಪಕ್ಷದ ವಿಷಯ ಬರುತ್ತಿದ್ದಂತೆ, ಸ್ವಹಿತವನ್ನು ಕೈಬಿಟ್ಟು ಒಂದಾಗುತ್ತಿದ್ದರು.

ಕರ್ನಾಟಕ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್ .ಯಡಿಯೂರಪ್ಪ ಕೆಳಗಿಳಿದು ಬಸವರಾಜ ಬೊಮ್ಮಾಯಿ ಅವರು ಸಿಎಂ ಗದ್ದುಗೆಗೆ ಏರಿದ ಕ್ಷಣದಿಂದ, ಕರ್ನಾಟಕ ರಾಜಕೀಯ ಹಾಗೂ ಬಿಜೆಪಿಯಲ್ಲಿ ಕೇಳಿಬರುತ್ತಿದ್ದ ಏಕೈಕ ಪ್ರಶ್ನೆ ‘ಮುಂದೆ ಪಕ್ಷವನ್ನು ಮುನ್ನ ಡೆಸುವವರು ಯಾರು?’ ಎಂಬುದಾಗಿತ್ತು. ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು ಎನ್ನುವ ನಿರೀಕ್ಷೆಯಿತ್ತು.

ಆದರೆ ವಿಧಾನಸಭಾ ಚುನಾವಣೆ ಮುಗಿದು ಆರು ತಿಂಗಳು ಕಳೆಯುತ್ತಾ ಬಂದರೂ, ಪಕ್ಷದ ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೆ ರಾಜ್ಯ ಬಿಜೆಪಿಯನ್ನು ಒಗ್ಗೂಡಿಸುವ ನಾಯಕನ್ಯಾರು ಎನ್ನುವ ಪ್ರಶ್ನೆ ಕಾಡುತ್ತಲೇ ಇದೆ. ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ತನಕ ರಾಜ್ಯ ಬಿಜೆಪಿಯಲ್ಲಿ ಈ ಪ್ರಶ್ನೆಯೇ ಉದ್ಭವಿಸಿರಲಿಲ್ಲ. ಆದರೆ ಬಿಎಸ್‌ವೈ ಅವರನ್ನು ಮಾರ್ಗದರ್ಶಕರನ್ನಾಗಿ ಬಿಂಬಿಸಲು ಆರಂಭಿಸುತ್ತಿದ್ದಂತೆ ನಾಯಕನ ಹುಡುಕಾಟ ಬಿಜೆಪಿಯಲ್ಲಿ ಶುರುವಾಗಿತ್ತು. ಆರಂಭದಲ್ಲಿ ‘ಕಾಮನ್ ಮ್ಯಾನ್ ಸಿಎಂ’ ಎನ್ನುವ ಟ್ಯಾಗ್ ಲೈನ್‌ನಲ್ಲಿ ಬಸವರಾಜ ಬೊಮ್ಮಾಯಿ ಅವರು ಕಾಣಿಸಿಕೊಂಡರೂ, ಅಧಿಕಾರಕ್ಕೆ ಬಂದ ಶತದಿನ ಕಳೆಯುವ ವೇಳೆಗೆ ಅರ್ಹರಲ್ಲ ಎನ್ನುವುದು ಕಾರ್ಯಕರ್ತರ ಅರಿವಿಗೆ ಬಂತು.

ಬಳಿಕ ಹತ್ತು ಹಲವು ಹೆಸರು ಮುನ್ನೆಲೆಗೆ ಬಂದರೂ, ಆ ಎಲ್ಲರಿಗೂ ನಾಯಕನಾಗುವುದಕ್ಕೆ ಒಂದೊಂದು ಕಾರಣವಿದ್ದರೆ, ನಾಯಕ ಎಂದು ಕರೆಸಿಕೊಳ್ಳದಿರಲು ಹತ್ತಾರು ಕಾರಣಗಳಿವೆ. ರಾಷ್ಟ್ರೀಯ ನಾಯಕರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಬದಲು, ನಡೆದಂತೆ ನಡೆಯಲಿ ಎನ್ನುವ ಮನಸ್ಥಿತಿಯಲ್ಲಿದ್ದರು. ಪಕ್ಷದ ವರಿಷ್ಠರು ಚುನಾವಣೆ ಮುಗಿದ ಆರು ತಿಂಗಳು ಮೌನಕ್ಕೆ ಶರಣಾಗಿದ್ದರಿಂದ ರಾಜ್ಯದಲ್ಲಿ ಅವರವರ ಪಾಲಿಗೆ ಅವರವರೇ ನಾಯಕರಾಗಿ ಹೊರಹೊಮ್ಮಿದರು.

ಚುನಾವಣೆಯಲ್ಲಿ ಸೋಲಾಗುತ್ತಿದ್ದಂತೆ ಪಕ್ಷವನ್ನು ಮರು ಸಂಘಟಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರು ಹಾಗೂ ವಿಧಾನಸಭಾ ಪ್ರತಿಪಕ್ಷ ನಾಯಕರ ಆಯ್ಕೆಯಾಗಿದ್ದರೆ, ಈ ಗೊಂದಲ ಕೊಂಚ ಮಟ್ಟಿಗೆ ತಗ್ಗುತ್ತಿತ್ತು. ಆದರೆ ವರಿಷ್ಠರು ಈ ಕೆಲಸವನ್ನು ಮಾಡದೇ ಇದ್ದಿದ್ದರಿಂದ ಕರ್ನಾಟಕ ಬಿಜೆಪಿಯ ಕನಿಷ್ಠ ಆರೇಳು ಮಂದಿ ತಾವೇ ರಾಜ್ಯಾಧ್ಯಕ್ಷರೆಂದು ಓಡಾಡಿದರೆ, ನಾಲ್ಕೈದು ಮಂದಿ ವಿಧಾನಸಭಾ ಪ್ರತಿಪಕ್ಷ ನಾಯಕರ ಸ್ಥಾನಕ್ಕೆ ಟವೆಲ್ ಹಾಕಿದ್ದರು. ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಅರವಿಂದ ಬೆಲ್ಲದ್ ಸೇರಿ ಹತ್ತಾರು ಹೆಸರುಗಳನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ
ತೇಲಿಬಿಡಲಾಯಿತು. ಅಂತಿಮವಾಗಿ ವಿಜಯೇಂದ್ರ ಅವರನ್ನು ಈ ಪಟ್ಟಕ್ಕೆ ಕೂರಿಸುವ ಮೂಲಕ ಲಿಂಗಾಯತ ನಾಯಕನಿಗೆ ಮಣೆಹಾಕಿ ಹಲವು ತಿಂಗಳ ಗೊಂದಲಕ್ಕೆ ಇತಿಶ್ರೀ ಹಾಡಲಾಯಿತು.

ಇದೇ ರೀತಿ ವಿಧಾನಸಭಾ ಪ್ರತಿಪಕ್ಷ ನಾಯಕರನ್ನಾಗಿ ಆರ್.ಅಶೋಕ್ ಅವರನ್ನು ನೇಮಿಸಿ, ಒಂದು ಹಂತದ ಗೊಂದಲಗಳಿಗೆ ಕೊನೆಹಾಡುವ ಪ್ರಯತ್ನವನ್ನು ಪಕ್ಷ ಮಾಡಿದೆ. ಆದರೀಗ ಎದ್ದಿರುವುದು ಹೊಸ ಸಮಸ್ಯೆ. ಬಿಜೆಪಿ ವರಿಷ್ಠರು ರಾಜ್ಯ ಬಿಜೆಪಿಯ ಸಾರಥಿಗಳನ್ನಾಗಿ ವಿಜಯೇಂದ್ರ ಹಾಗೂ ಆರ್.ಅಶೋಕ್‌ರನ್ನು ನೇಮಿಸಿದೆ. ಈ ಆಯ್ಕೆಯಿಂದಾಗಿ ಪಕ್ಷವೇ ಒಡೆದ ಮನೆಯಾಗಿದೆ. ಯಡಿಯೂರಪ್ಪ ಅವರು ಕಳೆದೊಂದು ದಶಕದಿಂದ ವಿಜಯೇಂದ್ರ ಅವರನ್ನು ಜತೆಯಲ್ಲಿಟ್ಟು ಕೊಂಡಿದ್ದರಿಂದ ಸಂಘಟನೆ, ಆಡಳಿತ ಸೇರಿದಂತೆ ರಾಜಕೀಯದ ವಿವಿಧ ಆಯಾಮಗಳಲ್ಲಿ ಹಿಡಿತವನ್ನು ಸಾಽಸಿದ್ದಾರೆ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದ ಸಮಯದಲ್ಲಿ ವಿಜಯೇಂದ್ರ ಅವರ ಕೆಲವು ನಡೆಯಿಂದಾಗಿ ಪಕ್ಷದ ಹಲವು ನಾಯಕರಿಗೆ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಇನ್ನು ಹೊಂದಾಣಿಕೆ ಆರೋಪವೇ ಆರ್.ಅಶೋಕ್‌ಗೆ ಆಗಿರುವ ಬಹುದೊಡ್ಡ ಹಿನ್ನಡೆ ಎಂದರೆ ತಪ್ಪಾಗುವುದಿಲ್ಲ.

ಈ ಆರೋಪದಿಂದಲೇ, ಬಹುತೇಕ ಶಾಸಕರು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅಶೋಕ್ ಆಯ್ಕೆಯನ್ನು ವಿರೋಧಿಸುತ್ತಿದ್ದಾರೆ. ಈ ಇಬ್ಬರ ನೇಮಕದಿಂದ ಪಕ್ಷದಲ್ಲಿ ಉದ್ಭವಿಸಬಹುದಾದ ಗೊಂದಲದ ಅರಿವು ಬಿಜೆಪಿ ವರಿಷ್ಠರಿಗೆ ಇಲ್ಲವೆಂದೇನಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಈ ಎಲ್ಲ ಬೆಳವಣಿಗಳನ್ನು ನಿರೀಕ್ಷಿಸಿಯೇ ಈ ಇಬ್ಬರಿಗೆ ಈ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ. ಆದರೆ ಬಸಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲವರು ನೀಡುತ್ತಿರುವ ಬಹಿರಂಗ ಹೇಳಿಕೆಗಳಿಗೂ ಲಗಾಮು ಹಾಕುವ ಯಾವುದೇ ಪ್ರಯತ್ನವನ್ನು ಮಾಡದೇ, ‘ಏನಾಗುತ್ತದೆ ನೋಡುವ’ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಏಕೆಂದರೆ, ಸಂಘಟನೆಯಲ್ಲಿ ಈಗಾಗಲೇ ಸಂಪೂರ್ಣ ನೆಲಕಚ್ಚಿರುವ ರಾಜ್ಯ ಬಿಜೆಪಿಯಲ್ಲಿ ನೀವೇನೇ ಮಾಡಿದರೂ, ಅದು ಪ್ರಯೋಗದ ರೀತಿಯಷ್ಟೇ. ಪ್ರಯೋಗ ಯಶಸ್ವಿಯಾದರೆ ರಾಜ್ಯದಲ್ಲಿ ಮತ್ತೆ ಬಿಜೆಪಿಯ ಸುವರ್ಣಯುಗ.

ಒಂದು ವೇಳೆ ವಿಫಲವಾದರೆ, ಮುಂದಿನ ಚುನಾವಣೆಯ ವೇಳೆಗೆ ಮತ್ತೊಂದು ಪ್ರಯೋಗ ಮಾಡಲು ಸಮಯಾವಕಾಶವಿರುತ್ತದೆ ಎನ್ನುವ ಲೆಕ್ಕಾಚಾರವಿದೆ.
ಇನ್ನಾರು ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಈ ರೀತಿಯ ರಿಸ್ಕ್ ತೆಗೆದುಕೊಳ್ಳುವ ಮೂಲಕ ವರಿಷ್ಠರು ಮೈಮೇಲೆ ಸಮಸ್ಯೆ ಎಳೆದು ಕೊಂಡರೆ? ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ. ಆದರೆ ಇದೊಂದು ಪಕ್ಕಾ ‘ಕ್ಯಾಲ್‌ಕ್ಯುಲೇಟೆಡ್ ರಿಸ್ಕ್’ ಎನ್ನುವುದು ಸ್ಪಷ್ಟ. ಏಕೆಂದರೆ, ಲೋಕಸಭಾ ಚುನಾವಣೆಯಲ್ಲಿ ಹೇಗಿದ್ದರೂ, ರಾಜ್ಯ ನಾಯಕತ್ವವನ್ನು ನೋಡಿ ಮತದಾರ ಮತ ನೀಡುವುದಿಲ್ಲ. ಇದರೊಂದಿಗೆ ಪಂಚರಾಜ್ಯ ಚುನಾವಣೆಯಲ್ಲಿನ ಕಾಂಗ್ರೆಸ್‌ನ ಹಿನ್ನಡೆಯಿಂದಾಗಿ, ಲೋಕಸಭೆ ಚುನಾವಣೆಯಲ್ಲಿ ಯಶಸ್ಸು ಗಳಿಸುವುದು ಬಹುದೊಡ್ಡ ಸಮಸ್ಯೆಯೇನಲ್ಲ ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರ. ಇದರೊಂದಿಗೆ ಈ ಬಾರಿಯೂ ‘ಮೋದಿ ಹವಾ’ ಹಾಗೂ ಮೋದಿ ವಿರುದ್ಧ ನಿಲ್ಲುವ ನಾಯಕನ್ಯಾರು ಎನ್ನುವುದಕ್ಕೆ ಸ್ಪಷ್ಟ ಉತ್ತರ ಸಿಗದಿರುವುದರಿಂದ, ಜೆಡಿಎಸ್‌ ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವೇನಲ್ಲ.

ಕಳೆದ ಬಾರಿಯಂತೆ ಕ್ಲೀನ್ ಸ್ವೀಪ್ ಮಾಡದಿದ್ದರೂ, ೨೦ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಸುಲಭ. ಆದ್ದರಿಂದ ವಿಜಯೇಂದ್ರ, ಅಶೋಕ್ ಅವರ ನಾಯಕತ್ವ ವನ್ನು ಒರೆಗಲ್ಲಿಗೆ ಹಚ್ಚುವ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ. ಆದರೆ ಬಿಜೆಪಿಗೆ ಈಗಿರುವ ಬಹುದೊಡ್ಡ ಸವಾಲು ಎಂದರೆ, ಒಡೆದ ಮನೆಯಾಗಿರುವ ಪಕ್ಷವನ್ನು ಸರಿಪಡಿಸುವುದು ಹೇಗೆ? ಹಾಗೂ ಛಿಧ್ರವಾಗಿರುವ ಮನಸ್ಸುಗಳನ್ನು ಒಗ್ಗೂಡಿಸುವುದು ಯಾರು ಎನ್ನುವುದು. ತಾಜಾ ಉದಾಹರಣೆ ನೀಡುವುದಾದರೆ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಽವೇಶನದಲ್ಲಿನ ಬಿಜೆಪಿ ಶಾಸಕರ ನಡೆಯಲ್ಲಿ ಇದು ಸ್ಪಷ್ಟವಾಗುತ್ತಿದೆ. ವಿಜಯೇಂದ್ರ ಎತ್ತಿದ ವಿಷಯಕ್ಕೆ ಯತ್ನಾಳ್ ಬೆಂಬಲಿಸಲ್ಲ, ಯತ್ನಾಳ್ ನೆರವಿಗೆ ಇನ್ನೊಬ್ಬರು ಬರುವುದಿಲ್ಲ.

ಹಿಂದುತ್ವದ ವಿಷಯದಲ್ಲಿ ಇಡೀ ಬಿಜೆಪಿ ಒಂದಾಗಿ ಕಾಂಗ್ರೆಸ್ ವಿರುದ್ಧ ಹೋರಾಡಲು ಸಜ್ಜಾಗುತ್ತಿದ್ದಂತೆ, ಸ್ವತಃ ಪ್ರತಿಪಕ್ಷ ನಾಯಕರೇ ಮೌನಕ್ಕೆ ಶರಣಾಗುತ್ತಿದ್ದಾರೆ. ಸದನದಲ್ಲಿ ಇಡೀ ಪಕ್ಷವನ್ನು ನಿಭಾಯಿಸಬೇಕಾದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಮಾತನ್ನು ಸ್ವಪಕ್ಷೀಯರೇ ಕೇಳುತ್ತಿಲ್ಲ. ಮೊನ್ನೆ ಪೃಥ್ವಿ ಸಿಂಗ್ ಹಾಗೂ ಬೆಳಗಾವಿ ಕಾರ್ಪೊರೇಟರ್‌ಗಳ ಮೇಲಿನ ಹಲ್ಲೆ ಪ್ರಕರಣ ದಲ್ಲಿ, ವಿಜಯೇಂದ್ರ ಅವರ ಬಳಿಯಿದ್ದ ಕೆಲವೊಂದಷ್ಟು ಶಾಸಕರು ಧರಣಿ ಮಾಡಬೇಕು ಎನ್ನುತ್ತಿದ್ದರು. ಒಂದು ಹಂತದಲ್ಲಿ ಬಹುತೇಕ ಶಾಸಕರು ಸದನದ ಬಾವಿಯತ್ತ ತೆರಳಿದ್ದರು. ಆದರೆ ಅಶೋಕ್ ಮಾತ್ರ, ‘ನಾವು ಸರಕಾರದ ನಡೆ ಖಂಡಿಸಿ ವಾಕ್‌ಔಟ್ ಮಾಡುತ್ತೇವೆ’ ಎನ್ನುವ ಮೂಲಕ ಬಿಜೆಪಿಯ ಹಲವು ಶಾಸಕರಿಗೆ ಷಾಕ್ ನೀಡಿದರು.

ಇದಕ್ಕೂ ಮುನ್ನಾದಿನ ಇದೇ ವಿಷಯದಲ್ಲಿ ಅಶೋಕ್ ಮಾತನಾಡುತ್ತಿರುವಾಗಲೇ, ವಿಜಯೇಂದ್ರ ಏಕಾಂಗಿಯಾಗಿ ಬಾವಿಗಿಳಿಯಲು ಮುಂದಾದರು. ವಿಜಯೇಂದ್ರ ಧರಣಿಗೆ ಮುಂದಾಗಿದ್ದಾರೆ ಎನ್ನುವುದನ್ನು ಅರಿತ ಬಳಿಕ ಕೆಲ ಶಾಸಕರು ಅವರನ್ನು ಹಿಂಬಾಲಿಸಿದರು. ಕೇವಲ ಸದನದಲ್ಲಿ ಮಾತ್ರವಲ್ಲ, ಇಡೀ ಪಕ್ಷದ ಕಾರ್ಯಚಟುವಟಿಕೆಯನ್ನು ಗಮನಿಸಿದರೆ, ಇಂಥ ಹತ್ತು ಹಲವು ಗೊಂದಲಗಳು ಕಾಣುತ್ತಿವೆ. ‘ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು’ ಎನ್ನುವ ಸ್ಥಿತಿ ಶಿಸ್ತಿನ ಪಕ್ಷದಲ್ಲಿ ಈ ಪ್ರಮಾಣದಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪಕ್ಷದಲ್ಲಿರುವ ನಾಯಕತ್ವದ ಸಮಸ್ಯೆ ಗೋಚರಿಸುತ್ತದೆ.

ಎಲ್ಲರೂ ಸ್ವಹಿತವನ್ನಷ್ಟೇ ನೋಡುತ್ತಿದ್ದಾರೆಯೇ ಹೊರತು, ಪಕ್ಷದ ಹಿತವನ್ನಲ್ಲ. ಈ ಹಿಂದೆ, ರಾಜ್ಯದ ಹಿಡಿತ ಯಾರ ಬಳಿಯಿರಬೇಕು ಎನ್ನುವ ವಿಷಯಕ್ಕೆ
ಯಡಿಯೂರಪ್ಪ ಮತ್ತು ಅನಂತಕುಮಾರ್ ನಡುವೆ ಇದೇ ರೀತಿಯ ಪೈಪೋಟಿಯಿತ್ತು. ಅದಕ್ಕಾಗಿ ಹಲವು ರೀತಿಯ ತಂತ್ರಗಾರಿಕೆಯನ್ನು ಅವರು ಮಾಡುತ್ತಿದ್ದರು. ಆದರೆ ಪಕ್ಷದ ವಿಷಯ ಬರುತ್ತಿದ್ದಂತೆ, ಸ್ವಹಿತವನ್ನು ಕೈಬಿಟ್ಟು ಒಂದಾಗುತ್ತಿದ್ದರು. ಅಂಥ ಮನಸ್ಥಿತಿ ಈಗಿರುವ ನಾಯಕರಲ್ಲಿ ಇರದಿರುವುದು ಬಿಜೆಪಿಯ ಬಹುದೊಡ್ಡ ಸಮಸ್ಯೆಯಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪಾಲಿಗೆ ಗೆಲ್ಲುವ ಶಕ್ತಿಯಿರುವುದು ಕರ್ನಾಟಕದಲ್ಲಿ ಎನ್ನುವುದು ಬಿಜೆಪಿ ನಾಯಕರಿಗೂ ಗೊತ್ತಿರುವ ವಿಷಯ. ಈ ಗೆಲುವಿಗಾಗಿ ಯಡಿಯೂರಪ್ಪ-ಅನಂತಕುಮಾರ್ ಜೋಡಿ ದಶಕಗಳ ಕಾಲ ರಾಜ್ಯದ ಮೂಲೆಮೂಲೆಯಲ್ಲಿ ತಿರುಗಿ ಪಕ್ಷ ಸಂಘಟನೆ ಮಾಡಿತ್ತು. ಅನಂತಕುಮಾರ್ ಕೊನೆಯುಸಿರು ಎಳೆದ ಬಳಿಕ, ಯಡಿಯೂರಪ್ಪ ಅವರು ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೀಗ ಅವರು ಸಹ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದಂತೆ ದಶಕಗಳ ಕಾಲ ಇರದ ‘ನಾಯಕನ್ಯಾರು?’ ಎನ್ನುವ ಪ್ರಶ್ನೆ ಉದ್ಭವಿಸಿದ್ದು ಇಂದಿನ ಈ ಗೋಜಲಿಗೆ ಕಾರಣವಾಗಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಎರಡನೇ ಹಂತದ ನಾಯಕತ್ವವನ್ನು ರೂಪಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಈಗ ನಡೆಯುತ್ತಿರುವ ಗೊಂದಲ-ಗೋಜಲು ಗಳೇ ಇದಕ್ಕೆ ಸ್ಪಷ್ಟ ಉದಾಹರಣೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದರೂ, ಅವರನ್ನು ಹುರಿದುಂಬಿಸುವ ನಾಯಕತ್ವದ ಕೊರತೆ ಸದ್ಯ ರಾಜ್ಯದಲ್ಲಿ ಕಾಡುತ್ತಿದೆ. ಮೋದಿ ಹೆಸರಲ್ಲಿ ಲೋಕಸಭೆ ಚುನಾವಣೆಗೆ ಕೆಲವರು ಕೆಲಸ ಮಾಡಿದರೂ, ಸಂಘಟನೆಗೆ ಈ ಹಿಂದಿನ ಶಕ್ತಿ ಮರಳಿ ಬರಬೇಕಾದರೆ, ಮುನ್ನೆಲೆಗೆ ಬರಲು ಪ್ರಯತ್ನಿಸುತ್ತಿರುವ ನಾಯಕರು ತಮ್ಮ ಸ್ವಹಿತಾಸಕ್ತಿ, ಹೊಂದಾಣಿಕೆ ಹಾಗೂ ಪ್ರತಿಷ್ಠೆಗಳನ್ನು ಬದಿಗೊತ್ತಿ ಒಂದಾಗಬೇಕಿದೆ ಎನ್ನುವುದಂತೂ ಸ್ಪಷ್ಟ.