Thursday, 12th December 2024

ಪ್ರಕೃತಿಯ ವಿಸ್ಮಯಕಾರಿ ವಿದ್ಯಮಾನ ‘ಜ್ವಾಲಾಮುಖಿ’

ಪ್ರಸ್ತುತ

ಡಾ.ಕಾರ್ತಿಕ್ ಜೆ.ಎಸ್

ಇತ್ತೀಚೆಗೆ ಇಂಡೋನೇಷ್ಯಾದಲ್ಲಿರುವ ಸಕ್ರಿಯ ಜ್ವಾಲಾಮುಖಿ ‘ಮೌಂಟ್ ಮೆರಾಪಿ’ ಸೋಟಗೊಂಡು ೨೨ ಜನ ಪರ್ವತಾರೋಹಿಗಳು ಅಸುನೀಗಿದರು. ಮೂರು ಕಿ.ಮೀ ಎತ್ತರದವರೆಗೂ ಹಾರಿದ ಬೂದಿಯಿಂದ ಆವೃತವಾದ ಮೋಡಗಳು ಹಲವಾರು ಕಿ.ಮೀ. ಗಳವರೆಗೆ ಹರಡಿಕೊಂಡವು. ಮಾತ್ರವಲ್ಲದೆ
ಸುತ್ತಮುತ್ತಲಿನ ಹಳ್ಳಿ, ಪಟ್ಟಣಗಳೆಲ್ಲವೂ ಟನ್ ಗಟ್ಟಲೆ ಜ್ವಾಲಾಮುಖಿ ಅವಶೇಷಗಳಿಂದ ಮುಚ್ಚಿಹೋದವು.

ಹೀಗೆ, ಪ್ರತಿ ಬಾರಿಯೂ ತನ್ನ ವಿಧ್ವಂಸಕ ಕ್ರಿಯೆಯಿಂದಾಗಿ ಜಗತ್ತಿನಾದ್ಯಂತ ತಲ್ಲಣ ಮೂಡಿಸುವ ವಿದ್ಯಮಾನಗಳಲ್ಲಿ ಜ್ವಾಲಾಮುಖಿ ಪ್ರಮುಖವಾದುದು.
ಜ್ವಾಲಾಮುಖಿ ಭೂಮಿಯ ಹೊರಚಿಪ್ಪಿನಲ್ಲಿರುವ ಒಂದು ಬಿರುಕು. ಭೂಗರ್ಭದಲ್ಲಿರುವ ಅಧಿಕ ಉಷ್ಣತೆಯ ಶಿಲಾರಸದ ಚಲನವಲನಗಳು ಭೂಮಿಯ ಅಸ್ಥಿರತೆಗೆ ಮೂಲ ಕಾರಣ. ಭೂಮಿಯ ತಳದಲ್ಲಿರುವ ಬಿರುಕುಗಳ ಮುಖಾಂತರ ಭೂಮಿಯ ಅಂತರಾಳಕ್ಕೆ ಇಳಿಯುವ ನೀರು ಅತ್ಯಧಿಕ ಉಷ್ಣತೆ ಉಳ್ಳ
ಶಿಲಾರಸದೊಡನೆ ಬೆರೆತಾಗ ಉಗಿ ಉತ್ಪನ್ನಗೊಳ್ಳುತ್ತದೆ. ನಿರಂತರವಾಗಿ ನಡೆಯುವ ಈ ಕಾರ್ಯದಿಂದಾಗಿ ಭೂಗರ್ಭದಲ್ಲಿ ಉಗಿಯು ದಟ್ಟವಾಗಿ ಶೇಖರಣೆಗೊಳ್ಳುತ್ತದೆ.

ಒತ್ತಡ ಅತ್ಯಧಿಕಗೊಂಡಾಗ ಉಗಿಯು ಒಮ್ಮೆಲೇ ಭೂಮಿಯೊಳಗಿನ ಪದರ ಭೇದಿಸಿ ಮೇಲಕ್ಕೇರಿ, ಭೂಮೇಲ್ಮೈ ಮೇಲೆ ದ್ವಾರವನ್ನುಂಟುಮಾಡಿಕೊಂಡು, ಭಾರೀ ಸ್ಫೋಟದೊಂದಿಗೆ ಹೊರಬೀಳುತ್ತದೆ. ಉಗಿಯೊಂದಿಗೆ ಲಾವಾರಸ, ಬೂದಿ ಮತ್ತು ಇತರ ಅನಿಲಗಳು ಭೂಮಿಯ ಹೊರ ಚಿಪ್ಪಿನಲ್ಲಿರುವ
ಬಿರುಕು ಗಳ ಮುಖಾಂತರ ಹೊರ ಚಿಮ್ಮುತ್ತವೆ. ಈ ರೀತಿಯ ಪ್ರಕ್ರಿಯೆಗೆ ‘ಜ್ವಾಲಾಮುಖಿ’ಗಳೆಂದು ಕರೆಯುತ್ತಾರೆ.

ಮುಖ್ಯವಾಗಿ ಮೂರು ರೀತಿಯ ಜ್ವಾಲಾಮುಖಿಗಳಿವೆ.

೧. ಜಾಗೃತ ಅಥವಾ ಸಕ್ರಿಯ ಜ್ವಾಲಾಮುಖಿಗಳು: ಇವುಗಳು ನಿರಂತರವಾಗಿ ಘನ, ದ್ರವ ಮತ್ತು ಅನಿಲ ವಸ್ತುಗಳನ್ನು ಹೊರಚೆಲ್ಲುವ ಜ್ವಾಲಾಮುಖಿಗಳು. ಮೌನಾಲೋವಾ (ಹವಾಯಿ ದ್ವೀಪ), ಮೌಂಟ್ ಎಟ್ನಾ (ಇಟಲಿ), ಎರಿಬಸ್ (ಅಂಟಾರ್ಟಿಕ), ಮೌಂಟ್ ಮೆರಾಪಿ (ಇಂಡೋನೇಷ್ಯಾ), ಹೆಕ್ಲಾ (ಐಸ್ ಲ್ಯಾಂಡ್) ಮುಂತಾದ ವುಗಳು ಪ್ರಪಂಚದ ಪ್ರಸಿದ್ಧ ಸಕ್ರಿಯ ಜ್ವಾಲಾಮುಖಿಗಳಾಗಿವೆ. ನಮ್ಮ ದೇಶದ ಏಕೈಕ ಸಕ್ರಿಯ ಜ್ವಾಲಾಮುಖಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದ ಸಮೀಪದಲ್ಲಿರುವ ಬರ್ರ‍ೆನ್ ದ್ವೀಪದಲ್ಲಿದೆ!

೨. ಸುಪ್ತ ಜ್ವಾಲಾಮುಖಿಗಳು: ಇವುಗಳನ್ನು ನಿದ್ರಿಸುತ್ತಿರುವ ಜ್ವಾಲಾಮುಖಿಗಳು ಎಂದು ಕರೆಯಬಹುದು. ಇವು ಯಾವ ಸಮಯದಲ್ಲಿಯಾದರೂ ಜಾಗೃತವಾಗಬಹುದು.

೩. ನಂದಿದ ಜ್ವಾಲಾಮುಖಿಗಳು: ಸಂಪೂರ್ಣವಾಗಿ ತಣ್ಣಗಾಗಿರುವ ಜ್ವಾಲಾಮುಖಿಗಳು. ಇವುಗಳನ್ನು ಲುಪ್ತ ಅಥವಾ ನಿರ್ಮೂಲವಾದ ಜ್ವಾಲಾಮುಖಿ ಗಳೆಂದೂ ಕರೆಯುತ್ತಾರೆ. ಜ್ವಾಲಾಮುಖಿ ಹೊರಚೆಲ್ಲುವಿಕೆಯ ವಸ್ತುಗಳು: ಸಾಮಾನ್ಯವಾಗಿ ಜ್ವಾಲಾಮುಖಿಗಳು ಪರ್ವತದ ಶಿಖರ ಭಾಗದಲ್ಲಿರುತ್ತದೆ. ಜ್ವಾಲಾಮುಖಿಯ ಹೊರಚೆಲ್ಲುವಿಕೆಯಿಂದ ಅನಿಲ, ಘನ ವಸ್ತು ಮತ್ತು ದ್ರವ ವಸ್ತುಗಳು ಹೊರಬರುತ್ತವೆ. ಹೊರಬರುವ ಅನಿಲ ವಸ್ತುಗಳಲ್ಲಿ ನೀರಿನ ಆವಿಯಲ್ಲದೆ, ಇಂಗಾಲದ ಡೈ ಆಕ್ಸೈಡ್, ಗಂಧಕದ ಡೈ ಆಕ್ಸೈಡ್ ಮುಂತಾದ ಅನಿಲಗಳೂ ಇರುತ್ತವೆ.

ಜ್ವಾಲಾಮುಖಿಗಳಿಂದ ಹೊರ ಚಿಮ್ಮುವ ದ್ರವವಸ್ತುಗಳೇ ಲಾವಾರಸಗಳು. ಅತ್ಯಧಿಕ ಉಷ್ಣತೆಯನ್ನು (೮೦೦ ಓಸೆ -೧೨೦೦ ಓಸೆ) ಹೊಂದಿದ ಲಾವರಸಗಳು ಗಂಟೆಗೆ ಸುಮಾರು ೧೦-೧೨ ಮೈಲು ವೇಗದಲ್ಲಿ ಚಲಿಸಬಲ್ಲವು.

ಜ್ವಾಲಾಮುಖಿಯ ಉಪಯುಕ್ತತೆ: ಜ್ವಾಲಾಮುಖಿಗಳು ಎಷ್ಟು ಹಾನಿಕಾರಕವೋ ಅಷ್ಟೇ ಉಪಕಾರಿಯೂ ಹೌದು. ಜ್ವಾಲಾಮುಖಿಯ ಸುತ್ತಲಿನ ಪ್ರದೇಶ ವೆಲ್ಲ ಫಲವತ್ತಾದ ಭೂಮಿಯಾಗುತ್ತದೆ. ಇವುಗಳಿಂದ ಹೊರಹೊಮ್ಮುವ ಅಗ್ನಿಜನ್ಯ ಶಿಲೆಗಳನ್ನು ಕಟ್ಟಡ ಮತ್ತುರಸ್ತೆ ನಿರ್ಮಾಣದಲ್ಲಿ ಬಳಸುತ್ತಾರೆ. ಜ್ವಾಲಾಮುಖಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಂಧಕ ಮತ್ತು ಇತರ ರಾಸಾಯನಿಕ ಧಾತುಗಳು ಸಿಗುತ್ತವೆ. ಜ್ವಾಲಾಮುಖಿಗಳಿಂದ ಹೊರಹೊಮ್ಮುವ ಉಗಿಯನ್ನು ವಿದ್ಯುಚ್ಛಕ್ತಿ ತಯಾರಿಸಲು ಬಳಸುತ್ತಾರೆ. ಆದ್ದರಿಂದ ಪ್ರಕೃತಿಯ ಈ ವಿಸ್ಮಯದೊಡನೆ ಸರಸಕ್ಕಿಳಿಯದೆ ದೂರದಿಂದಲೇ ಅದರ ಸೌಂದರ್ಯ ವನ್ನು ಆಸ್ವಾದಿಸುವ ಸಂಕಲ್ಪ ಮಾಡುವುದು ಅತ್ಯವಶ್ಯಕ.