Sunday, 15th December 2024

ಕಣ್ಣಿನೊಳಗಡೆ ಜೀವಂತ ಜಂತುವಿನ ನರ್ತನ !

ವೈದ್ಯ ವೈವಿಧ್ಯ

drhsmohan@gmail.com

ಜಂತು ಹುಳಗಳು ಮನುಷ್ಯನ ದೇಹದಲ್ಲಿ ಸಹಜವಾಗಿಯೇ ವಾಸಿಸುವ ಪರಾವಲಂಬಿ ಜೀವಿಗಳು. ಆದರೆ ಈ ಜೀವಿಗಳೇ ಕೆಲವೊಮ್ಮೆ ಗಂಭೀರವಾದ ಆರೋಗ್ಯ ಸಮಸ್ಯೆ ಉಂಟುಮಾಡಬಲ್ಲವು. ಕೆಲವೊಮ್ಮೆ ಮಾರಣಾಂತಿಕವೂ ಆಗಬಲ್ಲವು. ಹಾಗಾಗಿ ಅವುಗಳ ಬಗ್ಗೆ ಎಂದೂ ನಿರ್ಲಕ್ಷ್ಯ ಸಲ್ಲದು.

ನಾನು 1982ರಲ್ಲಿ ಮಣಿಪಾಲದಲ್ಲಿ ಕಣ್ಣಿನ ವಿಭಾಗದಲ್ಲಿ ಎಂಎಸ್ ಮಾಡುತ್ತಿದ್ದೆ. ಆಗ ನನ್ನ ಶಿಕ್ಷಕರೊಬ್ಬರು ೧೮ ವರ್ಷದ ಹುಡುಗನ ಕಣ್ಣು ಪರೀಕ್ಷಿಸಲು ಹೇಳಿದರು. ಎಡಗಣ್ಣಿನಲ್ಲಿ ಕಣ್ಣು ಮಂಜಾಗುತ್ತಿದೆ, ದೃಷ್ಟಿ ಕುಂಠಿತಗೊಂಡಿದೆ ಎಂಬ ಲಕ್ಷಣ ದೊಂದಿಗೆ ಆತ ಆಸ್ಪತ್ರೆಗೆ ಬಂದಿದ್ದ. ಕಣ್ಣಿನ ಹೊರ ಭಾಗದಲ್ಲಿ ಯಾವ ರೋಗ ಲಕ್ಷಣಗಳೂ ಕಂಡುಬರಲಿಲ್ಲ. ಆದರೆ ಅಕ್ಷಿಪಟಲ ಪರೀಕ್ಷಿಸಲು ಬಳಸುವ ಆಫ್ತಾಲ್ಮೋಸ್ಕೋಪ್ ಉಪಕರಣದಿಂದ ದೃಷ್ಟಿ ಹಾಯಿಸಿ ನಂತರ ವಿವರವಾಗಿ ಪರೀಕ್ಷಿಸಿದಾಗ
ದಿಢನಾದೆ.

ಅಲ್ಲಿ ಉದ್ದನೆಯ ಏನೋ ಒಂದು ಆಕೃತಿ ಆ ಕಡೆ ಈ ಕಡೆ ಚಲಿಸುತ್ತಿತ್ತು. ವಿವಿಧ ಭಂಗಿಯಲ್ಲಿ ನರ್ತಿಸುತ್ತಿತ್ತು. ಅದರ ತಲೆಬುಡ ಆಗ ನನಗೆ ಅರ್ಥವಾಗದಿದ್ದರೂ ಆ ದೃಶ್ಯವನ್ನು ಕಣ್ತುಂಬ ತುಂಬಿಕೊಂಡೆ. ಅಲ್ಲದೆ ಈಗ 40 ವರ್ಷಗಳ ನಂತರವೂ ನನ್ನ ಮನಸ್ಸಿನಲ್ಲಿ ಆ ದೃಶ್ಯ ಹಚ್ಚಹಸುರಾಗಿದೆ. ಆಗ ನನ್ನ ಶಿಕ್ಷಕರು ಕಣ್ಣಿನೊಳಗಿರುವ ಜೀವಂತ ಜಂತು ಎಂದು ವಿವರಿಸಿದಾಗ
ನನಗೆ ಆಶ್ಚರ್ಯವೋ, ವಿಸ್ಮಯವೋ, ಆನಂದವೋ- ಹೇಳುವುದು ಈಗ ಕಷ್ಟ. ದೇವರೇ ಹೀಗೂ ಉಂಟೆ? ಎಂಬ ಉದ್ಗಾರ ಹೊಮ್ಮಿತು.

ಅದೊಂದು ಮರೆಯಲಾಗದ ಆಶ್ಚರ್ಯಕರ ಭಯಾನಕ ಸನ್ನಿವೇಶ. ನಂತರ ಶಸಕ್ರಿಯೆ ಮಾಡಿ ಜಂತುವನ್ನು ಹೊರತೆಗೆಯ  ಲಾಯಿತು. ಆದರೆ ಆತನ ದೃಷ್ಟಿ ಹೋಗಿತ್ತು. ಇದು ಸಿಸ್ಟಿಸರ್ಕಸ್ ಸೆಲ್ಯುಲೋಸ್ ಎಂಬ ಜಂತು ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಒಂದು ಬಗೆ. ’ಟೀನಿಯ ಸೋಲಿಯಂ’ ಎಂಬ ಲಾಡಿ ಹುಳುವಿನ ಮರಿಯೇ (Larva) ಸಿಸ್ಟಿಸರ್ಕಸ್ ಸೆಲ್ಯೂಲೊಸ್. ನಾವು ಸೇವಿಸುವ ಆಹಾರ, ನೀರು ತರಕಾರಿಗಳು – ಮಲದ ಅಂಶಗಳಿಂದ ಕಲುಷಿತಗೊಂಡಾಗ ಟೀನಿಯ ಸೋಲಿಯಂ ಜಂತುವಿನ ಮೊಟ್ಟೆ ದೇಹ ಪ್ರವೇಶಿಸುತ್ತದೆ.

ಇದರ ಉಪಟಳ ಮೆಕ್ಸಿಕೋ, ಆಫ್ರಿಕಾ, ಯುರೋಪಿನ ಪೂರ್ವ ಭಾಗ, ಮಧ್ಯ ಮತ್ತು ದಕ್ಷಿಣ ಅಮೆರಿಕಾ ಮತ್ತು ಪೂರ್ವ
ಏಶಿಯಾದ ದೇಶಗಳಲ್ಲಿ ಬಹಳ ಕಾಲದಿಂದ ಇದೆ. ಈ ಜಂತು ಮುಖ್ಯವಾಗಿ ನಮ್ಮ ದೇಹದಲ್ಲಿ ಕಣ್ಣು ಮತ್ತು ಕೇಂದ್ರೀಯ ನರ ವ್ಯವಸ್ಥೆಗೆ ಹಾನಿ ಮಾಡುತ್ತದೆ.

ಕಣ್ಣಿನಲ್ಲಿ ಜಂತು: ಸಾಮಾನ್ಯವಾಗಿ ಕಣ್ಣಿನ ಹೊರ ಭಾಗ- ಕಣ್ಣಿನ ರೆಪ್ಪೆ, ಅಕ್ಷಿಪಟಲ ಮತ್ತು ಕಾಚಿರಸ (Vitreous) ಗಳಲ್ಲಿ ಈ ಜಂತು ಕಾಣಿಸಿಕೊಳ್ಳುತ್ತದೆ. ಸೋಮೆರಿಂಗ್ ಎಂಬ ಪಾಶ್ಚಾತ್ಯ ವೈದ್ಯ 1830ರಲ್ಲಿಯೇ ಕಣ್ಣಿನಲ್ಲಿ ಈ ಜಂತುವಿನ ಬಗ್ಗೆ ವರದಿ ಮಾಡಿದ್ದರೂ 1836ರಲ್ಲಿ ಇನ್ನೋರ್ವ ವೈದ್ಯ ಸ್ಕಾಟ್, ಕಣ್ಣಿನಿಂದ ಜೀವಂತ ಜಂತುವನ್ನು ಹೊರ ತೆಗೆದು ಪ್ರದರ್ಶಿಸಿದಾಗ ವೈದ್ಯಲೋಕ ಆಶ್ಚರ್ಯಚಕಿತವಾಗಿ ಇದನ್ನು ಗಮನಿಸಿತು.

ಅನಂತರ ಆ ಬಗ್ಗೆ ಹೆಚ್ಚು ಹೆಚ್ಚು ನೇತ್ರ ವೈದ್ಯರು ಗಮನಹರಿಸಲಾರಂಭಿಸಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ಕಣ್ಣಿನ ಒಳಭಾಗ ದಲ್ಲಿ ಇದು ಹೆಚ್ಚು ಕಾಣಿಸಿಕೊಂಡರೆ ಭಾರತದಲ್ಲಿ ಕಣ್ಣಿನ ಹೊರಭಾಗ- ಕಣ್ಣಿನ ರೆಪ್ಪೆ ಮತ್ತು ಆಸು ಪಾಸುಗಳಲ್ಲೇ ಹೆಚ್ಚು
ಕಾಣಿಸಿ ಕೊಂಡಿದೆ. ರೆಪ್ಪೆಯ ಭಾಗದಲ್ಲಿ ಸಣ್ಣ ಗುಳ್ಳೆಯಂತೆ ಶುರುವಾಗಿ ನಿಧಾನವಾಗಿ ದೊಡ್ಡದಾಗುತ್ತ ಹೋಗುತ್ತದೆ.

ಹೆಚ್ಚಿನ ನೋವು ಇರುವುದಿಲ್ಲ. ಕೆಲವೊಮ್ಮೆ ಈ ಜಂತು ತಿರುಗಾಟದ ಹಾದಿಯಲ್ಲಿ ಕ್ರಮಿಸುತ್ತಾ ಕಪ್ಪುಗುಡ್ಡೆಯ ಭಾಗದಲ್ಲಿ ಬಿಳಿಯ ದಾರದ ರೀತಿ ಕಾಣಿಸಿಕೊಳ್ಳಬಹುದು. ಬಳಿಕ ಕಣ್ಣಿನ ನೈಸರ್ಗಿಕ ಮಸೂರದ ಹಿಂದಿರುವ ಕಾಚಿರಸದ ಕುಕ್ಷಿಯಲ್ಲಿ
(Vitreous Cavity) ಅಥವಾ ಅಕ್ಷಿಪಟಲದ ಮುಂದೆ ಕಾಣಿಸಿಕೊಳ್ಳುತ್ತದೆ. ಆಗ ಗುಂಡು ಸೂಜಿಯ ಕೊನೆಯಂತೆ ಇರುವ ಒಂದು ತಲೆ (scolex) ಅದರ ಹಿಂಭಾಗದಲ್ಲಿ 4-6 ಸೆಂ.ಮೀ. ಉದ್ದದ ಜಂತು ಆಚೀಚೆ ಹರಿದಾಡುತ್ತಿರುತ್ತದೆ.

ಹೀಗೆಲ್ಲ ಅದು ಹರಿದಾಡುವಾಗ ಕಣ್ಣಿನೊಳಗಿನ ಅಂಗಾಂಶಗಳನ್ನು ವಿರೂಪಗೊಳಿಸಿ ದೃಷ್ಟಿ ಪತನಕ್ಕೆ ಕಾರಣವಾಗುತ್ತದೆ. ಅಕ್ಷಿಪಟಲದಲ್ಲಿ ರಕ್ತ ಸ್ರಾವವಾಗಬಹುದು. ಅಕ್ಷಿಪಟಲದ ಕಳುಚುವಿಕೆ (Retinal detachment) ಆಗಬಹುದು. ಕಾಚೀರಸ ದಲ್ಲಿ ರಕ್ತಸ್ರಾವವಾಗಬಹುದು. (Vitreous Hemorrhage). ಅಕ್ಷಿಪಟಲದಲ್ಲಿ ಕೆಟ್ಟ ದ್ರವ ಶೇಖರಣೆಯಾಗಿ ಅಕ್ಷಿಪಟಲದ ಎಡಿಮ ಅಥವಾ ಉಬ್ಬುವಿಕೆ ಆಗಬಹುದು. ಇವೆಲ್ಲ ಕಣ್ಣನ್ನು ಅಂಧವಾಗಿಸುವ ವಿವಿಧ ಕಾರಣಗಳು.

ಕಣ್ಣಿನೊಳಗೆ ದೃಷ್ಟಿ ಹಾಯಿಸಿ ನೋಡುವ ಉಪಕರಣ ಆಫ್ತಾಲ್ಮೋಸ್ಕೋಪ್ (ಅಂತರ ದರ್ಶಕ) ದಲ್ಲಿ ಸ್ಪಷ್ಟವಾಗಿ ಜಂತು
ಕಾಣಿಸಿದಾಗ ಕಾಯಿಲೆ ಪತ್ತೆ ಸುಲಭ. ಹಾಗೆ ಕಾಣಿಸದಿದ್ದಾಗ ಸಿ.ಟಿ ಸ್ಕ್ಯಾನ್ ಅಥವಾ ಎಂಆರ್‌ಐ ಸ್ಕ್ಯಾನ್ ಮಾಡಿ ಕಾಯಿಲೆ
ದೃಢಪಡಿಸಬೇಕಾಗುತ್ತದೆ. ಮೆದುಳಿಗೂ ಕೆಲವೊಮ್ಮೆ ಆವರಿಸುವುದರಿಂದ ಸ್ಕ್ಯಾನ್ ತುಂಬಾ ಅಗತ್ಯ. ಕಣ್ಣಿನ ಹೊರಭಾಗದ ರೆಪ್ಪೆಯ ಭಾಗದಲ್ಲಿ ಜಂತು ಗೋಚರಿಸಿ ಸುಲಭ ಶಸ್ತ್ರಕ್ರಿಯೆಯಿಂದ ಹೊರತೆಗೆಯಲು ಸಾಧ್ಯವಾದರೆ ಚಿಕಿತ್ಸೆ ಸುಲಭ. ಒಳಭಾಗದ ಅಕ್ಷಿಪಟಲ ಮತ್ತು ಕಾಚಿರಸಗಳಲ್ಲಿರುವ ಜಂತುವನ್ನು ತುಂಬಾ ಕ್ಲಿಷ್ಟಕರ ಶಸ್ತ್ರಕ್ರಿಯೆ ಮಾಡಿ ಹೊರ ತೆಗೆಯಬಹುದು.

ಮೆದುಳಿನಲ್ಲಿ ಸಿಸ್ಟಿಸರ್ಕಸ್: ವಯಸ್ಕರಲ್ಲಿ ಕಾಣಿಸಿಕೊಳ್ಳುವ ಅಪಸ್ಮಾರ ಅಥವಾ ಫಿಟ್ಸ್ ಕಾಯಿಲೆಗೆ ಹೆಚ್ಚಿನ ಸಂದರ್ಭ ಸಿಸ್ಟಿಸರ್ಕಸ್ ಸೆಲ್ಯೂಲೋಸ್ ಕಾರಣವಾಗಿರುತ್ತದೆ. ಇದು ಹೆಚ್ಚಾಗಿ ಬೆಳವಣಿಗೆ ಹೊಂದುತ್ತಿರುವ ದೇಶಗಳಾದ ಮೆಕ್ಸಿಕೋ, ಲ್ಯಾಟಿನ್ ಅಮೆರಿಕಾ, ಸಬ್ ಸಹಾರಾದ ಪ್ರದೇಶಗಳಲ್ಲಿ, ಭಾರತ ಮತ್ತು ಪೂರ್ವ ಏಷಿಯಾ ರಾಷ್ಟ್ರಗಳಲ್ಲಿ ಕಂಡುಬರುತ್ತದೆ.
ಮಕ್ಕಳಲ್ಲಿ ಕಂಡು ಬರುವ ಫಿಟ್ಸ್ ಕಾಯಿಲೆಗೂ ಕಾರಣವಾಗುತ್ತದೆ.

ಇದು ಕಲುಷಿತ ನೀರು, ಆಹಾರದಿಂದ ಬರುವ ಕಾಯಿಲೆ. ಟೀನಿಯ ಸೋಲಿಯಂ ಜಂತುವಿನ ಮೊಟ್ಟೆಗಳು ನೀರು, ಆಹಾರದ ಮೂಲಕ ದೇಹ ಪ್ರವೇಶಿಸಿದಾಗ ಯಾವ ಭಾಗಕ್ಕೆ ಬೇಕಾದರೂ ಹೋಗಿ ಉಪಟಳ ತೋರಿಸಬಹುದು. ಮುಖ್ಯವಾಗಿ ಕಂಡುಬರುವ ಸ್ಥಳಗಳೆಂದರೆ ೧. ಮೆದುಳು, ಮತ್ತು ಕೇಂದ್ರೀಯ ನರವ್ಯೂಹ, ೨. ಮಾಂಸ ಖಂಡಗಳ ಮತ್ತು ಚರ್ಮದ ಒಳಗಿನ
ಭಾಗಗಳು, ೩.ಕಣ್ಣು.

ಜಂತು ಹುಳುಗಳ ಬಗ್ಗೆ ಸ್ವಲ್ಪ ಗಮನಿಸೋಣ: ಪ್ರಾಣಿ ಸಾಕಣೆ ಮತ್ತು ಆಹಾರದ ಗುಣಮಟ್ಟ ಕಾಯ್ದುಕೊಂಡರೆ ಜಂತು ಹುಳುಗಳ ಬಾಧೆ ಮತ್ತು ಅವುಗಳಿಂದ ಉಂಟಾಗುವ ಸೋಂಕು ನೋವು ಎನ್ನುತ್ತಿದ್ದರೆ ಜಂತುಹುಳುವಿನ ಸಂದೇಹ ಸಹಜ. ಎಷ್ಟೋ ಬಾರಿ ವೈದ್ಯರ ಸಲಹೆ ಪಡೆಯದೆ ಔಷಧ ಕೊಟ್ಟ ಉದಾಹರಣೆಗಳಿವೆ. ಇದು ಮಕ್ಕಳಲ್ಲಿ ಮಾತ್ರ ಕಾಣಿಸುವುದಿಲ್ಲ. ಯಾವ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳಬಹುದು. ಜನರು ದೂರದ ಊರುಗಳಿಗೆ, ದೇಶಗಳಿಗೆ ಮೊದಲಿಗಿಂತ ಈಗ ಹೆಚ್ಚು ಪ್ರವಾಸ ಮಾಡುತ್ತಿದ್ದಾರೆ. ಆಗ ಆಹಾರದಲ್ಲಿ ಏರುಪೇರು ಸ್ವಾಭಾವಿಕ. ಆಹಾರದಿಂದ ಬರುವ ಪ್ರಾಣಿಜನ್ಯ ರೋಗಗಳಲ್ಲಿ 24 ವಿಧದ ಪರಾವಲಂಬಿ ಜಂತುಗಳನ್ನು ಜಾಗತಿಕ ತಜ್ಞರು ಗುರುತಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದ 10 ಜಂತುಗಳು ಮಹತ್ವದ್ದು.

ಅವುಗಳಲ್ಲಿ ಕೆಲವನ್ನು ಗಮನಿಸೋಣ:

೧. ಟೀನಿಯ ಸೋಲಿಯಂ: ಹಂದಿ ಲಾಡಿ ಹುಳು ಎಂದು ಕರೆಯಲ್ಪಡುವ ಇದು ಕೆಲವೊಮ್ಮೆ 10 ಮೀಟರ್ ನಷ್ಟು ಉದ್ದವೂ ಬೆಳೆಯಬಲ್ಲದು. ಮನುಷ್ಯನ ಹೊಟ್ಟೆ ಪ್ರವೇಶಿಸಿ ತೊಂದರೆ ಕೊಡುವ ಅತೀ ದೊಡ್ಡ ರಿಬ್ಬನ್ ರೀತಿಯ ಜಂತು ಎಂದು ಇದನ್ನು ಗುರುತಿಸಲಾಗಿದೆ. ಸರಿಯಾಗಿ ಬೇಯಿಸದೆ ತಿನ್ನುವ ಹಂದಿ ಮಾಂಸದಿಂದ ಈ ಸೋಂಕು ಬರುತ್ತದೆ. ಮರಿ ಜಂತುವಿನ ಸಿಸ್ಟ್ ಗಳು ಮನುಷ್ಯನ ಹೊಟ್ಟೆ ಸೇರಿ ನಂತರ ಕರುಳನ್ನು ಸೇರುತ್ತವೆ.

ನಾವು ಸೇವಿಸುವ ಆಹಾರದ ಪೋಷಕಾಂಶಗಳನ್ನು ಹೀರುತ್ತಾ ಬರುತ್ತವೆ. ಪರಿಣಾಮ ಅಂತಹ ವ್ಯಕ್ತಿ ನಿಧಾನವಾಗಿ ನಿತ್ರಾಣ ಗೊಳ್ಳುತ್ತಾನೆ, ನಂತರ ತೆಳ್ಳಗಾಗುತ್ತಾನೆ. ಈ ಮರಿ ಜಂತುವಿನ ಸಿಸ್ಟ್ ಗಳು ದೇಹದಲ್ಲಿ ರಕ್ತದ ಮೂಲಕ ಎಲ್ಲಿ ಬೇಕಾದರೂ ಚಲಿಸಬಲ್ಲವು. ಆದರೆ ಹೆಚ್ಚಾಗಿ ಮೆದುಳಿನಲ್ಲಿ ಹೋಗಿ ತೊಂದರೆ ಕೊಡಲಾರಂಭಿಸುತ್ತವೆ. ಆ ವ್ಯಕ್ತಿಯಲ್ಲಿ ಅಪಸ್ಮಾರ ಉಂಟು ಮಾಡುತ್ತವೆ. ಬಡ ದೇಶಗಳಲ್ಲಿ ಫಿಟ್ಸ್ ಕಾಯಿಲೆಗೆ ಹೆಚ್ಚಾಗಿ ಕಾರಣವಾಗುವುದೇ ಈ ಸಿಸ್ಟಿಸರ್ಕೋಸಿಸ್ ಸೋಂಕು.

೨. ಕರುಳಿನ ಸಾಮಾನ್ಯ ಜಂತು: ಮನುಷ್ಯರಲ್ಲಿ ಹೆಚ್ಚು ಕಂಡು ಬರುವ ಜಂತು ಹುಳುವೇ ಇದು. ಆಸ್ಕಾರಿಸ್ ಲುಂಬ್ರಿಕಾಯ್ಡ್ ವರ್ಗಕ್ಕೆ ಸೇರಿದ ಇದು ಅತೀ ದೊಡ್ಡ ಅಥವಾ ಉದ್ದದ (35 ಸೆ ಮೀ.) ಜಂತು ಹುಳು. ಜಗತ್ತಿನಾದ್ಯಂತ 25% ಜನರಲ್ಲಿ ಈ ಜಂತುಹುಳುವಿದೆ ಎಂದರೆ ಇದರ ಅಗಾಧತೆ ಗಮನಿಸಬೇಕಾದ್ದೇ. ದೇಹ ಪ್ರವೇಶಿಸಿದ ಮೊಟ್ಟೆಗಳು ಆತನ ಕರುಳಿನಲ್ಲಿ
ಮರಿಜಂತುಗಳಾಗುತ್ತವೆ. ನಂತರ ದೇಹದ ವಿವಿಧ ಭಾಗಗಳಿಗೆ ರಕ್ತದ ಮೂಲಕ ಸಾಗುತ್ತವೆ. ಅವು ಶ್ವಾಸಕೋಶಕ್ಕೆ ಹೋಗಬಹುದು.

ಹೆಣ್ಣು ಜಂತು ಪ್ರತಿದಿನ ಸಾವಿರಾರು ಮೊಟ್ಟೆ ಉತ್ಪಾದಿಸಿ ವ್ಯಕ್ತಿಯ ಮಲದಲ್ಲಿ ವಿಸರ್ಜನೆ ಹೊಂದಿ ನಂತರ ಕಾಯಿಲೆ
ಇತರರಿಗೆ ಹರಡಲು ಕಾರಣವಾಗುತ್ತವೆ. ಮುಖ್ಯ ರೋಗ ಲಕ್ಷಣ ಎಂದರೆ ಹೊಟ್ಟೆನೋವು, ಭೇದಿ, ಕೆಲವೊಮ್ಮೆ ವಾಂತಿ ಬರಬಹುದು.

೩. ಕೊಕ್ಕೆ ಹುಳು (ಆಂಕೈಲೋಸ್ಟೋಮಿಯ ಡ್ಯುಯೋಡಿನೇಲ್): ಮನುಷ್ಯರಲ್ಲಿ ಹೆಚ್ಚಾಗಿ ಕಂಡುಬರುವ ಮತ್ತೊಂದು ಜಂತು ಕೊಕ್ಕೆ ಹುಳು. ಇದು ವ್ಯಕ್ತಿಯ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದರೆ ಆತನ ಕರುಳಿನ ಪದರಗಳಿಂದ ರಕ್ತ ಹೀರಲ್ಪಟ್ಟು ಆತನಿಗೆ ರಕ್ತಹೀನತೆ ಅಥವಾ ಅನೀಮಿಯ ಉಂಟು ಮಾಡುತ್ತವೆ. ಬರಿ ಕಾಲಿನಲ್ಲಿ ನಡೆಯುವರಿಗೆ ಈ ಸೋಂಕು
ಜಾಸ್ತಿ. ಮರಿಜಂತು ಚರ್ಮದ ಮೂಲಕ ದೇಹ ಪ್ರವೇಶಿಸಿ ಅಲ್ಲಿ ಹುಣ್ಣು ಉಂಟು ಮಾಡುತ್ತವೆ.

ನಂತರ ಮರಿ ಹುಳು ದೊಡ್ಡದಾದಂತೆ ಕರುಳಿನ ಭಾಗಕ್ಕೆ ಚಲಿಸುತ್ತದೆ. ಮುಖ್ಯ ರೋಗ ಲಕ್ಷಣಗಳೆಂದರೆ ಕರುಳಿನ ಭಾಗದಲ್ಲಿ
ರಕ್ತಸ್ರಾವ, ತೀವ್ರ ಹೊಟ್ಟೆ ನೋವು, ಅತಿಭೇದಿ, ರಕ್ತ ಹೀನತೆ ಅಥವಾ ಅನೀಮಿಯ. ಅಂತಹ ವ್ಯಕ್ತಿಗೆ ಪೋಷಕಾಂಶಗಳ ತೀವ್ರ
ಕೊರತೆ ಉಂಟಾಗಿ ನಿಶ್ಯಕ್ತಿ ಹೊಂದುತ್ತಾನೆ. ಹುಳು ಚರ್ಮದಲ್ಲಿ ರೋಗ ಲಕ್ಷಣ ತೋರಿಸಿದರೆ ತೀವ್ರ ರೀತಿಯ ಮೈ ತುರಿಕೆ ಉಂಟಾಗುತ್ತದೆ. ಇದರಿಂದ ಪ್ರತಿ ವರ್ಷ 50-60 ಸಾವಿರ ಜನ ಮರಣ ಹೊಂದುತ್ತಾರೆ ಎಂದು ಅಂದಾಜಿಸಲಾಗಿದೆ.

೪. ಎಂಟಮೀಬಾ ಹಿಸ್ಟೊಲಿಟಿಕಾ: ಅಮೀಬಿಯಾಸಿಸ್ ಎಂಬ ಭೇದಿ ಉಂಟು ಮಾಡುವ ಈ ಏಕಕೋಶ ಜೀವಿ ಜಗತ್ತಿನ ಎಲ್ಲಾ ದೇಶಗಳಲ್ಲಿದೆ. ಮುಖ್ಯ ರೋಗಲಕ್ಷಣ ಎಂದರೆ ತೀವ್ರ ಹೊಟ್ಟೆ ನೋವು ಮತ್ತು ಭೇದಿ. ಕೆಲವೊಮ್ಮೆ ಇದು ಹೊರಗೆ ಬಂದು ಲಿವರ್ ಗೆ ಹೋಗಿ ಅಲ್ಲಿ ಕೀವು ಉಂಟು ಮಾಡಿ ಮಾರಣಾಂತಿಕವಾಗಬಲ್ಲದು.

ತಡೆಗಟ್ಟುವುದು ಹೇಗೆ?
ಹಣ್ಣು ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು. ಮಾಂಸವನ್ನು ಸರಿಯಾಗಿ ಬೇಯಿಸಿಯೇ ತಿನ್ನಬೇಕು. ಮನೆಯ ಮತ್ತು ಕಾಡು ಪ್ರಾಣಿಗಳಿಂದ ನಮ್ಮ ಆಹಾರ ಕಲುಷಿತವಾಗ ದಂತೆ ನೋಡಿಕೊಳ್ಳಬೇಕು. ಪ್ರಾಣಿಗಳ ಸಾಕಣೆ ಮತ್ತು ಆಹಾರದ ಗುಣಮಟ್ಟವನ್ನು ಕಾಯ್ದುಕೊಂಡರೆ ಜಂತು ಹುಳುಗಳ ಸೋಂಕು ತಡೆಯಬಹುದು.