ಚದುರಂಗ
ರಮಾನಂದ ಶರ್ಮಾ
ರಾಷ್ಟ್ರೀಯ ಪಕ್ಷಗಳು ಲೋಕಸಭಾ ಚುನಾವಣೆಗೆ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಾಗ, ರಾಜ್ಯಾದ್ಯಂತ ಆಯಾ ಪಕ್ಷಗಳ ಹಲವು ಕಾರ್ಯಕರ್ತರು ಮತ್ತು ಧುರೀಣರಿಂದ ಅಸಮಾಧಾನ-ಅತೃಪ್ತಿ ವ್ಯಕ್ತವಾಗಿತ್ತು, ಪ್ರತಿಭಟನೆಗಳೂ ಹೊಮ್ಮಿದ್ದವು.
ಆಯಾ ಪಕ್ಷಗಳ ವರಿಷ್ಠರಲ್ಲಿ ನಡುಕ ಹುಟ್ಟಿಸುವಷ್ಟರ ಮಟ್ಟಿಗೆ ಇದು ತಾರಕಕ್ಕೇರಿದ್ದೂ ಇದೆ. ಈ ಬೆಳವಣಿಗೆಗಳಿಂದ ಚುನಾ ವಣಾ ಫಲಿತಾಂಶದ ಮೇಲಾಗುವ ನಕಾರಾತ್ಮಕ ಪರಿಣಾಮದ ಬಗ್ಗೆ ಮಾಧ್ಯಮಗಳು ಸುದೀರ್ಘ ಟೀಕೆ-ಟಿಪ್ಪಣಿ, ಭಾಷ್ಯ ಗಳನ್ನೂ ಬರೆದವು. ಒಂದು ಹಂತದಲ್ಲಂತೂ, ಪ್ರಕಟಿತ ಪಟ್ಟಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಬಹುದೇನೋ ಎಂಬ ಗುಸುಗುಸು ಕೂಡಾ ಕೇಳಿಬಂದಿತ್ತು ಮತ್ತು ಕೆಲವು ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದರು.
ಹಾಗೆ ನೋಡಿದರೆ, ಚುನಾವಣಾ ಪ್ರಕ್ರಿಯೆಗಳು ಆರಂಭವಾದಾಗ ‘ಇವು ತೀರಾ ಸಾಮಾನ್ಯವಾದ ಬೆಳವಣಿಗೆಗಳೇ, ಆದರೆ ಈ ಬಾರಿ ಇದು ತುಸು ಹೆಚ್ಚೇನೋ..’ ಎಂದು ರಾಜಕೀಯ ವೀಕ್ಷಕರು ಉದ್ಗಾರ ಎತ್ತುವಷ್ಟರ ಮಟ್ಟಿಗೆ ಸದರಿ ಭಿನ್ನಮತದ ದನಿಗಳು
ಸಂಚಲನ ಉಂಟುಮಾಡಿದ್ದವು. ಈಗ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ೧೪ ಕ್ಷೇತ್ರಗಳಲ್ಲಿ ೩೫೦ಕ್ಕೂ ಮೀರಿ ನಾಮ ಪತ್ರಗಳ ಸಲ್ಲಿಕೆಯಾಗಿದೆ. ಇನ್ನಿತರ ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಅಖಾಡಕ್ಕೆ ಇಳಿದಿದ್ದರೂ, ಒಂದೆರಡು ನಿದರ್ಶನಗಳನ್ನು ಹೊರತುಪಡಿಸಿದರೆ ಭಿನ್ನಮತಿಯರು, ಬಂಡಾಯಗಾರರು ಎಂಬ ಹಣೆಪಟ್ಟಿ ಕಟ್ಟಿಕೊಂಡವರು ಯಾರೂ ದೊಡ್ಡ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದಂತಿಲ್ಲ. ಅಷ್ಟರ ಮಟ್ಟಿಗೆ ರಾಷ್ಟ್ರೀಯ ಪಕ್ಷಗಳು ನಿರಾಳವಾಗಿವೆ ಅಥವಾ ಅರ್ಧ ಗೆಲುವು ಸಾಧಿಸಿದಂತಾಗಿದೆ.
ಯಾವುದೇ ಕ್ಷೇತ್ರದಲ್ಲಿನ ಭಿನ್ನಮತವನ್ನು ವರಿಷ್ಠರು ಈ ಬಾರಿ ಗಂಭೀರವಾಗಿ ಪರಿಗಣಿಸದೆ, ಅದರ ನಿಭಾವಣೆಯನ್ನು ಸ್ಥಳೀಯ ಧುರೀಣರಿಗೆ ಬಿಟ್ಟಿದ್ದರು. ಟಿಕೆಟ್ ವಂಚಿತರಲ್ಲಿ ಕೆಲವರಿಗೆ ರಾಜ್ಯಸಭೆಗೆ ಕಳಿಸುವ, ಸ್ವಲ್ಪ ಹಿರಿಯರಿಗೆ ರಾಜ್ಯ ಪಾಲರ ಹುದ್ದೆ ನೀಡುವ ಭರವಸೆ ಹೊಮ್ಮಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಪಕ್ಷೇತರರಾಗಿಯಾದರೂ ಸರಿ ಮಂಡ್ಯದಲ್ಲಿ ಸ್ಪರ್ಧಿ ಸಿಯೇ ಸಿದ್ಧ ಎನ್ನುತ್ತಿದ್ದ ಸುಮಲತಾ ಅವರು, ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಮಾಡಿ ಬಂದ ನಂತರ ರಾಗ ಬದಲಿಸಿದ್ದು ಈ ಅಭಿಪ್ರಾಯಕ್ಕೆ ಇಂಬುಕೊಡುತ್ತದೆ.
ಮಂಡ್ಯದಲ್ಲಿ ಕುಮಾರಸ್ವಾಮಿಯವರ ಗೆಲುವಿಗೆ ಸುಮಲತಾ ಅವರು ಶ್ರಮಿಸಬೇಕು ಎಂಬ ನಿಬಂಧನೆಯು ಈ ಭರವಸೆಯ ಹಿಂದಿದೆ ಎನ್ನಲಾಗುತ್ತಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೂ ಉಚಿತವಾಗಿ ಬರುವುದಿಲ್ಲ, ಪ್ರತಿಯೊಂದಕ್ಕೂ ಒಂದು ಬೆಲೆ ಇರುತ್ತದೆ. ಇನ್ನು, ರಾಜಕಾರಣದಲ್ಲಿ ಬಹುತೇಕ ಎಲ್ಲ ಹುದ್ದೆಗಳನ್ನೂ ಅನುಭವಿಸಿದ ಸದಾನಂದ ಗೌಡರಿಗೆ ಯಾವು
ದಾದರೂ ರಾಜ್ಯದ ರಾಜ್ಯಪಾಲರ ಹುದ್ದೆಯನ್ನು ನೀಡಬಹುದು ಎಂಬ ಊಹಾಪೋಹ ಕೇಳಿಬರುತ್ತಿದೆ. ಅವರು ಚುನಾವಣಾ ಪ್ರಚಾರಕಾರ್ಯದಲ್ಲಿ ಸಕ್ರಿಯರಾಗಿರುವುದನ್ನು ನೋಡಿದರೆ ಈ ಊಹಾಪೋಹದಲ್ಲಿ ಸ್ವಲ್ಪ ತೂಕ ಕಾಣುತ್ತದೆ.
ಟಿಕೆಟ್ ನಿರಾಕರಣೆಯಾಗುತ್ತಿದ್ದಂತೆ ಅವರಿಂದ ಹೊಮ್ಮಿದ ಮಾತು-ವರ್ತನೆ ಹಾಗೂ ಇತ್ತೀಚಿನ ಅವರ ಮಾತುಗಳನ್ನು ತುಲನೆ ಮಾಡಿದಾಗ ಇದು ಅರಿವಾಗುತ್ತದೆ. ಒಂದು ಘಟ್ಟದಲ್ಲಿ ಅವರು ಮತ್ತೊಬ್ಬ ‘ಜಗದೀಶ್ ಶೆಟ್ಟರ್’ ಆಗುತ್ತಾ ರೇನೋ ಎಂಬ ಭಾವನೆ ಜನರಲ್ಲಿ ಮೂಡಿತ್ತು. ಕಾಂಗ್ರೆಸ್ ಪಕ್ಷವು ಅವಸರ ಮಾಡಿ ಅವರಿಗೆ ಬಾಗಿಲನ್ನು ತೆರೆಯದಿದ್ದುದು ಹಾಗೂ ಚುನಾವಣಾ ಹೊಸ್ತಿ ಲಲ್ಲಿ ಎಡವಟ್ಟು ಮಾಡಿಕೊಳ್ಳದಿರುವ ಬಿಜೆಪಿಯ ತಂತ್ರಗಾರಿಕೆ ಇವು ಸದಾನಂದ ಗೌಡರನ್ನು ಬಿಜೆಪಿಯಲ್ಲಿಯೇ ಆನಂದ ವಾಗಿಟ್ಟಿದೆ ಎನ್ನಲಾಗುತ್ತದೆ.
ಭಿನ್ನಮತ ಶಮನವಾಯಿತು ಎಂದು ಎಷ್ಟೇ ತೃಪ್ತಿ ಹೊಂದಿದರೂ, ಶಿವಮೊಗ್ಗ ಕ್ಷೇತ್ರದ ಕೆ.ಎಸ್.ಈಶ್ವರಪ್ಪ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅನಂತಕುಮಾರ್ ಹೆಗಡೆ, ವರಿಷ್ಠರಿಗೆ ತಮ್ಮದೇ ಆದ ರೀತಿಯಲ್ಲಿ ಸೆಡ್ಡುಹೊಡೆದು ನಿಂತಿದ್ದಾರೆ. ಟಿಕೆಟ್ ವಂಚಿತರಾದ ಮೇಲೆ ಅನಂತಕುಮಾರ್ ಹೆಗಡೆ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ. ಈಶ್ವರಪ್ಪ ತಮ್ಮ ಹೇಳಿಕೆಗಳಿಂದ ವರಿಷ್ಠರಿಗೆ ತಲೆನೊವು ಉಂಟುಮಾಡುತ್ತಿದ್ದರೆ, ಹೆಗಡೆಯವರು ಮೌನವಾಗಿದ್ದುಕೊಂಡೇ ಈ ಕೆಲಸವನ್ನು ಇನ್ನೂ ಜೋರಾಗಿ ಮಾಡುತ್ತಿದ್ದಾರೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಸಚಿವ ಅಮಿತ್ ಶಾ ಅವರು ತಮ್ಮ ಇತ್ತೀಚಿನ ಬೆಂಗಳೂರು ಭೇಟಿ ಸಮಯದಲ್ಲಿ, ಹೆಗಡೆ ಯವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಸರಿಯಾಗಿ ಸ್ಪಂದಿಸಲಿಲ್ಲವಂತೆ.
‘ವೈಯಕ್ತಿಕ ಕೆಲಸದಲ್ಲಿ ತೊಡಗಿದ್ದೇನೆ, ಸಮಯ ಬಂದಾಗ ತಮ್ಮೊಂದಿಗೆ ಮಾತನಾಡುತ್ತೇನೆ; ಈಗ ಮಾತನಾಡಲು ಯಾವುದೇ ವಿಚಾರವಿಲ್ಲ. ಬಿಜೆಪಿಗೆ ನನ್ನ ಬದ್ಧತೆ ಬೇಕಿದ್ದರೆ ಉಳಿಸಿಕೊಳ್ಳಬಹುದಿತ್ತು, ಈ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ’ ಎಂಬ ಹೆಗಡೆಯವರ ಮಾತು ಕೇಳಿ ಅಮಿತ್ ಶಾ ನಿರುತ್ಸಾಹಗೊಂಡರಂತೆ. ವಿಶ್ಲೇಷಕರ ಪ್ರಕಾರ ಹೆಗಡೆಯವರು ಪಕ್ಷದಿಂದ ದೂರ ಸರಿಯುತ್ತಿದ್ದಾರೆ.
ಇತ್ತೀಚಿನ ತಮ್ಮ ಕಾರ್ಯಕರ್ತರ ಸಭೆಯಲ್ಲಿ, ‘ಯಾರೇ ಸ್ಪರ್ಧಿಸಲಿ, ಅವರನ್ನು ಗೆಲ್ಲಿಸಿ ಮೋದಿಯವರನ್ನು ಇನ್ನೊಮ್ಮೆ ಪ್ರಧಾನಿ ಮಾಡಬೇಕು ಮತ್ತು ಬಿಜೆಪಿ ೪೦೦ಕ್ಕೂ ಮೀರಿ ಸ್ಥಾನಗಳನ್ನು ಗೆಲ್ಲುವಂತಾಗಬೇಕು’ ಎಂದು ಆರ್ಭಟಿಸುತ್ತಿದ್ದ ಅವರು, ತಮಗೆ ಟಿಕೆಟ್ ನಿರಾಕರಣೆಯಾಗುತ್ತಿದ್ದಂತೆ ಪ್ಲೇಟ್ ಬದಲಿಸಿದ್ದು ಅಚ್ಚರಿ ಮೂಡಿಸಿದೆ. ೪೦೦ ಸ್ಥಾನಗಳಿರಲಿ, ಒಂದೇ ಒಂದು ಸ್ಥಾನಕ್ಕೆ ಸಹಾಯಹಸ್ತ ನೀಡಲೂ ಅವರು ಮುಂದೆ ಬರುತ್ತಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ ಗಮನಾರ್ಹ ಪ್ರಮಾಣದ ಹಿಂಬಾಲಕರನ್ನು ಹೊಂದಿರುವ ಅವರ ಮುಂದಿನ ನಡೆ ಏನಿರಬಹುದು ಎಂಬುದನ್ನು ಎಲ್ಲಾ ಪಕ್ಷದವರು ಕಾತರದಿಂದ ಕಾಯುವಂತಾಗಿದೆ. ಈ ಹಿಂದೆ ಪ್ರಧಾನಿಯವರು ಜಿಲ್ಲೆಗೆ ಬಂದಿದ್ದಾಗಲೂ ಅವರ ಸ್ವಾಗತಕ್ಕೆ ಬಾರದ ಹೆಗಡೆಯವರು ಈಗ ಅಮಿತ್ ಶಾ ಅವರಿಗೂ
ಸರಿಯಾಗಿ ಸ್ಪಂದಿಸಿಲ್ಲ.
ಕಾಗೇರಿಯವರ ಪರವಾಗಿ ಚುನಾವಣಾ ಪ್ರಚಾರಕ್ಕೂ ಧುಮುಕಿಲ್ಲ. ಈ ಮೂರು ಬೆಳವಣಿಗೆಗಳು ಮುಂದಿನ ಸಾಧ್ಯತೆಗಳ ಬಗ್ಗೆ ವಿಶ್ಲೇಷಿಸಲು ರಾಜಕೀಯ ಪಂಡಿತರಿಗೆ ಭರಪೂರ ಗ್ರಾಸವನ್ನು ಒದಗಿಸುತ್ತಿವೆ. ಇನ್ನು ಶಿವಮೊಗ್ಗದ ವಿಚಾರ. ಭಿನ್ನದನಿ ಎತ್ತಿರುವ, ಬಂಡಾಯವೆದ್ದಿರುವ ಈಶ್ವರಪ್ಪನವರು ಪಕ್ಷೇತರರಾಗಿ ಸ್ಪರ್ಧಿಸುವ ತಮ್ಮ ನಿರ್ಧಾರಕ್ಕೆ ಇನ್ನೂ ಬದ್ಧರಾಗಿದ್ದಾರೆ. ಈ ಸಮೀಕರಣ
ಬದಲಾಗುವುದಕ್ಕೆ ಏನಾದರೂ ಪವಾಡ ನಡೆಯಬೇಕಷ್ಟೇ.
ಏಕೆಂದರೆ, ದೆಹಲಿಗೆ ಬಂದು ಮಾತನಾಡುವಂತೆ ಅಮಿತ್ ಶಾ ಅವರು ಸೂಚಿಸಿದ್ದಾರೆ ಎಂದು ತಿಳಿದುಬಂದಾಗ, ‘ಈ ಭಿನ್ನಮತ ಶಮನವಾಗಬಹುದು, ಬಿಜೆಪಿಯ ರಾಘವೇಂದ್ರರ ದೆಹಲಿ ಪಯಣ ಸುಲಭವಾಗಬಹುದು’ ಎಂದು ಹಲವರು ಭಾವಿಸಿದ್ದರು. ಆದರೆ ದೆಹಲಿಯಲ್ಲಿನ ಭೇಟಿಗೆ ಈಶ್ವರಪ್ಪನ ವರಿಗೆ ಸಮಯ ನೀಡಲು ಅಮಿತ್ ಶಾ ನಿರಾಕರಿಸಿದ್ದು, ಸಮಸ್ಯೆಯು ‘ಬ್ಯಾಕ್ ಟು ಸ್ಕ್ವೇರ್ ಒನ್’ ಸ್ಥಿತಿಗೆ ಬರುವುದಕ್ಕೆ ಕಾರಣವಾಗಿದೆ. ಮಾತುಕತೆಗೆ ದೆಹಲಿಗೆ ಬರುವಂತೆ ತಾವು ಸೂಚಿಸಿದ್ದನ್ನು ಈಶ್ವರಪ್ಪನವರು ಮಾಧ್ಯಮಗಳಿಗೆ ಲೀಕ್ ಮಾಡಿದ್ದನ್ನು ಹಾಗೂ ತಮ್ಮ ಸೂಚನೆಯ ನಂತರವೂ ರಾಜ್ಯದ ಹಿರಿಯ ನಾಯಕರೊಬ್ಬರ ಮೇಲಿನ ತಮ್ಮ ವಾಗ್ದಾಳಿಯನ್ನು ಅವರು ಮುಂದುವರಿಸಿದ್ದನ್ನು ಶಾ ಅವರು ಗಂಭೀರವಾಗಿ ಪರಿಗಣಿಸಿ ಭೇಟಿಗೆ ಅವಕಾಶ ನೀಡಲಿಲ್ಲ ಎನ್ನಲಾಗುತ್ತಿದೆ.
ಇದರ ಸತ್ಯಾಸತ್ಯತೆ ಬೇರೆ ಮಾತು. ಈಶ್ವರಪ್ಪನವರು ಗೆಲ್ಲುತ್ತಾರೋ ಇಲ್ಲವೋ ಎಂಬುದು ಬೇರೆ ವಿಷಯ; ಆದರೆ ಈ ಬೆಳವಣಿಗೆ ಯು ಶಿವಮೊಗ್ಗ ಕ್ಷೇತ್ರದಲ್ಲಿನ ಸಂಭಾವ್ಯ ‘ಗೆಲ್ಲುವ ಕುದುರೆಗೆ’ ತೊಡರುಗಾಲು ಹಾಕುವುದರಲ್ಲಿ ಸಂದೇಹವಿಲ್ಲ. ‘ಕದನದಲ್ಲಿ ಕಲಿ ಪಾರ್ಥನನ್ನು ಕೆಣಕಿ ಉಳಿದವರಿಲ್ಲ’ ಎಂಬ ಮಾತು ಮಹಾಭಾರತದಲ್ಲಿ ಬರುತ್ತದೆ. ಹಾಗೆಯೇ ರಾಜಕೀಯದಲ್ಲಿ ಹೈಕಮಾಂಡ್ ಅನ್ನು ಎದುರುಹಾಕಿಕೊಂಡು ಮೇಲೆದ್ದವರು ವಿರಳವೇ. ಇದನ್ನು ಭಿನ್ನಮತೀಯರು ತಿಳಿದುಕೊಳ್ಳಬೇಕು. ಟಿಕೆಟ್ ವಂಚಿತರಾದ ನಳಿನ್ಕುಮಾರ್ ಕಟೀಲ್, ಪ್ರತಾಪಸಿಂಹ, ಸಿ.ಟಿ.ರವಿ ಮುಂತಾದ ಘಟಾನುಘಟಿಗಳು ವರಿಷ್ಠರಿಗೆ ಎದುರಾಡದೆ, ಅವರ ಆಣತಿ ಯಂತೆ ‘ಅಚ್ಛೇ ದಿನ’ವನ್ನು ನಿರೀಕ್ಷಿಸುತ್ತಾ, ಅವರು ಹೊರಿಸಿದ ಕಾರ್ಯಭಾರವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ.
ಇವರೆಲ್ಲ, ಅನಂತಕುಮಾರ ಹೆಗಡೆ ಮತ್ತು ಈಶ್ವರಪ್ಪನವರಿಗೆ ಮಾದರಿಯಾಗಬೇಕಿತ್ತು. ಆದರೆ ಈಶ್ವರಪ್ಪನವರು ಕುಟುಂಬ ರಾಜಕಾರಣಕ್ಕಾಗಿಯೇ ಕುಟುಂಬ ರಾಜಕಾರಣವನ್ನು ವಿರೋಽಸುತ್ತಿದ್ದಾರೆ, ಇದು ವಿಪರ್ಯಾಸ. ಈ ನಿಟ್ಟಿನಲ್ಲಿ ಅವರು ಆತ್ಮಾವ ಲೋಕನ ಮಾಡಿಕೊಳ್ಳಬೇಕು. ಬಿಜೆಪಿಯಲ್ಲಿ ಮೇಲ್ನೋಟಕ್ಕೆ ಭಿನ್ನಮತ ನಿವಾರಣೆಯಾಗಿದೆ. ಎಲ್ಲರೂ ಕೈಕುಲುಕಿ ಒಗ್ಗಟ್ಟಿನಿಂದ ಕೆಲಸ ಮಾಡಿ, ಮೋದಿಯವರನ್ನು ಇನ್ನೊಮ್ಮೆ ಪ್ರಧಾನಿ ಗಾದಿಯಲ್ಲಿ ಕೂರಿಸಲು ಹೆಜ್ಜೆಯಿಟ್ಟಿದ್ದಾರೆ. ಆದರೆ ಇದು ಸತ್ಯವೋ, ಮಿಥ್ಯವೋ ಅಥವಾ ಕೇವಲ ‘ಫೋಟೋ ಸೆಷನ್’ಗೋ ಎಂಬುದು ಫಲಿತಾಂಶ ಬಂದ ಮೇಲಷ್ಟೇ ತಿಳಿಯುವ ಬಾಬತ್ತು.
ಇದನ್ನು ‘ಮುಖಬೆಲೆ’ಯಲ್ಲಿ ಸ್ವೀಕರಿಸಲು ರಾಜಕೀಯ ವಿಶ್ಲೇಷಕರೂ ಹಿಂದೇಟು ಹಾಕುತ್ತಿದ್ದಾರೆ. ಒಂದಂತೂ ನಿಜ- ಪ್ರಸಕ್ತ ರಾಜಕೀಯದಲ್ಲಿ ‘ಒಳೇಟು’ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಆದರೆ ಅದು ಅಂತಿಮವಾಗಿ ತಾಂಡವ ನೃತ್ಯ ಆಡದಿರಲಿ ಎಂಬುದು ಪ್ರಜ್ಞಾವಂತರ ಆಶಯ.
(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)