ವಿಶ್ಲೇಷಣೆ
ಡಾ.ಸತೀಶ್ ಕೆ.ಪಾಟೀಲ್
ರಾಜ್ಯದ ಜಾಣ ಮತದಾರರು, ಲೋಕಸಭಾ ಚುನಾವಣೆಯಲ್ಲಿ ಒಂದು ಪಕ್ಷವನ್ನೂ, ವಿಧಾನಸಭಾ ಚುನಾವಣೆಯಲ್ಲಿ ಮತ್ತೊಂದನ್ನೂ ಬೆಂಬಲಿಸಿರುವ ನಿದರ್ಶನಗಳಿವೆ. ಹೀಗಾಗಿ, ಲೋಕಸಭೆ ಚುನಾವಣೆಯ ವೇಳೆ ಮೋದಿಯವರೆಡೆಗೆ ಒಲವು ತೋರುವ ಮತದಾರರು ವಿಧಾನಸಭಾ ಚುನಾವಣೆಯಲ್ಲೂ ಹಾಗೇ ನಡೆದುಕೊಳ್ಳುತ್ತಾರೆ ಎನ್ನಲಾಗದು.
ಇನ್ನೇನು ಸದ್ಯದಲ್ಲಿಯೇ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಯಾವ ರಾಜಕೀಯ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುತೂಹಲ ಮತ್ತು ಪ್ರಶ್ನೆ ಸಹಜ ವಾಗಿಯೇ ಎಲ್ಲೆಡೆ ವ್ಯಾಪಿಸಿವೆ. ಸದ್ಯದ ಪರಿಸ್ಥಿತಿ ಅವಲೋಕಿಸಿ ಹೇಳುವುದಾದರೆ, ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನ ಗಳಿಸಬಹುದು. ಬಿಜೆಪಿ ಎರಡನೇ ಸ್ಥಾನ ಗಳಿಸಿದರೆ, ಮೂರನೇ ಸ್ಥಾನ ಪಡೆದರೂ ಜೆಡಿಎಸ್ ‘ಕಿಂಗ್‌ಮೇಕರ್’ ಆಗುವ ಸಾಧ್ಯತೆಗಳು ಹೆಚ್ಚಿವೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷವೂ ‘113’ ಎಂಬ ಮ್ಯಾಜಿಕ್ ಸಂಖ್ಯೆಯಷ್ಟು ಸ್ಥಾನಗಳನ್ನು ದಕ್ಕಿಸಿ ಕೊಳ್ಳದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ್ದರೂ, ಕಾಂಗ್ರೆಸ್-ಜೆಡಿಎಸ್ ಕೈಕುಲುಕಿದ್ದರಿಂದ ಮೈತ್ರಿಕೂಟ ಸರಕಾರ ರಚನೆಯಾಗುವಂತಾಯಿತು. ಆದರೆ ಕೆಲ ಕಾಲದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಒಂದಷ್ಟು ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರಕಾರ ಪತನವಾಗಿ ಬಿಜೆಪಿ ಸರಕಾರದ ರಚನೆಯಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಯಾದರು.
ಕಾರಣಾಂತರಗಳಿಂದ ಅವರೂ ರಾಜೀನಾಮೆ ನೀಡಬೇಕಾಗಿ ಬಂದಾಗ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದು ಗೊತ್ತಿರುವ ಸಂಗತಿಯೇ. ಆದರೀಗ ಪರಿಸ್ಥಿತಿ ಭಿನ್ನವಾಗಿದ್ದು, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕಿರುವ ಕಾರಣ ಗಳನ್ನು ಅವಲೋಕಿಸಿದಾಗ ಮೊದಲಿಗೆ ಸ್ಪಷ್ಟವಾಗಿ ಕಾಣುವುದು ಆಡಳಿತ-ವಿರೋಧಿ ಅಲೆ. ಬಿಜೆಪಿ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದ್ದು ಆಡಳಿತದ ವೈಫಲ್ಯಗಳಿಂದ ಜನ ಆಕ್ರೋಶಗೊಂಡಿದ್ದಾರೆ. ಈಗಿನ ಸರಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂಬ ಆರೋಪ ವಿದೆ. ಈ ಅಂಶ ಚುನಾವಣೆಯಲ್ಲಿ ಬಿಜೆಪಿಗೆ ಹಾನಿ ಯುಂಟುಮಾಡಿದರೆ ಅದು ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಬಲ್ಲದು. ಜತೆಗೆ ಹಿಜಾಬ್-ಹಲಾಲ್ ವಿವಾದ ಗಳಿಂದಾಗಿ ಅಲ್ಪಸಂಖ್ಯಾತರು ಬಿಜೆಪಿ ಮೇಲೆ ಅಸಮಾಧಾನಗೊಂಡಿದ್ದು, ಇದರ ಲಾಭದ ನಿರೀಕ್ಷೆ ಯಲ್ಲಿದೆ ಕಾಂಗ್ರೆಸ್.
ಇನ್ನು ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸರಣಿ ಹತ್ಯೆಯಿಂದಾಗಿ ಕೆಲ ಪ್ರದೇಶಗಳ ಬಿಜೆಪಿ ಕಾರ್ಯಕರ್ತರು ಮತ್ತು ಸಂಘ ಪರಿವಾರದವರಲ್ಲಿ ಸರಕಾರದ ಮೇಲೆಯೇ ಅಸಮಾಧಾನವಿದೆ, ‘ನಮ್ಮದೇ ಸರಕಾರವಿದ್ದಾಗಲೂ ನಮಗೆ ಸೂಕ್ತರಕ್ಷಣೆ ಇಲ್ಲವಲ್ಲ’ ಎಂಬ ಭಾವನೆ ಇಂಥವರಲ್ಲಿ ಮಡುಗಟ್ಟಿದೆ. ಪಠ್ಯಪುಸ್ತಕ ಪರಿಷ್ಕರಣೆಯ ವಿವಾದವಂತೂ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದ್ದರ ಜತೆಗೆ ಸರಕಾರವನ್ನು ಹೈರಾಣು ಮಾಡಿದ್ದು ನಿಜ. ಕುಂಭದ್ರೋಣ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ರೂಪು ಗೊಂಡ ಪ್ರವಾಹದ ಪರಿಸ್ಥಿತಿ ನಿರ್ವಹಿಸುವಲ್ಲಿ ಮತ್ತು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂಬ ಆರೋಪವೂ ಇದೆ.
ಜತೆಗೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವುದರ ಬಗ್ಗೆ ಜನರಲ್ಲಿ ಅಸಮಧಾನ ಮಡುಗಟ್ಟಿದೆ. ಈ ಎಲ್ಲ ಅಂಶಗಳು ಬಿಜೆಪಿಯ ಹಿನ್ನಡೆಗೂ, ಚುನಾವಣೆಯಲ್ಲಿ ಭರ್ಜರಿ ಇಳುವರಿ ದಕ್ಕಿಸಿಕೊಳ್ಳುವ ಕಾಂಗ್ರೆಸ್-ಜೆಡಿಎಸ್‌ನ ಆಶಾವಾದಕ್ಕೂ ಇಂಬು ಕೊಡಬಹುದು. ಮೀಸಲಾತಿ ಹೋರಾಟಗಳಿಂದಾಗಿ ಸರಕಾರ ಸಾಕಷ್ಟು ಒತ್ತಡದಲ್ಲಿ ಸಿಲುಕಿದ್ದು, ಪಂಚಮಸಾಲಿ, ಕುರುಬ, ವಾಲ್ಮೀಕಿ, ಗಂಗಾಮತ ಮುಂತಾದ ಸಮುದಾಯಗಳ ಇಂಥ ಹೋರಾಟಗಳು ಸರಕಾರದ ನಿದ್ರೆ ಕೆಡಿಸಿವೆ.
ಅದರಲ್ಲೂ, ಪಂಚಮಸಾಲಿಗಳ ಹೋರಾಟಕ್ಕೆ ಸರಕಾರದಿಂದ ಸೂಕ್ತ ಪ್ರತಿಸ್ಪಂದನೆ ಹೊಮ್ಮಿಲ್ಲ, ಭರವಸೆಗಳ ಈಡೇರಿಕೆ ಯಾಗಿಲ್ಲ ಎಂಬ ಆರೋಪಗಳಿವೆ. ಜತೆಗೆ ನಾಯಕತ್ವ ಬದಲಾವಣೆಯಿಂದಾಗಿ ಬಿಜೆಪಿಯ ಇಮೇಜು ಕಮ್ಮಿಯಾಗಿದೆ ಎಂಬುದು ಕೆಲ ರಾಜಕೀಯ ವಿಶ್ಲೇಷಕರ ಅಂಬೋಣ; ಬಿ.ಎಸ್. ಯಡಿಯೂರಪ್ಪನವರನ್ನು ಬದಲಿಸಿ ಆ ಜಾಗದಲ್ಲಿ ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮಾಡಿ ಒಂದು ಸಮುದಾಯದವರನ್ನು ಸಮಾಧಾನ ಮಾಡುವ ಯತ್ನವಾಗಿದ್ದರೂ, ಅದು
ಮತಗಳಿಕೆಯಾಗಿ ರೂಪಾಂತರಗೊಳ್ಳುವುದೇ ಎಂಬ ಬಗ್ಗೆ ಅನುಮಾನಗಳಿವೆ. ‘ಮಾಸ್ ಲೀಡರ್’ ಎಂಬ ಪರಿಕಲ್ಪನೆಯನ್ನು ಮಾನದಂಡವಾಗಿ ಇಟ್ಟುಕೊಂಡರೆ ಯಡಿಯೂರಪ್ಪನವರಿಗೆ ಸರಿಸಮಾನವಾಗಿ ನಿಲ್ಲಬಲ್ಲ ನಾಯಕ ಇಲ್ಲದಿರುವುದು ಬಿಜೆಪಿಯ ನ್ಯೂನತೆಗಳಲ್ಲೊಂದು.
ಇನ್ನು ಬಹುತೇಕ ಚುನಾವಣೆಗಳಲ್ಲಿ ಗಮನಾರ್ಹ ಪಾತ್ರ ವಹಿಸುವ ‘ಜಾತಿ ಸಮೀಕರಣ’ದ ಕಡೆಗೆ ಗಮನ ಹರಿಸೋಣ. ಮೊದಲೆಲ್ಲ, ಲಿಂಗಾಯಿತರು ಬಿಜೆಪಿ ಪರ, ಒಕ್ಕಲಿಗರು ಜೆಡಿಎಸ್ ಪರ, ಮುಸ್ಲಿಮರು-ದಲಿತರು- ಹಿಂದುಳಿದ ವರ್ಗದವರು ಕಾಂಗ್ರೆಸ್ ಪರ ಎಂಬ ವಾತಾವರಣವಿತ್ತು. ಈ ಚಿತ್ರಣದಲ್ಲಿ ಈ ಬಾರಿ ಕೊಂಚ ಬದಲಾವಣೆಯಾಗುವ ಸಾಧ್ಯತೆಯಿದೆ. ಒಕ್ಕಲಿಗರ
ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಂಚಿಹೋಗುವ ಸಾಧ್ಯತೆ ಹೆಚ್ಚು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಒಂದೊಮ್ಮೆ ಒಕ್ಕಲಿಗರ ಮತಗಳನ್ನು ಹೆಚ್ಚು ಸೆಳೆದರೆ, ಆಗ ಕಾಂಗ್ರೆಸ್ ಪಕ್ಷವು ಸರಳ ಬಹುಮತ ಪಡೆಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಲಿಂಗಾಯತ ಸಮುದಾಯದಲ್ಲಿ ಶೇ. 70ರಷ್ಟು ಸಿಂಹಪಾಲು ಹೊಂದಿರುವ ಪಂಚಮಸಾಲಿಗಳು ಈ ಮೊದಲೇ ಉಲ್ಲೇಖಿಸಿದಂತೆ ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಮೇಲೆ ಮುನಿಸಿಕೊಂಡಿರುವುದರಿಂದ, ಅವರಲ್ಲಿ ಶೇ. 50ರಷ್ಟು ಮತಗಳು ಅನ್ಯಪಕ್ಷಗಳಿಗೆ ಹಂಚಿಹೋದರೂ ಬಿಜೆಪಿಗೆ ದೊಡ್ಡಮಟ್ಟದ ಧಕ್ಕೆಯಾಗುವುದು ನಿಶ್ಚಿತ.
ಸರಕಾರ ಎಸ್.ಟಿ. ಪ್ರಮಾಣಪತ್ರ ನೀಡಲಿಲ್ಲ ಎಂಬ ಕಾರಣಕ್ಕೆ ತಳವಾರ ಸಮುದಾಯದವರೂ ಸರಕಾರದ ಮೇಲೆ ಬೇಸರಿಸಿ ಕೊಂಡಿದ್ದಾರೆ. ಸಿದ್ದರಾಮಯ್ಯನವರಿಂದಾಗಿ ಕುರುಬ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ‘ಉಘೇ ಉಘೇ’ ಎನ್ನುವುದು ಕಟ್ಟಿಟ್ಟಬುತ್ತಿ. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾದಲ್ಲಿ ದಲಿತ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ಮತ್ತೊಂದು ಸೂಕ್ಷ್ಮವಿದೆ. ದಲಿತ ಸಮುದಾಯದಲ್ಲಿನ ಬಲಗೈ ಪಂಗಡ ಕಾಂಗ್ರೆಸ್ ಅನ್ನೂ, ಎಡಗೈ ಪಂಗಡ ಬಿಜೆಪಿಯನ್ನೂ ಬೆಂಬಲಿಸುವ ಬೆಳವಣಿಗೆಗೆ ಈ ಬಾರಿಯ ಚುನಾವಣೆ ಸಾಕ್ಷಿಯಾಗ ಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಹುಟ್ಟುಹಾಕಿದ್ದು ಈ ಅಂಶವನ್ನು ಸಮರ್ಥವಾಗಿ ಬಳಸಿಕೊಂಡರೆ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಿದೆ. ರಾಜ್ಯದ ಜಾಣ ಮತದಾರರು, ಕಸಭಾ
ಚುನಾವಣೆಯಲ್ಲಿ ಒಂದು ಪಕ್ಷವನ್ನೂ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಂದು ಪಕ್ಷವನ್ನೂ ಬೆಂಬಲಿಸಿರುವ ನಿದರ್ಶನ ಸಾಕಷ್ಟಿವೆ. ಹೀಗಾಗಿ, ಲೋಕಸಭೆ ಚುನಾವಣೆಯ ವಿಷಯ ಬಂದಾಗ ಮೋದಿಯವರೆಡೆಗೆ ಒಲವು ತೋರುವ ಮತದಾರರು ವಿಧಾನಸಭಾ ಚುನಾವಣೆಯಲ್ಲೂ ಹಾಗೇ ನಡೆದುಕೊಳ್ಳುತ್ತಾರೆ ಎನ್ನಲಾಗದು.
ಹೀಗಾಗಿ ರಾಜ್ಯ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವಳಿಯನ್ನು ಹೆಚ್ಚಾಗಿ ನೆಚ್ಚಿಕೊಳ್ಳುವಂತಿಲ್ಲ. ಈ ಅಂಶವೇ ಕೈ ಪಕ್ಷದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎನ್ನಬೇಕು. ಇನ್ನು ಪಕ್ಷಗಳ ಪ್ರದೇಶವಾರು ಸ್ಥಿತಿಗತಿ ಅವಲೋಕಿಸುವುದಾದರೆ, ಹೈದರಾ ಬಾದ್-ಕರ್ನಾಟಕ ಮತ್ತು ಮುಂಬೈ-ಕರ್ನಾಟಕ ಭಾಗಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಬಹುದು. ಆದರೆ ವಿಜಯಪುರ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಭಾವವಿರುವುದನ್ನು ತಳ್ಳಿಹಾಕಲಾಗದು.
ಕರಾವಳಿ-ಕರ್ನಾಟಕ ಮತ್ತು ಮಧ್ಯ- ಕರ್ನಾಟಕ ಪ್ರದೇಶಗಳು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸಮಬಲದ ಹೋರಾಟದ ಅಖಾಡಗಳಾಗಿ ಹೊರಹೊಮ್ಮಬಹುದು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿಯಿದ್ದು ಇಲ್ಲಿ ಜೆಡಿಎಸ್ ಮುನ್ನಡೆ ಸಾದಿಸುವ ಸಾಧ್ಯತೆಯಿದೆ; ಈ ಭಾಗದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂಥ ನೆಲೆಯಿಲ್ಲ ಎಂಬುದು ಉಲ್ಲೇಖನೀಯ. ರಾಜಧಾನಿ ಬೆಂಗಳೂರು, ಬಿಜೆಪಿ ಮತ್ತು ಕಾಂಗ್ರೆಸ್‌ನ ಸಮಬಲದ ಹೋರಾಟಕ್ಕೆ ಸಾಕ್ಷಿಯಾಗಬಹುದು.
ಸ್ಥೂಲವಾಗಿ ಹೇಳುವುದಾದರೆ, ಹಳೆಮೈಸೂರು ಭಾಗದಲ್ಲಿ ಡಿ.ಕೆ. ಶಿವಕುಮಾರ್ ಪ್ರಭಾವಳಿಯಿಂದಾಗಿ ಒಕ್ಕಲಿಗರು ಕಾಂಗ್ರೆಸ್ ಪರ ಒಲವು ತೋರಿದರೆ ಹಾಗೂ ಮತ್ತೊಂದೆಡೆ ಪಂಚಮಸಾಲಿ ಜನಾಂಗದ ಶೇ. 50ರಷ್ಟು ಜನವೂ ಇದೇ ಪ್ರವೃತ್ತಿ ತೋರಿದರೆ, ಅಧಿಕಾರ ಗದ್ದುಗೆ ಏರಲು ಬೇಕಾಗುವ ‘113’ ಮ್ಯಾಜಿಕ್ ಸಂಖ್ಯೆಯನ್ನು ಅಪ್ಪುವುದು ಕಾಂಗ್ರೆಸ್‌ಗೆ ಕಷ್ಟವಾಗಲಾರದು. ಮೇಲೆ ಉಲ್ಲೇಖಿಸಿರುವ ಎಲ್ಲ ಅಂಶಗಳನ್ನು ಒಟ್ಟಾರೆಯಾಗಿ ಪರಿಗಣಿಸಿದಲ್ಲಿ, 2023ರ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರೂಪು ಗೊಳ್ಳುತ್ತದೆ ಎನಿಸುತ್ತದೆ.
ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮತ್ತು ಜೆಡಿಎಸ್ ‘ಕಿಂಗ್‌ಮೇಕರ್’ ಆಗುವ ಸಾಧ್ಯತೆಗಳನ್ನು ತಳ್ಳಿಹಾಕ ಲಾಗದು. ಆಗ ‘ರೆಸಾರ್ಟ್ ರಾಜಕಾರಣ’ ಮತ್ತೆ ಮುನ್ನೆಲೆಗೆ ಬಂದರೂ ಅಚ್ಚರಿಯಿಲ್ಲ! ಹೀಗಾಗಬಾರದು ಎಂದಾದರೆ ಒಂದು ನಿರ್ದಿಷ್ಟ ಪಕ್ಷಕ್ಕೆ ಬಹುಮತ ಬರಬೇಕು. ಆದರೆ ಈ ನಿಟ್ಟಿನಲ್ಲಿ ರಾಜ್ಯದ ಮತದಾರ ಪ್ರಭು ಯಾವ ಪಕ್ಷಕ್ಕೆ ಪೂರ್ಣ ಬಹುಮತದ ಆಶೀರ್ವಾದ ನೀಡುತ್ತಾನೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಇದಕ್ಕೆ ಕಾಲವೇ ಉತ್ತರಿಸಬೇಕು.