Sunday, 15th December 2024

ಅಂತಃಶಕ್ತಿ ಎಂಬ ಅದಮ್ಯ ಶಕ್ತಿ

ಅಭಿಮತ

ಭಾರತಿ ಎ ಕೊಪ್ಪ

ಪ್ರತಿ ಮಗುವಿನಲ್ಲಿಯೂ ಕೂಡ ಒಂದ ಒಂದು ಅದಮ್ಯ ಚೈತನ್ಯ ಶಕ್ತಿಯು ಇದ್ದೇ ಇರುತ್ತದೆ. ಕ್ರಿಯಾಶೀಲತೆ ಎಂಬುದು ಆಂತರ್ಯ ದಲ್ಲಿ ಹುದುಗಿಕೊಂಡಿರುತ್ತದೆ. ಪ್ರತಿ ಮಗುವೂ ಭಿನ್ನ. ಪ್ರತಿಯೊಬ್ಬರ ವ್ಯಕ್ತಿತ್ವವೂ ವಿಭಿನ್ನ.

ಒಮ್ಮೊಮ್ಮೆ ವ್ಯಕ್ತಿತ್ವ ವಿಕಸಿಸಿ, ಪ್ರಕಾಶಮಾನಕ್ಕೆ ಬರುವುದರಲ್ಲಿ ಒಂದಿಷ್ಟು ಅಡತಡೆಗಳು ಎದುರಾಗಬಹುದು, ಒಂದಿನಿತು ಸ್ಫೂರ್ತಿಯ ಕೊರತೆ ಆಗಬಹುದು. ಆದರೆ ಅದೆಲ್ಲವನ್ನು ಬದಿಗೊತ್ತಿ, ತಮ್ಮೊಳಗಿನ ಅಂತಃಶಕ್ತಿಯನ್ನು ಬೆಳಕಿಗೆ ತಂದು,
ಸಾಧಿಸಿದ ಅನೇಕರ ಚರಿತೆಗಳು ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನಕ್ಕೆ ಸೂರ್ತಿಯ ಚಿಲುಮೆಯಾಗುವುದರಲ್ಲಿ ಸಂದೇಹವಿಲ್ಲ.
ಅದೊಂದು ಶಾಲೆ. ಶಿಕ್ಷಕರೊಬ್ಬರು ವರ್ಗಾವಣೆಯಾದರು.

ವಿದ್ಯಾರ್ಥಿಗಳೆಲ್ಲರೂ ಸೇರಿ ಅವರಿಗೆ ವಿನಯಾಭಿನಂದನೆ ಯನ್ನು ಅರ್ಪಿಸಬೇಕೆಂದು ನಿರ್ಣಯಿಸಿದರು. ಆ ವಿನಯಾಭಿ ನಂದನೆಯ ಮಹಾ ಸಭೆಗೆ ದೇಶದ ವಿಖ್ಯಾತ ವಾಗ್ಮಿಗಳಾದ ಸುರೇಂದ್ರನಾಥರು ಅಧ್ಯಕ್ಷರಾಗಿ ಆಹ್ವಾನಿಸಲ್ಪಟ್ಟರು.  ಅವರ ಸಮ್ಮು ದಲ್ಲಿ ವೇದಿಕೆಯ ಮೇಲೆ ನಿಂತು ಮಾತಾಡಲು ಎಲ್ಲಾ ವಿದ್ಯಾರ್ಥಿಗಳೂ ಅಳುಕಿದರು. ಕೊನೆಗೆ ಎಲ್ಲರೂ ಸೇರಿ ಒಬ್ಬನನ್ನು ಭಾಷಣಕಾರನಾಗಿ ಗೊತ್ತು ಮಾಡಿದರು. ಆ ಬಾಲಕ ಸುಲಲಿತವಾಗಿ ಸುಮಾರು ಅರ್ಧ ತಾಸು ತನ್ನ ಶಿಕ್ಷಕರ ಗುಣವನ್ನು ಪ್ರಶಂಸಿಸಿ, ಅರಳು ಹುರಿದಂತೆ ಮಾತನಾಡಿದನು.

ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿದ್ದ ಸುರೇಂದ್ರನಾಥರು ಆ ಕಿಶೋರನ ಭಾಷಣ ಕಲೆಯನ್ನು ಮೆಚ್ಚಿ, ಬಹುವಾಗಿ
ಹೊಗಳಿದರು. ಹದಿನಾರು ಹದಿನೇಳು ವಯಸ್ಸಿನ ಸಾಮಾನ್ಯ ಬಾಲಕನೊಬ್ಬನು ದೇಶವಿನುತ ವಾಗ್ಮೀಪ್ರವರ ಸುರೇಂದ್ರನಾಥರ ಮುಂದೆ ನಿಂತು ಭಾಷಣ ಮಾಡುವುದೆಂದರೆ, ಆ ಯುವ ವಾಗ್ಮಿಗೆ ಎಷ್ಟು ದೃಢತೆಯಿರಬೇಕು !? ಎಷ್ಟು ಆತ್ಮನಿರ್ಭರತೆ ಇರಬೇಕು!? ಎಷ್ಟು ಎದೆಗಾರಿಗೆ ಇರಬೇಕು !? ಆ ದೃಢತೆಯ ಬಾಲಕ ಮತ್ತಾರೂ ಅಲ್ಲ. ಅವನೇ ನರೇಂದ್ರ ಮುಂದೆ ಇಡೀ ಜಗತ್ತೇ ತಲೆದೂಗು ವಂತೆ ಮಾತನಾಡಿ, ಭವ್ಯ ಭಾರತದ ಕೀರ್ತಿ ಪತಾಕೆಯನ್ನು ವಿಶ್ವದ ಮುಂದೆ ಎತ್ತಿ ಹಿಡಿದ ಸ್ವಾಮಿ ವಿವೇಕಾನಂದರು.

ಬಾಲಕ ನರೇಂದ್ರನ ಈ ಕಥೆಯನ್ನು ಸ್ವಾಮಿ ವಿವೇಕಾನಂದರ ಕುರಿತಾದ ಪುಸ್ತಕದಲ್ಲಿ ಕುವೆಂಪುರವರು ಕೂಡ ಸೊಗಸಾಗಿ ವರ್ಣಿಸಿ ದ್ದಾರೆ. ಯುವ ಜನತೆಯ ಪ್ರೇರಕ ಶಕ್ತಿ ಸ್ವಾಮಿ ವಿವೇಕಾನಂದರು ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ. ಬಾಲಕ ವಿವೇಕಾ ನಂದರ ಕಥೆಯು ಕೇವಲ ಕಥೆಯಲ್ಲ. ಪ್ರತಿಯೊಬ್ಬರಿಗೂ ಅವರವರ ಅಂತಃಶಕ್ತಿಯನ್ನು ಬಡಿದೆಬ್ಬಿಸುವ ವಿರಾಟ್ ಶಕ್ತಿಯಂತೆ. ನಮ್ಮೊಳಗೆ ಅಗಾಧವಾದ ಶಕ್ತಿ, ಚೈತನ್ಯವು ಇದ್ದೇ ಇರುತ್ತದೆ. ಅವಕಾಶ ಸಿಕ್ಕಾಗ ನಮ್ಮ ಚೈತನ್ಯ ಶಕ್ತಿಯನ್ನು ಹೊರಹಾಕುವ ಪ್ರಯತ್ನವನ್ನು ಮಾಡಬೇಕಿದೆ.

ನಮ್ಮೊಳಗಿರುವ ಅಂತಃಶಕ್ತಿಯಿಂದ ಹೊರಹೊಮ್ಮಿದ ಕೆಲಸಕ್ಕೆ ಒಡನಾಡಿಗಳಿಂದ ಧನಾತ್ಮಕ ಪ್ರತಿಕ್ರಿಯೆ ಬಂದಾಗ, ಇನ್ನಷ್ಟು ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು, ದೃಢತೆಯನ್ನು ತೋರುತ್ತಾ ಮುಂದಡಿ ಇಡಬೇಕು. ಒಂದೊಮ್ಮೆ ಋಣಾತ್ಮಕ ಪ್ರತಿಕ್ರಿಯೆ ಬಂದರೂ ಕುಗ್ಗದೆಯೇ, ನಮ್ಮೊಳಗೆ ತಿಳಿದೋ ತಿಳಿಯದೆಯೋ ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಿ ಕೊಂಡು ಗುರಿಯತ್ತ ಚಿತ್ತ ಬೆಳೆಸಬೇಕಿದೆ.

ನಮ್ಮೊಳಗೆ ನಂಬಿಕೆ, ಶ್ರದ್ಧೆ, ಆತ್ಮವಿಶ್ವಾಸವೆಂಬ ಸೂತ್ರಗಳು ಬಲವಾಗಿದ್ದಾಗ, ದೃಢತೆ ಮತ್ತು ಕಾರ್ಯಕ್ಷಮತೆಯು ತನ್ನಿಂದ ತಾನಾಗಿಯೇ ಪುಟಿದೇಳುತ್ತದೆ. ಒಮ್ಮೊಮ್ಮೆ ನಮ್ಮ ಶಕ್ತಿ ಏನೆಂದು ನಮ್ಮ ಅರಿವಿಗೆ ಬಂದಿರುವುದಿಲ್ಲ. ಆಗ ನಮ್ಮ ಜತೆಗಾರರು ಅದನ್ನು ಗುರುತಿಸಿ, ಅನಾವರಣ ಮಾಡಿದಾಗ ಆ ಶಕ್ತಿಯು ಬೃಹದಾಕಾರವಾಗಿ ಬೆಳೆಯುತ್ತದೆ. ಸಮುದ್ರೋಲ್ಲಂಘನ ಮಾಡುವ ಸಂದರ್ಭದಲ್ಲಿ, ಹನುಮಂತನ ಮಿತ್ರವೃಂದ, ಆತನಲ್ಲಿನ ಅಂತಃಶಕ್ತಿಯನ್ನು ಅನಾವರಣ ಮಾಡಿದಾಗ, ಆತ ಬೃಹದಾಕಾರವಾಗಿ ಬೆಳೆದು, ಲಂಕೆಯನ್ನು ತಲುಪಿದನಲ್ಲವೇ? ಸ್ವಾಮಿ ವಿವೇಕಾನಂದರ ದೃಢತೆ, ವಾಯುಪುತ್ರನ ಶಕ್ತಿಯಂತೆ ನಾವೂ ಕೂಡ ನಮ್ಮ ಅಂತಃಶಕ್ತಿಯನ್ನು ಅನಾವರಣ ಮಾಡಿ, ಯಶಸ್ಸಿನ ಎವರೆಸ್ಟನ್ನು ಏರುವಂತಾಗಬೇಕು.

ಜೀವನದ ಪಥದಲ್ಲಿ ಹೆಜ್ಜೆ ಕುರುಹುಗಳನ್ನು ಉಳಿಸಿಕೊಂಡು ಹೋಗುವಂಥ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ. ವಿದ್ಯುದ್ದೀಪ ವನ್ನು ನೋಡಿರಿ. ಇದರಲ್ಲಿ ಹೊರಗೆ ಬಲ್ಬು ಇದೆ. ಒಳಗೆ ತಂತಿ ಇದೆ. ಇಷ್ಟೇ ನಮಗೆ ಕಾಣಿಸುತ್ತದೆ. ಆದರೆ ಅವುಗಳಲ್ಲಿ ಪ್ರಕಾಶ ವನ್ನುಂಟುಮಾಡಿ, ಇತರ ವಸ್ತುಗಳನ್ನು ಬೆಳಗುವ ವಿದ್ಯುತ್ ಎಂಬ ಶಕ್ತಿಯು ಮಾನವನ ದೇಹದೊಳಗಿನ ಚೈತನ್ಯದಂತೆ ಅದೃಶ್ಯವಾಗಿದೆ. ಹಾಗಿದ್ದರೂ ಅದು ಇದ್ದೇ ಇದೆ ಎಂಬ ಶ್ರೀ ಶ್ರೀಧರ ಸ್ವಾಮಿಗಳ ಅಣಿಮುತ್ತೊಂದರಂತೆ, ನಮ್ಮೊಳಗಿನ ಅಗೋಚರ ಶಕ್ತಿಯನ್ನು ನಾವೇ ಅರಿತು, ಅವಕಾಶ ಸಿಕ್ಕಾಗಲೆ ಆ ಅಗೋಚರವಾಗಿರುವ ಅಂತಃಶಕ್ತಿಯ ಮೂಲದ ಜೀವಯಾನದಲ್ಲಿ ದೀಪದಂತೆ ಸದಾ ಪ್ರಕಾಶಿಸಲು ಪ್ರಯತ್ನಿಸೋಣ.