Sunday, 15th December 2024

ವಿಷಕಾರಿ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ‍್ಯ ಕಾಯ್ದೆ

ವೀಕೆಂಡ್ ವಿತ್ ಮೋಹನ್

camohanbn@gmail.com

ಮತಾಂತರವೆಂದಾಕ್ಷಣ ನೆನೆಪಾಗುವುದು ಬ್ರಿಟಿಷ್ ಕ್ರೈಸ್ತ ಮಿಷನರಿಗಳು, ಆದರೆ ಅಮೆರಿಕದ ಮಿಷನರಿಗಳು ಅಧಿಕೃತವಾಗಿ, ಅಲ್ಲಿನ ಸರಕಾರವನ್ನು
ಬಳಸಿಕೊಂಡು ಧಾರ್ಮಿಕ ಚರ್ಚೆಗಳು, ವಿಚಾರ ವಿನಿಮಯವೆಂಬ ವಿಷಯವನ್ನು ಮುನ್ನೆಲೆಗೆ ತಂದು ಜಗತ್ತಿನ ವಿವಿದೆಡೆ ಕ್ರಿಶ್ಚಿಯನ್ ಧರ್ಮವನ್ನು ಪಸರಿಸುತ್ತದೆಯೆಂಬ ವಿಷಯದ ಬಗ್ಗೆ ಹೆಚ್ಚು ಚರ್ಚೆಯಾಗಿಲ್ಲ.

೧೯೯೮ರಲ್ಲಿ ಅಮೆರಿಕದ ಅಧ್ಯಕ್ಷ ‘ಬಿಲ್ ಕ್ಲಿಂಟನ್’ ‘ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ’ ಯನ್ನು ಜಾರಿಗೆ ತರುವ ಮೂಲಕ ಅಧಿಕೃತವಾಗಿ ಅಲ್ಲಿನ ಕ್ರಿಶ್ಚಿಯನ್ ಮಿಷನರಿಗಳ ಬೇಡಿಕೆಯನ್ನು ಈಡೇರಿಸಿದ್ದರು. ತನ್ನ ಸಂಪುಟದಲ್ಲಿ ಸಂಸದರಾಗಿದ್ದಂತಹ ಮಿಷನರಿಗಳ
ಪ್ರತಿನಿಽಗಳ ಬೇಡಿಕೆಯನ್ನು ಈಡೇರಿಸಿದ್ದರು. ಈ ಕಾಯ್ದೆಯಲ್ಲಿ ‘ಧಾರ್ಮಿಕ ಸ್ವಾತಂತ್ರ್ಯ’ ಎಂದಿದ್ದರೂ ಅದರ ಉದ್ದೇಶ ಕೇವಲ ಕ್ರಿಶ್ಚಿಯನ್ ಧರ್ಮದ ಹಿಡಿತವನ್ನು ಜಗತ್ತಿನೆಡೆ ಸಾಧಿಸುವು ದಾಗಿತ್ತು. ಈ ಕಾಯ್ದೆಯ ಮೂಲಕ ಕ್ರಿಶ್ಚಿಯನ್ ಮತಾಂತರವನ್ನು ವಿರೋಧಿಸುವ ಮುಂದು ವರೆಯುತ್ತಿರುವ ದೇಶಗಳಿಗೆ ಅಮೆರಿಕ ಸರಕಾರ ನೀಡುತ್ತಿದ್ದಂತಹ ಸಹಕಾರವನ್ನು ನಿಲ್ಲಿಸಿ ಹೆಚ್ಚಿನ ಒತ್ತಡ ಹೇರುವುದಾಗಿತ್ತು.

ಮಾನವ ಹಕ್ಕುಗಳ ರಕ್ಷಣೆಯ ಹೆಸರಿನಲ್ಲಿ ರಚನೆಯಾಗಿದ್ದಂತಹ ‘ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ’ ಯು ಕೇವಲ ಒಂದು ಧರ್ಮದ ರಕ್ಷಣೆಯ ಪರವಾಗಿ ನಿಲ್ಲುತ್ತಿತ್ತು. ಈ ಕಾಯ್ದೆಯು ಜಗತ್ತಿನ ೧೯೪ ದೇಶಗಳಿಗೆ ಅನ್ವಯಿಸಿದ್ದರೂ ಸಹ ಅಮೆರಿಕದಲ್ಲಿ ನಡೆಯುತ್ತಿದ್ದಂತಹ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತುಟಿ ಬಿಚ್ಚುತ್ತಿರಲಿಲ್ಲ. ಜಗತ್ತಿನ ಇತರ ದೇಶಗಳ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಹಕ್ಕು ಅಮೆರಿಕ ದೇಶಕ್ಕಿದೆ ಆದರೆ ಅಮೆರಿಕದೊಳಗೆ ನಡೆಯುತ್ತಿರುವ ಧಾರ್ಮಿಕ ಸ್ವಾತಂತ್ರ್ಯ ಹರಣದ ಬಗ್ಗೆ ಮಾತನಾಡುವ ಹಕ್ಕು ಇತರರಿಗಿಲ್ಲವೆಂಬ ವಾದವಾಗಿತ್ತು. ಈ ಮೊಂಡುವಾದವನ್ನರಿಯದ ಅಮೆರಿಕ ದೇಶದ ಮಾಜಿ ಅಧ್ಯಕ್ಷ ‘ಒಬಾಮ’ ಕೆಲ ದಿನಗಳ ಹಿಂದೆ ಭಾರತದಲ್ಲಿನ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಭಾರತದೊಳಗೆ ನಡೆಯುತ್ತಿರುವ ಧಾರ್ಮಿಕ ಚರ್ಚೆಗಳ ವಿಷಯಗಳನ್ನು ತನಗಿಷ್ಟಬಂದಂತೆ ಫಿಲ್ಟರ್ ಮಾಡಿ, ಕೆಲವು ಧರ್ಮಗಳ ವಿಷಯಗಳನ್ನು ಮಾತ್ರ ತನ್ನ ವರದಿಯಲ್ಲಿ ವಿಶ್ವಸಂಸ್ಥೆಗೆ ಸಲ್ಲಿಸುತ್ತದೆ. ವಿಶ್ವಸಂಸ್ಥೆಯ
ಹಿಡಿತವೂ ಕೂಡ ಅಮೆರಿಕದ ಕೈಯಲ್ಲಿರುವುದರಿಂದ ಅದು ಕೇವಲ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿಹೋಗಿದೆ.

ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಪ್ರಮುಖ ಆಯುಕ್ತನಾಗಿದ್ದ ‘ರಿಚರ್ಡ್ ಲ್ಯಾಂಡ್’ ಪ್ರತಿಷ್ಠಿತ ‘ಟೈಮ್ಸ್’ ಮ್ಯಾಗಜೀನ್ ಬಿತ್ತರಿಸಿದ್ದಂತಹ ವಿಶ್ವದ ೨೫ ಅತ್ಯಂತ ಪ್ರಭಾವಶಾಲಿ ಕ್ರಿಶ್ಚಿಯನ್ ಪಾದ್ರಿಗಳಲ್ಲಿ ಒಬ್ಬನಾಗಿದ್ದ. ವಿದೇಶಗಳಲ್ಲಿ ಕ್ರಿಶ್ಚಿಯನ್ ಧರ್ಮದ ಸ್ವಾತಂತ್ರ
ಅಮೆರಿಕ ದೇಶದ ಪ್ರಮುಖ ನೀತಿಯಂದಾಗಿತ್ತು, ೧೯೯೬ ರಲ್ಲಿ ಅಮೆರಿಕಾದ ೧೦೦ ಪ್ರಭಾವಶಾಲಿ ಕ್ರಿಶ್ಚಿಯನ್ ನಾಯಕರು ಈ ವಿಷಯದ ಬಗ್ಗೆ ಚರ್ಚಿಸಲು ವಾಷಿಂಗ್‌ಟನ್ ನಗರದಲ್ಲಿ ಸೇರಿದ್ದರು. ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಪ್ರತಿ ವರ್ಷವೂ ಅದರ ಕ್ರಿಶ್ಚಿಯನ್ ಧರ್ಮದ ಪರವಾದ ವರದಿ ಮತ್ತು ಭಾರತದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಬೇಕೆಂಬುದನ್ನು ವಿವರವಾಗಿ ಹೇಳುತ್ತದೆ.

ಭಾರತದೊಳಗಿರುವ ಕ್ರಿಶ್ಚಿಯನ್ ಪಾದ್ರಿಗಳು ಹಿಂದೂ ಸಂಘಟನೆಗಳು ಕ್ರಿಶ್ಚಿಯನ್ ಮೇಲೆ ದಾಳಿ ನಡೆಸುತ್ತಿದ್ದಾರೆಂಬ ವಿಷಯವನ್ನು ಆಯೋಗದ ಮುಂದೆ ಮಂಡಿಸಲು ಎರಡು ಬಗೆಯ ನೀತಿಯನ್ನು ಅನುಸರಿಸಿದ್ದರು, ೨೦೦೦ ನೆಯ ಇಸವಿಯಲ್ಲಿ ಅಖಿಲ ಭಾರತ ಕ್ಯಾಥೊಲಿಕ್ ಸಂಘದ ಉಪಾ ಧ್ಯಕ್ಷ ಜಾನ್ ದಯಾಳ್ ಅಮೆರಿಕದಲ್ಲಿ ನಡೆದ ಚರ್ಚೆಯಲ್ಲಿ ಹಿಂದೂ ಸಂಘಟನೆಗಳ ವಿರುದ್ಧ ವರದಿಯನ್ನು ನೀಡಿದ್ದ. ೨೦೦೦ ದಲ್ಲಿ ಸಲ್ಲಿಸಿದ ಆಯೋಗದ ವರದಿಯು ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು, ಭಾರತೀಯ ಕ್ರಿಶ್ಚಿಯನ್ ಮಿಷನರಿಗಳ ಜೊತೆಗಿನ ನಿಕಟ
ಸಂಪರ್ಕವನ್ನು ಉಲ್ಲೇಖಿಸಿತ್ತು.

ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ನಾಯಕರನ್ನು ಭೇಟಿ ಮಾಡಿ ಅವರಿಂದ ವಿವರಗಳನ್ನು ಪಡೆದುಕೊಂಡಿದ್ದರು. ೨೦೦೦ ದ ಆಯೋಗದ
ವರದಿಯು ಕ್ರಿಶ್ಚಿಯನ್ ಮಿಷನರಿಗಳ ಹಣದ ಆಮಿಷ, ಅವರ ದ್ವೇಷದ ಮಾತು ಮತ್ತು ಅವರ ಮತಾಂತರದ ಉದ್ದೇಶದ ಬಗ್ಗೆ ಉಲ್ಲೇಖಿಸಿರಲಿಲ್ಲ. ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯಗಳನ್ನು ಮಾತ್ರ ವರದಿಯಲ್ಲಿ ಉಲ್ಲೇಖಿಸಲಾಗುತ್ತಿತ್ತು, ಅಂತಿಮವಾಗಿ ಈ ವರದಿಯನ್ನು ವಿಶ್ವ ಸಂಸ್ಥೆಯಲ್ಲಿ
ಬಳಸಿಕೊಂಡು ಅಮೆರಿಕ ರಾಜಕೀಯ ಮಾಡುತ್ತಿತ್ತು. ತ್ರಿಪುರದಲ್ಲಿದ್ದಂತಹ ’NLFT’ ಬಂಡುಕೋರರು ಕ್ರಿಶ್ಚಿಯನ್ ಮತಾಂತರಿಗಳ ಪರವಾಗಿ ಕೆಲಸ ಮಾಡಿದವರು, ಈ ಬಂಡುಕೋರರು ತ್ರಿಪುರದ ಕೆಲವು ಪರಿಶಿಷ್ಟ ಪಂಗಡದ ಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಹಿಂದೂ ಮತ್ತು ಮುಸಲ್ಮಾನರ ಹಬ್ಬಗಳ ಆಚರಣೆಗಳನ್ನು ನಿಷೇದಿಸಿದ್ದರು. ತಮ್ಮ ಹಿಡಿತದಲ್ಲಿ ದ್ದಂತಹ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ಹಿಂದೂ ಧರ್ಮದ ಸಾಂಪ್ರದಾಯಿಕ ಉಡುಗೆ ಗಳನ್ನು ಉಡು ವುದನ್ನು ನಿಷೇದಿಸಿದ್ದರು.

ಸೋ ಕಾಲ್ಡ್ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆಯ ಆಯೋಗವು ತನ್ನ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಿರಲಿಲ್ಲ. ಈಶಾನ್ಯ ಭಾಗ ದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದ ಹಿಂದಿನ ಬಲವಾದ ಅಡಿ ಪಾಯ ಇದಾಗಿದೆ. ೨೦೦೧ ರಲ್ಲಿ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಅಮೆರಿಕ ದೇಶದ ಸರ್ಕಾರೀ ಅಧಿಕಾರಿಗಳಿಗೆ ಮಾನವ ಹಕ್ಕುಗಳ ರಕ್ಷಣೆಯಡಿಯಲ್ಲಿ ಭಾರತಕ್ಕೆ ಭೇಟಿ ನೀಡಬೇಕೆಂದು ವರದಿ ನೀಡಿತ್ತು.

ಆದರೆ ಭಾರತ ಸರಕಾರವು ಅಮೆರಿಕ ರಾಯಭಾರಿ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಲು ಅವಕಾಶ ನೀಡಿರಲಿಲ್ಲ. ಈಶಾನ್ಯ ಭಾಗದಲ್ಲಿ ನಡೆಯುತ್ತಿದ್ದಂತಹ ಹಿಂಸಾಚಾರಗಳಿಗೆ ಬಹುಸಂಖ್ಯಾತ ಹಿಂದೂ ಸಂಘಟನೆ ಗಳು ಕಾರಣವೆಂದು ಆಯೋಗವು ವರದಿ ಯನ್ನು ನೀಡಿತ್ತು. ಆ ಭಾಗದಲ್ಲಿ ಕ್ರಿಶ್ಚಿಯನ್ನರೇ ಹೆಚ್ಚಿನ ಸಂಖ್ಯೆ ಯಲ್ಲಿದ್ದರೂ ಸಹ ಆಯೋಗವು ರೀತಿಯ ವರದಿಯನ್ನು ನೀಡುವ ಮೂಲಕ ತನ್ನ ಉದ್ದೇಶವನ್ನು ಸ್ಪಷ್ಟ ಪಡಿಸಿತ್ತು. ತನ್ನ ವರದಿಯಲ್ಲಿ ತ್ರಿಪುರ ರಾಜ್ಯದಲ್ಲಿ ಹಿಂದೂಗಳ ಒಗ್ಗಟ್ಟಿನ ಪರಿಣಾಮವಾಗಿ ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯವಾಗಿದೆ ಯೆಂದು
ಹೇಳಲಾಗಿತ್ತು.

ಹಿಂದೂಗಳನ್ನು ಕೊಲೆ ಮಾಡುತ್ತಿ ದ್ದಂತಹ NLFT ಸಂಘಟನೆಯ ವಿಷಯಗಳು ವರದಿಯಲ್ಲಿ ಚರ್ಚೆಗೆ ಬರುತ್ತಿರಲಿಲ್ಲ. ೨೦೦೨ ರಲ್ಲಿ ನಾಗಾಲ್ಯಾಂಡ್ ರಾಜ್ಯದಲ್ಲಿ ಕ್ರಿಶ್ಚಿಯನ್ ಬಂಡುಕೋರರು ನಡೆಸಿದ್ದಂತಹ ಗಲಭೆಗಳ ಉಲ್ಲೇಖವಾಗಲೇ ಇಲ್ಲ, ೨೦೦೩ ರಲ್ಲಿ ಭಾರತದ ಸರಕಾರ ಕ್ರಿಶ್ಚಿಯನ್ ಮಿಷನರಿ ಗಳ ಮತಾಂತರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗೊಂಡಂತಹ ಕ್ರಮಗಳನ್ನು ಖಂಡಿಸಿದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಅಮೆರಿಕ ಸರಕಾರವು ಮಧ್ಯ ಪ್ರವೇಶಿಸಬೇಕೆಂದು ವರದಿ ಯನ್ನು ಸಲ್ಲಿಸಿತ್ತು.

ಮತಾಂತರ ನಿಷೇಧ ಕಾಯ್ದೆಯ ಚರ್ಚೆ ಗಳು ಭಾರತದಲ್ಲಿ ಶುರುವಾಗುತ್ತಿದ್ದಂತೆ ಆಯೋಗದ ಪಾದ್ರಿಗಳು ಭಾರತಕ್ಕೆ ವಿದೇಶಿ ಪ್ರವಾಸಿಗರಾಗಿ ಮಾತ್ರ ಆಗಮಿಸಲು ಸಾಧ್ಯವೆಂಬ ವರದಿಯನ್ನು ನೀಡಿದ್ದರು. ಕ್ರಿಶ್ಚಿಯನ್ ಮಿಶನರಿಗಳು ಅಮೆರಿಕ ದೇಶದ ರಾಯಭಾರಿ ಸಿಬ್ಬಂದಿಗಳ ಮೇಲೆ ಹೇರಿದ ಒತ್ತಡ
ಯಶಸ್ವಿಯಾಗಲಿಲ್ಲ, ಅಲ್ಲಿನ ಸರಕಾರ ಪಾದ್ರಿಗಳ ಬೇಡಿಕೆಗಳಿಗೆ ಒಪ್ಪಲಿಲ್ಲ. ಭಾರತವನ್ನು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿರುವ ದೇಶವೆಂದು ಘೋಷಿಸಬೇಕೆಂಬ ಬೇಡಿಕೆಯನ್ನು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಮುಂದಿಡಲಾಗಿತ್ತು. ಕಳೆದ ಒಂಬತ್ತು ವರ್ಷ
ಗಳಿಂದ ಭಾರತದಲ್ಲಿ ನಡೆದ ಘಟನೆಗಳನ್ನು ಗಮನಿಸಿ ದರೆ ೨೦ ವರ್ಷಗಳ ಹಿಂದೆ ಕ್ರಿಶ್ಚಿಯನ್ ಮಿಷನರಿಗಳು ನಡೆಸಿದ ತಂತ್ರಗಾರಿಕೆಯನ್ನೇ ನಡೆಸಲು ಪ್ರಯತ್ನಿಸಿ ವಿಫಲವಾಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನ ಮಾನ ಇಂದು ದೊಡ್ಡಮಟ್ಟದಲ್ಲಿ ಬೆಳೆದಿದೆ, ಅಮೆರಿಕಕ್ಕೆ ಮತಾಂತರಿಗಳ ಬೇಡಿಕೆ ಪ್ರಮುಖ ವಾದಂತಹ ವಿಷಯವಾಗಿ ಉಳಿದಿಲ್ಲ. ೨೦೦೪ ರಲ್ಲಿ ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಕ್ಷಣ ಅಮೆರಿಕ ದೇಶದ ನಿಯೋಗವು ಭಾರತಕ್ಕೆ ಭೇಟಿ ನೀಡಿ ಮತಾಂತರ ನಿಷೇಧ ಕಾಯ್ದೆಯಿಂದ ದಲಿತರ ಮೇಲೆ ಅನ್ಯಾಯವಾಗುತ್ತಿದೆಯೆಂಬ ವರದಿಯನ್ನು ನೀಡಿತ್ತು. ನಿಯೋಗ ದಲ್ಲಿದ್ದಂತಹ ವ್ಯಕ್ತಿಯೊಬ್ಬ ಗುಜರಾತನ್ನು ಆಫ್ರಿಕಾ ಖಂಡದ ‘ರವಾಂಡಾ’ ದೇಶಕ್ಕೆ ಹೋಲಿಕೆ ಮಾಡಿದ್ದ.

ಕ್ರಿಶ್ಚಿಯನ್ ಪಾದ್ರಿ ‘ಜಾನ್ ದಯಾಳ್’ ಅಮೆರಿಕದ ನಿಯೋಗದೆದುರು, ಅಮೆರಿಕ ದೇಶವು ಬಂಡವಾಳ ಹೂಡುವ ಭಾರತದ ಖಾಸಗೀ ಸಂಸ್ಥೆಗಳಲ್ಲಿನ ಕೆಲಸಗಳಲ್ಲಿ ಕ್ರಿಶ್ಚಿಯನ್ನರಿಗೆ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಯನ್ನಿಟ್ಟಿದ್ದ. ೨೦೦೬ ರಲ್ಲಿ ರಾಜಸ್ಥಾನದಲ್ಲಿ ನಡೆದಿದ್ದ ಘಟನೆಯೊಂದರ ಬಗ್ಗೆ ವರದಿ
ಮಾಡಿದ್ದ ಆಯೋಗವು ಕೇವಲ ಕ್ರಿಶ್ಚಿಯನ್ನರ ದೃಷ್ಟಿಕೋನ ದಿಂದ ಮಾತ್ರ ವರದಿಯನ್ನು ಸಲ್ಲಿಸಿತ್ತು. ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ವರದಿ ಸಿದ್ಧಪಡಿಸುವ ವೇಳೆಯಲ್ಲಿ ಹಿಂದೂಗಳ ಮೇಲಾದಂತಹ ದೌರ್ಜನ್ಯಗಳನ್ನು ಉಲ್ಲೇಕಿಸುತ್ತಲಿರಲಿಲ್ಲ.

೨೦೦೭ ರಲ್ಲಿ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ವರದಿಯು ಭಾರತದ ರಾಜಕೀಯ ಪಕ್ಷಗಳ ಸಿದ್ಧಾಂತಗಳ ಬಗ್ಗೆ ಉಲ್ಲೇಖಿಸಿತ್ತು. ತನ್ನ ವರದಿಯಲ್ಲಿ ಗುಜ ರಾತ್ ರಾಜ್ಯದ ಪಠ್ಯಪುಸ್ತಕದಲ್ಲಿ ‘ಹಿಟ್ಲರ್’ನನ್ನು ವೈಭವೀಕರಿಸಲಾಗಿದ್ದು, ಇದರಿಂದ ಬಹುಸಂಖ್ಯಾತ ಹಿಂದೂಗಳು ಪ್ರೇರೇಪಿತರಾಗಿ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯವೆಸಗು ತ್ತಿದ್ದರೆಂಬ ಸುಳ್ಳು ವರದಿಯನ್ನು ನೀಡಿತ್ತು. ಕೆಲವೊಂದು ಹಿಂದೂ ಸಂಘಟನೆಗಳು ಹಿಟ್ಲರ್‌ನನ್ನು ಗೌರವಯುತ ವಾಗಿ ಕಾಣುತ್ತಿದ್ದವೆಂದು ಹೇಳಿತ್ತು, ಲೊಡ್ಡೆಗಳ ಬೆಂಬಲಿತ ಕೆಲ ಮಾಧ್ಯಮಗಳು ಈ ವರದಿಯನ್ನು ಪ್ರಸಾರ ಮಾಡಿದ್ದವು. ಮಾಧ್ಯಮಗಳ ವರದಿಯನ್ನು ಪರಿಶೀಲಿಸದೆ ಆಯೋಗವು ವರದಿಯನ್ನು ಸಲ್ಲಿಸಿತ್ತು, ತದನಂತರ ಲೊಡ್ಡೆಗಳು ಪ್ರಸಾರ ಮಾಡಿದ್ದ ಸುದ್ದಿ ಸುಳ್ಳು ಎಂಬುದು ತಿಳಿಯಿತು. ಗುಜರಾತನ್ನೇ ಟಾರ್ಗೆಟ್ ಮಾಡಿಕೊಂಡಂತಹ ಕ್ರಿಶ್ಚಿಯನ್ ಮಿಶನರಿಗಳಿಗೆ ಸಾಥ್ ನೀಡಿದ್ದು ನರೇಂದ್ರಮೋದಿ ವಿರೋಧಿಗಳು.

‘ತೀಸ್ತಾ ಸೆಟಲ್ ವಾಡ್’ನಂತಹವರ ಬೆಂಬಲ ಈ ಮಿಶನರಿಗಳಿಗೆ ದೊಡ್ಡಮಟ್ಟದಲ್ಲಿ ಸಿಕ್ಕಿತ್ತು. ನರೇಂದ್ರ ಮೋದಿಯವರನ್ನು ರಾಜಕೀಯವಾಗಿ ಮುಗಿ
ಸಲು ಲೊಡ್ಡೆಗಳ ಪಟಾಲಂ ಮತ್ತು ಕಾಂಗ್ರೆಸ್, ತಮ್ಮ ಬೆಂಬಲಿಗರ ಮೂಲಕ ಅಮೆರಿಕವು ಭಾರತದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಲು ಮಧ್ಯಪ್ರವೇಶಿಸ ಬೇಕೆಂಬ ಕೂಗನ್ನು ಹೇಳಿಸಿತ್ತು. ಈಗಲೂ ಗಾಂಧಿ ವಿದೇಶ ಗಳಲ್ಲಿ ಇದೇ ಮಾದರಿಯಲ್ಲಿ ಸುಳ್ಳನ್ನು ಹೇಳುತ್ತಾ ಬಂದಿzರೆ. ೨೦೦೮ ರಲ್ಲಿ ಪ್ರೊಫೆಸರ್ ‘ಅಂಗನ ಚಟರ್ಜೀ’ ಅಮೆರಿಕದ ಆಯೋಗದ ಮುಂದೆ ಒರಿಸ್ಸಾದಲ್ಲಿ ‘ಹಿಂದೂ ಮತ್ತು ಕ್ರಿಶ್ಚಿಯ ನ್ನರ’ನಡುವೆ ಗಲಭೆ ಯಾಗುತ್ತಿದ್ದು, ಅಮೆರಿಕ ಸರ ಕಾರವು ಅಮೆರಿಕಾದಲ್ಲಿರುವ ಹಿಂದೂ ಸಂಘಟನೆಗಳನ್ನು ನಿಯಂತ್ರಿಸಬೇಕೆಂಬ ಬೇಡಿಕೆಯ
ನ್ನಿಟ್ಟಿದ್ದ. ಜತೆಗೆ ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಕ್ರಿಶ್ಚಿಯನ್ ಮಿಶನರಿಗಳಿಗೆ ತಮ್ಮ ಮತ ಪ್ರಚಾರ ಮಾಡಲು ಅವಕಾಶ ನೀಡುವಂತೆ ಭಾರತ ಸರಕಾರವನ್ನು ಒತ್ತಾಯಿಸಬೇಕೆಂದು ಹೇಳಿದ್ದ. ವಿಪರ್ಯಾಸ ವೆಂದರೆ ಅಮೆರಿಕದಲ್ಲಿ ನಡೆಯುವ ಜನಾಂಗೀಯ ನಿಂದನೆ
ಗಳ ವಿರುದ್ಧ ಮಾತನಾಡುವ ಲೊಡ್ಡೆಗಳು, ಭಾರತದ ಆಂತರಿಕ ವಿಷಯದಲ್ಲಿ ಅಮೆರಿಕ ಮದ್ಯಪ್ರವೇಶಿಸಬೇಕೆಂದು ಹೇಳುತ್ತಾರೆ.

ಈಶಾನ್ಯ ಭಾಗದ ಮಣಿ ಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿಂದಿನ ದಶಕಗಳ ಕಾಲದ ಮಿಷನರಿಗಳ ಬಲವಾದ ಅಡಿಪಾಯದ ಸುಳಿವು ನಿಮಗೆ ಸಿಕ್ಕಿರಬಹುದು, ಮುಂದಿನವಾರದ ಅಂಕಣದಲ್ಲಿ ಮತ್ತಷ್ಟು ವಿವರಗಳನ್ನು ನಿರೀಕ್ಷಿಸಿ – ಮಧ್ಯಂತರ ವಿರಾಮ!