Sunday, 15th December 2024

ಇಂಟರ್‌ನೆಟ್‌ನ ನಕಲಿ ಜೀವಿಗಳು

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ಇಂಟರ್‌ನೆಟ್. ಬಹುಶಃ ಇಂಥದ್ದೊಂದು ಸಾಧ್ಯತೆಯನ್ನು ಹಿಂದಿನವರು ಕನಸು ಮನಸಿನಲ್ಲೂ ಊಹಿಸಿಕೊಂಡಿರಲಿಕ್ಕಿಲ್ಲ. ಇಮೇಲ್ ಇರದಿದ್ದರೆ ಬಹುಶಃ ಈ ಲೇಖನ ಬರೆದು ಕಳಿಸಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅಥವಾ ಬರೆಯಬೇಕೆಂದೇ ಅನ್ನಿಸುತ್ತಿರಲಿಲ್ಲವೇನೋ. ಓದುಗರ ಜತೆ ಪತ್ರ ವ್ಯವಹಾ ರಕ್ಕೂ ಇಮೇಲ್.

ಸೋಷಿಯಲ್ ಮೀಡಿಯಾ ಇದ್ದದರಿಂದಲೇ ಓದುಗರ ಜತೆ, ಸ್ನೇಹಿತರು, ಸಂಬಂಧಿಗಳ ಜತೆ ಸಂಪರ್ಕ ಸಾಧ್ಯ ವಾಗಿದೆ. ಹಿಂದೆಲ್ಲ ವಿದೇಶಕ್ಕೆ ಹೋದವರು ಕಳೆದೇ ಹೋಗುತ್ತಿದ್ದರು. ಇಂಟರ್‌ನೆಟ್ಟಿನಿಂದ ಇಂದು ಪರದೇಶಿ ಭಾವ ಅಷ್ಟಾಗಿ ಕಾಡುವುದಿಲ್ಲ. ಇದೊಂದು ವರ್ಚುಯಲ್ ಜಗತ್ತೆಂದು ತಿಳಿದಿದ್ದರೂ ಸಂಧಿಸುವವರು ನಿಜ ವ್ಯಕ್ತಿಗಳೇ. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಬರುವ ಪ್ರಾಜ್ಞರ ಮಾತನ್ನು ಕೇಳಿಸಿಕೊಳ್ಳದಿದ್ದರೆ ದಿನವೇ ಶುರುವಾಗುವುದಿಲ್ಲ. ಇದೆಲ್ಲ
ಇಂಟರ್‌ನೆಟ್ಟಿನಿಂದ. ಪಟ್ಟಿಮಾಡುತ್ತ ಹೋಗಬಹುದು.

ಈಗೀಗಂತೂ ನಮ್ಮ ಇರುವಿಕೆಯ ಸೂಚಕವೇ ಈ ಇಂಟರ್‌ನೆಟ್ ಆಗಿರುವುದು ಕೆಲವೊಮ್ಮೆ ಬಹಳ ವಿಚಿತ್ರ ವೆನ್ನಿಸಿಬಿಡುತ್ತದೆ. ವಾಟ್ಸ ಅಪ್ ಬಂದಾಗಿ ನಿಂದ ನಮ್ಮವರನ್ನು ಸಂಪರ್ಕಿಸುವುದು ಅಂದಾಜಿಸಲಾಗದಷ್ಟು ಸುಲಭವಾಗಿ ಬಿಟ್ಟಿದೆ. ಕೆಲವೊಮ್ಮೆ ಈ ಇಂಟರ್‌ನೆಟ್ ಬಾಹ್ಯ ಸಂಪರ್ಕ ಮನೆಯವರ ಜತೆಯ ಮಾತನಾಡದಷ್ಟು ನಮ್ಮನ್ನು ಆವರಿಸಿಕೊಳ್ಳುವುದೂ ಉಂಟು. ಒಟ್ಟಾರೆ ಒಂದೇ ಒಂದು ದಿನ ಇಂಟರ್‌ನೆಟ್ ಇಲ್ಲವೆಂದರೆ ವೃತ್ತಿ, ಹವ್ಯಾಸ ಎಲ್ಲವೂ ಬಂದ್. ನೀರು, ಊಟವಿಲ್ಲದಿದ್ದರೂ ಬದುಕಿಬಿಡಬಹುದು, ಒಂದರ್ಧ ಗಂಟೆ ಇಂಟರ್‌ನೆಟ್ ಇಲ್ಲವೆಂದರೆ ಬದುಕು ಅಸಾಧ್ಯವೆನ್ನಿಸಿಬಿಡುತ್ತದೆ.

ಈಗ ವಿಷಯಕ್ಕೆ ಬರೋಣ. ಇವತ್ತು ಹೇಳಲಿಕ್ಕೆ ಹೊರಟಿ ರುವುದು ಇದೇ ಇಂಟರ್‌ನೆಟ್ ಹುಟ್ಟು ಹಾಕಿದ ಕೆಲವು ಅಡ್ಡನಾಡಿಗಳ ಬಗ್ಗೆ. ಫೇಕ್ ಐಡಿಗಳನ್ನು ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ರಾಡಿ ಎಬ್ಬಿಸುವವರ ಬಗ್ಗೆ. ಅಜ್ಞಾತ ನಾನ್ಸೆನ್ಸುಗಳ ಬಗ್ಗೆ. ಆಧುನಿಕ ಸೋಷಿಯಲ್ ಪುಂಡು ಪೋಕರಿಗಳ ಬಗ್ಗೆ. ಕೆಲ ದಿನಗಳ ಹಿಂದೆ ವಿಶ್ವವಾಣಿಯ ಕ್ಲಬ್‌ಹೌಸ್ ಮಾತಿಗೆ ಚಕ್ರವರ್ತಿ ಸೂಲಿಬೆಲೆ ಬಂದಿದ್ದರು. ನೀವು ವಿಶ್ವವಾಣಿ ಕೇಳುಗರಾಗಿದ್ದರೆ ಇದೆಲ್ಲವನ್ನು ಗ್ರಹಿಸಿರುತ್ತೀರಿ. ಆ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಮೀರಿ ಜನ ಸೇರಿದ್ದರು. ಅಲ್ಲಿ ಸುಮಾರು 25-30 ಜನರು ಫೇಕ್ ಐಡಿ ಮಾಡಿಕೊಂಡು ಆ ದಿನ ಒಳನುಗ್ಗಿದ್ದರು. ಏನೇನೋ ಮೆಸೇಜುಗಳನ್ನು ಹಾಕುತ್ತಿದ್ದರು.

ಕೆಲವಂತೂ ಓದಲಿಕ್ಕೂ ಅಸಹ್ಯವೆನಿಸುತ್ತಿತ್ತು. ಅನಂತರದಲ್ಲಿ ತಿಳಿದಿದ್ದೇನೆಂದರೆ ಇದೆಲ್ಲವೂ ಒಂದು ದೊಡ್ಡ ಗುಂಪಿನ ಯೋಜಿತ ಕೆಲಸವಾಗಿತ್ತು. ಅವರೆಲ್ಲ ಈ ವೇದಿಕೆಗೆ ಗುಂಪಾಗಿ ಬರುವುದು, ಆಮೇಲೆ ಇಲ್ಲಿ ಹೇಸಿಗೆ ಮಾಡಿ ಸೂಲಿಬೆಲೆ ಮತ್ತು ಭಟ್ಟರಿಗೆ ಅವಮಾನ ಮಾಡುವುದು ಎಂಬ ಯೋಜನೆ. ಇದು ಹಿಂದಿನ ದಿನವೇ ಸಿದ್ಧವಾಗಿತ್ತು. ಅವರ ತಯಾರಿಯ ಮಾತುಗಳನ್ನು ಓದುಗರೊಬ್ಬರು ರೆಕಾರ್ಡ್ ಮಾಡಿ ಕಳಿಸಿದ್ದರು. ಇದೇನೋ ಒಂದು ವಿವಿಕ್ತ ಘಟನೆಯಲ್ಲ. ಇಂದು ಇಂಥವರು ಸೋಷಿಯಲ್ ಮೀಡಿಯಾದಲ್ಲಿ ಎಲ್ಲ ಕಡೆ ಕಾಣಿಸಿಕೊಳ್ಳುತ್ತಾರೆ. ಅವರ ಪ್ರೊಫೈಲಿಗೆ ಮುಖವಿರುವುದಿಲ್ಲ.

ಹೆಸರು ಹೆಸರಾಗಿರುವುದಿಲ್ಲ. ಅವರು ಇಂಥವರೇ ಎಂದು ಗುರುತಿಸಲಿಕ್ಕಾಗುವುದಿಲ್ಲ. ಅವರ ಉದ್ಯೋಗವೇ ಕಂಡಕಂಡವರಿಗೆ ಬೈಯುವುದು. ಅವಾಚ್ಯ ಬಳಕೆ ತೀರಾ ಸಾಮಾನ್ಯ. ಇವರದ್ದೇನು ರಚನಾತ್ಮಕ ಟೀಕೆಗಳಲ್ಲ. ಇವರು ಟಾರ್ಗೆಟ್ ಮಾಡುವುದೇ ಸಾಮಾನ್ಯವಾಗಿ ಪ್ರಾಜ್ಞರನ್ನು, ಅಥವಾ ಸೆಲಿಬ್ರಿಟಿ ಗಳನ್ನು, ಸಭ್ಯರನ್ನು, ನಾಲ್ಕು ಜನರು ಗುರುತಿಸುವವರನ್ನು, ಇಲ್ಲವೇ ನೀವು ಸಂವೇದನಾಶೀಲ, ದೇಶದ ಬಗ್ಗೆ ಕಾಳಜಿಯುಳ್ಳವರಾದರೆ, ಇಲ್ಲವೇ ಧರ್ಮ ವನ್ನು, ಸಂವಿಧಾನವನ್ನು ಗೌರವಿಸುವವರದರಾಯ್ತು.

ಇಂದು ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇವರೆಲ್ಲ ಯಾರು? ಏಕಾಗಿ ಹೀಗೆಲ್ಲ ಮಾಡುತ್ತಾರೆ? ಇಂದು ಸಾಮಾನ್ಯ ನರೆಷನ್ ಇದೆ. ಒಬ್ಬ ಫೇಕ್ ವ್ಯಕ್ತಿ ಇಂಟರ್‌ನೆಟ್ ನಲ್ಲಿ ಬಿಜೆಪಿಯನ್ನು ಬೈದರೆ ಅವರು ಕಾಂಗ್ರೆಸ್ ಐಟಿ ಸೆಲ್ಲಿನವರು! ಅದೇ ಕಾಂಗ್ರೆಸ್ಸಿಗೆ ಬೈದರೆ, ಅವಹೇಳನ ಮಾಡಿದರೆ ಆ ಮಾರು ವ್ಯಕ್ತಿ ಬಿಜೆಪಿಯ ಐಟಿ ಸೆಲ್ಲಿನವನು ಅನ್ನೋದು. ಇದು ಹೌದೆನ್ನಬಹುದಿತ್ತೇನೋ, ಆದರೆ ಈ ರೀತಿ ಫೇಕ್ ಗಿರಾಕಿಗಳ ಸಂಖ್ಯೆಯನ್ನು ಇಂದಿನ ಸೋಷಿಯಲ್ ಮೀಡಿಯಾದಲ್ಲಿ ನೋಡಿದರೆ ರಾಜಕೀಯ ಪಕ್ಷದ ಐಟಿ ಸೆಲ್ಲಿನವರು ಇಷ್ಟೊಂದು ಮಂದಿಯನ್ನು ದುಡ್ಡುಕೊಟ್ಟು ಸಾಕಲಂತೂ ಸಾಧ್ಯವೇ ಇಲ್ಲ.

ಹಾಗೇನಾದರೂ ಆಗಿದ್ದರೆ ರಾಜಕೀಯ ಪಕ್ಷಗಳೇ ದೇಶದ ಅತಿದೊಡ್ಡ ಉದ್ಯೋಗದಾತರಾಗಿರಬೇಕಿತ್ತು. ಹಾಗಾದರೆ ಯಾರು ಇವರೆಲ್ಲ ಮತ್ತೆ ಹೀಗೇಕೆ?
ಮತ್ತಿನ್ನೇನಲ್ಲ – ಇದೊಂದು ಮಾನಸಿಕ ರೋಗ. ಈ ರೋಗಕ್ಕೊಂದು ಹೆಸರು ಕೂಡ ಇದೆ. Sociogenic Illness. ಇದೊಂದು ಹಬ್ಬು ರೋಗ ಕೂಡ ಹೌದು. ಇಲ್ಲಿ ಫೇಕ್ ಐಡಿ ಮಾಡಿಕೊಳ್ಳುವವರೆಲ್ಲ ಒಂದಿಂದು ಮಾನಸಿಕ ಸಮಸ್ಯೆ ಇರುವವರೇ ಎಂದು ಹೇಳುತ್ತದೆ PEW ರಿಸರ್ಚ್ ಸೆಂಟರ್.

ಈ ರೋಗ ಇಂಟರ್ನೆಟ್ಟಿನಲ್ಲಿ ಹುಟ್ಟಿದ್ದು. ಇದು ಹಿಂದಿರಲಿಲ್ಲ. ಈ ರೀತಿಯ ಕುಬುದ್ಧಿಯವರು ಹಿಂದಿರಲಿಲ್ಲ ಎನ್ನುವಂತಿಲ್ಲ. ಆದರೆ ಇಂಥವರಿಗೆ ಇಂಟರ್ನೆಟ್ ಒಂದು ವೇದಿಕೆಯಾಗಿ ಇಂದು ಸಿಕ್ಕಿದೆ.. ಈ ರೋಗ ಮೊದಲು ಹುಟ್ಟಿಕೊಳ್ಳುವುದು ತಮಾಷೆಗಾಗಿ. ತಮಾಷೆಗೆಂದು ಒಂದು ಫೇಕ್ ಐಡಿ ಮಾಡಿ
ಕೊಳ್ಳುತ್ತಾರೆ. ನಂತರದಲ್ಲಿ ಈ ಅಜ್ಞಾತಾವಸ್ಥೆ ಒದಗಿಸುವ ಸ್ವಾತಂತ್ರ ಅವರಿಗರಿವಿಲ್ಲದಂತೆ ಅವರಲ್ಲಿ ಸ್ವೇಚ್ಚಾಚಾರ ಹೆಚ್ಚಿಸುತ್ತದೆ. ಅದಲ್ಲದೇ ಇಂಥ ವರು ಕ್ರಮೇಣ ತಮ್ಮಂಥವರನ್ನು ಇಂಟರ್ನೆಟ್ಟಿನಲ್ಲಿ ಹುಡುಕಲು ಶುರುಮಾಡುತ್ತಾರೆ. ಅವರ ಮಾನಸಿಕ ದುರವಸ್ಥೆ ಒಂದು ರೀತಿಯ ಸಪೋರ್ಟ್ ಅನ್ನು ಬಯಸುತ್ತದೆ.

ಕ್ರಮೇಣ ಇಂಥವರೆಲ್ಲ ಒಂದು ಕಡೆ ಸೇರುತ್ತಾರೆ. ಒಬ್ಬರಿಗೊಬ್ಬರು ಅನುಮೋದಿಸಿಕೊಳ್ಳುತ್ತಾರೆ. ಗುಂಪಿನಲ್ಲಿ ಇವರೆಲ್ಲ ಕ್ರಮೇಣ ಕ್ರಿಯಾಶೀಲರಾಗುತ್ತಾರೆ. ಇದು ಕ್ರಮೇಣ ಅವರಿಗೆ ಅರಿವಿಲ್ಲದಂತೆ ಅವರನ್ನಾವರಿಸುತ್ತದೆ. ಇಲ್ಲಿ ಮೊದಲನೆಯದು ಅವರ ನಾನ್ಸೆನ್ಸುಗಳಿಗೆ ಸಿಗುವ ಬೆಂಬಲ. ಒಂದು ಲೈಕು, ಒಂದು ಕಮೆಂಟು ಇವೆಲ್ಲ ಅವರಲ್ಲಿ ಸಮಾಜ ಅವರನ್ನು ಗುರುತಿಸಿದ ಭಾವ ಮೂಡಿಸುತ್ತದೆ. ಅವರನ್ನು ಬೈದರೂ ಅದೇನೋ ಒಂದು ಖುಷಿ. ವಸ್ತುಗಳನ್ನು
ಕದಿಯುವುದು ಹೇಗೆ ಒಂದು ಮಾನಸಿಕ ರೋಗವೋ ಹಾಗೆಯೇ ಇದು ಕೂಡ. ಸೋಷಿಯಲ್ ಮೀಡಿಯಾದಲ್ಲಿ ಇಂಥವರಿಂದ ಆಗುವ ರಗಳೆ ಬೇರೆಯ ವರಿಗಷ್ಟೇ ಅಲ್ಲ.

ಇದು ಖುದ್ದು ಅವರ ಮಾನಸಿಕ ಸ್ಥಿತಿಯನ್ನು ಕೂಡ ಬಿಗಡಾಯಿಸುತ್ತದೆ ಎನ್ನುವ ಅರಿವು ಅವರಿಗಿರುವುದಿಲ್ಲ. ಕ್ರಮೇಣ ಇಂಥವರು ಇನ್ನಷ್ಟು ಹೊಲಸನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡಲು ಮುಂದಾಗುತ್ತಾರೆ. ಕ್ರಮೇಣ ಫೇಕ್ ಐಡಿ ಮತ್ತು ಇವರ ಮೂಲ ವ್ಯಕ್ತಿತ್ವದ ನಡುವೆ ಅಂತರ
ಕಡಿಮೆಯಾಗುತ್ತ ಬರುತ್ತದೆ. ಬಹಳ ಹಿಂದೆ ಆವೇಷ ಎಂಬ ನಾಟಕವನ್ನು ನೋಡಿದ್ದೆ. ಅಲ್ಲಿ ಸ್ತ್ರೀ ಪಾತ್ರಮಾಡುವ ಪುರುಷ ಪಾತ್ರ ಕ್ರಮೇಣ ಸೀಯಂತೆ ವರ್ತಿಸಲು ಶುರುಮಾಡುತ್ತಾನೆ,

ಆತನಲ್ಲಿ ಸ್ತ್ರೀ ಸಹಜ ಬಯಕೆ ಶುರುವಾಗಿಬಿಡುತ್ತದೆ. ಇಲ್ಲಿ ಕೂಡ ಹಾಗೆಯೇ. ಕ್ರಮೇಣ ಫೇಕ್ ಐಡಿ ಮತ್ತು ನಿಜ ಜೀವನದಲ್ಲಿ ಐಡೆಂಟಿಫಿಕೇಷನ್ ಎರಡ ರಲ್ಲೂ ವ್ಯತ್ಯಾಸ ಗುರುತಿಸಲಾಗದ ಸ್ಥಿತಿಗೆ ಇವರೆಲ್ಲ ತಲುಪುತ್ತಾರೆ. ಇಂದಿನ ಸೋಷಿಯಲ್ ಮೀಡಿಯಾ ಕೆಲಸಮಾಡುವುದೇ ಪ್ರತಿಕ್ರಿಯೆಯ ಸಂಖ್ಯೆಯ ಆಧಾರದ ಮೇಲೆ. ಇಂಥವರ ನಾನ್ಸೆನ್ಸುಗಳಿಗೆ ನೀವು ಅದೇನೇ ಪ್ರತಿಕ್ರಿಯಿಸಿದರೂ ಸೋಷಿಯಲ್ ಮೀಡಿಯಾಕ್ಕೆ ಅದೊಂದು ಲೆಕ್ಕ – ಇನ್ನಷ್ಟು ಜನರಿಗೆ ಅದು ಕಾಣಿಸುವಂತೆ ಅಲ್ಗೊರಿದಮ್ ಕೆಲಸ ಮಾಡುತ್ತದೆ.

ಇದೆಲ್ಲದರಿಂದ ಈ ಫೇಕ್ ವ್ಯಕ್ತಿಗೆ ತಾನು ಮಾಡುತ್ತಿರುವುದೇ ಸರಿಯೆಂದು ಅನ್ನಿಸಲಿಕ್ಕೆ ಶುರುವಾದಲ್ಲಿಗೆ ಆತನಲ್ಲಿ ಮಾನಸಿಕ ರೋಗ ದೃಢಪಟ್ಟಿದೆ ಯೆಂದೇ ಅರ್ಥ. ಇದೆಲ್ಲದರ ಪರಿಣಾಮ ಸಮಾಜದ ಮೇಲೆ ಯಾವ ರೀತಿ ಯಾಗುತ್ತದೆ ಎಂದು ವಿವರಿಸಬೇಕಿಲ್ಲ. ಇಂದು ಭಾರತದಲ್ಲಿ ಮತ್ತು ಜಗತ್ತಿನಲ್ಲಿ ಸುಮಾರು ಶೇ. 60 ರಷ್ಟು ಜನರು ಸುದ್ದಿಯನ್ನು ಪಡೆಯುವುದು ಸೋಷಿಯಲ್ ಮೀಡಿಯಾದಿಂದ ಎನ್ನುವುದು ಯೇಲ್ ವಿಶ್ವವಿದ್ಯಾಲಯದ ವರದಿ.

ಸಂಖ್ಯೆ ಎಷ್ಟೇ ಇರಬಹುದು, ಆದರೆ ಸೋಷಿಯಲ್ ಮೀಡಿಯಾ ಅಷ್ಟು ಮಹತ್ವದ್ದು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಕ್ರಮೇಣ ಇಂಥವರ ಸಂಖ್ಯೆ ಹೆಚ್ಚುತ್ತಿದ್ದಂತೆ ಮತ್ತು ಪ್ರಾಜ್ಞರು ಇಂಥದ್ದನ್ನೆಲ್ಲ ಖಂಡಿಸುವ ಸಾಧ್ಯತೆ ಕಡಿಮೆಯಿರುವುದರಿಂದ ಇಂಥವರೇ ಸಾಮಾಜಿಕ ಜಾಲತಾಣವನ್ನು ಆವರಿಸಿಬಿಟ್ಟಿದ್ದಾರೆ ಅನ್ನಿಸಲು ಶುರುವಾಗಿದೆ.

ಇಂತಹ ಫೇಕ್ ಮಂದಿ ಹೆಚ್ಚಾಗಿ ಅವರು ಪ್ರತಿಪಾದಿಸುವ ಐಡಿಯೋಲೋಜಿಯನ್ನು ಒಪ್ಪಿರುತ್ತಾರೆ ಎಂದೇನಿಲ್ಲ. ಅವರ ವೈಯಕ್ತಿಕ ಅನಿಸಿಕೆ ಅದಕ್ಕೆ ವ್ಯತಿರಿಕ್ತವಾಗಿರಲೂಬಹುದು. ಆದರೆ ಇಂಥವರು ತೇಲಿಬಿಡುವ ಕೆಲವು ವಿಚಾರಗಳಿಗೆ ಸಿಗುವ ಪ್ರತಿಕ್ರಿಯೆ ಮತ್ತು ವಿರೋಧ ಕ್ರಮೇಣ ಅವರು ತಾವು ಹೇಳಿದ್ದೇ ಸರಿಯಿರಬಹುದು ಅನ್ನಿಸಲಿಕ್ಕೆ ಶುರುಮಾಡಿ ಬಿಡುತ್ತದೆಯಲ್ಲ – ಆಗ ಭಾನಗಡಿಯಾಗುವುದು. ಜೂಜು, ಸೆಕ್ಸ್, ಶಾಪಿಂಗ್, ಅತಿಯಾಗಿ ತಿನ್ನು ವುದು ಹೀಗೆ ಬೇರೆ ಬೇರೆ ಚಟಗಳ ಜತೆಯಲ್ಲಿ ಈ ಅಜ್ಞಾತ ಇಂಟರ್ನೆಟ್ ವ್ಯವಹಾರ ಕೂಡ ಈಗ ಹೊಸತೊಂದು ಮಾನಸಿಕ ಸಮಸ್ಯೆ.

ಕೆಲವು ಸಭ್ಯರೆನಿಸಿಕೊಂಡವರು ಕೂಡ ಈ ರೀತಿ ಫೇಕ್ ಐಡಿ ಗಳನ್ನು ಬಳಸುವುದನ್ನು ನೋಡಿದ್ದೇನೆ. ಫೇಕ್ ಐಡಿ ಮಾಡಿಕೊಂಡು ನಾನು ಯಾರಿಗೂ ಕೆಡುಕನ್ನು ಮಾಡುವುದಿಲ್ಲ ಎನ್ನುವ ವರ್ಗವಿದೆ. ಅವರು ಕೊಡ ಇಂತಹ ದುರಾಚಾರಕ್ಕೆ ಕ್ರಮೇಣ ಇಳಿಯುವುದು ಕೂಡ ಅಷ್ಟೇ ಸಾಮಾನ್ಯ. ಇಲ್ಲವೇ
ಅವರು ಕೂಡ ಫೇಕ್ ಮತ್ತು ಸ್ವಂತಿಕೆಯ ನಡುವೆ ಕ್ರಮೇಣ ಒದ್ದಾಡುವುದು ಕಾಣಿಸುತ್ತದೆ. ಇವೆಲ್ಲ ಮೇಲ್ನೋಟಕ್ಕೆ ತೀರಾ ಮುಗ್ಧ, ದೊಡ್ಡದಲ್ಲದ ಅಪರಾಧಗಳಂತೆ ಕಂಡರೂ ಇವರೆಲ್ಲ ಆಧುನಿಕ ಸಮಾಜಘಾತುಕರು.

Pizza Gate ಘಟನೆಯ ಬಗ್ಗೆ ತಿಳಿದಿಕೊಂಡರೆ ಇಂಥವರಿಂದ ಆಗುವ ಅನಾಚಾರ ಎಷ್ಟು ಎನ್ನುವುದು ತಿಳಿಯುತ್ತದೆ. ಇಂಥವರು ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳುವ ಕೆಲ ವಿಚಾರಗಳನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಬಡತನ – ಶ್ರೀಮಂತರ ವಿರುದ್ಧ, ಜಮೀನ್ದಾರಿ ಪದ್ಧತಿ, ಮೇಲ್ಜಾತಿ ಕೆಳಜಾತಿ ಯನ್ನು ತುಳಿಯುವುದು, ಬ್ರಾಹ್ಮಣ್ಯ, ಅನ್ಯ ಭಾಷಾ ಹೇರಿಕೆ, ರಾಜಕೀಯ ಐಡಿಯಾಲಜಿ ಇತ್ಯಾದಿ. ಇಲ್ಲಿ ಸಾಮಾನ್ಯವಾದದ್ದೇನು? ಇವೆಲ್ಲ ಸಾಮಾಜಿಕ ಸೂಕ್ಷ್ಮ ವಿಚಾರಗಳು.

ಸಾಮಾನ್ಯವಾಗಿ ದಾರಿ ತಪ್ಪಿಸಲಿಕ್ಕೆ ಅತ್ಯಂತ ಕೆಳಹಂತದಲ್ಲಿ ಸಿಗಬಲ್ಲ ವಿಚಾರಗಳು. ಇಂಥವರು ಬುದ್ಧಿಜೀವಿಗಳಂತೆ ಇಂತಹ ವಿಚಾರಗಳನ್ನೇ ಹಿಡಿದು ಜೋತಾಡುವುದು. ಯಾವುದೇ ಪುರಾವೆಗಳಿಲ್ಲದೆ ಸುಳ್ಳು ಹಲುಬುವುದು ಇಲ್ಲಿ ಸಾಮಾನ್ಯ. ಅವರು ಹರಡುವ ಈ ಋಣಾತ್ಮಕ ವಿಚಾರಗಳು ಕ್ರಮೇಣ
ಅವರನ್ನು ಈ ಫೇಕ್ ಐಡಿಯಿಂದಾಚೆ ಇಂದು ಅಥವಾ ನಾಳೆ ನಿಜ ಜೀವನದಲ್ಲೂ ನಿಜ ಕಾಡುತ್ತದೆ. ಅವರು ಟ್ರೊಲ್ ಮಾಡಿದ್ದನ್ನೇ ಬೇರಿನ್ನೊಬ್ಬರು ಟ್ರೊಲ್ ಮಾಡಿದರೆ ಇಂಥವರಿಗೆ ಸಹಿಸಿಕೊಳ್ಳಲಿಕ್ಕಾಗುವುದಿಲ್ಲ. ಅವಾಚ್ಯ ಶಬ್ದ ಪ್ರಯೋಗ ಅಲ್ಲಿ ಶುರುವಾಗುತ್ತದೆ. ಇದು ಮುಂದಿನ ಮಾನಸಿಕ ಸ್ಥಿತಿ. ಇದು ಅವರ ವೈಯಕ್ತಿಕ ಜೀವನದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರಿಯೇ ಬೀರುತ್ತದೆ.

ಸುಮ್ಮನೆ, ಪುಕ್ಸಟ್ಟೆ ಪ್ರೊಪಗಾಂಡಾ, ಸುಳ್ಳು ಸುದ್ದಿ ಹರಡಲಿಕ್ಕೆ ಹೋಗಿ, ತಮಾಷೆಗೆಂದು ಫೇಕ್ ಐಡಿ ಮಾಡಿಕೊಂಡು ಸ್ವಾತಂತ್ರ್ಯದ ಮರೀಚಿಕೆಯಲ್ಲಿ ಇರುವವರು ಅವರಿಗರಿವಿಲ್ಲದಂತೆ ಬೈಪೋಲಾರ್ ಸಮಸ್ಯೆಯಲ್ಲಿ ಬಳಲುತ್ತಾರೆ. ತಮ್ಮನ್ನು ಸಮಾಜ ಹೇಗಾದರೂ ಗುರುತಿಸಲೆಂದು ಕುಕೃತ್ಯಗಳಲ್ಲಿ ಭಾಗಿ
ಯಾಗುವ ಇಂಥವರನ್ನು ನಿರ್ಲಕ್ಷಿಸುವುದೇ ಸುಸಂಸ್ಕೃತ ಸಮಾಜ ಕೊಡಬಹುದಾದ ಶಿಕ್ಷೆ.