Sunday, 8th September 2024

ಲೂಸ್ ಟಾಕ್

ತುಂಟರಗಾಳಿ

ಹರಿ ಪರಾಕ್

ಹರ್ಷಲ್ ಪಟೇಲ್-ಪರ್ಪಲ್ ಕ್ಯಾಪ್ ನಡುವೆ ಮಾತುಕತೆ
ಹರ್ಷಲ್ ಪಟೇಲ್ – ಹಾಯ್ ನಾನು ಹರ್ಷಲ್ ಪಟೇಲ್
ಪರ್ಪಲ್ ಪಟೇಲ್- ನಾನು ಪರ್ಪಲ್ ಪಟೇಲ್, ಐ ಮೀನ್ ಪರ್ಪಲ್ ಕ್ಯಾಪ್.

ಹರ್ಷಲ್ ಪಟೇಲ್- ಏ, ನಿಂದ್ ಯಾಕೋ ಜಾಸ್ತಿ ಆಯ್ತು ಗುರೂ, ನನ್ ಥರನೇ ಹೆಸರಿಟ್ಕೊಂಡಿದ್ದೀಯಾ

ಪರ್ಪಲ್ ಪಟೇಲ್- ಏನ್ ಮಾಡೋದು, ತಪ್ಪು ನಿಂದೇ, ಹೋದ್ ವರ್ಷದಿಂದ ನನ್ನ ತಲೆ ಮೇಲಿಟ್ಕೊಂಡು ಮೆರೆಸ್ತಾ ಇದ್ದೀಯಲ್ಲ

ಹರ್ಷಲ್ ಪಟೇಲ್- ಅದೂ ನಿಜಾನೇ, ಆದ್ರೆ ಫೀಲ್ಡಲ್ಲಿ ನಾನ್ ಮೆರೆದ್ರೆ ತಾನೆ ನೀನು ನನ್ನ ತಲೆ ಮೇಲೆ ಬಂದು ಕೂತ್ಕಳ್ಳೋದು. ಸರಿ, ನನ್ನ ತಲೆ ಮೇಲೆ ಕೂತಿದ್ದೀಯಲ್ಲ, ನಿನ್ ಅಭಿಪ್ರಾಯ?
ಪರ್ಪಲ್ ಪಟೇಲ್-ಬ್ಯಾಟ್ಸ್‌ಮನ್‌ಗಳನ್ನ ಹೆದರಿಸೋ ಥರ ಓಡಿ ಬಂದು ಬೌಲಿಂಗ್ ಮಾಡಿ ವಿಕೆಟ್ ತೆಗೆಯೋರಿಗಿಂತ, ನಿನ್ ಥರ ಬರೀ ತಲೆ ಓಡ್ಸಿ ವಿಕೆಟ್ ತೆಗೆಯೋರ ತಲೆ ಮೇಲಿರೋದು ಒಂಥರ ಸ್ಪೆಷಲ್ ಫೀಲಿಂಗು

ಹರ್ಷಲ್ ಪಟೇಲ್- ಅಂದ್ರೆ, ನನ್ ಬೌಲಿಂಗಲ್ಲಿ ಏನೂ ವಿಶೇಷ ಇಲ್ಲ ಅಂತ ಕಿಂಡಲ್ ಮಾಡ್ತಾ ಇದ್ದೀಯಾ, ಈ ತಲೆ ಹರಟೆ ಎಲ್ಲ ಬೇಡ

ಪರ್ಪಲ್ ಪಟೇಲ್- ಏನು, ನಂದು ತಲೆ ಹರಟೆನಾ? ಮಗಾ, ನಾನ್ ನಿನ್ ತಲೆ ಮೇಲೆ ಕೂತಾಗಿಂದ ನಿಂಗೆ ಹೆಡ್ ವೆಯ್ಟ ಜಾಸ್ತಿ ಆಗಿದೆ ಅನ್ನಿಸ್ತಿದೆ. ಹುಷಾರಾಗಿರು, ತುಂಬಾ ಹೊಸ ತಲೆಗಳು ಬಂದಿವೆ. ನಾನು ಬೇರೆ ಯಾವ್ದಾದ್ರೂ ತಲೆ ಹುಡುಕ್ಕೊಂಡ್ ಹೋಗ್ತೀನಿ ಅಷ್ಟೇ.

ಹರ್ಷಲ್ ಪಟೇಲ್- ಹೋಗು, ಹೋಗು, ಎಲ್ಲಿಗ್ ಹೋಗ್ತೀಯಾ..ನಿನ್ನನ್ನ ಹೆಂಗೆ ಕರೆಸ್ಕೋಬೇಕು ಅಂತ ನಂಗ್ ಗೊತ್ತು.

ಪರ್ಪಲ್ ಪಟೇಲ್- ಓ, ಈ ಲೆವೆಲ್ಲಿಗೆ ಓವರ್ ಕಾನಿಡೆನ್ಸಾ, ಮಗಾ, ಹೇಳ್ತೀನಿ ಕೇಳು, ನನ್ನ ತಲೆ ಮೇಲ್ ಹಾಕ್ಕೊಂಡಾಗಿಂದ, ನಿಜ್ವಾಗ್ಲೂ ನಿಂಗೆ ಸಕ್ಸಸ್ ಅನ್ನೋದು ತಲೆಗೇರಿದೆ.

ಹರ್ಷಲ್ ಪಟೇಲ್- ಏನಿವತ್ತು, ಐದಕ್ಕಿಂತ ಜಾಸ್ತಿ ಪ್ರಶ್ನೆ ಕೇಳ್ತಾ ಇದ್ದೀಯಾ?
ಪರ್ಪಲ್ ಪಟೇಲ್- ನೀನ್ ಮಾತ್ರ ಎಷ್ಟ್ ಬೇಕಾದ್ರೂವಿಕೆಟ್ ತೆಗೀಬಹುದು, ನಾನ್ ಒಂದೆರಡ್ ಪ್ರಶ್ನೆ ಜಾಸ್ತಿ ಕೇಳಿದ್ರೆ ತಪ್ಪಾ?
ಹರ್ಷಲ್ ಪಟೇಲ್- ರೀ, ಹೆಡ್ ಮಾಸ್ಟರ್ರೆ, ನೀವ್ ಕೊಡ್ತಾ ಇರೋ ತಲೆ ನೋವು ತಡೆಯೋಕಾಗ್ತಿಲ್ಲ ಕಣ್ರೀ
ಪರ್ಪಲ್ ಪಟೇಲ್- ನೋಡು, ಒಂದ್ ಮಾತ್ ಮತ್ತೆ ಮತ್ತೆ ಹೇಳ್ತಾ ಇದ್ದೀನಿ, ಅರ್ಥ ಮಾಡ್ಕೊ, ನಿನ್ ಹೆಡ್ ಮೇಲೆ ನಾನಿದ್ರೆನೇ ನಿನ್ ಹೆಸ್ರು, ನ್ಯೂಸ್ ಪೇಪರ್ ಹೆಡ್‌ಲೈನಲ್ಲಿ ಬರೋದು, ನಿನ್ ತಲೆ ಮೇಲೆ ನಾನಿದ್ದೀನಿ ಅಂತ ನಿನ್ನನ್ನ ನೀನು ತಲೈವಾ ಅಂದ್ಕೊಂಡಿದ್ದೀಯಾ

ಹರ್ಷಲ್ ಪಟೇಲ್- ಲೇ, ಎದ್ ಹೋಗ್ ಈಗ ಸಾಕು. ನಾನ್ ತಲೈವಾ ಅಲ್ಲದೇ ಇರಬೋದು, ಆದ್ರೆ ಬಾಲಿಗೆ ಎಂಜಲು ಹಚ್ಚಿ ಎಸೆದು ವಿಕೆಟ್ ಮೇಲೆ ವಿಕೆಟ್ ತೆಗೆದೇ ಅಂದ್ರೆ ಸಲೈವಾ ಅಂತನಾದ್ರೂ ಹೆಸರು ಮಾಡ್ತೀನಿ, ನೋಡ್ತಾ ಇರು.

(ಕಾಲ್ಪನಿಕ ಸಂವಾದ)

ನೆಟ್ ಪಿಕ್ಸ್
ಖೇಮು ಅಪ್ಪ ಅಮ್ಮ ಹಳ್ಳಿಯಲ್ಲಿದ್ದರು. ಮನೆಯ ಸುತ್ತ ಕಾಡಿನಂಥ ಪ್ರದೇಶ. ಖೇಮು ಆಗಾಗ ಕಾಡಿನೊಳಗೆ ಹೋಗಿ ಓಡಾಡಿಕೊಂಡು
ಬರುತ್ತಿದ್ದ. ಹೀಗೇ ಒಂದು ದಿನ ಕಾಡಿನೊಳಗೆ ಬಹುದೂರ ಹೋದಾಗ ಅಲ್ಲಿ ಅವನ ಕಣ್ಣಿಗೆ ಆಗ ತಾನೇ ಹುಟ್ಟಿದಂತಿದ್ದ ಬೆಕ್ಕಿನ ಮರಿ ಕಾಣಿಸಿತು. ಸುತ್ತಮುತ್ತ ಯಾರೂ ಇರಲಿಲ್ಲ. ಬಹುಶಃ ತಾಯಿಬೆಕ್ಕು ಅದನ್ನು ಅಲ್ಲಿಯೇ ಬಿಟ್ಟು ಹೋಗಿತ್ತು. ಅದನ್ನು ನೋಡಿದ ಖೇಮು ಆ ಮರಿಯನ್ನು ಮನೆಗೆ ಕರೆದುಕೊಂಡು ಬಂದ. ಆ ಬೆಕ್ಕಿನ ಮರಿ ಅವನ ಜತೆ ಅನ್ಯೋನ್ಯವಾಗಿ ಹೊಂದಿಕೊಂಡಿತು.

ಖೇಮು ಮತ್ತು ಅದು ಒಬ್ಬರನ್ನೊಬ್ಬರು ಬಿಟ್ಟಿರಲಾರದಂಥ ಮಟ್ಟಿಗೆ ಅವರ ಮಧ್ಯೆ ಬಾಂಧವ್ಯ ಇತ್ತು. ಒಂದು ದಿನ ಅರಣ್ಯಾಧಿಕಾರಿಗಳು ಖೇಮು ಮನೆಗೆ ಬಂದು, ಬೆಕ್ಕಿನ ಮರಿಯನ್ನು ಹತ್ತಿರದಿಂದ ನೋಡಿ, ಇದು ಬೆಕ್ಕಲ್ಲ, ಹುಲಿ ಮರಿ, ಇದನ್ನು ಮನೆಯಲ್ಲಿ ಸಾಕಬಾರದು, ಮರಿಯನ್ನು ಸರಕಾರದ ವಶಕ್ಕೆ ಕೊಡಬೇಕು ಎಂದು ಹೇಳಿ, ಅದನ್ನು ಹತ್ತಿರದ ಇದ್ದ ಝೂಗೆ ತೆಗೆದುಕೊಂಡು ಹೋದರು.

ಕೆಲವು ದಿನಗಳವರೆಗೆ ಖೇಮು ಅಲ್ಲಿಗೆ ಹೋಗಿ ಆಗಾಗ ಮರಿಯನ್ನು ನೋಡಿಕೊಂಡು ಬರುತ್ತಿದ್ದ. ಆನಂತರ ಕೆಲವು ವರ್ಷಗಳ ನಂತರ ಆ ಮರಿಯನ್ನು ದೇಶದ ಇನ್ಯಾವುದೋ ಝೂಗೆ ಕರೆದುಕೊಂಡು ಹೋಗಲಾಯಿತು. ನಂತರ ಖೇಮು ಬೆಳೆದು ದೊಡ್ಡವನಾದ. ಒಮ್ಮೆ ಕಾಲೇಜು ಟ್ರಿಪ್‌ನಲ್ಲಿ ಅವನನ್ನು ಆಲ್ ಇಂಡಿಯಾ ಟೂರ್ ಗೆ ಕರೆದುಕೊಂಡು ಹೋದರು. ಅಲ್ಲಿ ಉತ್ತರಭಾರತದ ಒಂದು ಝೂಗೆ
ಹೋದಾಗ ಅಲ್ಲಿನ ಪಂಜರದೊಳಗಿದ್ದ ಹುಲಿಯೊಂದು ಖೇಮುವನ್ನೇ ದಿಟ್ಟಿಸಿ ನೋಡುತ್ತಿತ್ತು.

ಖೇಮು ಕೂಡ ಅದರ ಕಣ್ಣುಗಳನ್ನೇ ನೋಡುತ್ತಿದ್ದ. ಆ ಕಣ್ಣುಗಳು ಏನೋ ಹೇಳುತ್ತಿವೆ ಎಂದು ಖೇಮುಗೆ ಅನಿಸಿತು. ಹಾಗಾಗಿ ಪಂಜರದ ಹತ್ತಿರ ಹೋಗಿ ನಿಂತ. ಆ ಹುಲಿ ಅವನನ್ನೇ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿತ್ತು. ಆಗ ಖೇಮು ಅಲ್ಲಿನ ಮೇಲಧಿಕಾರಿಗಳನ್ನು ಕರೆದು ಈ ಹುಲಿಯನ್ನು ನಾನು ಒಳಗೆ ಹೋಗಿ ನೋಡಬೇಕು ಅಂತ. ಮೊದಮೊದಲು ಅವರು ಒಪ್ಪಲಿಲ್ಲ. ನಂತರ ಖೇಮು ಎಮೋಷನಲ್ ಆಗಿ ಹೇಳಿದ ಕಥೆ ಕೇಳಿ, ಖೇಮುವನ್ನು ಪಂಜರದ ಒಳಗೆ ಹೋಗಲು ಬಿಟ್ಟರು.

ಪಂಜರದ ಬಾಗಿಲು ತೆರೆದು ಖೇಮು ಒಳಗೆ ಹೋದ. ಎರಡೇ ನಿಮಿಷ, ಆ ಹುಲಿ ಛಂಗನೆ ಖೇಮು ಮೇಲೆ ಹಾರಿ ಅವನನ್ನು ಕೊಂದು ತಿಂದು ಹಾಕಿತು. ಮೋಸ್ಟ್ ಲೀ ಅದು ಆ ಹುಲಿ ಅಲ್ಲ ಅನ್ಸುತ್ತೆ ಹೋಗ್ಲಿ ಬಿಡಿ.

ಲೈನ್ ಮ್ಯಾನ್
ಸುದೀಪ್ ಯಾವುದಾದ್ರೂ ಡ್ರೈ ಫ್ರೂಟ್ಸ್ ಕಂಪನಿಗೆ ಜಾಹೀರಾತು ಕೊಟ್ರೆ ಅದು
-ಕಿಚ್ಚಾ ಬಾದಾಮ್
ಇನ್ನೇನು ಐಪಿಎಲ್ ಶುರು ಆಗ್ತಾ ಇದೆ. ಇಷ್ಟ್ ದಿನ ಇಂಡಿಯನ್ ಟೀಮಲ್ಲಿ ಅಣ್ಣ ತಮ್ಮರ ಥರ ಒಟ್ಟಿಗೇ ಆಡ್ತಾ ಇದ್ದ ರೋಹಿತ್ ಶರ್ಮಾಗೆ ಮುಂಬೈ ಇಂಡಿಯನ್ಸ್ ಜೂನಿಯರ್ ಹುಡುಗರ ಹತ್ರ, ಕೊಹ್ಲಿ ಸುದೀಪ್ ಸ್ಟೈಲಲ್ಲಿ ಏನಂತ ಹೇಳಿ ಕಳಿಸ್ತಾನೆ?
-ಇಷ್ಟ್ ದಿನ ಒಂದ್ ಲೆಕ್ಕ, ಇನ್ಮೇಲ್ ಒಂದ್ ಲೆಕ್ಕ, ಹೋಗಿ ಐಪಿಎಲ್ ಬಂದಿದೆ ಅಂತ ಹೇಳು.
ಕಾವೇರಿ ನದಿ ದಡದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಅನ್ನ ಏನಂತಾರೆ ?
-ಕಾವೇರಿ ‘ಬ್ಯಾಂಕ್’
ವಿದ್ಯೆ, ಕೆಲಸ ಇಲ್ಲದೆ ಮನೆಗೆ ದೊಡ್ಡ ತಲೆನೋವಾಗಿರುವ ಮಗ
-ಅಮೃತಾಂಜನೀಪುತ್ರ
ವಿವಾದಿತ ಪುಸ್ತಕ ಬರೆದು ಜೈಲು ಸೇರಿದವನು
-‘ಬುಕ್ಡ್’
ಕುಡುಕನ ಹಾಡು
-ಪಬ್ಬಿಗರ ಕಾವ್ಯ
ಒಬ್ಬರ ಕಣ್ಣೀರಿಗೆ ಕಾರಣ ಏನು?
-‘ಕ್ರೈ’ ಸಿಸ್
ರಾಧೆಶ್ಯಾಮ್‌ಸಿನಿಮಾ ನೋಡಿದ್ರಾ?
ಸಾರಿ, ಅಷ್ಟೊಂದು ನೆಗೆಟಿವ್ ಫೀಡ್ ಬ್ಯಾಕ್ ಬಂದಮೇಲೆ ನೋಡುವ
ಇ‘ರಾದೆ’ ಇಲ್ಲ
ನಿಮ್ಮ ಮೇಲೆ ಯುದ್ಧ ಮಾಡ್ತೀವಿ ಅಂತ ಮೊದಲೇ ಕೊಡುವ ಎಚ್ಚರಿಕೆ
-‘ವಾರ್’ ನಿಂಗ್

error: Content is protected !!