ಹಿಂದಿರುಗಿ ನೋಡಿದಾಗ
ಇರಾನ್ ಎಂಬ ಶಬ್ದದ ಅರ್ಥ ಆರ್ಯರ ಭೂಮಿ. ಆರ್ಯರು ಬಾಳಿ ಬದುಕಿದ ನಾಡಿದು. ಆರ್ಯರು ಮಧ್ಯ ಏಷ್ಯಾದಿಂದ ಬಂದು ಈ ಪ್ರದೇಶದಲ್ಲಿ ನೆಲೆಸಿದರೆ ಅಥವಾ ಭಾರತದಿಂದ ವಲಸೆ ಬಂದು ಇಲ್ಲಿ ತಮ್ಮ ಸಾಮ್ರಾಜ್ಯಗಳನ್ನು ಕಟ್ಟಿದರೆ ಎನ್ನುವುದು ಇಂದಿಗೂ ಬಿಸಿ ಬಿಸಿ ಚರ್ಚೆಯಲ್ಲಿರುವ ವಿಚಾರ.
ಸದ್ಯಕ್ಕೆ ಅದು ನಮಗೆ ಅಪ್ರಸ್ತುತ. ಇರಾನ್ ದೇಶಕ್ಕೆ ಕನಿಷ್ಠ 4 ಸಾವಿರ ವರ್ಷಗಳ ಇತಿಹಾಸವಿದೆ. ಈ ಅವಧಿಯಲ್ಲಿ ಇರಾನ್ ಪ್ರಾಚೀನ ಮೆಸಪೊಟೋಮಿಯ, ಈಜಿಪ್ಟ್, ಭಾರತ, ಚೀನಾ ಮತ್ತು ಗ್ರೀಕ್ ಸಂಸ್ಕೃತಿಗಳೊಡನೆ ನಿಕಟ ಸಂಪರ್ಕ ಪಡೆಯಿತು. ಕ್ರಿ.ಶ.೩ನೇ ಶತಮಾನದ ಇರಾನಿನಲ್ಲಿ ಜುಂಡಿಶಾಪುರ ಅಥವ ಗುಂಡೇಶಪುರ ವಿಶ್ವವಿದ್ಯಾ ಲಯವು ವಿಶ್ವದಲ್ಲಿಯೇ ಪ್ರಖ್ಯಾತ ವಾಗಿತ್ತು.
ಜಗತ್ತಿನ ಎಲ್ಲ ಸಂಸ್ಕೃತಿಗಳ ಪ್ರಖ್ಯಾತ ವೈದ್ಯರು ಇಲ್ಲಿಗೆ ಬಂದು ತಮ್ಮ ಜ್ಞಾನವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಹಾಗಾಗಿ ಇರಾನ್ ದೇಶ ಜಗತ್ತಿನ ವೈದ್ಯರೆಲ್ಲ ಗಳಿಸಿದ್ದ ವೈದ್ಯಕೀಯ ಅರಿವನ್ನು ತಾನು ಮುಕ್ತವಾಗಿ ಸ್ವೀಕರಿಸಿತು. ಈ ಅರಿವನ್ನು 13ನೆಯ ಶತಮಾನದವರೆಗೆ ಜೋಪಾನವಾಗಿ ಕಾದಿಟ್ಟುಕೊಂಡು ಬಂದಿತು. ಕ್ರಿ.ಶ.೧೩ನೆಯ ಶತಮಾನದ ಯೂರೋಪಿಯನ್ ವೈದ್ಯರು, ಇರಾನೀ ವೈದ್ಯಕೀಯ ಜ್ಞಾನವನ್ನು ತಮ್ಮದಾಗಿಸಿಕೊಂಡು, ಅದರ ಮೇಲೆ ಆಧುನಿಕ ವೈದ್ಯಕೀಯ ವಿಜ್ಞಾನವನ್ನು ರೂಪಿಸಿ ದರು.
ಇರಾನ್ ದೇಶವನ್ನು ಪರ್ಷಿಯ ಎಂದೂ ಕರೆಯುವರು. ಇದಕ್ಕೆ ಕಾರಣ ಗ್ರೀಕ್ ಪುರಾಣ. ಆಂಡ್ರೊಮೆಡ ಮತ್ತು ಪೆರ್ಸಿಯಸ್ ದಂಪತಿಗಳ ಮಗ ಪೆರ್ಸೆಸ್. ಪೆರ್ಸೆಸ್ ಈ ಪ್ರದೇಶದಲ್ಲಿ ನೆಲೆಸಿದ ಕಾರಣ, ಈ ಪ್ರದೇಶಕ್ಕೆ ಪರ್ಷಿಯ ಎಂಬ ಹೆಸರು ಬಂದಿತು. ಹಾಗಾಗಿ ಪ್ರಾಚೀನ ಇರಾನೀ ಸಾಂಪ್ರದಾಯಿಕ ವೈದ್ಯಕೀಯ ಎಂದರೆ, ಅದು ಪ್ರಾಚೀನ ಪರ್ಷಿಯನ್ ಸಾಂಪ್ರದಾಯಿಕ ವೈದ್ಯ ಕೀಯ ಎಂದೇ ಅರ್ಥವನ್ನು ಕೊಡುತ್ತದೆ. ಪ್ರಾಚೀನ ಇರಾನೀ ವೈದ್ಯಕೀಯದ ಮೂಲವನ್ನು ಪಾರ್ಸಿ ಧರ್ಮದಲ್ಲಿ ನೋಡಬ ಹುದು.
ಪಾರ್ಸಿ ಧರ್ಮವನ್ನು ಆರಂಭಿಸಿದ್ದು ಜ಼ರತುಷ್ಟ್ರ. ಇದು ಜ಼ೊರಾಸ್ಟ್ರಿ ಯನಿಸಂ ಎಂಬ ಹೆಸರಿನಿಂದಲೂ ಪ್ರಖ್ಯಾತವಾಗಿದೆ.
ಇಂದಿಗೆ ಸುಮಾರು 2700 ವರ್ಷಗಳ ಹಿಂದಿನ ಕಥೆ. ಮೇದಿಯನ್ನರು ಹಾಗೂ ಪರ್ಷಿಯನ್ನರು ಇರಾನಿಯನ್ ಪ್ರಸ್ತಭೂಮಿಯ ಮೇಲೆ ನೆಲೆಸಿದರು. ಸುಮಾರು 200 ವರ್ಷಗಳ ನಂತರ ಈ ಎರಡೂ ಆರ್ಯರ ಗುಂಪುಗಳು ಒಟ್ಟಿಗೆ ಪರ್ಷಿಯನ್ ಸಾಮ್ರಾಜ್ಯ ವನ್ನು ಕಟ್ಟಿದರು. ಮೇದಿಯನ್ನರು ವಾಸ್ತವದಲ್ಲಿ ಆರು ವಿವಿಧ ಬುಡಕಟ್ಟುಗಳ ಸಮಷ್ಟಿ ಗುಂಪು. ಇವರಲ್ಲಿ ಮ್ಯಾಗಸ್ ಸಹ ಒಂದು ಬುಡಕಟ್ಟು.
ಮ್ಯಾಗಸ್ ಶಬ್ದದ ಬಹುವಚನ ಮ್ಯಾಗಿ. ಇವರು ಪುರೋಹಿತ ವರ್ಗದವರು. ಇವರು ಸೆಲ್ಯುಸಿಡ್, ಪಾರ್ಥಿಯನ್, ಸಸ್ಸಾನಿಯನ್ ಸಾಮ್ರಾಜ್ಯಾವಽಯಲ್ಲಿ ಪುರೋಹಿತರಾಗಿಯೇ ಉಳಿದವರು. ಮುಂದೆ ಪಾರ್ಸಿಧರ್ಮವು ಹುಟ್ಟಿಕೊಂಡಾಗ, ಆ ಧರ್ಮ ದಲ್ಲಿಯೂ ಇವರು ಪುರೋಹಿತರಾಗಿಯೇ ಉಳಿದು ಮೊಬಾದ್ ಎಂಬ ಹೆಸರನ್ನು ಪಡೆದರು. ಇವರು ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡುವುದರ ಜೊತೆಯಲ್ಲಿ ತಮ್ಮ ತಂತ್ರ-ಮಂತ್ರಗಳ ಮೂಲಕ ಆತ್ಮಕ್ಕೆ ಆಗಿರಬಹುದಾದ ಅನಾರೋಗ್ಯವನ್ನು ನಿವಾರಿಸು ತ್ತಿದ್ದರು.
ಜ಼ೆಂಡ-ಅವೆಸ್ತ ಎನ್ನುವುದು ಪಾರ್ಸಿಗಳ ಧರ್ಮಗ್ರಂಥ. ಈ ಧರ್ಮಗ್ರಂಥದ ಆರನೆಯ ಸಂಪುಟವು ಇರಾನೀ ವೈದ್ಯಕೀಯದ ಮೂಲಭೂತ ಮಾಹಿತಿಯನ್ನು ಒಳಗೊಂಡಿದೆ. ಈ ಆರನೆಯ ಸಂಪುಟವನ್ನು ವಿದೇವೋ ದಾತ, ವಿದೇವೋ ದಾತ್, ವೆಂದಿದಾದ್ ಎಂಬ ಹೆಸರುಗಳಿಂದ ಗುರುತಿಸುವರು. ಜ಼ೆಂಡ ಅವೆಸ್ತದ ಅನ್ವಯ, ಪಾರ್ಸಿಗಳ ಪರಮದೈವದ ಹೆಸರು ಅಹುರ್ ಮಾಜ್ದ. ಅಂದಿನ ರಾಕ್ಷಸರನ್ನು ದೇವ ಎನ್ನುವ ಹೆಸರಿನಿಂದ ಗುರುತಿಸುತ್ತಿದ್ದರು. (ವೇದಗಳಲ್ಲಿ ದೇವ ಎಂದರೆ ದೇವತೆಗಳು; ಅಸುರ ಎಂದರೆ ರಾಕ್ಷಸರು) ವಿದೇವೋ ದಾತಾ ಎಂದರೆ ದೇವತೆಗಳ ವಿರುದ್ಧವಾಗಿ ಅಂದರೆ ದೇವತೆಗಳನ್ನು ನಿಗ್ರಹಿಸಲು ನೀಡಿದ್ದು ಎನ್ನುವ ಅರ್ಥವು ಬರುತ್ತದೆ.
ಹಾಗಾಗಿ ವಿದೇವೋದಾತಾದಲ್ಲಿ ಅನೇಕ ದುಷ್ಟ ಶಕ್ತಿಗಳ ವಿವರಗಳು ಹಾಗೂ ಅವುಗಳನ್ನು ನಿಗ್ರಹಿಸುವ ಉಪಾಯಗಳೂ ಇವೆ. ಈ
ಉಪಾಯಗಳೆಲ್ಲ ಮೂಲದಲ್ಲಿ ಕಂಠಸ್ಥವಾಗಿದ್ದವು. ನಂತರ ಇವನ್ನು ಬರೆದಿಡುವ ಪ್ರಯತ್ನವು ಕ್ರಿ.ಶ.8ನೆಯ ಶತಮಾನದ ನಂತರ ಆರಂಭವಾಯಿತು. ಇದು ಅಹುರ್ ಮಾಜ್ದ ಮತ್ತು ಜ಼ರತುಷ್ಟ್ರನ ನಡುವೆ ನಡೆದ ಸಂಭಾಷಣೆಯ ರೂಪದಲ್ಲಿದೆ.
ಆದರೆ ಈ ಭಾಗವು ಸಮಗ್ರವಾಗಿ ದೊರೆತಿಲ್ಲ. ವಿದೇವೋದಾತದ ಮೊದಲ ಅಧ್ಯಾಯವು ಬ್ರಹ್ಮಾಂಡ ಸೃಷ್ಟಿಯ ಕಥೆಯನ್ನು ಹೇಳುತ್ತದೆ. ಎರಡನೆಯ ಅಧ್ಯಾಯವು ‘ಯಿಮ’ನ ಕಥೆಯನ್ನು ವಿವರಿಸುತ್ತದೆ. ಯಿಮ ಎಂದರೆ ಇರಾನೀ ಸಂಸ್ಕೃತಿಯ ಅನ್ವಯ ಮೊದಲ ಮನುಷ್ಯ. ಇವನು ಸೂರ್ಯನ ಮಗ. ಮುಂದಿನ ಇರಾನೀ ಪುರಾಣಗಳಲ್ಲಿ ಈತ ಜಾಮ್ಷೆದ್ ಎನ್ನುವ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಾನೆ. ಸ್ವಚ್ಛತೆ ಹಾಗೂ ಶುದ್ಧತೆಯ ಬಗ್ಗೆ ಹಲವು ಅಧ್ಯಾಯಗಳಲ್ಲಿ ವಿವರಣೆಗಳು ದೊರೆಯುತ್ತವೆ.
ಅದರಲ್ಲೂ ಒಬ್ಬ ವ್ಯಕ್ತಿಯು ಮರಣಾ ನಂತರ, ಅವನ ಶರೀರದ ವಿಲೇವಾರಿಗೆ ಹಾಗೂ ನಂತರದ ಶುದ್ಧತಾ ಕಾರ್ಯಗಳ ಬಗ್ಗೆ ವಿವರಿಸುತ್ತದೆ. ಮೃತರ ಬಗ್ಗೆ ಸಲ್ಲಿಸಬೇಕಾದ ಗೌರವವನ್ನು ವಿವರಿಸಿ ದಕ್ಮದ ಬಗ್ಗೆ ಹೇಳುತ್ತದೆ. ದಕ್ಮ ಎಂದರೆ ಮೌನ ಗೋಪುರ. ಪಾರ್ಸಿಗಳು ಮೃತನ ದೇಹವನ್ನು ಒಂದು ಎತ್ತರದ ವೃತ್ತಾಕಾರದ ಗೋಪುರದ ಮೇಲೆ ಇರಿಸುವರು. ಮೃತಶರೀರವನ್ನು ಹದ್ದುಗಳು ತಿನ್ನುತ್ತವೆ.
ನಂತರ ಉಳಿದ ಮೂಳೆಗಳ ವಿಲೇವಾರಿಯ ಬಗ್ಗೆ ವಿವರಿಸುತ್ತದೆ. ರೋಗಗಳು, ರೋಗಗಳ ಉಗಮ ಹಾಗೂ ಆ ರೋಗಗಳನ್ನು ತಡೆಗಟ್ಟುವ/ಗುಣಪಡಿಸುವ ಮಂತ್ರಗಳ ಬಗ್ಗೆ ಹಲವು ಅಧ್ಯಾಯಗಳಲ್ಲಿ ಮಾಹಿತಿಯು ದೊರೆಯುತ್ತದೆ. ವಿದೇವೋದಾತವು ವೈದ್ಯರನ್ನು ಮೂರು ಗುಂಪುಗಳಲ್ಲಿ ವರ್ಗೀಕರಿಸುತ್ತದೆ. ಮೊದಲನೆಯ ಗುಂಪಿನಲ್ಲಿ ಶಸ್ತ್ರವೈದ್ಯರು ಹಾಗೂ ಎರಡನೆಯ ಗುಂಪಿನಲ್ಲಿ ಮೂಲಿಕೆಗಳಿಂದ ಚಿಕಿತ್ಸೆಯನ್ನು ನೀಡುವ ತಜ್ಞವೈದ್ಯರು ಹಾಗೂ ಮೂರನೆಯ ಗುಂಪಿನಲ್ಲಿ ಮಂತ್ರ-ತಂತ್ರಗಳಿಂದ ರೋಗಗಳನ್ನು ಗುಣಪಡಿಸುತ್ತಿದ್ದ ಪುರೋಹಿತ ವೈದ್ಯರಿದ್ದರು.
ಮೊದಲ ಎರಡು ಗುಂಪಿನ ವೈದ್ಯರಿಗಿಂತ ಮೂರನೆಯ ಗುಂಪಿನ ವೈದ್ಯರಿಗೆ ಹೆಚ್ಚು ಗೌರವ ಹಾಗೂ ಮನ್ನಣೆಯಿತ್ತು. ಮೊದಲ ಎರಡು ಗುಂಪಿನ ವೈದ್ಯರು ಕೆಳಜಾತಿಯವರಾಗಿರುತ್ತಿದ್ದರು. ಮೂರನೆಯ ಗುಂಪಿನ ಪುರೋಹಿತ ವೈದ್ಯರು ಉಚ್ಚಜಾತಿಯ
ಮೊಬಾದ್ ವರ್ಗಕ್ಕೆ ಸೇರಿದವರಾಗಿದ್ದರು. ಶಸ್ತ್ರವೈದ್ಯನು ವೈದ್ಯಕೀಯ ಶಿಕ್ಷಣವನ್ನು ಪಡೆದ ಮೇಲೆ, ಪಾರ್ಸಿಗಳಲ್ಲದ ಜನರ ಮೇಲೆ ತನ್ನ ಶಸ್ತ್ರವಿದ್ಯಾ ಪಾಂಡಿತ್ಯವನ್ನು ತೋರಿ ಉತ್ತೀರ್ಣನಾಗಬೇಕಾಗಿತ್ತು.
ಪಾರ್ಸಿಗಳ ದೈವ ಅಹುರ್ ಮಾಜ್ದ ಮೊದಲ ವೈದ್ಯನಾದ ತ್ರಿಥನಿಗೆ, ನಾನಾ ರೋಗಗಳನ್ನು ಗುಣ ಪಡಿಸುವ 10000 ಮೂಲಿಕೆ ಗಳನ್ನು ಕೊಟ್ಟಿದ್ದನು. ಜೊತೆಗೆ ಸೋಮ ಬಳ್ಳಿಯನ್ನೂ ನೀಡಿದ್ದನು. ಆರ್ಯರ ಧಾರ್ಮಿಕ ಕಾರ್ಯಗಳಲ್ಲಿ ಸೋಮರಸವು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಈ ಬಗ್ಗೆ ಜ಼ೆಂಡ ಅವೆಸ್ತದ ಎರಡನೆಯ ಸಂಪುಟವು ಮಾಹಿತಿಯನ್ನು ನೀಡುತ್ತದೆ. ಮಣಿ, ರೂಜ್ಬೆಹ್ ಮತ್ತು ಬೊಜ಼ೋರ್ಗ್‌ಮೆಹರ್ ಆ ಕಾಲದ ಇತರ ಪ್ರಖ್ಯಾತ ವೈದ್ಯರಾಗಿದ್ದರು.
ಮೇದಿಯನ್ನರು ಇರಾನಿನಲ್ಲಿ ತಮ್ಮದೇ ಆದ ಸಾಮ್ರಾಜ್ಯಕ್ಕೆ ಅಸ್ತಿಭಾರವನ್ನು ಹಾಕಿದರು. ಸೈರಸ್ ದಿ ಗ್ರೇಟ್ ಕ್ರಿ.ಪೂ. ೫೫೦ರಲ್ಲಿ ಅಚೆಮೆನಿದ್ ಸಾಮ್ರಾಜ್ಯವನ್ನು ಕಟ್ಟಿದ. ಇದು ಇರಾನಿನಲ್ಲಿ ಸ್ಥಾಪಿತವಾದ ಮೊದಲ ಸಾಮ್ರಾಜ್ಯ. ಈತನ ಸಾಮ್ರಾಜ್ಯವು ಪರ್ಷಿಯ, ಮೇದಿಯ, ಬ್ಯಾಬಿಲೋನಿಯ, ಲಿದಿಯಗಳನ್ನು ಒಳಗೊಂಡಿತ್ತು. ಪ್ರಾಚೀನ ಇರಾನೀ ವೈದ್ಯಕೀಯವು ಹೀಗೆ ಕ್ರಿ.ಪೂ.600 ರಿಂದ ಕ್ರಿ.ಶ.651ರವರೆಗೆ, ಅಂದರೆ ಹೆಚ್ಚೂ ಕಡಿಮೆ 1200 ವರ್ಷಗಳವರೆಗೆ ನಿರಂತರವಾಗಿ ಬೆಳೆಯುತ್ತಾ ಬಂದಿತು. ಕ್ರಿ.ಶ.651ರಲ್ಲಿ ಅರಬ್ಬರ ಇರಾನಿನ ಮೇಲೆ ಆಕ್ರಮಣವನ್ನು ಮಾಡಿ, ಇರಾನೀ ಸಂಸ್ಕೃತಿಗೆ ಸಂಬಂಧಿಸಿದ ಅಥವ ಇಸ್ಲಾಮೇತರ ಎಲ್ಲ ದಾಖಲೆಗಳನ್ನು ಕ್ರಮಬದ್ಧವಾಗಿ ನಾಶಮಾಡಿದರು.
ಇರಾನೀ ವೈದ್ಯಕೀಯದ ಎರಡನೆಯ ಘಟ್ಟವು ಕ್ರಿ.ಶ.3 ರಿಂದ 7 ನೆಯ ಶತಮಾನದವರೆಗೆ ಕಂಡುಬರುತ್ತದೆ. ಸಸ್ಸ ನೀಡ್ ಸಾಮ್ರಾಜ್ಯದ ಅರಸ ಶಾಪುರ್-1. ಈತನು ಕಾಬ ಯೆ ಜ಼ರದೋಷ್ತ್ ತ್ರಿಭಾಷಾ ಶಿಲಾಶಾಸನವನ್ನು ಪೆರ್ಸೆಪೊಲಿಸ್ ಎಂಬಲ್ಲಿ ಸ್ಥಾಪಿಸಿದ್ದಾನೆ. ಈ ಶಾಸನವು ವೇ ಆಂಡಿಯೋಕ್ ಶಾಪುರ್ (ಆಂಟಿಯೋಚ್) ಎಂಬ ಜಿಲ್ಲೆಯನ್ನು ಹಾಗೂ ನಗರವನ್ನು ಕುರ್ಜ಼ೆಸ್ತಾನ್ ಪ್ರದೇಶದಲ್ಲಿ ಸ್ಥಾಪಿಸುವುದರ ಬಗ್ಗೆ ತಿಳಿಸುತ್ತದೆ. ಬಹುಶಃ ಈ ನಗರವು ಕ್ರಿ.ಶ.271ರಲ್ಲಿ ಸ್ಥಾಪನೆ ಯಾಯಿತು. ಇದೇ ನಗರವೇ ಮುಂದೆ ಜುಂಡೀಶಾಪುರ / ಗೊಂಡೀಶಾಪುರ / ಗುಂಡೇಶಪುರ ಎಂಬ ಹೆಸರಿನಲ್ಲಿ ಪ್ರಖ್ಯಾತವಾಯಿತು.
ಇಲ್ಲಿ ಒಂದು ಬೃಹತ್ ವಿಶ್ವವಿದ್ಯಾಲಯವು ಆರಂಭವಾಗಿ ಸಮಕಾಲೀನ ಜಗತ್ತಿನ ಅದ್ಭುತ ವಿದ್ಯಾಕೇಂದ್ರವಾಗಿ ಬೆಳೆಯಿತು. ಗೊಂಡೀಶಾಪುರ ಆಸ್ಪತ್ರೆ ಹಾಗೂ ವೈದ್ಯಕೀಯ ವಿದ್ಯಾಲಯಗಳು ಪ್ರಖ್ಯಾತವಾಗಿದ್ದವು. ಈ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುತ್ತಿದ್ದರು. ಗೊಂಡೀಶಾಪುರದಲ್ಲಿ ವೈದ್ಯಕೀಯ ಶಿಕ್ಷಣ ಸಮುಚ್ಚಯವನ್ನು ಹಿಪ್ಪೋಕ್ರೇಟ್ಸ್ ನಗರ ಎಂದು ಕರೆಯುತ್ತಿದ್ದರು. ಇಲ್ಲಿ 8 ಮಹಡಿಗಳ ಕಟ್ಟಡದಲ್ಲಿ ಗ್ರಂಥಾಲಯವಿತ್ತು.
ಈ ಗ್ರಂಥಾಲಯದಲ್ಲಿ 259 ಕೊಠಡಿಗಳಿದ್ದು, ಅವುಗಳಲ್ಲಿ 400000 ಗ್ರಂಥಗಳಿದ್ದವು. ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಶಿಕ್ಷಣದ ನಂತರ ಪರೀಕ್ಷೆಯನ್ನು ತೆಗೆದುಕೊಂಡು ಉತ್ತೀರ್ಣರಾದಮೇಲೆ ಅವರಿಗೆ ವೈದ್ಯಕೀಯ ವೃತ್ತಿಯನ್ನು ನಡೆಸಲು ಅನುಮತಿಯು ದೊರೆಯುತ್ತಿತ್ತು. ಇವರು ಸರ್ಕಾರೀ ವೈದ್ಯರಾಗಿ (ದೊರೋಸ್ತೋಬಾದ್) ಕೆಲಸ ಮಾಡಲು ಅವಕಾಶವು ದೊರೆಯುತ್ತಿತ್ತು.
ಕ್ರಿ.ಶ.610ರಲ್ಲಿ ಸಸ್ಸನೀಡ್ ರಾಜ ಇಮ್ಮಡಿ ಷಾ ಕೊಸ್ರು ಅನೋಶಿರ್ವಾನ್ (590-628) ಆಳ್ವಿಕೆಯನ್ನು ನಡೆಸುತ್ತಿದ್ದ. ಆಗ ಗೊಂಡೀಶಾಪುರದಲ್ಲಿ ಬಹುಶಃ ಜಗತ್ತಿನ ಮೊತ್ತಮೊದಲ ವೈದ್ಯಕೀಯ ಸಮಾವೇಶವು ನಡೆಯಿತು. ಪರ್ಷಿಯ ಹಾಗೂ ಇತರ ದೇಶಗಳಿಂದ ತಜ್ಞವೈದ್ಯರು ಈ ಸಮಾವೇಶದಲ್ಲಿ ಭಾಗವಹಿಸಿದರು. ಈ ಸಮಾವೇಶದ ಅಧ್ಯಕ್ಷತೆಯನ್ನು ಸಿಂಜರ್ ನಗರದ ಜಿಬ್ರಿಲ್ ದುರುಸ್ತೋಬಾದ್ ವಹಿಸಿದ್ದ.
ಈತನು ಕೊಸ್ರು ಆಸ್ಥಾನದ ಪ್ರಧಾನ ವೈದ್ಯನಾಗಿದ್ದ. ಈ ಬಗ್ಗೆ ಫಿರ್ದೌಸಿ ಎಂಬ ಇತಿಹಾಸಕಾರ ದಾಖಲಿಸಿದ. ಕ್ರಿ.ಪೂ.765ರಲ್ಲಿ ಗೊಂಡೀಶಾಪುರದ ಆಸ್ಪತ್ರೆಯಲ್ಲಿ ಜೇವರ್ ಜಿಸ್ ಬಿನ್ ಜೆಬ್ರೈಲ್ ಬೋಕ್ತಿಷು ಎಂಬ ಕ್ರೈಸ್ತನು ಪ್ರಧಾನ ವೈದ್ಯನಾಗಿದ್ದ. ಬೋಕ್ತಿಷು ಬಾಗ್ದಾದಿನಲ್ಲಿ ವೈದ್ಯನಾಗಿ ಅಪಾರ ಕೀರ್ತಿಯನ್ನು ಗಳಿಸಿದ. ಈತನು ವಂಶಸ್ಥರು ಸುದೀರ್ಘಕಾಲ ಬಾಗ್ದಾದಿನಲ್ಲಿ ನೆಲೆಸಿದರು.
ಅರಬ್ ಮತ್ತು ಇರಾನಿಯನ್ ಇತಿಹಾಸಕಾರರಾದ ನದೀಮ್, ಅಲ್ ಗೆಫ್ತಿ ಮತ್ತು ಇಬ್ನ್ ಉಸೈಬಿಯ ಗೊಂಡೀಶಾಪುರದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆ ದಾಖಲಿಸಿದ್ದಾರೆ.
ಸಮಕಾಲೀನ ಜಗತ್ತಿನಲ್ಲಿ ಇದು ಸಾಟಿಯಿಲ್ಲದಂತಹ ವಿದ್ಯಾ ಕೇಂದ್ರವಾಗಿತ್ತು. ಇಲ್ಲಿ ಗ್ರೀಕ್, ನೆಸ್ಟೋರಿಯನ್ ಕ್ರಿಶ್ಚಿಯನ್, ಭಾರತೀಯ ಮತ್ತು ಇರಾನಿಯನ್ನು ವೈದ್ಯರು ಬೋಧಿಸುತ್ತಿದ್ದರು. ಇವರು ವೈದ್ಯರಾಗಿ, ಶಸ್ತ್ರವೈದ್ಯರಾಗಿ ಹಾಗೂ ಔಷಧ ವಿಜ್ಞಾನಿ ಗಳಾಗಿ ಕೆಲಸವನ್ನು ಮಾಡಿದರು.ಅನೇಕ ಗ್ರೀಕ್ ಮತ್ತು ಭಾರತೀಯ ಕೃತಿಗಳನ್ನು ಅಂದಿನ ಇರಾನಿ ಭಾಷೆಯಾಗಿದ್ದ ಪೆಹಲವಿಗೆ ಅನುವಾದವನ್ನು ಮಾಡಿದರು. ಇರಾನ್ ದೇಶವನ್ನು ಮುಸ್ಲೀಮರು ಆಕ್ರಮಿಸಿ, ಇಸ್ಲಾಮ್ ಧರ್ಮವನ್ನು ಸ್ಥಾಪಿಸು ವವರಿಗೂ ಗೊಂಡೀಶಾಪುರವು ವಿದ್ವಾಂಸರ ಕೇಂದ್ರವಾಗಿತ್ತು.
ಮುಸ್ಲೀಮರ ಪರ್ಷಿಯ ಆಕ್ರಮಣದ ನಂತರ ಬಾಗ್ದಾದ್ ನಗರವು ವೈದ್ಯಕೀಯ ಚಟುವಟಿಕೆಗಳ ಕೇಂದ್ರವಾಗಿ ಬೆಳೆದು, ಕಾಲಕ್ರಮೇಣ ಗೊಂಡೀಶಾಪುರವು ತನ್ನ ಅಸ್ತಿತ್ವವನ್ನು ಕಳೆದು ಇತಿಹಾಸದ ಕಾಲಗರ್ಭದಲ್ಲಿ ವಿಲೀನವಾಯಿತು. ಬಾಗ್ದಾದಿನ ಅರಬ್ ವೈದ್ಯರು ಪೆಹಲವಿ ಭಾಷೆಯಲ್ಲಿದ್ದ ಗ್ರೀಕ್, ನೆಸ್ಟೋರಿಯನ್ ಕ್ರಿಶ್ಚಿಯನ್ ಹಾಗೂ ಭಾರತೀಯರ ವೈದ್ಯಕೀಯ ಜ್ಞಾನ ವನ್ನು ಅರಾಬಿಕ್ ಭಾಷೆಗೆ ಅನುವಾದಿ ಸಿದರು. ಇದರೊಂದಿಗೆ ಅರಬ್ ವೈದ್ಯಕೀಯವು ಶ್ರೀಮಂತವಾಯಿತು. ಈ ವೈದ್ಯಕೀಯ ಅರಿವೇ ಮುಂದಿನ ಯೂರೋಪಿಯನ್ ಪುನರುತ್ಥಾನದ (ರಿನೇಸಾನ್ಸ್) ಅವಧಿಯಲ್ಲಿ ಬೆಳಕಿಗೆ ಬಂದು ಆಧುನಿಕ ವೈದ್ಯಕೀಯ
ವಿಜ್ಞಾನದ ಬೆಳವಣಿಗೆಗೆ ಭದ್ರವಾದ ಅಡಿಪಾಯವನ್ನು ಹಾಕಿತು.