ಅವಲೋಕನ
ರಮಾನಂದ ಶರ್ಮಾ
ರಾಷ್ಟ್ರ ರಾಜಧಾನಿ ನವದೆಹಲಿ ಬೇರೆಡೆಗೆ ಸ್ಥಳಾಂತರವಾಗಲಿದೆಯೇ? ಹೀಗೊಂದು ಸುದ್ದಿ ಕೆಲವು ಮಾಧ್ಯಗಳಲ್ಲಿ ಹರಿದಾಡುತ್ತಿದೆ.
ಭೂಸೂಧಾರಣೆ, ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೆ ಕಲಂ ರದ್ಧತಿ, ತ್ರಿವಳಿ ತಲಾಖ್, ಒಂದು ದೇಶ ಒಂದು ತೆರಿಗೆ (ಜಿಎಸ್‌ಟಿ – ಸರಕು ಮತ್ತು ಸೇವಾ ತೆರಿಗೆ) ಒಂದು ದೇಶ ಒಂದು ರೇಷನ್ ಕಾರ್ಡ್, ನಾಗರಿಕ ಹಕ್ಕು (Citizenship Amendment Act)) ತಿದ್ದುಪಡಿ ಕಾನೂನು ಮುಂತಾದ ಕ್ರಾಂತಿಕಾರಕ ಹೆಜ್ಜೆಗಳ ನಂತರ ಸರಕಾರ ಈಗ ರಾಷ್ಟ್ರ ರಾಜಧಾನಿಯನ್ನು ಸ್ಥಳಾಂತರ ಮಾಡುವ ಚಿಂತನೆಯಲ್ಲಿದೆ ಎನ್ನುವ ಸುದ್ದಿ ಕೇಳುತ್ತಿದೆ.
ದೆಹಲಿಗಿರುವ ರಾಜಧಾನಿ ಸ್ಥಾನಮಾನವನ್ನು ಬದಲಾವಣೆ ಮಾಡಿ ಉತ್ತರ ಪ್ರದೇಶದ ಪ್ರಮುಖ ನಗರಗಳಿಗೆ ಅಥವಾ ಉತ್ತರ ಪ್ರದೇಶದ ವಿಶಾಲವಾದ ನಗರವೊಂದಕ್ಕೆ ಸ್ಥಳಾಂತರಿಸುವ ಚಿಂತನೆ ನಡೆದಿದೆಯಂತೆ. ಈ ನಿಟ್ಟಿನಲ್ಲಿ ಇನ್ನೂ ವಿಸ್ತೃತವಾದ ವರದಿ ಬರಬೇಕಾಗಿದೆ.
ಯಾಕೆ ಈ ಸ್ಥಳಾಂತರ?: ಸರಕಾರದ ಪ್ರಕಾರ ನವದೆಹಲಿಯು ಲಂಗು ಲಗಾಮಿಲ್ಲದೇ ಬೆಳೆಯುತ್ತಿದೆ. ಈ ಬೆಳವಣಿಗೆ ಇದರ ಧಾರಣ ಶಕ್ತಿಯನ್ನು ಮೀರಿದ್ದು, ಗ್ಯಾಸ್ ಚೆಂಬರ್‌ನಂತೆ ಆಗುತ್ತಿದೆ. ವಾಯು ಮಾಲಿನ್ಯವು ಅಪಾಯದ ಮಟ್ಟವನ್ನು ಮೀರಿದೆ. ಜನತೆ ಉಸಿರಾಡಲು ಕಷ್ಟ ಪಡುವಷ್ಟು ಜನಸಾಂದ್ರತೆ ಬೆಳೆದಿದ್ದು, ಶುದ್ಧವಾದ ವಾಯು ಸಿಗದಂತಾಗಿದೆ. ನವದೆಹಲಿಯ ವಾತಾ ವಾರಣದಷ್ಟು ಹದಗೆಟ್ಟಿದೆಯೆಂದರೆ ಸುಪ್ರೀಂ ಕೋರ್ಟ್ ದೆಹಲಿಯ ವಾಯುಮಾಲಿನ್ಯವನ್ನು ಗ್ಯಾಸ್ ಚೇಂಬರ್ಸ್‌ಗೆ ಹೋಲಿಸಿ, ಒಂದೇ ಬಾರಿಗೆ ದೆಹಲಿ ನಗರವನ್ನು ಸೋಟಿಸಿ ನಾಶಮಾಡಿ ಮತ್ತೆ ಹೊಸದಾಗಿ ನಿರ್ಮಾಣ ಮಾಡಿ ಎಂದು ಅಕ್ರೋಶದ
ಸಲಹೆ ಯನ್ನು ನೀಡಿದೆ.
ರಾಷ್ಟ್ರ ರಾಜಧಾನಿ ಅಥವಾ ರಾಜ್ಯಗಳ ರಾಜಧಾನಿ ಅಂಕೆ ಮೀರಿ ಬೆಳೆಯುವುದರಲ್ಲಿ ಯಾವುದೇ ವಿಶೇಷವಿಲ್ಲ. ರಾಜಧಾನಿಯಲ್ಲಿ ಬಹುತೇಕ ಎಲ್ಲಾ ಸರಕಾರಿ ಕಚೇರಿಗಳು ಕೆಂದ್ರಿಕೃತವಾಗಿರುವುದರಿಂದ, ಶಿಕ್ಷಣ ಸಂಸ್ಥೆಗಳು ಇರುವುದರಿಂದ ಮತ್ತು ಸುತ್ತಮುತ್ತಲು, ಔದ್ಯಮಿಕ ಚಟುವಟಿಕೆಗಳು ಬೆಳೆಯುವುದರಿಂದ, ಕಾರ್ಪೋರೇಟ್ ಕಚೇರಿಗಳು ತಮ್ಮ ಆಫೀಸುಗಳನ್ನು ಹೊಂದಿರುವುದರಿಂದ,
ಸಂಸತ್ ಭವನ ಮತ್ತು ವಿಧಾನ ಸೌಧಗಳು, ವಿದೇಶಿ ರಾಯಭಾರ ಕಚೇರಿಗಳು ಇರುವುದರಿಂದ (ಮುಖ್ಯ ನಗರಗಳಲ್ಲಿ) ಜನಸಂಖ್ಯೆ ಮೇಲೆ ಏರುವುದು ತೀರಾ ಸಾಮಾನ್ಯ. ಇದಕ್ಕೆ ಹೊರತಾಗಿ ಹಲವು ಹತ್ತು ರೀತಿಯ ಕೆಲಸ – ಕಾರ್ಯಗಳಿಗಾಗಿ ಮತ್ತು ಪ್ರವಾಸೋದ್ಯ ಮದ ಹೆಸರಿನಲ್ಲಿ ಜನರು ಭೇಟಿ ನೀಡುವುದು ಬೇರೆ ವಿಷಯ.
1901ರಲ್ಲಿ ಕೇವಲ 4 ಲಕ್ಷ ಇದ್ದ ದೆಹಲಿಯ ಸಂಖ್ಯೆ ಇಂದು ಸುಮಾರು 2 ಕೋಟಿ ಹತ್ತಿರವಿದ್ದು ಸುಮಾರು 4600 ಪಟ್ಟು ಏರಿಕೆ ಯಾಗಿದೆ. 2030ರ ಹೊತ್ತಿಗೆ ಇದು 3.7 ಕೋಟಿಗೆ ತಲುಪುವ ನಿರೀಕ್ಷೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ಧಾರೆ. ದೇಶ ವಿಭಜನೆ ಕಾಲದಿಂದಲೂ ದೆಹಲಿಯಲ್ಲಿ ಜನಸಂಖ್ಯೆ ಏರುತ್ತಿದೆ. ಪಾಕಿಸ್ತಾನದ ಲಾಹೋರದಿಂದ ದೇಶ ವಿಭಜನೆ ಕಾಲಕ್ಕೆ ಲಕ್ಷಾಂತರ ಜನರು ದೆಹಲಿಗೆ ಬಂದು ಆಶ್ರಯ ಪಡೆದಿದ್ದು, ಅಲ್ಲಿಯೇ ತಳ ಊರಿದ್ಧಾರೆ. ಬಂಗ್ಲಾ ದೇಶದಿಂದ ಬಂದವರ ಸಂಖ್ಯೆಯೂ ಸಾಕಷ್ಟಿದೆ. ಹಾಗೆಯೇ ಜಮ್ಮು – ಕಾಶ್ಮೀರದಿಂದ ವಲಸೆ ಬಂದ ಲಕ್ಷಾಂತರ ಪಂಡಿತ ವಲಸಿಗರು ಇದ್ಧಾರೆ.
ದೆಹಲಿ ರಾಜಧಾನಿಯಾಗಿರುವುದರಿಂದ ಮತ್ತು ದೊಡ್ಡ ನಗರವೂ ಆಗಿರುವುದರಿಂದ ಬದುಕು ಮತ್ತು ಶಿಕ್ಷಣ ಅರಸಿ ನೆರೆಯ
ರಾಜ್ಯಗಳಿಂದ ಜನರು, ದಾಂಗುಡಿ ಇಡುತ್ತಾರೆ. ದೆಹಲಿಯಲ್ಲಿ ಮೂಲನಿವಾಸಿಗಳಿಗಿಂತ ಹೊರಗಿನವರೇ ಹೆಚ್ಚು ಎನ್ನುವ ಅಭಿಪ್ರಾಯದಲ್ಲಿ ಸತ್ಯವಿಲ್ಲದಿಲ್ಲ. ಇದು ಒಂದು ರೀತಿಯಲ್ಲಿ ಬೆಂಗಳೂರಿನ ಸಮಸ್ಯೆ ಎನ್ನಬಹುದು. ಅಂತೆಯೇ ರಾಷ್ಟ್ರ ರಾಜಧಾನಿಯನ್ನು ಉತ್ತರ ಪ್ರದೇಶ ಅಥವಾ ಬೇರೆ ರಾಜ್ಯಗಳಿಗೆ ಸ್ಥಳಾಂತರಿಸುವುದು ಸೂಕ್ತ ಎನ್ನುವ ಚಿಂತನೆಯಲ್ಲಿದೆ ಕೇಂದ್ರ ಸರಕಾರ.
ರಾಷ್ಟ್ರ ರಾಜಧಾನಿಯನ್ನು ಬದಲಿಸುವ ಪ್ರಕ್ರಿಯೆ ಹೊಸದೇನಲ್ಲ. ನಗರೀಕರಣ ತೀವ್ರಗೊಂಡು ರಾಜಧಾನಿಯ ಮೂಲ ಸೌಕರ್ಯಗಳ ಮೇಲೆ ಒತ್ತಡ ಹೆಚ್ಚಾದಂತೆ, ಬ್ರೆಜಿಲ, ನೈಜೀರಿಯಾ , ಈಜಿಪ್ತ್, ಜಕಾರ್ತ ಸೇರಿದಂತೆ ಹಲವಾರು ರಾಷ್ಟ್ರಗಳು ತಮ್ಮ ರಾಜಧಾನಿಯನ್ನು ಕಾಲ ಕಾಲಕ್ಕೆ ಸ್ಥಳಾಂತರ ಮಾಡಿರುವ ಉದಾಹರಣೆಗಳಿವೆ. ದೆಹಲಿಯು ವೈರಿರಾಷ್ಟ್ರ ಪಾಕಿಸ್ತಾನಕ್ಕೆ ಹತ್ತಿರ ವಾಗಿರುವುದರಿಂದ, ರಾಜಧಾನಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎನ್ನುವ ಮಾತು ಹಿಂದೊಮ್ಮೆ ಕೇಳಿ ಬಂದಿದ್ದು, ವ್ಯತಿರಿಕ್ತ ಅಭಿಪ್ರಾಯಗಳಿಂದಾಗಿ ಹಿನ್ನೆಲೆಗೆ ಸೇರಿತ್ತು.
ಲಾಹೋರ್ ವಿಮಾನ ನಿಲ್ದಾಣ ತೀರಾ ಸಮೀಪವಿದ್ದು ಪಾಕಿಸ್ತಾನ ದುರುಪಯೋಗ ಮಾಡಿಕೊಳ್ಳಬಹುದು ಎನ್ನುವ ವಾದವೂ ಪ್ರಸ್ತಾಪಗೊಂಡಿತ್ತು. ಮಾಧ್ಯಮದ ವರದಿಯಂತೆ ಸರಕಾರ ರಾಜಧಾನಿಯನ್ನು ಸ್ಥಳಾಂತರಿಸುವುದರಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಲೆಕ್ಕ ಹಾಕುತ್ತಿದೆಯಂತೆ. ದೆಹಲಿಯಲ್ಲಿ ಸಂಸತ್ ಭವನ, ಸುಪ್ರೀಂ ಕೋರ್ಟ್, ಕೇಂದ್ರ ಸರಕಾರದ ವಿವಿಧ ಸಚಿವಾ ಲಯಗಳು, ಪ್ರಮುಖ ಕಚೇರಿಗಳು, ಕಾರ್ಪೋರೇಟ್ ಕಚೇರಿಗಳು ಮತ್ತು ಹಲವು ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸುವುದು ಚಾಲೆಂಜಿಂಗ್ ಆಗಿದ್ದು, ಇದರ ಸಾಧಕ ಬಾಧಕಗಳ ಬಗೆಗೆ ಸರಕಾರ ತೀವ್ರ ಚರ್ಚೆ
ಮಾಡುತ್ತಿದೆಯಂತೆ. ಈ ನಿಟ್ಟಿನಲ್ಲಿ ಶೀಘ್ರವೇ ಅಧಿಕೃತ ಪ್ರಕಟಣೆ ಘೋಷಣೆಯಾಗುವ ಸಾಧ್ಯತೆಯನ್ನು ವರದಿಗಳು ಹೇಳುತ್ತಿವೆ.
ಈ ಸ್ಥಿತಿಗೆ ಯಾರು ಕಾರಣ?: ನಮ್ಮ ದೇಶದಲ್ಲಿ ಆಡಳಿತದ ವಿಕೇಂದ್ರಿಕರಣ ಎನ್ನುವುದು ಪುಸ್ತಕಗಳಿಗೆ, ವೇದಿಕೆಗೆ ಮತ್ತು ಚರ್ಚಾಗೋಷ್ಠಿಗೆ ಸೀಮಿತವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳು ಮಾತ್ರ ಕೇಂದ್ರ ಸರಕಾರದ ಸುಪರ್ದಿಯಲ್ಲಿದ್ದು, ಉಳಿದೆಲ್ಲ ವ್ಯವಹಾರಗಳು ರಾಜ್ಯ ಸರಕಾರದ ಕೈಯಲ್ಲಿ ಇರುತ್ತವೆ ಎಂದು ಹೇಳಲಾಗು ತ್ತಿದೆ.
ಆದರೆ, ವಾಸ್ತವದಲ್ಲಿ ಅಂಗನವಾಡಿಯ ಮಗುವಿಗೆ ಯಾವ ಪುಸ್ತಕವನ್ನು ನೀಡಬೇಕು, ಯಾವ ಭಾಷೆಯುಲ್ಲಿ ಕಲಿಸಬೇಕು, ಯಾವ ರಸ್ತೆಗೆ ಯಾವ ಹೆಸರನ್ನು ಇಡಬೇಕು ಎನ್ನುವುದರಿಂದ ಆರಂಭಿಸಿ ಯಾವ ದೇಶದೊಂದಿಗೆ ಯುದ್ಧ ಮಾಡಬೇಕು ಎನ್ನುವವರೆಗೆ ಪ್ರತಿಯೊಂದೂ ನಿರ್ಣಯವಾಗುವುದು ದೆಹಲಿಯಲ್ಲಿಯೇ? ಈ ನಿಯಂತ್ರಣ ನೇರವಾಗಿ ಮತ್ತು ಪರೋಕ್ಷವಾಗಿ ದೆಹಲಿಯ ಮೇಲೆ ಒತ್ತಡ ಬೀಳುವಂತೆ ಮಾಡಿದೆ.
ಹಾಗೆಯೇ ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ಮತ್ತು ವರಿಷ್ಠರು ಎನ್ನುವ ಹೆಸರಿನಲ್ಲಿ ದೆಹಲಿಯಿಂದಲೇ ಎಲ್ಲವನ್ನೂ ನಿಯಂತ್ರಿ ಸುತ್ತವೆ. ತಮ್ಮದು ಕಾರ್ಯಕರ್ತರ ಪಕ್ಷ ಮತ್ತು ಎಲ್ಲವೂ ತಳಮಟ್ಟದಿಂದಲೇ ನಿರ್ಣಯಿಸುವುದು ಎನ್ನುವ ಅವರ ಘೋಷವಾಕ್ಯ ವೇದಿಕೆಗೆ ಅಷ್ಟೇ ಸೀಮಿತ. ದೆಹಲಿಯಲ್ಲಿ ಕಾರ್ಯ ನಿರ್ವಹಿಸುವ ನೂರಾರು ಇಲಾಖೆಗಳನ್ನು ದೇಶದ ಪೂರ್ವ – ಪಶ್ಚಿಮ – ಉತ್ತರ
ಮತ್ತು ದಕ್ಷಿಣ ಭಾಗಗಳಿಗೆ ಸ್ಥಳಾಂತರಿಸಿದ್ದರೆ, ಪ್ರತಿಯೊಂದಕ್ಕೂ ದೆಹಲಿಯತ್ತ ನೋಡುವ ಜನಸಾಮಾನ್ಯರ ಯಾತನೆ ಕಡಿಮೆ ಯಾಗುತ್ತಿತ್ತು ಮತ್ತು ದೆಹಲಿ ಮೇಲಿನ ಒತ್ತಡ ಕ್ಷೀಣಿಸುತ್ತಿತ್ತು.
ಹಾಗೆಯೇ ಸುಪ್ರೀಂ ಕೋರ್ಟ್‌ನ ಪೀಠವನ್ನು ದಕ್ಷಿಣ – ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಸ್ಥಾಪಿಸಿದ್ದರೆ ದೆಹಲಿಯ ಇಂದಿನ ಸಂದಣಿ ಮತ್ತು ಒತ್ತಡವನ್ನು ಕಡಿಮೆ ಮಾಡಬಹದಿತ್ತು ಮತ್ತು ಉತ್ತರೇತರ ಜನತೆಯಲ್ಲಿ ದೆಹಲಿ ದೂರವಿದೆ ಎನ್ನುವ ವಿಷಾದದ
ಭಾವನೆಯನ್ನು ಹೋಗಲಾಡಿಸಬಹುದಿತ್ತು. ಅಧಿಕಾರದ ವಿಕೇಂದ್ರಿಕರಣವನ್ನು ಕಾಯಾ ವಾಚಾ ಮನಸಾ ಅನುಷ್ಠಾನ ಗೊಳಿಸಿ ದ್ದರೆ, ದೆಹಲಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈ ವೈಫಲ್ಯಕ್ಕೆ ದೆಹಲಿ ಇಂದು ಬಾರಿ ಬೆಲೆ ತೆರುತ್ತಿದೆ.
ಹಾಗೆಯೇ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಉತ್ತರದ ರಾಜಕಾರಣಿಗಳ ಹಿಡಿತ, ಜನತೆಯ ವಿರೋಧ ಮತ್ತು ಅಲ್ಲಿನ ನೌಕರ ಶಾಹಿಯ ನಿರುತ್ಸಾಹವೂ ಕಾರಣ ಇರಬಹುದು. ಅದರಂತೆ, ಉತ್ತರೇತರ ರಾಜಕಾರಣಿಗಳ ಮತ್ತು ಜನತೆಯು ಈ ನಿಟ್ಟಿನಲ್ಲಿ ಒತ್ತಾಯಮಾಡದಿರುವುದೂ ಎದ್ದು ಕಾಣುತ್ತದೆ. ಈ ಮಧ್ಯೆ ಈ ತಿಂಗಳ 10ರಂದು ಪ್ರಧಾನಿಗಳು 971 ಕೋಟಿ ವೆಚ್ಚದ ಸಂಸತ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದು, ರಾಜಧಾನಿಯನ್ನು ಸ್ಥಳಾಂತರಿಸುವ ಸುದ್ದಿಯ ಬಗೆಗೆ ಸ್ವಲ್ಪ ಗೊಂದಲ
ಕಾಣಿಸುತ್ತಿದೆ.
ಹಾಗೆಯೇ ಇದು ಸತ್ಯವಾದರೆ ದಕ್ಷಿಣದ ರಾಜ್ಯಗಳು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದೂ ಮುಖ್ಯವಾಗಿರುತ್ತದೆ. ದೆಹಲಿ ದೂರವಾಗಿದ್ದು, ರಾಜಧಾನಿ ಯನ್ನು ದೇಶದ ಮಧ್ಯ ಭಾಗಕ್ಕೆ ಸ್ಥಳಾಂತರಿಸಬೇಕು ಎನ್ನುವವರು ಉತ್ತರ ಪ್ರದೇಶಕ್ಕೆ ಜೈ ಎನ್ನಬ ಹುದೇ? ಒತ್ತಡ ಮತ್ತು ಜನಸಂಖ್ಯೆಯ ಪರಿಣಾಮ ಸದ್ಯ ದೆಹಲಿಯಲ್ಲಿ ಎದ್ದು ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಪ್ರತಿ ಯೊಂದು ರಾಜ್ಯಗಳ ರಾಜಧಾನಿಯಲ್ಲಿ ಕಾಣಲಿದೆ. ಅಧಿಕಾರಸ್ಥರ ದೂರದೃಷ್ಟಿಯ ಅಭಾವದಿಂದ ಪ್ರತಿಯೊಂದು ರಾಜಧಾನಿ ನಗರಗಳು ಎಲ್ಲಾ ಮೀರಿ ಬೆಳೆಯುತ್ತಿವೆ.
ನೈರುತ್ಯ ರೈಲು ವಲಯ ಕಚೇರಿ ಮತ್ತು ಹೈಕೋರ್ಟ್ ಪೀಠವನ್ನು ಹುಬ್ಬಳ್ಳಿ – ಧಾರವಾಡದಲ್ಲಿ ಸ್ಥಾಪಿಸುವಾಗಿನ ಅಡೆತಡೆ ಮತ್ತು ಐಟಿ ಕಂಪನಿಗಳನ್ನುಕೇವಲ ಬೆಂಗಳೂರಿನಲ್ಲಿಯೇ ಲಾಗ್ ಇನ್ ಮಾಡಿಸುವ ಪರಿಯನ್ನು ನೋಡಿದರೆ, ಈ ತಜ್ಞರ ಭಯದಲ್ಲಿ ಅರ್ಥ ಕಾಣುತ್ತ ಬೆಂಗಳೂರಿನ ಮತ್ತು ಬೆಂಗಳೂರಿಗರ ಭವಿಷ್ಯ ಅಧಿಕಾರದ ವಿಕೇಂದ್ರಿಕರಣ ಎಷ್ಟು ಶೀಘ್ರವಾಗುತ್ತದೆ ಮತ್ತು ಅದರ ಬೆಳವಣಿಗೆಯನ್ನು ನಿಯಣತ್ರಿಸಲಾಗುತ್ತದೆ ಎನ್ನುವುದರ ಮೇಲೆ ಅವಲಂಭಿಸಿದೆ.
ಸದ್ಯ ಬೆಂಗಳೂರಿನಲ್ಲಿ 1.25 ಕೋಟಿ ಜನಸಂಖ್ಯೆಗೆ 95.06 ಲಕ್ಷ ವಾಹನಗಳಿದ್ದು ಬೆಂಗಳೂರಿನ ಸ್ಥಿತಿ ನವದೆಹಲಿಗಿಂತ ಉತ್ತಮ ವಾಗಿಲ್ಲ. ಇನ್ನು ಕೆಲವು ವರ್ಷಗಳಲ್ಲಿ ಕರ್ನಾಟಕದ ರಾಜಧಾನಿಯನ್ನು ಬೆಂಗಳೂರಿನಿಂದ ಸ್ಥಳಾಂತರರಿಸುವಂತೆ ಬೇಡಿಕೆ ಬಂದರೆ ಆಶ್ಚರ್ಯವಿಲ್ಲ. ಬೆಂಗಳೂರಿನ ಧಾರಣ ಶಕ್ತಿ ಮೀರಿ ವರ್ಷಗಳಾಗಿವೆ.