Friday, 22nd November 2024

ವರ್ಕ್ಔಟ್ ಆಗುವುದೇ ’ಸಾಮಾನ್ಯ ಜನರ ಸಿಎಂ’ ಬ್ರ‍್ಯಾಂಡ್ !

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hosakere@gmail.com

ಯಡಿಯೂರಪ್ಪ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಗಾದಿಯನ್ನು ಏರಿರುವ ಬಸವರಾಜ ಬೊಮ್ಮಾಯಿ ಅವರು, ಮೊದಲ ದಿನದಿಂದಲೂ ಚಿಕ್ಕ ಚಿಕ್ಕ ಘೋಷಣೆ ಗಳಿಂದ, ನಿರ್ಧಾರಗಳಿಂದ ಹೆಚ್ಚೆಚ್ಚು ಜನರಿಗೆ ಆಪ್ತರಾಗುತ್ತಿದ್ದಾರೆ. ಅತ್ತ ವರಿಷ್ಠರು, ಇತ್ತ ಯಡಿಯೂರಪ್ಪ, ಈ ಇಬ್ಬರ ನಡುವೆ ಸಿಕ್ಕಿಹಾಕಿಕೊಂಡು ಯಾವ ರೀತಿ ಮುಖ್ಯಮಂತ್ರಿ ಗಾದಿಯನ್ನು ನಿಭಾಯಿಸುವರೋ ಎನ್ನುವ ಅನುಮಾನವನ್ನು ಮೀರಿ ಕಳೆದೊಂದು ತಿಂಗಳಲ್ಲಿ ಬೊಮ್ಮಾಯಿ ತಮ್ಮ ಇತಿ- ಮಿತಿಯಲ್ಲಿ ಜನರಿಗೆ ಆಪ್ತರೆನಿಸುತ್ತಿದ್ದಾರೆ.

ಮುಖ್ಯಮಂತ್ರಿ ಯಾಗುತ್ತಿದ್ದಂತೆ ಗಾರ್ಡ್ ಆಫ್ ಆನರ್, ಝಿರೋ ಟ್ರಾಫಿಕ್ ಬೇಡವೆಂದ ಬೊಮ್ಮಾಯಿ ಅವರು, ಖಾಸಗಿ ಕಾರ್ಯಕ್ರಮವೊಂದರಲ್ಲಿ ‘ಸಿಎಂ ಎಂದರೆ ಕಾಮನ್ ಮ್ಯಾನ್’ ಎಂದು ಹೇಳಿ ನೆರೆದಿದ್ದವರ ಹುಬ್ಬೇರು ವಂತೆ ಮಾಡಿದರು. ಇದಾದ ಬಳಿಕ ಇತ್ತೀಚಿಗೆ ಖಾಸಗಿ ಕಾರ್ಯಕ್ರಮವೊಂದರ ಸಂದರ್ಶನದಲ್ಲಿ, ವೃದ್ಧೆಗೆ ಮನೆ ಕಟ್ಟಿಸುವ ವಿಚಾರದಲ್ಲಿ ನಡೆದುಕೊಂಡ ರೀತಿ, ಅನೇಕರಿಗೆ ಮೆಚ್ಚುಗೆಯಾಯಿತು. ಆದರೆ ಈ ಸರಳತೆಯಿಂದಲೇ ಜನರನ್ನು ಒಲಿಸಿಕೊಳ್ಳಬಹುದೇ? ಎನ್ನುವ ಪ್ರಶ್ನೆಗೆ ಉತ್ತರಿಸುವುದು ಕೊಂಚ ಕಷ್ಟ.

ಹೌದು, ಸಂಕಷ್ಟ ಕಾಲದಲ್ಲಿ ಮುಖ್ಯಮಂತ್ರಿ ಹುದ್ದೆ ಏರಿದ ಬಸವರಾಜ ಬೊಮ್ಮಾಯಿ ಅವರು ಅತ್ಯುತ್ತಮ ಸಂಸ ದೀಯ ಪಟು, ನೀರಾವರಿ ವಿಷಯದಲ್ಲಿ ಉತ್ತಮ ಜ್ಞಾನ, ಕೊಟ್ಟ ಕೆಲಸವನ್ನು ನಿಭಾಯಿಸುವ ವ್ಯಕ್ತಿ, ಹಲವು ಬಿರುಕು ಗಳಿಗೆ ತ್ಯಾಪೆ ಹಚ್ಚಲು ಸಂಧಾನಕಾರನಾಗಿ ಯಡಿಯೂರಪ್ಪ ಅವರ ಸರಕಾರದಲ್ಲಿ ಹಾಗೂ ಈ ಹಿಂದೆಯೂ ಸಾಬೀತುಪಡಿಸಿದ್ದಾರೆ. ಆದರೆ ಈಗ ತಾನೇ ನಾಯಕನಾಗಿ, ಇಡೀ ಸರಕಾರವನ್ನು ಮುನ್ನಡೆಸಬೇಕಾದ ಸಮಯ ದಲ್ಲಿ ಈಗಿನ ‘ವರ್ಚಸ್ಸು’ ಸಾಲದು ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿತ್ತು. ಅಂದ ಮಾತ್ರಕ್ಕೆ, ಮುಖ್ಯ ಮಂತ್ರಿಯಾಗುತ್ತಿದ್ದಂತೆ, ಸಾಲು ಸಾಲು ಬೃಹತ್ ಯೋಜನೆಗಳನ್ನು ಘೋಷಿಸಿ ಆ ಮೂಲಕ ‘ವಾವ್’ ಎನಿಸಿ ಕೊಳ್ಳುವುದಕ್ಕೆ ಹಣ ಕಾಸಿನ ಸಮಸ್ಯೆಯಿದೆ. ಆದರೆ ಇನ್ನೊಂದೂವರೆ ವರ್ಷದಲ್ಲಿಯೇ ಎದುರಾಗಲಿರುವ ಚುನಾ ವಣೆಯನ್ನು ಗಮನದಲ್ಲಿರಿಸಿಕೊಂಡಾಗ, ಬೊಮ್ಮಾಯಿ ಅವರಿಗೆ ಹೆಚ್ಚು ‘ಹನಿಮೂನ್ ಟೈಮ್’ ಇರಲಿಲ್ಲ.

ಆದ್ದರಿಂದ ಸರಕಾರ ಆದಷ್ಟು ಶೀಘ್ರ ‘ಟೇಕ್ ಆಫ್’ ಆಗಬೇಕಿತ್ತು ಹಾಗೂ ಜನರ ಮನಸಲ್ಲಿ ಬೊಮ್ಮಾಯಿ ಅವರ ಚಿತ್ರಣ ಮೂಡಬೇಕಿತ್ತು. ಇಂತಹ ಕ್ಲಿಷ್ಟ ಪರಿಸ್ಥಿತಿ ಯನ್ನು ಎದುರಿಸಲು ಬೊಮ್ಮಾಯಿ ಅವರಿಗೆ ಸಿಕ್ಕ ಸುಲಭ ಮಾರ್ಗ ಎಂದರೆ ‘ಕಾಮನ್ ಮ್ಯಾನ್’ ಎನ್ನುವ ಲೇಬಲ್. ಬೊಮ್ಮಾಯಿ ಅವರು ಸ್ವಭಾವತಹ ಸರಳ
ವ್ಯಕ್ತಿಯಾಗಿರಬಹುದು. ಆದರೆ ಮುಖ್ಯಮಂತ್ರಿಯಾದ ಮೇಲೆ, ಈ ಬ್ರ್ಯಾಂಡ್ ಬಳಸಿದ್ದು, ಜನರಿಗೆ ಆಪ್ತರಾಗಬೇಕು ಎನ್ನುವ ಕಾರಣಕ್ಕೆ. ರಾಜ್ಯ ರಾಜಕೀಯದಲ್ಲಿ ಹಾಗೆ ನೋಡಿದರೆ, ಈ ಹಿಂದೆ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರಕಾರ ಬಿದ್ದು, ಕುಮಾರಸ್ವಾಮಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಸಹ ಇದೇ ಮಂತ್ರ ಪಠಿಸಿದ್ದರು.

ಗ್ರಾಮ ವಾಸ್ತವ್ಯ, ಜನರೊಂದಿಗೆ ಬೆರೆಯುವುದು, ಸಾರ್ವಜನಿಕರ ಭೇಟಿ ಸೇರಿದಂತೆ ಜನರೊಂದಿಗೆ ಇರುವಂತೆ ಹಲವು ಯೋಜನೆಗಳನ್ನು ಸಿದ್ಧಪಡಿಸಿಕೊಂಡರು. ಅದು ಒಂದು ಹಂತದಲ್ಲಿ ಯಶಸ್ಸನ್ನು ಸಹ ನೀಡಿತ್ತು. ಸರಳತೆಯಿಂದಲೇ ಕುಮಾರಸ್ವಾಮಿ ಹೋಗಿ ‘ಕುಮಾರಣ್ಣ’ ಆಗಿದ್ದರು. ಕುಮಾರಸ್ವಾಮಿ ಅವರ ಈ ನಡೆ ಯಿಂದ ವೈಯಕ್ತಿಕ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಳವಾಗಿತ್ತು. ಕುಮಾರಸ್ವಾಮಿ ಅವರಿಗೆ ಇದ್ದ ಜನರ ಈ ಸಿಂಪಥಿಯೊಂದಿಗೆ, ಒಕ್ಕಲಿಗ ಎನ್ನುವ ಜಾತಿ ಅಸ್ತ್ರ ಹಾಗೂ ಹಳೇ ಮೈಸೂರು ಭಾಗದಲ್ಲಿರುವ ಜೆಡಿಎಸ್ ಪ್ರಾಬಲ್ಯದಿಂದ ಕುಮಾರಸ್ವಾಮಿ ಬಲಿಷ್ಠ ನಾಯಕರಾಗಿಯೇ ಉಳಿಯುತ್ತಾರೆ ಎಂದು ಅನೇಕರು ಎನಿಸಿದ್ದರು.

20-20 ಸಮ್ಮಿಶ್ರ ಸರಕಾರದಲ್ಲಿ ಯಡಿಯೂರಪ್ಪ ಅವರಿಗೆ ನೀಡಬೇಕಿದ್ದ 20 ತಿಂಗಳ ಮುಖ್ಯಮಂತ್ರಿ ಹುದ್ದೆಯನ್ನು ನೀಡಿದ್ದರೆ, ಈ ವರ್ಚಸ್ಸು ಬದಲಾಗುತ್ತಲೂ ಇರಲಿಲ್ಲ. ಆದರೆ ಕುಮಾರಸ್ವಾಮಿ ಅವರು ಅಽಕಾರ ಹಸ್ತಾಂತರದಲ್ಲಿ ಮಾಡಿಕೊಂಡ ಎಡವಟ್ಟು ಜನರಿಂದ ಅವರನ್ನು ದೂರ ನಿಲ್ಲಿಸಿತ್ತು. ‘ವಚನ ಭ್ರಷ್ಟ’ ಎನ್ನುವ ಲೇಬಲ್ ಹಿಡಿಯ ಬಿಜೆಪಿ, ನಂತರದ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದೀಗ ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಅವರ ರೀತಿ ಕಾಮನ್ ಮ್ಯಾನ್ ಸಿಎಂ ಎನ್ನುವ ಪ್ರಭಾವಳಿಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇದಕ್ಕೆ ಅವರಿಗೆ ಪಕ್ಷದ ವರಿಷ್ಠರಿಂದಲೂ ಸಂಪೂರ್ಣ ಸಹಕಾರ ಸಿಗುತ್ತಿದೆ. ಇದರೊಂದಿಗೆ ‘ಲಿಂಗಾಯತ’ ಎನ್ನುವ ಬ್ರ್ಯಾಂಡ್ ಹಾಗೂ ಯಡಿಯೂರಪ್ಪ ಅವರ ಆಪ್ತ ಎನ್ನುವ ವಿಷಯ ಬೊಮ್ಮಾಯಿ ಅವರಿಗೆ ಇನ್ನಷ್ಟು ಪ್ಲಸ್ ಪಾಯಿಂಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಆದರೆ ಮುಂದಿನ ಚುನಾವಣಾ ಸಮಯದಲ್ಲಿ ಯಡಿ ಯೂರಪ್ಪ ಅವರನ್ನು ಪಕ್ಕಕ್ಕೆ ಸರಿಸಿ, ಬೊಮ್ಮಾಯಿ ಅವರನ್ನು ಮುನ್ನೆಲೆಗೆ ತಂದರೆ ಜನರ ಅವರನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆ ಯಾಗಿದೆ.

ಏಕೆಂದರೆ, ಬಿಜೆಪಿ ಸರಕಾರ ಅಽಕಾರಕ್ಕೆ ಬರಲು ಮೊದಲು ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಅವರ ನಂತರ ಬಂದ ನಳಿನ್‌ಕುಮಾರ್ ಕಟೀಲ್ ಅವರು, ರಾಜ್ಯಾದ್ಯಂತ ಹಲವು ಬಾರಿ ಪ್ರವಾಸ ಮಾಡಿದ್ದರೂ, ಯಡಿಯೂರಪ್ಪ ಅವರಂತೆ ಜನಪ್ರಿಯತೆಗಳಿಸುವಲ್ಲಿ ಸಫಲರಾಗಿಲ್ಲ. ಇದೇ ರೀತಿ ಮುಖ್ಯಮಂತ್ರಿ ಯಾಗಿದ್ದ ಯಡಿಯೂರಪ್ಪ ಅವರು ಕೆಳಗೆ ಇಳಿದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಆವರೂ ಸಹ ಯಡಿಯೂರಪ್ಪ ಅವರಂತೆ ‘ಮಾಸ್ ಲೀಡರ್’ ಎನ್ನುವ ರೀತಿ ಇಲ್ಲಿಯವರೆಗೆ ಬಿಂಬಿತವಾಗಿಲ್ಲ. ಉತ್ತರ ಕರ್ನಾಟಕ ಭಾಗದವರೇ ಆಗಿರುವ ಲಿಂಗಾಯತ ಸಮುದಾಯಕ್ಕೆ ಬಸವರಾಜ ಬೊಮ್ಮಾಯಿ ಅವರು ಸೇರಿದ್ದರೂ, ಅವರು ಉತ್ತರ ಕರ್ನಾಟಕದಲ್ಲಿರುವ ಬಿಜೆಪಿ ಭದ್ರಕೋಟೆಯನ್ನು ಹಾಗೆಯೇ ಉಳಿಸಿಕೊಳ್ಳುತ್ತಾರೆಯೇ? ಅದಕ್ಕೆ ಬೇಕಿರುವ ವರ್ಚಸ್ಸು ಬಸವರಾಜ ಬೊಮ್ಮಾಯಿ ಅವರಿಗೆ ಇದೆಯೇ ಎನ್ನುವ ಪ್ರಶ್ನೆಗೆ ಬಹುತೇಕ ಬಿಜೆಪಿಗರು ‘ಇಲ್ಲ’ ಎನ್ನುವ ಉತ್ತರವನ್ನೇ ನೀಡುತ್ತಿದ್ದಾರೆ.

ವ್ಯಕ್ತಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಎಲ್ಲರೂ ಒಪ್ಪಿದ್ದು, ಅಪ್ಪಿದ್ದರೂ, ಚುನಾವಣಾ ಸಮಯದಲ್ಲಿ, ಈ ಅಪ್ಪುಗೆ ಮತವಾಗಿ ಪರಿವರ್ತನೆಯಾಗುವ ಸಾಧ್ಯತೆ ಸದ್ಯದ ಮಟ್ಟಿಗಂತೂ ಕಾಣುತ್ತಿಲ್ಲ. ಬಿಜೆಪಿ ವರಿಷ್ಠರಿಗೆ ಈ ವಿಷಯ ಗೊತ್ತಿಲ್ಲ ಎಂದಲ್ಲ. ಬಸವರಾಜ ಬೊಮ್ಮಾಯಿ ಅವರಿಗೆ ಇರುವ ಇನ್ನೊಂದೂವರೆ
ವರ್ಷದಲ್ಲಿ ಯಡಿಯೂರಪ್ಪನವರ ನೆರಳಿನಿಂದ ಹೊರಬರುವ ಜತೆಗೆ, ತಮ್ಮದೇಯಾದ ವರ್ಚಸ್ಸನ್ನು ಬೆಳೆಸಿಕೊಳ್ಳಬೇಕಿದೆ. ಆದರೆ ಯಡಿಯೂರಪ್ಪ, ಸಿದ್ದರಾ ಮಯ್ಯ ಅಥವಾ ದೇವೇಗೌಡ ಅವರ ರೀತಿ ಮಾಸ್ ಲೀಡರ್ ಆಗಿ ಹೊರಹೊಮ್ಮುವ ಸ್ವಭಾವ ಬೊಮ್ಮಾಯಿ ಅವರದಲ್ಲ. ಆದ್ದರಿಂದ ಜನರಿಗೆ ಹತ್ತಿರವಾಗಿ, ಆ ಮೂಲಕ ಸಿಕ್ಕಿರುವ ಮುಖ್ಯಮಂತ್ರಿ ಸ್ಥಾನದ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಬೊಮ್ಮಾಯಿ ಅವರಿದ್ದಾರೆ. ರಾಜ್ಯ ಸರಕಾರದ ಖಜಾನೆಯ ಆರ್ಥಿಕ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಯಾಗುವ ಮೊದಲೇ ಬೊಮ್ಮಾಯಿ ಅವರಿಗೆ ಅರಿವಿತ್ತು. ಆದ್ದರಿಂದ, ಬಜೆಟ್‌ನಲ್ಲಿ ಭರ್ಜರಿ ಯೋಜನೆ ಗಳನ್ನು ಘೋಷಣೆ ಮಾಡಲು ಸಾಧ್ಯವಿಲ್ಲ.

ಹೊಸ ಘೋಷಣೆ ಮಾಡಬೇಕು ಎಂದರೆ, ಅದಕ್ಕೆ ಪುನಃ ಈಗಿರುವ ಯೋಜನೆಗಳನ್ನು ಸ್ಥಗಿತಗೊಳಿಸಿ, ಹೊಸ ಯೋಜನೆ ಘೋಷಿಸಬೇಕಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಯೋಜನೆಯನ್ನು ನಿಲ್ಲಿಸುವುದಕ್ಕೆ ಹೋದರೆ, ‘ಜೇನು ಗೂಡಿಗೆ’ ಕೈಹಾಕಿದಂತೆ ಎನ್ನುವುದು ಬೊಮ್ಮಾಯಿ ಅವರಿಗೆ ಗೊತ್ತಿದೆ. ಆದ್ದರಿಂದ ಯೋಜನೆಗಳಿಗಿಂತ, ಜನರೊಂದಿಗೆ ಬೆರೆಯುವ ಹಾಗೂ ಜನರಿಗೆ ಇಷ್ಟವಾಗುವಂತೆ ನಡೆದುಕೊಳ್ಳಲು ತೀರ್ಮಾನಿಸಿ ಈ ರೀತಿಯ ನಡೆ ಅನುಸರಿಸುತ್ತಿರಬಹುದು.
ಆದರೆ ಜನಪ್ರಿಯತೆಗೂ ಚುನಾವಣಾ ರಾಜಕೀಯಕ್ಕೂ ಅಜಗಜಾಂತರವಿರುತ್ತದೆ. ಆದ್ದರಿಂದ ಜನಪ್ರಿಯತೆ ಗಳಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರು, ಚುನಾವಣಾ ರಾಜಕೀಯದ ಬಗ್ಗೆ ಯಾವ ರೀತಿ ಗಮನ ಹರಿಸುತ್ತಾರೆ ಎನ್ನುವುದು ನೋಡಬೇಕಿದೆ.

ಇಷ್ಟು ದಿನ ಹಾವೇರಿ ಜಿಲ್ಲೆಯನ್ನು ಗೆಲ್ಲಿಸಿಕೊಂಡು ಬಂದರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದ ಬೊಮ್ಮಾಯಿ ಅವರಿಗೆ ಇದೀಗ 224 ಕ್ಷೇತ್ರಗಳು ಪ್ರಮುಖ ವಾಗುತ್ತವೆ. ಆದರೆ ಈ ಹಂತದಲ್ಲಿ ಬೊಮ್ಮಾಯಿ ಅವರಿಗೆ ಪಕ್ಷದ ವರಿಷ್ಠರ, ಸಂಘ ಪರಿಹಾರ ಪ್ರಮುಖರ ಹಾಗೂ ಯಡಿಯೂರಪ್ಪ ಅವರ ಬೆಂಬಲವಿದೆ. ವರಿಷ್ಠರು, ಹೊಸಬರಿಗೆ ಅವಕಾಶ ನೀಡುವ ಮೂಲಕ, ರಾಜ್ಯಗಳ ಚುಕ್ಕಾಣಿಯನ್ನು ತಾವೇ ಪಡೆಯಬೇಕು ಎನ್ನುವುದು ಒಂದೆಡೆಯಾದರೆ, ಈ ರೀತಿಯ ರಿಸ್ಕ್ ತಗೆದು ಕೊಂಡಾಗ, ಅದನ್ನು ನಿಭಾಯಿಸುವುದು ಹೇಗೆ ಎನ್ನುವುದು ಸಹ ಬಿಜೆಪಿ ನಾಯಕರಿಗೆ ತಿಳಿದಿದೆ.

ಜಾತಿ ಕೇಂದ್ರಿತ ರಾಜಕೀಯದ ಬದಲು ಧರ್ಮಾಧಾರಿತ ಮತಬ್ಯಾಂಕಿನ ಮೇಲೆ ಬಿಜೆಪಿ ನಾಯಕರು ಕಣ್ಣಿಟ್ಟಿದ್ದರೂ, ಕರ್ನಾಟಕ ಹಾಗೂ ಗುಜರಾತ್ ರಾಜ್ಯದಲ್ಲಿ ಆಗಿರುವ ಬದಲಾವಣೆಯನ್ನು ನೋಡಿದರೆ, ಹಿಂದೂತ್ವದೊಂದಿಗೆ, ಆಯಾ ರಾಜ್ಯದ ಬಲಿಷ್ಠ ಜಾತಿಗಳನ್ನು ತಮ್ಮಿಂದ ದೂರಾಗದಂತೆ ರಾಜ್ಯಾಧ್ಯಕ್ಷ ಅಥವಾ ಮುಖ್ಯಮಂತ್ರಿಯನ್ನು ಕೂರಿಸುವ ಲೆಕ್ಕಾಚಾರ ಹಾಕಿದೆ. ಗುಜರಾತ್‌ನ ಬಹುಮುಖ್ಯ ಹಾಗೂ ಮತದಾನದಲ್ಲಿ ಪ್ರಮುಖ ಪಾತ್ರವಹಿಸುವ ಪಟೇಲ್ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ, ಅಲ್ಲಿ ತಣಿಸಿದ್ದರೆ, ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದಿಂದ ಕಿತ್ತುಕೊಂಡ ಮುಖ್ಯಮಂತ್ರಿ ಸ್ಥಾನವನ್ನು ಪುನಃ ಅದೇ ಸಮುದಾಯದ ಆದರೆ, ತಾವು ಹೇಳಿದಂತೆ ನಡೆದುಕೊಳ್ಳುವ ನಾಯಕನಿಗೆ ನೀಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರವನ್ನು ಹಾಕಿದೆ.

ಒಟ್ಟಾರೆ ಸಿಕ್ಕ ಸಮಯವನ್ನು ಉಪಯೋಗಿಸಿಕೊಳ್ಳುವ ಸಮಯ ಇದೀಗ ಬೊಮ್ಮಾಯಿ ಅವರಿಗೆ ಬಂದಿದೆ. ಆದರೆ ಇದನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ. ಬಳಸಿಕೊಂಡು ಯಾವ ರೀತಿ ಭವಿಷ್ಯದ ನಾಯಕ ಎನಿಸಿಕೊಳ್ಳುತ್ತಾರೆ ಎನ್ನುವುದು ಈಗಿರುವ ಸವಾಲು. ಈಗಾಗಲೇ ತಿಂಗಳಿಗೊಮ್ಮೆ ದೆಹಲಿ ನಾಯಕರನ್ನು ಭೇಟಿ ಮಾಡಿ, ವಾರಕ್ಕೊಮ್ಮೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ‘ರಾಜಕೀಯ ಪಾಠ’ ಹೇಳಿಸಿಕೊಳ್ಳುತ್ತಿರುವ ಬೊಮ್ಮಾಯಿ ಅವರು, ಮುಂಬರುವ ಚುನಾವಣೆ ಯನ್ನು ಪಕ್ಷವನ್ನು ಯಾವ ರೀತಿ ದಡ ಸೇರಿಸುತ್ತಾರೆ ಎನ್ನುವುದು ಈಗಿರುವ ಕುತೂಹಲ.

ಸಾಮಾನ್ಯರಿಗೆ ಜನರಿಗೆ ಈಗ ಬಸವರಾಜ ಬೊಮ್ಮಾಯಿ ಅವರು ಮಾಡುತ್ತಿರುವ ಈ ರೀತಿಯ ಚಿಕ್ಕ ಚಿಕ್ಕ ಸಂಗತಿಗೆ ಹೆಚ್ಚು ಆಪ್ತ ಎನಿಸುವುದರಲ್ಲಿ ಎರಡನೇ ಮಾತಿಲ್ಲ. ಆದರೆ, ಜನರಲ್ಲಿನ ಪ್ರೀತಿಯ ಎಷ್ಟು ಭಾಗ ವೋಟಾಗಿ ಪರಿವರ್ತನೆಯಾಗುತ್ತದೆ ಎನ್ನುವುದನ್ನು ನೋಡಬೇಕು. ಕಾಮನ್ ಸಿಎಂ ಎನ್ನುವ ಜತೆಜತೆಗೆ ವೋಟ್‌ಗಳನ್ನು ಹೆಕ್ಕುವ ಸಾಮರ್ಥ್ಯವನ್ನು ಪಡೆದುಕೊಂಡರೆ, ರಾಜ್ಯ ಬಿಜೆಪಿಯ ಭವಿಷ್ಯದ ಎನಿಸಿಕೊಳ್ಳುವುದರಲ್ಲಿ ಎರಡನೇ ಮಾತಿಲ್ಲ. ಆದರೆ ವಿಧಾನಸಭಾ ಚುನಾವಣೆಗೆ ಬಾಕಿಯಿರುವ ಇನ್ನೊಂದುವರೆ ವರ್ಷದಲ್ಲಿ ಈ ರೀತಿಯ ಪರಿಸ್ಥಿತಿಯನ್ನು ಸೃಷ್ಟಿಸಲು ಬಸವರಾಜ ಬೊಮ್ಮಾಯಿ ಅವರಿಂದ ಸಾಧ್ಯವೇ?
ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.