Friday, 13th December 2024

ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪ್ರಸ್ತುತವಾಯಿತೇ ?

ಪ್ರಚಲಿತ

ಡಾ.ರಾಮಚಂದ್ರ ಹೆಗಡೆ

ramhegde62@gmail.com

ಪ್ರಜಾಪ್ರಭುತ್ವ ವ್ಯವಸ್ಥೆ ಈಗಿನ ಜಗತ್ತಿನಲ್ಲಿ ಅಪ್ರಸ್ತುತವಾಗು ವತ್ತ ಸಾಗಿದೆ. ಬಹುಶಃ ಶತಮಾನದ ಕೊನೆಯ ತನಕ ಈ ಮಾದರಿಯ ಪ್ರಭುತ್ವ ಇಲ್ಲವಾಗಿ ಹೋಗಬಹುದು ಕೂಡ. ಇಂತಹ ಶಾಕಿಂಗ್ ಆದ ಸಾಧ್ಯತೆಯ ಮುನ್ಸೂಚನೆ ನೀಡುವ ಎರಡು ಘಟನೆಗಳು ಮುಂದಿವೆ.

ದೊಡ್ಡ ಪ್ರಜಾಪ್ರಭುತ್ವಗಳಿಗೆ ಸಂಬಂಧಿಸಿದವು. ಒಂದನೆಯದು, ಅಮೆರಿಕದ ಅಧ್ಯಕ್ಷೀಯ ಚುನಾವಣೆ. ಅಯ್ಕೆ ಯಾದವರು ಯಾರು ಎನ್ನು ವುದು ಕೊನೆಯ ಕ್ಷಣ ಮುಗಿದರೂ ತಿಳಿಯಲೇ ಇಲ್ಲ. ರಾದ್ಧಾಂತವಾಗಿ ಹೋಯಿತು. ಕ್ಯಾಪಿಟಲ್ ಹಿಲ್ ಮೇಲೆ ಜನ ಬಂದು ಗೂಂಡಾಗಿರಿ ನಡೆಸಿದರು. ಬೀದಿ ಕಾಳಗಗಳು ನಡೆದವು. ಹೊಸ ಅಧ್ಯಕ್ಷರು ಬಂದರು. ಬಿಡಿ. ಆದರೂ ಘಟನೆ ಅಮೆರಿಕದಲ್ಲಿಯೂ ಬಹುಶಃ ಪ್ರಜಾಪ್ರಭುತ್ವ ದುರ್ಬಲವಾಗುತ್ತ ಸಾಗಿದೆ ಎಂಬ ವಾಸ್ತವವನ್ನು ಜಗತ್ತಿನ ಮುಂದೆ ಇಟ್ಟೇ ಹೊರಗೆ ಹೋಯಿತು.

ಭಾರತದಲ್ಲಂತೂ ಪ್ರಜಾಪ್ರಭುತ್ವ ವಿಫಲವಾಗಿ ಹೋಗಿದೆಯೇ ಎಂಬ ಪ್ರಶ್ನೆ ಮನಸ್ಸುಗಳನ್ನು ತುಂಬಿ ಕೊಂಡಿವೆ. ಯೋಚನೆಗೆ ಶಕ್ತಿ ತುಂಬಿದ್ದು ಬಂಗಾಲದ ಚುನಾವಣೆ. ಅಲ್ಲಿ ಒಂದು ರೀತಿಯ ಯುದ್ಧವೇ ನಡೆದುಹೋಯಿತು. ಬೂತ್ ವಶಪಡಿಸಿಕೊಳ್ಳುವ ಪ್ರಯತ್ನಗಳು ನಡೆದವು. ಮಾತುಗಳು ಗಡಿ ಮೀರಿದವು. ಗುಂಡುಗಳು ಹಾರಿದವು. ದೊಡ್ಡ ರಾಜ್ಯವೇನೂ ಅಲ್ಲದ ಬಂಗಾಲಕ್ಕೆ ‘ನ್ಯಾಯಯುತ’ ಚುನಾವಣೆ ನಡೆಸಲು ಆರು ಏಳು ಹಂತಗಳು ಬೇಕಾದವು. ಇಂಚಿಂಚಾಗಿ ಚುನಾವಣೆ ನಡೆಸುತ್ತ ಹೋಗಬೇಕಾಯಿತು.

ಪ್ರಜಾಪ್ರಭುತ್ವ ಕಾಯಲು ಅರೆ ಸೇನಾಪಡೆಯನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಬೇಕಾಯಿತು. ಪಕ್ಷಗಳು ಬಹುಶಃ ಗೂಂಡಾ ಸಂಸ್ಕೃತಿಯಲ್ಲಿ ಕಾರ್ಯಕರ್ತ ರನ್ನು ಬೆಳೆಸಬೇಕಾದ ಪೇಚಿಗೆ ಸಿಲುಕಿದವು. ಅಂತವರಿಗೆ ಬಹುಶಃ ಟಕೆಟ್ ನಿರಾಕರಿಸಲಾದ ಅಸಹಾಯಕತೆಗೂ ಸಿಲುಕಿದವು. ಏಕೆಂದರೆ ಚುನಾವಣೆಯ ಸಂದರ್ಭದಲ್ಲಿ ಬಾಟಲಿ, ಹಣ ಹಂಚುವುದು, ಮತಪೆಟ್ಟಿಗೆ ಹಾರಿಸು ವುದು, ನೀರಿನಂತೆ ಹಣ ಖರ್ಚು ಮಾಡುವುದು, ರಕ್ತ ಹರಿಸುವುದು ಇತ್ಯಾದಿ ಕೆಲಸ ಬೇರೆಯವರಿಂದ ಸಾಧ್ಯವಿಲ್ಲ. ಇವೆಲ್ಲ ಕಣ್ಣಿಗೆ ಹೊಡೆಯುವಂತೆ ಎದ್ದು ಕಂಡದ್ದು ಬಂಗಾಲದಲ್ಲಿ. ಮತ್ತೆ ಇದು ಕೇವಲ ಬಂಗಾಲದ ಕಥೆಯಲ್ಲ. ಹೆಚ್ಚು ಕಡಿಮೆ ಎಲ್ಲ ಚುನಾವಣೆಗಳ ಕಥೆ.

ಮೇಲೆ ಹೇಳಿದ ಘಟನೆಗಳು ದೊಡ್ಡ ಪ್ರಜಾಪ್ರಭುತ್ವಗಳ ಕಾರ್ಯವಿಧಾನಗಳ ಇತ್ತೀಚಿನ, ಉದಾಹರಣೆಗಳು ಅಷ್ಟೇ. ಕೆದಕುತ್ತ ಹೋದರೆ ಸಾವಿರ ಉದಾಹರಣೆ ಸಿಗಬಹುದು. ಪ್ರಜಾಪ್ರಭುತ್ವಗಳು ವಿಫಲವಾಗಿವೆ ಎನ್ನುವ ಭಾವನೆ ಹುಟ್ಟಿಸುವಂತವು. ಗಮನಿಸಿ. ಚುನಾವಣೆ ನಿಜವಾಗಿ ತತ್ವಗಳ ನಡುವಿನ ಸಂಘರ್ಷ ವಾಗಿರ ಬೇಕು. ಒಂದು ಕಾಲದಲ್ಲಿ ಹಾಗೆ ಇತ್ತು ಕೂಡ. ಅಲ್ಲಿ ವಿಚಾರಗಳು, ತತ್ವಗಳು ತುಂಬಿರುತ್ತಿದ್ದವು. ಆದರೆ ಇಂದು ಅದೆಲ್ಲ ಇಲ್ಲ. ಪ್ರಣಾಳಿಕೆಗೆ ಕಿಮ್ಮತ್ತು ಇಲ್ಲ. ‘ಭಾಷಣ ಬೇಡ ಸರ್, ದುಡ್ಡು ಕೊಟ್ಟು ಬಿಡಿ’ ಎಂದು ಜನರೂ ಹೇಳಲಾರಂಭಿ ಸಿದ್ದಾರೆ. ಬಹುಶಃ ಮತದಾರರಿಗೆ ‘ವ್ಯವಸ್ಥೆ’ ಮಾಡಿ, ಬೂತ್‌ಗೆ ಬರಲು ವಾಹನ ವ್ಯವಸ್ಥೆ ಕಲ್ಪಿಸಿ ಚುನಾವಣೆ ಗೆಲ್ಲಬೇಕು.

‘ತಂತ್ರಗಾರಿಕೆ’ ಅಂದರೆ ಇದು. ವಿರೋಧಿಗಳಿಗಿಂತ ಮುಂದಿನ ಹಂತದ ‘ತಂತ್ರ ನಡೆಸಿ ಮತ ಹಾಕಿಸಿಕೊಳ್ಳುವ ಕಲೆ. ಇದು ಇಂದಿನ ಪ್ರಜಾಪ್ರಭುತ್ವದ ಕಾರ್ಯಾ ಚರಣೆಯ ಭಾಗ. ಮತ್ತೆ ಸಾಧಾರಣವಾಗಿ ಜನರ ಮನಸ್ಸಿನಲ್ಲಿರುವುದೆಂದರೆ ಗೆದ್ದವರ ಕೆಲಸ ದುಡ್ಡು ಮಾಡುವುದು. ಕೋಟಿಗಳಲ್ಲಿ. ಪ್ರಜಾಪ್ರಭುತ್ವ ದುಡ್ಡು ಹಾಕಿ ದುಡ್ಡು ತೆಗೆಯುವ ದಂಧೆ. ಸರಕಾರ ರಚನೆಯಂತೂ ಇನ್ನೂ ಕಷ್ಟದ ಕೆಲಸ. ಇವೆಲ್ಲ ಯಾವ ಬೆಲೆಯಲ್ಲಿ ನಡೆಯುತ್ತವೆ, ಅತೃಪ್ತರನ್ನು ತ್ರಪ್ತರನ್ನಾಗಿಸುವುದು ಹೇಗೆ ಇತ್ಯಾದಿ ವಿವರಗಳು ಕೆಲವು ತೃಪ್ತರೇ ಆಗದ ಅತ್ರಪ್ತರು ಆಡಿಬಿಡುವ ಮಾತುಗಳಿಂದ ಲಭಿಸಲಾರಂಭಿಸಿವೆ. ಅದೆಲ್ಲ ’ತಂತ್ರಗಾರಿಕೆ’.

ಚುನಾವಣೆ ಬಿಟ್ಟು ಬೇರೆ ವಿಷಯಗಳನ್ನೂ ಗಮನಿಸಿ. ‘ಪ್ರಜಾಪ್ರಭುತ್ವ’ದಲ್ಲಿ ಏನು ಬೇಕಾದರೂ ನಡೆಯಬಹುದು. ಶಾಸನಸಭೆಯಲ್ಲಿ ಹೊಡೆದಾಟಗಳು ನಡೆದು ಶಾಸಕರು ಆಸ್ಪತ್ರೆಗೆ ಸೇರಿದ್ದು ಇದೆ. ಕೋಮಾದಲ್ಲಿದ್ದ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದು ಇದೆ. ಸಭಾಪತಿಗಳನ್ನು ಖುರ್ಚಿಯಿಂದ ಎಳೆದು ಹಾಕಿದ್ದು
ಇದೆ. ಇನ್ನೂ ವಿಷಯಗಳೂ ಇವೆ. ಅದೆಲ್ಲ ಇಲ್ಲಿ ಬೇಡ. ತಾತ್ವಿಕವಾಗಿ ಪ್ರಜಾಪ್ರಭುತ್ವಗಳು ಯಾವ ವಾತಾವರಣದಲ್ಲಿ, ಯಶಸ್ವಿಯಾಗುತ್ತವೆ ಎನ್ನುವು ದನ್ನು
ನೋಡೋಣ. ವ್ಯವಸ್ಥೆಗೆ ಮೂರು ಬುನಾದಿಯ ಅಂಶಗಳಿವೆ. ಒಂದನೆಯದು ಅದರ ಅಡಿಯಲ್ಲಿರುವ ಎಲ್ಲರೂ ಇಡೀ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ
ಭಾಗವಹಿಸುವ, ಎಚ್ಚರವಿರುವ ಸದಸ್ಯರಾಗಿರಬೇಕು.

ಇದಕ್ಕಾಗಿ ‘ಆಳುವವರು’ ಮತ್ತು ಜನಸಮೂಹದ ನಡುವೆ ಸುಲಭವಾದ, ಪಾರದರ್ಶಕವಾದ ಸಂವಹನ ಇರಬೇಕು. ಪ್ರಭುತ್ವ ಏನುಮಾಡುತ್ತಿದೆ ಎನ್ನುವ
ಮಾಹಿತಿ ಲಭ್ಯವಿರಬೇಕು. ಎರಡನೆಯ ವಿಷಯ. ಆಳುವವರು ಹಾಗೂ ಜನರಿಗೆ ಸಂವಿಧಾನ, ಕಾನೂನು, ಹಣಕಾಸು, ಇತ್ಯಾದಿ ಕುರಿತ ಕನಿಷ್ಠ ಜ್ಞಾನವಿರಬೇಕು.
ಜ್ಞಾನ, ತಿಳುವಳಿಕೆ, ಎಚ್ಚೆತ್ತ ಜನತೆ ಪ್ರಜಾಪ್ರಭುತ್ವದ ಮೂಲ ಬಂಡವಾಳ. ಸಮಸ್ಯೆ ನಿವಾರಿಸಲು ಗಟ್ಟಿಯಾದ ಸ್ವಾತಂತ್ರ್ಯ ನ್ಯಾಯಾಂಗ ಇರ ಬೇಕು. ಜನರ ಮತ್ತು ಪ್ರಭುತ್ವದ ನಡುವೆ ಸಂವಹನ ಏರ್ಪಡಿಸಲು ಸ್ವಾತಂತ್ರ್ಯ ಸುದ್ದಿ ಮಾಧ್ಯಮ ಇರಬೇಕು.

ಈಗ ಗಮನಿಸಿ. ಪ್ರಜಾಪ್ರಭುತ್ವದ ಯಶಸ್ಸಿನ ಮೂಲಾಧಾರಗಳಾದ ಈ ಅಂಶಗಳು ಇಂದಿನ ಪ್ರಜಾಪ್ರಭುತ್ವಗಳಲ್ಲಿ ಇಲ್ಲವೇ ಇಲ್ಲ ಎಂಬ ಭಾವನೆ ವ್ಯಾಪಕವಾಗಿದೆ. ಮೊದಲ ಸಮಸ್ಯೆ ಜನರಲ್ಲಿ ತುಂಬಿಕೊಂಡಿರುವ ಅಗಾಧ ಅಜ್ಞಾನ. ಸಂವಿಧಾನ ಏನನ್ನು ಹೇಳುತ್ತದೆ? ರಾಷ್ಟ್ರಪತಿ, ಪ್ರಧಾನಿ ಎಂದರೇನು? ಕಾನೂನು ಮಾಡುವ ಪ್ರಕ್ರಿಯೆ ಯಾವುದು? ಯಾವ ವಿಷಯಗಳ ಕುರಿತು ಯಾವ ಕಾನೂನುಗಳಿವೆ? ಕನಿಷ್ಠ ದಿನದ ಬದುಕಿಗೆ ಅನ್ವಯವಾಗುವ ಕಾನೂನುಗಳು ಯಾವುವು? ಮುನಿಸಿಪಾಲಿಟಿಗಳ, ಗ್ರಾಮ ಪಂಚಾಯಿತಗಳ ಕೆಲಸ ಏನು? ಶಾಸಕರ ಕೆಲಸವೇನು? ಸಂಸದರ ಕೆಲಸವೇನು? ಅಧಿಕಾರಿಗಳದು ಏನು ಕೆಲಸ? ಬಜೆಟ್ ಎಂದರೇನು? ಹಣ ಎಲ್ಲಿಂದ ಬರುತ್ತದೆ? ಹೇಗೆ ಖರ್ಚಾಗುತ್ತದೆ? ಯಾವ ವಿಷಯದ ಅಭಿವೃದ್ಧಿಯ ಹೊಣೆ ಹೊತ್ತವರು ಯಾರು? ಇಂತಹ ವಿಷಯಗಳು ಶೇ.99 ಜನರಿಗೆ ಗೊತ್ತಿಲ್ಲ.

ಇತ್ತೀಚಿಗಂತೂ ಚರ್ಚೆ ನಡೆಯದೇ ಸದನದ ಕೊನೆಯ ದಿನ ಧ್ವನಿಮತದಿಂದ ಮಸೂದೆಗಳು ಪಾಸ್ ಆಗುತ್ತಿವೆ. ಹಾಗಾಗಿ ಶಾಸಕರಿಗೂ ಕೆಲವೊಮ್ಮೆ ಯಾವ
ಮಸೂದೆ ಪಾಸಾಗಿದೆ ತಿಳಿದಿರಲಿಕ್ಕಿಲ್ಲ. ಪೇಪರುಗಳೂ ಆ ಕುರಿತು ಬರೆಯುವುದಿಲ್ಲ. ಹೀಗಾಗಿ ಕಣ್ಣಾಮುಚ್ಚಾಲೆ ಆಟದಲ್ಲಿ ಯಾರಿಗೂ ಏನೂ ತಿಳಿಯುವುದೇ ಇಲ್ಲ. ಮತ್ತೆ ವಿಚಾರಗಳನ್ನು ಗಂಭೀರವಾಗಿ ಚರ್ಚಿಸಬಲ್ಲ ವರೂ ಇಂದು ಕಡಿಮೆ ಎಂದೇ ಭಾವನೆ. ಒಂದು ಕಾಲದಲ್ಲಿ ನೆಹರು, ಇಂದಿರಾ, ಅಟಲ್ ಬಿಹಾರಿ ವಾಜಪೇಯಿ, ನರಸಿಂಹರಾವ್, ರಾಮಕೃಷ್ಣ ಹೆಗಡೆ, ಬಿಜು ಪಟ್ನಾಯಕ್, ನಂಬೂದರಿ ಪಾದ್, ಜಗಜೀವನ್ ರಾಮ್, ಮನಮೋಹನ್ ಸಿಂಗ್, ಎಲ್.ಕೆ ಅಡ್ವಾಣಿ, ಪೀಲೂ ಮೋದಿ, ಜಾರ್ಜ್ ಫೆನಾಂಡಿಸ್ ಅಂತವರು ಇದ್ದರು. ಘಟಾನುಘಟಿಗಳು. ವಿಷಯಗಳ ಕುರಿತು ಡಿಬೇಟ್ ಮಾಡುವ ಅರ್ಹತೆ ಇದ್ದವರು.

ಓದಿನ ಹಿನ್ನೆಲೆ ಇದ್ದವರು. ಇಂದು ಇಲ್ಲವೆಂದೇನಿಲ್ಲ. ಮೋದಿ, ದೇವೇಗೌಡ ಇದ್ದಾರೆ. ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ದೊಡ್ಡವರು ಇದ್ದಾರೆ. ಆದರೆ ಅಂಥವರು ಕಡಿಮೆಯಾದಂತಿದೆ. ಹೀಗಾಗಿಯೂ ಮಸೂದೆಗಳ ಅರಿವು ಸಮಾಜಕ್ಕೆ ಸಿಗುತ್ತಿಲ್ಲ. ಅಲ್ಲದೆ ಕಾನೂನುಗಳ ಅನುಷ್ಠಾನದ ಪ್ರಶ್ನೆಯೂ ಇದೆ. ಅವು ಕೆಲವೊಮ್ಮೆ ಅನುಷ್ಠಾನವಾಗುವುದೇ ಇಲ್ಲ. ಅಥವಾ ಬೇಕಾದಲ್ಲಿ (ಬೇಡವಾದಲ್ಲಿ) ಮಾತ್ರ ಜಾರಿಗೆ ಬರುತ್ತದೆ. ಹೀಗಾಗಿ ಜನರಿಗೆ ಕಾನೂನು ಗಂಭೀರವಾಗಿ ಪಾಲಿಸಲೇ ಬೇಕಾದ ವಿಷಯವಲ್ಲ. ಅಥವಾ ದೋಸ್ತಿ ಬಳಸಿ ಅದನ್ನೆಲ್ಲ ಬೇಕಾ ದಂತೆ ‘ಸರಿಪಡಿಸಿಕೊಳ್ಳಬಹುದು’ ಎಂಬ ಭಾವನೆ ಇದೆ.

ಭ್ರಷ್ಟಾಚಾರ ಭಾರಿ ಪ್ರಮಾಣದಲ್ಲಿ ಬೆಳೆದಿರುವ ಕಾರಣ ಇದು. ಏನೆಂದರೆ ಕಾನೂನು ಬಹುಶಃ ಹೇಗೆ ಬೇಕಾದರೂ ತಿರುಗುತ್ತದೆ. ಅಲ್ಲದೆ ಬದಲಾಗುತ್ತದೆ. ಮತ್ತೆ ಬಹುಶಃ ಆಡಳಿತ ವ್ಯವಸ್ಥೆಯ ಸ್ಟ್ರಕ್ಚರ್‌ಗಳೂ ಪಾರದರ್ಶಕವಾಗಿಲ್ಲ. ಸರಕಾರದ ಆಡಳಿತಾತ್ಮಕ ನಿರ್ಣಯಗಳು ಹೇಗೆ, ಯಾವ ಯಾವ ಹಂತಗಳಲ್ಲಿ ತೆಗೆದು ಕೊಳ್ಳಲ್ಪಡುತ್ತವೆ? ಯಾವ ಅಽಕಾರಿಯ ಪವರ್ ಎಷ್ಟು ಯಾರಿಗೂ ಗೊತ್ತಿಲ್ಲ. ಯಾವ ಕೆಲಸ ಎಲ್ಲಿಂದ ಆರಂಭವಾಗುತ್ತದೆ ಮತ್ತು ಎಲ್ಲಿಗೆ ಮುಗಿಯುತ್ತದೆ ತಿಳಿದೇ ಇಲ್ಲ. ಪ್ರೊಸಿಜರ್‌ಗಳು ತಿಳಿದೇ ಇಲ್ಲ. ಗೊಂದಲ ಹೆಚ್ಚಾದಂತೆ ಭ್ರಷ್ಟಾಚಾರ ಹೆಚ್ಚು.

ಇದೆಲ್ಲಾ ಯಾಕೆ ಬೇಕು. ಹಣ ಕೊಟ್ಟು ಮುಗಿಸಿದರೆ ಸಾಕು ಎನ್ನುವ ಭಾವನೆ ಜನರಿಗೆ ಬರುತ್ತದೆ. ಬಂದಿದೆ. ಬಹುಶಃ ಸರಕಾರಿ ವ್ಯವಸ್ಥೆಗಳು ವಿಫಲವಾಗಿರುವುದು ಅಷ್ಟೇ ಅಲ್ಲ, ಕೆಲವೊಮ್ಮೆ ಅಪಾಯಕಾರಿಯಾಗಿರುವುದು ಕೂಡ ಇಂತಹ ಭಾವನೆಗೆ ಕಾರಣ. ಅಂಬಾನಿ ಮನೆಯ ಬಳಿ ಪೊಲೀಸನೊಬ್ಬ ರಚಿಸಿದ ಸಂಚನ್ನು ಗಮನಿಸಿ. ಇದು ಹೆಚ್ಚು ಕಡಿಮೆ ಪ್ರಭುತ್ವಗಳೇ ಜನರ ವೈರಿಗಳಾಗಿ ಹೋದಂತಹ ಸ್ಥಿತಿ. ಜನರಿಗೆ ಅನಿಸಲಾರಂಭಿಸಿದೆ. ಏನೆಂದರೆ ದುಡ್ಡು ಬಿಸಾಕಿ ಕೆಲಸ ಮಾಡಿಸಿ ಕೊಳ್ಳಬೇಕಾದಾಗ ಸರಕಾರ ಯಾಕೆ ಬೇಕು? ಆಡಳಿತದಲ್ಲಿ ಯಾರು ಇದ್ದರೇನು, ಬಿಟ್ಟರೇನು? ಇಷ್ಟೆಲ್ಲ ನಾಟಕ ಯಾಕೆ? ಜನರಿಗೆ ಮತದಾನದ ಕುರಿತು, ಪ್ರಭುತ್ವದ ವ್ಯವಹಾರಗಳ ಕುರಿತು ಸಿನಿಸಿಸಮ್ ಬಂದಿರುವ ಕಾರಣ ಇದು. ದೇಶಭಕ್ತಿ ಕಳವಳಕಾರಿ ಯಾಗಿ ಕಡಿಮೆಯಾಗಲೂ ಇದೇ ಕಾರಣ.

ಸಮಸ್ಯೆ ಸೃಷ್ಟಿಸಿರುವುದು ಕೇವಲ ರಾಜಕಾರಣಿಗಳು ಎಂದು ಹೇಳಿದರೆ ತಪ್ಪಾಗುತ್ತದೆ. ಜನರ ಮನಸ್ಥಿತಿಯೂ ಪ್ರಜಾಪ್ರಭುತ್ವಕ್ಕೆ ಸವಾಲಾಗಿಯೇ ಇದೆ. ಒಳ್ಳೆಯ
ಮನಸ್ಸಿನ ರಾಜಕಾರಣಿಗಳು ಅಥವಾ ಪ್ರಭುತ್ವ ಬೇಸ್ತು ಬೀಳುವ, ಸುಸ್ತಾಗಿಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿರುವ ಶ್ರೇಷ್ಠ ವ್ಯಕ್ತಿತ್ವದ
ರಾಜಕಾರಣಿಗಳು ಮತ್ತು ಅಽಕಾರಿಗಳು ಜನರ ಮನಸ್ಥಿತಿ ನೋಡಿ ಭಯಗೊಂಡಂತಿದೆ. ಏಕೆಂದರೆ ಜನ ಪರಮ ಸ್ವಾರ್ಥಿಗಳಾಗಿ ಹೋಗಿದ್ದಾರೆ. ಅವರಿಗೆ ಪ್ರಭುತ್ವ
ಸಮಷ್ಟಿಯ ಕೆಲಸ ಮಾಡಿದರೆ ಸಾಲದು. ತಮ್ಮ ಸ್ವಂತ ಕೆಲಸ ಮಾಡಿಕೊಡಬೇಕು. ತಮ್ಮ ಮಕ್ಕಳಿಗೆ ಉದ್ಯೋಗ ಕೊಡಿಸಬೇಕು. ಅದೂ ಕೋಟಿಗಟ್ಟಲೆ ಬರುವ
ಉದ್ಯೋಗ ಮತ್ತು ತಮ್ಮ ಕಳ್ಳ ಕೆಲಸಗಳನ್ನು ಮುಚ್ಚಲು ಸಹಾಯ ಮಾಡಬೇಕು. ಪ್ರಭುತ್ವ ದೇಶದ ಕೆಲಸ ಮಾಡದಿದ್ದರೂ ಸರಿ.

ಸ್ವಂತ ಕೆಲಸ ಮಾಡಿಕೊಡ ಬೇಕು. ಇಲ್ಲವಾದರೆ ಆ ರಾಜಕಾರಣಿ ಜನಪ್ರಯತೆಯ ಹೋಗುತ್ತದೆ. ಉದಾಹರಣೆಗೆ ರೈತ ಚಳುವಳಿಯನ್ನು ಗಮನಿಸಿ. ಅವರು ಹೇಳುವ ವಿಷಯ ಸರಿ ಇರಬಹುದು ಅಥವಾ ತಪ್ಪಿರಬಹುದು. ಆ ಮಾತು ಬೇರೆ. ಆದರೆ ಎಲ್ಲ ಮನವಿಗಳನ್ನು, ಕೋರ್ಟಿನ ಆದೇಶಗಳನ್ನು ತಿರಸ್ಕರಿಸಿ ಜನ ಕುಳಿತುಬಿಟ್ಟರೆ ಸರಕಾರಗಳು ಏನು ಮಾಡ ಬೇಕು? ಅವರು ದಾಂಧಲೆ ಎಬ್ಬಿಸಿದರೂ ಪ್ರಭುತ್ವಗಳು ಕಣ್ಣು ಮುಚ್ಚಿಕೊಂಡಿರಬೇಕು ಎಂದರೆ ಆಡಳಿತ ಮಾಡುವು ದಾದರೂ ಹೇಗೆ? ಜನರ ಗುಂಪುಗಳ ಮುಂದೆ ಪ್ರಭುತ್ವಗಳಿಗೆ ಅಽಕಾರವೇ ಇಲ್ಲವೇ? ಎಂತಹ ರಾಜಕೀಯ ವ್ಯವಸ್ಥೆ ಇದು? ದೇಶದಲ್ಲಿ ಎಲ್ಲ ನಾಗರಿಕರನ್ನು ಸಮಾನವಾಗಿ ನೋಡುವ ಕೋಡ್ ಕೂಡ ಇಲ್ಲ. ಸಮುದಾಯಗಳಿಗೆ ಪ್ರತ್ಯೇಕ ಅಧಿಕಾರಗಳಿವೆ.

ಮತ್ತೆ ಸರಕಾರಗಳು ಕಾನೂನು ರಚಿಸುವುದು ಅಥವಾ ಅವನ್ನು ಅನುಷ್ಠಾನಗೊಳಿಸುವುದು ಹೇಗೆ? ಸೂಕ್ತ ಅಧಿಕಾರಗಳೇ ಇಲ್ಲದ ಸರಕಾರಗಳು ಕೆಲಸ ನಡೆಸುವುದು ಹೇಗೆ? ಒಳ್ಳೆಯ ರಾಜಕಾರಣಿಗಳ ದಕ್ಷ ಅಧಿಕಾರಿಗಳ ಮುಂದಿರುವ ಸಮಸ್ಯೆ ಇದು. ಅವರಿಗೆ ಸ್ವಾತಂತ್ರವಾಗಿ ರಾಗ ದ್ವೇಶಗಳಿಲ್ಲದೆ ಜನರ ಹಿತವನ್ನು ಮಾತ್ರ ಲಕ್ಷದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವ ಶಿಸ್ತಿನ ವಾತಾವರಣ ಇದೆಯೇ? ಪ್ರಜಾಪ್ರಭುತ್ವಗಳು ಕಣ್ಮರೆಯಾಗಿ ಹೋಗಬಹುದು ಎಂಬ ಸಂಶಯಕ್ಕೆ ಇನ್ನೊಂದು ಕಾರಣವೆಂದರೆ ಅದು ಇಂದಿನ ಕಾಲದ ವೇಗಕ್ಕೆ ಹೊಂದಿಕೊಳ್ಳಲಾಗದ ಆಮೆಯ ವೇಗದ ವ್ಯವಸ್ಥೆ.

ಸರಕಾರಗಳು ಈಗ ವೇಗ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಆದರೂ ಕಾನೂನಾತ್ಮಕವಾದ, ತೀರ್ಮಾನ ತೆಗೆದುಕೊಳ್ಳುವ ವ್ಯವಸ್ಥೆಗಳು ಇನ್ನೂ ಓಬಿರಾಯನ ಕಾಲದವು. ಒಂದು ಬಿಲ್ ಲಾ ಆಗಿ ಬರಲು ವರ್ಷಗಳೇ ಬೇಕು. ಅದು ಕೆಳಗೆ ಬರಲು ಮತ್ತೆ ವರ್ಷಗಳೇ ಬೇಕು. ಹಾಗಾಗಿಯೇ ಜಗತ್ತು ವೇಗದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರುವ ಖಾಸಗೀಕರಣವನ್ನು ಇಂದು ಹೆಚ್ಚು ಮೆಚ್ಚಿಕೊಳ್ಳುತ್ತಿರುವುದು.

ಮೂಲ ಸಮಸ್ಯೆಯೆಂದರೆ ಪ್ರಭುತ್ವವನ್ನು ಹತೋಟಿಯಲ್ಲಿಡಲು ಜನರಿಗೆ ಸಾಧ್ಯವಾಗತ್ತಿಲ್ಲ ಮತ್ತು ಜನರನ್ನು ಹತೋಟಿಯಲ್ಲಿಡಲು ಪ್ರಭುತ್ವಗಳಿಗೆ ಸಾಧ್ಯ
ವಾಗುತ್ತಿಲ್ಲ. ಜತೆಯಾಗಿ ಪರಸ್ಪರ ವಿಶ್ವಾಸದಿಂದ, ಹೊಂದಾಣಿಕೆಯಿಂದ ಹೋಗಲು ಸಾಧ್ಯವಾಗುತ್ತಿಲ್ಲ. ಪ್ರಭುತ್ವದ ಜೀವಾಳವಾದ ಇಂತಹ ಹೊಂದಾಣಿಕೆ
ಮುರಿದುಹೋದಂತಿದೆ. ಮುಂದೆ ಹೋದಂತೆ ಈಗಾಗಲೇ ತೀವ್ರವಾಗಿರುವ ಈ ಸಮಸ್ಯೆ ಗಂಭೀರವಾಗಿಬಿಡಬಹುದು. ಕ್ರಿಮಿನಲ್ ವ್ಯಕ್ತಿಗಳನ್ನು ನಿರ್ವಹಿಸುವುದು
ಪಕ್ಷಗಳಿಗೆ ಅಸಾಧ್ಯವಾಗಿಹೋಗಬಹುದು. ಚುನಾವಣೆಗಳನ್ನು ನಡೆಸುವುದೇ ಕಷ್ಟವಾಗಿ ಹೋಗಬಹುದು. ಜನ ಸರಕಾರದ ವ್ಯವಸ್ಥೆಯಿಂದ ದೂರವಾಗುತ್ತಲೇ ಹೋಗಬಹುದು. ಆಗ ಪ್ರಜಾಪ್ರಭುತ್ವ ವ್ಯವಸ್ತೆಯೇ ಅಪ್ರಸ್ತುತವಾಗುವುದು ಸಹಜ.

ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕೆಂದರೆ ಜಗತ್ತಿನ ಸಂವಿಧಾನ ತಜ್ಞರು ಯೋಚಿಸಬೇಕು. ಬಹುಶಃ ಸಂವಿಧಾನಗಳಲ್ಲಿ ಬ್ರಹತ್ ಮಾರ್ಪಾಡುಗಳನ್ನೂ ಅದು
ಬೇಡಬಹುದು. ಪ್ರಜಾಪ್ರಭುತ್ವದ ವ್ಯವಸ್ಥೆ ನಿರ್ವಹಣೆಗೆ ತಂತ್ರಜ್ಜಾನವನ್ನು ಅಳವಡಿಸುವ ವಿಷಯವೂ ಬರಬಹುದು. ಬರಬೇಕು. ಉಳಿಸಿಕೊಳ್ಳಬೇಕೆಂದರೆ.
ಪ್ರಜಾ ಪ್ರಭುತ್ವ ವ್ಯವಸ್ಥೆಯೇ ಅಪ್ರಸ್ತುತವಾಯಿತೇ?