Thursday, 12th December 2024

ಕೋವಿಡ್ ಲಸಿಕೆಗಳ ಮಿಶ್ರಣ ಪರಿಣಾಮಕಾರಿಯೇ ?

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಕೋವಿಡ್ ಲಸಿಕೆಗಳ ವಿಚಾರದಲ್ಲಿ ಜಗತ್ತಿನಾದ್ಯಂತ ಈಗ ನಡೆಯುತ್ತಿರುವ ಮುಖ್ಯ ಚರ್ಚೆ ಎಂದರೆ ಲಸಿಕೆಗಳ ಮಿಶ್ರಣ. ಈ ಲೇಖನ ನಾನು ಬರೆಯಲು ಆರಂಭಿ ಸಿದ ಹಿಂದಿನ ದಿನ ಭಾರತೀಯ ವೈದ್ಯಕೀಯ ವಿಜ್ಞಾನ ಮಂಡಳಿ ICMR ಈ ಬಗ್ಗೆ ಪ್ರಕಟಣೆ ಹೊರಡಿಸಿತು. ನಮ್ಮ ದೇಶದಲ್ಲಿ ಈಗ ಬಳಸುತ್ತಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಮಿಶ್ರಣಗಳ ಪ್ರಯೋಗಕ್ಕೆ ಉತ್ತಮ ಫಲಿತಾಂಶ ದೊರೆತಿದೆ ಎಂದು. ICMR ಮತ್ತು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (NIV) ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಮಿಶ್ರ ಲಸಿಕೆ ಪಡೆದವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಕಂಡು ಬಂದಿದೆ. 18 ಜನರ ಮೇಲೆ ಈ ಅಧ್ಯಯನ ನಡೆಸಲಾಗಿದ್ದು ಅದರ ಫಲಿತಾಂಶವನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ.

ಕೋವಿಶೀಲ್ಡ ಮತ್ತು ಕೋವ್ಯಾಕ್ಸಿನ್ ಎರಡು ಡೋಸ್ ಲಸಿಕೆ ಪಡೆದವರಲ್ಲಿನ ಸುರಕ್ಷತೆ ಮತ್ತು ರೋಗ ನಿರೋಧ ಕತೆಯ ಪ್ರಮಾಣವನ್ನು ಲಸಿಕೆ ಮಿಶ್ರಣ ಪಡೆದವ ರಲ್ಲಿ ತುಲನೆ ಮಾಡಲಾಗಿದೆ. ಅಡಿನೋ ವೈರಸ್ ವೆಕ್ಟರ್ ಲಸಿಕೆಯಾದ ಕೋವಿಶೀಲ್ಡ ನೀಡಿಕೆಯ ನಂತರ ವೈರಸ್ ನಿಷ್ಕ್ರಿಯ ಆಧಾರಿತ ವ್ಯಾಕ್ಸಿನ್ ಆದ ಕೋವ್ಯಾಕ್ಸಿನ್ ನೀಡುವಿಕೆ ಸುರಕ್ಷಿತ ಮಾತ್ರವಲ್ಲದೆ ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದು ಈ ಅಧ್ಯಯನದಿಂದ ತಿಳಿದು ಬಂದಿದೆ. ಉಭಯ ಲಸಿಕೆಗಳ ಮಿಶ್ರಣದಿಂದ ಕರೋನಾ ವೈರಸ್ ವಿರುದ್ಧದ ಸಂಭಾವ್ಯ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವುದು ಹಿರಿಯ ವೈರಾಣು ತಜ್ಞರ ಅಭಿಮತ. ಕೇಂದ್ರೀಯ ಔಷಧ ನಿಯಂತ್ರಣ ಸಂಸ್ಥೆಯ (CDSCO) ತಜ್ಞರ ಸಮಿತಿ ಜುಲೈನಲ್ಲಿ ವ್ಯಾಕ್ಸಿನ್ ಡೋಸ್‌ಗಳ ಮಿಶ್ರಣಕ್ಕೆ ಶಿಫಾರಸು ಮಾಡಿತ್ತು.

ಲಸಿಕೆಗಳ ಮಿಶ್ರಣದ ಅವಶ್ಯಕತೆ ಏನಿದೆ ?

ತಮಗೆ ಗೊತ್ತಿರುವಂತೆ ಕರೋನಾ ವೈರಸ್‌ನ ಡೆಲ್ಟಾ ಪ್ರಭೇದ ಜಗತ್ತಿನ ಹಲವಾರು ದೇಶಗಳಲ್ಲಿ ಕಾಡ್ಗಿಚ್ಚಿನಂತೆ ವ್ಯಾಪಕವಾಗಿ ಹರಡುತ್ತಿದೆ. ಈ ದಿಸೆಯಲ್ಲಿ ಜಗತ್ತಿನ ಹಲವು ದೇಶಗಳು ತಮ್ಮ ವ್ಯಾಕ್ಸಿನೇಷನ್ ಅನ್ನು ಪ್ರಬಲ ಗೊಳಿಸಲು ಈ ಕ್ರಮವನ್ನು ಕೈಗೊಳ್ಳುತ್ತಿವೆ. ಯುರೋಪಿನ ಕಾಯಿಲೆ ನಿಯಂತ್ರಿಸುವ CDPC ಸಂಸ್ಥೆಯ ಪ್ರಕಾರ ಆಗಸ್ಟ್ ಕೊನೆಯ ಹೊತ್ತಿಗೆ ಇಡೀ ಯುರೋಪಿ ಯನ್ ಯೂನಿಯನ್‌ನಲ್ಲಿ ಕರೋನಾ ವೈರಸ್‌ನ ಎ ಪ್ರಬೇಧಗಳನ್ನು ಮೀರಿಸಿ ಶೇ.90 ರಷ್ಟು ಡೆಲ್ಟಾ ಪ್ರಬೇಧವೇ ವ್ಯಾಪಿಸಬಹುದು ಎಂದು ಅಂದಾಜು ಮಾಡಲಾಗಿದೆ.

ಲಸಿಕೆ ಮಿಶ್ರಣ : ಮೊದಲ ಡೋಸ್ ಒಂದು ನಿರ್ದಿಷ್ಟ ಲಸಿಕೆಯನ್ನು ನೀಡಿ ಎರಡನೇ ಡೋಸ್ ಕೊಡುವ ಸಂದರ್ಭದಲ್ಲಿ ಬೇರೆ ರೀತಿಯ ಅಥವಾ ಬೇರೆ ಬ್ರಾಂಡ್‌ನ ಲಸಿಕೆ ಕೊಡಬೇಕಾಗುತ್ತದೆ. ಇದರ ಉದ್ದೇಶ ಅಂದರೆ ಹೀಗೆ ಮಾಡುವುದರಿಂದ ವೇಗವಾಗಿ ಮತ್ತು ಫಲಪ್ರದವಾಗಿ ಲಸಿಕೆಗಳನ್ನು ಕೊಡಬಹುದು. ಜಗತ್ತಿನ ಹಲವೆಡೆ ಲಸಿಕಾ ಮಿಶ್ರಣಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.

ಇತ್ತೀಚೆಗೆ ಸ್ಪೇನ್, ಯುನೈಟೆಡ್ ಕಿಂಗ್ಡಮ್ ಮತ್ತು ಜರ್ಮನಿಗಳಲ್ಲಿ ನಡೆದ ಅಧ್ಯಯನಗಳ ಬಗ್ಗೆ ವರದಿ ಹೊರ ಬಂದಿದೆ. ಈ ಮೂರೂ ಅಧ್ಯಯನಗಳು ಲಸಿಕೆಗಳ ಮಿಶ್ರಣ ಮಾಡುವುದರಿಂದ ಅವನ್ನು ತೆಗೆದುಕೊಂಡ ವ್ಯಕ್ತಿಗಳಲ್ಲಿ ಪ್ರಭಲವಾದ ರೋಗ ನಿರೋಧಕ ಶಕ್ತಿ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಒಂದೇ ರೀತಿಯ ಲಸಿಕೆಗಳ ಎರಡು ಡೋಸ್ ಪಡೆದವ ರಲ್ಲಿ ಈ ರೀತಿಯ ಪ್ರಭಲ ರೋಗ ನಿರೋಧಕ ಶಕ್ತಿ ಉಂಟಾಗುವುದಿಲ್ಲ – ಎನ್ನುತ್ತವೆ. ಯಾವ್ಯಾವ ದೇಶಗಳಲ್ಲಿ ಈ ರೀತಿಯ ಮಿಶ್ರಣ ನಡೆಯುತ್ತಿವೆ? ಡೆನ್ಮಾರ್ಕ್, ಬಹರೈನ್, ಭೂತಾನ್, ಕೆನಡಾ, ಇಟಲಿ, ದಕ್ಷಿಣ ಕೊರಿಯಾ, ಥೈಲ್ಯಾಂಡ್ , ಯುಎಇ ದೇಶಗಳಲ್ಲಿ ಲಸಿಕೆಯ ಮಿಶ್ರಣವನ್ನು ದೇಶದ ಪಾಲಿಸಿಯಾಗಿಯೇ ಮಾಡಿದ್ದಾರೆ.

ಜನವರಿ ೨೦೨೧ರಲ್ಲಿ ಲಸಿಕೆಗಳ ಕೊರತೆ ಉಂಟಾದಾಗ ಇಂಗ್ಲೆಂಡಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅನಿವಾರ್ಯ ವಾಗಿ ಹೆಚ್ಚು ಸುದ್ದಿ ಮಾಡದೇ ಈ ರೀತಿಯ ಮಿಶ್ರಣವನ್ನು ಜಾರಿಗೆ ತರಲು ಒಪ್ಪಿತು. ಅದೇ ಸಮಯದಲ್ಲಿ ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪ್ರಿವೆನ್ಷನ್ ( CDC) ಇದನ್ನು ತೀರಾ ಅನಿವಾರ್ಯ ಸನ್ನಿವೇಶದಲ್ಲಿ ಲಸಿಕಾ  ಮಿಶ್ರಣ ಮಾಡಲು ಪರವಾನಿಗೆ ಕೊಟ್ಟಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದವು. 2021ರ ಮಾರ್ಚ್‌ನಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಕೊಟ್ಟ ನಂತರ ಕೆಲವು ವ್ಯಕ್ತಿಗಳಲ್ಲಿ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆ (Blood Clotting) ಕಂಡು ಬಂದಾಗ ಹಲವಾರು ದೇಶಗಳು ಲಸಿಕೆ ಕೊಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದವು. ಆ ಸಂದರ್ಭಗಳಲ್ಲಿ ಮೊದಲ ಡೋಸ್ ಆಸ್ಟ್ರಾಜಿನಿಕಾ ಕೊಟ್ಟ ವ್ಯಕ್ತಿಗಳಿಗೆ ಬೇರೆ ಲಸಿಕೆಯ ಎರಡನೇ ಡೋಸ್ ಆಗಿ ಕೊಡಲು ಆರೋಗ್ಯ ಕಾರ್ಯಕರ್ತರಿಗೆ ಅನುಮತಿ ಕೊಡಲಾಯಿತು.

ರೋಮ್‌ನ ಸಫಯಂಜಾ ವಿಶ್ವವಿದ್ಯಾನಿಲಯದ ಪ್ರೊ.ಗ್ಲೋರಿಯಾ ಟಲಿಯಾನಿ ಅವರ ಪ್ರಕಾರ ಈ ತರಹದ ಲಸಿಕೆಯ ಮಿಶ್ರಣ ಬೇರೆ ಕಾಯಿಲೆಗಳ ಬಗ್ಗೆ ಹಿಂದೆ ಬಹಳ ಮಾಡಲಾಗಿದೆ. ಆದರೆ ಈ ಬಾರಿ ಫೈಜರ್ ಮತ್ತು ಮಾಡಿನಾರ್ ರೀತಿಯ ಮೆಸೆಂಜರ್ ಆರ್‌ಎನ್‌ಎ ಮೂಲದ ಲಸಿಕೆಗಳನ್ನು ಮೊದಲ ಬಾರಿಗೆ ಸೋಂಕು ರೋಗವಾದ ಕೋವಿಡ್‌ನಲ್ಲಿ ಉಪಯೋಗಿಸುತ್ತಿರುವುದರಿಂದ ಒಂದು ರೀತಿಯ ಆತಂಕ ಇದ್ದದ್ದು ಹೌದು. ಆದರೆ ಜೀವಶಾಸ್ತ್ರದ ಪ್ರಕಾರ ಲಸಿಕೆಗಳ ಮಿಶ್ರಣ ಅಪಾಯಕಾರಿ ಎಂಬುದೇನೂ ಇಲ್ಲ. ಪ್ರಪಂಚದ ಹಲವು ಮೇಲ್ಮಟ್ಟದ ನಾಯಕರು ಈಗಾಗಲೇ ಲಸಿಕೆಗಳ ಮಿಶ್ರಣ ಬಳಸಿದ್ದಾರೆ.

ಉದಾ: ಗೆ 66 ವರ್ಷದ ಜರ್ಮನಿಯ ಛಾನ್ಸಲರ್ ಅಂಜೇಲಾ ಮರ್ಕಲ್ ಅವರು ಮೊದಲ ಡೋಸ್ ಆಸ್ಟ್ರಾಜೆನಿಕಾ ತೆಗೆದುಕೊಂಡು ಎರಡನೇ ಡೋಸ್ ಮಾಡೆನಾರ್ ಲಸಿಕೆ ತೆಗೆದುಕೊಂಡಿದ್ದಾರೆ. ೭೩ ವರ್ಷದ ಇಟಲಿಯ ಪ್ರಧಾನ ಮಂತ್ರಿ ಮಾರಿಯೋ ಡಾಗಿ ಮೊದಲ ಡೋಸ್ ಆಸ್ಟ್ರಾಜೆನಿಕಾ ತೆಗೆದುಕೊಂಡು ಎರಡನೇ ಡೋಸ್ ಫೈಜರ್‌ಗೆ ಬದಲಾಯಿಸಿದರು. ಹಾಗೆಯೇ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಮೊದಲ ಡೋಸ್ ಆಸ್ಟ್ರಾಜೆನಿಕಾ ತೆಗೆದುಕೊಂಡು ಎರಡನೇ ಡೋಸ್ ಮಾqನ್ರಾ ಗೆ ಬದಲಿಸಿಕೊಂಡರು.

ಲಸಿಕೆಗಳ ಮಿಶ್ರಣ ಪರಿಣಾಮಕಾರಿಯೇ ?

ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ Com&COVಟ್ರಯಲ್‌ನಲ್ಲಿ 800 ಕ್ಕೂ ಹೆಚ್ಚಿನ ಸ್ವಯಂ ಸೇವಕರಲ್ಲಿ ಎರಡು ಡೋಸ್ ಗಳ ಆಸ್ಟ್ರಾಜೆನಿಕಾ, ಫೈಜರ್ ಅಥವಾ ಒಂದಾದ ಮೇಲೆ ಮತ್ತೊಂದು ಕೊಟ್ಟು ಅವುಗಳ ಪರಿಣಾಮ ಮತ್ತು ಕಾರ್ಯಶೀಲತೆಯನ್ನು ಪರಿಶೀಲಿಸಲಾಯಿತು. ಫಲಿತಾಂಶ ಎಂದರೆ ಫೈಜರ್ ಲಸಿಕೆ ಮತ್ತು ಆಸ್ಟ್ರಾಜೆನಿಕಾ ಲಸಿಕೆಗಳ ಮಿಶ್ರಣವು ಕರೋನಾ ವೈರಸ್ ವಿರುದ್ಧ ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡಿದವು. ಆದರೆ ಇದರಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಮೊದಲು ಆಸ್ಟ್ರಾಜೆನಿಕಾ ಲಸಿಕೆ ನೀಡಿ ನಂತರ ಫೈಜರ್ ಕೊಟ್ಟಾಗ ಹೆಚ್ಚಿನ ಸಂಖ್ಯೆಯ ಆಂಟಿಬಾಡಿಗಳು ಉತ್ಪನ್ನವಾದವು.

ಹಾಗೆಯೇ ಟಿ ಜೀವಕೋಶಗಳ ಪ್ರತಿಕ್ರಿಯೆ ಗಮನಾರ್ಹವಾಗಿದ್ದವು. ಆದರೆ ಅದೇ ಮೊದಲು ಫೈಜರ್ ನೀಡಿ ನಂತರ ಆಸ್ಟ್ರಾಜೆನಿಕಾ ನೀಡಿದಾಗ ಈ ರೀತಿಯ ಪ್ರಬಲ ಪ್ರತಿಕ್ರಿಯೆ ಇರಲಿಲ್ಲ. ಈ ಟಿ ಜೀವಕೋಶಗಳು ಆಂಟಿಬಾಡಿಗಳ ಉತ್ಪಾದನೆಯನ್ನು ಪ್ರಚೋದಿಸುತ್ತವೆ. ಅದರ ಮೂಲಕ ಕರೋನಾ ವೈರಸ್ ಸೋಂಕಿನ ಜೀವಕೋಶಗಳನ್ನು ಆಕ್ರಮಣ ಮಾಡುತ್ತವೆ.

ಹಾಗೆಯೇ ಎರಡು ಡೋಸ್‌ಗಳ ಫೈಜರ್ ಲಸಿಕೆಯು ತುಂಬಾ ಹೆಚ್ಚಿನ ಮಟ್ಟದ ಆಂಟಿಬಾಡಿಗಳನ್ನು ಉತ್ಪನ್ನ ಮಾಡಿದ ವಿಷಯ ಅಧ್ಯಯನದಲ್ಲಿ ಕಂಡು ಬಂದ ಇನ್ನೊಂದು ಅಂಶ. ಈ ಎರಡರ ಮಿಶ್ರಣ ಎರಡು ಡೋಸ್‌ಗಳ ಆಸ್ಟ್ರಾಜೆನಿಕಾ ಲಸಿಕೆಗಳಿಗಿಂತ ತುಂಬಾ ಉತ್ತಮ ಫಲಿತಾಂಶ ತೋರಿಸಿದವು.

ಕಳೆದ ಮೇನಲ್ಲಿ ಸ್ಪೇನ್‌ನ ಇನ್ನೊಂದು ಅಧ್ಯಯನವನ್ನು 600 ಸ್ವಯಂ ಸೇವಕರಲ್ಲಿ ಕೈಗೊಳ್ಳಲಾಗಿತ್ತು. ಅದರಲ್ಲಿ ಸಹಿತ ಆಸ್ಟ್ರಾಜೆನಿಕಾ ಲಸಿಕೆಯ ನಂತರ ಫೈರ್ ಲಸಿಕೆ ಕೊಟ್ಟಾಗ, ಎರಡು ಡೋಸ್‌ಗಳ ಆಸ್ಟ್ರಾಜೆನಿಕಾ ಕೊಟ್ಟಾಗ ಉಂಟಾಗುವ ರೋಗ ನಿರೋಧಕ ಶಕ್ತಿಗಿಂತ ಹೆಚ್ಚು ಕಂಡು ಬಂದಿತು.

ಆದರೆ ಈ ದಿಸೆಯಲ್ಲಿ ಲಭ್ಯವಿರುವ ಕ್ಲಿನಿಕಲ್ ಮಾಹಿತಿ ಇನ್ನೂ ಸಾಕಷ್ಟು ಇಲ್ಲ ಎಂದು ತಜ್ಞರ ಅಭಿಪ್ರಾಯ. ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (FDA) ಮತ್ತು ಯುರೋಪಿನ ಔಷಧ ನಿಯಂತ್ರಕರು ಈ ಬಗೆಯ ಮಿಶ್ರಣಕ್ಕೆ ಇನ್ನೂ ಶಿಫಾರಸ್ಸು ಮಾಡಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಈ ತರಹದ ಲಸಿಕೆಯ ಮಿಶ್ರಣದ ವಿರುದ್ಧ ಹೇಳಿಕೆ ಕೊಟ್ಟು, ಸರಿಯಾದ ಭವಿಷ್ಯದ ಆರೋಗ್ಯದ ಮಾಹಿತಿ ಲಭ್ಯವಿಲ್ಲದ ಈ ಸಮಯದಲ್ಲಿ ಇದೊಂದು ಅಪಾಯಕಾರಿ ವಿಧಾನ ಎನ್ನುತ್ತಾರೆ. ಈ ಬಗ್ಗೆ ಜನರು ತಮ್ಮಷ್ಟಕ್ಕೆ ತಾವೇ ನಿರ್ಧಾರ ತೆಗೆದು ಕೊಳ್ಳಬಾರದು. ಸಾಮಾಜಿಕ ಆರೋಗ್ಯಕ್ಕೆ ಸಂಬಂಧಪಟ್ಟ ಸಂಸ್ಥೆಗಳು ಲಭ್ಯ ಮಾಹಿತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳಬಹುದು. ಈ ರೀತಿಯ ಬೇರೆ ಬೇರೆ ವ್ಯಾಕ್ಸಿನ್‌ಗಳನ್ನು ಮಿಶ್ರಣ ಮಾಡುವುದರ ಬಗ್ಗೆ ಹಲವು ಅಧ್ಯಯನಗಳ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಅವುಗಳ ರೋಗ ನಿರೋಧಕ ಶಕ್ತಿ ಮತ್ತು ಸುರಕ್ಷತೆ – ಇವುಗಳನ್ನು ಸರಿಯಾಗಿ ವಿಮರ್ಶಿಸಬೇಕಾಗುತ್ತದೆ – ಎಂದು ಸೌಮ್ಯ ಸ್ವಾಮಿನಾಥನ್‌ರ ಅಭಿಪ್ರಾಯ.ಈ ರೀತಿಯ ಲಸಿಕೆಗಳ ಮಿಶ್ರಣ ಸುರಕ್ಷಿತವೇ ? ಈವರೆಗಿನ ಅಧ್ಯಯನಗಳಲ್ಲಿ ಈ ರೀತಿಯ ಲಸಿಕೆಗಳ ಮಿಶ್ರಣ ತೀವ್ರ ರೀತಿಯ ಪಾರ್ಶ್ವ ಪರಿಣಾಮ ಬೀರುತ್ತದೆ ಎಂಬ ಅಂಶವೇನೂ ಬೆಳಕಿಗೆ ಬಂದಿಲ್ಲ. ಮೊದಲು ತಿಳಿಸಿದ ಬ್ರಿಟಿಷ್ ಅಧ್ಯಯನವು ಕಡಿಮೆ ಪ್ರಮಾಣ ಅಥವಾ ಮಧ್ಯಮ ಪ್ರಮಾಣದ ಪಾರ್ಶ್ವ ಪರಿಣಾಮ ಬರುತ್ತದೆ ಎನ್ನುತ್ತದೆ.

ಮತ್ತೊಂದು ಅಧ್ಯಯನ COM. CoV ಅಧ್ಯಯನದಲ್ಲಿ ಮಿಶ್ರಿತ ಲಸಿಕೆ ತೆಗೆದುಕೊಂಡ ಜನರಲ್ಲಿ 2 ನೇ ಡೋಸ್ ನಂತರ ಶೇ.30-40 ಜನರಲ್ಲಿ ಸ್ವಲ್ಪ ಜ್ವರ ಬಂದರೆ, ಹಾಗೆಯೇ ಬೇರೆ ಬೇರೆ ಲಸಿಕೆಗಳ 2 ಡೋಸ್ ತೆಗೆದುಕೊಂಡವರಲ್ಲಿ ಶೇ.10-20 ಜನರಲ್ಲಿ ಜ್ವರ ಇತ್ತು. ಮಿಶ್ರಿತ ಲಸಿಕೆಗಳಿಂದ ಕರ್ತವ್ಯದಿಂದ ಕೆಲವು ದಿನಗಳು ಹೊರಗಿರಬೇಕಾದ ಪರಿಸ್ಥಿತಿ ಬರುವ ಸಾಧ್ಯತೆ ಇರುವುದರಿಂದ ಆರೋಗ್ಯ ಕಾರ್ಯಕರ್ತರಿಗೆ ಇದನ್ನು ಕೊಡಬೇಕೇ ಬೇಡವೇ ಎಂದು ಯೋಚನೆ ಮಾಡಬೇಕಾಗುತ್ತದೆ ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ವ್ಯಾಕ್ಸಿನ್ ವಿಭಾಗದ ಪ್ರೊಫೆಸರ್ ಡಾ ಮ್ಯಾಥ್ಯೂ ಸ್ನೇಪ್ ಅಭಿಪ್ರಾಯ ಪಡುತ್ತಾರೆ.

ಲಸಿಕೆ ಮಿಶ್ರಣದ ಮುಖ್ಯಾಂಶಗಳು : ರಷ್ಯಾ: ಲಸಿಕೆ ಮಿಶ್ರಣದಲ್ಲಿ ಈ ದೇಶ ಮುಂಚೂಣಿಯಲ್ಲಿದೆ. ಸ್ಪುಟ್ನಿಕ್ ವಿ ಮತ್ತು ಆಸ್ಟ್ರಾಜೆನಿಕಾಗಳ ಮಿಶ್ರಣ ಮಾಡಿದಾಗ ಪಾರ್ಶ್ವ ಪರಿಣಾಮಗಳು ತುಂಬಾ ಕಡಿಮೆ. ಲಸಿಕೆಗಳ ೨ ಡೋಸ್ ನಂತರ ಹೊಸದಾಗಿ ಕರೋನಾ ಬಂದದ್ದೂ ಕಡಿಮೆ. ಈ ಅಧ್ಯಯನದ ವರದಿ ಸದ್ಯವೇ ಹೊರಬರಲಿದೆ.

ಡೆನ್ಮಾರ್ಕ್ : ಮೊದಲ ಡೋಸ್ ಆಸ್ಟ್ರಾಜೆನಿಕಾ,

ಎರಡನೇ ಡೋಸ್ ಫೈಜರ್ ಬಯೋನ್‌ಟೆಕ್ ಅಥವಾ ಮೊಡೆನಾರ್ ಲಸಿಕೆ.

ದಕ್ಷಿಣ ಕೊರಿಯಾ : ಆಸ್ಟ್ರಾಜೆನಿಕಾ ಮೊದಲ ಡೋಸ್

ಎರಡನೇ ಡೋಸ್ ಫೈಜರ್

ಥೈಲ್ಯಾಂಡ್ : ಮೊದಲ ಡೋಸ್ ಚೀನಾದ

ಸೈನೋವ್ಯಾಕ್ , ಎರಡನೇ ಡೋಸ್ ಆಸ್ಟ್ರಾಜೆನಿಕಾ.

ಮೊದಲ ಬಾರಿಗೆ ಚೀನಾದ ಲಸಿಕೆ ಮತ್ತು ಪಶ್ಚಿಮ ದೇಶಗಳ ಲಸಿಕೆಗಳ ಮಿಶ್ರಣ ಇಲ್ಲಿ ನಡೆದಿದೆ.

ಕೆನಡಾ : ಮೊದಲ ಡೋಸ್ ಆಸ್ಟ್ರಾಜೆನಿಕಾ / ಕೋವಿಶೀಲ್ಡ್ , ಎರಡನೇ ಡೋಸ್ mRNA ಲಸಿಕೆ –

ಫೈಜರ್ ಅಥವಾ ಮೊಡೆನಾರ್.

ಸ್ಪೇನ್ : ಆಸ್ಟ್ರಾಜೆನಿಕಾ ಮೊದಲ ಡೋಸ್, ಫೈಜರ್ ಅಥವಾ ಮೊಡೆನಾರ್ ಎರಡನೇ ಡೋಸ್.

ವೈಜ್ಞಾನಿಕವಾಗಿ ಅಧ್ಯಯನಗಳ ಸಂಪೂರ್ಣ ಮಾಹಿತಿ ದೊರಕಿದಾಗ ಲಸಿಕೆಗಳ ಮಿಶ್ರಣದ ಸ್ಪಷ್ಟ

ಚಿತ್ರಣ ನಮಗೆ ದೊರೆಯುತ್ತದೆ.