ವಿಶ್ಲೇಷಣೆ
ಎಂ.ಕೆ.ಭಾಸ್ಕರ ರಾವ್
ಆ ದಿನಗಳಲ್ಲಿ ಹತ್ತಾರು ಸಿನಿಮಾಗಳು ತೆರೆಗೆ ಬಂದಿದ್ದು ಅವೆಲ್ಲವೂ ಹಾಗೇ ಒಣಗಿಹೋದವು. ಸುದೀಪ್ ನಾಯಕನಾಗಿ ನಟಿಸಿದ್ದ ಸ್ಪರ್ಶ ಬಂದ್‌ಗೆ ಬಲಿಯಾದ ಚಿತ್ರಗಳಲ್ಲಿ ಒಂದು. ಚಿತ್ರದ ಓಪನಿಂಗ್ ಕೊಡುವ ಸೂಚನೆ ಆಧರಿಸಿ ಲೆಕ್ಕಾಚಾರ ಮಾಡುವವರ ಪ್ರಕಾರ ಆ ಚಿತ್ರ ಶತದಿನ ಪ್ರದರ್ಶನ ಕಾಣುವ ಸಾಧ್ಯತೆ ಇತ್ತು. ಆದರೆ ಚಿತ್ರ ಮಂದಿರಗಳೇ ಬಾಗಿಲು ಮುಚ್ಚಿದಾಗ ತೆರೆ ಮೇಲಿದ್ದ ಚಿತ್ರಗಳು ಡಬ್ಬಾ ಸೇರಿದವು. ಆ ದಿನಗಳಲ್ಲಿ ಎಷ್ಟು ಜನ ನಿರ್ಮಾಪಕರು ಮನೆ ಮಾರಿಕೊಂಡರೋ, ಸಣ್ಣಪುಟ್ಟ ಸಂಭಾವನೆಯ ಎಷ್ಟೆಲ್ಲ ಜನ ಕಲಾವಿದರು, ತಂತ್ರಜ್ಞರು ಏನೆಲ್ಲ ಆಗಿ ಹೋದರೋ ಯಾರೂ ಗಮನಿಸಲಿಲ್ಲ.
ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುವ ಕಥೆ ಯಾರಿಗೆ ಗೊತ್ತಿಲ್ಲ. ಕಣ್ಮುಚ್ಚುವುದಕ್ಕೆ ಬೆಕ್ಕಿನ ಬಳಿ ಕಾರಣ ಇದೆಯೋ ಇಲ್ಲವೋ
ಗೊತ್ತಿಲ್ಲ. ಆದರೆ ನಾವು ಕಾರಣ ಕಂಡುಕೊಂಡಿದ್ದೇವೆ. ತಾನು ಹಾಲು ಕುಡಿಯುತ್ತಿರುವುದು ಯಾರಿಗೂ ಕಾಣಿಸಬಾರದೆಂದು ಅದು ಕಣ್ಮುಚ್ಚಿಕೊಳ್ಳುವುದಂತೆ!
ತರ್ಕ ಚೆನ್ನಾಗಿದೆ ಎಂದೇ ಇಷ್ಟೂ ವರ್ಷ ಆ ಗಾದೆ ಬಾಳಿದೆ. ಕರ್ನಾಟಕದಲ್ಲಿ ಪ್ರಸ್ತುತ 2 ಘಟನೆಗಳನ್ನು ಗಮನಿಸಿದಾಗ ಥಟ್ಟನೆ ನೆನಪಾಗಿದ್ದು ಈ ಗಾದೆ. ಘಟನೆ ಒಂದು ಸಚಿವ ಕೆ.ಎಸ್. ಈಶ್ವರಪ್ಪ ಸಿಎಂ ವಿರುದ್ಧ ಸೋಟಿಸಿರುವ ಲೆಟರ್ ಬಾಂಬ್. ಎರಡನೆ
ಯದು ಸಿನಿಮಾ ಉದ್ಯಮಕ್ಕೆ ಏಟು ಬೀಳುವ ಕಾರಣದಲ್ಲಿ ಸರಕಾರವನ್ನು ಚಿತ್ರರಂಗ ಮಣಿಸಿದ್ದು. ಒಂದಕ್ಕೆ ಮತ್ತೊಂದು ಸಂಬಂಧವಿಲ್ಲ ನಿಜ. ಆದರೆ ಹಳೆಯ ವಿದ್ಯಮಾನಗಳಿಗೆ ಸಂಬಂಧವಿದೆ, ಎಂದೇ ಈ ನೆನಪು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಹಿಂದೊಮ್ಮೆ ಇದೇ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯ ಮಂತ್ರಿಯೂ ಆಗಿದ್ದವರು. ಅವರಿಬ್ಬರ ನಡುವಿನ ಗೆಳೆತನಕ್ಕೂ ದೀರ್ಘ ಇತಿಹಾಸವಿದೆ ಅದೇ ರೀತಿ ರಾಜಕೀಯ ಹಗೆತನಕ್ಕೂ. ಪಕ್ಷ ಸೋತಾಗಲೂ ಸೈ ಗೆದ್ದಾಗಲೂ ಸೈ ಅದರೊಂದಿಗೆ ತೇಲಿದ ಗೆಳೆಯರು.
ಆದರೆ ಈಶ್ವರಪ್ಪ ಹೇಳಿರುವ ಪ್ರಕಾರ ಅವರ ಇಲಾಖೆಯಲ್ಲಿ ಮುಖ್ಯಮಂತ್ರಿಯವರಿಂದ ಅನಗತ್ಯ ಕಾನೂನು ನಿಯಮಗಳಿಗೆ ವಿರುದ್ಧವೂ ಆಗಿರುವ ಹಸ್ತಕ್ಷೇಪ ನಡೆದಿದೆ. ಈಶ್ವರಪ್ಪ ಪತ್ರ ಬರೆದುದು ಬಹಿರಂಗವಾಗುತ್ತಿದ್ದಂತೆ ಯಡಿಯೂರಪ್ಪ ಬೆಂಬಲಕ್ಕಿ
ರುವ ಕೆಲವು ಸಚಿವರು, ಶಾಸಕರು ಮತ್ತಿತರ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪ ವಿರುದ್ಧ ಶಾಸಕರ ಸಹಿ ಸಂಗ್ರಹವೂ ನಡೆದಿದೆ ಎನ್ನುವುದು ಸುದ್ದಿ. ಯಡಿಯೂರಪ್ಪ ಯಾರದೇ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ವಕೀಲಿ
ಮಾಡುತ್ತಿರುವರಲ್ಲಿ ಎಂ.ಪಿ. ರೇಣುಕಾಚಾರ್ಯ ಅವರದು ಎದ್ದು ಕಾಣಿಸುವ ಮುಖ. ಹಿಂದಿನದನ್ನು ಮರೆತರೆ ಮುಂದೆ ಸಾಗುವುದು ಸುಲಭ ಎನ್ನುವವರೂ ಇದ್ದಾರೆ. ಹಿಂದೆ ತಾವೇ ಮಾಡಿದ್ದನ್ನು ಮರೆತಿರುವ ರೇಣುಕಾಚಾರ್ಯ ನಿಸ್ಸಂಶಯವಾಗಿ ಈ ಸಾಲಿಗೆ ಸೇರಿದವರು.
2008ರಲ್ಲಿ ಯಡಿಯೂರಪ್ಪ ಸಿಎಂ ಆದರು. ಅವರ ಸಂಪುಟದಲ್ಲಿದ್ದ ಶೋಭಾ ಕರಂದ್ಲಾಜೆ ವಿರುದ್ಧ ಕೇಳಿಬಂದ ಆರೋಪ ಇತರೆಲ್ಲ ಸಚಿವರ ಕಾರ್ಯದಲ್ಲಿ ಶೋಭಾ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವುದಾಗಿತ್ತು. ಆಗ ಗಾಲಿ ಜನಾರ್ದನ ರೆಡ್ಡಿ ಮತ್ತು
ರೇಣುಕಾಚಾರ್ಯರೂ ಸಚಿವರಾಗಿದ್ದರು. ಅವರಿಬ್ಬರ ಆಕ್ಷೇಪದ ಗುರಿ ಶೋಭಾ ಕರಂದ್ಲಾಜೆ. ಹೋದಲ್ಲಿ ಬಂದಲ್ಲಿ ಶೋಭಾರ ತಲೆದಂಡಕ್ಕೆ ಒತ್ತಾಯ ಮಾಡುತ್ತಿದ್ದ ಈ ಇಬ್ಬರ ಆಗ್ರಹಕ್ಕೆ ಯಡಿಯೂರಪ್ಪ ಕಡೆಗೂ ಮಣಿದರು.
ಶೋಭಾರನ್ನು ಸಂಕಟದಿಂದಲೇ ಸಂಪುಟದಿಂದ ಕೈಬಿಟ್ಟರು. ಅದಕ್ಕಾಗಿ ಕಣ್ಣೀರನ್ನೂ ಹಾಕಿದರು. ಶೋಭಾರು ಮಾಡುತ್ತಿದ್ದ ರೆನ್ನಲಾದ ಹಸ್ತಕ್ಷೇಪಕ್ಕೆ ಹಲವು ಸಚಿವರು ಬೇಸರಗೊಂಡಿದ್ದರೆನ್ನುವುದು ಆಗ ರೇಣುಕಾಚಾರ್ಯ ಹೇಳುತ್ತಿದ್ದ ಮಾತು. ಈಗ ಈಶ್ವರಪ್ಪ ಸರದಿ. ಅವರು ಬರೆದಿರುವ ಪತ್ರದ ವಿಚಾರದಲ್ಲಿ ರಾಜ್ಯಪಾಲರು ಏನನ್ನೂ ಮಾಡಲು ಸಾಧ್ಯವಿಲ್ಲ. ಪಕ್ಷದ ವರಿಷ್ಟರಿಗೆ ಸದ್ಯ ವಿವಿಧ ರಾಜ್ಯ ಗಳಲ್ಲಿ ನಡೆಯುತ್ತಿರುವ ಚುನಾವಣೆ ಮುಖ್ಯವೇ ಹೊರತೂ ಪತ್ರದ ತಕರಾರಲ್ಲ.
ಈಶ್ವರಪ್ಪ ಹೇಳುವುದನ್ನು ನಂಬಬಹುದಾದರೆ ಅವರೊಂದಿಗೆ ಅನೇಕ ಸಚಿವರೂ ಶಾಸಕರೂ ಸಂಸದರೂ ಇದ್ದಾರೆ. ಹಸ್ತಕ್ಷೇಪದ ಮಾತು ಬಂದಾಗ ಈಶ್ವರಪ್ಪ, ಮುಖ್ಯಮಂತ್ರಿಯ ಹೆಸರನ್ನು ಹೇಳಿದ್ದಾರೆಯೇ ಹೊರತೂ ಅಸಲಿ ವ್ಯಕ್ತಿ ಯಾರೆನ್ನುವುದನ್ನು ಉಲ್ಲೇಖಿಸಿಲ್ಲ ಎನ್ನುವುದು ಗಾಳಿಯಲ್ಲಿ ತೇಲಾಡುತ್ತಿರುವ ಸಂಗತಿ. ಸಿಎಂ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೈವಾಡ ಎಲ್ಲೆ ಮೀರುತ್ತಿದೆ ಎನ್ನುವುದು ಹಲವರ ಆರೋಪ.
ಈಶ್ವರಪ್ಪ ಇಂದಲ್ಲ ನಾಳೆ ಆ ಹೆಸರನ್ನೂ ಹೇಳುತ್ತಾರೆ ಆ ದಿನ ಬಹಳ ದೂರವಿಲ್ಲ. ಈಶ್ವರಪ್ಪ ಮತ್ತು ಯಡಿಯೂರಪ್ಪ ಗೆಳೆಯರು. ಒಂದೇ ತಟ್ಟೆಯಲ್ಲಿ ಊಟ ಮಾಡಿದವರು, ಒಂದೇ ಸ್ಕೂಟರಿನಲ್ಲಿ ಓಡಾಡಿದವರು, ವ್ಯಾಪಾರ ವಹಿವಾಟಿನಲ್ಲಿ ಪಾಲುದಾರರಾಗಿದ್ದವರು. ಇವೆಲ್ಲವೂ ಭೂತ ಕಾಲದ ಮಾತು. ಕ್ರಮೇಣ ಅವರಿಬ್ಬರ ನಡುವೆ ರಾಜಕೀಯ ಪರದೆ ಇಳಿಯಿತು. ಕ್ರಮ ಕ್ರಮೇಣ ತೆಳುವಾಗುವ ಬದಲಿಗೆ ಪರದೆ ದಪ್ಪದಪ್ಪವಾಗಿ ಗೋಡೆಯೇ ಆಯಿತು. ಬಿಜೆಪಿ ಮುಕ್ತ ಕರ್ನಾಟಕ ಮಾಡುವ ಘೋಷಣೆಯೊಂದಿಗೆ ಕೆಜೆಪಿಯನ್ನು ಯಡಿಯೂರಪ್ಪ ಕಟ್ಟಿದ ಬಳಿಕವಂತೂ ಅವರಿಬ್ಬರ ನಡುವಿನ ಹಗೆತನ ಅಳಿಸುವ ಎಲ್ಲ ಮಾರ್ಗಗಳೂ ಮುಚ್ಚಿ ಹೋಯಿತೆಂದೇ ತಿಳಿಯಲಾಯಿತು.
ರಾಜಕೀಯ ಎಂದರೆ ನೀನನಗಿದ್ದರೆ ನಾನಿನಗೆ ನೀತಿಯ ಮೇಲೆ ನಿಂತಿರುವ ವ್ಯವಸ್ಥೆ. ಮೇಲುನೋಟಕ್ಕೆ ಇದು ಕದನ ವಿರಾಮ ಹೇಳುತ್ತದೆ. ಆದರೆ ನೆನಪು ಹಳವಂಡ. ಕೆಜೆಪಿ ಕಾರಣಕ್ಕಾಗಿ ಈಶ್ವರಪ್ಪ ವಿಧಾನ ಸಭಾ ಚುನಾವಣೆಯಲ್ಲಿ ಸೋತರು. ಯಡಿಯೂರಪ್ಪ ಕಾರಣಕ್ಕಾಗಿ ಈಶ್ವರಪ್ಪನವರ ಮಗ ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಆಗಲಿಲ್ಲ. ಬೇಸರ ಅಸಮಾ ಧಾನಕ್ಕೆ ಇನ್ನೇನು ಬೇಕು…? ರೇಣುಕಾಚಾರ್ಯರಿಗೆ ಇದೆಲ್ಲವೂ ಗೊತ್ತಿರುವ ಕಥೆಯೇ.
ಯಡಿಯೂರಪ್ಪನವರಿಗೆ ತಾವು ಕೊಟ್ಟ ಗೋಳು ಅವರಿಗೆ ಮರೆತುಹೋಗಿದೆ. ಬೆಕ್ಕು ಕಣ್ಮುಚ್ಚಿ ಹಾಲನ್ನು ಹೀರಿದಂತೆ. ಅಂದು ಅವರು ಯಡಿಯೂರಪ್ಪ ಜೀವ ಹಿಂಡಿ ಹೈರಾಣ ಮಾಡಿದ್ದರು. ಇಂದು ಅದೇ ಯಡಿಯೂರಪ್ಪ ಪರವಾಗಿ ಈಶ್ವರಪ್ಪ ವಿರುದ್ಧವಾಗಿ ಬ್ಯಾಟಿಂಗ್ ನಡೆಸಿದ್ದಾರೆ. ನೋಡೋಣ ಮುಂದೇನಾಗುತ್ತದೋ…
ರಾಜ್ ಅಪಹರಣದ ಆ ಕಥೆ: ರಾಜ್‌ಕುಮಾರ್ ಅವರನ್ನು ಖೂಳ ವೀರಪ್ಪನ್ ಅಪಹರಿಸಿ 108 ದಿನ ಕಾಲ ಅವರಿಗೆ ವನವಾಸದ ಶಿಕ್ಷೆ ವಿಧಿಸಿದ ವಿದ್ಯಮಾನವನ್ನು ಯಾವ ಕನ್ನಡಿಗರೂ ಮರೆತಿಲ್ಲ. ರಾಜ್ ಅಪಹರಣವಾದುದು 2000ದ ಜುಲೈ 28ರ ಅಮಾವಾಸ್ಯೆ ದಿವಸ. ಕಾಳರಾತ್ರಿಯಲ್ಲಿ ಕ್ರೂರ ಕಾರ್ಯಾಚರಣೆ ನಡೆಸಿದ ವೀರಪ್ಪನ್‌ಗೆ ಬಿದ್ದ ಶಾಪವೆಷ್ಟೋ. ಮುಂದೆ ಪೊಲೀಸ್
ಗುಂಡೇಟಿಗೆ ನೆಗೆದು ಬೀಳುವವರೆಗೂ ಆತನ ಮೇಲೆ ಶಾಪಗಳ ಮಳೆಯೇ ಸುರಿಯಿತು.
ರಾಜ್ ಅಪಹರಣದ ವಾರ್ತೆ ಕಾಳ್ಗಿಚ್ಚಿನಂತೆ ಹರಡಿದ್ದೇ ತಡ, ಏಕದಂ ಸ್ಥಗಿತವಾದುದು ಕನ್ನಡ ಚಿತ್ರೋದ್ಯಮ. ಚಿತ್ರೀಕರಣವೂ
ಸೇರಿದಂತೆ ನಿರ್ಮಾಣದ ಸಕಲ ವಿಭಾಗಗಳೂ ಅಕ-ಇಕ ಎನ್ನುವುದರೊಳಗಾಗಿ ಬಂದ್ ಆದವು. ರಾಜ್ಯದ ಉದ್ದಗಲಕ್ಕೆ ಹಳ್ಳಿ ಹಳ್ಳಿಗಳಲ್ಲೂ ನಡೆಯುತ್ತಿದ್ದ ಸಿನಿಮಾ ಪ್ರದರ್ಶನ ರದ್ದಾಗಿ ಟಾಕೀಸುಗಳ ಬಾಗಿಲಿಗೆ ಬೀಗ ಬಿತ್ತು.
ಎಲ್ಲರೂ ರಾಜ್‌ಗೆ ಬಂದೊದಗಿದ ಸ್ಥಿತಿಗೆ ಮಮ್ಮಲ ಮರುಗಿದವರೇ. ರಾಜ್ ಅವರ ಶೀಘ್ರ ಬಿಡುಗಡೆಗೆ ಕರ್ನಾಟಕ ಮಾತ್ರವೇ ಅಲ್ಲ ತಮಿಳುನಾಡು ಸರಕಾರದ ಮೇಲೂ ಸಹಜ ಒತ್ತಡ ಬಿತ್ತು. ಕರ್ನಾಟಕ ಸರಕಾರ ಘೋಷಿತ ಕಾರ್ಯಾಚರಣೆ, ಅಘೋಷಿತ
ಕಾರ್ಯಾಚರಣೆ ಹೀಗೆ ಎರಡು ಬಗೆಯಲ್ಲಿ ರಾಜ್‌ರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಗಂಭೀರ ನೆಲೆಯಲ್ಲೇ ಮಾಡಿತು. ಸರಕಾರ ಮಾಡುವುದೆಲ್ಲವನ್ನೂ ಮಾಡುತ್ತದೆ ಆದರೆ ಅನಿರ್ದಿಷ್ಟ ಅವಧಿಗೆ ಉದ್ಯಮದ ಬಾಗಿಲು ಮುಚ್ಚುವುದು ಬೇಡ ಎಂಬ ಮನವಿ ಯಾರ ಕಿವಿಗೂ ಮುಟ್ಟಲಿಲ್ಲ.
ಆ ದಿನಗಳಲ್ಲಿ ಹತ್ತಾರು ಸಿನಿಮಾಗಳು ತೆರೆಗೆ ಬಂದಿದ್ದು ಅವೆಲ್ಲವೂ ಹಾಗೇ ಒಣಗಿಹೋದವು. ಸುದೀಪ್ ನಾಯಕನಾಗಿ ನಟಿಸಿದ್ದ ಸ್ಪರ್ಶ ಬಂದ್‌ಗೆ ಬಲಿಯಾದ ಚಿತ್ರಗಳಲ್ಲಿ ಒಂದು. ಚಿತ್ರದ ಓಪನಿಂಗ್ ಕೊಡುವ ಸೂಚನೆ ಆಧರಿಸಿ ಲೆಕ್ಕಾಚಾರ ಮಾಡುವವರ
ಪ್ರಕಾರ ಆ ಚಿತ್ರ ಶತದಿನ ಪ್ರದರ್ಶನ ಕಾಣುವ ಸಾಧ್ಯತೆ ಇತ್ತು. ಆದರೆ ಚಿತ್ರ ಮಂದಿರಗಳೇ ಬಾಗಿಲು ಮುಚ್ಚಿದಾಗ ತೆರೆ ಮೇಲಿದ್ದ ಚಿತ್ರಗಳು ಡಬ್ಬಾ ಸೇರಿದವು. ಆ ದಿನಗಳಲ್ಲಿ ಎಷ್ಟು ಜನ ನಿರ್ಮಾಪಕರು ಮನೆ ಮಾರಿಕೊಂಡರೋ, ಸಣ್ಣಪುಟ್ಟ ಸಂಭಾವನೆಯ ಎಷ್ಟೆಲ್ಲ ಜನ ಕಲಾವಿದರು, ತಂತ್ರಜ್ಞರು ಏನೆಲ್ಲ ಆಗಿ ಹೋದರೋ ಯಾರೂ ಗಮನಿಸಲಿಲ್ಲ.
ಆ ದಿನಗಳಲ್ಲಿ ಎಚ್.ಡಿ. ಕುಮಾರಸ್ವಾಮಿಯವರು ಪ್ರತ್ಯಕ್ಷ ರಾಜಕಾರಣದಲ್ಲಿರಲಿಲ್ಲ. ಪ್ರದರ್ಶಕ/ ವಿತರಕ ಆಗಿದ್ದ ಅವರು ಅನಿರ್ದಿಷ್ಟ ಅವಽಗೆ ಚಿತ್ರೋದ್ಯಮ ಬಂದ್ ಮಾಡುವ ನೀತಿಯನ್ನು ಪ್ರಶ್ನಿಸಿದ ಏಕೈಕ ಉದ್ಯಮಿ. ಎಷ್ಟೆಲ್ಲ ಜನರ ನಿತ್ಯ ಜೀವನಕ್ಕೂ ತತ್ವಾರ ತರುವ ಈ ವಿಪರೀತ ಬೇಡ ಎಂದು ಅವರು ಮಾಡಿಕೊಂಡ ಮನವಿಗೆ ಬಹುರಂಗದಲ್ಲಿ ಯಾರೂ ಸ್ಪಂದಿಸಲಿಲ್ಲ.
ಯಾವುದೋ ಅವ್ಯಕ್ತ ಭಯದಲ್ಲಿ ಎಲ್ಲರ ಬಾಯೂ ಬಂದ್ ಆಗಿ ಹೋಯಿತು. ಈಗ ಈ ಘಟನೆ ನೆನಪಾಗಲು ಕಾರಣ ಕಳೆದೊಂದು ವರ್ಷಕ್ಕೂ ಹೆಚ್ಚು ಸಮಯದಿಂದ ವಕ್ಕರಿಸಿ ಕಾಡುತ್ತಿರುವ ಕರೋನಾ ಎಂಬ ಖೂಳ ಮಾಯಾವಿ ರಕ್ಕಸ. ಈ ಮಾಯಾವಿ
ಚಿತ್ರೋದ್ಯಮವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಚಿತ್ರ ಮಂದಿರಗಳಲ್ಲಿ ನೂರಕ್ಕೆ ನೂರರಷ್ಟು ಪ್ರವೇಶಕ್ಕೆ ಸರಕಾರ ಅವಕಾಶ ಕೊಡಬೇಕೆಂಬ, ಅಷ್ಟರ ಮಟ್ಟಿಗೆ ನಿಯಮವನ್ನು ಸಡಿಲಿಸಬೇಕೆಂಬ ಚಿತ್ರೋದ್ಯಮದ ಮನವಿಯನ್ನು ಕೆಲವು ದಿನಗಳ ಮಟ್ಟಿಗಾದರೂ ಸರಕಾರ ಒಪ್ಪಿದೆ. ನಂತರ ಏನಾಗುತ್ತದೋ ಆ ಮಾಯಾವಿಯೇ ಬಲ್ಲ. ಒಂದು ಮಾತಂತೂ ಸತ್ಯ, ಸರ್ಕಾರದ
ಸಡಿಲಗೊಂಡಿರುವ ನಿಲುವು ಚಿತ್ರೋದ್ಯಮಕ್ಕೆ ಬಲವಾಗುವ ಸಾಧ್ಯತೆಯೇ ಹೆಚ್ಚು.
ಸರಕಾರದ ಮೇಲೆ ಒತ್ತಡ ಹೇರಿರುವ ಉದ್ಯಮಿಗಳು ಕೋಟ್ಯಂತರ ಹೂಡಿಕೆ ಮಾಡಿರುವ ಚಿತ್ರಗಳಿಗೆ ಆಗುವ ಅನ್ಯಾಯಕ್ಕೆ ಯಾರು ಹೊಣೆ ಎಂಬ ಪ್ರಶ್ನೆಯನ್ನು ಸರಕಾರಕ್ಕೆ ಹಾಕಿದ್ದಾರೆ. ಕೆಲವರ ಪ್ರಕಾರ ನಷ್ಟವನ್ನು ಸರಕಾರವೇ ಭರಿಸಿಕೊಡಬೇಕು. ಕರೋನಾ ಇರುವುದು ಕೇವಲ ಚಿತ್ರಗಳಿಗೆ ಮಾತ್ರವೇನಾ ಎಂಬ ಪ್ರಶ್ನೆಯನ್ನೂ ಕೆಲವರು ಹಾಕಿದ್ದಾರೆ. ಕೇಂದ್ರ ಸರಕಾರದ ಮಾರ್ಗಸೂಚಿ
ಯನ್ನು ತನ್ನ ಮುಂದೆಯೇ ಇಟ್ಟುಕೊಂಡಿರುವ ಸರಕಾರ ಉದ್ಯಮದ ಜೋರು ಗಂಟಲಿಗೆ ಬೆದರಿದಂತಿದೆ.
ಯಾವುದೇ ಉದ್ಯಮಕ್ಕೆ ಆಪತ್ತು ಎದುರಾಗುವಾಗ ಅದು ನೊಟೀಸ್ ಕೊಟ್ಟು ಬರುವುದಿಲ್ಲ. ರಾಜ್‌ರನ್ನು ಖೂಳ ಅಪಹರಿಸಿದ್ದು ಸಿಡಿಲು ಅಪ್ಪಳಿಸಿದಂಥ ಘಟನೆ. ಅದೂ ಕೂಡಾ ಏಕಾಏಕಿಯಾಗೇ ನಡೆದುಹೋಯಿತು. ಈಗಲೂ ಅಷ್ಟೆ ಕರೋನಾ ಎರಡನೇ ಅಲೆ ಅಪ್ಪಳಿಸಿದೆ. ಬರಬಹುದು ಬರಬಹುದು ಎಂಬ ಎಚ್ಚರಿಕೆಗೆ ನಾವು ಬಗ್ಗಲಿಲ್ಲ ಜಗ್ಗಲಿಲ್ಲ. ಸಾವಿನ ರೂಪಕವಾಗಿ ನಮ್ಮ
ಮುಂದೆ ನಿಂತಿರುವ ಕರೋನಾ ವಿಚಾರದಲ್ಲಿ ಜಾಗರೂಕತೆ ಎಷ್ಟಿದ್ದರೂ ಸಾಲದು. ಚಿತ್ರ ಮಂದಿರ ಗಳಲ್ಲಿ ಕಿಕ್ಕಿರಿದು ಜನ ತುಂಬಿದರೆ ಏನಾಗಬಹುದು…? ಉತ್ತರ ಅವರವರ ಊಹೆಗೆ ಬಿಟ್ಟಿದ್ದು.
ಒಂದು ಹಂತದಲ್ಲಿ ಉದ್ಯಮಕ್ಕೆ ಬೀಗ ಹಾಕಿ, ಈಗ ಈ ಭಯಾನಕ ಸ್ಥಿತಿಯಲ್ಲಿ ಬೀಗ ಹಾಕಬಾರದೆನ್ನುವ ವಾದವನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕು…? ಕಾಲಚಕ್ರ ಎನ್ನುತ್ತಾರೆ. ಆದರೆ ಚಕ್ರಕ್ಕೆ ಕಾಲು ಹೊರಗಿರದೆ ಒಳಗೇ ಇರುತ್ತದೆ.