Thursday, 12th December 2024

ಪಬ್ಜಿ ಮಾರುವೇಷದಲ್ಲಿ ಪ್ರವೇಶ ಪಡೆಯುತ್ತಿದೆಯೇ ?

ಅಭಿಮತ

ಉಮಾ ಮಹೇಶ್‌ ವೈದ್ಯ

ಆನ್‌ಲೈನ್ ಗೇಮ್‌ಗಳೆಂದರೆ ಆಬಾಲ ವೃದ್ಧರಿಗೂ ಅಚ್ಚು ಮೆಚ್ಚು. ಅವುಗಳಲ್ಲಿ ಕೆಲವು ಕೌಶಲವೃದ್ಧಿಗೆ ಸಹಾಯಕಾರಿಯಾದರೆ, ಕೆಲವು ಮಾಹಿತಿ ನೀಡುವ ಹಾಗೂ ಕಾಲ ಸೆವೆಸಲು ಅನುಕೂಲಕಾರಿಯಾಗಿವೆ. ಆದರೆ, ಕೆಲ ಕಂಪನಿಗಳು ಹಣ ಬಾಚಿಕೊಳ್ಳುವ ದುರಾಸೆಯಿಂದ ಈ ಆನ್‌ಲೈನ್ ಆಟಗಳನ್ನು ಒಂದು ಚಟವನ್ನಾಗಿಸಿಕೊಂಡು ಸದಾ ಕಾಲ ಮೊಬಾಯಿಲ್ ಅಥವಾ ಲ್ಯಾಪ್‌ ಟಾಪ್‌ನಲ್ಲಿ ನಿಗದಿಪಡಿಸಿದ ಹಣ ನೀಡಿ ಮನೆ ಮಠಗಳನ್ನು ಮರೆತು ಆಟದಲ್ಲಿಯೇ ಮುಳಿಗಿ ಹೋಗಿ, ತಮ್ಮದೇ ಕಲ್ಪನಾ ಜಗತ್ತನ್ನು ಸೃಷ್ಟಿಸಿಕೊಂಡು ಅದರಲ್ಲಿಯೇ ಜೀವಿಸುವಂತ ಭ್ರಮಾ ಲೋಕವನ್ನುಂಟು ಮಾಡಿ, ಜನರ ಜೀವನ ಜತೆ ಆಟವನ್ನಾಡು
ತ್ತಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ.

ಇಂಥ ಆಟಗಳಲ್ಲಿ ಪ್ರಮುಖವಾದುದು ಪಬ್ಜಿ ಮೊಬಾಯಿಲ್ ಇಂಡಿಯಾ (PUBG mobile India). ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು, ಅದೇನೆಂದರೆ, ಒಬ್ಬ ಸಣ್ಣ ವಯಸ್ಸಿನ ಯುವಕ ಸೈನಿಕನಂತೆ ಸಮವಸ ಧರಿಸಿಕೊಂಡು, ಕೈಯಲ್ಲಿ ಆಟಿಕೆಯ ಒಂದು ಕೋವಿ ಹಿಡಿದುಕೊಂಡು ಯಾವುದೋ ಚಿಂತೆಯಲ್ಲಿ ಇರುವಂತೆ ತನ್ನ ಊರಿನ ಬೀದಿಯಲ್ಲಿ ನಡೆದುಕೊಂಡು ಹೋಗುವಾಗ, ವಿಡಿಯೊ ಮಾಡಿಕೊಂಡ ವ್ಯಕ್ತಿಗಳು ಆತನ ಈ ವೇಷದ ಬಗ್ಗೆ ಪ್ರಶ್ನೆ ಕೇಳಿದಾಗ ಆತ ಹೇಳುವುದು ‘ತಾನು ಪಬ್‌ಜಿ ಪ್ರೋ  ಆಟಗಾರ, ತನಗೆ ಕೊಲ್ಲಲು ಜನ ಬರುತ್ತಿದ್ದು, ತಾನು ರಕ್ಷಿಸಿಕೊಳ್ಳಲು ಹಾಗೂ ಅವರನ್ನು ಹುಡಿಕಿ ಕೊಲ್ಲಲು ಹೊರಟಿದ್ದಾಗಿ ಹೇಳಿದ. ಈ ಯುವಕನ ಮಾನಸಿಕ ಸ್ಥಿತಿಯನ್ನು ಕಂಡ ಹಲವರು ಮರುಕ ಪಟ್ಟರೆ, ಇನ್ನು ಕೆಲವರು ನಗೆಯಾಡಿದ್ದು ದಿಟ.

ಆದರೆ, ಇಲ್ಲಿ ಗಂಭೀರವಾಗಿ ಯೋಚಿಸುವ ಅಂಶವೆಂದರೆ ಯೌವನದ ಸವಿ ಸಮಯದಲ್ಲಿ ಯುವಕನೊಬ್ಬ ಈ ಪಬ್ಜಿ ಎನ್ನುವ
ಆನ್‌ಲೈನ್ ಆಟಕ್ಕೆ ಅಂಟಿಕೊಂಡು, ತನ್ನದೇ ಭ್ರಮಾ ಲೋಕ ಸೃಷ್ಟಿಸಿಕೊಂಡು ಭವಿಷ್ಯವನ್ನು ನರಕ ಮಾಡಿಕೊಂಡಿರುವುದು. ಇದು ಒಬ್ಬ ವ್ಯಕ್ತಿಯ ಕಥೆಯಲ್ಲ, ಇಂಥ ಸಾವಿರಾರು ಪ್ರಕರಣಗಳನ್ನು ನಾವು ಸಮಾಜದಲ್ಲಿ ಕಾಣುತ್ತಿದ್ದೇವೆ.

ಅಪ್ರಾಪ್ತ ಮಕ್ಕಳೇ ಈ ತರಹದ ಆನ್‌ಲೈನ್ ಆಟಗಳಿಗೆ ಬಲಿಯಾಗುವರು. ತಂಡಗಳನ್ನು ಕಟ್ಟಿಕೊಂಡು, ನೇರ ಪ್ರಸಾರದಡಿ ಎದುರು ಬದಿರು ನಿಂತು ಯುದ್ಧ ಮಾಡುವಂತೆ ಈ ಆನ್‌ಲೈನ್ ಆಟವನ್ನಾಡುತ್ತ, ಪರಸ್ಪರರನ್ನು ಈ ಆಟದಲ್ಲಿ ರಕ್ಷಿಸುವ ಹಾಗೂ ಕೊಲ್ಲುವ ಆಟವನ್ನಾಡುತ್ತ ಓದು ಬರಹ, ಶಾಲೆ, ವಿದ್ಯಾರ್ಥಿ ಜೀವನಕ್ಕೆ ತಿಲಾಂಜಲಿಯನಿಟ್ಟು, ಈ ಆಟದಲ್ಲಿಯೇ ಪೂರ್ಣವಾಗಿ ತೊಡಗಿಸಿಕೊಂಡು, ತನ್ನ ಎದುರು ತಂಡದ ವಿರುದ್ಧ ದ್ವೇಷ ಸಾಧಿಸುತ್ತ ಹೇಗಾದರು ಮಾಡಿ ಅವರನ್ನು ಕೊಂದು ತಾನು ಆಟ ಗೆಲ್ಲಬೇಕು ಎನ್ನುವ ತವಕದಲ್ಲಿ ತಂಟೆ ತಕರಾರುಗಳನ್ನು ಮಾಡಿಕೊಳ್ಳುವ, ಆಟಕ್ಕೆ ಬೇಕಾಗುವ ಹಣವನ್ನು ಹೊಂದಿಸಿಕೊಳ್ಳಲು ಕಳ್ಳತನದಂತಹ ಅಪರಾಧಗಳಲ್ಲಿ ತೊಡಗಿಕೊಳ್ಳುವ, ಹಣ ನೀಡದ ವ್ಯಕ್ತಿಗಳನ್ನು ಕೊಲೆ ಮಾಡಿದ ಘಟನೆಗಳನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ.

ಹಾಗಿದ್ದಲ್ಲಿ ಈ ಪಬ್ಜಿ ಆಟದಿಂದ ನಮಗಿರುವ ಲಾಭವಾದರೂ ಏನು? ಎಂದು ಮಾನಸಿಕ ಆರೋಗ್ಯ ತಜ್ಞರನ್ನು ಕೇಳಿದರೆ, ಅವರಿಂದ ಬರುವ ಒಂದೇ ಉತ್ತರ, ಸದಾ ಕಾಲ ವ್ಯಕ್ತಿಯನ್ನು ಈ ಆಟದಲ್ಲಿ ಮುಳಿಗಿರುವಂತೆ ಪ್ರಚೋದಿಸುವ ಆಟ ಇದಾಗಿದ್ದು, ಆ ವ್ಯಕ್ತಿ ಕಾಲ್ಪನಿಕ ಜಗತ್ತನ್ನೇ ನಿಜವಾದ ಜಗತ್ತು ಎಂದು ಅದರಲ್ಲಿ ಜೀವಿಸುತ್ತ, ತನ್ನ ಸಹಜವಾದ ನಡುವಳಿಕೆಗಳು, ಜೀವನ ಪದ್ಧತಿ ಹಾಗೂ ಭವಿಷ್ಯದ ಬಗ್ಗೆ ಕಿಂಚಿತ್ತು ಕಾಳಜಿ ಮಾಡದೇ, ಹಠಮಾರಿ ವ್ಯಕ್ತಿತ್ವದ ಜತೆ ಹಿಂಸಾ ಪ್ರವೃತ್ತಿಯನ್ನು ಸದಾ ಜಾಗೃತವಾಗಿರಿಸುವ ಆಟವಾಗಿದೆ. ಈ ಆಟದಿಂದ ಸಮಾಜಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದು.

ಈ ಪಬ್ಜಿ ಆಟದ ಪರಿಣಾಮವನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ, ದಿನಪತ್ರಿಕೆಗಳಲ್ಲಿ ಈ ಆಟವನ್ನು ನಿಷೇಧಿಸಬೇಕೆಂಬ ಅಭಿಯಾನಗಳು ನಡೆದವು. ಆದರೆ, ಸರಕಾರಗಳು ಇತ್ತ ಗಮನಕೊಡದೇ ಇದ್ದ ಹಿನ್ನೆಲೆಯಲ್ಲಿ ಪಬ್ ಜಿ ಆಟವನ್ನು ರೂಪಿಸಿ ಮಾರುಕಟ್ಟೆಗೆ ಬಿಟ್ಟ ಮೆ. ಪಬ್ಜಿ ಇಂಡಿಯಾ ಪ್ರೈ ಲಿ. ಕಂಪನಿ ಎಂಬ ಚೈನಾ ದೇಶದ ಸಂಸ್ಥೆ ತಾನು ಯಾರ ನಿಯಂತ್ರಣಕ್ಕೂ ಒಳಪಟ್ಟಿಲ್ಲ ಎಂಬ ಹುಮ್ಮಸ್ಸಿನಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸತೊಡಗಿತು.

ಆದರೆ, ಪಬ್‌ಜಿ ಆನ್‌ಲೈನ್ ಆಟ ಹೊರನೋಟಕ್ಕೆ ಮನರಂಜನೆಗಾಗಿ ರೂಪಿಸಿದ ಒಂದು ಅಪ್ಲಿಕೇಷನ್ ಎಂದು ಕಂಡುಬಂದರೆ, ಒಳನೋಟದಲ್ಲಿ ಭಾರತೀಯರ ಖಾಸಗಿ ಮಾಹಿತಿಗಳ ದತ್ತಾಂಶಗಳನ್ನು ಸಂಗ್ರಹಿಸಿ ಅವುಗಳನ್ನು ಚೀನಾ ದೇಶದ ಬಳಕೆಗಾಗಿ ಪೂರೈಸುವ ಹುನ್ನಾರ ಕಂಡು ಬಂದಾಗ, ದೇಶದ ಭದ್ರತೆ, ಸುರಕ್ಷತೆ ಹಾಗೂ ಆರ್ಥಿಕ ಸ್ಥಿತಿಗೆ ಗಂಭೀರ ಪರಿಣಾಮವನ್ನುಂಟು ಮಾಡುವುದನ್ನು ಅರಿತ ಭಾರತ ಸರಕಾರ 02 ಸೆಪ್ಟೆಂಬರ್ 2020ರಂದು ಮಾಹಿತಿ ಮತ್ತು ತಂತ್ರಜ್ಞಾನದ ಅಧಿ ನಿಯಮ 2000 ರಡಿ ಪಬ್ಜಿ ಆಟವನ್ನು ಒಳಗೊಂಡಂತೆ 118 ಆಟಗಳ ಅಪ್ಲಿಕೇಷನ್‌ಗಳನ್ನು ನಿಷೇಧಿಸಿ, ಆದೇಶಿಸಿದ್ದು ನಮಗೆಲ್ಲ ಗೊತ್ತಿರುವ ಸಂಗತಿ.

ಅನೇಕ ವರ್ಷಗಳ ತಪಸ್ಸಿನ ಫಲ ದೊರಕಿತು ಎಂದು ನಿಷೇಧದ ಪರ ಹೋರಾಟಗಾರರು ನಿಟ್ಟಿಸಿರು ಬಿಟ್ಟರು. ‘ಹೋದೆಯಾ ಪಿಶಾಚಿ ಎಂದರೆ, ಬಂದೆ ಗವಾಕ್ಷಿಯಲ್ಲಿ’ ಎನ್ನುವಂತೆ ಈಗ ನಿಷೇಧಿತ ಪಬ್ಜಿ ಮೊಬಾಯಿಲ್ ಇಂಡಿಯಾ ಆನ್‌ಲೈನ್ ಆಟ ರೂಪಾಂತರಗೊಂಡು ಮತ್ತೊಮ್ಮೆ ನಮ್ಮ ದೇಶದ ಒಳಗೆ ಹಿತ್ತಲು ಬಾಗಿಲನಿಂದ ಪ್ರವೇಶ ಪಡೆಯುತ್ತಿದೆಯೇ ಎಂಬ ಸಂಶಯ
ಕಾಡತೊಡಗಿದೆ. ಇದಕ್ಕೆ ಕಾರಣ ಬ್ಯಾಟಲ್ ಗ್ರೌಂಡ್ ಮೊಬಾಯಿಲ್ ಇಂಡಿಯಾ ಹೆಸರಿನಲ್ಲಿ ಪಬ್‌ಜಿ ಆಟವನ್ನು ಯಥಾವತ್ತಾಗಿ ಹೋಲುವ ಆಟವೊಂದು https://www.battlegroun-dsmobileindia.com/  ಜಾಲತಾಣದಲ್ಲಿ ಕಂಡುಬರುತ್ತಿದ್ದು, ಈ ಆನ್‌ಲೈನ್ ಆಟಕ್ಕೆ ನೋಂದಾಯಿಸಿಕೊಳ್ಳಲು ಸಾರ್ವಜನಿಕರಿಗೆ ಆಹ್ವಾನ ನೀಡುತ್ತಿದೆ.

KRAFTON ಎನ್ನುವ ಸಂಸ್ಥೆ ಈ ಬ್ಯಾಟಲ್ ಗ್ರೌಂಡ್ ಇಂಡಿಯಾ ಮೊಬಾಯಿಲ್ ಗೇಮ್ ಅಪ್ಲಿಕೇಷ್ ಅನ್ನು ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಹ ಲಭ್ಯವಿದ್ದು, ಮತ್ತೆ ತಮ್ಮ ಹಿಂದಿನ ಅಟ್ಟಹಾಸ ಮೆರೆಯಲು ತೆರೆ ಮರೆಯಲ್ಲಿ ಹೊಂಚು ಹಾಕುತ್ತಿರುವು ದಂತು ನಿಜ. ಮೊದಲಿನ ಪಬ್ಜಿ ಮೊಬಾಯಲ್ ಇಂಡಿಯಾ ಸಂಸ್ಥೆ, ಚೀನಾ ದೇಶದ ಸಂಸ್ಥೆ ಹಾಗೂ ಮೊಬಾಯಿಲ್ ಅಪ್ಲಿಕೇಷನ್ ಎನ್ನುವ ಕಾರಣದ ಮೇಲೆ ಸಾರ್ವಜನಿಕರಿಂದ ಪ್ರತಿಭಟನೆಗೆ ಒಳಗಾಗಿ ನಿಷೇಧಗೊಂಡಿದ್ದರಿಂದ ಈಗ ಈ ಬ್ಯಾಟಲ್ ಗ್ರೌಂಡ್‌ ಇಂಡಿಯಾ ಮೊಬಾಯಿಲ್ ಗೇಮನ್ನು ಕ್ರಫ್ಟಾನ್ ಸಂಸ್ಥೆಯ ಮೂಲಕ ಚೀನಾ ದೇಶದ ಸಂಸ್ಥೆಗಳು ಪರೋಕ್ಷವಾಗಿ ಯಾರಿಗೂ ಗೊತ್ತಾಗದಂತೆ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ ಎಂದು ಒಂದು ವಾದವಾದರೆ, ಕ್ರಫ್ಟಾನ್ ಸಂಸ್ಥೆ ಕೋರಿಯನ್ ದೇಶದ ಸಂಸ್ಥೆ ಯಾಗಿದ್ದು, ಅದು ಚೀನಾ ದೇಶಕ್ಕೆ ಸಂಬಂಧಿಸಿದ್ದಲ್ಲ.

ಆದರೆ, ಚೀನಾ ದೇಶದ ಕಂಪನಿಗಳು ಹಣ ಹೂಡಿರಬಹುದು ಎಂದು ಸಂಶಯ ಹೊಂದಿ ವಾದಿಸುವವರೂ ಇದ್ದಾರೆ. ಮೇಲ್ನೋಟಕ್ಕೆ ನೋಡುವುದಾದರೆ, ಕ್ರಫ್ಟಾನ್ ಕಂಪನಿಯವರ ಈ ಬ್ಯಾಟಲ್ ಗ್ರೌಂಡ್ ಇಂಡಿಯಾ ಮೊಬಾಯಿಲ್ ಗೇಮ್ ಭಾರತ ದೇಶದ್ದಂತೂ ಅಲ್ಲ ಎನ್ನುವುದು ಸ್ಪಷ್ಟ. ಹೆಸರೇ ಹೇಳುವಂತೆ ಭಾರತದ ಯುದ್ಧ ಭೂಮಿ ಆಟದ ಹೆಸರಿನಲ್ಲಿ, ಮನರಂಜನೆಯ ನೆಪದಲ್ಲಿ ಸಾರ್ವಜನಿಕರನ್ನು ಮತ್ತದೇ ಪಬ್ ಜಿ ಮೊಬಾಯಿಲ್ ಇಂಡಿಯಾ ಗೇಮ್ ತರಹ ಒಂದು ದುರಭ್ಯಾಸವನ್ನು ಉಂಟು ಮಾಡುವ, ಮತ್ತದೇ ನಶಾ ಲೋಕದಲ್ಲಿ ಇರುವಂತೆ ಕಾಲ್ಪನಿಕ ಜಗತ್ತನ್ನು ಸೃಷ್ಟಿಸಿಕೊಂಡು, ಭವಿಷ್ಯವನ್ನು ನರಕವನ್ನಾಗಿಸುವ ಆಟವೆಂದರೆ ತಪ್ಪಾಗಲಿಕ್ಕಿಲ್ಲ.

ಇಲ್ಲಿ ವಿಚಿತ್ರವಾದ ವಿಷಾದನೀಯ ಸಂಗತಿಯೆಂದರೆ, ಭಾರತ ಸರಕಾರ ತನ್ನ ಅಧಿಕಾರ ಬಳಸಿಕೊಂಡು, ಜಾರಿ ಇರುವ ಕಾನೂನಿನ ಮೂಲಕ ಇಂಥ ಅಪಾಯಕಾರಿಯಾದ ಮೊಬಾಯಿಲ್ ಆಟಗಳನ್ನು ನಿಷೇಧಿಸಿದರೂ ಅದಕ್ಕೆ ಜಗ್ಗದೇ ಮತ್ತೊಂದು ಹೆಸರಿನಲ್ಲಿ,
ಬೇರೆ ಸಂಸ್ಥೆಯ ಮೂಲಕ ನಿಷೇಧಿತ ಆಟವೊಂದು ಮತ್ತೆ ಭಾರತದಲ್ಲಿ ಪ್ರವೇಶ ಪಡೆದು ಸಕಾರದ ಆದೇಶಕ್ಕೂ, ಕಾನೂನಿಗೂ ಸೆಡ್ಡು ಹೊಡೆಯುತ್ತಿರುವುದು.

ನಮ್ಮ ಕಾನೂನುಗಳು ಒಂದು ಸಂಸ್ಥೆಯ ವಾಣಿಜ್ಯ ತಂತ್ರಗಳನ್ನು ತಡೆಲಾರದಷ್ಟು ದುರ್ಬಲವಾದವಾ? ಎಂದು. ಆನ್‌ಲೈನ್ ಗೇಮ್‌ಗಳು ಬೇಡವೆಂದಲ್ಲ, ಆದರೆ, ಅವುಗಳು ಆಟಗಾರನ ಮನೋರಂಜನೆಗೆ ಹಾಗೂ ವಾಸ್ತವಿಕ ಬದುಕನ್ನು ಮತ್ತಷ್ಟು ಸುಂದರವಾಗಿಸುವಂತೆ, ಉಲ್ಲಾಸ ಉತ್ಸಾಹಗಳನ್ನು ನೀಡುವಂತಿರಬೇಕು, ಜತೆಗೆ ವ್ಯಕ್ತಿತ್ವವನ್ನು ವಿಕಸಿಸುವ, ಕುಶಲತೆಯನ್ನು ವೃದ್ಧಿಗೊಳಿಸುವ, ಪರಿಣಿತ ಪ್ರಮಾಣವನ್ನು ಧನಾತ್ಮಕವಾಗಿ ಹೆಚ್ಚಿಸುವಂತಿರಬೇಕು, ಅಂದಾಗಲೇ ನೈಜ ಆಟಗಳಂತೆ ಈ ಡಿಜಿಟಲ್ ಆಟಗಳೂ ರಚನಾತ್ಮಕವಾಗುತ್ತವೆ.

ಆದರೆ, ಇಂಥ ಆಟಗಳ ಮೂಲಕ ತಮ್ಮ ಮರೆ ಮಾಚಿದ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಧನದಾಹಿ ವ್ಯಾಪಾರಿ ಕಂಪನಿ ಗಳಿಂದ ಸಾರ್ವಜನಿಕರು ದುರಭ್ಯಾಸಕ್ಕೆ ದಾಸರಾಗಿ, ಹಿಂಸಾ ಪ್ರವೃತ್ತಿ ಹೆಚ್ಚಿಸಿಕೊಂಡು, ಪರಸ್ಪರ ಧೂಷಣೆ ಹಾಗೂ ಹಗೆ
ಸಾಧಿಸುತ್ತ, ಕಲ್ಪನಾ ಜಗತ್ತೇ ನೈಜ ಜಗತ್ತೆಂದು ಭಾವಿಸಿ, ಯಾವುದೇ ಲಂಗು ಲಗಾಮಿಲ್ಲದ ತಮ್ಮ ವರ್ತನೆಗಳಿಂದ ಕೇವಲ ತಮ್ಮ ಭವಿಷ್ಯಕ್ಕೆ ಮಾರಕವಾಗದೇ ತಮ್ಮ ಕುಟುಂಬ, ಸಮಾಜ ಹಾಗೂ ದೇಶಕ್ಕೆ ಕಂಟಕ ಪ್ರಾಯರಾಗುತ್ತಾರೆ.

ಪ್ರಜಾಪ್ರಭುತ್ವದಲ್ಲಿ ನಾಗರಿಕ ಸಮಾಜದ ವಾಸ್ತವಿಕ ಹಾಗೂ ಮಾನಸಿಕ ಆರೋಗ್ಯವನ್ನು ರಕ್ಷಿಸುವ ಹಾಗೂ ಸದಾ ಕಾಪಾಡಿ ಕೊಂಡು ಬರುವ ಆದ್ಯ ಕರ್ತವ್ಯ ನಮ್ಮ ಸರಕಾರಗಳದ್ದು. ಕಠಿಣವಾದ ಕಾನೂನುಗಳನ್ನು ರೂಪಿಸಿ ಜಾರಿಗೆ ತಂದು, ದೇಶದ ಭವಿಷ್ಯ ಹಾಗೂ ಸುರಕ್ಷತೆಗೆ ತೊಂದರೆ ಉಂಟು ಮಾಡುವ ವ್ಯಕ್ತಿಗಳನ್ನು ಹಾಗೂ ಸಂಸ್ಥೆಗಳನ್ನು ಸೂಕ್ತವಾಗಿ ಗುರುತಿಸಿ ದಂಡನೆಯ ಕ್ರಮ ಕೈಗೊಳ್ಳುವುದು ಅತ್ಯಗತ್ಯ.

ಇಲ್ಲದಿದ್ದಲ್ಲಿ ನಿಷೇಧಿತ ಡಿಜಿಟಲ್ ಗೇಮ್ ಅಪ್ಲಿಕೇಷನ್‌ಗಳು ಮಾರುವೇಷದಲ್ಲಿ ಮತ್ತೊಂದು ಬಾಗಿಲ ಮೂಲಕ ನಮ್ಮ ನಡುವೆ ಬಂದು ತಮ್ಮ ಎಂದಿನ ಅಟ್ಟಹಾಸಗಳನ್ನು ಮೆರೆಯುತ್ತವೆ. ಹಿಂದಿನ ಪಬ್ ಜಿ ಆನ್‌ಲೈನ್ ಗೇಮ್ ಮಾರುವೇಷದಲ್ಲಿ ಬ್ಯಾಟಲ್ ಗ್ರೌಂಡ್ ಇಂಡಿಯಾ ಹೆಸರಿನಲ್ಲಿ ಮತ್ತೆ ಬರುತ್ತಿದೆಯೇ? ಇದು ಚೀನಾ ದೇಶದ ಪರೋಕ್ಷ ಬೆಂಬಲಿತ ಸಂಸ್ಥೆಯ ಮೂಲಕ ಮತ್ತೆ ಅಡಿ ಇಡುತ್ತಿದೆಯೇ? ಈ ಆಟದ ದುಷ್ಪರಿಣಾಮ ಸಮಾಜ ಹಾಗೂ ದೇಶಕ್ಕೆ ಎಷ್ಟು ಪ್ರಮಾಣದ್ದಿದೆ? ಈ ಅಂಶಗಳನ್ನು ಮೊದಲು ಅವಲೋಕಿಸಿ, ವಿಚಾರಣೆ ಮಾಡುವ ವ್ಯವಸ್ಥೆ ಈಗ ಅತ್ಯಗತ್ಯವಾಗಿದೆ. ಆದ್ದರಿಂದ ಸರಕಾರಗಳು ಈ ನಿಟ್ಟಿನಡೆ ಗಂಭೀರವಾಗಿ ಯೋಚಿಸಿ, ಸೂಕ್ತ ಕ್ರಮ ಕೈಗೊಳ್ಳುವ ಕಾಲ ಪಕ್ವವಾಗಿದೆ. ಆದರೆ, ಸಂಬಂಧಿತ ಅಧಿಕಾರಿಗಳು, ಸಚಿವರು ಇತ್ತ ಗಮನ ಕೊಡು ವರೇ?