Wednesday, 11th December 2024

ಮೀಸಲಾತಿ ಮತ್ತು ಜನಸಂಖ್ಯೆ ವರವೋ ಶಾಪವೋ ?

ಪ್ರಸ್ತುತ

ರುದ್ರಯ್ಯ ಎಸ್‌.ಎಸ್‌

rssmath17@gmail.com

ಭಾರತದಲ್ಲೀಗ ಜನಸಂಖ್ಯಾ ನಿಯಂತ್ರಣ ಮತ್ತು ಮೀಸಲಾತಿ ಕುರಿತಾದ ಚರ್ಚೆ ಜೋರಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಲಭ್ಯಗಳು ಲಭ್ಯವಾದಾಗ ಮಾತ್ರವೇ ದೇಶವೊಂದರ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಈ ಎರಡು ವಿಷಯಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.

ದೇಶದ ಅಭಿವೃದ್ಧಿಗೆ ಪೂರಕ ಎಂದು ಭಾವಿಸಲಾದ ಮೀಸಲಾತಿ ಮತ್ತು ಜನಸಂಖ್ಯೆಯು ಕೆಲವೊಮ್ಮೆ ಮಾರಕವೂ ಆಗಬಹುದು. ಲಭ್ಯವಿರುವ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿದರಷ್ಟೇ ಲಾಭ, ಇಲ್ಲವಾ ದಲ್ಲಿ ನಷ್ಟ. ಅಂತೆಯೇ ಮೀಸಲಾತಿಯನ್ನು ಯಾವ ತಳಹದಿಯ ಮೇಲೆ ಹಂಚಿಕೆ ಮಾಡಲಾಗುತ್ತದೆ ಎಂಬುದರ ಮೇಲೆ ಸಮಾಜದ ಮತ್ತು ರಾಷ್ಟ್ರದ ಉನ್ನತಿ/ ಅವನತಿ ನಿರ್ಧಾರವಾಗುತ್ತದೆ.

ಜಾತಿ ಆಧಾರದ ಮೇಲೆ ಮೀಸಲಾತಿ ನೀಡಿದ ನಂತರವೂ, ಅತ್ಯುತ್ಕೃಷ್ಟ ಕೌಶಲ, ನೈಪುಣ್ಯ, ಚಾಣಾಕ್ಷತೆ ಬಯಸುವ ಹುದ್ದೆಗಳಲ್ಲಿ ಮೀಸಲಾತಿ ಹೆಸರಲ್ಲಿ ಅನರ್ಹರನ್ನು ತಂದು ಕೂರಿಸಿದರೆ ಆಡಳಿತ ಸುಗಮವಾಗಿ ನಡೆಯಲು ಸಾಧ್ಯವೇ? ಆಗ ’Right Person for Right Job’ ಎಂಬ ಸಿದ್ಧಾಂತಕ್ಕೆ ಅರ್ಥವಿಲ್ಲದಂತಾಗುತ್ತದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆ ಸಂದರ್ಭದಲ್ಲಿ, ಸಾಮಾಜಿಕ ವಾಗಿ ತುಳಿತಕ್ಕೊಳಗಾದ ದೀನ-ದಲಿತರಿಗೆ 10 ವರ್ಷ ಮೀಸಲಾತಿ ಕಲ್ಪಿಸಿದ್ದರು. ಅದು ಕಾರಣಾಂತರಗಳಿಂದ 50 ವರ್ಷದವರೆಗೆ ಮುಂದುವರಿಸಲ್ಪಟ್ಟಿತು. ಮಂಡಲ್ ವರದಿಯನ್ನಾಧರಿಸಿ ಮೀಸಲಾತಿಯು ಶೇ. 50ರ ಗಡಿ ಮೀರಬಾರದು ಎಂದು ಸುಪ್ರೀಂ ಕೋರ್ಟ್ 1992ರಲ್ಲಿ ನೀಡಿದ ಐತಿಹಾಸಿಕ ಇಂದಿರಾ ಸಾಹ್ನಿ ತೀರ್ಪಿನ ನಂತರವೂ ವೋಟ್‌ಬ್ಯಾಂಕ್ ರಾಜಕಾರಣದ ಸುಳಿಗೆ ಸಿಲುಕಿ ಅದು ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಈಗಾಗಲೇ ತಮಿಳುನಾಡು ಸರಕಾರ ಶೇ. 50ರ ಬೇಲಿಯನ್ನು ಜಿಗಿದಾಗಿದೆ.

ತೀರಾ ಇತ್ತೀಚೆಗೆ ಕರ್ನಾಟಕದಲ್ಲಿ ಎಸ್‌ಸಿ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ, ಎಸ್‌ಟಿ ಮೀಸಲಾತಿಯನ್ನು ಶೇ. 5ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಅಷ್ಟಕ್ಕೂ, ಈ ಜಾತ್ಯಾಧಾರಿತ ಮೀಸಲಾತಿ ತಲುಪುತ್ತಿರುವುದಾದರೂ ಯಾರಿಗೆ ಎಂದು ಕೂಲಂಕಷ ವಾಗಿ ಪರಿಶೀಲಿಸಿದಾಗ ಸಿಗುವ ಮಾಹಿತಿ ನಿಬ್ಬೆರಗಾಗಿಸುತ್ತದೆ. ಕೆಳವರ್ಗದವ ಎನ್ನುವ ಒಂದೇ ಕಾರಣಕ್ಕಾಗಿ, ಆರ್ಥಿಕವಾಗಿ ಸಮಾಧಾನ ಕರ ಸ್ಥಿತಿಯಲ್ಲಿದ್ದರೂ ಮೀಸಲಾತಿಯ ಹೆಸರಲ್ಲಿ ಸಮಸ್ತ ಸೌಲಭ್ಯಗಳನ್ನೂ ದಕ್ಕಿಸಿಕೊಂಡು ಬೀಗುತ್ತಿರುವವರು ಒಂದೆಡೆ ಯಾದರೆ, ಮೇಲ್ವರ್ಗದಲ್ಲಿ ಹುಟ್ಟಿದವರು ಎಂಬ ಕಾರಣಕ್ಕಾಗಿ, ಕಡುಬಡತನದಲ್ಲಿದ್ದರೂ ಮೀಸಲಾತಿಯ ಪ್ರಯೋಜನ ದಕ್ಕಿಸಿಕೊಳ್ಳಲಾಗದೆ ಹತಾಶ ಸ್ಥಿತಿಯಲ್ಲಿರುವವರು ಮತ್ತೊಂದೆಡೆ ಕಾಣುತ್ತಾರೆ.

ಇದು ಸಮುದಾಯವೊಂದರ ಆರ್ಥಿಕ ಸ್ಥಿತಿಗತಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಜಾತಿಯನ್ನಷ್ಟೇ ಮಾನದಂಡವಾಗಿ ಪರಿಗಣಿಸುವುದರಿಂದ ಆಗುವ ಎಡವಟ್ಟು. ಕೆಳವರ್ಗದವರಾಗಿದ್ದರೂ ಪ್ರಭಾವಿ ಸ್ಥಾನದಲ್ಲಿರುವವರ ಮಕ್ಕಳಿಗೆ, ಅವರು ಕೆಳವರ್ಗದವರು ಎನ್ನುವ ಒಂದೇ ಕಾರಣಕ್ಕೆ ಕೇವಲ 100 ರುಪಾಯಿ ಶಿಕ್ಷಣಶುಲ್ಕ ಪಡೆಯುವ, ಬಡಬ್ರಾಹ್ಮಣನ ಮಗನಾಗಿದ್ದರೂ ಆತ ಮೇಲ್ವರ್ಗದಲ್ಲಿ ಹುಟ್ಟಿದವ ಎಂಬ ಕಾರಣಕ್ಕೆ 1000 ರುಪಾಯಿ ಶಿಕ್ಷಣಶುಲ್ಕ ಪಡೆಯುವ ಪರಿಪಾಠ ನ್ಯಾಯಯುತವೇ? ಇದು ಧರ್ಮವೇ? ಹೋ…. ಇಲ್ಲಿ ಧರ್ಮವೆಲ್ಲ ಲೆಕ್ಕಕ್ಕೆ ಬರುವುದಿಲ್ಲ ಅಲ್ಲವೇ? ಕನಿಷ್ಠಪಕ್ಷ ಇದು ಸಂವಿಧಾನಾತ್ಮಕವಾಗಿದೆಯೇ? ಅದೂ ಇಲ್ಲ.

ಕಾರಣ ಸಂವಿಧಾನ ಶಿಲ್ಪಿ ಅಂಬೇಡ್ಕರರು ರಚಿಸಿರುವ ಸಂವಿಧಾನದಲ್ಲಿ ‘ಭಾರತ ದೇಶದಲ್ಲಿರುವ ಸರ್ವರೂ ಸಮಾನರು’ ಎಂದಿದೆ. ಹಾಗಾದರೆ ಎಲ್ಲಿದೆ ಸಮಾನತೆ? ಎಲ್ಲಿದೆ ಜಾತ್ಯತೀತತೆ? ಇನ್ಫೋಸಿಸ್‌ನ ನಾರಾಯಣಮೂರ್ತಿಯವರು ಹಿಂದೊಮ್ಮೆ ‘ಭಾರತದ ಶೇ.80ರಷ್ಟು ಎಂಜಿನಿಯರ್ ಪದವೀಧರರು ಕೆಲಸಕ್ಕೆ ಯೋಗ್ಯರಲ್ಲ’ ಎಂದಿದ್ದರು. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು, ‘ಶೇ. 90ರಷ್ಟು ಭಾರತೀಯರು ಮೂರ್ಖರು’ ಎಂದು ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಮೂಲ ಕಾರಣ, ಮಗು ಹುಟ್ಟಿದಾಗಿನಿಂದ ಸಾಯುವವರೆಗೆ ಅನುಸರಿಸುವ ಜಾತಿಪದ್ಧತಿ ಮತ್ತು ಅದಕ್ಕನುಗುಣವಾಗಿ ಬೆಳೆದು ಬಂದ ಅವೈಜ್ಞಾನಿಕ ಮೀಸಲಾತಿ ಪದ್ಧತಿ.

‘ಶಿಕ್ಷಿತರು’ ಎಂಬ ಸರ್ಟಿಫಿಕೇಟ್ ಮಾತ್ರ ಹೊಂದಿರುವ ಆದರೆ ಅಗತ್ಯ ಕೌಶಲವಿಲ್ಲದ ಯುವಸಮೂಹ ನಮ್ಮ ಶಿಕ್ಷಣದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರೆ ಅತಿಶಯೋಕ್ತಿಯಲ್ಲ. ವಿಶೇಷ ಸವಲತ್ತು-ಸೌಲಭ್ಯಗಳು ದೊರಕಬೇಕಿರುವುದು
ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಬಹುಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದಿರುವ ಸಮಾಜದ ಕಟ್ಟಕಡೆಯ ವ್ಯಕ್ತಿಗೇ ಹೊರತು, ಸರ್ವಾಂಗೀಣವಾಗಿ ಬಲಿತಿರುವ ಯಾವುದೇ ಜಾತಿಯ ಬಲಿಷ್ಠರಿಗಲ್ಲ.

ನಿಜವಾದ ಬಡವನು ಸವಲತ್ತುಗಳಿಂದ ವಂಚಿತನಾಗುವುದನ್ನು ತಡೆಯಲು ಭಾರತದಲ್ಲಿ ಜಾತ್ಯಾಧಾರಿತ ಮೀಸಲಾತಿ ವ್ಯವಸ್ಥೆ ಹೋಗಿ, ಆರ್ಥಿಕ ಸ್ಥಿತಿ ಆಧರಿತ ಮೀಸಲಾತಿ ಜಾರಿಯಾಗಬೇಕು. ಆಗ ಮಾತ್ರವೇ ನಿಜಾರ್ಥದ ದೀನ-ದಲಿತರಿಗೆ ಅಗತ್ಯ ಸೌಲಭ್ಯ- ಸವಲತ್ತುಗಳು ತಲುಪಿಯಾವು. ಈ ನಿಟ್ಟಿನಲ್ಲಿ, ನವೆಂಬರ್ 7ರಂದು ಸುಪ್ರೀಂ ಕೋರ್ಟ್ ಸಂವಿಧಾನದ 103ನೇ ತಿದ್ದುಪಡಿಯನ್ನು ಎತ್ತಿ ಹಿಡಿಯುವ ಮೂಲಕ, ಕೇಂದ್ರ ಸರಕಾರವು 2019ರಲ್ಲಿ ಜಾರಿಗೊಳಿಸಿದ್ದ, ಆರ್ಥಿಕವಾಗಿ ದುರ್ಬಲ ರಾಗಿರುವ ವರ್ಗಗಳಿಗೆ ಶೇ. 10ರ ಮೀಸಲಾತಿ ನೀಡುವ ಚಿಂತನೆಗೆ ಹಸಿರು ನಿಶಾನೆ ನೀಡಿದೆ ಮತ್ತು ಮೇಲ್ವರ್ಗಕ್ಕೆ ಸೇರಿದ್ದವರು ಎಂಬ ಕಾರಣಕ್ಕೆ ಸಮಾಜದಲ್ಲಿ ಆರ್ಥಿಕವಾಗಿ ತುಳಿತಕ್ಕೊಳಗಾಗಿದ್ದ ಸಮುದಾಯದ ಜನರಲ್ಲಿ ಹೊಸ ಭರವಸೆಯನ್ನು ಬಿತ್ತಿದೆ ಎನ್ನಲಡ್ಡಿಯಿಲ್ಲ.

ಇನ್ನು ಜನಸಂಖ್ಯೆಯ ನಿಯಂತ್ರಣದ ವಿಷಯಕ್ಕೆ ಬರೋಣ. ಯಾವುದೇ ದೇಶ ಅಭಿವೃದ್ಧಿ ಪಥದತ್ತ ಸಾಗಬೇಕೆಂದರೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ನೆಲೆಗಟ್ಟಿನಲ್ಲಿ ಬರುವ ಹತ್ತು ಹಲವು ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಮುಂದಾದರೂ
ಜನಸಂಖ್ಯೆಯ ನಿಯಂತ್ರಣಕ್ಕೆ ಸಂಕಲ್ಪಿಸದಿದ್ದರೆ, ಅದು ‘ಹೊಳೆಯಲ್ಲಿ ಹುಣಿಸೇಹಣ್ಣನ್ನು ಹಿಂಡಿದಂತೆ’ ಆಗುತ್ತದೆ. ಹೌದು, ದಿನೇದಿನೆ ಬೆಳೆಯುತ್ತಿರುವ ಭಾರತದ ಜನಸಂಖ್ಯೆ ಯನ್ನು ಸಮರ್ಥವಾಗಿ-ಸಮತೋಲನವಾಗಿ ನಿಯಂತ್ರಿಸದಿದ್ದರೆ ಅದು ‘ಅಭಿವೃದ್ಧಿಯ ಹಿನ್ನಡೆ’ಗೆ ಕಾರಣವಾಗುವುದಲ್ಲದೆ, ವಿವಿಧ ಧರ್ಮಗಳಿಗೆ ನೆಲೆಯಾಗಿರುವ ಭಾರತದಲ್ಲಿ ಅಸಮತೋಲನ ಸೃಷ್ಟಿಯಾಗುವುದಂತೂ ಖರೆ.

ಜನಸಂಖ್ಯೆಯ ಏರಿಕೆಗೆ ಲಗಾಮು ಹಾಕದ ಹೊರತು, ನಾವೆಷ್ಟೇ ಕಾರ್ಯನೀತಿಗಳನ್ನು ಪರಿಷ್ಕರಿಸಿದರೂ, ಎಂಥದೇ ತಂತ್ರಜ್ಞಾನ ಗಳನ್ನು ಆವಿಷ್ಕರಿಸಿದರೂ ಪ್ರಯೋಜನವಾಗದು. ಏಕೆಂದರೆ ಜನಸಂಖ್ಯೆಯ ಏರಿಕೆಗೆ ತಕ್ಕಂತೆ ಉದ್ಯೋಗಾವ ಕಾಶವನ್ನು ಸೃಷ್ಟಿಸಬೇಕು, ಎಲ್ಲರಿಗೂ ಆಹಾರ-ನೀರು-ವಸತಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು. ಇದು, ಕಡಿಮೆ ಜನರು ತೆರಿಗೆ ಕಟ್ಟುವ ಮತ್ತು ಉಚಿತ ಭಾಗ್ಯಗಳಿಗೆ ಸಾಲುಗಟ್ಟಿ ಬಾಯಿತೆರೆದು ನಿಲ್ಲುವ ಭಾರತದಂಥ ದೇಶದಲ್ಲಿ ಕಷ್ಟಸಾಧ್ಯ. ಕಾರಣ, ಜನಸಂಖ್ಯೆಯ ಜತೆಜತೆಗೆ ಸಮಸ್ಯೆಗಳ ಸರಮಾಲೆಯೂ ಬೆಳೆಯತೊಡಗುತ್ತದೆ.

ಭಾರತದ ಜನಸಂಖ್ಯೆಯನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸದಿದ್ದರೆ ಪ್ರಕೃತಿಯೇ ಅದನ್ನು ನಿರ್ದಯವಾಗಿ ನೆರವೇರಿಸುವ ಬೆಳವಣಿಗೆಗೆ ನಾವು ಸಾಕ್ಷಿಯಾಗಬೇಕಾಗುತ್ತದೆ. ಇವೆರಡೇ ನಮ್ಮೆದುರು ಇರುವ ಆಯ್ಕೆಗಳು. ಈ ಕಠೋರ ವಾಸ್ತವವನ್ನು ಗಮನ ದಲ್ಲಿಟ್ಟುಕೊಂಡು ಸರಕಾರಗಳು ಕಾನೂನು-ಕಟ್ಟಳೆಗಳನ್ನು ರೂಪಿಸಬೇಕಾಗಿದೆ. ಇದರ ಭಾಗವಾಗಿಯೇ ರಾಜ್ಯಸಭಾ ಸದಸ್ಯ ರಾಕೇಶ್ ಸಿನ್ಹಾ ಅವರು ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದ ಖಾಸಗಿ ಮಸೂದೆಯೊಂದನ್ನು 2019ರ ಜುಲೈನಲ್ಲಿ ರಾಜ್ಯಸಭೆಯಲ್ಲಿ ಮಂಡಿಸಿದ್ದು ಇದಕ್ಕೆ 125 ಸಂಸದರು ಸಹಿ ಹಾಕಿದ್ದಾರೆ.

ಇದು ಕಾನೂನು ಆಗಬೇಕಿರುವುದು ಬಾಕಿಯಿದೆ ಅಷ್ಟೇ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ವಿಷಯಗಳನ್ನು ಜಾರಿಗೊಳಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಹಾಗಾಗಿ ಇದನ್ನೊಂದು ಅಭಿಯಾನ ಹಾಗೂ ಅಗತ್ಯ ಜನಜಾಗೃತಿಯ ಮೂಲಕ ನೆರವೇರಿಸಬೇಕಾದ ಅಗತ್ಯವಿದೆ. ಖಾಸಗಿ ಏಜೆನ್ಸಿಗಳು ಮತ್ತು ಸರಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೈಜೋಡಿಸಿದರೆ ಯಶಸ್ಸು ಕಾಣಲು ಸಾಧ್ಯ ಎಂಬುದನ್ನು ನೆನಪಿನಲ್ಲಿಡಬೇಕು.

ಅತ್ತ ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾಗದಿದ್ದರೆ, ಇತ್ತ ಮೀಸಲಾತಿ ಪದ್ಧತಿಯ ಅವ್ಯವಸ್ಥೆಯನ್ನೂ ಸರಿಪಡಿಸದಿದ್ದರೆ ಒದಗುವ ಪರಿಣಾಮಗಳನ್ನು ಪದಗಳಲ್ಲಿ ವಿವರಿಸಲಾಗದು. ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸದಿದ್ದರೆ, ಮುಂದಿನ ತಲೆಮಾರುಗಳು ಕೂಡ ಭಾರತವನ್ನು ‘ಅಭಿವೃದ್ಧಿಶೀಲ ದೇಶ’ ಎಂಬ ಹಣೆಪಟ್ಟಿಯ ಅಡಿಯಲ್ಲೇ ಕಾಣುವಂತಾಗುತ್ತದೆಯೇ ವಿನಾ, ‘ಅಭಿವೃದ್ಧಿ ಹೊಂದಿದ ದೇಶ’ಗಳ ಪಟ್ಟಿಯಲ್ಲಿ ಅಲ್ಲ. ಆದ್ದರಿಂದ, ನೀತಿ-ನಿರೂಪಕರು ಇನ್ನಾದರೂ ಹೊಣೆಯರಿತು ವರ್ತಿಸಲಿ.