Wednesday, 11th December 2024

ಚಾರಿತ್ರ್ಯ, ಮರ್ಯಾದೆ, ಗಾಂಭೀರ್ಯ ಹೆಂಗಸರಿಗೆ ಮಾತ್ರ ಇರಬೇಕಾ?

ಸಂಡೆ ಸಮಯ
ಸೌರಭ ರಾವ್ ಕವಯತ್ರಿ ಬರಹಗಾರ್ತಿ

ಪ್ರತಿದಿನ ಹೆಣ್ಣನ್ನು ಒಬ್ಬ ಸಮಾನಜೀವಿಯಾಗಿ ಕಂಡು ಗೌರವಿಸುವಂತೆ ಹೇಳಿಕೊಡುವ ಪೋಷಕರು ಎಷ್ಟು ಜನ? ಇನ್ನೊೊಂದು ವಾದವಿದೆ. ಇದಕ್ಕೆ ಬೇಕಿರುವ ಸಾಮಾನ್ಯ ಜ್ಞಾನವೂ ಇಲ್ಲದ ಮಿಸೋಜಿನಿಸ್ಟಿಕ್,
ಪುರುಷ ಪ್ರಾಧಾನ್ಯ ಮನಸ್ಥಿತಿಯುಳ್ಳ ಗಂಡಸರು ಬಿಡಿ, ಎಷ್ಟೋ ಸಲ ಇತರ ಹೆಂಗಸರೇ ಅಸಂಬದ್ಧವಾಗಿ
ಮಾತನಾಡಿಬಿಡುತ್ತಾರೆ.

ಹೆಣ್ಣುಮಕ್ಕಳ ಉಡುಗೆತೊಡುಗೆಗಳೇ ‘ಸೆಡ್ಯೂಸಿಂಗ್’ ಆಗಿರುತ್ತದೆ, ಎನ್ನುವುದು. ನಾಲಿಗೆ ಹೊರಳಿದ ಹಾಗೆಲ್ಲಾ ಮಾತನಾಡಿದರೆ ಆಗಬಾರದ್ದೇ ಆಗೋದು. ಇವತ್ತಿನ ‘ಇನ್ಸ್ಟೆೆಂಟ್’ ಟ್ವೀಟ್, ಸ್ಟೇಟಸ್, ತೀರ್ಪುಗಳ ಯುಗದಲ್ಲಿ, ಸಂದರ್ಭಗಳನ್ನು ಸರಿಯಾಗಿ ತಾಳ್ಮೆಯಿಂದ ತಿಳಿದುಕೊಳ್ಳದೇ, ಒಂದು ವಿಷಯದ ಆಳ-ವಿಸ್ತಾರಗಳನ್ನು ಅರಿಯುವ ಗೋಜಿಗೆ ಹೋಗದೇ ಎಲ್ಲರೂ ಎಲ್ಲದರ ಬಗ್ಗೆೆಯೂ ಮಾತನಾಡುವುದು ಮಾಮೂಲಿ ವಿಷಯ ವಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನಾಚಬೇಕು, ಹಾಗೆ! ಹೌದು, ಪ್ರತಿಯೊಬ್ಬರ ಧ್ವನಿಯೂ ಮುಖ್ಯ, ಎಲ್ಲರಿಗೂ ವೈಯಕ್ತಿಕ ಅಭಿಪ್ರಾಯ, ಭಿನ್ನಾಭಿಪ್ರಾಯಗಳನ್ನು ತೋರಿಸಿಕೊಳ್ಳುವ ಹಕ್ಕಿದೆ, ಮತ್ತು ಆ ಹಕ್ಕು, ಸ್ವಾತಂತ್ರ್ಯ ಪವಿತ್ರವಾದದ್ದು ಕೂಡಾ. ಆದರೆ ಪ್ರತಿಯೊಂದು ಹಕ್ಕಿನ ಜೊತೆ ಒಂದು  ಜವಾಬ್ದಾರಿಯೂ
ಇರುತ್ತದಲ್ಲವಾ? ಬಾಯಿಗೆ ಬಂದ ಹಾಗೆ, ಇನ್ನೊಬ್ಬರ ಮನಸ್ಸಿನ ಮೇಲೆ ನಾವು ಬಳಸುವ ದಗಳು ಯಾವ ಪರಿಣಾಮ ಬೀರಬಹುದು ಎಂಬ ಮಾನವೀಯತೆ ಬಿಡಿ – ಅದನ್ನು ನಿರೀಕ್ಷಿಸುವುದು ಮೂರ್ಖತನವಾಯ್ತು – ಆದರೆ ಕನಿಷ್ಠ ಸೌಜನ್ಯವೂ ಇಲ್ಲದವರಂತೆ ವರ್ತಿಸಿಬಿಡುತ್ತೇವೆ.

ಹಾಸ್ಯಕ್ಕೂ, ಸತ್ವವೇ ಇರದ ಕುಚೋದ್ಯಕ್ಕೂ ವ್ಯತ್ಯಾಸವೇ ಇಲ್ಲದಂತೆ ಹೇಳಿಕೆ, ಟಿಪ್ಪಣಿ, ಕೊಡುತ್ತೇವೆ, ಭಾಷಣ ಬಿಗಿಯುತ್ತೇವೆ. ಸುನಿಲ್ ಗವಾಸ್ಕರ್ ವಿಷಯದಲ್ಲೂ ಅದೇ ಆಗಿದ್ದು. ಅಷ್ಟು ದೊಡ್ಡ ಹೆಸರಿನ ಮನುಷ್ಯ ವಿರಾಟ್ ಕೋಹ್ಲಿ ಸರಿಯಾಗಿ ಕ್ರಿಕೆಟ್ ಆಡದೇ ಇದ್ದದ್ದಕ್ಕೆ ಅವನ ಹೆಂಡತಿ ಅನುಷ್ಕಾಶರ್ಮಾ ಹೆಸರು ತೆಗೆದು ಯಾಕೆ ಘನತೆಯೇ ಇಲ್ಲದ ಸಣ್ಣ ಮಾತನ್ನಾಡಬೇಕಿತ್ತು? ಸರಿ, ಅನುಷ್ಕಾ ಶರ್ಮಾ ಹೇಳಿಕೆಗೆ ಉತ್ತರಿಸಿ ತಾವೇನೂ ‘ಸೆಕ್ಸಿಸ್‌ಟ್‌’ ಹೇಳಿಕೆ ನೀಡಿಲ್ಲ ಎಂದರು. ಆಗಲಿ, ಒಪ್ಪೋಣ. ಆದರೆ ಅನುಷ್ಕಾಳನ್ನು ಕ್ರಿಕೆಟ್ ವಿಷಯಕ್ಕೆ ಎಳೆಯುವ, ಒಂದು ಸಡಿಲ ಮಾತನ್ನಾಡುವ, ಒಂದಷ್ಟು ಜನರ ಕೈಲಿ ಛೀಮಾರಿ ಹಾಕಿಸಿಕೊಂಡ ನಂತರ ವಿವರಣೆ ಕೊಡುವ ಅಗತ್ಯವೇ ಇರುತ್ತಿರಲಿಲ್ಲವಲ್ಲ.

ಇದೊಂದು ಪುಟ್ಟ ಉದಾಹರಣೆಯಷ್ಟೇ. ಅದರಲ್ಲೂ ಹೆಂಗಸರ ಬಗ್ಗೆ ಕಾಣ ಸಿಗುವ ಹೇಸಿಗೆ ಹುಟ್ಟಿಸುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ, ಅಂತರ್ಜಾಲದಲ್ಲಿ ಉಸಿರಾಡುವ ಕ್ರಿಯೆಯಷ್ಟೇ ಸಾಮಾನ್ಯವಾಗಿ ಬಿಟ್ಟಿದೆ ಎನಿಸುತ್ತದೆ. ಯಾವುದೋ ನಟಿ ತನಗೆ ಮದುವೆ ಮಾತ್ರ ಆಗಿಲ್ಲ ಎಂದು ಯಾವುದೋ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟರೆ ನಮಗೆ ಎಲ್ಲಿಂದ ಹುಚ್ಚು ಶುರುವಾಗಿಬಿಡುತ್ತದೋ? ನಾಲಿಗೆಯ ಚಪಲ ತೀರಿಸಿಕೊಳ್ಳಲು ಕಾದುಕೂತವರಂತೆ ವರ್ತಿಸುತ್ತೇವೆ. ಅದಕ್ಕೆ ಉತ್ತರವಾಗಿ ಹಾಗಾದರೆ ಮಿಕ್ಕಿದ್ದೆಲ್ಲಾ ಆಗಿಬಿಟ್ಟಿದೆಯಾ? ಎಂಬ ವಿಕೃತ ಟ್ವೀಟ್, ಅದನ್ನು ಲೈಕ್ ಮಾಡುವ ಸಾವಿರಾರು ವಿಕೃತ ಮನಸ್ಸುಗಳು. ಸರಿ, ಒಬ್ಬ ಹೆಂಗಸು ಏನಾದರೂ
ಮಾಡಿಕೊಳ್ಳಲಿ, ಆಕೆಯಿಂದ ಬೇರೆಯವರಿಗೆ ಯಾವ ಅಪಾಯವೂ ಆಗುತ್ತಿಲ್ಲವೆಂದರೆ ನಮ್ಮದೇನು
ಗಂಟೇನು ಹೋಯಿತು? ಸಮಾಜದ ಸ್ವಾಸ್ಥ್ಯದ ಬಗ್ಗ ಕಾಳಜಿ ತೋರುವ ಮುಖವಾಡದ ಹಿಂದೆ ಹೇಸಿಗೆ
ಬಚ್ಚಿಟ್ಟುಕೊಂಡರೂ ಅದು ಕಡೆಗೆ ಹೇಸಿಗೆಯೇ. ನಮ್ಮ ಮಾತಿನ ಧಾಟಿ, ಗಾಂಭೀರ್ಯದಲ್ಲೇ ನಮ್ಮ ಕಾಳಜಿ
ಎಷ್ಟು, ವಿಕೃತಿ ಎಷ್ಟು ಎನ್ನುವುದು ಗೊತ್ತಾಗುತ್ತದೆ.

ಒಂದು ಪ್ರತಿಕ್ರಿಯೆಯಲ್ಲಿರಬೇಕಾದ ನಮ್ಮ ಘನತೆಗೇನಾಯಿತು? ಮಾಡಿದವರ ಪಾಪ ಆಡಿದವರ ಬಾಯಿಗೆ ಅನ್ನೋೋ ಸಚ್ಚಾರಿತ್ರ್ಯದ ಮಾತನ್ನು ನಮ್ಮ ಮನೆಯಲ್ಲಿ ದೊಡ್ಡವರು ಹೇಳಿಕೊಟ್ಟಿಲ್ಲವಾ? ಚಾರಿತ್ರ್ಯ, ಮರ್ಯಾದೆ, ಗಾಂಭೀರ್ಯ ಬರೀ ಹೆಂಗಸರಿಗೆ ಮಾತ್ರ ಇರಬೇಕಾದ ಸದ್ಗುಣಗಳಾ? ಇದ್ಯಾವ ಸೀಮೆ ಉದಾತ್ತ ಚಿಂತನೆ? ಎಲ್ಲಿ ನಮ್ಮ ಕನಿಷ್ಠ ಮಾನವೀಯತೆ? ನಮ್ಮ ತಾಯಿ, ಅಕ್ಕ-ತಂಗಿ, ಹೆಂಡತಿ, ಮಗಳ ಬಗ್ಗೆ ಹೀಗೆ ಯಾರೋ ಗುರುತು ಪರಿಚಯವಿರದವರು ಬಾಯಿಗೆ ಬಂದ ಹಾಗೆ ಮಾತನಾಡಿದರೆ ನಾವು ಸುಮ್ಮನಿರುತ್ತೇವಾ?
ಒಂದು ಮನೆಯಲ್ಲಿ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದರೆ, ಎಷ್ಟು ಜನ ಮಗಳಿಗೆ, ಕತ್ತಲಾಗುವುದರೊಳಗೆ ಮನೆ ಸೇರಿಕೋ ಎಂದು ಹೇಳುವ ಅದೇ ಆಸ್ಥೆೆಯಿಂದಲೇ, ಅದೇ ತೀವ್ರತೆಯಿಂದಲೇ ಮಗನಿಗೂ ಚಿಕ್ಕ ವಯಸ್ಸಿನಿಂದ ಪ್ರತಿದಿನ ಹೆಣ್ಣನ್ನು ಒಬ್ಬ ಸಮಾನಜೀವಿಯಾಗಿ ಕಂಡು ಗೌರವಿಸುವಂತೆ ಹೇಳಿಕೊಡುವ ಪೋಷಕರು ಎಷ್ಟು ಜನ? ಇನ್ನೊೊಂದು ವಾದವಿದೆ. ಇದಕ್ಕೆ ಬೇಕಿರುವ ಸಾಮಾನ್ಯ ಜ್ಞಾನವೂ ಇಲ್ಲದ ಮಿಸೋಜಿನಿಸ್ಟಿಕ್, ಪುರುಷಪ್ರಾಧಾನ್ಯ ಮನಸ್ಥಿತಿಯುಳ್ಳ ಗಂಡಸರು ಬಿಡಿ, ಎಷ್ಟೋ ಸಲ ಇತರ ಹೆಂಗಸರೇ ಅಸಂಬದ್ಧವಾಗಿ ಮಾತನಾಡಿಬಿಡುತ್ತಾರೆ.

ಹೆಣ್ಣುಮಕ್ಕಳ ಉಡುಗೆ ತೊಡುಗೆಗಳೇ ‘ಸೆಡ್ಯೂಸಿಂಗ್’ ಆಗಿರುತ್ತದೆ, ಎನ್ನುವುದು. ಅಲ್ಲಾ, ಚರ್ಮವೆಂದರೆ ನಮಗೆ ಯಾಕಿಷ್ಟು ಅಂಜಿಕೆ, ವಿಮುಖತೆ ಅಥವಾ ಜಿಗುಪ್ಸೆ ಮತ್ತು ಸಿಟ್ಟು? ನೋಡುವವನ ಮನಸ್ಥಿತಿ ಹೀನಾಯವಾಗಿದ್ದರೆ ಒಂದು ಹೆಣ್ಣು ಅಡಿಯಿಂದ ಮುಡಿಯವರೆಗೆ ಬಟ್ಟೆ ತೊಟ್ಟರೂ ಅಪಾಯ ತಪ್ಪಿದ್ದಲ್ಲ. ಅಂದಹಾಗೆ, ಮಿನಿಸ್ಕಿರ್ಟ್ ಅಥವಾ ಡೀಪ್ – ಕಟ್ ಟಾಪುಗಳೇ ಅತ್ಯಾಚಾರಕ್ಕೋ, ಹೊಲಸು ಕಾಮೆಂಟಿಗೋ, ನೋಟಕ್ಕೋ ಕಾರಣವಾದರೆ, ಕಂದಮ್ಮಗಳನ್ನೂ ಬಿಡದೇ ಅತ್ಯಾಚಾರವೆಸಗುವ ಮೃಗಗಳ ಬಗ್ಗೆ ಏನು ಹೇಳಬೇಕು? ಅಥವಾ 60-70ರ ಹರೆಯದ ಮುದುಕಿಯರನ್ನೂ ಬಿಡದೆ ಕಾಮತೃಷೆ ತೀರಿಸಿಕೊಳ್ಳುವ ಯಕಃಶ್ಚಿತ್ ಪ್ರಾಣಿಗಳ ಬಗ್ಗೆ ಯಾವ ವಿವೇಕಯುಕ್ತ ವಿಶ್ಲೇಷಣೆ ನೀಡಬಹುದು? ಇದಕ್ಕೆ ನಾವು ದೊಡ್ಡ ತತ್ವಜ್ಞಾನಿಯಾಗಬೇಕಿಲ್ಲ, ಸಂತರಾಗಬೇಕಿಲ್ಲ, ಕಾಮನ್ ಸೆನ್‌ಸ್‌ ಎಂಬುದೊಂದು ಇದ್ದರೆ ಸಾಕು. ಒಬ್ಬ ಹೆಣ್ಣುಮಗಳು ಸ್ವತಂತ್ರಳಾಗಿ ಬದುಕುವ, ಅವಳು ಇಷ್ಟ ಬಂದ ಹಾಗೆ ಬಟ್ಟೆ ತೊಡುವ ಸ್ವಾತಂತ್ರ್ಯ ಅವಳದ್ದು, ಅಂದ ಮಾತ್ರಕ್ಕೆ ಯಾರಿಗೂ ಅವಳ ಚಾರಿತ್ರ್ಯಯನ್ನು ಅಳೆಯುವ ನೈತಿಕ ಹಕ್ಕು ಸಿಕ್ಕಿ ಬಿಡುವುದಿಲ್ಲ. ಅದು ಪಬ್ಲಿಕ್ ಡಿಬೇಟ್ ಅಲ್ಲ.  ಅಥವಾ ಸ್ವಲ್ಪ ಚರ್ಮ ಕಾಣಿಸಿಬಿಟ್ಟರೇ ಕೆಲವು ಗಂಡಸರಿಗೆ ನಿಯತ್ತು, ಮಾನವೀ ಯತೆ ಮರೆತುಹೋಗುವಷ್ಟು ಸಡಿಲವೇ ಅವರ ಸಚ್ಚಾರಿತ್ರ್ಯ? ಹೇಸಿಗೆ ಹುಟ್ಟಿಸುವ ಕೆಲವು ಟ್ಯಾಬ್ಲಾಯ್ಡ್ ಪತ್ರಿಕೆಗಳೂ, ಟೀವಿ/ಯೂಟ್ಯೂಬ್ ಚಾನೆಲ್ಲುಗಳೂ ಈ ಮನೋರೋಗದಿಂದ ಹೊರಬರಲಿ. ಪತ್ರಿಕೋದ್ಯಮ ಶ್ರೇಷ್ಠವಾದದ್ದು, ಅದನ್ನು ಕೆಲವರ ಮನೋವಿಕೃತಿ ವ್ಯಕ್ತಪಡಿಸುವ ಮಟ್ಟಕ್ಕೆ ಇಳಿಸದಿ ರೋಣ.

‘ಗಾಸಿಪ್’ ಎಂಬ ಸೊಕ್ಕಿನ ಭಾಗಗಳನ್ನು ಕೆಲ ಪತ್ರಿಕೆಗಳಲ್ಲಿ ನೋಡುವುದಕ್ಕೇ ಬೇಸರವಾಗುತ್ತದೆ. ಒಂದು ಸಮಾಜದ ಆರೋಗ್ಯ ಹದಗೆಡದೇ ಇರಬೇಕಾದರೆ ದೂರದಲ್ಲೆಲ್ಲೋ ಯಾರೋ ಮಹಾತ್ಮರು ಮಾತ್ರ ಕೆಲಸ ಮಾಡಿದರೆ ಸಾಲದು. ನಮ್ಮ ವೈಯಕ್ತಿಕ ಆಲೋಚನೆ, ನಡವಳಿಕೆಗಳಿಂದ ಅದು ಆರಂಭವಾಗುತ್ತದೆ ಎಂಬ ಅರಿವೇ ನಮ್ಮನ್ನು ಹೆಚ್ಚು ಜವಾಬ್ದಾರಿಯುತ ಹೆಣ್ಣು ಅಥವಾ ಗಂಡು ಅಲ್ಲ, ಜವಾಬ್ದಾರಿಯುತ ಮನುಷ್ಯ ರನ್ನಾಗಿ ಮಾಡಲಿ. ಹೆಣ್ಣುಮಕ್ಕಳನ್ನು ಕರಾಟೆ ಅಥವಾ ಬೇರೆ ‘ಸೆಲ್ಫ್ ಡಿಫೆನ್‌ಸ್‌’ ಕ್ಲಾಸುಗಳಿಗೆ ಕಳುಹಿಸುವು ದರ ಬಗ್ಗೆ ಹೆಮ್ಮೆಯಿಂದ ಬೀಗುವುದು ಶೋಚನೀಯವಲ್ಲವಾ, ಹೆಣ್ಣಿಗೆ ಅದರ ಅಗತ್ಯವೇ ಇರದಂತೆ ಸಮಾಜದ ಸ್ವಾಸ್ಥ್ಯವನ್ನು ನಾವೆಲ್ಲರೂ ಕಾಪಾಡಬೇಕು ಅಲ್ಲವಾ? ಇದು ಹೇಗಿದೆಯೆಂದರೆ, ನಾವು ಅತ್ಯಾಚಾರ, ಅಮಾನವೀಯ ನಡವಳಿಕೆಯನ್ನು ಮುಂದುವರಿಸುತ್ತಲೇ ಇರುತ್ತೇವೆ, ನೀವು ನಿಮ್ಮ ರಕ್ಷಣೆ ನೋಡಿಕೊಳ್ಳಿ ಎನ್ನುತ್ತಿರುವಂತಿದೆ.

ಅಲ್ಲಾ, ನಮ್ಮ ವೈಯಕ್ತಿಕ ವಿಷಯಗಳನ್ನು ಕೆದಕುವವರಿಗೆ ನಿನ್ನ ಕೆಲಸ ನೀನು ನೋಡಿಕೋ, ನನ್ನ ಸುದ್ದಿಗೆ ಬರಬೇಡ ಎನ್ನುವ ನಮ್ಮ ಬುದ್ಧಿ, ತರ್ಕ ಅನ್ಯರ ಖಾಸಗಿ ಜೀವನದ ಬಗ್ಗೆ ಮಾತನಾಡುವಾಗ ಯಾಕೆ ಮಾಯ ವಾಗುತ್ತದೆ ಅಥವಾ ಸಲ್ಲದ ಚಪಲ ತೋರಿಸುತ್ತದೆ. ಆಗೊಂದು ಕಾಲಕ್ಕೆ ಸೀತೆ, ಊರ್ಮಿಳೆ, ಯಶೋಧರೆ (ಇನ್ನೂ ಬುದ್ಧನಾಗಿರದಿದ್ದ ಸಿದ್ಧಾರ್ಥನ ಮಡದಿ, ಯಾಕೋ ಅವಳನ್ನು ನಾವು ಮರೆಯುತ್ತೇವೆ) ಪಾಡು ಸಾಲದೆಂಬಂತೆ, ಈಗಲೂ ದಿನನಿತ್ಯ ಅನಗತ್ಯ ಒರಟಾದ ಅನುಭವಗಳಿಗೆ ಇಂದಿಗೂ ಹೆಂಗಸರು ಬಲಿಯಾಗು ತ್ತಿರುವುದು ನಮ್ಮ ಯಾವ ಪ್ರಗತಿಗೆ ಶೋಭೆ ತರುತ್ತಿದೆಯೋ ತಿಳಿಯುವುದಿಲ್ಲ. ಅದರಲ್ಲೂ ಸಾಮಾಜಿಕ ಜಾಲತಾಣಗಳು, ಅಂತರ್ಜಾಲದಲ್ಲಂತೂ ಘನತೆ, ಕರುಣೆ, ಸಹನೆಯುಳ್ಳ ಮಾನವೀಯ ವಿಷಯ ಗಳನ್ನು, ಚರ್ಚೆಗಳನ್ನು, ಪ್ರತಿಕ್ರಿಯೆಗಳನ್ನು ಕಸದಬುಟ್ಟಿಯಲ್ಲಿ ಎಲ್ಲೋ ಅಡಗಿಕೂತ ವಜ್ರಗಳಂತೆ ಹೆಕ್ಕಿ ತೆಗೆಯಬೇಕು, ಆ ಪರಿಸ್ಥಿತಿಗೆ ಬಂದಿದ್ದೇವೆ.

ಎಲ್ಲರಲ್ಲೂ ಒಂದು ತರಹದ ಉದ್ವೇಗ, ಆವೇಶ, ಎಲ್ಲದಕ್ಕೂ ತಕ್ಷಣ ತನ್ನದೊಂದು ಮಾತು ನಿಲ್ಲಬೇಕು ಎನ್ನುವ ವಿಚಿತ್ರ ತವಕ. ಇವೆಲ್ಲದರ ಬಗ್ಗೆ ಮತ್ತೂ ಆಳವಾದ, ಸೂಕ್ಷ್ಮವಾದ ಗ್ರಹಿಕೆಯಿಂದ ಇದುವರೆಗೂ ಎಷ್ಟು ಜನ ಬರೆದಿಲ್ಲ, ಅಥವಾ ಮಾತನಾಡಿಲ್ಲ? 21ನೇ ಶತಮಾನದಲ್ಲೂ, ಮಂಗಳ ಮಾತ್ರವಲ್ಲದೆ ಸೌರ ಮಂಡಲವನ್ನೂ ದಾಟಿ ವಿಶ್ವದ ದೂರದೂರದ ಮೈಲುಗಳನ್ನು ತಲುಪುತ್ತಿರುವ ನಮ್ಮದೇ ಬುದ್ಧಿಶಕ್ತಿ, ಇಲ್ಲೇ ಈ ಭೂಮಿಯ ಮೇಲೆಯೇ ಇನ್ನೂ ಅನಾಗರೀಕರಾಗಿ ಅಸಭ್ಯವಾಗಿ ವರ್ತಿಸುವುದನ್ನು ನಿಲ್ಲುವಂತೆ ಮಾಡಲಿ.

ಯಾತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂದ ನೆಲವಿದು. ಸದ್ಯ, ಹೆಣ್ಣುಮಕ್ಕಳನ್ನು ದೇವತೆಯರಂತೆ ಗೌರವಿಸುವುದು ಹಾಗಿರಲಿ, ಮನುಷ್ಯರಂತೆ ಕಂಡರೆ ಸಾಕಾದೀತು.