ಅಭಿಮತ
ಮಾರುತೀಶ್ ಅಗ್ರಾರ
ಭಾರತದಲ್ಲಿ ಯುವಕರಿಗೆ ದುಡಿಯಲು ಸಾಕಷ್ಟು ವಿಫಲ ಅವಕಾಶಗಳಿರುವುದರಿಂದ ಹಾಗೂ ಸರ್ಕಾರಗಳು ಯುವ ಸಮುದಾಯಕ್ಕೆ ಸಾಕಷ್ಟು ಉತ್ತೇಜನ ಕೊಡುತ್ತಿರುವುದರಿಂದ ಜನಸಂಖ್ಯೆ ಹೆಚ್ಚಳವು ಭಾರತಕ್ಕೆ ವರದಾನವೆಂದೇ ಹೇಳಬಹುದು. ಆದರೆ ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಬಡತನ, ಹಸಿವು, ಅಪೌಷ್ಟಿಕತೆಯಂತಹ ಸಮಸ್ಯೆಗಳು ಇನ್ನು ಜ್ವಲಂತ ವಾಗಿಯೇ ಇವೆ.
ಭಾರತದ ಜನಸಂಖ್ಯೆ ಈಗ ಬರೋಬ್ಬರಿ ೧೪೨.೮೬ ಕೋಟಿ. ಈ ಮೂಲಕ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು(೧೪೨.೫೭ ಕೋಟಿ) ಹಿಂದಿಕ್ಕಿ ಇದೀಗ ಅಗ್ರಸ್ಥಾನಕ್ಕೇರಿದೆ. ಹಾಗಾದರೆ ಇದು ಹೆಮ್ಮೆ ಪಡಬೇಕಾದ ಸಂಗತಿಯೇ ಎಂದರೆ ಅಂಕಿ ಅಂಶಗಳ ಹೌದು ಎನ್ನಬಹುದು. ಆದರೆ ಇಂದಿನ ಖರ್ಚುವೆಚ್ಚಗಳು, ಆರೋಗ್ಯ, ಶಿಕ್ಷಣ, ಪರಿಸರದಲ್ಲಾಗು ತ್ತಿರುವ ಬದಲಾವಣೆಗಳು, ಅನೇಕ ಸೌಲಭ್ಯಗಳ ಅಲಭ್ಯತೆ, ಆರ್ಥಿಕ ಹಿಂಜರಿತಗಳನ್ನು ಗಮನಿಸಿದಾಗ ಜನಸಂಖ್ಯಾ ಹೆಚ್ಚಳವು ಆತಂಕಕಾರಿ ಬೆಳವಣಿಗೆಯಾದರೂ ಭಾರತ ಹೆಚ್ಚಿನ ಉದ್ವೇಗಕ್ಕೆ ಒಳಗಾಗಬೇಕಿಲ್ಲ.
ಯಾಕೆಂದರೆ ಒಂದು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕಾದರೆ ಉತ್ತಮ ಆರ್ಥಿಕತೆಯ ಜೊತೆಗೆ ಜನಸಂಪನ್ಮೂಲವು ಅತ್ಯಗತ್ಯ. ಕೆಲ ದಶಕಗಳ ಹಿಂದೆ ಚೀನಾ ಜನಸಂಖ್ಯಾ ಸ್ಛೋಟಕ್ಕೆ ಕಡಿವಾಣ ಹಾಕಿದ್ದರ ಪರಿಣಾಮ ಅನೇಕ ಸಮಸ್ಯೆಗಳನ್ನು
ಎದುರಿಸಬೇಕಾಯಿತು. ಜನಸಂಖ್ಯೆ ಹೆಚ್ಚಳದಿಂದ ನಿರುದ್ಯೋಗ, ಬಡತನ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಚೀನಾದಲ್ಲಿ ಅಂದು ತಲೆದೂರಿದ್ದ ಪರಿಣಾಮ ಚೀನಾ ಸರ್ಕಾರ ೧೯೭೯ರಲ್ಲಿ ಕುಟುಂಬಕ್ಕೆ ಒಂದೇ ಮಗು ಎನ್ನುವ ಹೊಸ ನೀತಿಯನ್ನು ಜಾರಿಗೆ ತಂದಿತು.
ಜನಸಂಖ್ಯೆ ಹೆಚ್ಚಳದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದ ಚೀನಾ ಅದರಿಂದ ಹೊರ ಬರುವ ಉದ್ದೇಶದಿಂದ ಒಂದೇ ಮಗು ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಯಿತು. ಮೊದಮೊದಲು ಈ ಹೊಸ ನೀತಿಯ ವಿರುದ್ಧ ಚೀನಾ
ಜನತೆ ಸರ್ಕಾರದ ವಿರುದ್ಧ ಆಕ್ರೋಶಗೊಂಡರು ತರುವಾಯ ಅಲ್ಲಿನ ಜನ ಒಂದೇ ಮಗು ನೀತಿಗೆ ಒಗ್ಗಿಕೊಂಡರು. ಪರಿಣಾಮ ಚೀನಾದಲ್ಲಿ ಜನಸಂಖ್ಯೆ ನಿಧಾನಗತಿಯಲ್ಲಿ ಇಳಿಮುಖವಾಗುತ್ತಾ ಬಂತು. ಆದರೆ ಜನಸಂಖ್ಯೆ ಇಳಿಮುಖದ ವ್ಯತಿರಿಕ್ತ ಪರಿಣಾಮದ ಬಗ್ಗೆ ಅಂದು ಚೀನಾ ಹೆಚ್ಚು ತಲೆಕೆಡಿಸಿಕೊಳ್ಳದೆ ಸದ್ಯಕ್ಕೆ ಎದುರಾಗಿರುವ ಜನಸಂಖ್ಯಾ ಸ್ಛೋಟದಂತಹ ಆಪತ್ತನ್ನು ಮೆಟ್ಟಿನಿಂತರೆ ಸಾಕಾಗಿತ್ತು ಎನ್ನುವ ಆಲೋಚನೆಯಲ್ಲಿ ಚೀನಾ ಸರ್ಕಾರವಿತ್ತು.
ಆದರೆ ದಿನಕಳೆದಂತೆ ಚೀನಾದಲ್ಲಿ ಹೂಡಿಕೆ ಹೆಚ್ಚಾಗಿ ಹೊಸ ಹೊಸ ಉದ್ಯೋಗಗಳು, ಕೈತುಂಬಾ ಕೆಲಸಗಳು ಸೃಷ್ಟಿಯಾದವು. ಆಗ ಚೀನಾಕ್ಕೆ ಯುವ ಉದ್ಯೋಗಿಗಳ ಕೊರತೆ ಕಾಡಲಾರಂಭಿಸಿತು. ಆದರೂ ಚೀನಾ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಚೀನಾಗೆ ತಾನೇ ಕಟ್ಟುನಿಟ್ಟಾಗಿ ಜಾರಿಗೆ ತಂದ ಒಂದೇ ಮಗು ನೀತಿಯ ತಪ್ಪಿನ ಅರಿವಾದದ್ದು ೨೦೧೬ರಲ್ಲಿ. ಆ ವೇಳೆಗಾಗಲೇ ಚೀನಾದಲ್ಲಿ ವೃದ್ಧರ ಸಂಖ್ಯೆ ಏರುತ್ತಾ, ಯುವ ಸಮುದಾಯದ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಾ ಬರುತ್ತಿದ್ದುದನ್ನು ಮನಗೊಂಡ ಚೀನಾ ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಚೀನಾದಲ್ಲಿ ಯುವಕರ ಸಂಖ್ಯೆ ಕ್ಷೀಣಿಸಿ ಉದ್ಯೋಗ, ಸೇನಾ ನೇಮಕಾತಿ, ಹೊಸ ಹೊಸ ಆವಿಷ್ಕಾರ, ಅಭಿವೃದ್ಧಿ ಹೀಗೆ ಎಲ್ಲಾ ರಂಗದ ಮೇಲೂ ಯುವಕರ ಕೊರತೆ ಎದುರಾಗಿ ಯುವ ಸಮೂಹ ಕುಗ್ಗುತ್ತಾ, ವಯಸ್ಸಾದವರ ಸಂಖ್ಯೆ ಜಾಸ್ತಿಯಾಗುತ್ತಾ ಹೋದಂತೆ ರಾಷ್ಟ್ರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರಿತ ಚೀನಾ, ೨೦೧೬ರಲ್ಲಿ ಒಂದೇ ಮಗು ನೀತಿಗೆ ತಿಲಾಂಜಲಿ ಹೇಳಿ ಒಂದು ಕುಟುಂಬ ಎರಡು ಮಕ್ಕಳನ್ನು ಪಡೆಯಬಹುದು ಎನ್ನುವ ಬದಲಾವಣೆ ತಂದಿತು.
ಈಗ ಅಂದರೆ ೨೦೨೧ರಲ್ಲಿ ಮತ್ತೆ ಚೀನಾ ಕುಟುಂಬ ಯೋಜನೆಯಲ್ಲಿ ಬದಲಾವಣೆಯನ್ನು ತಂದು ಮೂರು ಮಕ್ಕಳ ನೀತಿಯನ್ನು ಪರಿಚಯಿಸಿದೆ! ಒಂದು ಕುಟುಂಬಕ್ಕೆ ಮೂರು ಮಕ್ಕಳು ಎನ್ನುವ ನೀತಿಯನ್ನು ಉತ್ತೇಜಿಸಲು ಚೀನಾ ಸರ್ಕಾರವೇ ಈಗ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ. ಇದರ ಜೊತೆ ಜೊತೆಗೆ ಸರ್ಕಾರ ಮೂರು ಮಕ್ಕಳನ್ನು ಹೆತ್ತ ಕುಟುಂಬಕ್ಕೆ ಸಬ್ಸಿಡಿ ರೂಪದಲ್ಲಿ ಸಾಲ-ಸೌಲಭ್ಯಗಳನ್ನು ನೀಡುವ ಘೋಷಣೆ ಮಾಡಿದೆ!
ಇದು ಜನಸಂಖ್ಯಾ ಹೆಚ್ಚಳಕ್ಕೆ ಚೀನಾ ಈಗ ತೆಗೆದುಕೊಂಡಿರುವ ನಿರ್ಧಾರ. ಇದರ ಜೊತೆಗೆ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿ ಯರು ಜೀವನೋತ್ಸಾಹ ಹೆಚ್ಚಿಸಿಕೊಳ್ಳಬೇಕು ಹಾಗೂ ಸಂಗಾತಿಯನ್ನು ಪ್ರೇಮಿಸಬೇಕು ಎನ್ನುವ ದೃಷ್ಟಿಯಿಂದ ಲವ್ ಬ್ರೇಕ್ ಎನ್ನುವ ಯೋಜನೆಯನ್ನು ಜಾರಿಗೆ ತಂದು ಕಾಲೇಜು ವಿದ್ಯಾರ್ಥಿಗಳಿಗೆ ಹದಿನೈದು-ಇಪ್ಪತ್ತು ದಿನಗಳ ರಜೆಯನ್ನು ಚೀನಾ ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ವಿವಾಹವೆಂಬ ಸಾಮಾಜಿಕ ಚೌಕಟ್ಟನ್ನು ಬಲಗೊಳಿಸಬೇಕೆಂಬ ಚೀನಾದ ಉದ್ದೇಶ ಒಂದು ಕಡೆಯಾದರೆ ದೇಶದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣ ಮೇಲೆತ್ತಬೇಕು ಎನ್ನುವ ಉದ್ದೇಶವೂ ಲವ್ ಬ್ರೇಕ್
ಯೋಜನೆಯ ಹಿಂದಿದೆ!
ಒಟ್ಟಾರೆಯಾಗಿ ಚೀನಾ ಈಗ ತನ್ನ ದೇಶದ ಸಂತಾನೋತ್ಪತ್ತಿಗಾಗಿ ಹರಸಾಹಸ ಪಡುತ್ತಿದೆ! ಚೀನಾ ಜನಸಂಖ್ಯೆ ಹೆಚ್ಚಳಕ್ಕೆ ಯಾಕೆ ಇಷ್ಟು ಮಹತ್ವ ಕೊಡುತ್ತಿದೆ ಗೊತ್ತಾ? ಈಗ ಚೀನಾದಲ್ಲಿ ಕೆಲಸ ಮಾಡಲು ಯುವಕರೇ ಇಲ್ಲದಂತಾಗಿದ್ದಾರೆ. ಚೀನಾದಲ್ಲಿ ಎಲ್ಲಿ ನೋಡಿದರೂ ವೃದ್ಧರೇ ಕಾಣಿಸುತ್ತಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರುತ್ತಿವೆ. ಇದರಿಂದಾಗಿ ಚೀನಾದಲ್ಲಿ ಉದ್ಯೋಗಕ್ಕೆ
ಯುವ ಜನರೇ ಸಿಗುತ್ತಿಲ್ಲ ಹಾಗೂ ಭವಿಷ್ಯದಲ್ಲಿ ಚೀನಾದಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಾಗಿ ದೇಶದ ಪ್ರಗತಿಯ ಮೇಲೆ ಇದು ವ್ಯತಿರಿಕ್ತ ಪರಿಣಾಮ ತಂದೊಡ್ಡುವ ಸಾಧ್ಯತೆ ಅಽಕವಾಗಿರುವುದರಿಂದ ಚೀನಾ ಜನಸಂಖ್ಯೆ ಹೆಚ್ಚಳಕ್ಕೆ ಈಗ ಸರ್ಕಸ್ ಮಾಡುತ್ತಿದೆ.
ಆದರೆ ಇದೀಗ ತಾನೇ ಆರ್ಥಿಕ ಬಲಾಢ್ಯ ರಾಷ್ಟ್ರವಾಗುತ್ತ ದಾಪುಗಾಲು ಹಾಕುತ್ತಿರುವ ಭಾರತ ಇಡೀ ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆಯನ್ನು ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆಯಾದರೂ ಜನಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿರುವುದು ಅನಿವಾರ್ಯ. ಅನೇಕರು ಜನಸಂಖ್ಯೆ ಹೆಚ್ಚಳವು ದೇಶದ ಅಭಿವೃದ್ಧಿಗೆ ಮಾರಕ ಎನ್ನುತ್ತಾರೆ. ಯಾಕೆಂದರೆ ನಿರುದ್ಯೋಗ, ಬಡತನ, ಆಹಾರದ ಕೊರತೆ, ಆರ್ಥಿಕತೆ ಹಿನ್ನಡೆ ಹೀಗೆ ನಾನಾ
ಸಮಸ್ಯೆಗಳು ಜನಸಂಖ್ಯೆ ಹೆಚ್ಚಳದಿಂದ ಉಂಟಾಗುತ್ತವೆ.
ಇದೆಲ್ಲವನ್ನೂ ಸರಿದೂಗಿಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಕಷ್ಟ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ. ಆದರೆ ಇನ್ನು ಕೆಲವರು ಜನಸಂಖ್ಯೆ ಕೂಡ ಒಂದು ಸಂಪನ್ಮೂಲ ಇದ್ದಂತೆ. ಅದನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಲ್ಲಿ ಅಭಿವೃದ್ಧಿ ಹೊಂದಿದ ಶಕ್ತಿಯುತ ರಾಷ್ಟ್ರ ನಿರ್ಮಾಣ ಮಾಡಬಹುದು ಎನ್ನುವ ವಾದವೂ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಭಾರತದಲ್ಲಿ ಈಗೀನ ಜನಸಂಖ್ಯೆಯ ಮೂರನೇ ಎರಡರಷ್ಟು ಹೆಚ್ಚು ಜನರು ದುಡಿಯುವ ವರ್ಗಕ್ಕೆ
ಸೇರಿದವರಾಗಿದ್ದಾರೆ. ಅಂದರೆ ಸುಮಾರು ೧೫ ವರ್ಷದಿಂದ ೬೪ ವರ್ಷ ವಯೋಮಿತಿಯ ಜನರೇ ಇಲ್ಲಿ ಹೆಚ್ಚಿದ್ದಾರೆ.
ಹಾಗಾಗಿ ದೇಶ ಯುವ ಭಾರತವಾಗಿ ಕಂಗೊಳಿಸುತ್ತಿದೆ. ಜೊತೆಗೆ ಭಾರತದಲ್ಲಿ ಯುವಕರಿಗೆ ದುಡಿಯಲು ಸಾಕಷ್ಟು ವಿಫಲ ಅವಕಾಶಗಳಿರುವುದರಿಂದ ಹಾಗೂ ಸರ್ಕಾರಗಳು ಯುವ ಸಮುದಾಯಕ್ಕೆ ಸಾಕಷ್ಟು ಉತ್ತೇಜನ ಕೊಡುತ್ತಿರುವುದರಿಂದ ಜನಸಂಖ್ಯೆ ಹೆಚ್ಚಳವು ಭಾರತಕ್ಕೆ ವರದಾನವೆಂದೇ ಹೇಳಬಹುದು. ಆದರೆ ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಬಡತನ, ಹಸಿವು, ಅಪೌಷ್ಟಿಕತೆ ಯಂತಹ ಸಮಸ್ಯೆಗಳು ಇನ್ನು ಜ್ವಲಂತವಾಗಿಯೇ ಇವೆ.
ಭಾರತದ ಹಳ್ಳಿಗಳಲ್ಲಿ ಈಗಲೂ ಉತ್ತಮವಾದ ಆರೋಗ್ಯ ಕೇಂದ್ರಗಳಿಲ್ಲ. ಗುಣಮಟ್ಟದ ಆಸ್ಪತ್ರೆಗಳಿಗಾಗಿ ಹಳ್ಳಿ ಜನರು ಈಗಲೂ ಮಹಾನಗರಗಳ ಕಡೆಯೇ ಬರಬೇಕು. ಸ್ವಚ್ಛ ಭಾರತ್ ಎನ್ನುವುದು ಹೆಸರಿಗಷ್ಟೇ ಅಥವಾ ದೊಡ್ಡ ದೊಡ್ಡ ನಗರಗಳಿಗಷ್ಟೇ ಸೀಮಿತವಾಗಿದೆ. ಪ್ರತಿ ಹಳ್ಳಿ-ಗ್ರಾಮಗಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಹಾಗೂ ಉತ್ತಮ ಮೂಲ ಸೌಕರ್ಯಗಳನ್ನು ಪ್ರತಿ ಹಳ್ಳಿಗಳಿಗೂ ಒದಗಿಸುವ ದೊಡ್ಡ ಸವಾಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲಿದೆ.
ಇದೆಲ್ಲವೂ ತ್ವರಿತವಾಗಿ ಮೆಟ್ಟಿನಿಂತರೇ ಜನಸಂಖ್ಯೆ ಹೆಚ್ಚಳವು ಭಾರತಕ್ಕೆ ದೊಡ್ಡ ಸವಾಲಾಗದೆ ಅಭಿವೃದ್ಧಿಗೆ ಪೂರಕ ವಾಗುವು ದಂತೂ ಗ್ಯಾರಂಟಿ. ಇದು ಸಫಲವಾದರೆ ಭಾರತ ೨೦೨೫ರ ವೇಳೆಗೆ ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಮುಟ್ಟುವುದು ಆಸಾಧ್ಯವೇನ್ನಲ್ಲ. ಜೊತೆಗೆ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (ಯುಎನ್ ಎಫ್ಪಿಎ) ಭಾರತದ ಪ್ರತಿನಿಧಿ ಯಾಗಿರುವ ಆಂಡ್ರಿಯಾ ವೊಜ್ನರ್ ಭಾರತದ ಜನನ ಪ್ರಮಾಣ ಏರಿಕೆಯ ಕುರಿತಂತೆ ಆಶಾಭಾವನೆ ವ್ಯಕ್ತಪಡಿಸಿರುವ ಅವರು, ಭಾರತದ ೧೪೦ ಕೋಟಿ ಜನರನ್ನು ೧೪೦ ಕೋಟಿ ಅವಕಾಶಗಳಿಗಾಗಿ ನೋಡಬೇಕು.
ಅತಿ ಹೆಚ್ಚು ಯುವ ಸಮೂಹವನ್ನು ಹೊಂದಿರುವ ಭಾರತ ಯುವ ಸಮುದಾಯವನ್ನು ಸದುಪಯೋಗ ಪಡಿಸಿಕೊಂಡರೆ ಜನಸಂಖ್ಯೆ ಹೆಚ್ಚಳ ಭಾರತಕ್ಕೆ ಸಮಸ್ಯೆಯಾಗದೆ ಅಭಿವೃದ್ಧಿಗೆ ಪೂರಕವಾಗಬಹುದು ಎನ್ನುವ ಭರವಸೆಯನ್ನು ಆಂಡ್ರಿಯಾ
ವೊಜ್ನರ್ ವ್ಯಕ್ತಪಡಿಸಿರುವುದು ನಿಜಕ್ಕೂ ಅರ್ಥಗರ್ಭಿತವಾಗಿದೆ. ಈ ನಿಟ್ಟಿನಲ್ಲಿ ಭಾರತ ಮುಂಜಾಗ್ರತೆ ವಹಿಸಿ ಮತ್ತು ಸೂಕ್ತ ಯೋಜನೆಗಳನ್ನು ರೂಪಿಸಿದರೆ ಭಾರತಕ್ಕೆ ಜನಸಂಖ್ಯೆ ಹೆಚ್ಚಳವು ಶಾಪವಾಗದೇ ವರವಾಗಿ ಪರಿಣಮಿಸಬಹುದು. ಹಾಗಾಗಿ ಜನಸಂಪನ್ಮೂಲವನ್ನು ಭಾರತ ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.