Thursday, 12th December 2024

ಪ್ರಯೋಗಕ್ಕೆ ಸಿಗುವುದೇ ಮಾನ್ಯತೆ ?

ಅಶ್ವತ್ಥಕಟ್ಟೆ

ranjith.hoskere@gmail.com

ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾಗಿದೆ. ದೇಶಾದ್ಯಂತ ಏಳು ಹಂತದಲ್ಲಿ ಮತದಾನ ನಡೆದರೆ, ಕರ್ನಾಟಕದಲ್ಲಿ ಎರಡು ಹಂತದಲ್ಲಿ ನಡೆಯಲಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ರಾಜ್ಯ ಕರ್ನಾಟಕದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದು ಈಗಿರುವ ಬಹುದೊಡ್ಡ ಕುತೂಹಲ.

ಇಡೀ ದೇಶದಲ್ಲಿರುವ ಮೋದಿ ಹವಾವನ್ನು ಎದುರಿಸುವ ಶಕ್ತಿ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿರುವುದರಿಂದ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಕರ್ನಾಟಕ ಮಹತ್ವದ್ದಾಗಿದೆ. ಇದೇ ರೀತಿ ಕಳೆದ ಬಾರಿ ೨೫ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿಗೆ ಈ ಬಾರಿ ಜೆಡಿಎಸ್ ಬಲವೂ ಸಿಕ್ಕಿರುವುದರಿಂದ ಇದೇ ರೀತಿಯ ಸಾಧನೆ ಮಾಡುವ ಮೂಲಕ, ೪೦೦ರ ಗುರಿಯತ್ತ ಸಾಗುವ ಲೆಕ್ಕಾಚಾರದಲ್ಲಿದೆ.

ಈ ಬಾರಿ ಚುನಾವಣೆಗೂ ಮೊದಲೇ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಪರಿಣಾಮ ೨೮ ಕ್ಷೇತ್ರಗಳ ಪೈಕಿ ೨೫ ಕ್ಷೇತ್ರಗಳಲ್ಲಿ ಮಾತ್ರ ಕಮಲ ಚಿಹ್ನೆಯಲ್ಲಿ ಅಭ್ಯರ್ಥಿಗಳು ಸ್ಪಽಸುತ್ತಿದ್ದಾರೆ. ಜೆಡಿಎಸ್ ಪ್ರಭಾವವಿರುವ ಹಳೇ ಮೈಸೂರು ಭಾಗದ ಮೂರು ಕ್ಷೇತ್ರಗಳನ್ನು ಅದಕ್ಕೆ ಬಿಟ್ಟುಕೊಡಲಾಗಿದೆ. ಬಿಜೆಪಿ ಬಳಿಯಿರುವ ೨೫ ಕ್ಷೇತ್ರಗಳ ಪೈಕಿ ಈಗಾಗಲೇ ೨೦ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ನಿರೀಕ್ಷೆಯಂತೆ ಒಂಬತ್ತಕ್ಕೂ ಹೆಚ್ಚು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಗಳಾಗಿದ್ದ ಅನೇಕರಿಗೆ ಟಿಕೆಟ್ ಕೈತಪ್ಪಿದ್ದು, ಟಿಕೆಟ್ ತಪ್ಪುವುದಕ್ಕೆ ಒಬ್ಬೊಬ್ಬರು
ಒಂದೊಂದು ‘ಸಮರ್ಥನೆ’ ನೀಡುತ್ತಿದ್ದಾರೆ. ಆದರೆ ಒಬ್ಬೊಬ್ಬರ ಟಿಕೆಟ್ ಕೈತಪ್ಪುವ ಹಿಂದೆಯೂ ಹತ್ತಾರು ಲೆಕ್ಕಾಚಾರಗಳಿರುವುದು ಖಚಿತ ಎನ್ನುವುದು ನಿಶ್ಚಿತ.

ಕಳೆದ ವರ್ಷ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನದ ಬೆನ್ನಲ್ಲೇ, ವಿಧಾನಸಭಾ ಚುನಾವಣೆಯ ಕೆಲವೊಂದಷ್ಟು ಮಾನದಂಡಗಳನ್ನು ಬದಲಾಯಿಸಿದ ಬಿಜೆಪಿ ವರಿಷ್ಠರು, ಕೆಲವು ಕ್ಷೇತ್ರದಲ್ಲಿ ‘ಯಥಾಸ್ಥಿತಿ’ ಕಾಯ್ದುಕೊಂಡಿದ್ದರೆ, ಇನ್ನು ಕೆಲವೊಂದಷ್ಟು ಕ್ಷೇತ್ರದಲ್ಲಿ ಪ್ರಯೋಗಕ್ಕೆ ಕೈಹಾಕಿ ದ್ದಾರೆ. ಈ ರೀತಿಯ ಪ್ರಯೋಗಗಳೇ ಇಂದು ಹಲವು ಕ್ಷೇತ್ರ ದಲ್ಲಿ ಬಂಡಾಯದ ಬಿಸಿ ಕಾಣಿಸಿಕೊಳ್ಳು ವಂತೆ ಮಾಡಿದೆ.

ಕೆಲವು ಕ್ಷೇತ್ರಗಳಲ್ಲಿ ಬಂಡಾಯದ ಕಾವು ಬಂದಷ್ಟೇ ವೇಗವಾಗಿ ಮರೆಯಾಗುವ ಸಾಧ್ಯತೆಯಿದ್ದರೆ, ಇನ್ನು ಕೆಲ ಬಂಡಾಯಗಳು ಚುನಾವಣಾ ಸಮಯ ದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ‘ಮಗ್ಗುಲು ಮುಳ್ಳಾಗುವ’ ಆತಂಕವಿದೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕಾಂತೇಶ್‌ಗೆ ಹಾವೇರಿ-ಗದಗ ಲೋಕಸಭಾ ಟಿಕೆಟ್ ತಪ್ಪಲು, ಪ್ರತಾಪ್ ಸಿಂಹ ಕೈಯಿಂದ ಮೈಸೂರು-ಕೊಡಗು ಟಿಕೆಟ್ ತಪ್ಪಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ
ಯೂರಪ್ಪ ಅವರೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದರಲ್ಲಿಯೂ ಈಶ್ವರಪ್ಪ ಅವರು,‘ತಮ್ಮ ಮಕ್ಕಳ ಅಭಿವೃದ್ಧಿಗೆ ನನ್ನ ಮಗನಿಗೆ ಟಿಕೆಟ್ ತಪ್ಪಿಸಿದ್ದಾರೆ’ ಎನ್ನುವ ನೇರ ಆರೋಪವನ್ನು ಮಾಡಿದ್ದಾರೆ. ನಿರೀಕ್ಷೆಯಂತೆ ಮಂಗಳೂರು, ಬಳ್ಳಾರಿ, ತುಮಕೂರು, ಕೊಪ್ಪಳ, ಹಾವೇರಿಯಲ್ಲಿ ಹಾಲಿ ಸಂಸದರ ಬದಲಿಗೆ ಹೊಸಬರಿಗೆ ಅವಕಾಶ ನೀಡಲಾಗಿದೆ. ಚಿಕ್ಕಮಗಳೂರಿನ ಹಾಲಿ ಸಂಸದೆ ಶೋಭಾ ಅವರನ್ನು ಬೆಂಗಳೂರು ಉತ್ತರಕ್ಕೆ ತಂದು, ಅಲ್ಲಿಗೆ ಅಚ್ಚರಿಯ ರೀತಿಯಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ನಿಲ್ಲಿಸಲಾಗಿದೆ.

ಇನ್ನು ದಾವಣಗೆರೆಯಲ್ಲಿ ಜಿ.ಎಂ. ಸಿದ್ದೇಶ್ವರ್ ಬದಲಿಗೆ, ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಗೆ ನೋಡಿದರೆ, ಯಾವುದೇ ಚುನಾವಣೆಯಲ್ಲಿ ಟಿಕೆಟ್ ನೀಡಿದಾಗಲೂ ಈ ರೀತಿಯ ಬಂಡಾಯ, ಕೆಲವೊಂದಷ್ಟು ಪ್ರತಿಭಟನೆ ಸಹಜವಾಗಿ ನಡೆಯುತ್ತದೆ. ಅದರಲ್ಲಿಯೂ ‘ಮೋದಿ ಹವಾ’ದಲ್ಲಿ ಸುಲಭವಾಗಿ ಗೆಲ್ಲಬಹುದು ಎನ್ನುವ ವಾತಾವರಣವಿರುವಾಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುತ್ತದೆ. ನಾಲ್ಕೈದು ಪ್ರಬಲ ಆಕಾಂಕ್ಷಿಗಳಿರುವಾಗ,
ಯಾರಿಗೆ ಟಿಕೆಟ್ ನೀಡಿದರೂ ಇನ್ನುಳಿದವರಿಗೆ ಅಸಮಾಧಾನವಾಗುವುದು ಸಹಜ. ಆದರೆ ಅಸಮಾಧಾನ ಬಂಡಾಯವಾಗಿ, ಬಂಡಾಯ ಯಾವ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ ಎನ್ನುವುದರ ಮೇಲೆ ಬಂಡಾಯದ ಬಿಸಿ ನಿರ್ಧಾರವಾಗುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಯಾವುದೇ ಬಂಡಾಯವೆದ್ದರೂ ಅದನ್ನು ‘ನಿಭಾಯಿಸುವಷ್ಟು’ ಬಿಜೆಪಿ ವರಿಷ್ಠರು ಶಕ್ತರಾಗಿದ್ದಾರೆ ಎನ್ನುವುದು ಬಹುಜನರಿಗೆ ತಿಳಿದಿರುವ ವಿಷಯ. ಕರ್ನಾಟಕದಲ್ಲಿ ಕೆಲವೊಂದಷ್ಟು ಸೀಟುಗಳ ಆಯ್ಕೆಯ ವಿಷಯದಲ್ಲಿ ಗೊಂದಲ ಹಾಗೂ ಗೋಜಲು ಇದ್ದದ್ದು ನಿಜ.
ಹಾಲಿ ಸಂಸದರಾಗಿ, ಕಳೆದೊಂದು ದಶಕದಲ್ಲಿ ಹಲವು ಕಾಮಗಾರಿಗಳನ್ನು ಮೈಸೂರು-ಕೊಡಗು ಕ್ಷೇತ್ರಕ್ಕೆ ಡೈವರ್ಟ್ ಮಾಡಿದ್ದ ಪ್ರತಾಪ್ ಸಿಂಹ ಅವರಿಗೆ ಮೂರನೇ ಅವಧಿಗೂ ಟಿಕೆಟ್ ನಿಶ್ಚಿತ ಎನ್ನುವ ಮಾತುಗಳೇ ಕೇಳಿಬಂದಿದ್ದವು. ಆದರೆ ಅವರ ಬದಲಿಗೆ ಮೈಸೂರು ರಾಜವಂಶಸ್ಥ ಯದುವೀರ್ ಅವರಿಗೆ ಸಿಕ್ಕಿದ್ದು, ಈ ಬಾರಿಯ ಬಹು ಅಚ್ಚರಿಯ ಆಯ್ಕೆಗಳಲ್ಲಿ ಒಂದು ಎಂದರೆ ತಪ್ಪಾಗುವುದಿಲ್ಲ.

ಸ್ವತಃ ಪ್ರತಾಪ್ ಸಿಂಹ ಅವರಿಗೂ ಟಿಕೆಟ್ ಸಿಗದಿರುವುದಕ್ಕೆ ಕಾರಣ ವೇನು ಎಂದು ಟಿಕೆಟ್ ಘೋಷಣೆಯಾಗಿ ೧೦ ದಿನ ಕಳೆದರೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಇದಕ್ಕೆ ತತ್ವಿರುದ್ಧ ಎನ್ನುವಂತೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜಿ.ಎಂ. ಸಿದ್ದೇಶ್ವರ್ ಅವರಿಗೆ ಟಿಕೆಟ್ ಕೊಡಬಾರದು ಎನ್ನುವ ಒತ್ತಡ ಕೇಳಿ ಬಂದಿತ್ತು. ಸಹಜವಾಗಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ನಿರಾಕರಿಸಿದರೂ, ಅವರ ಪತ್ನಿ ಗಾಯತ್ರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಹಾಗೆ ನೋಡಿದರೆ, ಈವರೆಗೆ ಗಾಯತ್ರಿ ಅವರು ಎಂದಿಗೂ ರಾಜಕೀಯ ವೇದಿಕೆಗಳನ್ನು ಹಂಚಿಕೊಂಡಿರುವುದನ್ನು ಅಲ್ಲಿನ ಸ್ಥಳೀಯ ನಾಯಕರೇ ನೋಡಿಲ್ಲ.

ಈ ಬಾರಿ ೨೦ ಕ್ಷೇತ್ರಗಳಲ್ಲಿ ಒಂಬತ್ತು ಲೋಕಸಭಾ ಸದಸ್ಯರಿಗೆ ಟಿಕೆಟ್ ಕೈತಪ್ಪಲು ಒಂದೊಂದು ಕಾರಣವನ್ನು ನೀಡಲಾಗುತ್ತಿದೆ. ಕೆಲವೊಂದಷ್ಟು ಮಂದಿಯ ಸಾಧನೆ ಹೇಳಿಕೊಳ್ಳುವಷ್ಟು ಇಲ್ಲದಿದ್ದರೂ ‘ಮರು ಆಯ್ಕೆ’ಗೆ ಅವಕಾಶವನ್ನು ನೀಡಲಾಗಿದೆ. ಆದರೆ ಈ ಬಾರಿ ಟಿಕೆಟ್ ಕೈತಪ್ಪಿರುವ
ಬಹುತೇಕರಿಗೆ ಇರುವ ಬಹುದೊಡ್ಡ ಸಮಸ್ಯೆಯೆಂದರೆ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರು ಹಾಗೂ ಜನರೊಂದಿಗೆ ಬೆರೆತಿಲ್ಲ ಅಥವಾ ‘ಸರಿಯಾಗಿ’ ನಡೆಸಿಕೊಂಡಿಲ್ಲ ಎನ್ನುವ ಆರೋಪವಿದೆ. ಉದಾಹರಣೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವರಾಗಿದ್ದ ಜಿ.ಎಂ. ಸಿದ್ದೇಶ್ವರ್, ಸದಾನಂದಗೌಡ ಅವರು ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ ಎನ್ನುವ ಆರೋಪವಿದೆ.

ಇದರೊಂದಿಗೆ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ಆರೋಪವಿದೆ. ಇನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕೆಲಸದ ವಿಷಯದಲ್ಲಿ ಸಮರ್ಥರಾಗಿದ್ದರೂ, ಸ್ಥಳೀಯ ಕಾರ್ಯಕರ್ತರು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದರೊಂದಿಗೆ ರಾಜ್ಯ ಮಟ್ಟದಲ್ಲಿ ಯಡಿ
ಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವ ಅಸಮಾಧಾನವಿದೆ. ಇನ್ನು ಬಂಡಾಯ ಸಾರಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪುತ್ರ ಕಾಂತೇಶ್‌ಗೆ ಟಿಕೆಟ್ ಕೈತಪ್ಪುವುದಕ್ಕೂ ಕಾರಣವಿದೆ. ಯಡಿಯೂರಪ್ಪ ಅವರು ಹೇಳಿದ ಕಾರಣಕ್ಕೆ ಟಿಕೆಟ್ ನೀಡಿಲ್ಲ ಎನ್ನುವುದಕ್ಕಿಂತ ಮಿಗಿಲಾಗಿ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರ ಹೆಸರು ತಳಕು ಹಾಕಿಕೊಂಡಿದ್ದು ಹಾಗೂ ರಾಜ್ಯ ನಾಯಕತ್ವದ ವಿರುದ್ಧ ಕೆಲವೊಮ್ಮೆ ನಾಲಿಗೆ ಹರಿಬಿಟ್ಟಿದ್ದು ಕಾರಣ.

ಇದರೊಂದಿಗೆ ಹಾವೇರಿಯಲ್ಲಿನ ಸಮೀಕ್ಷೆಯಲ್ಲಿ ಕಾಂತೇಶ್ ಗೆಲ್ಲುವ ಸಾಧ್ಯತೆ ಕಡಿಮೆಯಿರುವುದು ಒಂದು ಕಾರಣ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಹಾಗೆ ನೋಡಿದರೆ ಕಳೆದೊಂದು ದಶಕದ ಮೋದಿ ಆಡಳಿತದಲ್ಲಿ ಸುತ್ತಮುತ್ತಲಿನ ಪ್ರತಿಯೊಬ್ಬರೂ ‘ಕ್ಲೀನ್ ಹ್ಯಾಂಡ್’ ಆಗಿರಬೇಕು ಎನ್ನುವುದನ್ನು ಮೋದಿ ಬಯಸುತ್ತಾರೆ. ರಾಜ್ಯ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿ ನೋಡಿದರೂ, ವಿವಾದಾತ್ಮಕ ವ್ಯಕ್ತಿಗಳನ್ನು ಸದ್ದಿಲ್ಲದೇ ಹಿಂದಕ್ಕೆ ಸರಿಸಿದ ನೂರಾರು
ಉದಾಹರಣೆಗಳಿವೆ. ಕರ್ನಾಟಕದಲ್ಲಿ ಟಿಕೆಟ್ ವಂಚಿತ ರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರೇ ಆಗಿದ್ದಾರೆ. ಬಣ್ಣವನ್ನೆಲ್ಲ ಮಸಿ ನುಂಗಿತ್ತು ಎನ್ನುವಂತೆ ಯಾವುದೋ ಒಂದು ವಿಚಾರದಲ್ಲಿನ ಎಡವಟ್ಟಿನಿಂದ ಹಲವರ ಟಿಕೆಟ್ ಕೈತಪ್ಪಿರುವುದು
ಸ್ಪಷ್ಟ.

ಮೊದಲೇ ಹೇಳಿದಂತೆ ಟಿಕೆಟ್ ಕೈತಪ್ಪಿರುವುದರಿಂದ ಹಲವು ಕ್ಷೇತ್ರದಲ್ಲಿ ಬಂಡಾಯ ಕಾಣಿಸಿಕೊಂಡಿದೆ. ಇನ್ನುಳಿದ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾದ ಬಳಿಕ ಇನ್ನಷ್ಟು ಬಿಸಿ ಏಳುವ ಸಾಧ್ಯತೆಯಿದೆ. ಆದರೆ ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳುತ್ತಿರುವ ಈಶ್ವರಪ್ಪ ಹೊರತುಪಡಿಸಿ, ಇನ್ಯಾರ ಬಂಡಾಯಕ್ಕೂ ಪಕ್ಷದ ವರಿಷ್ಠರು ಮಣೆ ಹಾಕುತ್ತಿಲ್ಲ. ಈಶ್ವರಪ್ಪ ಅವರು ಬಂಡಾಯವೆದ್ದು ಸ್ಪರ್ಧಿಸಿದರೆ ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ಕೆಲವೊಂದಷ್ಟು ಮತಗಳು ವಿಭಜನೆಯಾಗಲಿದೆ ಎನ್ನುವ ಕಾರಣಕ್ಕೆ ಅವರನ್ನು ಸಮಾಧಾನಪಡಿಸುವ ಒಂದು ಪ್ರಯತ್ನ ಮಾಡುತ್ತಿದ್ದಾರೆಯೇ ಹೊರತು, ಇನ್ನುಳಿದ ಯಾವ ಬಂಡಾಯಕ್ಕೂ ‘ಕ್ಯಾರೆ’ ಎನ್ನುತ್ತಿಲ್ಲ. ಇಂದಿರಾ ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸ್ ನಲ್ಲಿದ್ದ ಹೈಕಮಾಂಡ್ ಸಂಸ್ಕೃತಿ ಇದೀಗ ಬಿಜೆಪಿಯಲ್ಲಿರುವುದು ಸ್ಪಷ್ಟ. ಲೋಕಸಭಾ ಚುಣಾವಣೆಯ ಮಟ್ಟಿಗೆ ನೋಡುವುದಾದರೆ, ರಾಜ್ಯ, ಸ್ಥಳೀಯ ಅಭಿಪ್ರಾಯಗಳೇನೇ ಇರಬಹುದು.

ಆದರೆ ಆ ಎಲ್ಲವನ್ನು ಮೀರಿ ದೆಹಲಿ ನಾಯಕರು, ಅದರಲ್ಲಿಯೂ ಮೋದಿ, ಅಮಿತ್ ಶಾ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎನ್ನುವ ವಾತಾವರಣ
ಈಗ ಬಿಜೆಪಿಯಲ್ಲಿ ನಿರ್ಮಾಣವಾಗಿದೆ. ಟಿಕೆಟ್ ಸಿಗದಿದ್ದಾಗ ‘ಮೌನ’ವಾಗಿದ್ದು ಕೊಂಡು ದಿನ ತಳ್ಳಿದರೆ ಮುಂದಿನ ದಿನದಲ್ಲಿ ಬೇರೆ ಏನಾದರೂ ಅವಕಾಶಗಳಾದರೂ ಸಿಗುವ ಸಾಧ್ಯತೆಗಳಿರುತ್ತದೆ. ಒಂದು ವೇಳೆ ಬಂಡಾಯದ ಗಾಳಿ ಎಬ್ಬಿಸುವ ಪ್ರಯತ್ನ ಮಾಡಿದರೆ, ಸದ್ದಿಲ್ಲದೇ ಈ ಬಂಡಾಯವನ್ನು ಬಗ್ಗುಬಡಿಯುವ ಕಲೆಯೂ ಈಗಿರುವ ಬಿಜೆಪಿ ವರಿಷ್ಠರಿಗೆ ಚೆನ್ನಾಗಿ ಸಿದ್ಧಿಸಿದೆ. ಆದ್ದರಿಂದ ಯಾವ ನಾಯಕ ಬಂಡಾಯವೆದ್ದರೂ, ಈ ಹಿಂದಿನಂತೆ ‘ಸಂಧಾನ’ ಗಳು ಬಹುದೊಡ್ಡ ಪ್ರಮಾಣದಲ್ಲಿ ನಡೆಯುವುದಿಲ್ಲ. ಈ ಸೂಕ್ಷ್ಮವನ್ನು ಅರಿತುಕೊಂಡಿರುವ ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕರು ಟಿಕೆಟ್ ಕೈತಪ್ಪಿದ್ದರೂ ಯಾವುದೇ ಮಾತಾಡದೇ, ‘ಪಕ್ಷದ ನಿಷ್ಠಾವಂತ’ ಕಾರ್ಯಕರ್ತರಾಗಿ ಉಳಿಯಲು ತೀರ್ಮಾನಿಸಿದ್ದಾರೆ.

ಬಿಜೆಪಿ ನಾಯಕರಿಗೆ ಕಳೆದೊಂದು ದಶಕದಿಂದ ಕರ್ನಾಟಕ ಒಂದು ರೀತಿಯ ಪ್ರಯೋಗಶಾಲೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿನ ಪ್ರಯೋಗಗಳು ಕೈಸುಟ್ಟುಕೊಂಡಿರುವ ಉದಾಹರಣೆ ಹೆಚ್ಚಿದ್ದರೂ, ಲೋಕಸಭಾ ಚುನಾವಣೆಯ ಸಮಯದಲ್ಲಿ ಕೇಂದ್ರದ ವರಿಷ್ಠರು ಕೈಗೊಂಡಿರುವ ಬಹುತೇಕ ಪ್ರಯೋಗಗಳು ಯಶಸ್ವಿಯಾಗಿವೆ. ಈ ಕಾರಣಕ್ಕಾಗಿಯೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಹಲವು ಕ್ಷೇತ್ರಗಳಲ್ಲಿ ಪ್ರಯೋಗಕ್ಕೆ ಬಿಜೆಪಿ ಕೈಹಾಕಿದೆ.

ಬಿಜೆಪಿ ವರಿಷ್ಠರ ಈ ಪ್ರಯೋಗಕ್ಕೆ ರಾಜ್ಯದ ಮತದಾರ ಒಪ್ಪುವನೋ ಅಥವಾ ವಿಧಾನಸಭಾ ಚುನಾವಣೆಯ ರೀತಿಯಲ್ಲಿ ತಿರಸ್ಕರಿಸುವನೋ ಎನ್ನುವುದಕ್ಕೆ ಜೂನ್ ೪ರ ಮತ ಎಣಿಕೆ ದಿನವೇ ಉತ್ತರ ದೊರೆಯಲಿದೆ.