Monday, 25th November 2024

ದೇಶಪ್ರೇಮಕ್ಕೆ ಸಮನಾದ ಇಸ್ರೇಲಿಗಳ ಭಾಷಾ ಪ್ರೇಮ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ಯಾವುದೇ ದೇಶಕ್ಕೆ ಹೋದರೂ, ಅಲ್ಲಿನ ಪುಸ್ತಕದ ಅಂಗಡಿಗೆ ಹೋಗದೇ ನಾನು ವಾಪಸ್ ಬರುವುದಿಲ್ಲ. ಕೆಲ ವರ್ಷಗಳ ಹಿಂದೆ ಇಸ್ರೇಲಿಗೆ ಹೋದಾಗಲೂ ಅಲ್ಲಿನ ನಾಲ್ಕು ಪ್ರಮುಖ ಹಾಗೂ ದೊಡ್ಡ ಪುಸ್ತಕದ ಅಂಗಡಿಗಳಿಗೆ ಹೋಗಿದ್ದೆ. ಟೆಲ್ ಅವಿವ್ ನಗರದಲ್ಲಿ ಲೋಟಸ್ ಬುಕ್ಸ್, ರಾಬಿನ್‌ಸನ್ ಬುಕ್ಸ್, ದಿ ಲಿಟಲ್ ಪ್ರಿನ್ಸ್, ಹಾಲ್ಪರ‍್ಸ್ ಬುಕ್… ಹೀಗೆ ಅನೇಕ ಪುಸ್ತಕದಂಗಡಿಗಳಿವೆ.

ಅಪರೂಪದ, ಸೆಕೆಂಡ್ ಹ್ಯಾಂಡ್ ಹಾಗೂ ಇತ್ತೀಚಿನ ಪುಸ್ತಕಗಳೆಲ್ಲ ಅಲ್ಲಿ ಸಿಗುತ್ತವೆ. ಮಧ್ಯರಾತ್ರಿಯವರೆಗೂ ತೆರೆದಿರುವ ಈ ಪುಸ್ತಕದ ಮಳಿಗೆಗಳಲ್ಲಿ ಸಮಯ ಜಾರಿದ್ದೇ ಗೊತ್ತಾಗುವುದಿಲ್ಲ. ಪಬ್, ಬಾರ್, ಮಾಲ್‌ಗಳಲ್ಲಿ ಗಿಜಿಗುಡುವಂತೆ, ಈ ಪುಸ್ತಕದ ಅಂಗಡಿಗಳಲ್ಲೂ ಜನ ಆ ಹೊತ್ತಿನಲ್ಲೂ ಸೇರಿರುತ್ತಾರೆ. ನಗರದ ಯಾವ ಬಡಾವಣೆಗೆ ಹೋದರೂ, ಅಲ್ಲೊಂದು ಪುಸ್ತಕದ ಅಂಗಡಿಯನ್ನು ನೋಡಬಹುದು. ಸಮಸ್ಯೆಯೇ ನೆಂದರೆ, ಈ ಎಲ್ಲ ಪುಸ್ತಕದ ಅಂಗಡಿಗಳಲ್ಲಿ ಶೇ.95ರಷ್ಟು ಹೀಬ್ರೂ ಭಾಷೆಯಲ್ಲಿರುವ ಪುಸ್ತಕಗಳೇ.

ಒಂದು ಮೂಲೆಯಲ್ಲಿ ಒಂದು ಟೇಬಲ್ ಮೇಲೋ, ರ‍್ಯಾಕಿನಲ್ಲೋ ಹತ್ತಾರು ಇಂಗ್ಲಿಷ್ ಪುಸ್ತಕಗಳನ್ನು ಕಾಟಾಚಾರಕ್ಕೆ ಇಟ್ಟಿರುತ್ತಾರೆ. ಟೆಲ್ ಅವಿವ್ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಒಂದು ಸೊಗಸಾದ ಪುಸ್ತಕದಂಗಡಿಯಿದೆ. ಅಲ್ಲೂ ಅದೇ ಕತೆ. ಬರೀ ಹೀಬ್ರೂ ಭಾಷೆ ಪುಸ್ತಕಗಳೇ. ಸುಮಾರು ಹದಿನೈದು ಸಾವಿರ ಪುಸ್ತಕಗಳಿರುವ ಆ ಮಳಿಗೆಯಲ್ಲಿ ಇಂಗ್ಲಿಷ್ ಪುಸ್ತಕಗಳು ಹೆಚ್ಚೆಂದರೆ 200-300 ಇರಬಹುದು.

ಹತ್ತಾರು ಹೀಬ್ರೂ ಪತ್ರಿಕೆಗಳ ಮಧ್ಯೆ ಒಂದೋ, ಎರಡೋ ಇಂಗ್ಲಿಷ್ ಪತ್ರಿಕೆಗಳು. ಇಂಟರ್‌ನ್ಯಾಶನಲ್ ಹೆರಾಲ್ಡ್ ಟ್ರಿಬ್ಯೂನ್ ಪತ್ರಿಕೆಯ ಒಳಗಡೆ ಹೀಬ್ರೂ ಭಾಷೆಯ ಸ್ಥಳೀಯ ಪುರವಣಿ. ಆ ಹೀಬ್ರೂ ಪುಸ್ತಕ, ಪತ್ರಿಕೆ, ನಿಯತಕಾಲಿಕೆಗಳ ಮಧ್ಯೆ ಇಂಗ್ಲಿಷ್ ಪುಸ್ತಕಗಳನ್ನು ಹೇಳು ವವರು, ಕೇಳುವವರು ಯಾರೂ ಇರಲಿಲ್ಲ. ಇಂಗ್ಲಿಷ್ ಭಾಷೆಯ ಪತ್ರಿಕೆ, ಪುಸ್ತಕಗಳನ್ನು ಕಂಡರೆ ಅಯ್ಯೋ ಎನಿಸುವಂತಿತ್ತು. ನಮ್ಮಲ್ಲಿ ಇಂಗ್ಲಿಷ್ ಭಾಷೆಯ ಮುಂದೆ ಕನ್ನಡ ಭಾಷೆ ಹೇಗೋ ಅಲ್ಲಿ ಹೀಬ್ರೂ ಮುಂದೆ ಇಂಗ್ಲಿಷ್. ವಿಮಾನ ನಿಲ್ದಾಣದ ಪುಸ್ತಕದಂಗಡಿಯಲ್ಲಿ ಹೀಬ್ರೂ ಭಾಷೆಯ ಪುಸ್ತಕಗಳ ವೈವಿಧ್ಯ ಬೆರಗು ಹುಟ್ಟಿಸುವಂಥದ್ದು.

ಅಂಕಲಿಪಿಯಿಂದ ಹಿಡಿದು ರಾಕೆಟ್ ವಿಜ್ಞಾನದವರೆಗೆ ಎಲ್ಲ ವಿಷಯಗಳಲ್ಲಿ ಪುಸ್ತಕ ಲಭ್ಯ. ಯಾವುದೇ ಪುಸ್ತಕದ ಅಂಗಡಿಗೆ ಹೋಗಿ, ಇಂಗ್ಲಿಷ್ ಪುಸ್ತಕಗಳ ವಿಭಾಗವನ್ನು ಹುಡುಕಬೇಕು. ಇನ್ನು ಕೆಲವು ಅಂಗಡಿಗಳಲ್ಲಿ ಆ ವಿಭಾಗವೂ ಇಲ್ಲ. ಬರೀ ಹೀಬ್ರೂ ಪುಸ್ತಕಗಳೇ. ವಿಮಾನ ನಿಲ್ದಾಣದ ಪುಸ್ತಕದ ಅಂಗಡಿಯಲ್ಲಿ ‘ನಿಮ್ಮಲ್ಲಿ ಏಕೆ ಇಂಗ್ಲಿಷ್ ಪುಸ್ತಕಗಳ ವಿಭಾಗದಲ್ಲಿ ಕೆಲವೇ ಪುಸ್ತಕಗಳಿವೆ?’ ಎಂದು ಕೇಳಿದೆ. ಅದಕ್ಕೆ ಅಲ್ಲಿದ್ದ ಪರಿಚಾರಕಿ, ‘ನಮ್ಮಲ್ಲಿ ಯಾರೂ ಇಂಗ್ಲಿಷ್ ಪುಸ್ತಕಗಳನ್ನುಓದುವುದಿಲ್ಲ. ನಿಮ್ಮಂಥವರು ಕೇಳಿದರೆ ಇರಲಿ ಎಂದು ಅಷ್ಟು ಪುಸ್ತಕ ಗಳನ್ನು ಇಟ್ಟಿದ್ದೇವೆ’ ಎಂದಳು.

‘ಅದ್ಸರಿ, ನಿಮ್ಮಲ್ಲಿ ಎಲ್ಲರೂ ಹೀಬ್ರೂ ಪುಸ್ತಕಗಳನ್ನೇ ಇಷ್ಟಪಡುವುದೇಕೆ?’ ಎಂದು ಅವಳನ್ನು ಕೇಳಿದೆ. ‘ಇಂಗ್ಲಿಷಿನಲ್ಲಿ ಓದುವುದಕ್ಕಿಂತ ತಮ್ಮ ಮಾತೃಭಾಷೆಯಲ್ಲಿ ಓದುವುದನ್ನು ಇಸ್ರೇಲಿಗಳು ಇಷ್ಟಪಡುತ್ತಾರೆ. ಇಂಗ್ಲಿಷಿಗಿಂತ ನಮ್ಮ ಭಾಷೆ ಯಾವುದರಲ್ಲಿ ಕಡಿಮೆಯಿದೆ?
ನಮ್ಮ ಮಾತೃ ಭಾಷೆಯಲ್ಲಿ ಓದುವುದರ ಆನಂದವೇ ಬೇರೆ. ಹೀಬ್ರೂ ಭಾಷೆಯ ಗಂಧ-ಗಾಳಿ ಗೊತ್ತಿಲ್ಲದ ನನ್ನಂಥವರು ಇಂಗ್ಲಿಷ್ ಪುಸ್ತಕಗಳನ್ನು ಖರೀದಿಸಿ ಯಾರು. ಇಂಗ್ಲಿಷ್ -ಹೀಬ್ರೂ ಭಾಷೆಗಳೆರಡೂ ಗೊತ್ತಿದ್ದವರು, ಇಂಗ್ಲಿಷ್ ಬದಲು ಹೀಬ್ರೂ ಭಾಷೆ ಪುಸ್ತಕಗಳನ್ನೇ ಖರೀದಿಸುತ್ತಾರೆ. ಇಸ್ರೇಲಿನಲ್ಲಿ ಹೀಬ್ರೂ ಭಾಷೆ ಪುಸ್ತಕಗಳನ್ನು ಓದುವುದು ಒಂಥರ status symbo. ಇಂಗ್ಲಿಷ್ ಪತ್ರಿಕೆ, ಪುಸ್ತಕ ಗಳನ್ನು ಓದುವವರೆಂದರೆ ದೇವಲೋಕದಿಂದ ಇಳಿದು ಬಂದವರು ಎಂಬ ಭಾವನೆ ಇಲ್ಲ.

ಅಪ್ಪಟ ಕನ್ನಡಿಗರು ಸಹ ಬೆಂಗಳೂರಿನಿಂದ ಹೊರಡುವ ವಿಮಾನದಲ್ಲಿ ಗಗನಸಖಿಗೆ ಇಂಗ್ಲಿಷ್ ಪತ್ರಿಕೆ ಕೊಡಿ ಎನ್ನುವುದು ತೀರಾ ಸಹಜ. ಇಲ್ಲಿಂದ ಹೊರಡುವ ಯಾವ ವಿಮಾನದಲ್ಲೂ ಕನ್ನಡ ಪತ್ರಿಕೆಗಳನ್ನು ಇಟ್ಟಿರುವುದಿಲ್ಲ. ಆದರೆ ಇಸ್ರೇಲಿನಿಂದ ಹೊರಡುವ ಯಾವ ವಿಮಾನ ದಲ್ಲೂ ಇಂಗ್ಲಿಷ್ ಪತ್ರಿಕೆಗಳು ಸಿಗುವುದಿಲ್ಲ. ಎಲ್ಲ ಪ್ರಯಾಣಿಕರ ಕೈಯಲ್ಲೂ ಹೀಬ್ರೂ ಪತ್ರಿಕೆಗಳೇ.

ನಮ್ಮಲ್ಲಿ ಹಾಗಲ್ಲ, ವಿಮಾನದಲ್ಲಿ ಕನ್ನಡ ಪತ್ರಿಕೆಗಳನ್ನು ಓದುವುದೆಂದರೆ ಆತ್ಮಗೌರವಕ್ಕೆ, ಪ್ರತಿಷ್ಠೆಗೆ ಧಕ್ಕೆ, ಅವಮಾನ ಎಂಬ ಭಾವನೆ ಅನೇಕರಲ್ಲಿದೆ. ಹೀಗಾಗಿ ಅವರು ಕನ್ನಡದ ಬದಲಿಗೆ ಇಂಗ್ಲಿಷ್ ಪತ್ರಿಕೆಯನ್ನೇ ಬಯಸುತ್ತಾರೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಮೂರು ಪುಸ್ತಕದ ಅಂಗಡಿಗಳಿವೆ. ಯಾವ ಅಂಗಡಿಗಳಲ್ಲೂ ಕನ್ನಡ ಪುಸ್ತಕಗಳಿಲ್ಲ. ‘ಕನ್ನಡ ಪುಸ್ತಕಗಳನ್ನು ಯಾಕೆ ಇಟ್ಟಿಲ್ಲ?’ ಎಂದು ಕೇಳಿ ದರೆ, ‘ಯಾರೂ ಕೇಳುವುದಿಲ್ಲ’ ಅಂತಾರೆ. ‘ನೀವು ಇಟ್ಟರೆ ಕೇಳುತ್ತಾರೆ. ಕನ್ನಡ ಪುಸ್ತಕಗಳನ್ನು ಇಟ್ಟು ನೋಡಿ’ ಎಂದರೆ, ‘ಇಟ್ಟು ನೋಡಿ ಯಾಯ್ತು, ಯಾರೂ ಖರೀದಿಸುವುದಿಲ್ಲ’ ಅಂತಾರೆ.

ಇಸ್ರೇಲಿನ ಯಾವುದೇ ಊರಿಗೆ ಹೋದರೂ ಕಣ್ಣಿಗೆ ರಾರಾಜಿಸುವುದು ಹೀಬ್ರೂ ಬೋರ್ಡ್‌ಗಳೇ. ಕೆಲವು ಕಡೆ ಇಂಗ್ಲಿಷ್ ಬೋರ್ಡ್ ಸಹ ಇಲ್ಲ. ಹೀಬ್ರೂ ಗೊತ್ತಿಲ್ಲದ, ಬೇರೆ ದೇಶಗಳ ಪ್ರವಾಸಿಗರಿಗೆ ಇದರಿಂದ ತುಸು ಕಿರಿಕಿರಿ ಅಥವಾ ಅನನುಕೂಲ ಆಗುವಷ್ಟು ಅತಿಯಾಗಿ ಆ ಭಾಷೆಯ ಫಲಕಗಳು ಕಣ್ಣಿಗೆ ರಾಚುತ್ತವೆ ಹಾಗೂ ಗಲಿಬಿಲಿಗೊಳಿಸುತ್ತವೆ. ಆದರೂ ಇಸ್ರೇಲಿಗಳು ಭಾಷೆಯ ವಿಚಾರದಲ್ಲಿ ರಾಜಿ ಆಗಿಲ್ಲ. ಐದು ವರ್ಷಗಳ ಹಿಂದೆ ಹೀಬ್ರೂ, ಅರೇಬಿಕ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಫಲಕಗಳಿರುತ್ತಿದ್ದವು.

ಈಗ ಹೀಬ್ರೂ ಮಾತ್ರ ಕಡ್ಡಾಯಗೊಳಿಸಿ, ಉಳಿದೆರಡನ್ನು ಐಚ್ಛಿಕಗೊಳಿಸಿದ್ದಾರೆ. ಈ ವಿಷಯದಲ್ಲಿ ಅಲ್ಲಲ್ಲಿ ವಿರೋಧಗಳು ವ್ಯಕ್ತವಾದರೂ, ಹೀಬ್ರೂ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲವೆಂದು ಸರಕಾರ ಸ್ಪಷ್ಟಪಡಿಸಿದೆ. ಒಮ್ಮೆ ಇಸ್ರೇಲ್‌ಗೆ ಹೋದಾಗ, ಹೀಬ್ರೂ ವಿಶ್ವ ವಿದ್ಯಾಲಯದಲ್ಲಿರುವ ಅಕಾಡೆಮಿ ಫ್ ದಿ ಹೀಬ್ರೂ ಲ್ಯಾಂಗ್ವೇಜ್ ಮುಖ್ಯಸ್ಥರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅವರ ಜತೆ
ಮಾತಾಡುವಾಗ, ‘ಎಲ್ಲೆಡೆ ಹೀಬ್ರೂ ಫಲಕಗಳೇ ರಾರಾಜಿಸುವುದರಿಂದ, ನಮ್ಮಂಥ ಪ್ರವಾಸಿಗರಿಗೆ ಕಷ್ಟವಾಗುತ್ತದೆ. ಈ ವಿಷಯದಲ್ಲಿ ಸ್ವಲ್ಪ ವಿನಾಯಿತಿ ತೋರಬಹುದಲ್ಲ?’ ಎಂದು ಕೇಳಿದೆ. ಅದಕ್ಕೆ ಅವರು ಖಚಿತ ಧ್ವನಿಯಲ್ಲಿ ಹೇಳಿದರು -‘ಹೀಬ್ರೂ ವಿಷಯದಲ್ಲಿ ರಾಜಿ ಯಾಗುವ ಪ್ರಶ್ನೆಯೇ ಇಲ್ಲ.

ವಿದೇಶಿ ಪ್ರಯಾಣಿಕರನ್ನು ಪರಿಗಣಿಸಿ ನಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುವುದಿಲ್ಲ. ಒಂದು ವಾರಕ್ಕಾಗಿ ನಮ್ಮ ದೇಶಕ್ಕೆ ಬಂದವರಿಗೆ ಸ್ವಲ್ಪ ತೊಂದರೆ ಆಗಬಹುದು. ಆದರೆ ಎರಡು ದಿನಗಳ ನಂತರ ಕೆಲವು ಲಿಪಿಗಳು ಅರ್ಥವಾಗುತ್ತಾ ಹೋಗುತ್ತವೆ. ಹದಿನೈದು ದಿನಗಳ ನಂತರ ಹೆಚ್ಚು ಕಮ್ಮಿ ಅರ್ಥವಾಗುತ್ತದೆ. ವಿದೇಶಿ ಪ್ರಯಾಣಿಕರನ್ನು ಪರಿಗಣಿಸಿ ಎಲ್ಲೆಡೆ ಇಂಗ್ಲಿಷ್ ಫಲಕ ಹಾಕಿದರೆ, ಅದರಿಂದ ನಾವು
ಇಂಗ್ಲಿಷ್‌ಗೆ ಪ್ರಾಧಾನ್ಯ ನೀಡಿದಂತಾಗುತ್ತದೆ. ಹೀಬ್ರೂಗೆ ಅಲ್ಲ.

ನಮಗೆ ವಿದೇಶಿಯರಿಗಿಂತ ದೇಶಿಯರು ಮುಖ್ಯ. ಅಷ್ಟಕ್ಕೂ ನಾವು ಹೀಬ್ರೂವನ್ನು ಇಸ್ರೇಲಿನಲ್ಲಿ ಮಾತ್ರ ಬಳಸಲು ಸಾಧ್ಯ. ನಿಮ್ಮ ದೇಶದಲ್ಲಿ ಇದನ್ನು ಬಳಸುವುದಿಲ್ಲವಲ್ಲ. ಬಳಸಿ ಅಂತ ನಾವೂ ಹೇಳುವುದಿಲ್ಲವಲ್ಲ. ಈ ವಿಷಯದಲ್ಲಿ ಸ್ವಲ್ಪ ಸಡಿಲವಾದರೂ ನಾವು ಉಳಿಸಿಕೊಂಡ ಭಾಷೆ ಕೈ ತಪ್ಪಿ ಹೋಗಬಹುದು. ಅಷ್ಟಕ್ಕೂ ಹೀಬ್ರೂ ಎಂದಿಗೂ ನಿಮ್ಮ ಭಾಷೆ ಆಗುವುದಿಲ್ಲ. ಅದು ನಮ್ಮ ಭಾಷೆ, ಹೀಗಾಗಿ ನಿಮಗಾಗಿ ನಾವು ಏಕೆ ನಮ್ಮ ಭಾಷೆಯನ್ನು ಬಲಿ ಕೊಡಬೇಕು? ನಮ್ಮ ಭಾಷೆಯನ್ನು ನಾವು ಬಳಸದೇ ಮತ್ಯಾರು ಬಳಸುತ್ತಾರೆ? ನಾವು ಎಷ್ಟು ಕಷ್ಟಪಟ್ಟು ಹೀಬ್ರೂ ಭಾಷೆಗೆ ಮರುಜೀವ ಕೊಟ್ಟಿದ್ದೇವೆ ಗೊತ್ತಾ?’ ಅವರು ಹೇಳಿದ ಕೊನೆ ಸಾಲು ಕೇಳಿ ನನಗೆ ಕುತೂಹಲ ಮೂಡಿತು. ‘ಅಂದರೆ ಹೀಬ್ರೂ ಭಾಷೆಗೆ ಮರುಜೀವ ಕೊಡುವಂಥದ್ದೇನಾಗಿತ್ತು?’ ಎಂದು ಕೇಳಿದೆ.

ಅದಕ್ಕೆ ಅವರು ಹೀಬ್ರೂ ಭಾಷೆಯ ಸಂಕ್ಷಿಪ್ತ ಕತೆ ಹೇಳಿದರು. ಅದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ…. ಶತ ಶತಮಾನಗಳಿಂದ ಹೀಬ್ರೂ ಗ್ರಾಂಥಿಕ ಹಾಗೂ ಆಡುಭಾಷೆಯಾಗಿದ್ದರೂ, ಕ್ರಿ.ಪೂ.200ರ ಹೊತ್ತಿಗೆ ಆ ಭಾಷೆ ಮೃತ ಭಾಷೆ ಎಂಬ ಕುಖ್ಯಾತಿಗೆ ಪಾತ್ರವಾಯಿತು. ಹೀಬ್ರೂ ಮಾತನಾಡಿದರೆ ಮಹಾಪರಾಧ ಎಂಬ ಕಟ್ಟಪ್ಪಣೆ ಹೇರಿದ್ದರಿಂದ, ಅದನ್ನು ಮಾತಾಡಲು ಎಲ್ಲರೂ ಭಯಪಡುತ್ತಿದ್ದರು. ಕ್ರಮೇಣ
ಹೀಬ್ರೂ ಮಾತಾಡುವವರ ಸಂಖ್ಯೆ ಕಡಿಮೆಯಾಗಿ, ಅದು ಸತ್ತ ಭಾಷೆ ಎಂದು ಘೋಷಿಸಲಾಯಿತು. ಈ ಭಾಷೆಯಲ್ಲಿ ಪ್ರಾರ್ಥನೆ ಮಾಡು ವುದನ್ನೂ ನಿಷೇಧಿಸಲಾಯಿತು.

ಸುಮಾರು ಒಂದೂವರೆ ಸಾವಿರ ವರ್ಷಗಳವರೆಗೆ ಹೀಬ್ರೂವನ್ನು ಯಾರೂ ಬಳಸುತ್ತಿರಲಿಲ್ಲ. ಪುಸ್ತಕಗಳಲ್ಲಿ ಅದರ ಬಗ್ಗೆ ಪ್ರಸ್ತಾಪವಾದರೂ,
ಮೃತಭಾಷೆ ಎಂದೇ ಎಲ್ಲೆಡೆ ಉಲ್ಲೇಖವಾಗುತ್ತಿತ್ತು. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಇಸ್ರೇಲಿನಲ್ಲಿ ಯಹೂದಿಗಳ ಪ್ರಾಬಲ್ಯ ನಿಧಾನವಾಗಿ ವೃದ್ಧಿಸಲಾರಂಭಿಸಿದಾಗ, ಅವರ ಗುರುತು, ಅಸ್ಮಿತೆಯ ದ್ಯೋತಕವಾಗಿ ತಮ್ಮದೇ ಆದ ಭಾಷೆಯ ಅಗತ್ಯವನ್ನು ಎಲೈ ಝರ್ ಬೆನ್-ಯಹುದಾ ಎಂಬ ಭಾಷಾಪ್ರೇಮಿ ಪ್ರತಿಪಾದಿಸಿದ. ಹೀಬ್ರೂ ಭಾಷೆಗೆ ಪುನರ್‌ಜನ್ಮ ನೀಡಬೇಕಾದ ಅಗತ್ಯವಿದೆಯೆಂಬು ದನ್ನು ಆತ ಎಲ್ಲೆಡೆ ಮನವರಿಕೆ ಮಾಡಿಕೊಡಲಾರಂಭಿಸಿದ.

ಇದರ ಪರಿಣಾಮವಾಗಿ ಯಹೂದಿಗಳು ವಾಸಿಸುವ ಕಾಲನಿಗಳಲ್ಲಿರುವ ಶಾಲೆಗಳಲ್ಲಿ ಹೀಬ್ರೂವನ್ನು ಕಲಿಸಲಾರಂಭಿಸಲಾಯಿತು. ಆತ ಅನೇಕ ಹೊಸ ಹೊಸ ಪದಗಳನ್ನು ಹುಟ್ಟು ಹಾಕಿದ. ಸ್ವತಃ ತಾನೇ ಹೀಬ್ರೂ ಪದಕೋಶ ಹಾಗೂ ವ್ಯಾಕರಣ ಬರೆದು ಆ ಭಾಷೆಗೆ ಗ್ರಾಂಥಿಕ
ಮೆರುಗು ಹಾಗೂ ಶಾಸೀಯ ಚೌಕಟ್ಟನ್ನು ನೀಡಲು ಹೆಣಗಿದ. ಯಹುದಾನ ಪರಿಶ್ರಮದ ಫಲದಿಂದ ಹೀಬ್ರೂಗೆ ಭದ್ರ ಬುನಾದಿ ಸಿಕ್ಕಂತಾ ಯಿತು. ಇದರಿಂದಾಗಿ ಜನ ಮಾತಾಡುವುದೊಂದೇ ಅಲ್ಲ, ಕ್ರಮೇಣ ಬರೆಯಲಾರಂಭಿಸಿದರು. ಮೂಲ ಬೈಬಲ್‌ನಲ್ಲೂ ಹೀಬ್ರೂದಲ್ಲಿ ಬರೆಯಲಾಗಿದೆಯೆಂಬ ಕಾರಣದಿಂದ, ಈ ಭಾಷೆ ಬಹುಬೇಗ ಸ್ವೀಕೃತಿ ಪಡೆಯಿತು.

ಇದು ಯಹೂದಿಗಳಿಗೆ ಗತಿಸಿ ಹೋದ ಮಹಾವೈಭವವನ್ನು ಪಡೆದಷ್ಟು ಸಂತಸದ ಸಂಗತಿಯಾದ್ದರಿಂದ, ತಮ್ಮ iden ty ಯನ್ನಾಗಿ
ಮಾಡಿಕೊಳ್ಳಲು ತೀರ್ಮಾನಿಸಿದರು. ಈ ಭಾಷೆಯ ಮರುಹುಟ್ಟಿನಲ್ಲಿ ತಮ್ಮ ಅಸ್ತಿತ್ವವಿದೆಯೆಂಬುದನ್ನು ಅವರು ಮನಗಂಡರು. ಈ ಎಲ್ಲ ಕಾರಣಗಳಿಂದ ಹೀಬ್ರೂ ಇಸ್ರೇಲಿನಲ್ಲಿ ಬಹುಬೇಗ ಜನಪ್ರಿಯವಾಯಿತು. ಯಹೂದಿಗಳಿಗೆ ಹೀಬ್ರೂ ತಮ್ಮ ಗುರುತು, ತೋರಿಕೆ ಹಾಗೂ
ಪರಿಚಯದ ಭಾಷೆಯಾಯಿತು. ಹೀಬ್ರೂ ಮಾತಾಡುವವರೆಂದರೆ ಯಹೂದಿಯರೆಂದು ಭಾವಿಸುವಂತಾಯಿತು.

ಯಹೂದಿ ಹಾಗೂ ಹೀಬ್ರೂ ಶರೀರ ಮತ್ತು ಆತ್ಮಗಳಂತಾದವು. ಎಲ್ಲರ ಮನೆಯಲ್ಲೂ ಹೀಬ್ರೂ ಮಾತಾಡುವಂತೆ ತಾಕೀತು  ಮಾಡಲಾ ಯಿತು. ಅಷ್ಟೇ ಅಲ್ಲ, ಹೀಬ್ರೂ ಟೀಚರ‍್ಸ್ ಯೂನಿಯನ್ ಸ್ಥಾಪಿಸಿ, ಆ ಭಾಷೆಯನ್ನು ಕಲಿಸುವವರಿಗೆ ತರಬೇತಿ ನೀಡುವ ಅಭಿಯಾನ ಹಮ್ಮಿ ಕೊಳ್ಳಲಾಯಿತು. ಇದರನ್ವಯ ಇಸ್ರೇಲಿನಲ್ಲಿ ಮನೆಮನೆಯಲ್ಲೂ ಹೀಬ್ರೂ ಕಲಿಸುವವರು ಹುಟ್ಟಿಕೊಂಡರು. ಎಲ್ಲ ಮನೆಗಳಲ್ಲಿ ಕಡ್ಡಾಯ ವಾಗಿ ಆ ಭಾಷೆಯನ್ನು ಮಾತಾಡಲಾರಂಭಿಸಿದರು. ಯಹೂದಿಗಳಿಗೆ ಹೀಬ್ರೂಸ್ ಎಂದು ಕರೆಯುವಷ್ಟರ ಮಟ್ಟಿಗೆ ಆ ಭಾಷೆ ಮಣ್ಣಿನ ನೆಲದ ಭಾಷೆಯಾಗಿ ಮೈದಾಳಿತು.

1948ರಲ್ಲಿ ಇಸ್ರೇಲ್ ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡಾಗ, ಹೀಬ್ರೂವನ್ನು ಅಽಕೃತ ಭಾಷೆ ಎಂದು ಮಾನ್ಯ ಮಾಡಲಾಯಿತು. ಆನಂತರ ಈ ಭಾಷೆಗೆ ದೇಶಭಾಷೆ ಹಾಗೂ ದೇವಭಾಷೆಯ ಸ್ಥಾನಮಾನ ನೀಡಲಾಯಿತು. ಸಂಪೂರ್ಣ ಸತ್ತು ಹೋದ ಭಾಷೆಯೊಂದು ಹೊಸ ಅವತಾರದಲ್ಲಿ, ಯಹೂದಿಯರ ಹೃದಯಭಾಷೆಯಾಗಿ, ಕೊರಳ ಭಾಷೆಯಾಗಿ, ಜನಮನದ ಆಡುಭಾಷೆಯಾಗಿ, ಗಂಡುಮೆಟ್ಟಿನ ನೆಲದ ಗಟ್ಟಿಭಾಷೆಯಾಗಿ ನೆಲೆ ನಿಂತಿತು.

ಹೀಬ್ರೂ ಜನಪ್ರಿಯ ಹಾಗೂ ಜನಮನದ ಭಾಷೆಯಾಗಬೇಕಾದರೆ, ಅದು ಕೇವಲ ವಿದ್ವಾಂಸರ ಭಾಷೆಯಲ್ಲದೇ, ಜನಸಾಮಾನ್ಯರ ಭಾಷೆಯಾಗಬೇಕು. ಜಗತ್ತಿನ ಎಲ್ಲ ಭಾಷೆಗಳಲ್ಲಿರುವ ಶ್ರೇಷ್ಠ ಸಾಹಿತ್ಯ, ವಿಚಾರ, ಸಿದ್ಧಾಂತಗಳೆಲ್ಲ ಹೀಬ್ರೂದಲ್ಲಿ ಕೂಡ ಸಿಗುವಂತಾಗ ಬೇಕು, ಜಗತ್ತಿನ ಯಾವುದೇ ಭಾಷೆಗೆ ಸಂವೇದಿಯಾಗಿ ಹೀಬ್ರೂ ಸಹ ರೂಪುಗೊಳ್ಳಬೇಕು ಎಂದು ಅರಿತ ಸರಕಾರ 1953ರಲ್ಲಿ ಹೀಬ್ರೂ
ಭಾಷಾ ಅಕಾಡೆಮಿಯನ್ನು ಸ್ಥಾಪಿಸಿತು. ಅಂದಿನಿಂದ ಈ ತನಕ ಹೀಬ್ರೂ ಬೆಳವಣಿಗೆ, ಅಭಿವೃದ್ಧಿ ಹಾಗೂ ಪ್ರಸರಣಕ್ಕೆ ಈ ಅಕಾಡೆಮಿ ಮಾಡಿದ ಸಾಧನೆ ಅನನ್ಯ. ಜಗತ್ತಿನ ಯಾವುದೇ ಮೂಲೆ ಯಲ್ಲಿ, ಯಾವುದೇ ಭಾಷೆಯಲ್ಲಿ ಉಪಯುಕ್ತ, ಮೌಲಿಕ ಹಾಗೂ ಮಹತ್ವದ ಗ್ರಂಥವಾಗಲಿ, ಪುಸ್ತಕವಾಗಲಿ ಪ್ರಕಟವಾಗಲಿ, ಅದು ಕೆಲ ದಿನಗಳಲ್ಲಿ ಹೀಬ್ರೂ ಭಾಷೆಯಲ್ಲಿ ತರ್ಜುಮೆಯಾಗಿ ಲಭ್ಯವಾಗುತ್ತದೆ.

ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯಕ್ಕೆ ಸಂಬಂಧಿಸಿದ ಪುಸ್ತಕಗಳು ಸಹ ಹೀಬ್ರೂಗೆ ಅನುವಾದಗೊಂಡಿವೆ. ಹೀಬ್ರೂ ಭಾಷೆಯಲ್ಲಿರುವ ವೈದ್ಯಕೀಯ ಪುಸ್ತಕಗಳನ್ನು ಓದಿ ಡಾಕ್ಟರ್ ಆಗಬಹುದು. ಕಂಪ್ಯೂಟರ್ ಪುಸ್ತಕಗಳನ್ನು ಓದಿ ಕಂಪ್ಯೂಟರ್ ಎಂಜಿನಿಯರ್ ಆಗಬಹುದು. ಅದಕ್ಕಾಗಿ ಇಂಗ್ಲಿಷ್ ಪುಸ್ತಕಗಳಿಗೆ ಮೊರೆ ಹೋಗಬೇಕಿಲ್ಲ. ಇಂಗ್ಲಿಷಿನ ನೆರವಿಲ್ಲದೇ ವೈದ್ಯ, ಎಂಜಿನಿಯರ್, ವಿಜ್ಞಾನಿ ಆಗಬಹುದು.
ರಾಕೆಟ್, ಉಪಗ್ರಹ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಹೀಬ್ರೂದಲ್ಲಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಪಠ್ಯ ಪುಸ್ತಕಗಳಿಗಾಗಿ ಇಂಗ್ಲಿಷ್‌ನ್ನು ಆಶ್ರಯಿಸಬೇಕಿಲ್ಲ.

ಹೀಬ್ರೂವನ್ನು ಎಲ್ಲಾ ಭಾಷೆಗಳನ್ನು ಒಳಗೊಳ್ಳುವ ಹತ್ತೂ ಸಮಸ್ತರ ಭಾಷೆಯನ್ನಾಗಿ ರೂಪಿಸಲಾಗಿದೆ. ಇಂಗ್ಲಿಷಿನಲ್ಲಿ ಯಾವುದೇ ಹೊಸ ಶಬ್ದ ಬರಲಿ, ಅದಕ್ಕೆ ಸಮನಾದ ಹೀಬ್ರೂ ಶಬ್ದವನ್ನು ಅಕಾಡೆಮಿ ಸಿದ್ಧ ಪಡಿಸಿ, ಚಲಾವಣೆಗೆ ತರುತ್ತದೆ. ಪ್ರತಿವರ್ಷ ಸುಮಾರು ಎರಡು
ಸಾವಿರಕ್ಕೂ ಅಧಿಕ ಪದಗಳು ಹೀಬ್ರೂ ಪದಕೋಶವನ್ನು ಸೇರುತ್ತವೆ. ಹೀಗಾಗಿ ಯಾವುದೇ ಟೆಕ್ನಿಕಲ್ ಆದ ಸಂಗತಿಗಳನ್ನು ಅಭಿವ್ಯಕ್ತಿ ಪಡಿಸುವುದು ಕಷ್ಟವೂ ಅಲ್ಲ, ಅದೊಂದು ಕೊರತೆ ಎಂದು ಅನಿಸುವುದೂ ಇಲ್ಲ.

ಸುಮಾರು ಮೂವತ್ತು ವರ್ಷಗಳ ಹಿಂದೆ ಕೋಕ-ಕೋಲಾ ಇಸ್ರೇಲ್‌ನಲ್ಲಿ ತಯಾರಿಕಾ ಘಟಕವನ್ನು ಸ್ಥಾಪಿಸಲು ಯೋಚಿಸಿದಾಗ, ಇದೇ ಷರತ್ತನ್ನು ವಿಧಿಸಲಾಯಿತು. ಆದರೆ ಕೋಕ-ಕೋಲಾ ಇದಕ್ಕೆ ಸಮ್ಮತಿಸುವ ತನಕ ಅನುಮತಿ ನೀಡಿರಲಿಲ್ಲ. ಇಂದು ಇಸ್ರೇಲಿನಲ್ಲಿ ಮಾರಾಟ ವಾಗುವ ಕೋಕ-ಕೋಲಾ ಸೇರಿದಂತೆ ಎಲ್ಲ ಸಾಫ್ಟ್ ಡ್ರಿಂಕ್‌ಗಳ ಬಾಟಲಿ ಮೇಲೆ ಹೆಸರುಗಳು ಹೀಬ್ರೂ ಭಾಷೆಯಲ್ಲಿರುತ್ತವೆ.
ಜಗತ್ತಿನಲ್ಲಿ ಈ ಭಾಷೆ ಮಾತಾಡುವವರು ಒಂದು ಕೋಟಿಗಿಂತ ಕಡಿಮೆ ಮಂದಿ. ಆದರೆ ಅವರು ಹಾಕಿದ ಷರತ್ತುಗಳನ್ನು ಪಾಲಿಸದಿದ್ದರೆ, ಆ ದೇಶದೊಳಗೆ ನಿಮ್ಮ ಆಟ ನಡೆಯುವುದಿಲ್ಲ. ಅದೇ ನಾವು ಆರೂವರೆ ಕೋಟಿ ಕನ್ನಡಿಗರಿದ್ದೇವೆ. ಆದರೂ ನಮ್ಮ ರಾಜ್ಯದೊಳಗೆ ಮಾರಾಟ
ಮಾಡುವ ವಸ್ತುಗಳ ಮೇಲೆ ಕನ್ನಡದ ಬರೆಯಬೇಕು ಎನ್ನುವ ಛಾತಿ ನಮಗಿದೆಯಾ? ಉಹುಂ, ಖಂಡಿತಾ ಇಲ್ಲ.

ನಾವಿನ್ನೂ ಸರಕಾರದ ಮೂಗಿನಡಿಯಲ್ಲಿರುವ ಅಧಿಕಾರಿಗಳು, ವಿಧಾನಸೌಧದಲ್ಲಿ ಕನ್ನಡ ಆಚರಣೆಯನ್ನು ಪರಿಣಾಮಕಾರಿಯಾಗಿ ಜಾರಿ ಗೊಳಿಸಲು ಆಗಿಲ್ಲ. ಕನ್ನಡ ಮಾಧ್ಯಮ ಕಲಿಕೆಯೇನೆಂಬುದು ಗೊಂದಲದ ಗೂಡಾಗಿದೆ. ಪ್ರಾಥಮಿಕ ಶಾಲೆಯಿಂದಲೇ ಇಂಗ್ಲಿಷ್ ಕಲಿಸುವ ಉಮ್ಮೇದಿ ನಮ್ಮದು. ಸತ್ತ ಭಾಷೆಗೆ ಮರುಜೀವ ಕೊಟ್ಟು, ಭಾಷೆಯಲ್ಲಿಯೇ ತಮ್ಮ ಅಸ್ತಿತ್ವದ ವೈಭವವನ್ನು ಕಾಣುತ್ತಿರುವ ಇಸ್ರೇಲಿಗಳ ಹೀಬ್ರೂ ಪ್ರೇಮ ದೇಶಪ್ರೇಮಕ್ಕೆ ಸಮನಾದುದು. ತಮ್ಮ ಭಾಷೆಯನ್ನು ಜೀವಕ್ಕೆ ಸಮನಾಗಿ ಪ್ರೀತಿಸುವ ಯಹೂದಿಯರು, ಮತ್ತೊಮ್ಮೆ ಅಂಥ ತಪ್ಪನ್ನು ಮಾಡಲಾರರು. ಅದಕ್ಕಾಗಿ ಹೀಬ್ರೂ ಬಗ್ಗೆ ಎಲ್ಲಿಲ್ಲದ ಮೋಹ.