Saturday, 27th July 2024

ತೂಕಡಿಸಿದ್ದು ಇಸ್ರೇಲ್, ಎಚ್ಚರವಿರಬೇಕಿರುವುದು ನಾವು !

ಶಿಶಿರ ಕಾಲ

shishirh@gmail.com

ಇಂಟರ್ನೆಟ್ ಮಾಧ್ಯಮಗಳು, ಸೋಷಿಯಲ್ ಮೀಡಿಯಾ, ೨೪ಗಿ೭ ಸುದ್ದಿ ವಾಹಿನಿಗಳು- ಈಗೀಗ ಸುದ್ದಿಗಳೆಂದರೆ ಬೆಂಗಳೂರಿನ ರಸ್ತೆಯ ಬೈಕುಗಳಂತೆ.
ಎಲ್ಲಾ ದಿಕ್ಕಿನಿಂದ, ಎಲ್ಲೆಂದರಲ್ಲಿ ಒಳನುಗ್ಗುತ್ತವೆ. ಎಲ್ಲವೂ ಅನಿರೀಕ್ಷಿತವೆಂಬಂತೆ. ನಿರಂತರ ಬ್ರೇಕಿಂಗ್. ನೂರಾರು ಬೆಳವಣಿಗೆಗಳು, ಅವೆಲ್ಲವೂ ನಿಮ್ಮ ಬದುಕನ್ನು ಬದಲಾಯಿಸಲಿವೆ ಎನ್ನುವ ಮಾಧ್ಯಮಗಳು.

ನಮಗಿಂದು ಎಷ್ಟು ಪ್ರಮಾಣದ ಸುದ್ದಿಯ ಅವಶ್ಯಕತೆಯಿದೆ ಎನ್ನುವುದನ್ನು ನಿರ್ಧರಿಸಲಿಕ್ಕೆ ಕಷ್ಟವಾಗುತ್ತಿದೆ. ಸಿನಿಮಾ ತಾರೆಯರು, ಅವರ ಅಫರುಗಳು,
ಅವರ ಮಕ್ಕಳು-ಮರಿಮಕ್ಕಳು ಎಲ್ಲಿ ಹೇಗೆ ಮುನಿಸಿಕೊಂಡವು, ಬಟ್ಟೆಯ ಬ್ರ್ಯಾಂಡ್ ಯಾವುದು ಎಂಬೆಲ್ಲ ತೀರಾ ಅನವಶ್ಯಕ ಸುದ್ದಿಗಳಿಂದ ಹಿಡಿದು, ನಾನಾ ಸ್ತರದ ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳು, ಯುದ್ಧಗಳು, ಬರ, ಹವಾಮಾನ ವೈಪರೀತ್ಯ, ಬಿಗ್ ಬಾಸು, ಹೀಗೆ ಒಂದೇ ಎರಡೇ? ಸಾವಿರದೆಂಟು ಸುದ್ದಿಗಳಿಗೆ ಅಷ್ಟೇ ಸಂಖ್ಯೆಯ ಒರತೆಗಳು.

ಈಗೊಂದು ಹದಿನೈದಿಪ್ಪತ್ತು ವರ್ಷಗಳ ಹಿಂದಿನವರೆಗೆ ಹೊರ ಜಗತ್ತಿನ ಯಾವುದೇ ಸುದ್ದಿ-ಉಸಾಬರಿಗಳಿಲ್ಲದೆ ಬದುಕುವುದು ಹಳ್ಳಿಗಳಲ್ಲಷ್ಟೇ ಅಲ್ಲ, ಪೇಟೆಯಲ್ಲಿಯೂ ಸಾಧ್ಯವಿತ್ತು. ಒಂದು ವೃತ್ತಪತ್ರಿಕೆಯಲ್ಲಿ ಬರುವಷ್ಟು ಸುದ್ದಿ ಬದುಕಿಗೆ ಸಾಕಾಗುತ್ತಿತ್ತು. ಈಗ ಹಾಗಲ್ಲ. ಎಲ್ಲಾ ಸುದ್ದಿಯನ್ನೂ ತಿಳಿದಿರಲೇಬೇಕಾದ
ಅನಿವಾರ್ಯ ಸ್ಥಿತಿ. ಮಾತುಕತೆಗಾದರೂ ಸುದ್ದಿ ತಿಳಿದಿರಬೇಕು. ಎಲ್ಲಿಯೋ ಒಂದು ದೊಡ್ಡ ಘಟನೆ ನಡೆದು ಅದು ತಿಳಿದಿಲ್ಲವಾದಲ್ಲಿ, ‘ಅಯ್ಯೋ, ನಿನಗಿನ್ನೂ ಅದು ಗೊತ್ತಿರಲಿಲ್ಲವೇ?’ ಎಂಬರ್ಥದ ಪ್ರಶ್ನೆಗಳು ನಮಗೆ ಚುಚ್ಚಿದ ಅನುಭವ ನೀಡುತ್ತವೆ.

ಅಪ್ಡೇಟೆಡ್ ಇರಬೇಕಾದದ್ದು ಸಾಮಾಜಿಕ ಅವಶ್ಯಕತೆ, ಅನಿವಾರ್ಯ. ನಮಗೆ ಎದುರಾಗುವ ಪ್ರತಿ ಸುದ್ದಿಗೂ ನಾವು ಒಂದಿಷ್ಟು ಸ್ಪಂದಿಸುತ್ತೇವೆ ಅಲ್ಲವೇ? ‘ಛೇ, ಹೀಗಾಗಬಾರದಿತ್ತು, ಅಯ್ಯೋ ಹಾಗಾಯ್ತೆ! ಒಹ್ ಇದೊಳ್ಳೆ ಸುದ್ದಿ’ ಎಂಬಿತ್ಯಾದಿ ವರ್ಗೀಕರಿಸಿ ಸುದ್ದಿಯನ್ನು ಒಳಗಿಳಿಸಿಕೊಳ್ಳುತ್ತೇವೆ. ಇಲ್ಲೊಂದು ಗಮನಿಸಬೇಕು. ಪ್ರತಿಯೊಬ್ಬನ ಸ್ಪಂದನೆಗೆ, ನಮ್ಮೊಳಗಿನ ಕಾರುಣ್ಯರಸಕ್ಕೆ ಒಂದಿಷ್ಟು ಮಿತಿಯಿದೆ. ಈ ನಿರಂತರ ನಾನಾ ಗಾತ್ರ, ತೂಕದ ಸುದ್ದಿಗಳ ಒಳಹರಿವಿನಿಂದಾಗಿ ಅದೆಲ್ಲದಕ್ಕೂ ಅನುಗುಣವಾಗಿ ನಮ್ಮಲ್ಲಿರುವ ಮಿತಿಯ ಸ್ಪಂದನೆಯನ್ನು ಹಂಚಬೇಕು.

ಸುದ್ದಿಗಳೆಂದರೆ ಕಥೆಗಳಂತೆ, ಥಿಯೇಟರ್‌ನಲ್ಲಿ ಓಡುವ ಸಿನಿಮಾಗಳಂತೆ. ಅಲ್ಲಿ ಹೇಗೆ ಒಂದು ಸಿನಿಮಾವನ್ನು ಇನ್ನೊಂದು ಬಿಗ್ ಬಜೆಟ್ ಸಿನಿಮಾ ನೂಕಿ ಹೊರಗೆ ಹಾಕುತ್ತದೆಯೋ, ಹಾಗೆಯೇ ಸುದ್ದಿಗಳು. ಒಂದೊಂದು ಸುದ್ದಿ ಒಂದಿಷ್ಟು ಕಾಲ ಮೆರೆಯುತ್ತದೆ. ಇನ್ನೊಂದಿಷ್ಟು ಸುದ್ದಿಗಳು ಯಾವಾಗ ಬಂದವೋ, ಯಾವಾಗ ಹೋದವೋ ತಿಳಿಯುವುದಿಲ್ಲ. ಅಕ್ಷಯ್ ಕುಮಾರ್ ಚಲನಚಿತ್ರಗಳಂತೆ. ಇಂದಿನ ಸುದ್ದಿ ವ್ಯವಸ್ಥೆ ಕ್ರಮೇಣ ನಮ್ಮಲ್ಲಿನ ಸಂವೇದನೆಯನ್ನು ಕಡಿಮೆ ಮಾಡುತ್ತಿವೆ.
ಸಾಮಾಜಿಕ ಜಾಡ್ಯ ಹೆಚ್ಚುತ್ತಿದೆ. ಎಲ್ಲಾ ಇಷ್ಟೇ ಅನ್ನಿಸುವ ಪ್ರಮಾಣ ಹೆಚ್ಚುತ್ತಿದೆ. ಈ ತುಂಡು ಸುದ್ದಿಗಳ ನಿರಂತರ ಹರಿವಿನಿಂದಾಗಿ, ಸ್ಥೂಲ ಚಿತ್ರಣವನ್ನು ಮಾತ್ರ ನಮ್ಮಲ್ಲಿ ನಾವೇ ರೂಪಿಸಿಕೊಳ್ಳಬೇಕಾಗುವಂಥ ಸ್ಥಿತಿ ಕೂಡ ಇದೆ. ಇದರಿಂದಾಗಿ ಪ್ರತಿಯೊಬ್ಬನ ಸುದ್ದಿ ಗ್ರಹಿಕೆಯೂ ವಿಭಿನ್ನವಾಗಿರುತ್ತದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಕೆಲ ತಿಂಗಳ ಹಿಂದೆ ಶುರುವಾದ ಇಸ್ರೇಲ್-ಹಮಾಸ್ ಯುದ್ಧದ ಸುದ್ದಿಗಳ ಕಥೆಯೂ ಈಗೀಗ ಇದೇ ಆದಂತಿದೆ. ಆದರೆ ಈ ಎರಡು ಯುದ್ಧಗಳನ್ನು ಅಷ್ಟು ಸುಲಭದಲ್ಲಿ ಅಲಕ್ಷಿಸುವಂತಿಲ್ಲ. ಅವುಗಳ ಪರಿಣಾಮ ಜಾಗತಿಕ. ಅದರಲ್ಲಿಯೂ ಇಸ್ರೇಲ್-ಹಮಾಸ್.

ಇಂದಿನ ಈ ಯುದ್ಧದಲ್ಲಿ ಹೂತಿ ಭಯೋತ್ಪಾದಕರು ಸೇರಿಕೊಂಡ ನಂತರವಂತೂ ಪರಿಣಾಮ ನಮ್ಮ ದೇಶದ ಮೇಲೆ ನೇರವಾಗಿಯೇ ಆಗುತ್ತಿದೆ. ನಮ್ಮ ಮತ್ತು ಯುರೋಪ್‌ನ ಆಮದು ಮತ್ತು ರಫ್ತು ನಡೆಯುವುದು ಹಡಗಿನ ಮೂಲಕ, ಕೆಂಪು ಸಮುದ್ರದ ದಾರಿಯಲ್ಲಿ. ಅಲ್ಲಿ ಈ ಇರಾನ್‌ನ ಬೆಂಬಲಿತ ಹೂತಿಗಳು, ಅಬ್ದುಲ್ಲಾ ಇವರೆಲ್ಲ ಹಡಗಿನ ಮೇಲೆ ದಾಳಿಮಾಡುತ್ತಿದ್ದಾರೆ. ಜತೆಯಲ್ಲಿ ಸಿಕ್ಕಿದ್ದೇ ಚಾನ್ಸ್ ಎಂಬಂತೆ ಸೊಮಾಲಿ ಸಮುದ್ರಗಳ್ಳರು ಜಾಗೃತರಾಗಿದ್ದಾರೆ. ಇದರಿಂದಾಗಿ ಯುರೋಪಿಗೆ ಹೋಗುವ ಎಲ್ಲ ಹಡಗುಗಳು ದಕ್ಷಿಣ ಆಫ್ರಿಕಾದ ಗುಡ್ ಹೋಪ್ ಭೂಶಿರದ ಮೂಲಕ ಸುತ್ತುಬಳಸಿ ಹೋಗಬೇಕು.

ಇದರಿಂದಾಗಿ ಆಮದಿನ ಶುಲ್ಕ ಜಾಸ್ತಿ, ರಫ್ತಿನ ಆದಾಯ ಕಡಿಮೆ. ಇದರ ಪ್ರಮಾಣ ಎಷ್ಟೆಂದರೆ ಭಾರತದ ಮುಂದಿನ ಜಿಡಿಪಿ ಬೆಳವಣಿಗೆಯ ಮೇಲೆ ಪರಿಣಾಮವಾಗುವಷ್ಟು. ಊಹಿಸಿದ್ದು ಸಾಧ್ಯವಾಗದಷ್ಟು. ಉಳಿದವರಿಗೆ ಹೆಚ್ಚೋ ಕಡಿಮೆಯೋ, ನಮಗಂತೂ ಈ ಯುದ್ಧ ಈ ಕಾರಣದಿಂದಲೂ ನಿಲ್ಲಬೇಕು.
ಆದಷ್ಟು ಬೇಗ. ಇಸ್ರೇಲ್‌ನ ಬೇಹುಗಾರಿಕೆ ಸಂಸ್ಥೆ ಮೊಸಾದ್ ಎಂದರೆ ಅಮೆರಿಕಾದ ಸಿಐಎ, ಇಂಗ್ಲೆಂಡಿನ ಎಸ್‌ಐಎಸ್, ಭಾರತದ ‘ರಾ’ ಹೀಗೆ ಜಗತ್ತಿನ ಗಟ್ಟಿ ಬೇಹುಗಾರಿಕೆಗಳಿಗಿಂತ ಒಂದು ಕೈ ಮೇಲೆ ಎಂಬ ಮಾತಿತ್ತು. ಅದಕ್ಕೆ ಪೂರಕವಾಗುವ ಅದೆಷ್ಟೋ ಸತ್ಯಘಟನೆಗಳ ಪುಸ್ತಕಗಳಿವೆ, ಡಾಕ್ಯುಮೆಂಟರಿಗಳಿವೆ. ಎಲ್ಲವೂ ರೋಚಕ. ಕನ್ನಡದಲ್ಲಿ ಡಾ.ಡಿ.ವಿ.ಗುರುಪ್ರಸಾದ್ ಈ ವಿಷಯ ಕೇಂದ್ರಿತವಾಗಿ ಪುಸ್ತಕಗಳನ್ನು ಬರೆದಿದ್ದಾರೆ. ಇಂಥ ಅಸಂಖ್ಯ ಕಥೆಗಳು ಚಲನಚಿತ್ರಗಳಾಗಿವೆ, ಒಟಿಟಿಯಲ್ಲಿ ಧಾರಾವಾಹಿಗಳಾಗಿವೆ.

ಹೀಗಿರುವಾಗ ಇಂಥ ಹೀರೋಯಿಕ್ ದೇಶ, ಅದರ ಬೇಹುಗಾರಿಕೆ, ರಣತಂತ್ರಗಳೆಲ್ಲ ಸೋತದ್ದಾದರೂ ಹೇಗೆ? ಇದು ಕೆಲಕಾಲದ ಪ್ರಶ್ನೆ. ಇಸ್ರೇಲ್ ದೇಶ ನಮ್ಮ ದೇಶದಂತೆ ಸ್ವಾತಂತ್ರ್ಯ ಪಡೆದು ಮರುಹುಟ್ಟಿದ ದೇಶವಲ್ಲ. ಅದು ಜನಿಸಿದ್ದೇ ೧೯೪೮ರಲ್ಲಿ. ಅದಕ್ಕಿಂತ ಮೊದಲು ಯೆಹೂದಿಗಳಿಗೆ ತಮ್ಮದೆನ್ನುವ ದೇಶವಿರಲಿಲ್ಲ.
ಇದೆಲ್ಲ ನಡೆದದ್ದು ಬ್ರಿಟಿಷ್ ದೊಂಬರಾಟಗಳ ನಡುವೆ. ಸುತ್ತಲೂ ಬಲಶಾಲಿ ಮತ್ತು ವೈರಿರಾಷ್ಟ್ರಗಳು. ಹಾಗಾಗಿಯೇ ಅಲ್ಲಿನ ಮೊದಲ ಪ್ರಧಾನಿ ಡೇವಿಡ್ ಬೆನ್-ಗುರಿಯನ್ ರಾಷ್ಟ್ರೀಯ ಭದ್ರತೆಗೆ ಮೊದಲ ಆದ್ಯತೆ ಕೊಟ್ಟು ಅದನ್ನು ರೂಪಿಸಿದ್ದು. ಇಸ್ರೇಲಿನ ರಕ್ಷಣಾ ತಂತ್ರದ ರಚನೆ ಈ ನಾಲ್ಕು ವಿಚಾರಗಳ ಮೇಲೆ ರೂಪಿತವಾಗಿದೆ.

ಮೊದಲನೆಯದು ಸದಾ ಹೆದರಿರ ಬೇಕು, ಮೈಮರೆಯಬಾರದು. ಎರಡನೆಯದು ಎದುರಾಗಬಹುದಾದ ಆಪತ್ತನ್ನು ಮೊದಲೇ ಗ್ರಹಿಸಬೇಕು. ಆತಂಕ
ದೇಶದೊಳಗಿರಲಿ, ಹೊರಗಿರಲಿ, ಯಾವುದೇ ಹಂತಕ್ಕೆ ಹೋಗಿ ಅದನ್ನು ತಡೆಯಬೇಕು. ನಾಲ್ಕನೆಯದು ಒಂದು ವೇಳೆ ಮೊದಲ ಮೂರರಲ್ಲಿಯೂ ಎಡವಿದಲ್ಲಿ, ಎದುರಾಳಿಯನ್ನು ಸರ್ವನಾಶ ಮಾಡುವಲ್ಲಿಯವರೆಗೆ ಹೋರಾಡಬೇಕು, ಯುದ್ಧ. ಇಸ್ರೇಲ್ ಈಗ ನಾಲ್ಕನೆಯದನ್ನು ಮಾಡುತ್ತಿದೆ. ಅದರರ್ಥ ಮೊದಲ ಮೂರು ವಿಷಯದಲ್ಲಿ ಎಡವಿದೆ ಅಂತಾಯಿತು. ಇದೆಲ್ಲ ಆರಂಭವಾಗಿದ್ದು ಅಕ್ಟೋಬರ್‌ನಲ್ಲಿ ಎನ್ನುವುದು ನೆನಪಿರಬಹುದು. ಮೂರೇ ತಿಂಗಳ ಹಿಂದೆ. ಮೊದಲು ಹಮಾಸ್
ಭಯೋತ್ಪಾದಕರು ಇಸ್ರೇಲ್ ನೆಲದೊಳಕ್ಕೆ ಅನಿರೀಕ್ಷಿತ ದಾಳಿ ಮಾಡಿ ೧,೨೦೦ ಜನರನ್ನು ಕೊಂದರು. ಅದು ದೊಡ್ಡ ಸುದ್ದಿಯಾಯಿತು. ಅದೇನು ಇಸ್ರೇಲ್ ಮಟ್ಟಿಗೆ ಚಿಕ್ಕ ಸಂಖ್ಯೆ ಯಲ್ಲ. ಅಲ್ಲಿನ ಜನಸಂಖ್ಯೆಯನ್ನು ಭಾರತಕ್ಕೆ ಹೋಲಿಸಿದರೆ ಅದು ನಮ್ಮಲ್ಲಿ ೧,೭೭,೫೦೦ ಜನರನ್ನು ಕೊಲ್ಲುವುದಕ್ಕೆ ಸಮ.

ಅಷ್ಟೊಂದು ಮಂದಿ ಘಂಟೆಯೊಳಗೆ, ಒಂದು ನಿಗದಿತ ಸ್ಥಳದಲ್ಲಿ, ಅನಿರೀಕ್ಷಿತವಾಗಿ, ಅದರಲ್ಲಿಯೂ ಭಯೋತ್ಪಾದಕರಿಂದ ಕೊಲ್ಲಲ್ಪಡುವುದೆಂದರೆ? ನಂತರ ಇಸ್ರೇಲ್-ಹಮಾಸ್ ಮೇಲೆ ದಾಳಿ ಶುರುವಾಯಿತು. ಮುಸ್ಲಿಂ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ ಹೀಗೆ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳು
ಇಸ್ರೇಲ್ ಬೆಂಬಲಕ್ಕೆ ನಿಂತವು. ಮೊದಲ ದಿನವೇ ಈ ಕಡೆಗಿಂತ ಜಾಸ್ತಿ ಆ ಕಡೆಯವರು, ಗಾಜಾದಲ್ಲಿ ಸತ್ತರು. ನಿರಂತರ ಬದಲಾಗುವ ಸಾವಿನ ಸಂಖ್ಯೆಗಳ ಸುದ್ದಿಗಳ ನಡುವೆ ಸತ್ತವರ ಸಂಖ್ಯೆ ಸಾವಿರದ ಲೆಕ್ಕದಲ್ಲಿ ಹೆಚ್ಚಾಗಿದ್ದು ತಿಳಿಯಲೇ ಇಲ್ಲ. ಇಂದು ಆ ಸಂಖ್ಯೆ ಎಷ್ಟು ಹೇಳಿ? ಬರೋಬ್ಬರಿ ೨೬,೦೦೦ಕ್ಕೂ ಮೀರಿ ಹಮಾಸ್‌ನ ಜನಸಾಮಾನ್ಯರು ಈಗಾಗಲೇ ಅಲ್ಲಿ ಸತ್ತಾಗಿದೆ.

ಮೂರೇ ತಿಂಗಳಲ್ಲಿ. ವಿಶ್ವಸಂಸ್ಥೆಯ ಪ್ರಕಾರ ಸತ್ತವರು ೩೦ ಸಾವಿರ. ಗಾಯಗೊಂಡವರು ಸುಮಾರು ಒಂದು ಲಕ್ಷ ಮಂದಿ. ಈ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಲ್ಲಿ ಹೋಲಿಕೆಗೆ- ವರ್ಷಾನುಗಟ್ಟಲೆ ನಡೆಯುತ್ತಿರುವ ಈ ಬಾರಿಯ ಉಕ್ರೇನ್ -ರಷ್ಯಾ ಯುದ್ಧದಲ್ಲಿನ ಸಾವಿನ ಸಂಖ್ಯೆ ಇದರ ಅರ್ಧದಷ್ಟು.
ಯುದ್ಧದ ಭೀಕರತೆಯನ್ನು ಈ ಸಂಖ್ಯೆಗಳಿಂದ ನೀವೇ ಊಹಿಸಿಕೊಳ್ಳಿ. ಇಲ್ಲಿ ಇನ್ನೊಂದಿಷ್ಟು ಸಂಖ್ಯೆಯನ್ನು ಗ್ರಹಿಸಬೇಕು. ಗಾಜಾದಲ್ಲಿ ಸತ್ತ ೨೬ ಸಾವಿರದಲ್ಲಿ ಸುಮಾರು ಹತ್ತು ಸಾವಿರದಷ್ಟು ಮಕ್ಕಳು. ಎಂಟು ಸಾವಿರದಷ್ಟು ಹೆಂಗಸರು. ಗಾಜಾದ ಸರಾಸರಿ ವಯಸ್ಸು ೧೯.೨ ವರ್ಷ. ಅಲ್ಲಿನ ಶೇ.೪೦ರಷ್ಟು ಜನಸಂಖ್ಯೆಯ
ವಯಸ್ಸು ೧೪ ವರ್ಷಕ್ಕಿಂತ ಕಡಿಮೆ. ಏನಿದರರ್ಥ? ಇದು ೨-೩ ದಶಕದಿಂದೀಚೆ ಅಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಿದ ಲಕ್ಷಣ.

ಯಾವುದೇ ಪ್ರದೇಶದ ಯುದ್ಧ ತರುವಾಯದ ಜನಸಂಖ್ಯೆ ಹಿಂದಿನ ಮಿತಿ ಮೀರಿ ಜಾಸ್ತಿಯಾಗುತ್ತಿದೆ ಎಂದರೆ ಆ ದೇಶ ಸುಧಾರಿಸಿಕೊಳ್ಳುತ್ತಿದೆ ಎಂದೇ ಅರ್ಥ. ಇದು ಮಾನವೀಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಹೌದು. ಆದರೆ ಇದೆಲ್ಲದರ ನಡುವೆ ಈ ಪ್ರದೇಶ, ಅಲ್ಲಿನ ಭಯೋತ್ಪಾದಕರು ೪೫೦ ಕಿ.ಮೀ. ಸುಸಜ್ಜಿತ ಸುರಂಗ ಮಾರ್ಗ ನಿರ್ಮಿಸಿಕೊಂಡದ್ದು, ಯುದ್ಧಕ್ಕೆ ತಯಾರಾಗಿದ್ದು, ಇವೆಲ್ಲ ಅಲ್ಲಿಯೇ ಪಕ್ಕದಲ್ಲಿರುವ ಇಸ್ರೇಲಿಗೆ ತಿಳಿಯದಿದ್ದದ್ದು ಹೇಗೆ? ಗಾಜಾ ಎಂದರೆ ಅಲ್ಲಿಯೂ ಇಸ್ರೇಲಿ ಬೇಹುಗಾರರು ತುಂಬಿಯೇ ಇದ್ದಾರೆ. ಜಾಗ ಎಷ್ಟು ಮಹಾ ದೊಡ್ಡದು? ೪೧ ಕಿ.ಮೀ. ಉದ್ದ, ೬-೧೨ ಕಿ.ಮೀ. ಅಗಲ. ಅಷ್ಟು ಚಿಕ್ಕ ಪ್ರದೇಶದಲ್ಲಿ ಜನಸಂಖ್ಯೆ ೬ಲಕ್ಷ. ಜನಸಾಮಾನ್ಯರ ಕಣ್ಣು ತಪ್ಪಿಸಿ ಏನನ್ನೂ ಮಾಡಲಿಕ್ಕೆ ಸಾಧ್ಯವೂ ಇಲ್ಲ. ಹೀಗಿರುವಾಗ ಇಂಟೆಲಿಜೆನ್ಸ್ ಸೋತದ್ದೆಲ್ಲಿ? ಇಸ್ರೇಲ್ ಮೈಮರೆಯುವುದಕ್ಕೆ ಹಲವು ಕಾರಣಗಳಿವೆ.

ಮಾಡಿದ ಮೊದಲ ತಪ್ಪು ಹಮಾಸ್ ಅನ್ನು ತಾತ್ಸಾರ ಮಾಡಲು ಶುರುಮಾಡಿದ್ದು. ಹಮಾಸ್ ಇದೆಲ್ಲದಕ್ಕೆ ತಯಾರಾಗುವ ನಡುವೆಯೇ ಎದುರಿನಿಂದ ಅಶಕ್ತನಂತೆ ನಟಿಸಿ ಇಸ್ರೇಲಿನ ಜತೆ ಮಾತುಕತೆ ನಡೆಸುತ್ತಿತ್ತು. ಅವರಲ್ಲಿ ಒಂದಿಷ್ಟು ಒಡಂಬಡಿಕೆಗಳು ಆಗಿದ್ದವು. ಆದರೆ ಇದೆಲ್ಲ ಬದಲಾಗಿದ್ದು ಇಸ್ರೇಲ್ ಸೌದಿ ಅರೇಬಿಯಾದ ಜತೆ ಸ್ನೇಹಕ್ಕೆ ತಯಾರಾಗಿ ನಿಂತಾಗ. ಇನ್ನೇನು ಕೆಲವೇ ದಿನಗಳಲ್ಲಿ ಇಸ್ರೇಲ್-ಸೌದಿ ರಾಜಿ ಸಭೆಯಾಗುವುದಿತ್ತು. ಅದು ಹಮಾಸ್‌ಗೆ ಮಾರಕವಾಗಿತ್ತು. ಅಲ್ಲದೆ ಇನ್ನೊಂದು ಕಾರಣವೆಂದರೆ ಇಸ್ರೇಲಿನಲ್ಲಿ ಕೆಲವು ವರ್ಷಗಳಿಂದ ಯಾವುದೇ ಪಕ್ಷ ಬಹುಮತ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿತ್ತು.

ಯಾವುದೇ ದೇಶವಿರಲಿ, ಅದು ಅತ್ಯಂತ ದುರ್ಬಲವಾಗಿರುವುದು ಅಲ್ಲಿನ ಚುನಾವಣೆಯ ಸಮಯದಲ್ಲಿ. ಉಲ್ಬಣಿಸುವುದು ಅಲ್ಲಿ ಅಸ್ಥಿರ ಸರಕಾರಗಳು ಆಡಳಿತಕ್ಕೆ ಬಂದಾಗ. ಇದೆಲ್ಲದರ ಜತೆ ಕೋವಿಡ್ ಕೂಡ ಇಸ್ರೇಲ್ ಅನ್ನು ಬಹುವಾಗಿಯೇ ಬಾಧಿಸಿತ್ತು. ಅಂಥ ಸಮಯದಲ್ಲಿಯೇ ಹಮಾಸ್ ಈ ದಾಳಿಯನ್ನು ಮಾಡಿದ್ದು. ಹಮಾಸ್ ತಾನು ದಾಳಿ ಮಾಡಿದ ನಂತರ ಇಸ್ರೇಲಿನಲ್ಲಿ ಆಂತರಿಕ ಅರಾಜಕತೆ, ದಂಗೆ ಆಗಬಹುದು ಎಂದು ಅಂದಾಜಿಸಿತ್ತಂತೆ. ಆದರೆ ಇಸ್ರೇಲಿನಲ್ಲಿ ದಾಳಿಯಾ
ಗುತ್ತಿದ್ದಂತೆಯೇ ದೇಶವೇ ಒಂದಾಯಿತು. ಅಷ್ಟೇ ಅಲ್ಲ, ವಿಪಕ್ಷಗಳು ಕೂಡ ಪ್ರಧಾನಿ ನೆತನ್ಯಾಹುಗೆ ಪೂರ್ಣ ಅಧಿಕಾರ ಕೊಟ್ಟುಬಿಟ್ಟವು. ಇಲ್ಲಿಯೇ ಹಮಾಸ್‌ನ ಲೆಕ್ಕಾಚಾರ ತಪ್ಪಿದ್ದು.

ಇಸ್ರೇಲ್ ಇಂಥ ಸ್ಥಿತಿಯಲ್ಲಿ ಈ ಪ್ರಮಾಣದ ಪ್ರತಿದಾಳಿ ಮಾಡಬಲ್ಲದು ಎಂಬ ಅಂದಾಜು ಹಮಾಸ್‌ಗೆ ಇದ್ದಂತಿಲ್ಲ. ಜಾಗತಿಕ ರಾಷ್ಟ್ರಗಳು ಮಧ್ಯಸ್ಥಿಕೆ ವಹಿಸಿ ರಕ್ಷಣೆಗೆ ನಿಲ್ಲುತ್ತವೆ ಎಂದುಕೊಂಡಿತ್ತು. ಆದರೆ ಹಾಗಾಗಲೇ ಇಲ್ಲ. ಇಸ್ರೇಲ್ ಮೇಲೆ ದಾಳಿಯಾಗುತ್ತಿದ್ದಂತೆ ಇದೇ ಶರವೇಗದ ಮಾಧ್ಯಮಗಳಿಂದಾಗಿ ಹಮಾಸ್ ದಾಳಿಯ ಚಿತ್ರಗಳು ಜಗತ್ತಿನಲ್ಲೆಲ್ಲ ತಲುಪಿದವು. ಇದು ಅನ್ಯದೇಶದ ಜನಸಾಮಾನ್ಯರಲ್ಲಿ ಅನುಕಂಪ ಹುಟ್ಟಿಸಿತು. ಇದರಿಂದಾಗಿ ಆಯಾ ನಾಯಕರು ಜನಸ್ಪಂದನೆಗೆ ಅನುಗುಣವಾಗಿ ಇಸ್ರೇಲಿನ ಬೆನ್ನಿಗೆ ನಿಂತರು. ಇದೆಲ್ಲದರ ತರುವಾಯವೇ ಇಷ್ಟೊಂದು ಸಾವು-ನೋವು. ಈಗ ಹೇಗಾಗಿದೆಯೆಂದರೆ ಯಾರೇ ಯುದ್ಧ ನಿಲ್ಲಿಸಿ ಎಂದರೂ ಇಸ್ರೇಲ್ ವಿರಮಿಸುತ್ತಿಲ್ಲ. ಸಾವಿನ ಸಂಖ್ಯೆ ಏರುವುದನ್ನು ಅಮೆರಿಕ ಸೇರಿದಂತೆ ಉಳಿದ ದೇಶಗಳು ಬಾಯ್ಮುಚ್ಚಿ ನೋಡುತ್ತಿವೆ.
ಬೇಹುಗಾರಿಕೆ ಸೋತರೆ ಏನಾಗುತ್ತದೆ ಎನ್ನುವುದಕ್ಕೆ ಈ ದಾಳಿ ಯುದ್ಧಗಳಷ್ಟೇ ಉದಾಹರಣೆಯಲ್ಲ. ಹಮಾಸ್ ಈಗ ಕಳೆದ ಮೂರು ದಶಕದಿಂದ ಕೇವಲ ಯುದ್ಧಕ್ಕಾಗಿ ಮಾತ್ರ ತಯಾರಿ ನಡೆಸಲಿಲ್ಲ. ಗಾಜಾ ಒಂದು ದೇಶವಲ್ಲ.

ಅದಕ್ಕೆ ದೇಶದ ಮನ್ನಣೆ ಬಿಡಿ, ಅದಕ್ಕೆ ಬೇಕಾಗುವ ಸರಕಾರಿ ವ್ಯವಸ್ಥೆಯೂ ಅಲ್ಲಿಲ್ಲ. ಆದರೂ ಅಲ್ಲೊಂದು ಸಿಸ್ಟಮ್ ಅನ್ನು ಭಯೋತ್ಪಾದಕರೇ ನಿರ್ಮಿಸಿಕೊಂಡಿದ್ದರು. ಹಾಗಂತ ಈ ವ್ಯವಸ್ಥೆಯ ಭಾಗವಾಗಿ ರುವ, ಸಂಬಳಕ್ಕೆ ಕೆಲಸ ಮಾಡುವ ಸರಕಾರಿ ಸಾದೃಶ ವ್ಯವಸ್ಥೆ ಅಲ್ಲಿತ್ತು. ಹಮಾಸ್‌ನಲ್ಲಿ ಅದರದೇ ಕರೆನ್ಸಿ (ಚಲಾವಣಾ ಹಣ) ಇಲ್ಲ. ಅವರು ನಿತ್ಯ ವ್ಯವಹಾರಕ್ಕೆ ಬಳಸುವುದು ಇಸ್ರೇಲಿ ಶಕೆಲ್. ಹಮಾಸ್‌ಗೆ ಇಸ್ರೇಲಿನ ಹಣದ ಜತೆ ಇಸ್ಲಾಮಿಕ್ ರಾಷ್ಟ್ರಗಳಿಂದ
ಕೂಡ ಸಾಕಷ್ಟು ಹಣ ಬರುತ್ತಿತ್ತು. ಉಗ್ರರು ಈ ಎಲ್ಲ ಹಣವನ್ನು ತೀರಾ ವ್ಯವಸ್ಥಿತವಾಗಿ ಹವಾಲಾ ಮೂಲಕ, ಮತ್ತು ಹೊರಗಿಂದ ಹೊರಗೇ ದೊಡ್ಡ ದೊಡ್ಡ ಕಂಪನಿಗಳಲ್ಲಿ ತೊಡಗಿಸಿದ್ದರು. ಅಷ್ಟೇ ಅಲ್ಲ, ಸೂಡಾನ್, ಸೌದಿ, ಇರಾನ್, ಅಲ್ಜೀರಿಯ, ತುರ್ಕಿಯೆ, ದುಬೈ ಇಲ್ಲೆಲ್ಲಾ ಈ ಉಗ್ರರದೇ ಮಲ್ಟಿ ಮಿಲಿಯನ್ ಡಾಲರ್ ಕಂಪನಿಗಳಿವೆ.

ಅವುಗಳ ಆದಾಯಗಳೆಲ್ಲ ಹಮಾಸ್‌ಗೆ ತಲುಪುವ ವ್ಯವಸ್ಥೆಯಿದೆ. ಇಂಥ ಹಮಾಸ್ ಕಂಪನಿಗಳು ಹೊರದೇಶಗಳಲ್ಲಿ ನೂರಾರಿವೆ. ಅದೆಲ್ಲದರ ಮೇಲೆ ಆಯಾ ಮುಸ್ಲಿಂ ದೇಶಗಳ ಅಭಯಹಸ್ತವೂ ಇದೆ. ಒಟ್ಟಾರೆ ಗಾಜಾ ವ್ಯಾವಹಾರಿಕ ಸ್ಥಿತಿ ಬಹಳ ಜಟಿಲ. ಈಗ ಅಮೆರಿಕ ಇಂಥ ದುಡ್ಡಿನ ಸೆಲೆಯನ್ನು ಡಾಲರ್ ಸಂಕೋಲೆ ಯಲ್ಲಿ ಬಂಧಿಸಿ ಹಣ ಸಂದಾಯವಾಗದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿದೆ. ಆ ಕಾರಣಕ್ಕೆ ಅಮೆರಿಕದ ನೆಲೆಗಳ ಮೇಲೆ, ಹಡಗಿನ ಮೇಲೆ ಕೂಡ ಬೆಂಬಲಿ ಸುವ ಭಯೋತ್ಪಾದಕರು ದಾಳಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಯುದ್ಧ ಮುಂದುವರಿದಿದೆ, ದಿನಕ್ಕೊಂದು ರೂಪವನ್ನು ಪಡೆಯುತ್ತಿದೆ. ಜಾಗ ಅಷ್ಟೇ ಚಿಕ್ಕದಿರಬಹುದು, ಇಸ್ರೇಲ್ ಎಷ್ಟೇ ಗಟ್ಟಿಯಿರಬಹುದು, ಅದಕ್ಕೆ ಅಮೆರಿಕದ್ದೇ ಬೆಂಬಲವಿರಬಹುದು; ಅದೆಲ್ಲ ಇದ್ದರೂ ಹಮಾಸ್ ಅನ್ನು ಬುಡಸಮೇತ ಕಿತ್ತೆಸೆಯಲು ಸಾಧ್ಯವಂತೂ ಇಲ್ಲ.

ಏಕೆಂದರೆ ಹಮಾಸ್ ಉಗ್ರರ ಜಾಗತಿಕ ನೆಟ್‌ವರ್ಕ್ ಹಾಗಿದೆ. ಇದನ್ನು ಗುರುತಿಸುವಲ್ಲಿಯೂ ಇಸ್ರೇಲ್ ಬೇಹುಗಾರಿಕೆ ಸೋತಿತ್ತು. ದೇಶ, ಅಲ್ಲಿನ ವ್ಯವಸ್ಥೆ ಎಷ್ಟೇ ಮುಂದುವರಿದಿರಲಿ, ಯಾರದೇ ಬೆಂಬಲವಿರಲಿ, ಎಷ್ಟೇ ತಾಕತ್ತಿನದಾಗಿರಲಿ, ಇಂದು ಆಂತರಿಕ ಭದ್ರತೆಯ ವಿಚಾರದಲ್ಲಿ ಒಂದು ಕ್ಷಣವೂ ಮೈಮರೆಯುವಂತಿಲ್ಲ. ಒಂದು ದೇಶ ಸುಸ್ಥಿತಿಯಿಂದ ದುಸ್ಥಿತಿಗೆ ಎಷ್ಟು ಬೇಗ ತಲುಪಬಹುದು ಎನ್ನುವುದಕ್ಕೆ ಇಸ್ರೇಲ್ ಇಲ್ಲಿ ಸ್ಪಷ್ಟ ಉದಾಹರಣೆಯಾಗಿ ನಿಲ್ಲುತ್ತದೆ. ಭಾರತದಲ್ಲಿ ಇಸ್ಲಾಮಿಕ್
ಭಯೋತ್ಪಾದನೆ ಸದ್ಯ ನಿಯಂತ್ರಣದಲ್ಲಿದೆ. ಬೇಹುಗಾರಿಕೆ, ಆಂತರಿಕ ಭದ್ರತೆ ಸರಿಯಾಗಿ ಕೆಲಸಮಾಡುವಾಗ ಅದರ ಅನುಭವವಾಗುವುದಿಲ್ಲ. ಅದು ಎಡವಿದಾಗ ಮಾತ್ರ ತಿಳಿಯುವುದು.

ಭಾರತ ಇತ್ತೀಚಿನ ವರ್ಷಗಳಲ್ಲಂತೂ ಜಗತ್ತಿನ ಅತ್ಯಂತ ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಯಾವುದೇ ಭಯೋತ್ಪಾದನಾ ದಾಳಿಗಳು ಹಿಂದಿನಂತೆ ಆಗುತ್ತಿಲ್ಲ. ಇದು ಪ್ರಜೆಗಳಾದವರು ಗ್ರಹಿಸಲೇಬೇಕಾದ ಸರಕಾರದ ಯಶಸ್ಸು. ಸುರಕ್ಷಿತ ಭಾರತ ಅಸುರಕ್ಷಿತವಾಗಲಿಕ್ಕೆ ವ್ಯವಸ್ಥೆ ಒಂದು ಕ್ಷಣ ಮೈಮರೆತರೆ ಸಾಕು.
ಇಲ್ಲವೇ ಇನ್ನು ಕೆಲ ತಿಂಗಳಲ್ಲಿ ಚುನಾವಣೆಯಿದೆ. ಅಪಾತ್ರರಿಗೆ ವೋಟ್ ಹಾಕಿದರೂ ಆದೀತು.

Leave a Reply

Your email address will not be published. Required fields are marked *

error: Content is protected !!