Friday, 13th December 2024

ಅಹಂಕಾರವೋ ಉದಾಸೀನವೋ?

ಪ್ರತಿಸ್ಪಂದನ

ಶಂಕರನಾರಾಯಣ ಭಟ್

ರಮಾನಂದ ಶರ್ಮಾ ಅವರ ‘ಒಳೇಟಿನ ತಾಂಡವನೃತ್ಯದ ಭಯವೇ?’ ಎಂಬ ಲೇಖನವು (ವಿಶ್ವವಾಣಿ ಏ.೮) ಬಿಜೆಪಿ ಪಾಳಯದ ಇಂದಿನ ವಾಸ್ತವವನ್ನು ಅನಾವರಣಗೊಳಿಸಿದಂತಿದೆ. ಲೋಕಸಮರದ ಟಿಕೆಟ್ ಹಂಚಿಕೆ ಮುಗಿಯುತ್ತಿದ್ದಂತೆ, ಪಕ್ಷದೊಳಗಿನ ಭಿನ್ನಮತ ಇನ್ನೂ ಹೆಚ್ಚಾಗುತ್ತಿರುವಂತೆ ತೋರುತ್ತಿದೆ. ಅದರಲ್ಲೂ ವಿಶೇಷವಾಗಿ ಶಿವಮೊಗ್ಗದ ಈಶ್ವರಪ್ಪ ಮತ್ತು ಉತ್ತರ ಕನ್ನಡ ಜಿಲ್ಲೆಯ ಅನಂತಕುಮಾರ್ ಹೆಗಡೆಯವರು ಈ ನಿಟ್ಟಿನಲ್ಲಿ ಎದ್ದು ಕಾಣುತ್ತಾರೆ.

ಈ ಪೈಕಿ ಈಶ್ವರಪ್ಪನವರು ಕುಟುಂಬ ರಾಜಕಾರಣವನ್ನು ಟೀಕಿಸುತ್ತ ಮತ್ತದೇ ಕುಟುಂಬ ರಾಜಕಾರಣಕ್ಕೆ ಮುಂದಾಗಿದ್ದಾರೆ, ತಮ್ಮ ಮಗನಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬಂಡಾಯವೆದ್ದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪಽಸಿ ಗೆದ್ದು ಬಂದು ಮೋದಿಯವರಿಂದ ಭೇಷ್ ಎನ್ನಿಸಿಕೊಳ್ಳುವುದು ಅವರ ಇರಾದೆಯಂತೆ. ಇದಕ್ಕೇನನ್ನುವುದು?! ಇನ್ನು ಅನಂತಕುಮಾರ್ ಹೆಗಡೆಯವರ ನಡೆಯೇ ಅರ್ಥವಾಗದಂತಿದೆ. ಕೆಲ ವರ್ಷ ಅಜ್ಞಾತವಾಸದಲ್ಲಿದ್ದು ಚುನಾವಣೆ ಘೋಷಣೆ ಯಾಗುತ್ತಿದ್ದಂತೆ ಚುರುಕುಗೊಂಡ ಹೆಗಡೆಯವರು, ತಮ್ಮ ಕ್ಷೇತ್ರದ ಸುತ್ತೆಲ್ಲ ಸಭೆ ನಡೆಸಿದರು. ‘ನಾನೇನೂ ಟಿಕೆಟ್ಟಿಗಾಗಿ ಪರದಾಡುತ್ತಿಲ್ಲ; ಯಾರೇ ಅಭ್ಯರ್ಥಿಯಾದರೂ ಅವರಿಗಾಗಿ ಶ್ರಮಿಸಬೇಕು.

ಬಿಜೆಪಿ ೪೦೦ಕ್ಕೂ ಹೆಚ್ಚು ಸ್ಥಾನ ಗೆಲ್ಲುವಂತೆ ಮಾಡಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ಕಾಣಬೇಕು’ ಎಂದಿದ್ದರು ಹೆಗಡೆಯವರು. ಆದರೆ ಟಿಕೆಟ್ ಕೈತಪ್ಪುತ್ತಿದ್ದಂತೆ ಅವರು ಮತ್ತೆ ಅಜ್ಞಾತರಾಗಿರುವುದು, ಅವರ ಹೇಳಿಕೆಗೂ ನಡೆಗೂ ಸಂಬಂಧವೇ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ಪ್ರಾಯಶಃ ಅವರು, ‘ಹೇಗಿದ್ದರೂ ಟಿಕೆಟ್ ನನಗೇ ದಕ್ಕುತ್ತದೆ, ಹೀಗಾಗಿ ಮತ್ತೇಕೆ ಹೇಳುತ್ತ ತಿರುಗಬೇಕು..’ ಅಂತ ಅಂದು ಕೊಂಡಿದ್ದರೇನೋ? ಆದರೆ ವರಿಷ್ಠರ ಲೆಕ್ಕಚಾರವೇ ಬೇರೆ ಇತ್ತು ಎಂಬುದು ಅವರಿಗೆ ಆಮೇಲೆ ಅರಿವಾಗಿರಬಹುದು. ಹೀಗಾಗಿ ಅವರ ವರ್ತನೆಯನ್ನು ಒಂದು ರೀತಿಯ ಜುಗುಪ್ಸೆ ಅನ್ನಬೇಕೊ, ಸಿಟ್ಟು ಎಂದು ಪರಿಗಣಿಸ ಬೇಕೋ ಗೊತ್ತಾಗುತ್ತಿಲ್ಲ.

ಹಾಗಿಲ್ಲದಿದ್ದರೆ, ರಾಜ್ಯಕ್ಕೆ ಭೇಟಿಯಿತ್ತ ಅಮಿತ್ ಶಾ ಫೋನ್ ಮಾಡಿದಾಗ, ‘ವೈಯಕ್ತಿಕ ಕೆಲಸ ದಲ್ಲಿ ವ್ಯಸ್ತನಾಗಿರುವೆ, ಬಿಜೆಪಿಗೆ ನನ್ನ ಬದ್ಧತೆ ಬೇಕಿದ್ದರೆ ಉಳಿಸಿ
ಕೊಳ್ಳಬಹುದಿತ್ತು, ಈ ಬಗ್ಗೆ ಮಾತಾಡಲು ಇಷ್ಟವಿಲ್ಲ’ ಎಂದೆಲ್ಲ ಕಡ್ಡಿ ಮುರಿದಂತೆ ಹೇಳುತ್ತಿದ್ದರೇ? ಹೆಗಡೆಯವರ ಮುಂದಿನ ನಡೆಯ ಬಗ್ಗೆ ಸದ್ಯ ಏನೂ ಹೇಳಲಾ ಗದಿದ್ದರೂ, ಅವರು ಇನ್ನು ಮುಂದೆ ಸಕ್ರಿಯ ರಾಜಕಾರಣದಿಂದಲೇ ದೂರವಾಗಬಹುದು ಎಂಬುದೇ ಹೆಚ್ಚು ಸೂಕ್ತ. ಪ್ರಾರಂಭದಿಂದಲೂ ಸಂಘ ಪರಿವಾರದ ನೆರಳಲ್ಲೇ ಇದ್ದು, ಕಟ್ಟಾ ಹಿಂದುತ್ವವಾದಿ ಎನಿಸಿಕೊಂಡಿದ್ದ ಅವರು ಬೇರಾವುದೋ ಪಕ್ಷ ಸೇರಿ ರಾಜಕೀಯ ಮಾಡಬಹುದು ಎನಿಸುತ್ತಿಲ್ಲ.

ಹಾಗಂತ ಅವರಿಗೆ ಈಗಲೂ ಕೆಲ ‘ಹಿಂಬಾಲಕರು’ ಇದ್ದಿರಬಹುದು; ಆದರೆ ಅಧಿಕಾರ ಇಲ್ಲದಿದ್ದಾಗ ಯಾವ ಹಿಂಬಾಲಕರೂ, ಅಭಿಮಾನಿಗಳೂ ಹತ್ತಿರ ಸುಳಿಯ ವುದಿಲ್ಲ! ಹೆಗಡೆಯವರು ಹೀಗೇಕೆ ವರ್ತಿಸುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಅವರದ್ದು ಅತಿ ಆತ್ಮವಿಶ್ವಾಸವೋ, ದರ್ಪವೋ, ತಮ್ಮನ್ನು ಮೀರಿ ಬೇರಾರೂ ಇಲ್ಲ ಎಂಬ ಸೊಕ್ಕೋ? ಅದಲ್ಲ ಅಂದಿದ್ದರೆ, ಈ ಹಿಂದೆ ಪ್ರಧಾನಿ ಜಿಲ್ಲೆಗೆ ಭೇಟಿಕೊಟ್ಟಾಗ, ಕೇತ್ರದ ಸಂಸದರಾಗಿ ಅವರನ್ನು ಸ್ವಾಗತಿಸಲೂ ಬರಲಿಲ್ಲ ಹೆಗಡೆ ಯವರು. ಮೊನ್ನೆ ಅಮಿತ್ ಶಾ ಅವರ ಫೋನ್ ಕರೆಗೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದಾದರೆ ಇದ್ಯಾಕೋ ಅತಿಯಾಯಿತು ಎನಿಸುವುದಿಲ್ಲವೇ? ಒಂದಂತೂ ನಿಜ. ಯಾರು ಎಷ್ಟೇ ಎತ್ತರಕ್ಕೆ ಬೆಳೆದವರಾದರೂ ಒಮ್ಮೆ ಅಹಂಕಾರ ಆವರಿಸಿತು ಅಂದರೆ, ಅಲ್ಲಿಗೆ ಅವರ ಅವನತಿಯೂ ಸಮೀಪಿಸಿದಂತೆ!

(ಲೇಖಕರು ಹವ್ಯಾಸಿ ಬರಹಗಾರರು)