Saturday, 14th December 2024

ಈ ಬಾರಿ ಕ್ಲೀನ್ ಸ್ವೀಪ್ ಆಗುವುದೇ ?

ಅಶ್ವತ್ಥಕಟ್ಟೆ

ranjith.hoskere@gmail.com

೨೦೧೪ ಹಾಗೂ ೨೦೧೯ರ ಲೋಕಸಭಾ ಚುನಾವಣೆಗಳು ಮತ್ತು ಈ ಬಾರಿ ನಡೆಯುತ್ತಿರುವ ಚುನಾವಣೆಯನ್ನು ಗಮನಿಸಿದರೆ, ಹಲವು ಬದಲಾವಣೆಗಳನ್ನು
ಕಾಣಬಹುದು. ಮೋದಿ ಅವರ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿನ ಸಮಸ್ಯೆಯಿದೆ ಎನ್ನುವುದನ್ನು ಒಪ್ಪಲೇಬೇಕು.

ಪ್ರತಿ ಐದು ವರ್ಷಕ್ಕೊಮ್ಮೆ ಲೋಕಸಭಾ ಚುನಾವಣೆಯ ಹೆಸರಿನಲ್ಲಿ ನಡೆಯುವ ಪ್ರಜಾಪ್ರಭುತ್ವ ಹಬ್ಬ ಇಡೀ ದೇಶದಲ್ಲಿ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಒಂದೆಡೆ ಬಿಜೆಪಿಯವರು ‘ಈ ಬಾರಿ ೪೦೦+’ ಎನ್ನುವ ಘೋಷ ವಾಕ್ಯದೊಂದಿಗೆ ಮುನ್ನುಗುತ್ತಿದ್ದರೆ, ಇತ್ತ ಪ್ರತಿಪಕ್ಷಗಳೆಲ್ಲ ಸೇರಿಕೊಂಡು ‘ಬಿಜೆಪಿಯ ಸೋಲೊಂದೇ
ನಮ್ಮ ಆದ್ಯತೆ’ ಎನ್ನುವ ಘೋಷಣೆಯೊಂದಿಗೆ ಹೋರಾಟ ನಡೆಸುತ್ತಿವೆ. ‘ಮೋದಿ’ ವರ್ಸಸ್ ‘ಮೋದಿ ವಿರೋಧಿಗಳ’ ನಡುವಿನ ಈ ಜಿದ್ದಾಜಿದ್ದಿನ ಕಣದಲ್ಲಿ ಮತದಾನ ಪ್ರಭುಯಾರನ್ನು ಆಯ್ಕೆ ಮಾಡುತ್ತಾನೆ ಎನ್ನುವ ಕುತೂಹಲವಿದೆ.

ಕಳೆದೊಂದು ದಶಕದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ, ರಾಜಕೀಯ ಧ್ರುವೀಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ಬಿಜೆಪಿಗರಿಗೆ ಮತ್ತೊಂದು ಸುಲಭದ ಚುನಾವಣೆ ಎನ್ನುವ ಮಾತುಗಳು ಸಾಮಾನ್ಯ ಜನರಲ್ಲಿ ಕೇಳಿಬರುತ್ತಿವೆ. ಆದರೆ ಪ್ರತಿ ಚುನಾವಣೆಯಲ್ಲಿ ಸದ್ದಿಲ್ಲದೆ ಸದ್ದು ಮಾಡುವ ‘ಅಂಡರ್ ಕರೆಂಟ್’ ಬಿಜೆಪಿಗೆ ಯಾವ ಮಟ್ಟಕ್ಕೆ ಡ್ಯಾಮೇಜ್ ಮಾಡುತ್ತದೆ ಎನ್ನುವುದು ಹಲವರಲ್ಲಿರುವ ಬಹುದೊಡ್ಡ ಪ್ರಶ್ನೆ.

೨೦೧೪ ಹಾಗೂ ೨೦೧೯ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದಿದ್ದ ಚುನಾವಣೆಗಳನ್ನು ಹಾಗೂ ಈ ಬಾರಿ ನಡೆಯುತ್ತಿರುವ ಚುನಾವಣೆ ಯನ್ನು ಗಮನಿಸಿದರೆ, ಹತ್ತು ಹಲವು ಬದಲಾವಣೆಗಳನ್ನು ಕಾಣಬಹುದು. ಮೋದಿ ಅವರ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿನ ಸಮಸ್ಯೆಯಿದೆ ಎನ್ನುವುದನ್ನು ಒಪ್ಪಲೇಬೇಕು. ಆದರೆ ಈ ಎಲ್ಲವನ್ನು ಮೀರಿ ಒಂದು ದಶಕದ ಕೇಂದ್ರ ಸರಕಾರದ ಆಡಳಿತಕ್ಕೆ ಸಹಜವಾಗಿಯೇ ‘ಆಡಳಿತ ವಿರೋಧಿ’ ಅಲೆ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸುಳ್ಳಲ್ಲ. ಯಾವುದೇ ಒಂದು ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಬಹುದೊಡ್ಡ ಪ್ರಮಾಣದಲ್ಲಿ ರೂಪುಗೊಳ್ಳಬೇಕಾದರೆ, ಅದಕ್ಕೆ ಪ್ರತಿಪಕ್ಷಗಳ ಶ್ರಮ ಬಹುದೊಡ್ಡ ಮಟ್ಟದಲ್ಲಿರಬೇಕು.

ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಬಹುತೇಕ ಪ್ರತಿಪಕ್ಷಗಳು ‘ವಿಫಲ’ವಾಗಿವೆ, ಅಥವಾ ಮಾತಾಡದಂತೆ ವಿವಿಧ ರೀತಿಯ ‘ಒತ್ತಡ’ ಹೇರುವ ಮೂಲಕ ಮೌನವಾಗಿರುವಂತೆ ನೋಡಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎನ್ನುವುದು ಸುಳ್ಳಲ್ಲ. ಇದೀಗ ಚುನಾವಣಾ ಕಾವು ಹಂತಹಂತವಾಗಿ ಶುರುವಾಗಲಿದ್ದು, ಮುಂದಿನ ೬೦ ದಿನಗಳಲ್ಲಿ ಏಳು ಹಂತದಲ್ಲಿ ದೇಶಾದ್ಯಂತ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಮೊದಲೇ ಹೇಳಿದಂತೆ ಎನ್‌ಡಿಎ ಮೈತ್ರಿಕೂಟದ ಸಹವರ್ತಿಗಳೊಂದಿಗೆ ಸೇರಿ ೪೦೦ ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಲೆಕ್ಕಾಚಾರದಲ್ಲಿದೆ. ಆದರೆ ಈ ಗುರಿಯನ್ನು ತಲುಪಲು ಬಿಜೆಪಿಗಿರುವ ಬಹುದೊಡ್ಡ ಸಮಸ್ಯೆಯೆಂದರೆ ದಕ್ಷಿಣ ಭಾರತದ ರಾಜ್ಯಗಳು ಎಂದರೆ ತಪ್ಪಾಗುವುದಿಲ್ಲ.

ಕಳೆದ ಎರಡು ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದರೂ, ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳ, ಅಖಂಡ ಆಂಧ್ರಪ್ರದೇಶದಲ್ಲಿ ‘ನಿರೀಕ್ಷಿತ ಪ್ರಮಾಣದಲ್ಲಿ’ ನಂಬರ್ ಗೆಲ್ಲುವಲ್ಲಿ ಬಿಜೆಪಿಗೆ ಸಾಧ್ಯ ವಾಗಿರಲಿಲ್ಲ. ಹಾಗೆ ನೋಡಿದರೆ, ಕೇಂದ್ರದ ಬಿಜೆಪಿ ಸರಕಾರಕ್ಕೆ ಪ್ರತಿ
ಹಂತದಲ್ಲಿಯೂ ‘ಕೊಕ್ಕೆ’ ಹಾಕುವ, ಟಾಂಗ್ ಕೊಡುವ ಕೆಲಸವನ್ನು ಸಮಪರ್ಕವಾಗಿ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ರಾಜ್ಯ ಕಾಂಗ್ರೆಸ್ ಎಂದರೆ ತಪ್ಪಾಗುವುದಿಲ್ಲ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರಂತರವಾಗಿ ಹೋರಾಡುತ್ತಿದ್ದಾರೆ. ಇದರ ಭಾಗವಾಗಿಯೇ ದೆಹಲಿಯಲ್ಲಿ ಅನುದಾನ ತಾರತಮ್ಯ ಪ್ರಶ್ನಿಸಿ ಪ್ರತಿಭಟನೆ ನಡೆಸಿತ್ತು. ಇದಾದ ಬಳಿಕ ಬರಪರಿಹಾರಕ್ಕೆ ಪರಿಹಾರ ನೀಡಿಲ್ಲವೆಂದು ಈಗ ಸುಪ್ರೀಂ
ಕೋರ್ಟ್ ಮೆಟ್ಟಿಲೇರುವ ಮೂಲಕ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗಿದೆ.

೨೦೧೪ರ ಚುನಾವಣೆಯಲ್ಲಿ ೫೪೩ ಕ್ಷೇತ್ರಗಳ ಪೈಕಿ ಬಿಜೆಪಿ ಏಕಾಂಗಿಯಾಗಿ ೨೮೨ ಸೀಟುಗಳನ್ನು ಗೆದ್ದುಕೊಂಡಿದ್ದರೆ, ಎನ್ ಡಿಎ ಮೈತ್ರಿಪಕ್ಷಗಳ ಬಲಾಬಲ ೩೩೬ ಆಗಿತ್ತು. ಈ ಸಮಯದಲ್ಲಿ ಕಾಂಗ್ರೆಸ್ ೪೪ ಕ್ಷೇತ್ರಕ್ಕೆ ಸೀಮಿತಗೊಂಡಿದ್ದರೆ, ಯುಪಿಎ ೫೯ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು, ಇತರೆ ಪಕ್ಷಗಳು ೧೪೮ರಲ್ಲಿ ಜಯಭೇರಿ ಬಾರಿಸಿದ್ದವು. ಆದರೆ ೨೦೧೯ರಚುನಾವಣೆ ವೇಳೆಗೆ ಬಿಜೆಪಿ ಏಕಾಂಗಿಯಾಗಿ ೩೦೩ ಕ್ಷೇತ್ರದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರೆ, ಎನ್‌ಡಿಎ
ಮೈತ್ರಿಯ ಸಂಖ್ಯೆ ೩೫೨ಕ್ಕೆ ಬಂದಿತ್ತು. ಕಾಂಗ್ರೆಸ್ ೪೪ ಹಾಗೂ ಮಹಾಘಟಬಂಧನ್ ೯೧ ಸ್ಥಾನದಲ್ಲಿ ಗೆಲುವು ಸಾಧಿಸಿದ್ದರೆ, ತಟಸ್ಥರಾಗಿ ೧೦೦ ಮಂದಿ ಗೆಲುವು ಸಾಽಸಿದ್ದರು. ಈ ಅಂಕಿ- ಅಂಶದ ಆಧಾರದಲ್ಲಿ ಈ ಬಾರಿ ೪೦೦ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲಬೇಕು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆ.

ಆದರೆ ೩೫೨ರಿಂದ ೪೦೦ಕ್ಕೆ ಎನ್‌ಡಿಎ ಬಲವನ್ನು ಹೆಚ್ಚಿಸಲು ಬಿಜೆಪಿಗೆ ೪೮ ಕ್ಷೇತ್ರಗಳ ಅವಶ್ಯಕತೆಯಿದೆ. ಆದರೆ ಈ ೪೮ ಕ್ಷೇತ್ರಗಳು ಎಲ್ಲಿಂದ ಬರಲಿವೆ ಎನ್ನುವುದೇ ಈಗಿರುವ ಬಹು ದೊಡ್ಡ ಕುತೂಹಲ. ಏಕೆಂದರೆ, ೨೦೧೯ರ ಲೋಕಸಭಾ ಚುನಾವಣೆಯ ಅಂಕಿ-ಅಂಶವನ್ನು ಗಮನಿಸಿದರೆ, ಹಿಂದಿ ಭಾಷಿಕರ ಪ್ರದೇಶದಲ್ಲಿ ಬಹುತೇಕ ‘ಕ್ಲೀನ್ ಸ್ವೀಪ್’ ಮಾಡಲಾ ಗಿತ್ತು. ಇದರೊಂದಿಗೆ ದಕ್ಷಿಣ ಭಾರತದಲ್ಲಿ ೨೫ ಸೀಟುಗಳಲ್ಲಿ ಗೆಲ್ಲುವುದಕ್ಕೆ ಅವಕಾಶ ಮಾಡಿಕೊಂಡಿದ್ದು ಕರ್ನಾಟಕ ಮಾತ್ರ. ಇನ್ನುಳಿದ ನಾಲ್ಕು ರಾಜ್ಯಗಳಲ್ಲಿರುವ ೧೦೨ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಿಕ್ಕಿದ್ದು ಕೇವಲ ಒಂಬತ್ತು ಕ್ಷೇತ್ರ. ಇನ್ನುಳಿದಂತೆ ಉತ್ತರ ಪ್ರದೇಶದಲ್ಲಿ ರುವ ೮೦ರಲ್ಲಿ ೬೪, ಪಶ್ಚಿಮ ಬಂಗಾಳ ದಲ್ಲಿ ೪೨ರಲ್ಲಿ ೧೮, ೨೧ ಲೋಕಸಭಾ ಕ್ಷೇತ್ರಗಳಿರುವ ಒರಿಸ್ಸಾ ದಲ್ಲಿ ಎಂಟು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುವುದಕ್ಕೆ ಸಾಧ್ಯ ವಾಗಿತ್ತು.

ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ರಾಜಸ್ಥಾನ, ಜಾರ್ಖಂಡ್, ಹರಿಯಾಣ, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿರುವ
೨೫೭ ಕ್ಷೇತ್ರಗಳಲ್ಲಿ ಭರ್ಜರಿ ೨೩೮ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಇನ್ನುಳಿದಂತೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ಅಸ್ಸಾಂನಲ್ಲಿರುವ ೧೮೫ ಕ್ಷೇತ್ರದಲ್ಲಿ ೧೦೯ ಕ್ಷೇತ್ರವನ್ನು ಬಿಜೆಪಿ ಅಥವಾ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದುಕೊಂಡಿದ್ದರು. ಆದರೆ ದಕ್ಷಿಣ ಭಾರತದಲ್ಲಿ ಮಾತ್ರ ಕರ್ನಾಟಕವನ್ನು ಹೊರತುಪಡಿಸಿದರೆ, ಬಿಜೆಪಿ ಗೆದಿದ್ದು ಒಂದಂಕಿಯೂ ದಾಟುವುದಿಲ್ಲ ಎನ್ನುವುದು ಗಮನಾರ್ಹ.

ಕಳೆದ ಐದು ವರ್ಷದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ೧೫ ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿ ಈ ಬಾರಿ ಕ್ಲೀನ್ ಸ್ಲೀಪ್ ಮಾಡುವುದು ಸುಲಭದ ಮಾತಲ್ಲ. ೨೦೧೯ರಲ್ಲಿ ದಕ್ಷಿಣ ಭಾರತದ ರಾಜ್ಯಗಳು ಬಿಜೆಪಿಯನ್ನು ಕೈಹಿಡಿದಿರಲಿಲ್ಲ. ಈ ಬಾರಿಯೂ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಈಗಿರುವ ಸ್ಥಿತಿಗಿಂತ ಭಿನ್ನವಾಗಿದೆ ಎನ್ನುವ ಪರಿಸ್ಥಿತಿಯೇನಿಲ್ಲ. ಆದ್ದರಿಂದ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿ
ದರೆ ಈ ಬಾರಿ ಬಿಜೆಪಿಗೆ ಕರ್ನಾಟಕ ಸುಲಭದ ತುತ್ತಾಗುವ ಸಾಧ್ಯತೆ ತೀರಾ ಕಡಿಮೆಯಿದೆ. ಬಿಜೆಪಿ-ಕಾಂಗ್ರೆಸ್‌ನವರ ಆಂತರಿಕ ಸಮೀಕ್ಷೆಯಲ್ಲಿಯೂ ಇದು ಸ್ಪಷ್ಟವಾಗಿದೆ.

ಕಾಂಗ್ರೆಸಿಗರು ಕನಿಷ್ಠ ೧೫ ಸೀಟುಗಳಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸದ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಈ ಸಂಖ್ಯೆ ಕನಿಷ್ಠ ೧೦ಕ್ಕಾದರೂ ಸೀಮಿತ ವಾಗುತ್ತದೆ. ಹಾಗೆ ನೋಡಿದರೆ, ಕರ್ನಾಟಕದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ನಾಯಕತ್ವ ಬಲಿಷ್ಠ ವಾಗಿದೆ ಎನ್ನುವುದು ಈಗಾಗಲೇ ಪದೇಪದೆ ಸಾಬೀತಾಗಿದೆ. ಲೋಕಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ನಡೆಯುತ್ತದೆ ಎನ್ನುವುದು ಸತ್ಯ. ಆದರೆ ಕಳೆದ ವಿಧಾನಸಭಾ ಚುನಾವಣೆಯನ್ನು ಗಮನಿಸಿದರೆ, ಕರ್ನಾಟಕದಲ್ಲಿ ‘ಮೋದಿ ವೇವ್’ ಹೇಳಿಕೊಳ್ಳುವಷ್ಟು ಯಶಸ್ಸು ಕೊಡಲಿಲ್ಲ.

ಜತೆಗೆ ಲೋಕಸಭಾ ಚುನಾವಣೆ ಟಿಕೆಟ್ ಘೋಷಿಸಿದ ಬಳಿಕ ರಾಜ್ಯ ಬಿಜೆಪಿಯಲ್ಲಿ ಕಳೆದೊಂದು ತಿಂಗಳಿನಿಂದ ಎದ್ದಿರುವ ಬಂಡಾಯದ ಅಲೆಯನ್ನು ಗಮನಿಸಿದರೆ, ೨೦೧೯ರಲ್ಲಿ ೨೫ ಕ್ಷೇತ್ರಗಳನ್ನು ಗೆದ್ದುಕೊಂಡು ಹೋದಷ್ಟು ಸುಲಭದಲ್ಲಿ ಈ ಬಾರಿ ಗೆಲ್ಲುವುದು ಕಷ್ಟದ ವಿಷಯ ಎನ್ನುವುದು ಸ್ಪಷ್ಟ. ಕರ್ನಾಟಕದಲ್ಲಿ ಕಳೆದ ಬಾರಿ ಕ್ಲೀನ್ ಸ್ವೀಪ್ ಮಾಡಿದಂತೆ ಈ ಬಾರಿ ಮಾಡುವುದು ಸುಲಭವಲ್ಲ. ೨೦೧೯ರ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿ
ದ್ದರೂ, ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ವಿರೋಧಿಸಿ ಅನೇಕರು ‘ತಟಸ್ಥ’ರಾಗಿದ್ದರೆ, ಇನ್ನು ಕೆಲವರು ಮೌನವಾಗಿದ್ದರೂ ಬಿಜೆಪಿಯನ್ನು ಬೆಂಬಲಿಸಿದ್ದರು. ಇದರಿಂದಾಗಿ ಹಳೇ ಮೈಸೂರು ಸೇರಿದಂತೆ ಗೆಲ್ಲುವುದು ಕಷ್ಟ ಎನ್ನುವಂಥ ಕ್ಷೇತ್ರ ಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಿತ್ತು.

ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಂಥ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರು ಎನ್ನುವುದಕ್ಕಿಂತ ಮೈತ್ರಿ ಪಕ್ಷದ ನಾಯಕರೇ ಅವರವರ ಕಾಲೆಳೆದುಕೊಂಡು ಸೋತರು. ಆದರೆ ಈ ಬಾರಿ ಕರ್ನಾಟಕದಲ್ಲಿ ಈ ಪರಿಸ್ಥಿತಿಯಿಲ್ಲ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದ್ದು,
ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆಯೇ ಹೆಚ್ಚಿದೆ. ಇದರೊಂದಿಗೆ ಕಳೆದೊಂದು ವರ್ಷದ ಹಿಂದಷ್ಟೇ ಜಾರಿಗೊಳಿಸಿರುವ ಪಂಚಗ್ಯಾರಂಟಿ ಯೋಜನೆ ಗಳನ್ನೇ ಮುಂದಿಟ್ಟುಕೊಂಡು ಈ ಬಾರಿ ಚುನಾವಣೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಎಲ್ಲಕ್ಕಿಂತ ಮುಖ್ಯ ವಾಗಿ, ಈ ಬಾರಿ ಟಿಕೆಟ್ ಹಂಚಿಕೆ ಸಮಯದಲ್ಲಿ, ಮೋದಿ ಅಂತಿಮಗೊಳಿಸಿದ್ದ ಪಟ್ಟಿಗೂ ಬಿಜೆಪಿಯಲ್ಲಿ ವ್ಯಕ್ತವಾದ ಬಂಡಾಯ ಈ ಹಿಂದೆ ಕಾಣಿಸಿರಲಿಲ್ಲ. ಆದರೆ ಕೋಲಾರ ಹೊರತುಪಡಿಸಿ, ಕಾಂಗ್ರೆಸ್‌ನಲ್ಲಿ ಈ ಪ್ರಮಾಣದ ಬಂಡಾಯ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದ್ದರಿಂದ ಈ ಬಾರಿ ‘ಒಳ ಏಟಿನ’ ಆತಂಕ ಕಾಂಗ್ರೆಸ್‌ಗಿಂತ ಹೆಚ್ಚಾಗಿ ಬಿಜೆಪಿಗಿದೆ ಎಂದರೆ ತಪ್ಪಾಗುವುದಿಲ್ಲ.

ಇನ್ನು ಈ ಬಾರಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸದೆ, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ೨೮ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಈ ಮೂಲಕ ಇನ್ನುಳಿದ ೨೫ ಕ್ಷೇತ್ರಗಳಲ್ಲಿರುವ ಜೆಡಿಎಸ್ ಮತ ಗಳು ಬಿಜೆಪಿಗೆ ಒಲಿಯಲಿದೆ. ಇದರಿಂದ ಕಳೆದ ಬಾರಿಯಂತೆ ಎಲ್ಲ ಕ್ಷೇತ್ರದಲ್ಲಿಯೂ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿಯಿತ್ತು. ಆದರೆ ಈ ಹಿಂದೆ ನಡೆದಿರುವ ಹತ್ತಾರು ಮೈತ್ರಿಗಳನ್ನು ಗಮನಿಸಿದರೆ, ಯಾವುದೇ ಪಕ್ಷ ಮತ್ತೊಂದು
ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೂ, ಪೂರ್ಣ ಪ್ರಮಾಣದಲ್ಲಿ ಮತಗಳು ಹಂಚಿಕೆಯಾಗುವುದಿಲ್ಲ.

ಅದರಲ್ಲಿಯೂ ಜಾತ್ಯತೀತ ಹಿನ್ನೆಲೆಯ ಜೆಡಿಎಸ್ ಮತಗಳು ಬಿಜೆಪಿಗೆ ಅಷ್ಟು ಸುಲಭವಾಗಿ ಬರಲಿವೆ ಎನ್ನುವುದು ಪ್ರಾಯೋಗಿಕವಾಗಿ ಸವಾಲಿನ ಕೆಲಸ.
ಬಿಜೆಪಿ ಕಳೆದ ಬಾರಿಯಂತೆ ಹಿಂದಿ ಬೆಲ್ಟ್‌ನಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡರೂ ಇನ್ನುಳಿದ ಭಾಗದಲ್ಲಿ ಹೇಳಿಕೊಂಡಷ್ಟು ಸುಲಭದಲ್ಲಿ ೪೦೦+ ಗೆದ್ದುಕೊಂಡು ಬರುವ ವಾತಾವರಣವಿಲ್ಲ. ದಕ್ಷಿಣ ಭಾರತ, ಕರ್ನಾಟಕದಲ್ಲಿ ಬಿಜೆಪಿಯ ಅಯೋಧ್ಯೆ ರಾಮಮಂದಿರ ನಿರ್ಮಾಣ, ಆರ್ಟಿಕಲ್ ೩೭೦, ಸಿಎಎ ಬಹುದೊಡ್ಡ ಪ್ರಮಾಣದಲ್ಲಿ ‘ಅಲೆ’ ಸೃಷ್ಟಿಸುತ್ತದೆ ಎನ್ನುವುದಕ್ಕಾಗುವುದಿಲ್ಲ. ಕರ್ನಾಟಕದಲ್ಲಿ ಮೊದಲಿನಿಂದಲೂ ಬಿಜೆಪಿ ಪರ ಅಲೆಯಿದೆ ಎನ್ನುವುದು ಎಷ್ಟು ಸತ್ಯವೋ, ಅದನ್ನೇ ಮುಂದಿಟ್ಟುಕೊಂಡು ಹೋದರೆ ೨೮ಕ್ಕೆ ೨೮ ಗೆಲ್ಲುವ ಪರಿಸ್ಥಿತಿಯಲ್ಲಿಯೂ ರಾಜ್ಯ ಬಿಜೆಪಿಯಿಲ್ಲ ಎನ್ನುವುದು ಸತ್ಯ. ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ
ಎನ್ನುವುದೇ ಕಾಂಗ್ರೆಸ್‌ಗೆ ಈ ಚುನಾವಣೆಯ ಪ್ರಮುಖ ಅಸ್ತ್ರವಾಗಿದ್ದು, ಅದನ್ನು ಮೀರಿ ಮೋದಿ ವೇವ್ ಸೃಷ್ಟಿಸುವಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಸಾಧ್ಯವೇ? ಎನ್ನುವುದಕ್ಕೆ ಮತದಾರರೇ ಉತ್ತರಿಸಬೇಕಿದೆ.