Sunday, 15th December 2024

ಇದೇನ ಸಭ್ಯತೆ, ಇದೇನ ಸಂಸ್ಕೃತಿ ?

ಭಾಸ್ಕರಾಯಣ

ಎಂ.ಕೆ.ಭಾಸ್ಕರ ರಾವ್

ದಸರಾ ಸಡಗರವೇನೋ ಕೊನೆಗೊಂಡಿದೆ. ದೇಶ ವಿದೇಶಗಳ ಪ್ರವಾಸಿಗರು ಮೈಸೂರಿಗೆ ಆಗಮಿಸಿ ಕಣ್ತುಂಬಿಕೊಂಡಿದ್ದಾ ಗಿದೆ. ಹಾಗೆಂದ ಮಾತ್ರಕ್ಕೆ ಎಲ್ಲವೂ ಮುಗಿದಿಲ್ಲ. ರಾಜೀವ ತಾರಾನಾಥರ ಹೆಸರನ್ನು ವಿರಾಜಮಾನ ಮಾಡಬೇಕಿದ್ದ ಇಲಾಖೆ ಅಧಿಕಾರಿಗಳು ದಸರಾ ಉತ್ಸವಕ್ಕೆ ಕಳಂಕದ ತೇಪೆ ಹಚ್ಚಿ ಹರಾಜುಮಾನ ಮಾಡಿದ್ದಾರೆ.

ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಕೆಲವು ಅಧಿಕಾರಿಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತೊಯ್ದಿರುವುದು ಕ್ಷಮಿಸಿ, ಹೊತ್ತೊಯ್ದಿರುವುದು ಈ ಬಾರಿಯ ಮೈಸೂರು ದಸರಾ ಮಹೋತ್ಸವದ ವಿಶೇಷಗಳಲ್ಲಿ ವಿಶೇಷ. ಈ ಇಲಾಖೆಯ ಇತಿಹಾಸ ದೊಳಕ್ಕೆ ಒಂದು ಇಣುಕುನೋಟ ಹರಿಸಿದರೆ ಅದರ ಅತ್ಯುತ್ತಮ ಆಶಯಗಳು ಮತ್ತು ಅವು ಅನುಷ್ಠಾನಕ್ಕೆ ಬಂದ ರೀತಿ ಖಂಡಿತವಾಗಿಯೂ ಮುದ ಕೊಡುತ್ತವೆ. ಅದೇ ಕಾಲಕ್ಕೆ ಯಾರ‍್ಯಾರದೋ ತೆವಲು ದುರಾಸೆ ಕಾರಣವಾಗಿ ಇಲಾಖೆಯ ಮರ್ಯಾದೆ
ಮಣ್ಣುಗೂಡಿರುವುದೂ ರಪ್ಪೆಂದು ರಾಚುತ್ತದೆ.

ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರೋದ್ ಕಛೇರಿ ನೀಡುವುದಕ್ಕೆ ಆಹ್ವಾನಿತರಾದ ಪಂಡಿತ್ ರಾಜೀವ ತಾರಾನಾಥರ ಹೆಸರಿಗೆ ಮಸಿ ಬಳಿಯುವ ಮೂಲಕ ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಲೋಕೋತ್ತರ ಕುಖ್ಯಾತಿಗೆ ತನ್ನನ್ನು ಒಡ್ಡಿಕೊಂಡಿ ತೆನ್ನುವುದು ಈ ವಿಶೇಷ. ತಾರಾನಾಥರು ಸರೋದ್ ವಾದನದಲ್ಲಿ ಜಗತ್ತಿನಲ್ಲೇ ಬೆರಳೆಣಿಕೆಯಷ್ಟಿರುವ ಅತ್ಯುತ್ತಮ ಕಲಾವಿ
ದರಲ್ಲಿ ಒಬ್ಬರು. ಒಂದೇ ಮಾತಿನಲ್ಲಿ ಬಣ್ಣಿಸುವುದಾದರೆ ಸರೋದ್ ವಾದನದಲ್ಲಿ ತನ್ನದೇ ವಿಶಿಷ್ಟ ಛಾಪನ್ನು ಒತ್ತಿರುವ ಪಂಡಿತೋತ್ತಮ.

ತೊಂಭತ್ತರ ಗಡಿಯನ್ನು ದಾಟಿದ್ದರೂ ದಣಿವಿಲ್ಲದಂತೆ ಸರೋದ್ ತಂತಿಗಳನ್ನು ಮೀಟುತ್ತ ಅವರು ಹೊರಡಿಸುವ ನಾದಝರಿಗೆ ಸರಿಸಮ ಸ್ಪರ್ಧೆ ನೀಡಬಲ್ಲ ಕಲಾವಿದರು ಅಪರೂಪ ಎಂದೇ ಅವರನ್ನು ಪಂಡಿತೋತ್ತಮ ಎಂದಿದ್ದು. ರಾಜೀವ ತಾರಾನಾಥರು ಬಹುಭಾಷಾ ವಿಶಾರದ. ಕೆಲವು ಕಾಲ ಇಂಗ್ಲಿಷ್ ಅಧ್ಯಾಪಕರಾಗಿಯೂ ಕಾಲೇಜೊಂದರಲ್ಲಿ ಕಲಿಸಿದವರು. ಕನ್ನಡ ಸಾಹಿತ್ಯಲೋಕ ಕಂಡಂತೆ ಅವರೊಬ್ಬ ಪ್ರಥಮ ಶ್ರೇಣಿ ವಿಮರ್ಶಕ ಕೂಡಾ. ಯು.ಆರ್. ಅನಂತಮೂರ್ತಿಯವರ ಕೃತಿಯೊಂದಕ್ಕೆ
ಅವರು ಬರೆದ ಮುನ್ನುಡಿ ಸಾಹಿತ್ಯದ ವಿದ್ಯಾರ್ಥಿಗಳು ಮರೆಯದೆ ಓದಿ ಮನನ ಮಾಡಿಕೊಳ್ಳಬೇಕಾದ ನುಡಿ ರತ್ನಕೋಶ.

‘ಸರೋದ್‌ಗೆ ಅವರು ಒಲಿದಿದ್ದರಿಂದ ಸಾಹಿತ್ಯಕ್ಕೆ ತುಂಬಲಾಗದ ನಷ್ಟವಾಯಿತು’ ಎಂದವರಿದ್ದಾರೆ. ‘ಹಾಗೇನಾದರೂ ಸಾಹಿತ್ಯಕ್ಕೆ ಅವರು ಆತುಕೊಂಡಿದ್ದರೆ ಸರೋದ್ ಕ್ಷೇತ್ರ ಬಡವಾಗುತ್ತಿತ್ತು’ ಎಂದವರೂ ಇದ್ದಾರೆ. ದೇಶ ವಿದೇಶಗಳಲ್ಲಿ ಸರೋದ್ ವಾದನ ಕ್ಕಾಗಿ, ಸರೋದ್ ಕಲಿಸುವ ಗುರುವಾಗಿ ಉನ್ನತ ಸ್ಥಾನದಲ್ಲಿರುವ ಅವರ ಗೌರವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮಣ್ಣು ಗೂಡಿಸುವ ಹಂತಕ್ಕೆ ಒಯ್ದರೆನ್ನುವುದು ದಸರಾ ಸಂಭ್ರಮಕ್ಕೆ ಕಪ್ಪುಚುಕ್ಕಿ ಇಟ್ಟ ಬೆಳವಣಿಗೆ.

ದಸರಾ ಸಡಗರವೇನೋ ಕ್ಯಾಲೆಂಡರ್ ಪ್ರಕಾರ ಕೊನೆಗೊಂಡಿದೆ. ದೇಶ ವಿದೇಶಗಳ ಪ್ರವಾಸಿಗರು ಮೈಸೂರಿಗೆ ಆಗಮಿಸಿ ಕಣ್ತುಂಬಿ ಕೊಂಡಿದ್ದಾಗಿದೆ. ‘ಮಳೆ ನಿಂತ ಮಾತ್ರಕ್ಕೆ ಮರದಹನಿ ನಿಲ್ಲದು’ ಎಂಬ ಮಾತೇ ಇದೆ. ದಸರಾ ಮುಗಿಯಿತು ಎಂದ ಮಾತ್ರಕ್ಕೆ ಎಲ್ಲವೂ ಮುಗಿದಿಲ್ಲ; ಮುಗಿದುಹೋಗುವುದು ಸಾಧ್ಯವೂ ಇಲ್ಲ. ರಾಜೀವ ತಾರಾನಾಥರ ಹೆಸರನ್ನು ವಿರಾಜಮಾನ ಮಾಡ ಬೇಕಿದ್ದ ಇಲಾಖೆ ಅಧಿಕಾರಗಳು ದಸರಾ ಉತ್ಸವಕ್ಕೆ ಕಳಂಕದ ತೇಪೆ ಹಚ್ಚಿ ಹರಾಜುಮಾನ ಮಾಡಿದ್ದಾರೆ.

ಮೈಸೂರು ಅರಮನೆ ಮುಖ್ಯ ವೇದಿಕೆಯಲ್ಲಿ ಕಛೇರಿ ನೀಡುವಂತೆ ಕೋರುವುದಕ್ಕೆ ಹೋಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ೩ ಲಕ್ಷ ರು. ಕಮಿಷನ್ ನೀಡುವಂತೆ ಕೇಳಿದರೆಂಬ ಸುದ್ದಿ ಕೋಲಾಹಲಕ್ಕೆ ಕಾರಣವಾದ ಮತ್ತು ದಸರಾ ಉತ್ಸವದ ಹೆಸರಿನಲ್ಲೂ ಮುಕ್ಕುವ ಮಂದಿ ಇದ್ದಾರೆನ್ನುವುದು ಬಹಿರಂಗವಾಗಿರುವ ಧಾರಾ ವಾಹಿಯಂತೆ ಮುಂದುವರಿದಿದೆ. ಧೂಳು ಎಬ್ಬಿಸಿದ ಮೊದಲ ಮಾಹಿತಿ ಪ್ರಕಾರ ರಾಜೀವರಿಗೆ ೮ ಲಕ್ಷ ರು. ಸಂಭಾವನೆ ನೀಡಿ ಅದರಲ್ಲಿ ೩ ಲಕ್ಷ ಕಮಿಷನ್ ಮುರಿದುಕೊಳ್ಳುವ ತಂತ್ರಗಾರಿಕೆಯನ್ನು ಅಧಿಕಾರಿಗಳು ಮಾಡಿದರು ಎನ್ನುವುದು ಆರೋಪ.

ಸಾಂಸ್ಕೃತಿಕ ಲೋಕದ ಮೈಮನಗಳನ್ನು ನಡುಗಿಸಿದ ಈ ಬೆಳವಣಿಗೆಯಿಂದ ಬೆಚ್ಚಿಬಿದ್ದ ಅಧಿಕಾರಿಗಳು ಆರೋಪವನ್ನು ಅಲ್ಲಗಳೆಯುವ ಮೂಲಕ ಮೈಮುಖಕ್ಕೆ ಮೆತ್ತಿದ ರಾಡಿಯನ್ನು ತೊಳೆದು ಕೊಳ್ಳುವ ಯತ್ನ ನಡೆಸಿದರೇನೋ ನಿಜ. ರಾಜೀವರೂ ತಮ್ಮನ್ನು ಭೇಟಿ ಮಾಡಿದ ಅಧಿಕಾರಿಗಳು ಕಮಿಷನ್‌ಗೆ (ಲಂಚ ಎಂದರೆ ತಪ್ಪೇನೂ ಇಲ್ಲ) ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟನೆ ನೀಡಿ ಇಲಾಖೆಯ ಮರ್ಯಾದೆ ಮೂರಾಬಟ್ಟೆ ಆಗುವುದನ್ನು ತಡೆಯು ವುದಕ್ಕೆ ನೆರವು ನೀಡಿದ್ದಾರೆ. ಆದರೆ ಅವರು ಆರೋಪದ ಬುಡವನ್ನು ಖುಲ್ಲಂಖುಲ್ಲಾ ಸ್ವಚ್ಛಗೊಳಿಸಿಲ್ಲ. ಅನಾಮಧೇಯ ವ್ಯಕ್ತಿಯೊಬ್ಬರು ಇಂಥ ಬೇಡಿಕೆ ಇಟ್ಟಿದ್ದು ದಿಟವೆಂದು ಹೇಳುವ ಮೂಲಕ ಎಲ್ಲೋ ಏನೋ ಎಡವಟ್ಟು ಆಗಿದೆ ಎನ್ನುವುದರ ಸುಳಿವನ್ನು ರಾಜೀವ್ ನೀಡಿದ್ದಾರೆ.

‘ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ’ ಎಂಬ ಗಾದೆಮಾತಿದೆ. ಇಂಥ ಆರೋಪಗಳು ಬಂದಾಗ ಅದು ರಾಡಿ ಸ್ವರೂಪ ತಾಳುವುದಕ್ಕೆ ಮೊದಲೇ ಚರಂಡಿ ಶುದ್ಧೀಕರಿಸುವ ಅಗತ್ಯವಿದೆ. ಬೂದಿ ಮುಚ್ಚಿದ ಕೆಂಡವನ್ನು ಕೆದಕಿ ಹೊರನೀರು ಚಿಮುಕಿಸಿ ಅನಾಹುತ ತಡೆಯುವ ನಾಗರಿಕ ಜವಾಬ್ದಾರಿ ಸರಕಾರಕ್ಕೆ ಇರುತ್ತದೆ. ಕಾಲದಿಂದ ಕಾಲಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮರ್ಯಾದೆ ಯನ್ನು ಹರಾಜು ಹಾಕುತ್ತ ಚರಂಡಿಪಾಲು ಮಾಡುವ ಅಧಿಕಾರಿ ಸಿಬ್ಬಂದಿಯ ಕೊಳಕುಮಂಡಲ ವ್ಯವಸ್ಥೆಯಾಗಿ ತಂಡ ತಂಡವೇ ಇರುವುದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲವೇ ಇಲಾಖೆ ಸಚಿವ ಶಿವರಾಜ ತಂಗಡಗಿ ಅಲ್ಲಗಳೆಯಲಾರರು.

ಇಲಾಖೆಯ ಕರ್ಮಕಾಂಡಕ್ಕೆ ಒಂದು ಕೊನೆ ಹೇಳುವ ಯತ್ನ ಈಗಲಾದರೂ ನಡೆದೀತೇ ಎಂಬ ಹುಸಿ ಆಶಾವಾದದತ್ತ ರಾಜ್ಯದ ಜನತೆ ನೋಡುವಂತಾಗಿದೆ. ಇಲಾಖೆಯಲ್ಲಿ ಮಡುಗಟ್ಟಿರುವ ಭ್ರಷ್ಟಾಚಾರದ ಇಂಥ ಆರೋಪ ಕೇಳಿಬಂದಿದ್ದು ಇದೇ ಮೊದಲ ಸಲವೇನೂ ಅಲ್ಲ. ಕೆಲವು ವರ್ಷ ಹಿಂದಿನ ಮಾತು. ರಾಜ್ಯೋತ್ಸವ ಪ್ರಶಸ್ತಿ ಜತೆ ಕೊಡುವ ಸ್ವರ್ಣ ಫಲಕಗಳನ್ನೇ ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮನೆಗೆ ಹೊತ್ತೊಯ್ದ ಆರೋಪ ಕೇಳಿಬಂದಿತ್ತು. ಆರೋಪ ಕೇಳಿಬಂದಷ್ಟೇ ವೇಗದಲ್ಲಿ ಅದನ್ನು ಮುಚ್ಚಿ ಹಾಕಲಾಯಿತು ಕೂಡಾ. ರಾಜ್ಯೋತ್ಸವ ಪ್ರಶಸ್ತಿಗೆ ದುಂಬಾಲು ಬೀಳುವವರಲ್ಲಿ ಕೆಲವರಾದರೂ ನಮಗೆ ಪ್ರಶಸ್ತಿಪತ್ರ, ಸ್ವರ್ಣಪದಕ
ಕೊಟ್ಟರೆ ಸಾಕು, ಪ್ರಶಸ್ತಿ ಮೊತ್ತವನ್ನು ನೀವೇ ಇಟ್ಟುಕೊಳ್ಳಿರೆಂದು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರೆಂಬ ಆಪಾದನೆಯೂ ತೇಲಿತ್ತು; ಮತ್ತು ಅದೂ ಅಷ್ಟೇ ರಭಸದಲ್ಲಿ ಬೀಸಿದ ಗಾಳಿಯಲ್ಲಿ ತೂರಿಹೋಯಿತು.

ರಾಜ್ಯದಲ್ಲಿ ಇರುವಷ್ಟು ಸರಕಾರಿ ಪ್ರಾಯೋಜಿತ ಪ್ರಶಸ್ತಿ ಪುರಸ್ಕಾರ ದೇಶದ ಇನ್ನಾವ ರಾಜ್ಯದಲ್ಲೂ ಇಲ್ಲ. ಕವಿ-ಕಲಾವಿದರನ್ನು
ಪೋಷಿಸುವ ಸಂಸ್ಕೃತಿಯನ್ನು ಬೆಳೆಸುವ, ನಾಡು- ನುಡಿಗೆ ದುಡಿದ ಮಹನೀಯರನ್ನು ಗೌರವಿಸುವ ಅತ್ಯುತ್ತಮ ಯೋಜನೆ ಇದು. ಆದರೆ ವಟವೃಕ್ಷವಾದರೂ ಸೈ, ಗೆದ್ದಲು ಒಳಹೊಕ್ಕರೆ ಅನಾಹುತ ಖಚಿತ. ಕನ್ನಡ ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿಯೇ ಮುಂತಾದ ಸಂಸ್ಕೃತಿಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ಆಶಯದೊಂದಿಗೆ ಸಂಸ್ಕೃತಿ ವಿಭಾಗವನ್ನು ಕೆಂಗಲ್
ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಆರಂಭಿಸಲಾಯಿತು.

ಅಂದಿನಿಂದ ಇಂದಿನವರೆಗಿನ ಅವಧಿಯಲ್ಲಿ ಬೇರೆ ಬೇರೆ ಹೆಸರು ಪಡೆದು ವಿಕಾಸಗೊಂಡಿರುವ ಇಲಾಖೆ ಈ ಹೊತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗಿದೆ. ಆದರೆ ಇಲಾಖೆಗೆ ಬಜೆಟ್‌ನಲ್ಲಿ ಬಹಳ ಕಡಿಮೆ ಮೊತ್ತ ಮೀಸಲಿಡುತ್ತಿದ್ದುದರಿಂದ ಇಲಾಖೆಯನ್ನು ಮೂಸಿ ನೋಡಲೂ ರಾಜಕಾರಣಿಗಳು ತಯಾರಿರಲಿಲ್ಲ. ಬಿ.ಎಸ್. ಯಡಿಯೂರಪ್ಪ ಮೊದಲಬಾರಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಇಲಾಖೆಗೆ ಆರ್ಥಿಕ ಕಸುವು ದೊರೆಯಿತು. ನಂತರದಲ್ಲಿ ಬಜೆಟ್‌ನಲ್ಲಿ ಅದಕ್ಕೆ ಮಹತ್ವ ಬಂತು. ಬಹುದೊಡ್ಡ ಆರ್ಥಿಕ ಬಲವನ್ನು ಬಿಎಸ್‌ವೈ ತುಂಬಿದರೆಂದೇ ಇಲಾಖೆಯ ಶಾಪ ವಿಮೋಚನೆಯಾಯಿತು.

ಎಲ್ಲ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡುವುದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಂಘಟಿಸುವುದು, ಚಿನ್ನದ ಪದಕಗಳನ್ನು ಕೆತ್ತಿಸಿ ಪುರಸ್ಕೃತರಿಗೆ ಮುಖ್ಯಮಂತ್ರಿ ಕೈಯಿಂದ ಪ್ರದಾನ ಮಾಡಿಸುವುದು, ಪ್ರಶಸ್ತಿ ಮೊತ್ತದ ಚೆಕ್ಕನ್ನು ಪುರಸ್ಕಾರದ ದಿನವೇ ಹಂಚಿಕೆ ಮಾಡುವುದಲ್ಲದೆ ಆ ಚೆಕ್ಕುಗಳು ಬ್ಯಾಂಕಿನಲ್ಲಿ ಬೌನ್ಸ್ ಆಗದಂತೆ ಜಾಗ್ರತೆ ವಹಿಸುವುದೇ ಮುಂತಾದ ಹತ್ತಾರು ಹಳವಂಡ
ಇಲಾಖೆಗೆ ಇದೆ. ಹಂಪಿ ಉತ್ಸವ, ಕದಂಬೋತ್ಸವ, ಕಿತ್ತೂರು ಉತ್ಸವ ಮುಂತಾದವು ಇಲಾಖೆ ಆಶ್ರಯದಲ್ಲಿ ನಡೆದುಕೊಂಡು ಬಂದಿವೆ. ಇದಲ್ಲದೆ ರಾಜ್ಯದ ೩೧ ಜಿಲ್ಲೆಯಲ್ಲೂ ಜಿಲ್ಲಾ ಉತ್ಸವ ನಡೆಯುವ ಪದ್ಧತಿ ಇದೆ.

ಕಾರ್ಯಕ್ರಮ ಮುಖ್ಯವಾಗಿ ಸಾಂಸ್ಕೃತಿಕವೇ ಆಗಿರುತ್ತದೆ. ಸಂಗೀತ, ನೃತ್ಯ ಮುಂತಾದವಕ್ಕೆ ಆದ್ಯತೆ ಇರುತ್ತದೆ. ಆ ಕಲಾವಿದರನ್ನು ಆಯ್ಕೆ ಮಾಡುವ ಜವಾಬ್ದಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದು. ಭಾಷಾ ವಾರು ರಾಜ್ಯ ರಚನೆಯಾದ ದಿನದಿಂದಲೂ ಅಲಕ್ಷ್ಯಕ್ಕೆ ಒಳಗಾದ ವರು ನಮ್ಮ ಕನ್ನಡ ಕಲಾವಿದರು. ಪರಭಾಷಾ ಕಲಾವಿದರಿಗೆ ಅವರು ಹೇಳಿದಷ್ಟು ಹಣ (ಕಮಿಷನ್
ಮುರಿದುಕೊಂಡು!?) ಕೊಡುವ ಇಲಾಖೆ ಅಧಿಕಾರಿಗಳು ಕನ್ನಡ ಕಲಾವಿದರನ್ನು ಕಾಲ ಕಸದಂತೆ ನೋಡುತ್ತಾರೆ ಎನ್ನುವುದಕ್ಕೆ ಸಾಕಷ್ಟು ಸಾಂದರ್ಭಿಕ ಸಾಕ್ಷ್ಯಗಳಿವೆ.

ವ್ಯಕ್ತಿಗತ ನೆಲೆಯಲ್ಲಿ ಮಾತಾಡುವಾಗ ಅನೇಕ ಕಲಾವಿದರು ತಮ್ಮನ್ನು ಇಲಾಖೆ ಅಧಿಕಾರಿಗಳು ನಡೆಸಿಕೊಳ್ಳುವ ಅಮಾನವೀಯ
ವರ್ತನೆಯನ್ನು ಬಿಡಿಬಿಡಿಯಾಗಿ ವರ್ಣಿಸುತ್ತಾರೆ. ಸಂಘಟನೆ ಕೊರತೆ ಕಾರಣವೋ ಏನೋ, ಬಂದಷ್ಟು ಬರಲಿ ಎಂಬ ಧೋರಣೆ ಯೋ ಕಲಾವಿದರು ಸಿಡಿದೇಳದಂತೆ ಮಾಡಿದೆ. ರಾಜೀವ ತಾರಾನಾಥರಿಗೆ ಮಾಡಿದ ಅವಮಾನ ತಮಗೇ ಮಾಡಿದ ಅವಮಾನ ಎಂದು ಎಷ್ಟು ಜನ ಕಲಾವಿದರು ಭಾವಿಸಿದ್ದಾರೋ ಗೊತ್ತಿಲ್ಲ. ಆದರೆ ಇವತ್ತು ರಾಜೀವರಿಗೆ ಆದುದು ನಾಳೆ ತಮಗೂ ವಕ್ಕರಿಸ ಬಹುದೆಂಬ ಎಚ್ಚರ ಈ ಕಲಾವಿದರಲ್ಲಿ ಜಾಗೃತಗೊಳ್ಳಬೇಕಿದೆ. ಇದಕ್ಕಿಂತ ಹೆಚ್ಚಾಗಿ ಇಲಾಖೆಗೆ ಮೆತ್ತಿರುವ ಕೊಳೆಯನ್ನು ತೊಳೆ ಯುವ ಕೆಲಸವನ್ನು ಸರಕಾರ ಅದರಲ್ಲೂ ಮುಖ್ಯವಾಗಿ ಸಚಿವ ಶಿವರಾಜ ತಂಗಡಗಿಯವರು ಕೈಗೆತ್ತಿಕೊಳ್ಳಬೇಕಿದೆ.

ರಾಜ್ಯೋತ್ಸವದ ಈ ಮಾಸದಲ್ಲಿ ಕನ್ನಡಿಗರ ಮನಸ್ಸಿನಲ್ಲಿ ಮಾಸದ ಹೆಜ್ಜೆಗುರುತನ್ನು ಮೂಡಿಸುವ ಸದವಕಾಶ ಅವರಿಗೆ
ಒಲಿದಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮದ್ದನ್ನು ಅರೆಯುವ ಕೆಲಸವನ್ನು ಅವರು ಮಾಡಿದರೆ ಕನ್ನಡ ಮಣ್ಣಿನ ಸಂಸ್ಕೃತಿ ಯಲ್ಲಿ ಅವರಿಗೆ ಶಾಶ್ವತ ಸ್ಥಾನವೊಂದು ಒಲಿದೀತು.