Friday, 20th September 2024

ನಾವು ಸೇವಿಸುವ ತರಕಾರಿ ಎಷ್ಟು ಸುರಕ್ಷಿತ ?

ಕೃಷಿರಂಗ 

ಬಸವರಾಜ ಶಿವಪ್ಪ ಶಿರಗಾಂವಿ

ಭಾರತದಲ್ಲಿ ದೊರೆಯುವಷ್ಟು ವೈವಿಧ್ಯಮಯ ತರಕಾರಿಗಳು ವಿಶ್ವದ ಯಾವುದೇ ಮೂಲೆಯಲ್ಲಿ ಸಿಗುವುದಿಲ್ಲ. ವಿಶ್ವದಲ್ಲಿಯೇ ಉಪಖಂಡವೆಂದು ಗುರುತಿಸಿಕೊಂಡಿರುವ ಭಾರತದಲ್ಲಿ, ವಿವಿಧ ಹವಾಮಾನಗಳಿಗೆ ತಕ್ಕಂತೆ ವಿವಿಧ ನಮೂನೆಯ ತರಕಾರಿಗಳನ್ನು ಬೆಳೆದು ದಿನನಿತ್ಯದ ಆಹಾರಗಳಲ್ಲಿ ಬಳಸಲಾಗುತ್ತಿದೆ.

ವೈವಿಧ್ಯಮಯ ರುಚಿಗಳ ತರಕಾರಿಗಳಿಂದ ಶರೀರಕ್ಕೆ ಸಮಗ್ರವಾಗಿ ದೊರೆಯುವ ಪೋಷಕಾಂಶಗಳು ಮತ್ತಾವ ಆಹಾರ ಧಾನ್ಯಗಳಿಂದ ವೇಗವಾಗಿ ದೊರೆಯುವುದಿಲ್ಲ. ಹಾಗಾಗಿ ಗತಕಾಲದಿಂದಲೂ ದಿನಬಳಕೆಯ ಆಹಾರ ಸಾಮಗ್ರಿಗಳಲ್ಲಿ ತರಕಾರಿಗಳು ಅಡುಗೆ ಮನೆಯ ಮೊದಲ ಆದ್ಯತೆಯ
ವಸ್ತುಗಳಾಗಿವೆ. ಹಾಗಾದರೆ ದೇಶಾದ್ಯಂತ ಸದ್ಯ ಬಳಸಲಾಗುತ್ತಿರುವ ವಿವಿಧ ತರಕಾರಿಗಳು ಎಷ್ಟು ಸುರಕ್ಷಿತವಾಗಿವೆ? ಎಂಬುದು ಬಹಳ ಮುಖ್ಯ ಪ್ರಶ್ನೆಯಾಗುತ್ತದೆ.

ಮುಗ್ಧ ಜನರು ತರಕಾರಿಗಳನ್ನು ಖರೀದಿಸುವಾಗ ಅಥವಾ ಬಳಸುವಾಗ ಅವನ್ನು ಪರೀಕ್ಷಿಸುವಷ್ಟು ತಾಳ್ಮೆ ಹಾಗೂ ಜಾಣ್ಮೆಯನ್ನು ತೋರುವುದಿಲ್ಲ. ಹೀಗೆ, ಆಹಾರಗಳ ಹಾಗೂ ತರಕಾರಿಗಳ ಬಳಕೆಪೂರ್ವ ಪರೀಕ್ಷೆಯ ಕೊರತೆಯಿಂದಾಗಿ ಇಂದು ಭಾರತದ ಬಹುತೇಕ ಜನರನ್ನು ಹಲವು ರೋಗಗಳು ಅಮರಿಕೊಳ್ಳುತ್ತಿರುವುದು ಸುಳ್ಳೇನಲ್ಲ. ಆದ್ದರಿಂದ ಆರೋಗ್ಯ ಹಾಗೂ ಆಹಾರದ ವಿಷಯದಲ್ಲಿ ಮುನ್ನೆಚ್ಚರಿಕೆ ಎನ್ನುವುದು ಬಹಳ ಪ್ರಾಮುಖ್ಯವನ್ನು ಪಡೆದುಕೊಂಡಿದೆ.

ತರಕಾರಿ ಸೇವನೆ ವಿಷಯದಲ್ಲಿ ಈಗ ಹೇಳುತ್ತಿರುವುದು ಸೋಜಿಗವೆನಿಸಿದರೂ ಕಟುಸತ್ಯವಾಗಿದೆ. ಪಟ್ಟಣಗಳ ವ್ಯಾಪ್ತಿಯಲ್ಲಿ ದಿನನಿತ್ಯ ಮಾರಾಟವಾಗುವ ಬಹುತೇಕ ತರಕಾರಿಗಳಲ್ಲಿ ಶುದ್ಧತೆ ಎನ್ನುವುದು ಕನಸಿನ ಮಾತಾಗಿದೆ. ಕಾರಣ ಸದ್ಯದ ಬರಗಾಲದ ಸಂದರ್ಭಗಳಲ್ಲಿ ತರಕಾರಿ ಸೇರಿದಂತೆ ಕೆಲವು ಆಹಾರಧಾನ್ಯಗಳನ್ನು ಬೆಳೆಯಲು ನೀರಿನ ಕೊರತೆಯು ಸರ್ವೆಸಾಮಾನ್ಯವಾಗಿರುತ್ತದೆ. ಇಂಥ ವೇಳೆ ಶಹರಗಳ ಸುತ್ತಮುತ್ತ ಹರಿಯುವ ಚರಂಡಿ ನೀರನ್ನು ತರಕಾರಿ ಬೆಳೆಗಳಿಗೆ ಉಪಯೋಗಿಸಲಾಗುತ್ತಿದೆ. ಇದು ಬಹಳ ಆಘಾತಕಾರಿಯಾದ ಬೆಳವಣಿಗೆಯಾಗಿದೆ. ವಿಷಕಾರಿ ಅಂಶಗಳಿಂದ ಕೂಡಿದ ಈ ಚರಂಡಿ ನೀರಿನಲ್ಲಿ ಬೆಳೆದ ಹಸಿರು ಸೊಪ್ಪು ಹಾಗೂ ತರಕಾರಿಗಳು ನೋಡಲು ಬಹಳ ಆಕರ್ಷಕವಾಗಿರುವುದಲ್ಲದೆ ಬಳಕೆದಾರರ ಕಣ್ಮನ ಸೆಳೆಯುತ್ತವೆ.

ಆದರೆ ಈ ತರಕಾರಿಗಳಿಗೆ ಮರುಳಾಗಿ ಉಪಯೋಗಿಸುವ ಮುಗ್ಧ ಜನರು ಮೇಲಿಂದ ಮೇಲೆ ಅನಾರೋಗ್ಯಪೀಡಿತರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಕಾರಣ ಈ ನೀರು ಸಂಪೂರ್ಣವಾಗಿ ನಿರುಪಯುಕ್ತ ಹಾಗೂ ವಿಷಯುಕ್ತವಾಗಿರುತ್ತದೆ. ಇಂಥ ನೀರಿನಲ್ಲಿ ಬೆಳೆಯುವ ತರಕಾರಿಗಳಲ್ಲಿನ ಜೀವಸತ್ವಗಳು ನಿರ್ದಿಷ್ಟ ಪ್ರಮಾಣದಲ್ಲಿರದೇ ಮಾನವನ ಶರೀರಕ್ಕೆ ಅತ್ಯಂತ ಅಪಾಯವನ್ನುಂಟುಮಾಡುವ ಹಂತದಲ್ಲಿವೆ ಎಂಬುದು ತಿಳಿದುಬಂದಿದೆ.
ತರಕಾರಿಗಳಲ್ಲಿರುವ ಇಂಥ ಅಪಾಯಕಾರಿ ಅಂಶಗಳು ದಿನನಿತ್ಯ ಸದ್ದಿಲ್ಲದೆ ಅಮಾಯಕ ಜನರ ದೇಹವನ್ನು ಸೇರುತ್ತಿವೆ. ಇದು ಜನಸಮುದಾಯದ ಆರೋಗ್ಯದ ಹಿತದೃಷ್ಟಿಯಿಂದ ಅತ್ಯಂತ ಭಯಾನಕವಾದ ಸಂಗತಿಯಾಗಿದೆ.

ಶರೀರದ ಸಮಗ್ರ ಬೆಳವಣಿಗೆಗಾಗಿ ವಿವಿಧ ಹಂತಗಳಲ್ಲಿ ಸಮಯಾನುಸಾರ ವಿವಿಧ ಜೀವಸತ್ವಗಳು ಬೇಕೆಬೇಕು. ಆದರೆ ಅವೆಲ್ಲವೂ ನಿರ್ದಿಷ್ಟ ಪ್ರಮಾಣದಲ್ಲಿರಬೇಕು. ಆದರೆ ಈ ಚರಂಡಿ ನೀರಿನಲ್ಲಿ ಬೆಳೆದ ತರಕಾರಿಗಳಲ್ಲಿ ಕಬ್ಬಿಣ ಸೇರಿದಂತೆ ವಿವಿಧ ಲೋಹಗಳ ಅಂಶವು ಮಿತಿಮೀರಿ ಶೇಖರಣೆ ಯಾಗಿರುತ್ತದೆ. ಬೆಂಗಳೂರಿನಂಥ ಮಹಾನಗರಗಳ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಮಾರಾಟವಾಗುತ್ತಿರುವ ಹಲವು ತರಕಾರಿ ಹಾಗೂ ಸೊಪ್ಪುಗಳಲ್ಲಿ ಮಾನವನ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ, ಕ್ಯಾಡ್ಮಿಯಂ, ಸೀಸ ಮತ್ತು ನಿಕ್ಕಲ್ ಅಂಶಗಳು ಪತ್ತೆಯಾಗಿವೆ.

ಆಹಾರ ಮತ್ತು ಕೃಷಿ ಸಂಸ್ಥೆ ನಿಗದಿಪಡಿಸಿದ ಪ್ರಮಾಣವನ್ನು ಪರಿಗಣಿಸುವುದಾದರೆ, ಒಂದು ಕೆ.ಜಿ. ಕಾಯಿಪಲ್ಲೆಯಲ್ಲಿ ಅಂದಾಜು ೪೨೫ ಎಂ.ಜಿ
ಕಬ್ಬಿಣಾಂಶ ಇರಬೇಕು. ಆದರೆ ಬೀನ್ಸ್‌ನಲ್ಲಿ ೮೧೦, ಕೊತ್ತಂಬರಿಯಲ್ಲಿ ೯೪೫, ಈರುಳ್ಳಿಯಲ್ಲಿ ೫೯೨ ಹಾಗೂ ಪಾಲಕ್ ಸೊಪ್ಪಿನಲ್ಲಿ ೫೫೪ ಎಂ.ಜಿ ಕಬ್ಬಿಣಾಂಶ ಪತ್ತೆಯಾಗಿದೆ. ಅದರಂತೆ ಪ್ರತಿ ಕೆ.ಜಿ. ತರಕಾರಿಯಲ್ಲಿ ಕ್ಯಾಡ್ಮಿಯಂ ಅಂಶವು ಅಂದಾಜು ೦.೨ ಎಂ.ಜಿ ಇರಬೇಕು. ಆದರೆ ಕೊತ್ತಂಬರಿಯಲ್ಲಿ ೫೩, ಬದನೆಕಾಯಿಯಲ್ಲಿ ೫೨, ಪಾಲಕ್‌ನಲ್ಲಿ ೫೩, ಕ್ಯಾರೆಟ್‌ನಲ್ಲಿ ೫೪ ಎಂ.ಜಿ. ಇರುವುದು ಕಂಡುಬಂದಿದೆ. ಒಂದು ಅಂದಾಜಿನ ಪ್ರಕಾರ ಕಬ್ಬಿಣ ಮತ್ತು ಕ್ಯಾಡ್ಮಿಯಂ ಅಂಶವು ಶರೀರದಲ್ಲಿ ಹೆಚ್ಚಾದ ವ್ಯಕ್ತಿಯು ಅನಾರೋಗ್ಯಪೀಡಿತರಾದಾಗ ಯಾವುದೇ ವೈದ್ಯಕೀಯ ಚಿಕಿತ್ಸೆಗಳು ಕೂಡಲೆ ಕಾರ್ಯಸಾಧು ವಾಗುವುದಿಲ್ಲ.

ತರಕಾರಿಗಳಲ್ಲಿ ಕಂಡುಬರುವ ಮಿತಿಮೀರಿದ ಕ್ಯಾಡ್ಮಿಯಂ ಅಂಶದಿಂದ ಮಾನವನ ಹೊಟ್ಟೆ ಮತ್ತು ಕರುಳಿನಲ್ಲಿ ವಿಷಕಾರಕ ಅಂಶವು ಶೇಖರಣೆ ಯಾಗುತ್ತದೆ. ಇದರಿಂದ ನೈಸರ್ಗಿಕವಾಗಿ ಶರೀರದಲ್ಲಿ ಉತ್ಪತ್ತಿಯಾಗಬೇಕಾದ ರೋಗನಿರೋಧಕ ಶಕ್ತಿಯು ಕುಂಠಿತವಾಗುತ್ತದೆ. ವಿಷಕಾರಕ ಅಂಶವೆಂದೇ ಗುರುತಿಸಲಾದ ಸೀಸ ಪ್ರತಿ ತರಕಾರಿಯಲ್ಲಿ ೦.೩ ಎಂ.ಜಿ ಮೀರಬಾರದೆಂದು ಹಲವು ಸಂಶೋಧನೆಗಳು ತಿಳಿಸಿವೆ. ಆದರೆ ಹುರಳಿಕಾಯಿ ಸೇರಿದಂತೆ ಹಲವು ತರಕಾರಿಗಳಲ್ಲಿ ೧೨.೨೦ ಎಂ.ಜಿ. ಕಂಡುಬಂದಿದ್ದು, ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಅದರಂತೆ ನಿಕ್ಕಲ್ ಎಂಬುದು ಶರೀರಕ್ಕೆ ಮತ್ತೊಂದು ಮಾರಕವಾಗಿರುವ ಲೋಹದ ಅಂಶವಾಗಿದೆ.

ನಿಗದಿಪಡಿಸಿದ ಪ್ರಮಾಣಕ್ಕಿಂತ ಪ್ರತಿ ಕೆ.ಜಿ. ಹಸಿರು ಮೆಣಸಿನಕಾಯಿ, ಕ್ಯಾರೆಟ್, ಆಲೂಗಡ್ಡೆ, ಹುರಳಿಕಾಯಿ ಮತ್ತು ಟೊಮೇಟೊಗಳಲ್ಲಿ ಹೆಚ್ಚು  ಇರುವುದು ತಿಳಿದುಬಂದಿದೆ. ಆರೋಗ್ಯದ ಉತ್ತಮ ಸ್ನೇಹಿತರೆಂದು ಗುರುತಿಸಲ್ಪಟ್ಟಿರುವ ಹಸಿರು ತೊಪ್ಪಲಿನ ರಾಜಗಿರಿ, ಮೆಂತ್ಯೆ, ಸಬ್ಬಸಿಗೆ, ಚಕೋತಾ ಸೇರಿದಂತೆ ಹಲವು ಸೊಪ್ಪುಗಳು ಈ ಚರಂಡಿ ನೀರಿನ ಬಳಕೆಯಿಂದಾಗಿ ಮಾನವನ ಶರೀರಕ್ಕೆ ಅತ್ಯಂತ ವಿಷಕಾರಕವಾಗಿ ಮಾರ್ಪಟ್ಟಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ದೊರೆಯುವ ಬಹುತೇಕ ತರಕಾರಿಗಳು ಚರಂಡಿ ನೀರಿನ ಸಾಗುವಳಿಯಲ್ಲಿ ಬೆಳೆದಂಥವುಗಳಾಗಿದ್ದು ಇವುಗಳಿಗೆ ಸಂಬಂಧಿಸಿ ಪ್ರಾಧಿಕಾರವು ಕಡಿವಾಣ ಹಾಕಬೇಕು. ಸರಕಾರವು ಈ ಸಮಸ್ಯೆಯ ಗಂಭೀರತೆಯನ್ನು ಅರಿಯದಿದ್ದಲ್ಲಿ ಸಮುದಾಯದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಅಸಂಬದ್ಧವಾಗಿ ಬೆಳೆಯುತ್ತಿರುವ ತರಕಾರಿಗಳನ್ನು ನಗರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಸಿಗುವಂತೆ ರಾಜಾರೋಷವಾಗಿ ಬೆಳೆಯುತ್ತಿದ್ದಾರೆ.

ಆದ್ದರಿಂದ ಸರಕಾರವು ಇದಕ್ಕಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಿ ಇಂಥ ಸ್ಥಳಗಳನ್ನು ಗುರುತಿಸಿ ನಾಶಪಡಿಸಬೇಕು. ತಪ್ಪಿದಲ್ಲಿ ವಿಶ್ವದಲ್ಲಿಯೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಅಪಾಯ ತಲೆದೋರುವುದು ಕಟ್ಟಿಟ್ಟಬುತ್ತಿ ಎಂದು ಹಲವು
ಪ್ರಖ್ಯಾತ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಮೆರಿಕ, ರಷ್ಯಾ, ಸ್ವಿಜರ್ಲೆಂಡ್, ಜಪಾನ್ ಸೇರಿದಂತೆ ವಿಶ್ವದ ಮುಂದುವರಿದ ದೇಶಗಳಲ್ಲಿ ಪ್ರತಿಯೊಂದು
ಆಹಾರಗಳ ಬಳಕೆಪೂರ್ವ ಪರೀಕ್ಷೆಯು ಕಡ್ಡಾಯವಾಗಿದ್ದು, ಆಹಾರಗಳ ಸುರಕ್ಷತೆಯ ವಿಷಯದಲ್ಲಿ ಕಠಿಣ ಕಾನೂನುಗಳು ಜಾರಿಯಲ್ಲಿವೆ. ಹೀಗಾಗಿ ಆ ದೇಶಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಮತ್ತು ಗುಣಮಟ್ಟದ ಆಹಾರದ ಪೂರೈಕೆಯ ವಿಷಯದಲ್ಲಿ ಭಾರತದಲ್ಲಿರುವಂತೆ ಗಮನಾರ್ಹ ಸಮಸ್ಯೆಗಳು ತಲೆದೋರಿಲ್ಲ ಎಂಬುದನ್ನು ಅರಿಯಬಹುದು.

ಆದರೆ ಭಾರತದಲ್ಲಿ ಆಹಾರಧಾನ್ಯಗಳ ಪರೀಕ್ಷೆಯು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಿದೆ. ಭಾರತದಲ್ಲಿರುವ ಕಾನೂನುಗಳ ಸಡಿಲಿಕೆಯಿಂದಾಗಿ ಯಾರು ಬೇಕಾದರೂ ಯಾವುದೇ ತರಹದ ಆಹಾರಗಳ ತಯಾರಿಕೆ ಹಾಗೂ ಪೂರೈಕೆಯನ್ನು ಯಾವುದೇ ಭಯವಿಲ್ಲದೆ ಮಾಡಬಹುದಾಗಿದೆ. ಹಾಗಾದರೆ ಭಾರತದಲ್ಲಿರುವ ಆಹಾರಗಳ ಗುಣಮಟ್ಟ ಪರೀಕ್ಷಾ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಾಧಿಕಾರಗಳು ಕಾಟಾಚಾರಕ್ಕೆ ಇವೆಯೇ? ಆಹಾರಗಳ ಗುಣಮಟ್ಟದ
ಪರೀಕ್ಷೆಯ ಕೊರತೆಯಿಂದ ಭಾರತ ಸೇರಿದಂತೆ ವಿಶ್ವದ ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಳಕೆಗೆ ಯೋಗ್ಯವಲ್ಲದ ಆಹಾರಧಾನ್ಯಗಳ ಉತ್ಪಾದನೆ ಹಾಗೂ ಮಾರಾಟವು ಎಗ್ಗಿಲ್ಲದೆ ಸಾಗುತ್ತಿದೆ.

ಇದರ ಪರಿಣಾಮದಿಂದಲೇ ಹೊಸಹೊಸ ರೋಗಗಳು ಈ ಅಭಿವೃದ್ಧಿಶೀಲ ರಾಷ್ಟ್ರಗಳಿಂದಲೇ ಮೊದಲು ಪ್ರಾರಂಭವಾಗುತ್ತಿವೆಯೇನೋ? ಭಾರತದಲ್ಲಿ
ಕೇವಲ ‘ಪ್ಯಾಕ್ ಮಾಡಲಾದ’ ಆಹಾರಗಳ ಪರೀಕ್ಷೆ ನಡೆಸಲಾಗುತ್ತದೆ ಎನ್ನಲಾಗಿದ್ದು, ಇದು ಸಹ ಯಾವ ಮಾನದಂಡದಲ್ಲಿ ಪರೀಕ್ಷಿಸಲ್ಪಡುತ್ತದೆ ಎಂಬುದು ಸಾರ್ವಜನಿಕವಾಗಿ ಅಷ್ಟೊಂದು ತಿಳಿದಿಲ್ಲ. ಕೇವಲ ಆಹಾರದ ಪ್ಯಾಕೆಟ್ ಮೇಲಿನ ಅಂಕಿ-ಸಂಖ್ಯೆಗಳನ್ನು ಗಮನಿಸಿ ಬಳಕೆದಾರರು ಖರೀದಿಸು
ತ್ತಿರುವುದು ಎಷ್ಟರಮಟ್ಟಿಗೆ ಸರಿ? ಒಳಗಿನ ಮರ್ಮವನ್ನು ದೇವನೇ ಬಲ್ಲ. ಒಟ್ಟಾರೆಯಾಗಿ ಚರಂಡಿ ನೀರನ್ನು ನೇರವಾಗಿ ಕೃಷಿಗೆ ಬಳಸುವುದನ್ನು ತಡೆಗಟ್ಟಲೇಬೇಕು; ಅಂದಾಗ ಮಾತ್ರ ಮನುಕುಲವು ಆರೋಗ್ಯದಾಯಕ ಬದುಕನ್ನು ಅನುಭವಿಸಬಹುದು.

(ಲೇಖರು ಕೃಷಿತಜ್ಞರು ಹಾಗೂ ಸಹಾಯಕ
ಮಹಾಪ್ರಬಂಧಕರು)