ಪ್ರಚಲಿತ
ವಿಶ್ವನಾಥ್ ಹೆಗ್ಡೆ
ಈ ಉದ್ಯಮ ಇತ್ತೀಚಿನ ವರುಷಗಳಲ್ಲಿ ಕಂಡ ಬೆಳವಣಿಗೆ ಹಿತಕಾರಿಯಾದರೂ, ಅಷ್ಟೇ ವೇಗವಾಗಿ ಸವಾಲುಗಳು ಇದಕ್ಕೆ ಸುತ್ತಿ ಕೊಳ್ಳುತ್ತಿದೆ.
ಜಗತ್ತಿನ ಶೇ.13ಕ್ಕೂ ಅಧಿಕ ಜನರು ತಮ್ಮ ಜೀವನೋಪಾಯಕ್ಕೆ ಈ ಉದ್ಯಮದ ನೇರ ಪಾಲುದಾರರಾದರೆ, ಸುಮಾರು 40 ಕೋಟಿ ಗೂ ಮಿಕ್ಕಿ ಈ ಉದ್ಯಮದಲ್ಲಿ ಜನರು ದುಡಿಯುತ್ತಿದ್ದಾರೆ. ಆದರೂ ಹೊಸ ವಿಚಾರಗಳ ನಡುವೆ ಸಂಕಷ್ಟದ ಕಥೆಗಳು ಮಾತ್ರ ಆಗಾಗ ಅಡಗಿಕೊಂಡಿರುವ ಭೂತದ ಹಾಗೆ ಪ್ರತ್ಯಕ್ಷ ಆಗುತ್ತಲೇ ಇದೆ. ಇದೊಂದು ಉದ್ಯಮ ರಾಷ್ಟ್ರದ ಗ್ರಾಮೀಣ ಭಾರತದ ಆರೋಗ್ಯಕರ ವಾತಾವರಣ ಮತ್ತು ಅವರ ಬಲವಾದ ಆರ್ಥಿಕತೆಗೆ ಸಾಕ್ಷಿಯಾಗಲು ಯಾವಾಗಲೂ ಪ್ರೇರಣೆ ನೀಡುತ್ತದೆ.
ಇದೊಂದು ಭಾರತದ ಆರ್ಥಿಕ ವ್ಯವಸ್ಥೆಗೆ ಒಂದು ಸರಪಳಿಯ ಕೊಂಡಿಯ ಹಾಗೆ ಕಾರ್ಯ ನಿರ್ವಹಿಸುತ್ತದೆ. ಇದು ಬಲವಾ ದಷ್ಟೂ ಕೃಷಿಯ ಬಲವರ್ಧನೆಗೂ, ಗ್ರಾಮೀಣ ಬಲವರ್ಧನೆಗೂ ಸಹಕಾರಿ ಕೂಡ ಹೌದು. ನಾವಿಲ್ಲಿ ಮಾತನಾಡುತ್ತಿರುವುದು ಬಡವರ ಮತ್ತು ಸಿರಿವಂತರ ಹೈನುಗಾರಿಕೆ ಮತ್ತು ಹೈನೋದ್ಯಮದ ಬಗ್ಗೆ. ಇದೊಂದು ಎಲ್ಲರ ಸಮ್ಮಿಲಿನದ ಉದ್ಯಮ. ಇದರಲ್ಲಿ ಭೂ ರಹಿತರಿಂದ ಹಿಡಿದು, ಕೋಟಿ ಒಡೆಯರು ಇಲ್ಲಿದ್ದಾರೆ.
ಆದರೆ ಕಹಿ ಮತ್ತು ಸಿಹಿಯಲ್ಲಿ ಯಾರಿಗೆ ಎಷ್ಟು ಪಾಲು ಎನ್ನುವುದು ಉತ್ತರವಿದ್ದರೂ ಮಿಲಿಯನ್ ಡಾಲರ್ ಪ್ರಶ್ನೆ ಎನ್ನುವಂತಿದೆ.
ಭಾರತದ ಸಾಹಸಗಾಥೆಗಳಲ್ಲಿ ಹೈನೋದ್ಯಮ ಕೂಡ ಒಂದು. ಇಲ್ಲಿಯೂ ದಿವಂಗತ ಸರ್ದಾರ್ ವಲ್ಲಭಾಯಿ ಪಟೇಲ್ ಹೆಸರು ನಮ್ಮೆದುರಿಗೆ ಬಂದು ನಿಲ್ಲುತ್ತದೆ. ಒಂದು ವರದಿಯ ಪ್ರಕಾರ ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವನ್ನು ದಿವಂಗತ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಆಶೀರ್ವಾದದೊಂದಿಗೆ 1946ರಲ್ಲಿ ಆಯೋಜಿಸಲಾಯಿತು ಎಂದು ಹೇಳ ಲಾಗುತ್ತಿದೆ.
ಎರಡು ಹಳ್ಳಿಗಳ ಪಶುಸಂಗೋಪನೆಯ ರೈತರಿಂದ ಪ್ರಾರಂಭ ಆದ ಇದು ಇಂದು ಭಾರತದಲ್ಲಿ ಹೊಸ ಯಶೋಗಾಥೆಗೆ ಕಾರಣ ವಾಯಿತು. 250 ಲೀಟರ್ನಿಂದ ಪ್ರಾರಂಭವಾದದ್ದು , ಇಂದು ಮನೆ ಮಾತಾದದ್ದು ಮಾತ್ರ ಒಂದು ಸೂಪರ್ ಹಿಟ್ ಸಿನಿಮಾ ದಂತೆ ನಮ್ಮೆದುರಿಗೆ ನಿಲ್ಲುತ್ತದೆ. ಜುಲೈ 1948ರಲ್ಲಿ, ಹಾಲಿನ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡಲು ಅಮುಲ್ ಹಾಲಿನ ಪಾಶ್ಚರೀಕರಣ ಘಟಕ ಪ್ರಾರಂಭವಾಯಿತು. ಇದನ್ನು ಬಾಂಬೆ ಹಾಲಿನ ಯೋಜನೆ ಎಂದೂ ಕರೆಯುತ್ತಾರೆ. ಭಾರತದ ಶ್ವೇತ ಕ್ರಾಂತಿಯ ದೂರದೃಷ್ಟಿಯ ವಾಸ್ತುಶಿಲ್ಪಿ ಮತ್ತು ಸಾಮಾಜಿಕ ಉದ್ಯಮಿ ವರ್ಗೀಸ್ ಕುರಿಯನ್, ಶ್ವೇತ ಕ್ರಾಂತಿಯ ಪಿತಾಮಹ ಎಂದೇ ಕರೆಯಲಾಗುತ್ತಿದೆ.
ಅವರಿಗೆ ಭಾರತದ ಮಿಲ್ಕ್ಮ್ಯಾನ್ ಎಂಬ ಬಿರುದು ನೀಡಲಾಗಿದೆ. ಅಮೂಲ್ ನ ಕಪ್ಪು-ಬಿಳುಪಿನಿಂದ ಕಲರ್ ಮತ್ತು ಕೋವಿಡ್ ವರುಷದ ತನಕದ ಜಾಹೀರಾತುಗಳನ್ನು ನೋಡಿದರೆ ಸಾಕು, ಅದು ಬೆಳೆದ ಬಗೆಯನ್ನು ಮತ್ತು ಅದರ ಬೇರು ಮಟ್ಟದಿಂದ ಬೆಳೆದ ಅನುಭವ ಮಾತಾಡುತ್ತದೆ. ಹೀಗೆ ಹಲವಾರು ಏಳು ಬೀಳು ಕಂಡರೂ, ಅಮೂಲ್ ಎಂಬುದು ಬೇರೆ ಕಂಪನಿಗಳಿಗೆ ಮಾರ್ಗದರ್ಶಕ ನಾಗಿಯೂ , ಕೆಎಂಎಫ್ ನಂತಹ ಬಲಾಢ್ಯ ಸಂಸ್ಥೆಗಳ ಸ್ಥಾಪನೆಗೂ ಈ ಕಥೆ ಮಾರ್ಗದರ್ಶಕನಾಗಿದ್ದು ಕ್ಷಿಳ್ಳಲ್ಲ.
19464-65 ರ ಅವಧಿ ಪಶುಸಂಗೋಪನೆ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ತರಲು ಕೇಂದ್ರ ಸರಕಾರ ಯೋಜಿಸಿದ್ದು ಮುಂದಿನ ಶ್ವೇತ ಕ್ರಾಂತಿಗೆ ನಾಂದಿಗೆ ಕಾರಣವಾಯಿತು. ಆದ ನಂತರ, 1970 ರಲ್ಲಿ ಎನ್ಡಿಡಿಬಿ ಸ್ಥಾಪನೆ ಆಗಿದ್ದು (ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು) ದೇಶದಲ್ಲಿ ಹಾಲಿನ ಉತ್ಪಾದನೆಯ ಕ್ರಾಂತಿಯ ವೇಗವನ್ನು ಹೆಚ್ಚಿಸಲು ಹೊಸ ಕಾರ್ಯಕ್ರಮ ವನ್ನು ದೇಶಕ್ಕೆ ಪರಿಚಯಿಸಿತು.
ಬಿಲಿಯನ್ ಲೀಟರ್ ಐಡಿಯಾ ಎಂಬ ಯೋಜನೆ ಭಾರತ -ಯುಎಸ್ (ಅಮೆರಿಕ) ರಾಷ್ಟ್ರವನ್ನೇ ಉತ್ಪಾದನೆಯಲ್ಲಿ ಮೀರಿಸುವಂತೆ ಮಾಡಿ, ಮಹಿಳಾ ರೈತರ ಜೀವನವನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿತು ಮತ್ತು ಡೈರಿ ಸಹಕಾರಿ ಮಾದರಿಯನ್ನು
ಪುನರಾವರ್ತಿಸುವ ಮೂಲಕ ದೇಶಾದ್ಯಂತ 16 ದಶಲಕ್ಷಕ್ಕೂ ಹೆಚ್ಚು ರೈತರಿಗೆ ಜೀವನೋಪಾಯವನ್ನು ಸೃಷ್ಟಿಸಿತು. ಅಂದ ಹಾಗೆ ಇಂದು ಜಗತ್ತಿನ ಒಟ್ಟೂ ಉತ್ಪಾದನೆಯ 21 ಪ್ರತಿಶತ ಭಾರತದ ಕೊಡುಗೆ ಎನ್ನುವುದು ನಮ್ಮ ಹೆಮ್ಮೆ ಅಂದರೂ ಇನ್ನೂ ರೈತರ
ಮೊಗದಲ್ಲಿ ಮಂದಹಾಸ ಬೀರುವಷ್ಟು ಬದಲಾವಣೆ ಇನ್ನೂ ಕಾಣಬೇಕಾಷ್ಟೆ.
ಅದಕ್ಕೆ ನಮ್ಮ ಹೈನುಗಾರಿಕೆ ಉದ್ಯಮ ಇರುವ ರೀತಿ, ಜಗತ್ತಿನ ದರ ಏರಿಳಿತಗಳು ಮತ್ತು ರೈತರ ಹೈನುಗಾರಿಕೆ ಕ್ರಮ ಕೂಡ ಕಾರಣ ವಾಗಿದೆ. ಇಂದು ಭಾರತದಲ್ಲಿಯೇ ಸಾವಿರಾರು ಕಂಪನಿಗಳು ಹೈನೋದ್ಯಮದ ಜತೆ ನೇರವಾಗಿ ಅಥವಾ ಒಂದಿಂದು ವಿಭಾಗದಲ್ಲಿ ತಮ್ಮಗಳ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ರೈತರ ಸಾವಿರ ರುಪಾಯಿ ಬಂಡವಾಳದಿಂದ ಹಿಡಿದು ಸಾವಿರಾರು ಕೋಟಿ ರುಪಾಯಿ ಗಳ ಕಾರ್ಪೊರೇಟ್ ಕಂಪನಿಗಳ ವ್ಯವಹಾರವಿದೆ. ಆದರೆ ಎಲ್ಲವೂ ನಿರ್ಧಾರವಾಗುವುದು ಆ ಒಂದು ಹಸು ಮತ್ತು ಅದರನ್ನು ಸಾಕುವ ರೈತನ ಮೇಲೆ ಮಾತ್ರ.
ಇತ್ತೀಚಿನ ದಿನಗಳು ಭಾರತದಲ್ಲಿ ಪಶು ಸಂಗೋಪನೆ ಮತ್ತು ಹೈನೋದ್ಯಮದಲ್ಲಿ ತಾಂತ್ರಿಕತೆಯ ಇನ್ನೊಂದು ಮಜಲಿಗೆ ಕಾಲಿಡು ತ್ತಿದ್ದೇವೆ. ಮೊದಲು ಹಸುವನ್ನೇ ವಸತಿ ಪ್ರದೇಶಕ್ಕೆ ತಂದು ಹಾಲು ಕರೆದು ಮನೆಗಳಿಗೆ ನೀಡುವ ವಾಡಿಕೆಯಿಂದ ಹಾಲು ತಂದು ಕೊಡುವ ಗೌಳಿಯವರೆಗೂ, ನಂತರ ಬದಲಾಗಿ ಸಣ್ಣ ಸಣ್ಣ ಬಾಟಲ್ಗಳಲ್ಲಿ ಮಾರಾಟಕ್ಕೆ ಬರುತ್ತಿದ್ದ ಹಾಲು ಈಗೀಗ 6 ತಿಂಗಳು ಗಳವರೆಗೆ ಕೆಡದೇ ಇರಬಲ್ಲ ಮತ್ತು ನೂರಾರು ವಿಧದ ಉತ್ಪನ್ನಗಳನ್ನು ನಮಗೆ ಪರಿಚಯಿಸಿದೆ.
ಕಾಲ ಬದಲಾದಂತೆ ತಂತ್ರಾಂಶಗಳು ಬದಲಾಗಿದೆ. ಈಗ ಮನುಷ್ಯರು ಮಾತ್ರ ಸ್ಮಾರ್ಟ್ ಗಡಿಯಾರವನ್ನು ಕಟ್ಟುಕೊಳ್ಳುತ್ತಿಲ್ಲ. ಇಲ್ಲಿ ಹಸುವು ಕೂಡ ಫಿಟ್ನೆಸ್ ಸಾಧನವನ್ನು ಕಟ್ಟಿಕೊಳ್ಳುತ್ತದೆ. ಇಲ್ಲಿ ಫಿಟ್ನೆಸ್ ಸಾಧನ ಎಂಬುದು ರೈತರಿಗೆ ಜಾನುವಾರುಗಳ ಚಟುವಟಿಕೆಯ ಮಟ್ಟಗಳು, ಆರೋಗ್ಯ ಮತ್ತು ಸಂತಾನೋತ್ಪತ್ತಿ ಚಟುವಟಿಕೆಯಂತಹ ಇತರ ಪ್ರಮುಖ ನಡವಳಿಕೆಗಳ ಬಗೆಗಿನ ವಿವರ ನೀಡುತ್ತದೆ ಮತ್ತು ಜಾನುವಾರುಗಳ ಉತ್ಪಾದನೆ ಮತ್ತು ಒಟ್ಟಾರೆ ಸ್ವಾಸ್ಥ್ಯದ ಬಗೆಗಿನ ಮಾಹಿತಿ ಅವರಿಗೆ ಹೆಚ್ಚಿಸುತ್ತದೆ. ಇನ್ನೂ ಹಾಲಿನ ಸಂಗ್ರಹಣಾ ಮಾದರಿಗಳು ಪ್ರತಿ ವರುಷವೂ ಬದಲಾಗುತ್ತಿದೆ, ಹೊಸ ವಿನ್ಯಾಸದ ಉಪಕರಣಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.
ಇದು ಕಂಪನಿಗಳ ಸಂಗ್ರಹಣೆ ಮತ್ತು ಉತ್ಪಾದನೆಯ ಖರ್ಚು ನಿಯಮಿತವಾಗಿ ಕಡಿಮೆ ಮಾಡುತ್ತಿದೆ. ಇಲ್ಲಿ ಒಂದು ಮಾತಿದೆ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಈಗ ಹಾಲಿನ ಉದ್ಯಮ ಎಂದರೆ ಹಸುವಿನಿಂದ ಪ್ರಾರಂಬಿಸಿ ಐಓಟಿ ಕ್ಲೌಡ್ (ಸಾಫ್ಟ್ವೇರ್ ಮತ್ತು
ಸೇವೆಗಳನ್ನು ನೆಟ್ವರ್ಕ್ ಮೂಲಕ, ಮುಖ್ಯವಾಗಿ ಇಂಟರ್ನೆಟ್ ಮೂಲಕ ತಲುಪಿಸುವ ರೂಪಕ) ವರೆಗೂ ಎಂಬಂತಾಗಿದೆ. ಇಂದು ಭಾರತ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ಏನೋ ಹೌದು. ಆದರೆ ಯುಎಸ್ಗೆ ಮತ್ತು ಇತರ ಕೆಲ ರಾಷ್ಟ್ರಗಳಿಗೆ ಹೋಲಿಸಿದರೆ ಪ್ರತಿ ಜಾನುವಾರುವಿನ ಹಾಲಿನ ಇಳುವರಿ ಕಡಿಮೆಯೇ.
ಹಾಗಾಗಿ ತಂತ್ರಜ್ಞಾನಗಳು ರೈತರ ಆದಾಯ ಮತ್ತು ಉದ್ಯಮದ ಉತ್ಪಾದಕತೆಯ ಮತ್ತು ಕಾರ್ಯಾಚರಣೆಯ ದಕ್ಷತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಹಾಗೂ ಹಸುವಿನ ಇಳುವರಿ ಹೆಚ್ಚಿಸುವ ಕಡೆ ಗಮನ ಹರಿಸುತ್ತಿವೆ. ನಾನೇ ನೋಡಿದ ಹಾಗೆ ಕರೋನಾ ಎಂಬ ಸಾಂಕ್ರಾಮಿಕ ಪಿಡುಗಿನ ಮಧ್ಯೆ ಇಂದು ವಿಶ್ವ ಹಾಲಿನ ದಿನ ಆಚರಿಸುತ್ತಿದ್ದೇವೆ. ಸದ್ಯಕ್ಕೆ ಇದು ನೀಡರುವ ಹೊಡೆತ ಚಿಕ್ಕದೇನಲ್ಲ. ಈ ಪಿಡುಗು ಹಲವಾರು ಕಂಪನಿಗಳ ವ್ಯವಹಾರವನ್ನೇ ನಿಲ್ಲಿಸಿದರೆ, ಸಾವಿರಾರು ರೈತರ ಪಶುಸಂಗೋ ಪನೆಗೆ ಕುತ್ತು ತಂದಿದೆ. ಇತ್ತೀಚಿಗೆ ಡೈರಿಯ ಉದ್ಯೋಗಿಯೊಬ್ಬರು ಒಂದು ಘಟನೆಯನ್ನು ವಿವರಿಸುತ್ತಾ ಹೇಗೆ ಈ ಕರೋನಾ ಎಂಬ ಪಿಡುಗು ಪಶು ಸಂಗೋಪನೆಯ ರೈತರ ಜೀವನವನ್ನೇ ಬದಲಿಸಿತು ಎಂಬುದನ್ನು ವಿವರಿಸುತ್ತಿದ್ದರು.
ಅವರು ಹೇಳಿದ ವಿವರದಲ್ಲಿ ಹೇಗೆ ಆ ಒಂದು ಕುಟುಂಬ ತನ್ನ ಆಸ್ತಿತ್ವವನ್ನೇ ಕಳೆದುಕೊಂಡಿದ್ದಿದಲ್ಲದೇ ಆ ಸಂಸ್ಥೆ ಒಂದು ಉತ್ತಮ ರೈತನನ್ನು ಕಳೆದುಕೊಂಡಿತು ಎನ್ನುವ ಅವರ ಭಾವೋದ್ವೇಗದ ಮಾತು. ಯಾರ ಮನಸ್ಸನ್ನು ಕದಡುವಂತಿತ್ತು. ತನ್ನ ಮನೆಯ ಯಜಮಾನನನ್ನು ಕಳೆದುಕೊಂಡು ತಮ್ಮಲ್ಲಿದ್ದ ಹಸುಗಳನ್ನು ಮಾರಿಕೊಂಡು ತನ್ನ ಮಗುವನ್ನು ಅವಚಿಕೊಂಡು ಪಶುಸಂಗೋ ಪಣೆಯಲ್ಲಿನ ಆ ಪ್ರಗತಿಪರ ಮಹಿಳೆ ತನ್ನ ತವರು ಮನೆಗೆ ಹೋದ ಘಟನೆಯನ್ನು ಅವರು ವಿವರಿಸಿದಾಗ ಗೊತ್ತಿಲ್ಲದೆ ಕಣ್ಣಂಚಲ್ಲಿ ನೀರು ಜಿನುಗಿದಂತು ಸತ್ಯ. ಇಲ್ಲಿ ಆ ಒಂದು ಉದ್ಯೋಗ ಹೋದುದರ ಜತೆ ವಲಸೆಯ ಪರ್ವ ಪ್ರಾರಂಭವಾಗಿದ್ದು ಕಾಣಬಹುದು.
ಹಾಗೆಯೇ ಹೊಸ ಉತ್ಸಾಹದೊಂದಿಗೆ ಕಟ್ಟಲಾದ ಸಂಸ್ಥೆಗಳು ಈ ಪಿಡುಗಿಗೆ ಬಲಿಯಾಗಿ ಹೋಗುತ್ತಿರುವುದು ದುರದೃಷ್ಟಕರ
ಎನ್ನುವುದು ಈ ಬ್ಯುಸಿನೆಸ್ನ ಕರಾಳತೆ ಕೂಡ. ಹಾಗೆಯೇ ಇನ್ನೊಂದು ಅಸಲಿಯತ್ತು ಅಂದರೆ ರೈತನ ನಿಜವಾದ ಲಾಭ ಇಲ್ಲಿ ಎಂದರೆ, ಆತನ ಹೊಲ ಅಥವಾ ತೋಟಕ್ಕೆ ಬೇಕಾಗುವ ಗೊಬ್ಬರಕ್ಕೆ ಸಿಗುವ ಸಗಣಿ. ವರುಷದ 8 ತಿಂಗಳು ಕಡಿಮೆಯಿಂದ ಸಾಮಾನ್ಯ ದರ ಸಿಕ್ಕರೆ ಮತ್ತೆ ಉಳಿದ ಒಳ್ಳೆಯ ದರ ಕಡಿಮೆ ಸಿಗಬಹುದು.
ಆದರೆ ಆ ಸಮಯದಲ್ಲಿ ಸಿಗುವ ಹಾಲಿನ ಪ್ರಮಾಣ ಹಸುವಿನ ಗರ್ಭಧರಿಸುವಿಕೆ ಮತ್ತು ಕರು ಹಾಕುವಿಕೆಯ ಸಮಯ ಮತ್ತು ವಾತವರಣದ ಬೆಂಬಲದ ಮೇಲೆ ನಿರ್ಧಾರಿತ. ಅಲ್ಲಿಗೆ ಅಸಲು ಆತನಿಗೆ ಹಸುವಿನ 305 ದಿನಗಳ ಉತ್ಪಾದಕತೆಯಲ್ಲಿ ಎಚ್ಚರ ವಹಿಸಿದ್ದಾರೆ ಸಿಗುವ ಆದಾಯದಲ್ಲಿ ಬೀಳುವುದು ಕನ್ನವೇ ಅಲ್ಲವೇ? ಹೌದು ಸರಿಯಾಗಿ ಆಲೋಚಿಸಿದರೆ, ಪ್ರಮಾಣದ ಪ್ರಕಾರ ಹಿಂಡಿ ಮತ್ತು ಹುಲ್ಲು ಗಳನ್ನು ನೀಡಿದರೆ ಹಾಲಿಗೆ ಸಿಗುವ ಹಣ ಅಲ್ಲಿಗೆ 80 ಪ್ರತಿಶತ ಸೀಮಿತ.
ಇನ್ನೂ ಆಗಾಗ ಭಾದಿಸುವ ರೋಗಗಳು, ಗರ್ಭಧಾರಣೆಯ ಖರ್ಚುಗಳು, ವಾತಾವರಣ, ಹಾಲಿನ ದರ ಆ ಭೂ ಪ್ರದೇಶದ ರೈತರ
ಚಿತ್ರಣವನ್ನೇ ಬದಲಾಯಿಸಬಹುದು. ಹಾಲಿನ ದರದ ಸವಾಲುಗಳನ್ನೇ ನೋಡಿದಾಗ ಮಹಾರಾಷ್ಟ್ರದ ಹಾಲಿನ ಬೆಲೆ ಈ ವರುಷ ಹೆಚ್ಚು ಕಡಿಮೆ ನಾಲ್ಕು ವರುಷಗಳ ಹಿಂದಿನ ಬೆಲೆ ದಾಖಲಿಸಿ ಇನ್ನೂ ಕುಸಿಯುವ ಭೀತಿ ತೋರಿಸುತ್ತಿದೆ. ಹೌದು, ಹಾಲಿನ ದರದ ಭಯದ ಇಂಡೆಕ್ಸ್ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಇಂತಹ ಸಂಘಟನೆ ಕಡಿಮೆ ಇರುವ ರಾಜ್ಯಗಳಲ್ಲಿ ಎಂದರೆ ತಪ್ಪಾಗ ಲಿಕ್ಕಿಲ್ಲ.
ಹಾಗಂತ ಬೇರೆ ರಾಜ್ಯಗಳಲ್ಲಿ ಈ ಸಮಸ್ಯೆ ಇಲ್ಲವೆಂದಲ್ಲ. ಇಲ್ಲಿ ಅದೇ ಹಸುವಿನ ಆಹಾರದ ಬೆಲೆ ಮಾತ್ರ ಏರುತ್ತಲೇ ಇರುವುದು. ಅದು ತನ್ನ ನಾಲ್ಕು ವರುಷದ ಹಿಂದಿನ ಹೋಗಲು ಇಲ್ಲ ಮತ್ತು ಹೋಗಲು ಸಾದ್ಯವೂ ಇಲ್ಲ. ಇನ್ನೂ ಯಾವುದೇ ಸಾಮಾನ್ಯ ರೈತ ತನ್ನ ಇಳುವರಿಯೊಂದಿಗೆ ತನ್ನ ಜಾನುವಾರುಗಳ ಸಂಖ್ಯೆಯನ್ನು ಹೆಚ್ಚಿಸುವುದು ಅಷ್ಟು ಸರಳವೇನಲ್ಲ. ಹಾಗೆಯೇ ಅದು ಯಾಂತ್ರಿಕತೆಯ ಪಾಲನೆಯೇ ಆಗದೆ ಹಸು ಓಡಾಡುವಷ್ಟು ಜಾಗ ಇದ್ದಷ್ಟು ಹಸುವಿನ ಆರೋಗ್ಯ ಮತ್ತು ಹಾಲಿನ ಗುಣಮಟ್ಟ ದಲ್ಲಿಯೂ ಒಳ್ಳೆಯ ಧನಾತ್ಮಕ ವ್ಯತ್ಯಾಸ ಕಾಣಬಹುದು. ಅದು ಆತನ ಖುದ್ದು ಜಾಣತನ ಹಾಗೂ ಆತನ ಮಾರ್ಗದರ್ಶನ
ಮಾಡುವ ಸಂಸ್ಥೆಯ ಮೇಲೂ ನಿರ್ಧರಿತವಾಗುತ್ತದೆ.
ಇಲ್ಲಿ ಹಸುವಿನ ಸಂಪೂರ್ಣ ಜೀವನ ಚಕ್ರವನ್ನು ಅರ್ಥೈಸಿ ನಡೆಯುವುದರ ಜತೆ ಹಾಲಿನ ದರದ ಸಮಸ್ಯೆ ಇಲ್ಲಿ ಆಗದೆ ಇದ್ದಾಗ ಇದು ಸಾಧ್ಯ. ಯಾವುದೇ ತನ್ನ ಸ್ವಾರ್ಥವಿಲ್ಲದೆ, ಓಕ್ಸಿಟಾಕಸಿನ್ ನಂತಹವುಗಳ ಬಳಕೆ ಇಲ್ಲದ ಜಾಣ್ತನದ ಪಶುಪಾಲನೆ ನೆಮ್ಮದಿ ಮತ್ತು ಸ್ವಯಂ ಸುಸ್ಥಿರವಾದ ವ್ಯವಹಾರ ಕಟ್ಟಿಕೊಡಬಹುದು. ಇಂದು ಹಾಲಿಗೆ ಸಮನಾಗಿ ಸಸ್ಯಜನ್ಯ ಆಹಾರ ಮತ್ತು ಹಾಲಿನ ಬಗ್ಗೆ ಹೆಚ್ಚು ಮಾತುಕತೆ ಪ್ರಚಾರಕ್ಕೆ ಬರುತ್ತಿದೆ.
ಇದು ಒಂಥರಾ ರೈತನ ಮೇಲಿನ ತೂಗು ಕತ್ತಿಯೆಂತೆಯೇ ಸರಿ. ಸಸ್ಯ ಜನ್ಯದ ಉತ್ಪನ್ನದ ದರಕ್ಕಿಂತ ಒಂದುವರೆಯಿಂದ ಎರಡು ಪಟ್ಟು ಹಾಲಿನ ಬೆಲೆ ಜಾಸ್ತಿ. ಆದರೂ ಈ ಡೈರಿ ಉದ್ಯಮ 100 ಮಿಲಿಯನ್ ರೈತರ ಪ್ರಶ್ನೆ ಹಾಗಾಗಿ ಇದು ಇನ್ನೂ ಬೆಳೆಯಬೇಕು ಎನ್ನುವುದು ತಜ್ಞರ ವಾದ. ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಸಂಸ್ಥೆಯ ಪ್ರಕಾರ ಈಗ ಹಸುವನ್ನು
ವ್ಯಾವಹಾರಿಕ ದೃಷ್ಟಿಯಿಂದ ನೋಡಲಾಗುತ್ತಿದ್ದು, ಇಲ್ಲಿ ಪ್ರಾಣಿಗಳ ಜೀವನಕ್ಕೆ ಯಾವುದೇ ಧಕ್ಕೆ ತರುವ ಅಂಶವನ್ನು ಬಿಟ್ಟು ಸಸ್ಯ ಜನ್ಯ (ಉದಾಹರಣೆಗೆ ಸೋಯಾ ಎನ್ನಬಹುದು) ಪದಾರ್ಥಗಳ ಕಡೆ ಗಮನವಹಿಸಬೇಕು ಅನ್ನುವುದು ಅವರ ವಾದ.
ಇಲ್ಲಿ ಒಂದು ಅಂಶವನ್ನು ನಾವು ಗಮನಿಸಲೇಬೇಕು ಅದೇನೆಂದರೆ ಭಾರತದ ಎಲ್ಲ ರೈತರು ಜಮೀನುದಾರರಲ್ಲ, ಅದರಲ್ಲೂ 60 ಪ್ರತಿಶತ ಭೂರಹಿತ ವರ್ಗದವರು ಒಂದೆರೆಡು ಹಸು ಮತ್ತು ಒಂದೆರೆಡು ಮೇಕೆ/ಆಡು ಸಾಕಾಣಿಕೆಯ ಮೂಲಕ ಜೀವನ ಸಾಗಿಸು ವವರಿಗೆ ಇದು ಕಹಿಯಂತೂ ಹೌದು. ಇಂತವರು ಅಂದಾಜು ದಿನಕ್ಕೆ 3 ರಿಂದ 5 ಲೀಟರ್ ಹಾಲು ಕಾಕುವ ಸಾಮರ್ಥ್ಯದವರು. ರೈತರ ಇಂದು ಹಾಲಿನ ಉದ್ಯಮ ಎಷ್ಟೇ ಬೆಳೆದಿದ್ದು ಸಿಹಿ ನೀಡಿದ್ದರೂ, ಕರೋನಾದ ಛಾಯೆಯಲ್ಲಿ ಮತ್ತು ನಿಜವಾದ ಸಣ್ಣ ರೈತರಿಗೆ ಇದು ಇನ್ನೂ ಕಹಿಯಾಗಿಯೇ ಇರುವುದಂತೂ ಸ್ಪಷ್ಟ.
ಇನ್ನೂ ನಮ್ಮ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ಜೈವಿಕ ಅನಿಲ ಆಧಾರಿತ ಗೊಬ್ಬರ ನಿರ್ವಹಣಾ ಮಾದರಿ ಕಾರ್ಯ ಕ್ರಮ ಉತ್ತೇಜಿಸುವಂತಹದಾದರೂ ಇದರ ಬೆಳವಣಿಗೆ ಮತ್ತು ತೆಗೆದುಕೊಳ್ಳುವ ಕಾಲಾವಧಿ ಕೂಡ ಪ್ರಾಮುಖ್ಯತೆ ಪಡೆದಿದೆ. ಇಲ್ಲಿ ರೈತರು ತಮ್ಮ ತೋಟಕ್ಕೆ ಬಳಸಿ ಹೆಚ್ಚುವರಿ ಉಳಿದ ಗೊಬ್ಬರವನ್ನು ಮಾರಾಟಮಾಡಬಹುದು. ಅದರಂತೆ ಬಣ್ಣ ತಯಾರಿಕೆ, ಹಾಲಿನ ಹೊಸ ಉತ್ಪನ್ನಗಳು, ಸರಕಾರದ ಸಹಾಯ ಹಸ್ತ ಕಹಿಯ ಮದ್ಯದಲ್ಲೂ ಆಶಾವಾದದ ರುಚಿ ಉಣಿಸುತ್ತಿರುವುದು ಸುಳ್ಳಲ್ಲ.
ಅದಕ್ಕೆ ತಕ್ಕ ಹಾಗೆ ಇಂದು ಯುವ ಜನಾಂಗ ಅದರಲ್ಲೂ ವಿದ್ಯಾವಂತರು ಈ ಕ್ಷೇತ್ರಗಳಲ್ಲಿ ಮೌಲ್ಯಧಾರಿತ ಹೊಸ ರೀತಿಯ ಪ್ರಯೋಗಕ್ಕೆ ಮುಂದಾಗಿರುವುದು ಮತ್ತು ದೇಶದ ಸಂಘಟಿತ ಡೈರಿ ವಲಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ಮತ್ತೆ ಪುಟಿಯಲು ಕ್ಷಿಜ್ಜಾಗಿದೆ. ಸುಮಾರು ಶೇಕಡಾ 5-6 ರಷ್ಟು ಏರಿಕೆಯಾಗಲಿದ್ದು, ಮೊದಲ ಬಾರಿಗೆ ವಲಯದ ಆದಾಯದಲ್ಲಿ 1.5 ಟ್ರಿಲಿಯನ್ ರು.ಗಳನ್ನು ದಾಟಲಿದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸ್ಸಿಲ್ ಅಂದಾಜಿಸಿದೆ.