Thursday, 12th December 2024

ಕಾಂಗ್ರೆಸ್ಸಿನ ಕುಂಭಕರ್ಣ ರಾಹುಲ್‌ ನಿದ್ರಿಸುವುದೇ ಕ್ಷೇಮ !

ಬೇಟೆ

ಜಯವೀರ ವಿಕ್ರಮ ಸಂಪತ್‌ ಗೌಡ

ನನಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಯಾವುದೇ ಅಭಿಪ್ರಾಯ ಇಲ್ಲ. ಇದ್ದರೆ ಸ್ವಲ್ಪ ಅನುಕಂಪವಿದೆ. ಅದಕ್ಕಿಂತ ಹೆಚ್ಚಾಗಿ, ಅವರನ್ನು ನೋಡಿದರೆ ಎಷ್ಟೋ ಸಲ ಅಯ್ಯೋ ಪಾಪ ಅನಿಸುತ್ತದೆ. ಪಾಪ, ಅಽಕಾರಕ್ಕೆ ಬರಬೇಕೆಂದು ಏನೆಲ್ಲಾ ಹೆಣಗುತ್ತಾರೆ.

ಆದರೆ ಆಗುತ್ತಿಲ್ಲ. ಅವರು ಹೋದಲ್ಲೆಲ್ಲಾ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಕಾಂಗ್ರೆಸ್ಸಿಗೆ ಅವರು ಒಂದು ರೀತಿಯಲ್ಲಿ liability  ಆಗುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಬರುತ್ತೇನೆಂದು ಹೇಳಿದಾಗ, ಅವರ ಪಕ್ಷದ ಅಭ್ಯರ್ಥಿಗಳೇ, ಅಯ್ಯೋ ರಾಹುಲ್ ಗಾಂಧಿ ಬಂದ್ರೆ ಬರೋ ಮತಗಳೂ ಬರೊಲ್ಲ. ಅಷ್ಟಕ್ಕೂ ಈವಯ್ಯ ಯಾಕೆ ಬರ್ತಾನೋ? ಸಮಯ ಮತ್ತು ಹಣ ವ್ಯರ್ಥ ಎಂದು ಹಣೆಹಣೆ ಚಚ್ಚಿ ಕೊಳ್ಳುತ್ತಿದ್ದರು.

ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶಾದ್ಯಂತ ಇದೇ ಪರಿಸ್ಥಿತಿಯಿದೆ. ಅಷ್ಟರಮಟ್ಟಿಗೆ ಪಕ್ಷದ ನಾಯಕ ರಿಗೆ, ಕಾರ್ಯಕರ್ತರಿಗೆ ಅವರು ಒಂದು ರೀತಿ ಯಲ್ಲಿ ಹೊರೆಯಾಗಿದ್ದಾರೆ. ಅವರಿಂದ ಪಕ್ಷ ಇನ್ನೂ ಏನನ್ನು ನಿರೀಕ್ಷಿಸುತ್ತಿದೆಯೋ ಕಾಣೆ. ಅವರೊಬ್ಬ utterly failed  ನಾಯಕ. ಕಾಂಗ್ರೆಸ್ ಬಿಟ್ಟು ಬೇರೆ ಯಾವ ಪಕ್ಷದಲ್ಲಿ ದ್ದರೂ, ಅವರು ಇಷ್ಟೊತ್ತಿಗೆ ಇತಿಹಾಸದ ಕಾಲಗರ್ಭ ಸೇರಿರುತ್ತಿದ್ದರು. ಜನರ ಮುಂದೆ ಬಿತ್ತಲು ಅವರ ಮುಂದೆ ಕನಸುಗಳು, ಹೊಸ ವಿಚಾರಗಳು ಇವೆ ಎಂದು ನನಗನಿಸುತ್ತಿಲ್ಲ. ಈ ಮಾತನ್ನು ಅವರ ಪಕ್ಷದ ನಾಯಕರೂ ಒಪ್ಪುತ್ತಾರೆ. ಆದರೆ ಯಾರ ಮುಂದೆಯೂ ಹೇಳದ ಸ್ಥಿತಿ. ಹೀಗಾಗಿ ಅವುಡುಗಚ್ಚಿ ಸುಮ್ಮನೆ ಕುಳಿತಿದ್ದಾರೆ.

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು ಏಳು ವರ್ಷಗಳಾದರೂ, ಅವರ ಮುಂದೆ ಟೀಕಾ ಪ್ರಹಾರವನ್ನು ಮಾಡು ವಾಗ, ರಾಹುಲ್ ಗಾಂಧಿ ಬಗ್ಗೆಯೇ ಮರುಕ ವುಂಟಾಗುತ್ತದೆ. ಇಲ್ಲಿ ತನಕ ಅವರಿಗೆ convincing ಆಗಿ ಮೋದಿಯವರನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲ. ಪ್ರತಿ ಸಲ ಟೀಕೆ ಮಾಡಲು ಹೋಗಿ ಬಾಲಿಶರಾಗಿ ಕಾಣು ತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೂ ಅರ್ಥವಾಗುತ್ತದೆ. ಆದರೆ ಅವರು ಏನೂ ಮಾಡಲು ಆಗದ ಹತಾಶ ಸ್ಥಿತಿಯಲ್ಲಿದ್ದಾರೆ. ರಾಹುಲ್ ಗಾಂಧಿ ಯವರನ್ನು ತಮ್ಮ ನಾಯಕ ಎಂದು ಅಂತ ರಂಗದಲ್ಲಿ ಯಾವುದಾದರೂ ಕಾಂಗ್ರೆಸ್ ನಾಯಕ ಒಪ್ಪಿಕೊಂಡರೆ, ನಾವು ರಾಹುಲ್ ಬಗ್ಗೆ ಅಲ್ಲ, ಆ ನಾಯಕರ ಬಗ್ಗೆ ಮರುಕ ಪಡಬೇಕು. ಇದು ರಾಹುಲ್ ಅಸಲಿಯತ್ತು.

ಆದರೂ ಆ ಪಕ್ಷ ಅವರನ್ನು ತಮ್ಮ ನಾಯಕ ಎಂದು ಮುಂದಿರಿಸಿಕೊಂಡಿರುವುದು, ಕಾಂಗ್ರೆಸ್ ಪಕ್ಷಕ್ಕೆ ಹಿಡಿದಿರುವ ಗೆದ್ದಲನ್ನು ತೋರಿಸುತ್ತದೆ. ಅನಿವಾರ್ಯ ಕರ್ಮ, ಗಾಂಧಿ ಮನೆತನದವರನ್ನು ಬಿಟ್ಟರೆ ಕಾಂಗ್ರೆಸ್ ಛಿದ್ರ ಛಿದ್ರವಾಗುತ್ತದೆ. ಗಾಂಧಿ ಮನೆತನಕ್ಕೆ ಸೇರಿದ ಕತ್ತೆಯಾದರೂ ಪರವಾಗಿಲ್ಲ, ಕಾಂಗ್ರೆಸ್ ನಾಯಕರು ಅದನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳುತ್ತಾರೆ. ಅದನ್ನು ಬಿಟ್ಟು ಬೇರೆ ಯಾರೇ ಬಂದರೂ ಕಿತ್ತಾಟ ಆರಂಭ. ಇದೆಂಥ ದಾಸ್ಯ ಮನೋಭಾವವೋ?! ಆದರೆ ಇದು ವಾಸ್ತವ. ಗಾಂಧಿ ಮನೆತನದವರು ಇಲ್ಲದಿದ್ದರೆ, ನಾಳೆ ಆ ಪಕ್ಷ ತೀನ್-ಚಾರ್ ಆಗುತ್ತದೆ. ಹೀಗಾಗಿ ರಾಹುಲ್ ಗಾಂಧಿ ಒಪ್ಪಿಕೊಳ್ಳದೇ ವಿಧಿಯಿಲ್ಲ.

ಮೊನ್ನೆ ಮೊನ್ನೆ ಒಂದು ವಿಡಿಯೋ ನೋಡುತ್ತಿದ್ದೆ. ರಾಹುಲ್ ಗಾಂಧಿ ರಾಜಸ್ಥಾನದಲ್ಲಿ ಮಾತಾಡುತ್ತಿದ್ದರು. ನಮ್ಮ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ಕುಂಭ ಕರಣ್ ಲಿ- ಇರಿಗೇಷನ್ (ಏತ ನೀರಾವರಿ) ಯೋಜನೆಗೆ ಹಣ ನೀಡಿದ್ದಾರೆ ಎಂದು ಬಿಟ್ಟರು. ಆ ಮನುಷ್ಯನಿಗೆ ಯಾವುದಾದರೂ ಯೋಜನೆಗೆ ಕುಂಭಕರ್ಣನ ಹೆಸರನ್ನು ಇಡಬಹುದಾ ಎಂಬ ಪ್ರಾಥಮಿಕ, ಸಾಮಾನ್ಯ ಜ್ಞಾನವೂ ಇಲ್ಲ. ಅಸಲಿಗೆ, ರಾಹುಲ್ ಗಾಂಧಿ, ಕುಂಭರಾಮ್ ಏತ ನೀರಾವರಿ ಎಂದು ಹೇಳಬೇಕಿತ್ತು. ವೇದಿಕೆ ಮೇಲಿದ್ದವರು ಅದು ಕುಂಭಕರ್ಣ ಅಲ್ಲ, ಕುಂಭರಾಮ್ ಎಂದು ಸರಿಪಡಿಸಿದರು.

ರಾಹುಲ್ ಗಾಂಧಿ ಇನ್ನೂ ರಾಜಕಾರಣದಲ್ಲಿ ಕುಂಭಕರ್ಣನಂತಿರುವುದೇ ಇದಕ್ಕೆಲ್ಲಾ ಕಾರಣ! ರಾಹುಲ್ ಗಾಂಧಿಯಂಥ ಒಬ್ಬ ವ್ಯಕ್ತಿ ಗಾಂಧಿ ಕುಟುಂಬದ ಹೊರ ತಾಗಿ ಬೇರೆ ಯಾರ ಕುಟುಂಬದಲ್ಲಿ ಹುಟ್ಟಿದರೂ, ಈ ಕಾಂಗ್ರೆಸ್ ನಾಯಕರು ಅವರನ್ನು ತಮ್ಮ ಸುತ್ತ ಇರಿಸಿಕೊಳ್ಳುವುದಿಲ್ಲ. ಆದರೆ ಈಗ ಅವರನ್ನು ತಲೆ ಮೇಲೆ ಹೊತ್ತು ಮೆರೆಸಬೇಕಾದ ದೈನೇಸಿ ಸ್ಥಿತಿ. ಯಾರಿಗೇ ಆದರೂ ಕಾಂಗ್ರೆಸ್ ನಾಯಕರ ಸ್ಥಿತಿ ನೋಡಿದರೆ ಮರುಕವಾಗದೇ ಇರದು. ಎಂಥೆಂಥವರಿಗೆಲ್ಲಾ ಮಣೆ ಹಾಕಬೇಕಲ್ಲ? ಆದರೆ ಅಧಿಕಾರ ಬೇಕು ಅಂದ್ರೆ ಇವನ್ನೆಲ್ಲಾ ಮಾಡಬೇಕು. ಅದು ಕಾಂಗ್ರೆಸ್ ನಾಯಕರಿಗೆ ಅಭ್ಯಾಸವಾಗಿ ಹೋಗಿದೆ.

ಮೊನ್ನೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಬಜೆಟ್ ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಂಡು ಮಾತಾಡುವುದನ್ನು ಕೇಳುತ್ತಿದ್ದೆ. ಕಾಂಗ್ರೆಸ್ಸಿನ ಕ್ರೌನ್‌ಪ್ರಿನ್ಸ್ ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ದಯನೀಯ ಸೋಲನ್ನು ಅನುಭವಿಸಿದರೂ, ಏಳು ವರ್ಷಗಳಿಂದ ಅಧಿಕಾರವಿಲ್ಲದೇ ಪ್ರತಿಪಕ್ಷದಲ್ಲಿ ಕುಳಿತುಕೊಂಡರೂ, ಇನ್ನೂ ಪಾಠ ಕಲಿತಿಲ್ಲವಲ್ಲ ಎಂದು ವ್ಯಥೆಯಾಯಿತು. ಪ್ರಧಾನಿ ಮೋದಿ ಅವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ನಾಯಕನ ಥರ ವರ್ತಿಸುವುದನ್ನು ಬಿಟ್ಟು,
ರಾಜನಂತೆ, ಸಾಮ್ರಾಟನಂತೆ ವರ್ತಿಸುತ್ತಿದ್ದಾರೆ ಎಂದು ಆಪಾದನೆ ಮಾಡಿದರು.

ಆದರೆ ರಾಹುಲ್ ಗಾಂಧಿಗೆ ತನ್ನ ತಾತ ಮತ್ತು ಅಜ್ಜಿ ಹೇಗೆ ಭಾರತವನ್ನು ಆಳಿದರು ಎಂಬುದನ್ನೇ ಮರೆತಂತಿದೆ. ಪಕ್ಷದಲ್ಲಿ ನೆಹರು ಅವರಿಗೆ ಯಾರೂ ಎದುರಾಡು ವಂತಿರಲಿಲ್ಲ. ಅವರು ಟೀಕೆಯನ್ನು ಎಂದೂ ಸಹಿಸಿದವರಲ್ಲ. ಅವರ ಮಗಳಾದ ಇಂದಿರಾಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇರಲಿಲ್ಲ. ತಮ್ಮ ಪಕ್ಷದ ನಾಯಕ ರನ್ನು ಮತ್ತು ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದರು. ತಮ್ಮನ್ನು ಭೇಟಿ ಮಾಡಲು ಬರುವ ಪಕ್ಷದ ನಾಯಕರು ಮತ್ತು ಮಂತ್ರಿಗಳಿಗೆ ಸೌಜನ್ಯಕ್ಕೆ ಅವರು ಕುಳಿತುಕೊಳ್ಳಿ ಅಂತನೂ ಹೇಳುತ್ತಿರಲಿಲ್ಲ.

ತಮ್ಮ ಟೇಬಲ್ ಮುಂದೆ ಕುರ್ಚಿಯನ್ನೇ ಇಡುತ್ತಿರಲಿಲ್ಲ. ಕಾಂಗ್ರೆಸ್ ಅಧ್ಯಕ್ಷನ ಬಾಯಿಂದ ‘ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ’ ಎಂದು ಹೇಳಿಸಿದರು. ಇಂದಿರಾ ನಡೆದು ಹೋದರೆ, ಹಿಂದಿನಿಂದ ಅವರ ಪಕ್ಷದ ನಾಯಕರು, ಚೇಲಾಗಳು ಧೂಳನ್ನು ತಲೆ ಮೇಲೆ ಇಟ್ಟುಕೊಳ್ಳುತ್ತಿದ್ದರು ಮತ್ತು ಹಣೆಗೆ ಹಚ್ಚಿಕೊಳ್ಳುತ್ತಿದ್ದರು. ಈ ವಿಷಯವನ್ನು ಪತ್ರಕರ್ತ ಜನಾರ್ದನ್ ಠಾಕೂರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ತುರ್ತುಸ್ಥಿತಿ ಸಂದರ್ಭದಲ್ಲಿ ತಮ್ಮ ವಿರುದ್ಧದ ಸಣ್ಣ ಟೀಕೆಯನ್ನು ಸಹಿಸದ ಇಂದಿರಾ ವಿರೋಧಿಗಳನ್ನು ಜೈಲಿಗೆ ಅಟ್ಟಿದ್ದು ರಾಹುಲ್ ಗಾಂಧಿಯವರಿಗೆ ಗೊತ್ತಿಲ್ಲವೇ? ತಮ್ಮ ವಿರುದ್ಧ ಬರೆದ ಪತ್ರಿಕೆಗಳ ಮೇಲೆ ಮುಟ್ಟುಗೋಲು ಹಾಕಿದರು. ಕೆಲವು ಪತ್ರಕರ್ತರು ಹೇಳಹೆಸರಿಲ್ಲದೇ ಕಣ್ಮರೆಯಾದರು. ತಮ್ಮ ತಾತ, ಅಜ್ಜಿ ಮತ್ತು ತಂದೆ ಹೇಗೆ ದೇಶವನ್ನು ಆಳಿದರು ಮತ್ತು ಪಕ್ಷವನ್ನು ತಮ್ಮ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದರು ಎಂಬುದನ್ನು ಒಂದು ಕ್ಷಣ ನೆನಪಿಸಿಕೊಂಡಿದ್ದರೆ ಸಾಕು, ರಾಹುಲ್ ಗಾಂಧಿ ಆ ಮಾತನ್ನು ಹೇಳುತ್ತಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಗೆ ಕೆಲವು ತಿಂಗಳುಗಳ ಹಿಂದೆ, ರಾಹುಲ್ ತಾಯಿ ಸೋನಿಯಾ ಗಾಂಧಿ ಘೋಷಿಸಿದರು -We
will not allow Modi to come back. ಇವು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ನಾಯಕ ಅಥವಾ ನಾಯಕಿ ಬಾಯಿಂದ ಬರುವ ಮಾತುಗಳಾ? ಗಾಂಧಿ ಮನೆತನದವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ.

ದೇಶದ ಪ್ರಜೆಗಳು ಮತ್ತು ಪಕ್ಷದ ನಾಯಕರು ಅಂದ್ರೆ ತಮ್ಮ ಗುಲಾಮರು, ದಾಸರು ಎಂದು ಪರಿಗಣಿಸಿದವರಲ್ಲವೇ ಇವರು? ರಾಹುಲ್ ಗಾಂಧಿ ಅವರಿಗೆ ಕೆಲವು ಸಂಗತಿ ಗಳನ್ನು ನೆನಪು ಮಾಡಿಕೊಡಬೇಕು. ಡಾ.ಮನಮೋಹನ ಸಿಂಗ್ ಹತ್ತು ವರ್ಷಗಳ ಕಾಲ ಪ್ರಧಾನಿ ಮಂತ್ರಿಯಾಗಿದ್ದರಲ್ಲ. ಆಗ ಪರಿಸ್ಥಿತಿ ಹೇಗಿತ್ತು ಎಂಬು ದನ್ನು ಅವರು ಮರೆತಂತಿದೆ. ಡಾ.ಸಿಂಗ್ ನಾಮಕೇವಾಸ್ತೆ ಪ್ರಧಾನಿಯಾಗಿದ್ದರು. ಆದರೆ ಅವರನ್ನು ಅಕ್ಷರಶಃ ನಿಯಂತ್ರಿಸುತ್ತಿದ್ದವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ. ಡಾ.ಸಿಂಗ್ ಆಡಿಸಿದಂತೆ ಕುಣಿಯುವ ಬೊಂಬೆಯಾಗಿದ್ದರು. ಅವರನ್ನು ಯಾರು ಆಡಿಸುತ್ತಿದ್ದರು ಎಂಬುದನ್ನು ರಾಹುಲ್ ಗಾಂಧಿ ಹೇಳಲಿ ನೋಡೋಣ? ಸರಕಾರದ ಎಲ್ಲ ಮಹತ್ವದ ಕಡತ, ರಹಸ್ಯ ಕಡತಗಳೆಲ್ಲ ಸೋನಿಯಾ ಗಾಂಧಿ ಮನೆಗೆ ಹೋಗಿ ಬರುತ್ತಿತ್ತು. ಅವರ ಅನುಮತಿ ಇಲ್ಲದೇ ಭಾರತ ಸರಕಾರದಲ್ಲಿ ಹುಲ್ಲು ಕಡ್ಡಿಯೂ ಅಲ್ಲಾಡುತ್ತಿರಲಿಲ್ಲ.

ಸೋನಿಯಾ ಗಾಂಧಿ ಕಿಚನ್ ಕ್ಯಾಬಿನೆಟ್ ನಲ್ಲಿದ್ದ ಕೆಲವರು ನೀತಿ-ನಿಯಮಗಳನ್ನು ರೂಪಿಸುತ್ತಿದ್ದರು. ಅದನ್ನು ಜಾರಿಗೊಳಿಸಲು ಸೋನಿಯಾ ಆದೇಶಿಸುತ್ತಿದ್ದರು.
ಇದು ಇಡೀ ದೇಶಕ್ಕೆ ಗೊತ್ತಿರುವ ಸತ್ಯ. ತಮ್ಮ ಅಳಿಯ ರಾಬರ್ಟ್ ವಾದ್ರಾನನ್ನು ಯಾವ ವಿಮಾನ ನಿಲ್ದಾಣದಲ್ಲೂ ಭದ್ರತಾ ತಪಾಸಣೆಗೂ ಗುರಿಪಡಿಸಕೂಡದು
ಎಂಬ ಆದೇಶ ಹೊರಡಿಸಿದವರು ಯಾರು? ವಾದ್ರಾನನ್ನು ವಿವಿಐಪಿ ಪಟ್ಟಿಗೆ ಸೇರಿಸಿದವರು ಯಾರು? ಹತ್ತು ವರ್ಷ ಜವಾಬ್ದಾರಿಯಿಲ್ಲದೇ, ಉತ್ತರದಾಯಿತ್ವ (-We
will not allow Modi to come back) ಇಲ್ಲದೇ, ಈ ದೇಶವನ್ನು ನಡೆಸಿದಾಗ ರಾಹುಲ್ ಗಾಂಽಗೆ ತಮ್ಮ ಮಾತೋಶ್ರೀ ಸರ್ವಾಧಿಕಾರಿಯಂತೆ, ರಾಣಿ ಯಂತೆ, ಸಾಮ್ರಾಜ್ಞಿಯಂತೆ ವರ್ತಿಸುತ್ತಿದ್ದಾರೆ ಎಂದು ಅನಿಸಲಿಲ್ಲವಾ? ಪ್ರಧಾನಿ ಡಾ.ಸಿಂಗ್ ನೆಪ ಮಾತ್ರದ ಪ್ರಧಾನಿ ಎಂಬ ಸಂಗತಿ ಅರಿಯದಷ್ಟು ರಾಹುಲ್ ಮುಗ್ಧರಾಗಿದ್ದಾರಾ? ಪ್ರಜಾ ಸತ್ತಾತ್ಮಕ ತತ್ವಗಳಲ್ಲಿ ನಂಬಿಕೆಯಿದ್ದಿದ್ದರೆ, ಆಗ ಯಾಕೆ ಅವರು ತಮ್ಮ ತಾಯಿ ವಿರುದ್ಧ ಮಾತಾಡಲಿಲ್ಲ? ಇವನ್ನೆಲ್ಲಾ ನೋಡಿಯೇ ದೇಶದ ಜನ ರೋಸಿ ಹೋದರು.

ಮೋದಿ ಅವರು ಅಧಿಕಾರಕ್ಕೆ ಬರಲು ಇದೂ ಕಾರಣವಾಯಿತು ಎಂಬ ಕನಿಷ್ಠ ರಾಜಕೀಯ ಜ್ಞಾನ ರಾಹುಲ್ ಗಾಂಧಿಗೆ ಇಲ್ಲವಾ? ಮೋದಿ ಅಧಿಕಾರಕ್ಕೆ ಬರುವುದು ಗೊತ್ತಿದ್ದರೂ, ಅವರ ಪಕ್ಷದ ನಾಯಕನೊಬ್ಬ, ಮೋದಿ ಹೆಚ್ಚೆಂದರೆ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಟೀ ಮಾರಲು ಲಾಯಕ್ಕು’ ಎಂದು ಹೇಳಿದ್ದನ್ನು ರಾಹುಲ್ ಗಾಂಧಿ ಹೇಗೆ ಸ್ವೀಕರಿಸುತ್ತಾರೆ? ಈ ದೇಶದ ಪ್ರಧಾನಿಯನ್ನು ತನ್ನ ಅಡಿಯಾಳಿನಂತೆ ನಡೆಸಿಕೊಂಡ ಸೋನಿಯಾ ಗಾಂಧಿಯವರನ್ನು ರಾಹುಲ್ ಗಾಂಧಿಯವರು ಹಾಗಾದರೆ ಏನೆಂದು ಕರೆಯುತ್ತಾರೋ? ಮೋದಿಯವರನ್ನು ರಾಜ ಎಂದು ಹೇಳುವ ಮೊದಲು, ಕಾಂಗ್ರೆಸ್ ಎಂಬ ಅರಸೊತ್ತಿಗೆಯ ಬಗ್ಗೆ ಮೊದಲು ರಾಹುಲ್
ಗಾಂಧಿ ಮಾತಾಡಲಿ. ಮೋದಿಯವರನ್ನು ಟೀಕಿಸಲು ಕಾಂಗ್ರೆಸ್ಸಿಗಾಗಲಿ, ರಾಹುಲ್ ಗಾಂಧಿಯವರಿಗಾಗಲಿ ನೈತಿಕ ಹಕ್ಕೇ ಇಲ್ಲ.

ಮಾಡಬಾರದ ಅನಾಚಾರ ಮಾಡಿದ್ದಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮೋದಿಯವರು ಅಧಿಕಾರಕ್ಕೆ ಬಂದಂದಿನಿಂದ, ಕಾಂಗ್ರೆಸ್ ಕೇಂದ್ರದಲ್ಲಿ ಮಾತ್ರವಲ್ಲ, ರಾಜ್ಯದಲ್ಲೂ ಅಧಿಕಾರವನ್ನು ಕಳೆದುಕೊಳ್ಳುತ್ತಿದೆ. ಈ ವಿಷಯದ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತಾಡುತ್ತಿಲ್ಲ?
ಸಂಸತ್ತಿ ನಲ್ಲಿ ರಾಹುಲ್ ಗಾಂಧಿಯವರು ಮತ್ತೊಂದು ವಿಷಯವನ್ನು ಪ್ರಸ್ತಾಪಿಸಿದರು. ಮೋದಿಯವರ ಆಡಳಿತದಲ್ಲಿ ಭಾರತ ಶ್ರೀಮಂತರ ಭಾರತ ಮತ್ತು ಬಡವರ ಭಾರತ ಎಂದು ಇಬ್ಭಾಗವಾಗಿದೆ ಎಂದು ಹೇಳಿದರು. ಈ ಮಾತುಗಳನ್ನು ಕೇಳಿದರೆ, ಅವರ ರಾಜಕೀಯ ಪ್ರಬುದ್ಧತೆ ಬಗ್ಗೆ ಮರುಕವುಂಟಾಗುತ್ತದೆ. ಸ್ವಾತಂತ್ರ್ಯ ಬಂದ ನಂತರ ಈ ದೇಶವನ್ನು ಐವತ್ತು ವರ್ಷಗಳ ಕಾಲ ಆಳಿದ್ದು ಅವರ ಪಕ್ಷವೇ.

ಒಂದು ದೇಶವನ್ನು ಬಡತನಮುಕ್ತವಾಗಿಸಲು ಅರ್ಧ ಶತಮಾನ ಸಾಕು. ಈ ಅವಧಿಯಲ್ಲಿ ಅವರ ಪಕ್ಷ ಏನು ಕಿತ್ತು ಗುಡ್ಡೆ ಹಾಕಿದೆ? ‘ಗರೀಬಿ ಹಠಾವೋ’ ಮೂಲಕ ಈ ದೇಶದಿಂದ ಬಡತನವನ್ನು ಓಡಿಸುತ್ತೇವೆ ಎಂದು ಹೇಳಿಕೊಂಡ ಕಾಂಗ್ರೆಸ್, ಹಾಗಾದರೆ ಬಡತನ ಓಡಿಸಲಿಲ್ಲವಾ? ಐವತ್ತು ವರ್ಷವಾಳಿದರೂ ಕುಡಿಯುವ ನೀರಿಗೆ ಮೈಲುಗಟ್ಟಲೆ ನಡೆಯುವ ಪ್ರಸಂಗ ಬಂದಿದ್ದೇಕೆ? ಕಕ್ಕಸುಗಳೇ ಇಲ್ಲದ ಗ್ರಾಮಗಳನ್ನು ಇನ್ನೂ ಕಾಣುವಂತಾಗಿದ್ದರೆ ಅದಕ್ಕೆ ಯಾರು ಕಾರಣ? ಒಂದು
ವೇಳೆ ಈಗಲೂ ಬಡತನಕ್ಕಾಗಿ ಮೋದಿಯವರನ್ನು ರಾಹುಲ್ ಗಾಂಧಿ ಟೀಕಿಸುತ್ತಾರೆಂದರೆ, ಅದರಲ್ಲಿ ತಮ್ಮ ಪಾಲೂ ಇದೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲವಾ?
ಈ ಕಾರಣಗಳಿಗಾಗಿಯೇ ರಾಹುಲ್ ಸೇರಿ, ಕಾಂಗ್ರೆಸ್ ನಾಯಕರು ಪದೇ ಪದೆ ಬಕ್ಕಬೋರಲಾಗುತ್ತಾರೆ.

ಅವರಿಗೆ ಮೋದಿಯವರನ್ನು ಟೀಕಿಸುವ ನೈತಿಕತೆಯೇ ಇಲ್ಲ. ರಾಜಕಾರಣದಲ್ಲಿ ಟೀಕಿಸಬೇಕು ಎಂಬ ಕಾರಣಕ್ಕೆ ಟೀಕಿಸಿದರೆ ಹೀಗೇ ಆಗುತ್ತದೆ. ಮೂಲಭೂತವಾಗಿ ರಾಜಕೀಯ ಬದ್ಧತೆ ಇರಬೇಕು. ರಾಹುಲ್ ಗಾಂಧಿಗೆ ಅಂಥ ಬದ್ಧತೆ ಏನಿದೆ? ಅವರು ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಯಶಸ್ವಿ ನಾಯಕರಾಗಿದ್ದರೆ, ಅವರು ತಮ್ಮ ಸ್ಥಾನವನ್ನು ತೊರೆಯುವ ಪ್ರಸಂಗವೇ ಬರುತ್ತಿರಲಿಲ್ಲ. ಅಧ್ಯಕ್ಷ ಗಾದಿಯನ್ನು ಈ ಮುದಿ ವಯಸ್ಸಿನ ತಮ್ಮ ತಾಯಿ ಮಡಿಲಿಗೆ ಹಾಕಬೇಕಾದ ಸನ್ನಿವೇಶವೇ ಎದು ರಾಗುತ್ತಿರಲಿಲ್ಲ. ದಿನದಿಂದ ದಿನಕ್ಕೆ ವಯಸ್ಸಾದರೂ, ತಾವು ಎಳಸು ಎಂಬುದನ್ನು ಅವರು ಸಾಬೀತುಪಡಿಸುತ್ತಿದ್ದಾರೆ. ಮೋದಿಯವರು ಮಾಡಿದ್ದೆಲ್ಲಾ ಗ್ರೇಟ್ ಎಂದು ಹೇಳುತ್ತಿಲ್ಲ. ಆದರೆ ತಮ್ಮ ಕೆಲವು ವೈಫಲ್ಯಗಳ ನಡುವೆಯೂ ಮೋದಿ ಏಕೆ ಇಂದಿಗೂ ಅತ್ಯಂತ ಜನಪ್ರಿಯ ನಾಯಕ ಎಂಬ ಪ್ರಶ್ನೆಗೆ ಮೊದಲು ರಾಹುಲ್ ಗಾಂಧಿ ಉತ್ತರ ಹುಡುಕಬೇಕು.

ಅಲ್ಲಿ ತನಕ ರಾಹುಲ್ ಗಾಂಧಿ ಹೆಚ್ಚು ಹಾರಾಡದಿರುವುದೇ ಅವರಿಗೆ ಭೂಷಣ! ಅಂದ ಹಾಗೆ ನನ್ನ ದೀರ್ಘ ಕಾಲದ ಅನುಪಸ್ಥಿತಿ ಸಾಕಷ್ಟು ಚರ್ಚೆ ಆಗಿರಬೇಕಲ್ಲವೇ? ಸದ್ಯದಲ್ಲೇ ಅದಕ್ಕೆ ಕಾರಣವನ್ನೂ ಹೇಳುತ್ತೇನೆ.