ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಕರೋನಾದ ಈ ಸುದೀರ್ಘ ಒಂದೂವರೆ ವರ್ಷದ ದಿನಗಳು ಅದೆಂಥಾ ಕ್ರೂರವಾಗಿವೆ! ಜೈಲುವಾಸದ ಖೈದಿಗಳು ಅನುಭವಿಸುವ ನೋವನ್ನು ಈಗ ಎಲ್ಲರೂ ಅನುಭವಿಸುತ್ತಿದ್ದೇವೆ. ಹಾಗೆಯೇ ಕ್ಷಣವೊಂದು ಯುಗ ವಾಗುವುದು ಎಂದರೆ ಏನೆಂಬುವುದನ್ನು ಮನಗಾಣುತ್ತಿದ್ದೇವೆ.
ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಬರುವ ಹಾಸ್ಯದ ಕಮೆಂಟ್ ಗಳು ನಗುವಿನ ಜತೆ ಜತೆಗೆ ಸತ್ಯ ದರ್ಶನವನ್ನೂ ಮಾಡಿಸುತ್ತಿವೆ.
ಒಂದು ಸ್ವಗತದ ಹಾಸ್ಯದ ಕಮೆಂಟು ಹೀಗಿತ್ತು. ಅದು ನಿಜವೂ ಇದ್ದು, ನಗುವಿನ ಜತೆಗೆ ವಿಷಾದವೂ ಮೇಳೈಸಿತ್ತು. ಅದೇನೆಂದರೆ
“ನಾವು ಮನ್ಯಾಗ ಇದ್ರೂ ರೈಲಿನ್ಯಾಗ ಕುಂತಿವೇನೋ ಅನಿಸ್ತಾ ಇದೆ. ಹೇಗೆಂದರೆ ಕುಳಿತ ಅಥವಾ ಮಲಗಿದ ಜಾಗದಿಂದ ಏಳತೀವಿ, ಟಾಯಲೆಟ್‌ಕ್ಕೆ ಹೋಗ್ತೀವಿ ಮತ್ತ ತಿರುಗಿ ಬಂದು ಅದೇ ಜಾಗದಾಗ ಕುಂದರತೀವಿ, ಇಲ್ಲಾ ಮಲಗತೀವಿ, ರೈಲಿನ್ಯಾಗ ಹಿಂಗ ಅಲ್ಲೇನು ನಾವು ಮಾಡೋದು? ಅದಕ್ಕ.. ಮನಿನೂ ರೈಲು ಅನ್ಕೋಬೇಕು.
ಇನ್ನೇನು ಅಂದ್ರೆ ರೈಲಿನ ಕಿಟಕಿ ಒಳಗಿಂದ ಗುಡ್ಡ, ನದಿ, ಹಳ್ಳ, ಕೊಳ್ಳ, ಮಳ್ಳರನ್ನ ನೋಡ್ತಿದ್ದಿವಿ. ಆದರೆ ಮನೆ ಕಿಟಕಿಯಿಂದ ಮತ್ತೆ ನಮ್ಮನಿ ಮಂದಿನೇ ಬಟ್ಟೆ ಒಣ ಹಾಕೋದು, ಇಲ್ಲಾ ಅವರು ಟಾಯಲೆಟ್‌ಗೆ ಹೋಗೋದು, ಇಲ್ಲಾ ಯಾವನರ ಅಪ್ಪಿತಪ್ಪಿ ರಸ್ತೆಗೆ ಹೋಗಿ ಕುಂಡಿಮ್ಯಾಲೆ ಲಾಠಿ ಏಟು ಬಿದ್ದು ಅದನ್ನ ತಿಕ್ಕೋತ ಮನಿಗೆ ಹೋಗೋದು ಕಾಣಿಸ್ತದ.
ನಾವು ಕಿಡಕಿ ಒಳಗ ಕೂತು ಬಗ್ಗಿ ನೋಡೋದು ಅವನು ತಿರುಗಿ ನಿಂತು, ಪ್ಯಾಂಟ್ ಸರಿಸಿ ತೋರಿಸಿ ಪೃಷ್ಠದರ್ಶನ ಮಾಡಿಸಿ ‘ಸರ್
ಭಾರಿ ಸ್ಟ್ರಿಕ್ಟ್ ಅದ ಬಜಾರ, ಹೊರಗ ಬರಬ್ಯಾಡ್ರಿ, ಮೊದಲ.. ನೀವು ಒಂಟಿ ಎಲುಬಿನವರು, ಅಲ್ಲೇ ಬೀಳ್ತೀರಿ ನೋಡ್ರಿ’ ಎಂದು ಅಂಜಿಸಿಯೇ ಹೋಗುತ್ತಾನೆ.
ನಮ್ಮ ಉತ್ತರ ಕರ್ನಾಟಕ ಮಂದಿಗೆ ಜಳಕ, ಊಟಕ್ಕಷ್ಟೇ ಮನೆ ಬೇಕು. ಹಗಲು ಹದಿನೆಂಟು ತಾಸು ಹೊರಗಿರೋ ಲೋಕ
ದರ್ಶನಿಕರು, ಮನೆಯಲ್ಲಿ ಕುಳಿತರೆ ರೋಗ ಬರುತ್ತವೆ ನಮಗೆ. ‘ಕರೋನಾ ಬಂದೈತೋ, ಹೊರಗ ರಸ್ತಾಕ್ಕ ಹೋದಿಯಂದ್ರ
ಯಮ ಬರ‍್ತಾನೆ ಎಂದರೆ ತಪ್ಪದೇ ಹೊರಬರ‍್ತಾರೆ ಏಕೆಂದರೆ, ಅವನು ಏರಿ ಬರೋ ಕ್ವಾಣ ಹೆಂಗೈತಿ ನೋಡ್ತೀನಿ’ ಅಂತಾರೆ.
ನಮ್ಮ ಜನ ಶಾಲೆಯಲ್ಲಿ ಕಲಿಸೋದು ಏನೂ ಅಲ್ಲ ಅಂತ ನಂಬಿದವರು. ಸಹಿ ಮಾಡಲು, ಬಂದ ಪತ್ರ ಓದಲು, ಆ ಪತ್ರಕ್ಕೆ
ಉತ್ತರ ಹಾಕಲು ಒಂದಿಷ್ಟು ಕನ್ನಡ ಅಕ್ಷರಗಳನ್ನು ಕಲಿತರೆ ಸಾಕು ಅನ್ನೋ ಜನ ಇನ್ನೂ ಹಳ್ಳಿಗಳಲ್ಲಿದ್ದಾರೆ.
‘ಮನ್ಯಾಗ ಕುಂದ್ರಾಕ ನಾವೇನು ಹೆಂಗಸರೇನಲೆ?’ ಎಂದು ಈ ಕರೋನಾ ಟೈಮ್‌ನಲ್ಲಿ ಪೊಲೀಸರಿಗೆ ಕೇಳಿದವರೇ ಸಾವಿರ ಮಂದಿ ಇದ್ದಾರೆ. ಆದರೆ, ನೋಡು ನೋಡುತ್ತಿದ್ದಂತೆ ಬಂಧುಗಳು, ಜೀವದ ಗೆಳೆಯರು, ಹಡೆದವರು, ಉಣಿಸಿ ಬೆಳೆಸಿದವರು ಒಂದೇ ದಿನದಲ್ಲಿ ಉದ್ದಕ್ಕೆ ಮಲಗಿದ್ದು ನೋಡಿ, ಈಗ ತೆಪ್ಪಗೆ ಮನೆ ಸೇರಿದ್ದಾರೆ ಪಾಪ! ಕರೋನಾ ಈ ಶತಮಾನದ ಬಹುದೊಡ್ಡ ದುರಂತ. ನಾನು ನಾನೆಂಬ ಪಾಪಿಗಳನ್ನೂ ಒಯ್ಯಿತು. ಎಲ್ಲಾ ದೇವರದು ಅಂದವರನ್ನೂ ಒಯ್ಯುತ್ತಿದೆ. ಮರಣಕ್ಕೆ ಮದ್ದಿಲ್ಲ ಎಂಬುದನ್ನು ವಿಜ್ಞಾನಕ್ಕೆ ಸವಾಲು ಹಾಕಿ ತೋರಿಸಿಬಿಟ್ಟಿತು.
ನಾನು ಕಳೆದ ಈ ಮೂವತ್ತು ವರ್ಷಗಳಿಂದ ಇಡೀ ಕರ್ನಾಟಕದ ಮೂಲೆ ಮೂಲೆಗಳಿಗೆಲ್ಲ ಹಾಸ್ಯ ಪ್ರಿಯರ ಅಭಿಮಾನದ ಕರೆಗೆ, ಆಹ್ವಾನಗಳಿಗೆ, ಹೋಗಿ ಹೋಗಿ ಸುಸ್ತಾಗಿ ಹೋಗಿದ್ದೆ. ಆದರೂ ದೇಹದಲ್ಲಿ ಶಕ್ತಿ, ಉತ್ಸಾಹದ ಕೊರತೆ ಅನಿಸುತ್ತಿರಲಿಲ್ಲ. ಅರವತ್ತಕ್ಕೆ ಬಂದಿದ್ದೇನೆ ಎಂದರೂ ಬಹಳ ಜನ ನಂಬುತ್ತಿರಲಿಲ್ಲ. ಆದರೆ, ಹತ್ತಿರ ಹತ್ತಿರ ಒಂದೂವರೆ ವರ್ಷದ ಈ ಕರೋನಾ ಹೋಮ್ ಅರೆಸ್ಟ್, ಈ ಮೌನ, ಏಕಾಂತದ ಬದುಕು, ಅರವತ್ತಕ್ಕೇ ಬದುಕು ಮುಕ್ತಾಯವೇ ಎನಿಸುತ್ತಿದೆ.
ಹಿರಿಯರಾದ ಮಾಸ್ಟರ್ ಹಿರಣ್ಣಯ್ಯ ಒಂದು ಮಾತು ಹೇಳುತ್ತಿದ್ದರು. ಕಲಾವಿದರ ಪ್ರೇಕ್ಷಕರ ಸಿಳ್ಳು, ಚಪ್ಪಾಳೆ, ನಗುವಿನಿಂದಲೇ ಬದುಕುತ್ತಾನೆ. ಎಲ್ಲಿವರೆಗೆ ಪ್ರೇಕ್ಷಕನ ಚಪ್ಪಾಳೆ ಕಿವಿಗೆ ಬೀಳುತ್ತಿರುತ್ತೋ ಅಲ್ಲಿಯವರೆಗೆ ಅವನು ಕೈಲಾಸದಲ್ಲಿರ್ತಾನೆ. ಅದು ಕೇಳೋದು ನಿಂತಿತೋ ಅವನಿಗೆ ಕೈ ಸಾಲ ಕೂಡಾ ಸಿಕ್ಕೋದಿಲ್ಲ ಅಂತ. ಈ ಮಾತು ಸತ್ಯ ಅನಿಸುತ್ತಿದೆ.
ನಮ್ಮ ತಂದೆ ತೀರಿಕೊಂಡಾಗ 1992ರಲ್ಲಿ ಅವರಿಗೆ ಅರವತ್ತೆರಡು ವರ್ಷವಾಗಿತ್ತು. ಅವರು ಹೋದಾಗಿನ ಸೂತಕದ ಹತ್ತು ದಿನಗಳ ಆ ಮೌನದ ದಿನಗಳಲ್ಲಿ ಮಾತನಾಡಿಸಲು, ಸಂತೈಸಲು, ಧೈರ್ಯ ಹೇಳಲುಬಂದ ಬಂಧು, ಬಳಗ, ಸ್ನೇಹಿತರೆಲ್ಲ ‘ತಂದೆ ಕಾಲ ಮುಗೀತು, ಇನ್ನೂ ನಿಮ್ಮದೇ ಜವಾಬ್ದಾರಿ, ತಂದೆ ಇರೋತನ ನೀವು ಹುಡುಗರೇ, ತಂದೆಯನ್ನು ಸಂಸ್ಕಾರ ಮಾಡಿಬಂದ ಮರು ದಿನ ಕೂಡಾ ಅಲ್ಲ, ಆ ದಿನದ ಸಂಜೆಯೇ ನೀವು ಹುಡುಗರಲ್ಲ, ಆತನ ಸ್ಥಾನ ತಂಬಬೇಕಾದವರು, ತುಂಬಲೇಬೇಕು ನೀವು’ ಎಂದು ಹೇಳಿ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಹೆಗಲ ಮೇಲೆ ಮೂಟೆಯನ್ನು ಹೊರಿಸಿದ ಹಾಗಾಗಿತ್ತು.
ಮನೆಯ ಮುಂದೆ ಯಾರಾದರೂ ಬಂದು ನಿಂತರೆ, ‘ಅಪ್ಪಾ, ಯಾರೋ ಬಂದಾರ ನೋಡು’ ಎಂದು ಆತನಿಗೆ ಕೇಳುವಂತೆ ಕೂಗಿ ದರೆ ನಮ್ಮ ಕೆಲಸ ಮುಗಿಯುತ್ತಿದ್ದ ದಿನಗಳು ಮುಗಿದು, ಯಾರಾದರೂ ಬಂದು ಕೂಗಿದರೆ ನಾವೇ ಎದ್ದು ಹೊರಬಾಗಿಲಿಗೆ ಬರಬೇಕಾದ ದಿನಗಳು ನೋಡು ನೋಡುತ್ತಿದ್ದಂತೆಯೇ ಬಂದುಬಿಟ್ಟಿದ್ದವು. ಮೊನ್ನೆ ಮೊನ್ನೆ ಈ ಜವಾಬ್ದಾರಿ ಹೊತ್ತ ಹಾಗಾಗಿತ್ತು.
ಬಂದವರೆನ್ನಲ್ಲ ನಾನೇ ಹೋಗಿ ಮಾತನಾಡಿಸಿ ಸಲಹೆ ಕೊಟ್ಟೋ, ಸಲಹೆ ಪಡೆದೋ ಒಳ ಬರುತ್ತಿದ್ದ ಯಜಮಾನಿಕೆ ದಿನಗಳೂ
ಮುಗಿದು ನಮಗೂ ಅರವತ್ತು, ಅರವತ್ತೆರಡರ ಸಮೀಪದ ಗಡಿಗೆ ಬಂದು ನಿಂತಿದ್ದೆವೆಂಬುದನ್ನು ಈ ಕರೋನಾದ ಏಕಾಂತ,
ಎಲ್ಲಲ್ಲೂ ಮೌನದ, ನಿಷ್ಕ್ರೀಯಗೊಂಡಿರುವ ಜನರ ಜೀವನ, ನಿರ್ಮಾನುಷ ವಾಗಿರುವ ಅಂಗಡಿ ಬೀದಿಗಳು ನಮ್ಮ ಕಾಲವೂ
ಮುಗಿಯುತ್ತಾ ಬಂತೆ? ಅದೆಷ್ಟು ಬೇಗ ಅವರತ್ತಾಯಿತು.
ಮೊನ್ನೆ ಮೊನ್ನೆ ಅಪ್ಪಾ ಯಾರೋ ಬಂದಾರ ನೋಡು ಅಂತ ಹೇಳುತ್ತಿದ್ದ ನಾವು ಆತ ದೀರ್ಘಾಯುಷಿ ಎಂದುಕೊಂಡಿದ್ದೆವು. ಅರವತ್ತು ಆಗಲು ತಡವಾಗಲೇ ಇಲ್ಲ. ಭೈರಪ್ಪನವರ ಕೆಲವು ಕಾದಂಬರಿಗಳಲ್ಲಿ ಆತನಿಗೆ ಆಗ ಐವತ್ತರ ವೃದ್ಧಾಪ್ಯದಲ್ಲಿ
ಹೀಗೆನಿಸಿತು ಎಂದು ಬರೆದಿದ್ದಾರೆ. ನಾನು ಹದಿನೈದು – ಹದಿನೆಂಟು ವರ್ಷದವನಿದ್ದಾಗ ನಮ್ಮ ಓಣಿಯಲ್ಲಿ ಶೆಟ್ಟರ ಮುದುಕಿ ಕೃಷ್ಟಮವ್ವ ಎಂಬಾಕೆಗೆ ನಲ್ವತ್ತು ನಲ್ವತ್ತೈದಕ್ಕೆಲ್ಲ ಸೊಂಟ ಬಾಗಿ ಕೋಲು ಹಿಡಿದು ನೆಲದಲ್ಲಿ ಬಿದ್ದ, ಏನನ್ನೋ ಹುಡುಕುವ
ಳಂತೆ ಬಗ್ಗಿ ನಡೆಯುತ್ತಿದ್ದಳು. ತಮಿಳಿನ ಅವ್ವೆಯಾರ್ ಎಂಬ ಸಂತಳೊಬ್ಬಳ ಚರಿತ್ರೆಯನ್ನು ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್
ನವರು ಹೊರ ತರುತ್ತಿದ್ದ ಭಾರತ ಭಾರತಿ ಪುಸ್ತಕದ ಸಂಪದ ಮಾಲಿಕೆಯ ಪುಟ್ಟ ಪುಸ್ತಕಗಳಲ್ಲಿ ಓದುತ್ತಿದ್ದಾಗ ಅವ್ವೆಯಾರ್
ಬಗ್ಗಿ ನಡೆಯುತ್ತಿದ್ದು ದನ್ನು ನೋಡಿದ ಬಾಲಕನೊಬ್ಬ ಅಜ್ಜಿ ಏನು ಹುಡುಕುತ್ತಿದ್ದಿ, ಏನು ಕಳೆದುಕೊಂಡಿದ್ದಿ? ಎಂದು ಕೇಳಿದ.
ಆಕೆಯು ನನ್ನ ಬಾಲ್ಯ, ಯೌವ್ವನಗಳನ್ನು ಕಳೆದುಕೊಂಡಿದ್ದೇನೆ, ಅವನ್ನು ಹುಡುಕುತ್ತಿದ್ದೇನೆ ಎಂದು ಹೇಳಿದಳಂತೆ. ಕರೋನಾದ ಈ ಭೀಕರ ವರ್ಷ ಯೌವ್ವನಕ್ಕೆ ಬಂದ ಯುವಕರನ್ನ ಬಲಿತೆಗೆದುಕೊಳ್ಳುತ್ತಿರುವುದನ್ನು ನೋಡಿದರೆ, ಮುದುಕರು ಹೌಹಾರು ತ್ತಿದ್ದಾರೆ. ಕೋವ್ಯಾಕ್ಸಿನ್, ಕೋವಿಶೀಲ್ಡ್, ಮಾಸ್ಕ್, ಸ್ಯಾನಿಟೈಸ್ ಎಲ್ಲ ಪಾಲಿಸಿ ಮನೆಯ ಕೋಣೆ ಹಿಡಿದವರೂ ಕೂಡ ಅವ್ಯಕ್ತ ಭಯಕ್ಕೆ ಒಳಗಾಗುತ್ತಿದ್ದಾರೆ. ‘ಏ. ನಾನು ಸಾವಿಗೆ ಅಂಜೋದಿಲ್ಲೋ, ಹುಟ್ಟಿದವನು ಸಾಯಾಕಬೇಕು’ ಎಂದು ಗೆಳೆಯರ ಗುಂಪಿನಲ್ಲಿ ಗುಟುರು ಹಾಕುವವನು, ಒಬ್ಬನೇ ಇದ್ದಾಗ ದೇವರನ್ನು ನೆನೆದು ಕೈ ಮುಗಿಯುತ್ತಿದ್ದಾನೆ.
ವಯಸ್ಸು, ಪರಿಸ್ಥಿತಿ, ಸುತ್ತಲ ಪರಿಸರ, ಗೊತ್ತೇ ಇರದ ಸಾವಿನ ಬಗ್ಗೆ ನಿಗೂಢ ಭಯ ಹುಟ್ಟಿಸುತ್ತಿದೆ. ಕಾರಣ ಸುಮ್ಮನೇ ಕೂತಿ ದ್ದರೂ, ಮಲಗಿದ್ದರೂ ನಾವು ಚಲಿಸುತ್ತಿರುವುದು ಸಾವಿನ ಕಡೆಗೇ ಅಲ್ಲವೇ? ‘ನಾನು ಯಾರ ಮನೆಗೂ ಹೋಗೋನಲ್ಲ, ಹೋಗೋದು ಇಲ್ಲ’ ಅಂತ ಪ್ರತಿಜ್ಞೆ ಮಾಡಿದವರೂ, ಸಾವಿನ ಮನೆಗೆ ಹೋಗಲೇಬೇಕು. ಮಾಗಿದ ವಯಸ್ಸು, ಮಾಗಿದ ವಯಸ್ಸಿ ನವರಾದರೆ “It is on Inevitable end, the sooner the better ಎಂದುಕೊಳ್ಳುತ್ತಾರೆ. ಭರ್ತಿ ಹರೆಯ, ಕಣ್ಣು ತುಂಬಾ ಕನಸು ಹೊತ್ತಿರುವವರಿಗೆ ಇದು ನಿಜಕ್ಕೂ ಆಘಾತಕಾರಿಯಲ್ಲವೇ? ಆದಿಗುರು ಶ್ರೀಶಂಕರಾ ಚಾರ್ಯರು ಹೇಳುತ್ತಾರೆ ‘ಆಯುರ್ನ ಶ್ಯತಿ ಪಶ್ಯತಾಂ ಪ್ರತಿದಿನಂ ಯಾತಿ ಕ್ಷಯಂ ಯೌವ್ವನಂ| ಪ್ರತ್ಸಾಯಾಂತಿ ಗತಾಃ ಪುನರ್ನ ದಿವಸಾಃ ಕಾಲೋ ಜಗದ್ಭಕ್ಷಕಃ|’ (ನೋಡು ನೋಡುತ್ತಿದ್ದಂತೆಯೇ ಆಯಸ್ಸು, ಯೌವ್ವನ ಪ್ರತಿದಿನವೂ ಕಡಿಮೆಯಾಗುತ್ತದೆ.
ಕಳೆದು ಹೋದ ದಿನ, ಕ್ಷಣಗಳು ಮತ್ತೆಂದೂ ಬರುವುದಿಲ್ಲ. ಏಕೆಂದರೆ, ಕಾಲನೆಂಬುವವನು ಜಗದ್ಭಕ್ಷಕ. ಮುಂದುವರಿಯುತ್ತಾ
“ಲಕ್ಷ್ಮೀ ಸ್ತೋಯ ತರಂಗ ಭಂಗ ಚಪಲಾ ವಿದ್ಸುಚ್ಚಲಂ ಜೀವಿತಂ ತಸ್ಮಾನ್ ಮಾಂ ಶರಣಾಗತಂ ಶರಣದ ತ್ವಂ ರಕ್ಷ ರಕ್ತಾಧುನಾ||’ (ಇನ್ನು ನೀನು ನಂಬಿದ ಹಣದ ಒಡತಿ ಲಕ್ಷ್ಮೀಯೋ, ನೀರಿನ ಅಲೆಗಳಂತೆ ಚಂಚಲಳು, ಜೀವನವೋ, ಮಿಂಚಿನ ಸಂಚಲನದಂತೆ ಕ್ಷಣ ಮಾತ್ರದ್ದು ಅದಕ್ಕೆ ಸ್ವಾಮಿ ನನ್ನನ್ನು ಈಗಲೇ ರಕ್ಷಿಸು ಎಂದಿದ್ದಾರೆ.) ಈ ಹೃದಯಂಗಮ ಶ್ಲೋಕವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶನದ ರಾಜ್‌ಕುಮಾರ ಅಭಿನಯದ ಸಾಕ್ಷಾತ್ಕಾರ ಚಿತ್ರದಲ್ಲಿ ಬಳಸಿದ್ದಾರೆ.
ಪಿ.ಬಿ.ಶ್ರೀನಿವಾಸರ ಧ್ವನಿಯಲ್ಲಿ ಬಂದ ಈ ಹಿನ್ನೆಲೆಯ ಶ್ಲೋಕ ರಾಜ್ ಕುಮಾರರ ತಂದೆ ತೀರಿಕೊಂಡ ಸಂದರ್ಭದಲ್ಲಿ ಅವರ ಚಿತಾಭಸ್ಮವನ್ನು ನೀರಿನಲ್ಲಿ ಬಿಡುವ ಸನ್ನಿವೇಶದ ಹಿನ್ನೆಲೆಯಲ್ಲಿ ಈ ಶ್ಲೋಕ ಬರುತ್ತದೆ. ಆ ಧ್ವನಿ, ರಾಜ್‌ರ ಅಭಿನಯ ಈ
ಶ್ಲೋಕಕ್ಕೆ ವಿಶೇಷ ಗಾಂಭೀರ್ಯ ತಂದುಕೊಟ್ಟಿದೆ. ಜೀವನ ನಶ್ವರ ಎಂಬುದು ಶ್ಲೋಕ ಅರ್ಥವಾಗದವರಿಗೂ ಹಿನ್ನೆಲೆ ಸಂಗೀತ
ದಲ್ಲಿನ ಭಾವ ಜೀವನದ ನಶ್ವರತೆಯ ಬಗ್ಗೆ ಭಯ ಹುಟ್ಟಿಸುತ್ತದೆ.
ನಾವೂ ಈಗಲೇ ರಕ್ಷಿಸು, ಅಂದರೆ ‘ಕೊರೋನಾ ಬಂದಾಗಲೇ ರಕ್ಷಿಸು’ ಎಂದು ಬೇಡಿಕೊಳ್ಳುತ್ತಿದ್ದೇವೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ದೇವರಲ್ಲಿ ಭಕ್ತಿ, ಅರಣ್ಯ ರಕ್ಷಣೆ, ಗಿಡ ನೆಡುವುದು ಮಾಡುತ್ತಿದ್ದೇವೆ. ಇನ್ನು ನಮಗಿಂತ ದೊಡ್ಡವರಾದ (ಗುಣದಲ್ಲಿ ಅಲ್ಲ) ರಾಜಕಾರಣಿಗಳು, ಬಂಡವಾಳ ಶಾಹಿಗಳು, ಯುದ್ಧಕಾಲದಲ್ಲಿ ಮಾರಲು ಬಂದೂಕ, ಗುಂಡು, ಬಾಂಬ್ ಗಳನ್ನು ತಯಾರು ಮಾಡಿಟ್ಟುಕೊಂಡವರು, ನಿಂತ ನೆಲವನ್ನೇ ಟೊಳ್ಳು ಮಾಡಿಕೊಂಡವರು ರಕ್ಷಿಸು ಎಂದು ಬೇಡಿಕೊಂಡರೆ, ರಕ್ಷಿಸಲು ಬರುವ ಆ ದೇವರು ನೀವು ಮಾಡಿಸಿದ ಇನ್ಸೂರೆನ್ಸ್ ಪಾಲಿಸಿಯಲ್ಲ, ಏಕೆಂದರೆ ಸುತ್ತಲ ಪರಿಸರ ರಕ್ಷಣೆ ಎಂಬ ಪ್ರೀಮಿಯಂ ಎಂಬುದನ್ನೇ ನೀವು ಕಟ್ಟಿಲ್ಲ.
ಇಷ್ಟು ವರ್ಷ ಹೇಗೆಲ್ಲ ಬದುಕಿದ್ದೆವು ಎಂಬುದನ್ನೇ ಮರೆಸಿದ ಕರೋನಾ, ನಮಗೆ ನಡೆಯಲು ಇನ್ನೂ ಕಾಲುಗಳೇ ಬಂದಿಲ್ಲ
ಎಂಬಂತೆ, ಮನೆಯವರು, ಎದುರು ಮನೆಯವರು, ಅಕ್ಕಪಕ್ಕದವರು ನಾವು ಬೀದಿಗೆ ಬಂದರೆ ಸಾಕು ‘ನಡೀರಿ, ನಡೀರಿ ಒಳಗ ನಡೀರಿ ಸಾರ್, ಎನ್ನುತ್ತಿದ್ದಾರೆ. ಆಟವಾಡಿ ಬಂದು ಹಾಗೇ ಮಣ್ಣಿನ ಕೈಗಳನ್ನು ಊಟದ ತಟ್ಟೆಗೆ ಹಾಕಿದರೆ ‘ಕೈ ತೊಳಕೋ ಕಾಲು ತೊಳಕೋ’ ಅನ್ನುತ್ತಿದ್ದ ತಾಯಿಯಂತೆ, ‘ಮನೆಯ ಪ್ರತಿಯೊಬ್ಬರೂ ಕೈ, ಕಾಲು ತೊಳದೇ ಒಳಗೆ ಬರ್ರಿ’ ಎಂದು ಅರಚುತ್ತಿದ್ದಾರೆ. ಅಂದು ನಮಗೇನು ಆಗುತ್ತದೋ ಎಂಬ ಕಾಳಜಿ ತಾಯಿಗಿತ್ತು, ಇಂದು? ನಮಗೆಲ್ಲಿ ಇದನ್ನು ಹಚ್ಚಿಬಿಡುತ್ತಾನೋ ಎಂಬ ಅಂಜಿಕೆ ಉಳಿದವರಿಗೆ.