Sunday, 23rd June 2024

ಕ್ರಾಂತಿ ಹಾಡಬೇಕಿದ್ದ ಆಪ್‌ನ ಈ ನಡೆ ಅನಿರೀಕ್ಷಿತ

ಅಶ್ವತ್ಥಕಟ್ಟೆ

ranjith.hoskere@gmail.com

ಜನಸಾಮಾನ್ಯರ ಪಕ್ಷವೆಂದು ಅಽಕಾರಕ್ಕೆ ಬಂದ ಆಪ್ ಈ ವಿಷಯದಲ್ಲಿ ಕನಿಷ್ಠ ಸಾಮಾನ್ಯ ಜ್ಞಾನ ಬಳಸಿದ್ದರೂ ಈ ಪ್ರಮಾಣದ ಡ್ಯಾಮೇಜ್ ಆಗುತ್ತಿರಲಿಲ್ಲ.
ಆದರೆ ಬಿಭವ್‌ನನ್ನು ಕೆಲಸದಿಂದ ಕಿತ್ತುಹಾಕಿದರೆ, ಪಕ್ಷಕ್ಕೆ ಏನೆಲ್ಲ ನಷ್ಟವಾಗುವುದೋ ಎನ್ನುವ ಆತಂಕದ ರೀತಿಯಲ್ಲಿ ಆಪ್ ನಾಯಕರು ನಡೆದುಕೊಂಡರು.

ದೇಶದ ಭ್ರಷ್ಟಾಚಾರದ ವಿರುದ್ಧ ಹೋರಾಡಿಕೊಂಡು ಇಡೀ ದೇಶಾದ್ಯಂತ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಅಣ್ಣಾ ಹಜಾರೆ ಅವರ ಹೋರಾಟದ ಕೂಸಾಗಿ, ರಾಜಕೀಯಕ್ಕೆ ಧುಮಕಿದ ‘ಆಮ್ ಆದ್ಮಿ ಪಕ್ಷ’ ಭಾರತೀಯ ರಾಜಕೀಯ ವ್ಯವಸ್ಥೆಗೆ ದಶಕದ ಹಿಂದೆ ಹೊಸ ‘ಬೆಳಕಾಗಿ’ ಕಂಡಿತ್ತು. ಭಾರತದಲ್ಲಿರುವ
ಸಾಂಪ್ರದಾಯಿಕ ಪಕ್ಷಗಳ ಸಿದ್ಧಾಂತ, ಚಿಂತನೆ ಹಾಗೂ ಕಾರ್ಯವೈಖರಿಗೆ ಭಿನ್ನವಾಗಿ, ವಿಭಿನ್ನ ಆಲೋಚನೆಗಳೊಂದಿಗೆ ರಾಜಕೀಯಕ್ಕೆ ಧುಮುಕಿದ ಆಪ್‌ನ ಮೊದಲ ಪ್ರಯತ್ನದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿಯ ಮಂದಿ ‘ಅಪ್ಪುಗೆಯ ಒಪ್ಪುಗೆ’ ನೀಡಿ ಅಧಿಕಾರವನ್ನು ನೀಡಿದ್ದರು.

ಸ್ವಾತಂತ್ರ್ಯ ನಂತರ ಭಾರತದಲ್ಲಿನ ಸಾಂಪ್ರದಾಯಿಕ ರಾಜಕೀಯ ಪಕ್ಷಗಳನ್ನು ನೋಡಿಕೊಂಡು ಬಂದಿದ್ದ ಬಹುತೇಕರಿಗೆ, ಆಮ್ ಆದ್ಮಿ ಅಂದರೆ ‘ಜನ ಸಾಮಾನ್ಯ’ ಎನ್ನುವ ಹೆಸರೊಂದಿಗೆ ರಾಜಕೀಯ ಅಖಾಡಕ್ಕೆ ಇಳಿದಾಗ, ಇವರಿಂದ ಬದಲಾವಣೆ ಸಾಧ್ಯ ಎನ್ನುವ ನಿರೀಕ್ಷೆ ಅನೇಕರಲ್ಲಿತ್ತು. ಇದಕ್ಕೆ ಪೂರಕವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡಿಕೊಂಡು ಬಂದಿದ್ದ ಅಣ್ಣಾ ಹಜಾರೆ ಚಳವಳಿಯಲ್ಲಿ ಪಾತ್ರವಹಿಸಿದ್ದ, ಅಣ್ಣ ಹಜಾರೆ ಅವರಿಗೆ ಆಪ್ತರಾಗಿದ್ದ, ಐಐಟಿಯಲ್ಲಿ ಎಂಜಿನಿಯರಿಂಗ್ ಮುಗಿಸಿ ಕೊಂಡು ಎಲ್ಲರಂತೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಹಿಡಿದರು. ಬಳಿಕ ‘ಕಪ್ ಆಫ್ ಟೀ’ ಇದಲ್ಲ ಎನ್ನುವುದು ಅರಿವಾಗುತ್ತಿದ್ದಂತೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಆರ್‌ಎಸ್ ಆಗಿ, ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾಗಿದ್ದರು.

ಬಳಿಕ ಅಲ್ಲಿಗೆ ರಾಜೀನಾಮೆ ನೀಡಿ, ಅಣ್ಣಾ ಹಜಾರೆ ಚಳವಳಿಯಲ್ಲಿ ತೊಡಗಿಸಿಕೊಂಡ, ಕೇಜ್ರಿವಾಲ್ ಆಪ್ ಸ್ಥಾಪಿಸಬೇಕೆಂದ ‘ಕ್ರೇಜಿ’ ಐಡಿಯಾ ಯೋಚಿಸಿದಾಗ, ಕೆಲವರು ಮೂಗು ಮುರಿದರೆ, ಲಕ್ಷಾಂತರ ಯುವಕರು ಕೇಜ್ರಿವಾಲ್‌ರ ಈ ಕ್ರೇಜಿ ಐಡಿಯಾದಿಂದ ಭಾರತ ಬದಲಾಗುತ್ತದೆ ಎನ್ನುವ ವಿಶ್ವಾಸದಲ್ಲಿ ಅವರಿಗೆ ಬೆನ್ನೆಲು ಬಾಗಿ ನಿಂತಿದ್ದರು. ಬಳಿಕ ೨೦೧೨ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದರು. ಆದರೆ ಅತಂತ್ರ ಸ್ಥಿತಿಯಲ್ಲಿದ್ದರಿಂದ ೨೦೧೫ಕ್ಕೆ ಮಧ್ಯಂತರ ಚುನಾವಣೆ ನಡೆಯಿತು. ಆ ಸಮಯ ದಲ್ಲಿ ದೆಹಲಿಯ ೭೦ ಕ್ಷೇತ್ರದ ಪೈಕಿ ೬೭ ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಅಕ್ಷರಶಃ ‘ಕ್ಲೀನ್ ಸ್ವೀಪ್’ ಮಾಡಿ, ದೆಹಲಿಯ ಅಧಿಕಾರದ ಗದ್ದುಗೆ ಹಿಡಿದರು.

ಹಾಗೇ ನೋಡಿದರೆ, ಅರವಿಂದ ಕ್ರೇಜಿವಾಲ್ ಅವರ ಈ ಹೋರಾಟದ ಸಮಯದಲ್ಲಿ ಬೆನ್ನಿಗೆ ನಿಂತವರು, ಬಹುತೇಕರು ರಾಜಕೀಯಕ್ಕೆ ಹೊಸಬರು ಎನ್ನುವುದನ್ನು ಮರೆಯ ಬಾರದು. ಅವರೊಂದಿಗಿದ್ದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಮನಿಷ್ ಸಿಸೋಡಿಯಾ ಸೇರಿದಂತೆ ಜತೆಯಲ್ಲಿದ್ದವರೆಲ್ಲ ಪ್ರಜ್ಞಾವಂತರೇ ಹೆಚ್ಚಿದ್ದರು. ಇಡೀ ತಂಡಕ್ಕೆ ರಾಜಕೀಯ ಹೊಸದಾದರೂ, ಜನರು ಮಾತ್ರ ಎಲ್ಲರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಬದಲಾವಣೆಯ ಹರಿಹಾಕರರು ಎಂದುಕೊಂಡೇ ಜನ ಅವರನ್ನು ಸ್ವಾಗತಿಸಿದರು. ಆಮ್ ಆದ್ಮಿ ಪಕ್ಷದ ಮೊದಲ ಐದು ವರ್ಷದ ಆಡಳಿತವನ್ನು ಗಮನಿಸಿದ ಬಹುತೇಕರಿಗೆ ಅನಿಸಿದ್ದು, ‘ಮುಂದೊಂದು ದಿನ ದೇಶ
ದಲ್ಲಿ ಬದಲಾವಣೆ ತರುತ್ತಾರೆ’ ಎಂದು.

ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಬಯಸುತ್ತಿದ್ದ ಜನರ ಮನಸ್ಸು ಅರಿತ ಆಪ್ ತನ್ನ ವಿಸ್ತರಣೆಯನ್ನು ದೆಹಲಿಯಿಂದ ಗೋವಾ, ಪಶ್ಚಿಮ ಬಂಗಾಳದತ್ತ ಮುಖಮಾಡಿತ್ತು. ಈ ಎರಡೂ ರಾಜ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೂ, ತಮ್ಮ ಬಾವುಟ ಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಆಪ್‌ಗೆ ನಿಜವಾದ ಬ್ರೇಕ್ ಕೊಟ್ಟಿದ್ದು ಪಂಬಾಜ್ ರಾಜ್ಯ. ಪಂಚರಾಜ್ಯ ಚುನಾವಣೆ ಸಮಯದಲ್ಲಿ ಪಂಬಾಜ್‌ನಲ್ಲಿ ಕಾಂಗ್ರೆಸ್ ಅನ್ನು ಧೂಳಿಪಟ ಮಾಡಿ, ಅಲ್ಲಿಯೂ ಕಾಮಿಡಿಯನ್, ಗಾಯಕ
ನಾಗಿದ್ದ ಮಾನ್ ಸಿಂಗ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದ ಆಪ್‌ನ ನಡೆ ನಿಜಕ್ಕೂ ಬಹುತೇಕರಿಗೆ ಅಚ್ಚರಿ ತಂದಿದೆ.

ಕಳೆದ ಒಂದುವರೆ ದಶಕದಲ್ಲಿ ಆಮ್ ಆದ್ಮಿ ಪಕ್ಷ ನಡೆದು ಬಂದ ದಾರಿಯನ್ನು ನೋಡಿದರೆ ಅಚ್ಚರಿಯಾಗುವುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್, ಬಿಜೆಪಿಯ ಬಳಿಕ ಸದ್ಯ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಉಳಿಸಿಕೊಂಡಿರುವ ಪಕ್ಷಗಳಲ್ಲಿ ಆಮ್ ಆದ್ಮಿ ಪಕ್ಷವೂ ಒಂದಾಗಿದೆ. ಆದರೆ ವಿಷಯ ಕೇವಲ ಇಲ್ಲಿಗೆ ನಿಂತಿದ್ದರೆ, ಆಪ್ ಇಂದಿನ ಅಂಕಣದ ವಿಷಯವಾಗಿರಲಿಲ್ಲ. ಆದರೆ ೨೦೨೦ರಲ್ಲಿ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ೬೨ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಽಕಾರದ ಗದ್ದುಗೆ ಏರಿದ ಬಳಿಕ, ನಡೆದಿರುವ ಘಟನಾವಳಿಗಳೇ ಈ ಅಂಕಣಕ್ಕೆ ಕಾರಣವಾಗಿದೆ.

ಹಾಗೇ ನೋಡಿದರೆ, ಅಧಿಕಾರಕ್ಕೆ ಬರುವಾಗಲೇ ಸ್ಪಚ್ಛ ಆಡಳಿತದ ಹೆಗ್ಗುರುತಿನೊಂದಿಗೆ ಬಂದ ಆಪ್ ಆರಂಭಿಕ ಐದು ವರ್ಷಗಳ ಕಾಲ ಇದರಲ್ಲಿ ಯಶಸ್ವಿಯೂ ಆಯಿತು. ಇದರೊಂದಿಗೆ ದೆಹಲಿಯಲ್ಲಿ ಉಚಿತ ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್ ಎನ್ನುವ ಹತ್ತು ಹಲವು ಯೋಜನೆಗಳ ಮೂಲಕ ‘ದೆಹಲಿ ಮಾದರಿ’ ಎನ್ನುವ ಆಡಳಿತ ಎನ್ನುವ ಅದ್ಭುತ ಕಲ್ಪನೆಯನ್ನು ದೇಶಕ್ಕೆ ನೀಡಿದ್ದು ಇದೇ ಆಪ್. ಆದರೆ ಪೂರ್ಣ ಪ್ರಮಾಣದಲ್ಲಿ ಎರಡನೇ ಅವಽಗೆ ಅಧಿಕಾರದ ಗದ್ದುಗೆ ಏರಿದ ಬಳಿಕ, ಎಲ್ಲ ರಾಜಕೀಯ ಪಕ್ಷಗಳಂತೆ ಆಪ್ ನಲ್ಲಿಯೂ, ವೈಯಕ್ತಿಕ ಹಿತಾಸಕ್ತಿ, ಅಧಿಕಾರದ ತಿಕ್ಕಾಟ, ಭ್ರಷ್ಟ್ರಾಚಾರದ ಆರೋಪ ಸಣ್ಣ ಪ್ರಮಾಣದಲ್ಲಿ ಕೇಳಿಬರಲು ಶುರುವಾಗಿತ್ತು.

ಆಪ್ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮೊದಲಿಗೆ ಕೇಳಿಬಂದಿದ್ದು, ಕರೋನಾ ಸಮಯದಲ್ಲಿ. ಇಡೀ ದೇಶದಲ್ಲಿ ಆಕ್ಸಿಜನ್ ಸಮಸ್ಯೆ ತಲೆತೋರಿದ್ದರಿಂದ, ಎರಡು ಮೂರು ಪಟ್ಟು ಹಣ ಕೊಟ್ಟು ಸರಕಾರಗಳು ಆಕ್ಸಿಜನ್ ಖರೀದಿ ಮಾಡುತ್ತಿದ್ದವು. ಈ ವೇಳೆ ದೆಹಲಿಯಲ್ಲಿ ಆಕ್ಸಿಜನ್ ಸ್ಕ್ಯಾಮ್ ನಡೆಸಲಾಗಿದೆ ಎಂದು ಸರಕಾರದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಈ ಆರೋಪ ಜನರ ಮನಸ್ಸಿನಲ್ಲಿ ಉಳಿಯುವ ಮೊದಲೇ, ‘ಹಾರಿ ಹೋಗಿದ್ದರಿಂದ’ ಆಪ್‌ನ ಮೇಲಿನ ವಿಶ್ವಾಸ ಹಾಗೇ ಉಳಿದಿತ್ತು.

ಆದರೆ ಇದಾದ ಬಳಿಕ ಕಳೆದೆರೆಡು ವರ್ಷದಿಂದ ಬಹುದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪಕ್ಷದ ‘ವಿಶ್ವಾಸ’ಕ್ಕೆ ಘಾಸಿಗೊಳಿಸಿದ್ದು ಮಾತ್ರ ‘ಅಬಕಾರಿ ಹಗರಣ’. ತಮಗೆ ಬೇಕಾದವರಿಗೆ ಅಬಕಾರಿ ಲೈಸೈನ್ಸ್ ನೀಡಿ, ಭಾರಿ ಪ್ರಮಾಣದ ಹಣವನ್ನು ಪಡೆದಿರುವ ಆರೋಪ ಆಪ್ ಸರಕಾರದ ವಿರುದ್ಧ ಕೇಳಿಬಂದಾಗ ಬಹುತೇಕರು ಇದೊಂದು ‘ರಾಜಕೀಯ ಪಿತೂರಿ’ ಎಂದೇ ಭಾವಿಸಿದ್ದರು. ಆದರೆ ಅದಾದ ಬಳಿಕ, ಅರವಿಂದ ಕೇಜ್ರಿವಾಲ್ ಅವರ ಥಿಂಕ್ ಟ್ಯಾಂಕ್‌ನ ಪ್ರಮುಖ
ನಾಯಕ, ಡಿಸಿಎಂ ಮನೀಶ್ ಸಿಸೋಡಿಯಾ ವಿರುದ್ಧ ಆರೋಪ ಕೇಳಿಬಂದಾಗಲೂ ಇದು ಫೇಕ್ ಕೇಸ್ ಎಂದೇ ಅನೇಕರು ಭಾವಿಸಿದ್ದರು.(ಈಗಲೂ ಆಪ್ ನಾಯಕರು ಇದೇ ವಾದವನ್ನು ಮಂಡಿಸುತ್ತಿದ್ದಾರೆ ಎನ್ನುವುದು ಬೇರೆ ಮಾತು).

ಇದೇ ಪ್ರಕರಣದಲ್ಲಿ ಆಪ್ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ಪ್ರಮುಖ  ಆರೋಪಿ ಎನ್ನುವ ಆರೋಪ ಕೇಳಿಬಂದು, ಸಾಲು ಸಾಲು
ನೋಟಿಸ್‌ಕೊಟ್ಟರೂ ಇ.ಡಿ ವಿಚಾರಣೆ ಹಾಜರಾಗದೇ ತಪ್ಪಿಸಿಕೊಂಡು ಓಡಾಡಿದ್ದು, ಬಳಿಕ ಕಾನೂನಾತ್ಮಕವಾಗಿ ‘ಅವಕಾಶ’ವೇ ಇಲ್ಲ ಎಂದ ಬಳಿಕ ಶರಣಾಗಿದ್ದು, ಆಪ್‌ನ್ನು ನಂಬಿದ್ದ ಅನೇಕರಿಗೆ ಅರಗಿಸಿಕೊಳ್ಳಲು ಕಷ್ಟವಾಯಿತು. ನಾವು ಬಂದಿರೋದು ಜನ ಸೇವೆಗೆ ಹೊರತು, ಅಧಿಕಾರಕ್ಕಾಗಿ ಅಲ್ಲ ಎನ್ನುವ ಮಾ ತನ್ನು ಆಡಿದ್ದ ಕೇಜ್ರಿವಾಲ್ ಅವರು ಜೈಲಿನಿಂದಲೇ ಆಡಳಿತ ನಡೆಸಲು ಮುಂದಾಗಿದ್ದು, ಅದನ್ನು ಆಪ್ ನಾಯಕರು ಸಮರ್ಥಿಸಿಕೊಳ್ಳಲು ಶುರು ಮಾಡಿದ ಬಳಿಕವೇ ತಿಳಿದಿದ್ದು, ಆಮ್ ಆದ್ಮಿ ಪಕ್ಷವೂ ದೇಶದಲ್ಲಿರುವ ಇತರೆ ಪಕ್ಷಗಳಿಗಿಂತ ‘ಭಿನ್ನವಾಗಿಲ್ಲ’ವೆಂದು.

ಈ ಎಲ್ಲ ಹೈಡ್ರಾಮಗಳ ನಡುವೆ ಇ.ಡಿ. ಸುಪ್ರೀಂ ಕೋರ್ಟ್ ವಿಚಾರಣೆಗೆ ವೇಳೆ ಮಂಡಿಸಿದ ಒಂದೊಂದೇ ಅಂಶಗಳು, ‘ಸ್ವಚ್ಛ’ ಪಕ್ಷವೆಂದುಕೊಂಡಿದ್ದ ಆಪ್‌ನಲ್ಲಿ ಇದೆಲ್ಲ ಸಾಧ್ಯವೇ ಎನ್ನುವ ಅಚ್ಚರಿ ಅನೇಕರಿಗೆ ಕಾದಿತ್ತು. ಆದರೆ ಈ ಎಲ್ಲಕ್ಕೂ ಮಿಗಿಲಾಗಿ ಕಳೆದೊಂದು ವಾರದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಿಎ ಬಿಭವ್ ಕುಮಾರ್, ತಮ್ಮದೇ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರೊಂದಿಗೆ ನಡೆದುಕೊಂಡು ರೀತಿ ಹಾಗೂ ಈ ಆರೋಪ ಕೇಳಿಬಂದ ಬಳಿಕ ಪಕ್ಷದ ನಾಯಕರು ನಡೆದುಕೊಂಡ ರೀತಿಯನ್ನು ಗಮನಿಸಿದಾಗ ‘ಟಿಪಿಕಲ್’ ರಾಜಕಾರಣಿಗಳಂತೆ ನಡೆದುಕೊಂಡಿರುವುದು ಸ್ಪಷ್ಟ. ಹಾಗೇ ನೋಡಿದರೆ ಈ ಪ್ರಕರಣದಲ್ಲಿ ಪಕ್ಷದ್ದೇನು ತಪ್ಪಿಲ್ಲ.

ದೌರ್ಜನ್ಯಕ್ಕೆ ಒಳಗಾದ ಸ್ವಾತಿ ಮಲಿವಾಲ್ ಸಹ ಎಲ್ಲಿಯೂ ಆಪ್ ವಿರುದ್ಧ ಆರೋಪ ಮಾಡಿಲ್ಲ. ಆದರೆ ಆಪ್ ಮುಖ್ಯಸ್ಥನ ಪಿಎ ವಿರುದ್ಧ ಮಾಡಿದ್ದ ಆರೋಪಕ್ಕೆ, ಅರವಿಂದ ಕೇಜ್ರಿವಾಲ್ ಹಾಗೂ ಅವರ ತಂಡ ನಡೆದುಕೊಂಡ ರೀತಿ ಅನೇಕರ ಕೆಂಗಣ್ಣಿಗೆ ಗುರಿಯಾಯಿತು. ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಗಂಭೀರ ಆರೋಪ ಹೊತ್ತಿರುವ ಬಿಭವ್ ಮೇಲೆ ಕೇಳಿಬಂದಿದ್ದ ಆರೋಪದ ಸತ್ಯವೋ, ಸುಳ್ಳೋ ಎನ್ನುವು ತನಿಖೆ ಮುಗಿಯುವ ತನಕವಾದರೂ, ನಾಯಕರು ಆತನನ್ನು ದೂರವಿಟ್ಟಿದ್ದರೆ, ಕೊಂಚ ಮರ್ಯಾದೆ ಉಳಿಯುತ್ತಿತ್ತು. ಆದರೆ ಅದನ್ನು ಮಾಡದೇ, ಕರ್ನಾಟಕದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾಡಿರುವ ಪೆನ್‌ಡ್ರೈವ್
ಹಗರಣದ ಬಗ್ಗೆ ಮಾತಾನಾಡುವ ಆಪ್ ನಾಯಕರು, ದೆಹಲಿಯ ಮುಖ್ಯಮಂತ್ರಿಗಳ ನಿವಾಸದಲ್ಲಿ ಸಿಎಂ ಪಿಎಯಿಂದ ಮಹಿಳೆ, ಅದರಲ್ಲಿಯೂ ರಾಜ್ಯಸಭಾ
ಸದಸ್ಯೆ ಅದಕ್ಕೂ ಮಿಗಿಲಾಗಿ ದೆಹಲಿ ಮಹಿಳಾ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿರುವ ಸ್ವಾತಿ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುತ್ತೀರಾ
ಎನ್ನುವುದಾದರೆ, ಇತರೆ ರಾಜಕೀಯ ಪಕ್ಷಗಳಿಗೂ ನಿಮಗಿರುವ ವ್ಯತ್ಯಾಸವಾದರೂ ಏನು? ಜನಸಾಮಾನ್ಯರ ಪಕ್ಷವೆನ್ನುವ ಬ್ರ್ಯಾಂಡ್‌ನೊಂದಿಗೆ ಅಧಿಕಾರಕ್ಕೆ ಬಂದ ಆಪ್ ಈ ವಿಷಯದಲ್ಲಿ ಕನಿಷ್ಠ ಸಾಮಾನ್ಯ ಜ್ಞಾನ ಬಳಸಿದ್ದರೂ ಈ ಪ್ರಮಾಣದ ಡ್ಯಾಮೇಜ್ ಆಗುತ್ತಿರಲಿಲ್ಲ.

ಆದರೆ ಬಿಭವ್‌ನನ್ನು ಕೆಲಸದಿಂದ ಕಿತ್ತುಹಾಕಿದರೆ, ಪಕ್ಷಕ್ಕೆ ಏನೆಲ್ಲ ನಷ್ಟವಾಗುವುದೋ ಎನ್ನುವ ಆತಂಕದ ರೀತಿ ಯಲ್ಲಿ ಆಪ್ ನಾಯಕರು ನಡೆದುಕೊಂಡರು. ವಿಷಯವನ್ನು ಅಲ್ಲಿಗೆ ನಿಲ್ಲಿಸಿದೇ, ಹಲ್ಲೆಗೊಳಗಾಗಿರುವ, ತಮ್ಮದೇ ಪಕ್ಷದ ರಾಜ್ಯಸಭಾ ಸದಸ್ಯೆಯನ್ನು ಅವಮಾನಿಸುವ ಮೂಲಕ ‘ಆಪ್’ ಮೇಲಿರಿಸಿದ್ದ ಅನೇಕರ ನಂಬಿಕೆಗೆ ಧಕ್ಕೆ ತಂದಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಕ್ಕ ಬಳಿಕ, ಅದರಲ್ಲಿಯೂ ಈ ಎಲ್ಲ ಘಟನಾವಳಿಗಳಲ್ಲಿ ನಡೆದುಕೊಂಡಿರುವ ರೀತಿಯನ್ನು ಆಪ್ ಅಲ್ಲದೇ ಇನ್ಯಾವುದೇ ಪಕ್ಷ
ಅಥವಾ ಇನ್ಯಾರೋ ರಾಜಕೀಯ ನಾಯಕರು ನಡೆದುಕೊಂಡಿದ್ದರೆ, ಯಾರಿಗೂ ಆಘಾತವಾಗುತ್ತಿರಲಿಲ್ಲ. ಏಕೆಂದರೆ ದೇಶದಲ್ಲಿರುವ ಬಹುತೇಕ ಪಕ್ಷಗಳ ‘ಗೋಳು’ ಎಲ್ಲರಿಗೂ ತಿಳಿದು ಹೋಗಿದೆ. ಆದರೆ ರಾಜಕೀಯ ವ್ಯವಸ್ಥೆವನ್ನೇ ಬದಲಾಯಿಸುವ ವಿಭಿನ್ನ, ಕ್ರಾಂತಿಕಾರಕ ರೀತಿಯಲ್ಲಿ ಪಕ್ಷ ಧುಮುಕಿದ ಆಪ್‌ನಿಂದ ‘ಟಿಪಿಕಲ್ ರಾಜಕೀಯ ಪಕ್ಷ’ ವರ್ತನೆ ಆಘಾತಕ್ಕೆ ಕಾರಣವಾಗಿದೆ. ಆಮ್ ಆದ್ಮಿಯನ್ನು ಘೋಷಿಸಿದ ಕ್ಷಣ ರಾಜಕೀಯ ವ್ಯವಸ್ಥೆಯಲ್ಲಿ ‘ಹೊಸ ಆಲೋಚನೆ’ ಬರಲಿದೆ ಎನ್ನುವ ಉತ್ಸಾಹದಲ್ಲಿ ಅನೇಕ ಯುವ ಮನಸ್ಸುಗಳಿಗೆ ಇಂದಿನ ಆಪ್ ನಾಯಕರ ಒಂದೊಂದು ಮಾತು, ಭ್ರಮನಿರಸವಾಗಿದೆ ಎಂದರೆ ತಪ್ಪಾಗುವುದಿಲ್ಲ.

ಭಾರತದ ರಾಜಕೀಯ ವ್ಯವಸ್ಥೆಯನ್ನು ಶುಚಿಗೊಳಿಸುವ ನಿಟ್ಟಿನಲ್ಲಿ ‘ಪೊರಕೆ’ಯೊಂದಿಗೆ ಬಂದ ಆಪ್, ಮೂರರಲ್ಲಿ ಮತ್ತೊಂದು ಪಕ್ಷವಾಗಿ ರಾಜಕೀಯವನ್ನೇ ಉಸಿರಾಡಿಸಿಕೊಂಡು ಓಡಾಡಿದ್ದು ಮಾತ್ರ ದುರಂತವೇ ಸರಿ!

Leave a Reply

Your email address will not be published. Required fields are marked *

error: Content is protected !!