Thursday, 12th December 2024

ಜಾಣನಾಗುವೆಡೆಗಿನ ಮೊದಲ ಹೆಜ್ಜೆ

ಹಿಂದಿರುಗಿ ನೋಡಿದಾಗ

ಇಂದಿಗೆ ಸುಮಾರು ೨೫ ಲಕ್ಷ ವರ್ಷಗಳ ಹಿಂದಿನ ಮಾತು. ಭೂಮಿಯ ಮೇಲೆ ಅಂದು ಬದುಕಿದ್ದ ಎಲ್ಲ ಜೀವರಾಶಿಗಳಲ್ಲಿ ಬಹುಶಃ ನಮ್ಮ ಪೂರ್ವಜನೇ ಅತ್ಯಂತ ಸಾಮಾನ್ಯ ಹಾಗೂ ದುರ್ಬಲ ಜೀವಿಯಾಗಿದ್ದಿರಬೇಕು. ನಮ್ಮ ಪೂರ್ವಜರಲ್ಲಿ ತಮ್ಮ ವಾಸಕ್ಕೆ ಮನೆಗಳನ್ನು ಕಟ್ಟಿಕೊಳ್ಳಬೇಕು ಎಂಬ ಪ್ರಜ್ಞೆಯಿನ್ನೂ ಉದಯಿಸಿ ರಲಿಲ್ಲ. ಹಾಗಾಗಿ ಕೃಷಿಯಾಗಲಿ, ಪಶುಪಾಲನೆಯಾಗಲಿ ದೂರದ ಮಾತಾಗಿತ್ತು. ನಮ್ಮ ಪೂರ್ವಜರು ಮರಗಳ ಮೇಲೆ ವಾಸಿಸುತ್ತಿದ್ದರು. ಅವರ ಪ್ರಧಾನ ಆಹಾರವು ಮರಗಳಲ್ಲಿರುವ ಹಣ್ಣು, ಕಾಯಿಗಳಾಗಿದ್ದವು.

ಸುತ್ತಮುತ್ತಲೂ ಯಾವ ಹಿಂಸ್ರಪಶುಗಳೂ ಇಲ್ಲ, ಎಲ್ಲವೂ ಪ್ರಶಾಂತವಾಗಿದೆ ಎಂದು ಭಾಸವಾದಾಗ ನಮ್ಮ ಪೂರ್ವಜರು ಎಚ್ಚರಿಕೆಯೊಡನೆ ಮರದಿಂದ ಕೆಳಕ್ಕೆ ಇಳಿಯುತ್ತಿದ್ದರು. ಒಂದಷ್ಟು ಗಿಡಗಳನ್ನು ಬೇರು ಸಮೇತ ಕಿತ್ತು, ಅದರಲ್ಲಿರುವ ಗಡ್ಡೆಗಳನ್ನು ಎತ್ತಿಕೊಂಡು ಓಡೋಡಿ ಹೋಗಿ ಮರವನ್ನು ಹತ್ತಿ ಕುಳಿತುಕೊಳ್ಳು ತ್ತಿದ್ದರು. ನಂತರ ಸಾವಕಾಶವಾಗಿ, ಆ ಗಡ್ಡೆಗಳಿಗೆ ಮೆತ್ತಿದ್ದ ಮಣ್ಣನ್ನೆಲ್ಲ ಕೊಡವಿ ಹಸಿಹಸಿ ಗಡ್ಡೆಯನ್ನು ಹಾಗೆಯೇ ತಿನ್ನುತ್ತಿದ್ದರು. ಆ ಗಡ್ಡೆಗಳು ತಿನ್ನಲು ರುಚಿಯಾಗೇನೂ ಇರುತ್ತಿರಲಿಲ್ಲ. ಆದರೆ ಹೊಟ್ಟೆ ಹಸಿವು ಕೇಳಬೇಕಲ್ಲ… ಹಾಗಾಗಿ ಕೈಗೆ ಸಿಕ್ಕ ಗಡ್ಡೆ ಗೆಣಸುಗಳನ್ನು ತಿಂದು ಹೊಟ್ಟೆ ಹೊರೆಯುತ್ತಿದ್ದರು.

ನಮ್ಮ ಪೂರ್ವಜರು ಮರದ ಮೇಲೆ ಸುರಕ್ಷಿತವಾಗಿದ್ದಾಗ, ಕೆಳಗೆ ಹಿಂಸ್ರಪಶುಗಳಾದ ಸಿಂಹ, ಹುಲಿ ಮುಂತಾದವು ಜಿರಾಫೆಯನ್ನೋ ಇಲ್ಲವೇ ಕಾಡೆಮ್ಮೆಯನ್ನೋ ಬೇಟೆ ಯಾಡುತ್ತಿದ್ದವು. ಅವರಿಗೆ ಸಿಂಹವನ್ನಾಗಲಿ ಅಥವಾ ಹುಲಿಯನ್ನಾಗಲಿ ಓಡಿಸಿ, ಅವು ಬೇಟೆಯಾಡಿದ್ದ ಪ್ರಾಣಿಯನ್ನು ಕಸಿದುಕೊಳ್ಳುವ ಧೈರ್ಯವಿರಲಿಲ್ಲ. ಎಲ್ಲಿಯಾದರೂ ಸಿಂಹ ಅಥವಾ ಹುಲಿಯ ಗರ್ಜನೆಯನ್ನು ಕೇಳಿದರೆ ಸಾಕು, ತಕ್ಷಣವೇ ನಾಗಾಲೋಟದಿಂದ ಓಡಿ ಮರವನ್ನು ಹತ್ತಿಕೊಂಡು ಜೀವವನ್ನು ಉಳಿಸಿಕೊಳ್ಳುತ್ತಿದ್ದರು. ಹಾಗಾಗಿ ಕಾಡಿನಲ್ಲಿದ್ದ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಪ್ರಾಣಿಗಳ ದೃಷ್ಟಿಯಲ್ಲಿ ಮನುಷ್ಯನೊಬ್ಬ ಯಃಕಶ್ಚಿತ್ ಜೀವಿಯಾಗಿದ್ದ ಅಷ್ಟೆ. ನಮ್ಮ ಪೂರ್ವಜರು ಮರದ ಮೇಲೆ ಕುಳಿತುಕೊಂಡು, ಹುಲಿಯು ತಾನು ಬೇಟೆಯಾಡಿದ ಕೋಣನನ್ನು ಹೊಟ್ಟೆ ತುಂಬ ತಿನ್ನುವವರೆಗೆ ಕಾಯುತ್ತಿದ್ದರು. ಹೊಟ್ಟೆ ತುಂಬಿದ ಹುಲಿಯು ನಿಧಾನವಾಗಿ ಹೆಜ್ಜೆಯನ್ನಿಡುತ್ತಾ ವಿಶ್ರಾಂತಿಗಾಗಿ ತೆರಳುವುದನ್ನೇ ನೋಡುತ್ತಿದ್ದರು.

ಹುಲಿ ಆ ಕಡೆ ಹೋz ಮೇಲೂ ನಮ್ಮ ಪೂರ್ವಜರಿಗೆ ಮರದಿಂದ ಕೆಳಗಿಳಿಯುವ ಧೈರ್ಯವಿರುತ್ತಿರಲಿಲ್ಲ. ಏಕೆಂದರೆ ಹುಲಿ ತಿಂದು ಬಿಟ್ಟದ್ದನ್ನು ತಿನ್ನಲೆಂದೇ ತೋಳ, ನರಿ, ಸೀಳುನಾಯಿಗಳು ಇರುತ್ತಿದ್ದವು. ಸೀಳುನಾಯಿಗಳ ಗುಂಪು ಹುಲಿಯನ್ನು ಮೀರಿಸಬಲ್ಲ ಅಪಾಯಕಾರಿ ಪ್ರಾಣಿಗಳು. ಒಂದುವೇಳೆ ನಾವು ಹುಲಿಯಿಂದ ತಪ್ಪಿಸಿಕೊಂಡರೆ ಆಶ್ಚರ್ಯಪಡಬೇಕಾಗಿಲ್ಲ. ಆದರೆ ಸೀಳುನಾಯಿಗಳಿಂದ ತಪ್ಪಿಸಿಕೊಂಡು ಬರುವುದು ಕನಸಿನ ಮಾತಾಗಿತ್ತು. ಹಾಗಾಗಿ ಸೀಳುನಾಯಿ ಗಳೆಲ್ಲ ತಿಂದು ಹೋಗು ವವರಿಗೂ ನಮ್ಮ ಪೂರ್ವಜರು ಕಾಯಬೇಕಾಗಿತ್ತು. ಎಲ್ಲ ಪ್ರಾಣಿಗಳು ದೂರಹೋದ ಮೇಲೆ ನಿಧಾನವಾಗಿ ಮರದಿಂದ ಕೆಳಕ್ಕೆ ಇಳಿಯುತ್ತಿದ್ದರು. ಸತ್ತ ಕೋಣನ ಬಳಿ ಹೋಗಿ ನೋಡಿದರೆ, ಅಲ್ಲಿರುತ್ತಿದ್ದದ್ದು ಕೇವಲ ಮೂಳೆಗಳು! ಆ ಮೂಳೆಗಳಿಗೆ ಏನಾದರೂ ಸ್ವಲ್ಪ ಮಾಂಸದ ಚೂರು ಮೆತ್ತಿಕೊಂಡಿದ್ದರೆ,
ಅದನ್ನೇ ಬಾಚಿ ಹಲ್ಲಿನಿಂದ ಹೆರೆದು ತಿನ್ನುತ್ತಿದ್ದರು. ಹೆರೆದು ತಿನ್ನಲೂ ಚೂರು ಮಾಂಸವಿಲ್ಲದೇ ಹೋದಾಗ ಹತಾಶೆ ಆವರಿಸುತ್ತಿತ್ತು.

ಇಂಥ ಹತಾಶೆಯಲ್ಲಿ ಹತ್ತಿರದಲ್ಲಿದ್ದ ಕಲ್ಲನ್ನು ತೆಗೆದು ಕೊಂಡು ಕೋಪದಿಂದ ಮೂಳೆಗಳ ಮೇಲೆ ಎಸೆದಿರಬೇಕು. ಹಾಗೆ ಎಸೆದಾಗ ಆ ಮೂಳೆಯು ಬಿರುಕು ಬಿಟ್ಟು ಒಳಗಿರುವ ಮಜ್ಜೆ ಕಂಡಿರಬೇಕು. ಆ ಮಜ್ಜೆಯನ್ನು ಪೂರ್ವಜ ನೆಕ್ಕಿ ನೋಡಿದ. ರುಚಿಯಾಗಿದೆ ಎಂದು ಅನಿಸಿತ್ತು. ಕೂಡಲೇ ಕಲ್ಲಿನಿಂದ ಕೋಣನ ಎಲ್ಲ ಮೂಳೆಗಳನ್ನು ಜಜ್ಜಿ ಜಜ್ಜಿ ಒಳಗಿರುವ ಮಜ್ಜೆಯನ್ನು ತಿನ್ನಲಾರಂಭಿಸಿದ. ಇದನ್ನು ನೋಡಿದ ಇತರರೂ ಅವನನ್ನೇ ಅನುಸರಿಸಲಾರಂಭಿಸಿದರು. ನಂತರ
ಕೋಣನ ಯಾವ ಯಾವ ಮೂಳೆಗಳಲ್ಲಿ ಮಜ್ಜೆಯು ಧಾರಾಳವಾಗಿರುತ್ತದೆ, ಯಾವುದರಲ್ಲಿ ಮಿತವಾಗಿರುತ್ತದೆ, ಯಾವುದರಲ್ಲಿ ಕನಿಷ್ಠ ಅಥವಾ ಮಜ್ಜೆಯೇ ಇರುವುದಿಲ್ಲ ಎನ್ನುವುದು ಅನುಭವಕ್ಕೆ ಬಂದಿತು. ಈ ಅನುಭವ ಪಾಠವನ್ನು ತನ್ನ ಸಂತಾನಕ್ಕೆ ಕಲಿಸಿಕೊಟ್ಟ. ಬಹುಶಃ, ನಮ್ಮ ಪೂರ್ವಜನು ಹೀಗೆ ಮೊದಲಬಾರಿಗೆ ತನ್ನ ಬುದ್ಧಿವಂತಿಕೆಯನ್ನು ಕಾರ್ಯ ರೂಪಕ್ಕೆ ತಂದನೆಂದು ಕಾಣುತ್ತದೆ.

ಜೀವಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ, ಆ ಜೀವಿಗಳಿಗೇ ವಿಶೇಷವಾದ ಒಂದು ಜನ್ಮದತ್ತ ಪ್ರತಿಭೆಯೆನ್ನುವುದು ಇರುತ್ತದೆ. ಊಸರವಳ್ಳಿ ತನ್ನ ಹಿನ್ನೆಲೆಗೆ ತಕ್ಕ ಹಾಗೆ ಬಣ್ಣವನ್ನು ಬದಲಾಯಿಸಿಕೊಂಡು ಶತ್ರುಗಳ ಕಣ್ಣಿಗೆ ಕಾಣದಂತೆ ಆತ್ಮರಕ್ಷಣೆ ಮಾಡಿಕೊಳ್ಳುತ್ತದೆ. ಮುಳ್ಳುಹಂದಿಗೆ ಅದರ ಕಣೆಗಳೇ ರಕ್ಷಣೆ! ಹುಲಿ, ಸಿಂಹ, ಚಿರತೆಯಂಥ ಪ್ರಾಣಿಗಳೇ ಅವುಗಳ ತಂಟೆಗೆ ಹೋಗುವುದಕ್ಕೆ ಹಿಂಜರಿಯುತ್ತವೆ. ಜೇಡವು ಸೊಗಸಾದ ಬಲೆ ಹೆಣೆದು ತನ್ನ ಆಹಾರವು ತಾನಾಗಿಯೇ ಬಂದು ಬೀಳುವಂತೆ ಜಾಣ್ಮೆ ತೋರುತ್ತದೆ. ಗೂಬೆಯು ರಾತ್ರಿಹೊತ್ತಿನ ರಾಜ, ಇತರ ಮಾಂಸಾಹಾರಿ ಪಕ್ಷಿಗಳ ಸ್ಪರ್ಧೆಯೇ ಇರುವುದಿಲ್ಲ.

ರಾತ್ರಿಯಲ್ಲಿ ಇಲಿ, ಹೆಗ್ಗಣ, ಮೊಲ ಮುಂತಾದ ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡಿ ನೆಮ್ಮದಿಯಿಂದಿರುತ್ತದೆ. ಹೀಗೆ ಜೀವಜಗತ್ತಿನಲ್ಲಿ ಒಂದೊಂದು ಪ್ರಾಣಿ ತಾನು ಬದುಕುಳಿಯಲು ಒಂದೊಂದು ಸಾಮರ್ಥ್ಯ ವನ್ನು ಗಳಿಸಿಕೊಂಡಿರುತ್ತವೆ. ನಮ್ಮ ಪೂರ್ವಜನಿಗೆ ಇಂಥ ಸಾಮರ್ಥ್ಯವಿರಲಿಲ್ಲ, ಆದರೆ ಮೊದಲ ಬಾರಿಗೆ ಉಪಕರಣ
ಗಳನ್ನು ರೂಪಿಸಲು ಕಲಿತ. ಕಲ್ಲಿ ನಿಂದ ಮೂಳೆಗಳನ್ನು ಜಜ್ಜಿ ಒಳಗಿರುವ ಮಜ್ಜೆಯನ್ನು ತಿನ್ನಬಹುದು ಎನ್ನುವ ತಿಳಿವಳಿಕೆ ಬಂದ ಮೇಲೆ, ಅದೇ ಕಲ್ಲನ್ನು ಹಲವು ಬಗೆಯಲ್ಲಿ ಬಳಸ ಬಹುದೆಂದು ಅರಿತ. ಹರಿತ ಕಲ್ಲುಗಳನ್ನು ಬಳಸಿ ಮಣ್ಣನ್ನು ಅಗೆದು ಗಡ್ಡೆ ಗೆಣಸು ತೆಗೆಯುವುದನ್ನು ಕಲಿತ.

ಕಪ್ಪೆಚಿಪ್ಪು ಸೀಳಿ ಒಳಗಿನ ಜೀವಿಯನ್ನು ತಿಂದ. ಕಲ್ಲನ್ನು ಆಯುಧ ವನ್ನಾಗಿ ಬಳಸಬಹುದೆಂದು ತಿಳಿದ ಕೂಡಲೇ ಉದ್ದವಾಗಿರುವ ಮರದ ತುಂಡು, ಬಿದಿರನ್ನು ಆಯುಧಗಳನ್ನಾಗಿ ಬಳಸಲಾರಂಭಿಸಿದ. ಬಲವಾದ ಕೋಲಿನ ತುದಿಗೆ ಹರಿತವಾದ ಕಲ್ಲನ್ನು ಕಟ್ಟಿ ಕೊಡಲಿಯನ್ನು, ಉದ್ದನೆಯ ಬಿದಿರಿಗೆ ಹರಿತ ಕಲ್ಲನ್ನು ಕಟ್ಟಿ ಭರ್ಜಿಯನ್ನು ರೂಪಿಸಿಕೊಂಡ. ಪಶುಗಳನ್ನೂ, ಶತ್ರುಗಳನ್ನೂ ಬೇಟೆಯಾಡಿದ. ನಮ್ಮ ಪೂರ್ವಜನ ಜಂಘಾಬಲವನ್ನು ಪ್ರಾಕೃತಿಕ ಶಕ್ತಿಗಳು ಉಡುಗಿಸಿದವು. ಸಿಂಹ, ಹುಲಿಗಳ ಗರ್ಜನೆ, ಆನೆಗಳ ಘೀಳಿಡುವಿಕೆಗೆ ಹೆದರುತ್ತಿದ್ದ ಪೂರ್ವಜ ಗುಡುಗಿನ ಶಬ್ದಕ್ಕೆ ಬೆಚ್ಚಿದ!

ಸಿಡಿಲು ಹೊಡೆದು ಮರವೇ ಹೊತ್ತಿ ಉರಿಯುವುದನ್ನು ನೋಡಿ ಭೀತಗೊಂಡ! ಬೆಂಕಿಯು ಹತ್ತಿರದಲ್ಲಿದ್ದ ಎಲ್ಲ ಮರಗಳಿಗೂ ಹರಡುವುದನ್ನು ನೋಡಿದ. ಸಾಟಿ
ಯಿಲ್ಲದ ಶಕ್ತಿಯಿಂದ ಮೆರೆಯುತ್ತಿದ್ದ ಹುಲಿ, ಸಿಂಹ, ಆನೆ ಗಳಂಥ ಪ್ರಾಣಿಗಳು ಬೆಂಕಿಯನ್ನು ಕಂಡು ದೂರ ಓಡುವುದನ್ನು ಕಂಡ. ಬೆಂಕಿ ತಣಿದ ಮೇಲೆ ಮರದಿಂದ ಇಳಿದ. ಬೆಂಕಿ ಹೊತ್ತಿದ್ದ ಪ್ರದೇಶಕ್ಕೆ ಬಂದ. ಅಲ್ಲಿ ಜಿಂಕೆಯೊಂದು ಬೆಂಕಿಗೆ ಸಿಕ್ಕಿ ಸತ್ತುಹೋಗಿತ್ತು. ತೋರುಬೆರಳನ್ನು ಬೆಂದ ಜಿಂಕೆಯ ಶರೀರದೊಳಗೆ ತೂರಿಸಿ ನಂತರ ಬೆರಳನ್ನು ನೆಕ್ಕಿಕೊಂಡ. ಬಹಳ ರುಚಿ ಯಾಗಿದೆ ಎನಿಸಿ ತನ್ನವರನ್ನು ಕರೆದ.

ಎಲ್ಲರೂ ಜಿಂಕೆಯ ಮಾಂಸವನ್ನು ಹಂಚಿಕೊಂಡು ತಿಂದು ಹಸಿ ಮಾಂಸಕ್ಕಿಂತ ಅದು ರುಚಿಯಾಗಿರುವುದನ್ನು ಮನಗಂಡರು. ಪೂರ್ವಜರಲ್ಲಿ ಒಬ್ಬ ಧೈರ್ಯಶಾಲಿ, ಹೇಗಾದರೂ ಮಾಡಿ ಈ ಬೆಂಕಿಯನ್ನು ವಶಪಡಿಸಿಕೊಳ್ಳಬೇಕೆಂದು ಯೋಚಿಸಿದ. ಅವನಿಗೆ ಉರಿಯುತ್ತಿದ್ದ ಕೊಳ್ಳಿ ಕಂಡು ಎತ್ತಿಕೊಂಡ. ಕೈ ಸುಡಲಿಲ್ಲ. ಕೊಳ್ಳಿಯನ್ನು ಎತ್ತಿಕೊಂಡು ಓಡಿದ. ಜತೆಯಲ್ಲಿ ದ್ದವರೆಲ್ಲ ಹೆದರಿ ದೂರ ಓಡಿದರು. ಹತ್ತಿರದಲ್ಲಿದ್ದ ತರಗೆಲೆಗೆ ಬೆಂಕಿ ಸೋಂಕಿಸಿದ. ಅದು ಉರಿದು ಬೂದಿಯಾಯಿತು. ಆಗ ಅವನಿಗೆ ಬೆಂಕಿಯನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಬಹುದೆಂಬ ಪರಿಕಲ್ಪನೆ ಬಂದಿತು. ಕೈಯಲ್ಲಿದ್ದ ಕೊಳ್ಳಿ ಆರುವ ಮೊದಲೇ ಅದನ್ನು ಮತ್ತೊಂದು ಒಣಕಟ್ಟಿಗೆಗೆ ಸೋಂಕಿಸಿದ. ಅದು ಹೊತ್ತಿಕೊಂಡಿತು. ಕೈಯಲ್ಲಿದ್ದದ್ದು ಉರಿದು ಬೂದಿಯಾಯಿತು.

ಸ್ವಲ್ಪ ಸ್ವಲ್ಪವೇ ಒಣಕಟ್ಟಿಗೆಗೆ ಬೆಂಕಿ ಸೋಕಿಸಿ, ಬೆಂಕಿಯು ತುಂಬಾ ಹೊತ್ತು ಉರಿಯುವಂತೆ ಮಾಡಬಹುದು ಎಂದು ಲೆಕ್ಕ ಹಾಕಿದ. ರಾತ್ರಿಯಾಯಿತು.
ಎಲ್ಲೆಲ್ಲೂ ಬೆಂಕಿಯ ಬೆಳಕು. ಆ ಬೆಂಕಿಗೆ ಹೆದರಿಕೊಂಡು ಪ್ರಾಣಿಗಳು ದೂರ ನಿಂತು ಗುರುಗುಟ್ಟಲಾರಂಭಿಸಿದವು. ಆಗ ಪೂರ್ವಜ ಬೆಂಕಿಯ ಸಹಾಯದಿಂದ ಕಾಡುಪ್ರಾಣಿಗಳನ್ನು ದೂರವಿರಿಸಬಹುದೆಂದು ಕಂಡುಕೊಂಡ. ಮೊದಲ ಬಾರಿಗೆ ಮರದಿಂದ ಶಾಶ್ವತವಾಗಿ ಕೆಳಗಿಳಿಯಲು ಮನಸ್ಸು ಮಾಡಿದ. ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ಪಡೆಯಲು ಗುಹೆಗಳನ್ನು ಆಯ್ದುಕೊಂಡು ಒಣಕಟ್ಟಿಗೆಯನ್ನು ದಾಸ್ತಾನು ಮಾಡಿದ.

ರಾತ್ರಿ ಬೆಂಕಿಯನ್ನು ಉಪಯೋಗಿಸಿ ಗುಹೆಯನ್ನು ಬೆಳಗಿದ. ಹಿಂಸ್ರಪಶುಗಳನ್ನು ದೂರವಿಟ್ಟ. ಬೆಂಕಿಯನ್ನು ಬಳಸಿ ಆಹಾರ ಬೇಯಿಸಲು ಕಲಿತ. ಮಾಂಸವನ್ನು ಸುಟ್ಟು ತಿನ್ನುವುದರ ಜತೆಯಲ್ಲಿ ಗಡ್ಡೆ ಗೆಣಸುಗಳನ್ನೂ ಸುಡಲು ಕಲಿತ. ಸುಟ್ಟ ಗೆಣಸು ಹೆಚ್ಚು ರುಚಿಯಾಗಿರುವುದನ್ನು ಕಂಡುಕೊಂಡ. ಪೂರ್ವಜರು ಯಾವಾಗ ಬೆಂಕಿ ಬಳಸಲಾರಂಭಿಸಿದರು ಎನ್ನುವುದನ್ನು ಖಚಿತವಾಗಿ ಹೇಳುವುದು ಕಷ್ಟ. ಇಂದಿಗೆ ೧೬ ಲಕ್ಷ ವರ್ಷಗಳ ಹಿಂದಿನ ಕೀನ್ಯಾದ ‘ಕೂಬಿ -ರ’ ಎಂಬಲ್ಲಿ
ವಾಸವಾಗಿದ್ದವರಿಗೆ ಬೆಂಕಿಯ ಉಪಯೋಗ ತಿಳಿದಿತ್ತು ಎನ್ನುವುದಕ್ಕೆ ದಾಖಲೆಗಳು ದೊರೆತಿವೆ.

ಇದುವೇ ಪ್ರಾಚೀನ ದಾಖಲೆ. ಆಫ್ರಿಕಾದ ವಂಡರ್‌ವರ್ಕ್ ಗುಹೆಗಳು (೧೦-೧೫ ಲಕ್ಷ ವರ್ಷಗಳು) ಇಸ್ರೇಲಿನ ಗೆಶರ್ ಬೆನೋಟ್ ಯಾಕೋವ್ ಗುಹೆಗಳು (೭ ಲಕ್ಷ ವರ್ಷಗಳು) ಚೀನಾದ ಚೌ-ಕೌ-ಥೀನ್ (೫ ಲಕ್ಷ ವರ್ಷಗಳು) ಗುಹೆಗಳು, ಸ್ಪೇನಿನ ಟೊರ್ರಾಲ್ಬ ಮತ್ತು ಆಂಬ್ರೋನ, -ನ್ಸಿನ ಟೆರ್ರ ಅಮಾಟ ಮತ್ತು ಲ ಎಸ್ಕೇಲ್
ಗುಹೆಗಳಲ್ಲಿಯೂ ಬೆಂಕಿಯನ್ನು ಬಳಸುತ್ತಿದ್ದರು ಎನ್ನುವುದಕ್ಕೆ ಸುಟ್ಟ ಇದ್ದಿಲು, ಸುಟ್ಟ ಮೂಳೆಗಳ ಕುರುಹುಗಳು ದೊರೆತಿವೆ. ಭಾರತದ ಬೇಲನ್ ಕಣಿವೆಯಲ್ಲಿ ಸುಮಾರು ೫೦,೦೦೦ ವರ್ಷ ಗಳ ಹಿಂದಿದ್ದ ಪೂರ್ವಜರು ಬೆಂಕಿಯನ್ನು ಬಳಸುತ್ತಿದ್ದರು.

ಬೆಂಕಿಯನ್ನು ‘ಪಳಗಿಸಿದ’ ನಮ್ಮ ಪೂರ್ವಜ ಒಂದು ಸಮಸ್ಯೆ ಎದುರಿಸಿದ. ಬೆಂಕಿಯು ಒಂದು ಸಲ ಆರಿತೆಂದರೆ ಮುಗಿಯಿತು! ಮತ್ತೆ ಹೇಗೆ ಹೊತ್ತಿಸಬೇಕೆಂಬುದು ತಿಳಿದಿರಲಿಲ್ಲ. ಎಲ್ಲೆಲ್ಲೂ ಬಿಸಿಲಿನ ಝಳ! ಪೂರ್ವಜರಲ್ಲಿ ಕೆಲವರು ಬಿದಿರು ಮೆಳೆಗಳ ನಡುವೆ ಇದ್ದರು. ಗಾಳಿಗೆ ಒಣಗಿದ ಬಿದಿರುಗಳು ಪರಸ್ಪರ ಉಜ್ಜಲು ಆರಂಭಿಸಿದವು. ೨ ಒಣ ಬಿದಿರುಗಳು, ಬಹಳ ಹೊತ್ತಿನವರೆಗೆ ಪರಸ್ಪರ ಉಜ್ಜಿಕೊಳ್ಳುವಾಗ, ಇದ್ದಕ್ಕಿದ್ದ ಹಾಗೆ ಬೆಂಕಿ ಹೊತ್ತಿ ಎರಡೂ ಬಿದಿರುಗಳು ಹೊತ್ತಿ ಉರಿಯುವುದನ್ನು ನೋಡಿದರು. ನೋಡನೋಡು ತ್ತಿರುವಂತೆಯೇ ಬೆಂಕಿಯು ಬಿದಿರು ಮೆಳೆಗಳನ್ನು ಸುಡುತ್ತಾ ಕಾಡಿಗೆ ಹರಡಲಾರಂಭಿಸಿತು. ಕಾಡ್ಗಿಚ್ಚು ಹೊತ್ತಿಕೊಳ್ಳುವುದನ್ನು ಕಂಡ ಪೂರ್ವಜರು, ಕೃತಕವಾಗಿ ಬೆಂಕಿಯನ್ನು ರೂಪಿಸಬಹುದೆಂದು ಅರಿತುಕೊಂಡರು.

ತಾವೇ ೨ ಒಣಕಟ್ಟಿಗೆ ತಂದು ಅವನ್ನು ಪರಸ್ಪರ ಉಜ್ಜಿದರು. ಈ ವಿಧಾನವನ್ನು ಸುಧಾರಿಸುತ್ತಾ ನಡೆದರು. ಈ ಪ್ರಯತ್ನ ಜಗತ್ತಿನ ಯಾವುದೇ ಒಂದು
ಪ್ರದೇಶಕ್ಕೆ ಸೀಮಿತವಾಗಿರಲಿಲ್ಲ. ಹಲವು ಕಡೆ ಪ್ರಯೋಗಗಳು ನಡೆದವು. ಪ್ರಾಚೀನ ಭಾರತದಲ್ಲಿ ಒಣ ಶಮೀವೃಕ್ಷದಲ್ಲಿ ಗುಳಿ ಮಾಡಿ, ಅಶ್ವತ್ಥವೃಕ್ಷದ ಕಟ್ಟಿಗೆಯನ್ನು ಅದರಲ್ಲಿಟ್ಟು ಮಥಿಸಿ ದರು. ಹೀಗೆ ಹೊತ್ತಿದ ಬೆಂಕಿಯನ್ನು ಯಜ್ಞಗಳಲ್ಲಿ ಬಳಸಿ ದರು. ಇದನ್ನು ‘ಅಗ್ನಿಮಥನ’ ಅಥವಾ ‘ಆರಣಿಮಥನ’ ಎನ್ನುತ್ತಿದ್ದರು. ವಿದೇಶಗಳಲ್ಲಿ ಬೆಂಕಿ ಹೊತ್ತಿಸಲು ಲೈಮ್ ವುಡ್, ಹೇಜ಼ಲ್ ಟ್ರೀ, ವಿಲ್ಲೋ, ಹಾಥೋರ್ನ್, ಪೈನ್, ಸ್ಪ್ರೂಸ್, ಬೀಚ್ ಮುಂತಾದ ವೃಕ್ಷಗಳ ಒಣಕಟ್ಟಿಗೆ ಬಳಸುತ್ತಿದ್ದರು.

ಫ್ಲಿಂಟ್, ಕ್ವಾರ್ಟ್ಜ್, ಕ್ವಾರ್ಟಜ಼ೈಟ್, ಚಾಲ್ಸಿಡೋನಿ, ಗ್ರಾನೈಟ್, ಬಸಾಲ್ಟ್ ಮುಂತಾದ ಕಲ್ಲುಗಳ ಘರ್ಷಣೆಯಿಂದ ಬೆಂಕಿಯನ್ನು ಹೊತ್ತಿಸಬಹುದೆಂಬುದನ್ನು ಕಲಿತುಕೊಂಡರು. ಸುರಕ್ಷಿತ ಬೆಂಕಿಪೆಟ್ಟಿಗೆಯನ್ನು ಕಂಡುಹಿಡಿಯುವವರೆಗೂ, ಬೇಕೆಂದಾಗ ಬೆಂಕಿ ಹೊತ್ತಿಸುವುದು ಅಸಾಧ್ಯವಾಗಿದ್ದ ಕಾರಣ, ಹೊತ್ತಿಸಿದ ಬೆಂಕಿಯನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕಾಗಿತ್ತು. ಅಗ್ನಿಹೋತ್ರಿಗಳ ಮನೆಯಲ್ಲಿ ಸದಾ ಅಗ್ನಿ ಇರುತ್ತಿತ್ತು. ಹಾಗೆಯೇ ಮಠಗಳೂ ಬೆಂಕಿಯನ್ನು ಸದಾ ಉರಿಯುವಂತೆ ನೋಡಿಕೊಳ್ಳುತ್ತಿದ್ದವು. ಅಗತ್ಯವಿದ್ದವರು ಅಲ್ಲಿಂದ ಕೆಂಡ ತಂದು, ತಮ್ಮ ಮನೆಯ ಒಲೆಗಳಲ್ಲಿ ಬೆಂಕಿ ಹೊತ್ತಿಸಿ ಅಡುಗೆ ಮಾಡುವುದು ಅನಿವಾರ್ಯವಾಗಿತ್ತು.