Friday, 13th December 2024

ಭಾರತಕ್ಕೆ ಜೈಶಂಕರ್‌ ಎಂಬ ವಿದೇಶಾಂಗ ಮಂತ್ರಿ

ಪ್ರಸ್ತುತ

ಗಣೇಶ್ ಭಟ್, ವಾರಣಾಸಿ

ಯುದ್ಧದ ಪರಿಣಾಮವಾಗಿ ಅಂತಾರಾಷ್ಟ್ರೀಯ ತೈಲದ ಬೆಲೆ ಗಗನಕ್ಕೇರಿದೆ. ಈ ಸಂದರ್ಭದಲ್ಲಿ ರಷ್ಯಾವು ಭಾರತಕ್ಕೆ ಅಂತಾರಾಷ್ಟ್ರೀಯ ಬೆಲೆಗಿಂತ ಕೊಂಚ ಕಡಿಮೆ ಬೆಲೆಗೆ ತೈಲವನ್ನು ಪೂರೈಸುವುದಾಗಿ ಮಾತುಕೊಟ್ಟಿದೆ. ರಷ್ಯಾದಿಂದ ತೈಲವನ್ನು ಖರೀದಿಸಬಾರದು ಎಂದು ಅಮೆರಿಕ ಭಾರತದ ಮೇಲೆ ಒತ್ತಡವನ್ನು ಹೇರುತ್ತಿವೆ.

ದೇಶವೊಂದರ ಪ್ರಧಾನಿ ಅಥವಾ ಅಧ್ಯಕ್ಷರ ನಂತರದ ಮುಖ್ಯ ಸ್ಥಾನದಲ್ಲಿ ಪರಿಗಣಿಸಲ್ಪಡುವ ಮಂತ್ರಿ ಪದವಿ ಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರೂ ಒಬ್ಬರು. ದೇಶದ ವಿದೇಶಾಂಗ ನೀತಿ ನಿರೂಪಣೆಯಲ್ಲಿ ವಿದೇಶಾಂಗ ಸಚಿವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಇದೀಗ ಪ್ರಪಂಚದ ಎಲ್ಲಾ ದೇಶಗಳು ಜಾಗತೀಕರಣಕ್ಕೆ ತಮ್ಮನ್ನು ತಾವು ತೆರೆದುಕೊಂಡಿರುವ ಕಾರಣ ವಿದೇಶಾಂಗ ಸಚಿವ ಸ್ಥಾನ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಕೊಳ್ಳುತ್ತಿದೆ.

ಭಾರತದ ಮೊದಲ ಪ್ರಧಾನಿಯಾಗಿದ್ದ ನೆಹರೂ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ತನ್ನ ಅಧಿಕಾರಾವ ಧಿಯುದ್ದಕ್ಕೂ ತನ್ನ ಕೈಯ ಇರಿಸಿಕೊಂಡಿ ದ್ದರು. ಮೊರಾರ್ಜಿ ದೇಸಾಯಿಯವರ ನೇತೃತ್ವದ ಜನತಾ ಸರಕಾರವು 1977ರಲ್ಲಿ ಅಧಿಕಾರಕ್ಕೆ ಬಂದಾಗ ವಿದೇಶಾಂಗ ಸಚಿವರಾದವರು ವಾಜಪೇಯಿ ಯವರು. ವಿದೇಶಾಂಗ ಸಚಿವರಾಗಿ ವಿಶ್ವ ಸಂಸ್ಥೆಯ ಮಹಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ವಾಜಪೇಯಿ ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿಯೆನಿಸಿದ್ದರು. ತನ್ನ ವಿಶ್ವಸಂಸ್ಥೆಯ ಭಾಷಣವನ್ನು ‘ಜೈ ಜಗತ್’ ಎನ್ನುವ ಘೋಷಣೆಯೊಂದಿಗೆ ಮುಗಿಸಿದ್ದ ವಾಜಪೇಯಿ ಜಾಗತಿಕ ಸಂಬಂಧಗಳ ಪ್ರಾಮುಖ್ಯತೆಯನ್ನು ಅಂದೇ ಸಾರಿದ್ದರು.

2014ರಲ್ಲಿ ನರೇಂದ್ರ ಮೋದಿ ಸರಕಾರವು ಆಡಳಿತಕ್ಕೆ ಬಂದಾಗ ವಿದೇಶಾಂಗ ಮಂತ್ರಿಯ ಸ್ಥಾನಕ್ಕೆ ಬಂದವರು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ. ಅಪ್ರತಿಮ ಮಾತುಗಾರ್ತಿ ಹಾಗೂ ಅನುಭವಿಯಾಗಿದ್ದ ಸುಷ್ಮಾ ಸ್ವರಾಜ್ ಅವರಿಗೆ ಮೋದಿ ಸರಕಾರದ ಮೊದಲ ಅವಧಿಯ ವಿದೇಶಾಂಗ ವ್ಯವಹಾರಗಳ ಯಶಸ್ಸಿನ ಕೀರ್ತಿ ಸಲ್ಲುತ್ತದೆ. ಅಮೆರಿಕಾ, ಇಸ್ರೇಲ, ಗಲ್ಫ್  ದೇಶ ಗಳು, ಯುರೋಪ್ ದೇಶಗಳು, ಜರ್ಮನಿ, ಫ್ರಾನ್ಸ್, ಬ್ರೆಝಿಲ್, ಜಪಾನ್, ಆಸ್ಟ್ರೇಲಿಯಾ ಮೊದಲಾದ ದೇಶಗಳ ಜೊತೆ ಉತ್ತಮ ಬಾಂಧವ್ಯವನ್ನು ರೂಪಿಸಿ ಕೊಳ್ಳುವಲ್ಲಿ ಸುಷ್ಮಾ ಮಹತ್ತರ ಪಾತ್ರವನ್ನು ವಹಿಸಿದರು.

ಆದರೆ ತೀವ್ರ ಅನಾರೋಗ್ಯಕ್ಕೆ ಸಿಲುಕಿ ಸಕ್ರಿಯ ರಾಜಕಾರಣದಿಂದ ದೂರ ಸರಿದಾಗ ವಿದೇಶಾಂಗ ಖಾತೆ ಸಚಿವರ ಸ್ಥಾನದ ಶೂನ್ಯತೆಯನ್ನು ತುಂಬುವವರು
ಯಾರು ಎನ್ನುವುದು ಒಂದು ಯಕ್ಷ ಪ್ರಶ್ನೆಯೇ ಆಗಿತ್ತು. 2019ರಲ್ಲಿ ಮರಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರದಲ್ಲಿ ವಿದೇಶಾಂಗ ವ್ಯವಹಾರ ಗಳ ಮಹತ್ತರ ಖಾತೆಯನ್ನು ಡಾ. ಎಸ್ ಜೈಶಂಕರ್ ಅವರಿಗೆ ಕೊಟ್ಟಾಗ ಎಲ್ಲರ ಹುಬ್ಬೇರಿತ್ತು. ಓರ್ವ ನಿವೃತ್ತ ರಾಜತಾಂತ್ರಿಕ ಅಧಿಕಾರಿಯನ್ನು ಏಕೆ ವಿದೇಶಾಂಗ ಖಾತೆಯ ಮಹತ್ತರ ಸ್ಥಾನಕ್ಕೆರಿಸಿದರು ಎನ್ನುವುದು ಬಹಳಷ್ಟು ಜನರಿಗೆ ಒಗಟಿನಂತೆ ಭಾಸವಾಗಿತ್ತು. ಸುಷ್ಮಾ ಸ್ವರಾಜ್ ಅಂತವರು ನಿಭಾ ಯಿಸಿದ್ದ ಸ್ಥಾನವನ್ನು ನಿಭಾಯಿಸುವುದು ಜೈಶಂಕರ್‌ರ ಪಾಲಿಗೆ ಒಂದು ದೊಡ್ಡ ಸವಾಲಾಗಿತ್ತು. ಆದರೆ ಎಸ್ ಜೈ ಶಂಕರ್ ಅವರಿಗೆ ವಿದೇಶ ವ್ಯವಹಾರ ದಲ್ಲಿ ಬಹಳ ಅನುಭವವಿತ್ತು. ಅವರು 2015 ರಿಂದ 2018 ರವರೆಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸಿದ್ದರು.

ಅದಕ್ಕೂ ಮೊದಲು ಅವರು ಅಮೆರಿಕ ಹಾಗೂ ಚೀನಾಗಳಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಸಿಂಗಾಪುರ ಹಾಗೂ ಝೆಕ್ ರಿಪಬ್ಲಿಕ್‌ಗಳ ರಾಯಭಾರ ಕಚೇರಿಗಳಲ್ಲೂ ಅವರು ಕೆಲಸ ಮಾಡಿದ್ದರು. ನಾವು ವಿದೇಶಗಳೊಂದಿಗೆ ಮಾತುಕತೆ ನಡೆಸುವಾಗ ತಲೆ ತಗ್ಗಿಸಿ, ನೆಲ ನೋಡುತ್ತಾ ಮಾತನಾಡಲು ಅಥವಾ ಆಕಾಶ ನೋಡುತ್ತಾ ಮಾತನಾಡಲು ಬಯಸುವುದಿಲ್ಲ. ನಾವು ಮಾತನಾಡುವಾಗ ಸರಿಸಮಾನವಾಗಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಬಯಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಏಕೆಂದರೆ ಈ ಹಿಂದೆ ನಮ್ಮ ವಿದೇಶಾಂಗ ನೀತಿ ಅಸ್ಪಷ್ಟವಾಗಿತ್ತು.

ಯಾವುದೇ ದೇಶಗಳೊಂದಿಗೆ ದೃಢ ನಿರ್ಧಾರದಿಂದ ಮಾತನಾಡುವ ಛಾತಿ ನಮ್ಮ ಹಿಂದಿನ ವಿದೇಶಾಂಗ ಮಂತ್ರಿಗಳಿಗೆ ಇರಲಿಲ್ಲ. ಅಮೆರಿಕದಂತಹ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸುವ ಸಂದರ್ಭ ದಲ್ಲಿ ನಮ್ಮ ಪ್ರಧಾನಿಗಳು, ವಿದೇಶಾಂಗ ಸಚಿವರು ಹಾಗೂ ರಾಜತಾಂತ್ರಿಕರು ಒಂದಿಷ್ಟು ಕೀಳರಿಮೆಯಿಂದಲೇ ವರ್ತಿ ಸುತ್ತಿದ್ದರು. ಒಪ್ಪಂದಗಳ ವಿಚಾರದಲ್ಲಂತೂ ನಮ್ಮ ದೃಷ್ಟಿಕೋನವನ್ನು ಬಲವಾಗಿ ಪ್ರತಿಪಾದಿಸಲು ಸಾಧ್ಯವಾಗದೆ ಲಾಬಿ
ಗಳಿಗೆ ಮಣಿದು ಸಹಿ ಹಾಕಲಾಗುತ್ತಿತ್ತು.

ಪ್ರಸ್ತುತ ಭಾರತದ ವಿದೇಶಾಂಗ ನೀತಿಯು ಇಂಡಿಯಾ -ಸ್ಟ್ ಎನ್ನುವ ದೃಢ ನಿಲುವಿನ ಹಿಂದೆ ರೂಪೀಕರಣಗೊಳ್ಳುತ್ತಿದೆ. ಭಾರತದ ಹಿತ ದೃಷ್ಟಿಗೆ ವಿರುದ್ಧ ವಾಗಿದ್ದರೆ ಅದು ಎಷ್ಟು ಬಲಿಷ್ಠ ದೇಶವೇ ಆಗಿರಲಿ ಅದನ್ನು ಭಾರತ ವಿರೋಧಿಸಿಯೇ ವಿರೋಧಿಸುತ್ತದೆ. ಇದನ್ನು ಅಕ್ಷರಶಃ ಜಾರಿಗೆ ತರುತ್ತಿರುವುದು ಇಂದಿನ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್. ಭಾರತದ ವ್ಯಾಪಾರ ವಹಿವಾಟು, ಅಂತಾರಾಷ್ಟ್ರೀಯ ಸಂಬಂಧ, ಸರಕಾರದೊಳಗಿನ ಒಪ್ಪಂದ ಯಾವುದೇ ಆಗಲಿ ಅಲ್ಲಿ ಭಾರತೀಯ ಹಿತಾಸಕ್ತಿಯನ್ನು ಕಾಪಾಡುತ್ತಿದೆ ನಮ್ಮ ವಿದೇಶಾಂಗ ನೀತಿ. ಜೈಶಂಕರ್ ಅವರ ವರ್ತನೆ ಹಾಗೂ ಮಾತು ಗಳು ಯಾವತ್ತೂ ಭಾರತದ ಹಿತವನ್ನು ಕಾಪಾಡಲು ಪೂರಕವಾಗಿದೆ.

ರಷ್ಯಾ-ಉಕ್ರೇನ್ ನಡುವಿನ ಯುದ್ಧ ಸಂದರ್ಭದ ಅತ್ಯಂತ ನಾಜೂಕಿನ ಪರಿಸ್ಥಿತಿಯಲ್ಲಿ ಭಾರತವಿಂದು ನಿಂತಿದೆ. ಈ ಸಂಘರ್ಷದ ವಿಚಾರವಾಗಿ ಭಾರತವು ತಟಸ್ಥ ನೀತಿಯನ್ನು ಪಾಲಿಸುತ್ತಿದ್ದು ಉಭಯ ದೇಶಗಳು ಯುದ್ಧವನ್ನು ತೊರೆದು ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳ ಬೇಕೆಂಬುದು ಭಾರತದ ನಿಲುವು. ಭಾರತದ ಈ ನಡೆ ಅಮೆರಿಕ ಸೇರಿದಂತೆ ಯುರೊ ಪಿಯನ್ ಒಕ್ಕೂಟಗಳಿಗೆ ಒಂದಿಷ್ಟು ಅಸಮಾಧಾನವನ್ನು ಉಂಟು ಮಾಡಿದೆ. ಭಾರತವು ರಷ್ಯಾ ವಿರುದ್ಧ ನಿಲುವುಗಳನ್ನು ತೆಗೆದುಕೊಳ್ಳಬೇಕೆಂಬುದು ಆ ರಾಷ್ಟ್ರಗಳ ಬಯಕೆಯಾಗಿದೆ. ಆದರೆ ಭಾರತಕ್ಕೆ ಅಮೆರಿಕದ ಜತೆಗಿನ ಸಂಬಂಧ ಎಷ್ಟು ಮುಖ್ಯವೋ ರಷ್ಯಾದ ಜತೆಗಿನ ಗೆಳೆತನವೂ ಅಷ್ಟೇ ಮುಖ್ಯ.

ರಷ್ಯಾ ಭಾರತದ ಸಾರ್ವಕಾಲಿಕ ಗೆಳೆಯ. ಭಾರತವು ರಕ್ಷಣಾ ಉಪಕರಣಗಳಿಗಾಗಿ ರಷ್ಯಾದ ಜತೆಗೆ ಹತ್ತು ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಭಾರತವಿಂದು ರಷ್ಯಾವನ್ನು ವಿರೋಧಿಸಿದಲ್ಲಿ ರಷ್ಯಾವು ಭಾರತ ವಿರೋಧಿಗಳಾದ ಚೀನಾ ಹಾಗೂ ಪಾಕಿಸ್ತಾನಗಳಿಗೆ ಆಪ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ
ಭಾರತವಿಂದು ರಷ್ಯಾವನ್ನು ಎದುರು ಹಾಕಿಕೊಳ್ಳದೆ ತಟಸ್ಥ ನೀತಿಯನ್ನು ಪಾಲಿಸುತ್ತಿದೆ.

ಯುದ್ಧದ ಪರಿಣಾಮವಾಗಿ ಅಂತಾರಾಷ್ಟ್ರೀಯ ತೈಲದ ಬೆಲೆ ಗಗನಕ್ಕೇರಿದೆ. ಈ ಸಂದರ್ಭದಲ್ಲಿ ರಷ್ಯಾವು ಭಾರತಕ್ಕೆ ಅಂತಾರಾಷ್ಟ್ರೀಯ ಬೆಲೆಗಿಂತ
ಕೊಂಚ ಕಡಿಮೆ ಬೆಲೆಗೆ ತೈಲವನ್ನು ಪೂರೈಸುವುದಾಗಿ ಮಾತುಕೊಟ್ಟಿದೆ. ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಬಾರದು ಎಂದು ಅಮೆರಿಕ ಹಾಗೂ ಯೂರೋಪಿಯನ್ ದೇಶಗಳು ಭಾರತದ ಮೇಲೆ ಒತ್ತಡವನ್ನು ಹೇರುತ್ತಿವೆ. ಕೆಲವು ದಿವಸಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟಿಷ್ ಫಾರಿನ್ ಸೆಕ್ರೆಟರಿ ಲಿಝ್ ಟ್ರಸ್ಸ್ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವ ವಿಚಾರವಾಗಿ ಆಕ್ಷೇಪವನ್ನು ವ್ಯಕ್ತಪಡಿಸಿದಾಗ ಜೈಶಂಕರ್ ಯುರೋಪ್ ದೇಶಗಳು ಹಿಂದಿನ ತಿಂಗಳಿಗೆ ಹೋಲಿಸಿದಾಗ ಈ ತಿಂಗಳು 15% ಹೆಚ್ಚು ತೈಲ ಹಾಗೂ ಗ್ಯಾಸನ್ನು ರಷ್ಯಾದಿಂದ ಖರೀದಿ ಮಾಡಿವೆ, ಭಾರತವು ತನ್ನ ಅವಶ್ಯಕತೆಯ ಒಂದು ಶೇಕಡಾಗಿಂತಲೂ ಕಡಿಮೆ ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ, ಮುಂದಿನ ಎರಡು ಮೂರು ತಿಂಗಳು ಕಳೆದು ರಷ್ಯಾದಿಂದ ಅತೀ ಹೆಚ್ಚು ತೈಲವನ್ನು ಖರೀದಿ ಮಾಡಿರುವವರ ಪಟ್ಟಿಯನ್ನು ನೋಡಿದರೆ ಅದು ಈ ಹಿಂದೆ ಇದ್ದಂತೆಯೇ ಇರುತ್ತದೆ.

ರಷ್ಯಾದಿಂದ ತೈಲ ಖರೀದಿ ಮಾಡುವ ಟಾಪ್ 10 ರಾಷ್ಟ್ರಗಳಲ್ಲಿ ಭಾರತವು ಇರುವುದಿಲ್ಲ ಎಂದು ಬ್ರಿಟಿಷ್ ಫಾರಿನ್ ಸೆಕ್ರೆಟರಿಯ ಮುಖಕ್ಕೆ ಹೊಡೆದಂತೆ
ಉತ್ತರಿಸಿದ್ದರು. ಇತ್ತೀಚೆಗೆ ಅಮೆರಿಕದ ವಿದೇಶ ಮಂತ್ರಿ ಟೋನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ ಆಸ್ಟಿನ್ ಹಾಗೂ ಭಾರತದ ವಿದೇಶಾಂಗ ಮಂತ್ರಿ ಜೈಶಂಕರ್ ಮತ್ತು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ನಡುವೆ ೨+೨ ಮಾತುಕತೆ ನಡೆದು ಜಂಟಿ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿ ಪತ್ರಕರ್ತನೊಬ್ಬ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದಾಗ ನೀವು ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿ
ರುವ ವಿಚಾರವನ್ನು ನೋಡುತ್ತಿದ್ದರೆ, ನೀವೊಮ್ಮೆ ಯೂರೋಪ್ ದೇಶಗಳನ್ನೂ ಗಮನಿಸಬೇಕು.

ತೈಲ ಖರೀದಿಯ ಪ್ರಮಾಣವನ್ನು ಲೆಕ್ಕ ಹಾಕಿದರೆ ಇಡೀ ಒಂದು ತಿಂಗಳಿನ ಅವಧಿಯಲ್ಲಿ ಭಾರತವು ರಷ್ಯಾದಿಂದ ಖರೀದಿಸುವ ತೈಲವನ್ನು ಯೂರೋಪ್
ದಿನದ ಒಂದು ಹೊತ್ತಿನಲ್ಲಿ ಖರೀದಿಸುತ್ತಿದೆ ಎಂದು ಹೇಳಿ ಉತ್ತರಿಸಿದ ಜೈಶಂಕರ್ ಅಮೆರಿಕದ ಮಿತ್ರರಾದ ಯೂರೋಪ್ ದೇಶಗಳ ಇಬ್ಬಂದಿ ತನವನ್ನು ಬಯಲು ಮಾಡಿ ಪತ್ರಕರ್ತ ಹಾಗೂ ಅಮೆರಿಕದ ವಿದೇಶ ಮಂತ್ರಿ ಇಬ್ಬರ ಬಾಯಿಯನ್ನೂ ಮುಚ್ಚಿಸಿದ್ದರು. ಅಮೆರಿಕದ ವಿದೇಶ ಮಂತ್ರಿ ಬ್ಲಿಂಕೆನ್
ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಹೇಳಿಕೆ ನೀಡಿರುವುದಕ್ಕೆ ಪ್ರತಿ ಕ್ರಿಯಿಸಿದ್ದ ಜೈಶಂಕರ್ ಭಾರತಕ್ಕೂ ಅಮೆರಿಕದಲ್ಲಿ
ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳ ಕುರಿತು ಕಳವಳವಿದೆ ಎಂದು ಉತ್ತರಿಸಿ ಏಟಿಗೆ ಎದುರೇಟು ಕೊಟ್ಟಿದ್ದರು.

ಮಾರ್ಚ್ ತಿಂಗಳಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಭೇಟಿ ಕೊಟ್ಟಿದ್ದರು. ಯಾವುದೇ ರೀತಿಯ
ಪ್ರಚಾರ ಇಲ್ಲದೆ ಭೇಟಿ ಆಗಬೇಕೆಂದು ಚೀನಾವು ಅಪೇಕ್ಷೆಪಟ್ಟ ಕಾರಣ ಅಧಿಕೃತ ಪ್ರಚಾರ ಇಲ್ಲದೆ ಭೇಟಿ ನಡೆಯಿತು. ದ್ವಿಪಕ್ಷೀಯ ಮಾತುಕತೆಗಳ
ನಂತರದ ಪತ್ರಿಕಾಗೋಷ್ಠಿಯಲ್ಲಿ ಭಾರತ ಹಾಗೂ ಚೀನಾದ ಸಂಬಂಧವು ಹೇಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಗಡಿಗಳಲ್ಲಿ ಚೀನಾವು ಸೈನಿಕರನ್ನು
ನಿಯುಕ್ತಿಗೊಳಿಸಿದ ನಂತರದ ಘಟನೆಗಳ ಹಿನ್ನೆಲೆಯಲ್ಲಿ ಭಾರತ ಹಾಗೂ ಚೀನಾಗಳ ಸಂಬಂಧ ಸಾಮಾನ್ಯವಾಗಿಲ್ಲ ಎಂದು ಖಡಾಖಂಡಿತವಾಗಿ
ಉತ್ತರಿಸಿದ್ದರು ಜೈಶಂಕರ್.

ಚೀನಾ, ಅಮೆರಿಕ ಹಾಗೂ ಬ್ರಿಟನ್‌ಗಳನ್ನು ರಾಜತಾಂತ್ರಿಕವಾಗಿ ಜೈಶಂಕರ್ ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಜೈಶಂಕರ್ ದೇಶ ಹಿತದ ವಿಚಾರಕ್ಕೆ ಬರುವಾಗ ವಜ್ರ ದಂತೆ ಕಠಿಣವಾಗಿ ಮಾತನಾಡಿದರೂ ಭಾರತೀಯರು ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವಾಗ, ನೆರೆಹೊರೆಯ ದೇಶಗಳು ಸಮಸ್ಯೆ ಯನ್ನು ಎದುರಿಸುತ್ತಿರುವಾಗ ಹೂವಿನ ಕುಸುಮದಂತೆ ಮೃದುವಾಗಿ ನಡೆದುಕೊಳ್ಳುತ್ತಾರೆ. ಯುದ್ಧಗ್ರಸ್ಥ ಉಕ್ರೇನಿನಲ್ಲಿ ಸಿಕ್ಕಿ ಬಿದ್ದಿದ್ದ 25000ಕ್ಕೂ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಮರಳಿ ಕರೆತರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ ಕೀರ್ತಿ ವಿದೇಶಾಂಗ ಮಂತ್ರಾ ಲಯಕ್ಕೆ ಸಲ್ಲುತ್ತದೆ.

ಉಕ್ರೇನಿನ ನೆರೆಯ ರಾಷ್ಟ್ರಗಳಾದ ಪೋಲೆಂಡ್, ಬೆಲಾರೂಸ್, ಹಂಗೇರಿ, ರೊಮೇನಿಯಾ ಮೊದಲಾದ ದೇಶಗಳ ಜತೆಗೆ ಸಂಪರ್ಕ ಸಾಧಿಸಿ ಉಕ್ರೇನಿ ನಲ್ಲಿರುವ ವಿದಾರ್ಥಿಗಳಿಗೆ ವೀಸಾ ರಹಿತವಾಗಿ ಆ ದೇಶದ ಒಳಗೆ ಬರಲು ಅನುಮತಿ ಸಿಗುವಂತೆ ವ್ಯವಸ್ಥೆ ಮಾಡಿ ಆ ದೇಶಗಳ ವಿಮಾನ ನಿಲ್ದಾಣಗಳ ಮೂಲಕ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಿದುದರ ಹಿಂದಿನ ಪರಿಶ್ರಮ ಜೈಶಂಕರ್ ಅವರದ್ದು. ವಿದ್ಯಾರ್ಥಿಗಳ ಸ್ಥಳಾಂತರ ಸಂದರ್ಭದಲ್ಲಿ ಅವರ ಮೇಲೆ ರಷ್ಯಾವು ಯಾವುದೇ ಆಕ್ರಮಣ ಮಾಡದಂತೆ ತಡೆದುದೂ ಭಾರತದ ವಿದೇಶಾಂಗ ಇಲಾಖೆಯೇ. ತಾಲಿಬಾನ್ ಆಡಳಿತಕ್ಕೆ ಸಿಲುಕಿದ ಅಫಘಾನಿಸ್ತಾನದಲ್ಲಿದ್ದ ಭಾರತೀಯರಿಗೆ ಯಾವುದೇ ಪ್ರಾಣಾಪಾಯವಾಗದಂತೆ ಹಿಂದಕ್ಕೆ ಕರೆಸಿಕೊಳ್ಳುವ ಕೆಲಸದ ಸಮನ್ವಯವನ್ನು ಮಾಡಿದ್ದು ಜೈಶಂಕರ್ ಅವರ ಸಚಿವಾಲಯವೇ.

ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಆಗಿ ರೋಗಿಗಳು ಔಷಧಕ್ಕಾಗಿ ಪರದಾಡುತ್ತಿರುವ ಪರಿಸ್ಥಿತಿ ಯನ್ನು ಅರಿತ ಜೈಶಂಕರ್ ಶ್ರೀಲಂಕಾಗೆ ಭಾರತದಿಂದ ಔಷಧವನ್ನು ಪೂರೈಸಲು ಸೂಕ್ತ ವ್ಯವಸ್ಥೆಯನ್ನು ಶ್ರೀಲಂಕಾದ ಭಾರತೀಯ ದೂತಾವಾಸದ ಮೂಲಕ ಮಾಡಿದ್ದರು. ಪ್ರಧಾನಿ ನೇರೇಂದ್ರ ಮೋದಿಯವರ ವಿದೇಶ ಪ್ರವಾಸ, ಗಣ್ಯರ ಜೊತೆಗೆ ಮಾತುಕತೆ, ಒಪ್ಪಂದಕ್ಕೆ ಒಡಂಬಡಿಕೆ ಹಾಕುವುದು ಮೊದಲಾದ ಎಲ್ಲ ಕಾರ್ಯಗಳ ಹಿಂದೆ ವಿದೇಶಾಂಗ ಸಚಿವರ ಅಪಾರ ಪರಿಶ್ರಮವಿದೆ.

ಹೂಡಿಕೆದಾರರನ್ನು, ಉದ್ಯಮಿಗಳನ್ನು ಮನವೊಲಿಸಿ ಭಾರತಕ್ಕೆ ಕರೆ ತರುವುದು, ನಿರ್ಯಾತವನ್ನು ಹೆಚ್ಚಿಸುವುದೇ ಮೊದಲಾದ ಕೆಲಸಗಳನ್ನು ಜೈಶಂಕರ್ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ವಿಶ್ವಸಂಸ್ಥೆ, ವಿಶ್ವವ್ಯಾಪಾರ ಸಂಸ್ಥೆ, ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮೊದಲಾದ
ಜಾಗತಿಕ ಸಂಸ್ಥೆಗಳಲ್ಲಿ ಭಾರತವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿರುವ ಡಾ. ಎಸ್ ಜೈಶಂಕರ್ ಭಾರತ ಸರಕಾರದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಚಿವರಲ್ಲಿ ಒಬ್ಬರು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.