ಸಂಗತ
ವಿಜಯ್ ದರಡಾ
ಜೈಶಂಕರ್ ವಿದೇಶಗಳಲ್ಲಿ ಭಾರತದ ಘನತೆಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಅಜಿತ್ ದೋವಲ್ ಗುಪ್ತಚರ
ನಡವಳಿಕೆಗಳಲ್ಲಿ ಸಾಕಷ್ಟು ಕೌಶಲ ಹೊಂದಿದ್ದಾರೆ. ತಂತಮ್ಮ ಕೆಲಸಗಳನ್ನು ಸದ್ದಿಲ್ಲದೆ ನಿರ್ವಹಿಸುತ್ತ ವಿಶ್ವವೇ ಬೆಚ್ಚಿಬೀಳುವಂತೆ ಮಾಡುವ ಧೀಮಂತರಿವರು.
ಹಳಬ, ಸಿರಿವಂತ, ಹಠವಾದಿ ಮತ್ತು ಅಪಾಯಕಾರಿ ವ್ಯಕ್ತಿ- ಇವು ನಮ್ಮ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಮೆರಿಕದ ಖ್ಯಾತ ಉದ್ಯಮಿ ಜಾರ್ಜ್ ಸೋರೋಸ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇಳೆ ಆಡಿದ ಮಾತುಗಳು. ಇತ್ತೀಚಿನ ದಿನಗಳಲ್ಲಿ ಜಾರ್ಜ್ ಸೋರೋಸ್ ಮಾತುಗಳು ವಿಶ್ವಾದ್ಯಂತ ಚರ್ಚೆಯ ವಸ್ತುವಾಗಿರುವುದೂ ಹೌದು. ಅವರು ಭಾರತದ ಮೇಲೆ ಆಗಾಗ ವಾಕ್‌ಪ್ರಹಾರ ಮಾಡುತ್ತಲೇ ಇರುತ್ತಾರೆ. ಜಾರ್ಜ್ ತರಹದ ವ್ಯಕ್ತಿಗಳು ಅಮೆರಿಕದಲ್ಲಿ ಕುಳಿತುಕೊಂಡು, ಇಡೀ ವಿಶ್ವ ತಮ್ಮ ಮೂಗಿನ ನೇರಕ್ಕೇ ಅನುವರ್ತಿಸಬೇಕೆಂದು ಬಯಸುತ್ತಾರೆ.
ಕಳೆದ ಜೂನ್ ತಿಂಗಳಲ್ಲಿ, ಸ್ಲೋವಾಕಿಯಾದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ಜೈಶಂಕರ್ ಅವರು ಐರೋಪ್ಯ ರಾಷ್ಟ್ರಗಳ ಬಗ್ಗೆ ಹೇಳಿದ್ದ ಮಾತು ಮಾರ್ಮಿಕವಾಗಿತ್ತು. ಐರೋಪ್ಯರಿಗೆ ತಮ್ಮೆಲ್ಲ ಸಮಸ್ಯೆಗಳು ವಿಶ್ವದ ಸಮಸ್ಯೆಗಳು, ಆದರೆ ವಿಶ್ವದೆಲ್ಲೆಡೆಯ ಸಮಸ್ಯೆಗಳು ತಮಗೆ ಸಂಬಂಧ ಪಟ್ಟಿದ್ದಲ್ಲ ಎಂಬ ಭ್ರಮೆ. ಅದಕ್ಕೂ ಮುನ್ನ ವಾಷಿಂಗ್ಟನ್‌ನಲ್ಲಿ ಒಬ್ಬ ಪತ್ರಕರ್ತ ಜೈಶಂಕರ್ ಅವರನ್ನು ಪ್ರಶ್ನಿಸಿ, ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತವು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದರ ಔಚಿತ್ಯದ ಬಗ್ಗೆ ಕೇಳಿದ್ದರು. ಆಗ ಜೈಶಂಕರ್ ಕೊಟ್ಟ ಉತ್ತರ ಇಡೀ ಯುರೋಪನ್ನು ಅಲ್ಲಾಡಿಸಿತ್ತು.
‘ಹೌದು, ಭಾರತವು ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದರ ಬಗ್ಗೆ ನೀವು ಪ್ರಶ್ನಿಸುತ್ತೀರಿ. ಆದರೆ ರಷ್ಯಾದಿಂದ ಭಾರತವು ಒಂದು ತಿಂಗಳಿಗೆ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣವನ್ನು ಐರೋಪ್ಯ ರಾಷ್ಟ್ರಗಳು ಅರ್ಧದಿನದಲ್ಲಿ ಖಾಲಿಮಾಡುತ್ತವೆ’ ಎಂಬ ಜೈಶಂಕರ್ ರವರ ಖಡಾಖಂಡಿತ ಮಾತುಗಳಿಗೆ ಯುರೋಪ್ ಕೆರಳಿತ್ತು. ಅವರೆಂದೂ ಸುತ್ತಿ-ಬಳಸಿ ಮಾತನಾಡುವುದಿಲ್ಲ, ಅವರದೇನಿದ್ದರೂ ನೇರಾನೇರ ಮಾತು. ಹಾಗಾಗಿಯೇ ವಿಶ್ವಾದ್ಯಂತ ಜೈಶಂಕರ್ ರವರಿಗೆ ವಿಶಿಷ್ಟವಾದ ಸ್ಥಾನವಿದೆ. ದಕ್ಷಿಣ ಏಷ್ಯಾದ ಯಾವುದೇ ದೇಶದ ವಿದೇಶಾಂಗ ಸಚಿವರು ಪಶ್ಚಿಮ
ರಾಷ್ಟ್ರಗಳ ಕುರಿತಾಗಿ ಈ ರೀತಿಯ ಕಟುಹೇಳಿಕೆಗಳನ್ನು ಕೊಟ್ಟ ಅನ್ಯ ಉದಾಹರಣೆಗಳೇ ಇಲ್ಲ.
ವಿಶೇಷವೆಂದರೆ ವಿದೇಶಿ ರಾಜತಾಂತ್ರಿಕರು ಕೂಡ ಜೈಶಂಕರ್‌ರನ್ನು ಬೆಂಬಲಿಸುತ್ತಾರೆ. ಐರೋಪ್ಯರ ಮನಸ್ಥಿತಿಯ ಬಗ್ಗೆ ಜೈಶಂಕರ್ ಹೇಳಿದ ಮಾತುಗಳು ವೈರಲ್ ಆದ ನಂತರದಲ್ಲಿ ಭಾರತದ ಜರ್ಮನ್ ರಾಯಭಾರಿ ವಾಲ್ಟರ್ ಜೆ. ಲಿಂಡ್ನರ್ ಟ್ವೀಟ್ ಮಾಡಿ ಜೈಶಂಕರ್ ಹೇಳಿದ್ದು ಸರಿ ಎಂದು
ಬೆಂಬಲಿಸಿದ್ದರು. ನಿಜಾರ್ಥದಲ್ಲಿ ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಸಮರ್ಪಕವಾಗಿ ನಿರ್ವಹಿಸುವ ಬಹುದೊಡ್ಡ ರಾಯಭಾರಿಯಾಗಿ ಜೈಶಂಕರ್ ಕೆಲಸ ಮಾಡುತ್ತಿದ್ದಾರೆ.
ಅವರ ಅನುಭವ ಮತ್ತು ಪ್ರೌಢಿಮೆಗಳ ಕಾರಣದಿಂದ ಇದು ಸಾಧ್ಯವಾಗಿದೆ. ಅವರು ಹಿಂದೆ ಭಾರತದ ಪರವಾಗಿ ವಿದೇಶಗಳಲ್ಲಿ ಕಾರ್ಯದರ್ಶಿಯಾಗಿ ಮಾತ್ರವಲ್ಲ, ೨೦೧೯ರ ತನಕ ಚೀನಾ, ರಷ್ಯಾ, ಅಮೆರಿಕ ದೇಶಗಳಲ್ಲಿ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಜೈಶಂಕರ್ ಅವರ ಈ ವಿಶೇಷತೆಯನ್ನು ಗಮನಿಸಿದ್ದ ಮೋದಿಯವರು ೨೦೧೯ರಲ್ಲಿ ಅವರನ್ನು ವಿದೇಶಾಂಗ ಸಚಿವರಾಗಿ ನಿಯುಕ್ತಿ ಮಾಡಿದ್ದರು. ಆಗಿನಿಂದಲೇ ಇಡೀ
ವಿಶ್ವವು ಜೈಶಂಕರ್ ಅವರ ಮಾತುಗಳನ್ನು ಗಮನಿಸುತ್ತಿದೆ.
ಅವರ ವಾಕ್‌ಪ್ರಹಾರಕ್ಕೆ ಎದುರುತ್ತರ ಕೊಡುವ ತಾಕತ್ತು ಯಾರಿಗೂ ಇಲ್ಲ. ಜೈಶಂಕರ್ ಈಗ ವಿಶ್ವದೆಲ್ಲೆಡೆ ಗರ್ಜಿಸುತ್ತಿದ್ದಾರೆ. ಭಾರತವು ದುರ್ಬಲ ದೇಶವಲ್ಲ ಎಂಬ ಮೋದಿಯವರ ನೀತಿಗೆ ಉತ್ತರವಾಗಿ ಜೈಶಂಕರ್ ವಿದೇಶಗಳಲ್ಲಿ ಭಾರತದ ಘನತೆಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದಾರೆ. ವಿಶ್ವಗುರುವಾಗುವ ದಿಸೆಯಲ್ಲಿ ಭಾರತ ಈಗಾಗಲೇ ದಾಪುಗಾಲಿಟ್ಟು ಮುನ್ನಡೆದಿದೆ. ಭಾರತವು ಇದೀಗ ಶಕ್ತಿಯುತವಾದ ಜಿ-೨೦ ಒಕ್ಕೂಟದ
ಅಧ್ಯಕ್ಷ ಸ್ಥಾನದಲ್ಲಿದೆ, ಜತೆಗೆ ಶಾಂಘೈ ಕೋ-ಆಪರೇಟಿವ್ ಆರ್ಗನೈಸೇಷನ್‌ನಲ್ಲೂ ಮುಂಚೂಣಿಯಲ್ಲಿದೆ. ಭಾರತದ ರಾಷ್ಟ್ರೀಯತೆಯ ಕುರಿತು ಜೈಶಂಕರ್‌ರನ್ನು ಕೇಳಿದಾಗ ಅವರು ದೃಢಮಾತುಗಳಲ್ಲಿ, ‘ಭಾರತದ ರಾಷ್ಟ್ರೀಯತೆಯು ವಿಸ್ತೃತವಾದ ಅಂತಾರಾಷ್ಟ್ರೀಯತೆಯನ್ನು ಪ್ರಚುರಪಡಿಸುವ
ಕೆಲಸದಲ್ಲಿ ನಿರತವಾಗಿದೆ’ ಎಂದು ಹೇಳಿದ್ದರು.
ವಿಶ್ವ ರಾಜಕಾರಣದ ಇತಿಹಾಸದ ಪ್ರಕಾರ, ತಮ್ಮ ಪ್ರಖರ ಚಿಂತನೆಗಳ ಕುರಿತು ಗರ್ಜಿಸಲೂ ಬೇಕು ಮತ್ತು ಸಮಾನತೆಯ ತಳಹದಿಯಲ್ಲಿ ರಾಜತಾಂತ್ರಿಕ ನಡೆಗಳನ್ನೂ ಮಾಡಬೇಕು. ಆಗ ಮಾತ್ರವೇ ಯಶಸ್ಸು ಸಿಗುವುದು ಸಾಧ್ಯ. ಗುಪ್ತಚರ ನಡವಳಿಕೆಗಳಲ್ಲಿ ಸಾಕಷ್ಟು ಅನುಭವ ಮತ್ತು ಕೌಶಲವನ್ನು ಹೊಂದಿರುವ ಅಜಿತ್ ದೋವಲ್‌ರಿಗಿಂತ ಸಮರ್ಥರು ಬೇರಾರು ಸಿಗಲು ಸಾಧ್ಯ? ಇವರಿಬ್ಬರೂ ತಂತಮ್ಮ ಕೆಲಸಗಳನ್ನು ಸದ್ದಿಲ್ಲದೆ ನಿರ್ವಹಿಸುತ್ತಾರೆ ಮತ್ತು ಒಮ್ಮಿಂದೊಮ್ಮೆಗೆ ವಿಶ್ವವೇ ಬೆಚ್ಚಿಬೀಳುವಂತೆ ಮಾಡುತ್ತಾರೆ.
ಇತ್ತೀಚಿನ ಉದಾಹರಣೆಯೊಂದನ್ನು ಗಮನಿಸೋಣ. ದೋವಲ್ ಅವರು ಫೆಬ್ರವರಿ ಮೊದಲ ವಾರದಲ್ಲಿ ಅಮೆರಿಕದಲ್ಲಿದ್ದರು. ಅವರನ್ನು ಭೇಟಿಮಾಡಿದ ಅಮೆರಿಕದ ಸೆಕ್ರೆಟರಿ ಆಂಟನಿ ಬ್ಲಿಂಕೆನ್ ಅವರು, ‘ಜಾಗತಿಕ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ಸಹಕಾರಹಸ್ತ ಚಾಚಲು ಅಮೆರಿಕ ಸಿದ್ಧವಿದೆ’ ಎಂದು ಹೇಳಿದರು. ಇದಾದ ನಂತರದಲ್ಲಿ ದೋವಲ್ ಬ್ರಿಟನ್‌ಗೆ ಬಂದರು. ಅಲ್ಲಿ ಅವರು ಬ್ರಿಟನ್ನಿನ ಭದ್ರತಾ ಸಲಹೆಗಾರ
ಟಿಮ್ ಬಾರೋ ಅವರನ್ನು ಲಂಡನ್‌ನಲ್ಲಿ ಭೇಟಿಮಾಡಿದರು.
ವಿಶೇಷವೆಂದರೆ, ಈ ಸಭೆಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಭಾಗವಹಿಸಿದ್ದರು. ನಂತರ ದೋವಲ್ ಅವರು ರಷ್ಯಾಕ್ಕೆ ತೆರಳಿ, ಅಫ್ಘಾನಿಸ್ತಾನದ ವಿಚಾರದಲ್ಲಿ ಅಲ್ಲಿ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಇರಾನ್, ಕಝಕಿಸ್ತಾನ, ಚೀನಾ, ತಜಕಿಸ್ತಾನ, ತುರ್ಕಮೆನಿಸ್ತಾನ, ರಷ್ಯಾ ಮತ್ತು ಉಜ್ಬೇಕಿಸ್ತಾನದ ಭದ್ರತಾ ಸಲಹೆಗಾರರು ಭಾಗವಹಿಸಿದ್ದರು. ಆದರೆ ಪಾಕಿಸ್ತಾನದಿಂದ ಯಾರೂ ಬಂದಿರಲಿಲ್ಲ. ಪಾಕಿಸ್ತಾನದಲ್ಲಿ
ರಾಷ್ಟ್ರೀಯ ಭದ್ರತಾ ಸಲಹೆಗಾರರೇ ಇಲ್ಲ ಮತ್ತು ಆ ದೇಶ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸಿತ್ತು. ಪಾಕಿಸ್ತಾನದ ಈ ನಡೆ ರಾಜತಾಂತ್ರಿಕವಾಗಿ ಭಾರತಕ್ಕೆ ಗೆಲುವನ್ನು ಕೊಟ್ಟಂತಿತ್ತು.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳನ್ನು ವಾಪಸು ಕರೆಸಿಕೊಳ್ಳಲು ಪಾಕಿಸ್ತಾನ ಇನ್ನಿಲ್ಲದ ಹುನ್ನಾರ ನಡೆಸಿತ್ತು. ಈಗ ಅದೇ ತಾಲಿಬಾನ್ ಪಾಕಿಸ್ತಾನಕ್ಕೆ ಮಗ್ಗುಲಮುಳ್ಳಾಗಿದೆ. ಒಂದು ಕಾಲದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಪಾರಮ್ಯ ಭಾರತಕ್ಕೆ ಹಿನ್ನಡೆ ಎಂದು ಪರಿಗಣಿಸಲಾಗಿತ್ತು, ಆದರೆ
ಇದೀಗ ಅವರೇ ಭಾರತದೊಂದಿಗೆ ಸ್ನೇಹಾಚಾರ ಬಯಸುವ ಸ್ಥಿತಿ ಬಂದಿದೆ. ಅಲ್ಲಿನ ನಾಗರಿಕರು ಕೂಡ ಪಾಕಿಸ್ತಾನವನ್ನು ವಿರೋಧಿಸುತ್ತಾರೆ. ಇದನ್ನು ಸಾಽಸುವ ದಿಸೆಯಲ್ಲಿ ದೋವಲ್ ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಾಮಾನ್ಯವಾಗಿ ಬೇರೆ ದೇಶಗಳ ಕ್ಯಾಬಿನೆಟ್ ಮಂತ್ರಿಗಳನ್ನೂ ಭೇಟಿಯಾಗಿ ಮಾತನಾಡಿಸುವುದಿಲ್ಲ.
ಅಂಥದ್ದರಲ್ಲಿ ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿ ದೋವಲ್ ಭೇಟಿಗೆ ಅವರೇ ಬಂದರು. ಇದು ದೋವಲ್ ಅವರ ವ್ಯಕ್ತಿತ್ವ ಮತ್ತು ಜನಪ್ರಿಯತೆಯ
ದ್ಯೋತಕ. ಇನ್ನೊಂದು ಮಾತು- ವ್ಯಕ್ತಿಗತವಾಗಿ ಪುಟಿನ್ ಮತ್ತು ದೋವಲ್ ಇಬ್ಬರೂ ವೃತ್ತಿಪರ ಗೂಢಚಾರರು. ಭಾರತದ ಮಹತ್ವ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡಿದೆ. ಚೀನಾ ವಿರುದ್ಧ ಸಮರ ಸಾರಬೇಕೆಂದರೆ ಭಾರತದ ಸಹಾಯ ಬೇಕೇ ಬೇಕು ಎಂದು ಅಮೆರಿಕ ಪ್ರಬಲವಾಗಿ ನಂಬಿದೆ. ರಷ್ಯಾದಲ್ಲೂ ಭಾರತದ ಮಾತಿಗೆ ಭಾರಿ ಬೆಲೆ ಇದೆ, ಅಂತೆಯೇ ಭಾರತದ ಮೇಲೆ ರಷ್ಯಾಗೆ ಅಪಾರವಾದ ನಂಬುಗೆಯಿದೆ. ಅದು ಬೇರಿನ್ನಾವ ದೇಶವನ್ನೂ ಅಷ್ಟು ಸುಲಭಕ್ಕೆ ನಂಬುವುದಿಲ್ಲ. ರಾಜತಾಂತ್ರಿಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇವೆಲ್ಲವನ್ನೂ ಚೆನ್ನಾಗಿ ಅರ್ಥಮಾಡಿ ಕೊಂಡಿದ್ದಾರೆ. ದೃಢವಾದ ರಾಜತಾಂತ್ರಿಕ ಹೆಜ್ಜೆಗಳನ್ನು ಇಡುವಲ್ಲಿ ಅವರು ಚತುರ ಆಟಗಾರ. ಅವರಿಗೆ ಜೈಶಂಕರ್ ಮತ್ತು ಅಜಿತ್ ದೋವಲ್ ಮೇಲೆ ಅಪಾರವಾದ ಭರವಸೆ ಇದೆ. ಇವರಿಬ್ಬರೂ ಭಾರತದ ಅಮೂಲ್ಯ ರತ್ನಗಳು.