Friday, 20th September 2024

ನಮ್ಮ ಫಾಲಲಿಪಿಯೋ ನೀನು ಜನನಾಯಕಾ…

ಸಂಸ್ಮರಣೆ

ವಿನಾಯಕ ವೆಂ.ಭಟ್ಟ

ನಿನ್ನೆ (ಮಾ.೧೭), ಕನ್ನಡ ಸಾರಸ್ವತ ಲೋಕದ ಪಾಲಿಗೆ ‘ವ್ಯಾಸ-ವಾಲ್ಮೀಕಿ’ ಸದೃಶರಾಗಿದ್ದ ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಜನ್ಮದಿನ. ಈ ಸಂದರ್ಭ ದಲ್ಲಿ, ನಿತ್ಯಪ್ರಸ್ತುತವಾಗಿರುವ ಅವರ ಸಾಮಾಜಿಕ ಕಳಕಳಿಯ ವಿಷಯಗಳನ್ನು ಸ್ಮರಿಸುವುದು ಈ ಲೇಖನದ ಉದ್ದೇಶ.

ಕನ್ನಡ, ಸಂಸ್ಕೃತ, ತೆಲುಗು, ತಮಿಳು ಮತ್ತು ಆಂಗ್ಲಭಾಷೆಯಲ್ಲಿ ಪ್ರಕಾಂಡ ಪಾಂಡಿತ್ಯವಿದ್ದ ಗುಂಡಪ್ಪನವರು ಸಾಮಾಜಿಕ, ಆಧ್ಯಾತ್ಮಿಕ, ಆಡಳಿತ, ರಾಜಕೀಯ, ವಿಜ್ಞಾನ, ಆರ್ಥಿಕ ಮುಂತಾದ ಅನೇಕ ವಿಷಯಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಹೀಗಾಗಿ, ‘ಆಡುಮುಟ್ಟದ ಸೊಪ್ಪಿಲ್ಲ, ಸಾಹಿತ್ಯದಲ್ಲಿ ಗುಂಡಪ್ಪನವರು ಉದ್ಧರಿಸದ ವಸ್ತು-ವಿಷಯಗಳಿಲ್ಲ’ ಎಂದು ಹೇಳಬಹುದು. ಡಿವಿಜಿಯವರು ‘ಜ್ಞಾಪಕ ಚಿತ್ರಶಾಲೆ’, ‘ಜೀವನ ಧರ್ಮ ಯೋಗ’ ಅಥವಾ ‘ಭಗವದ್ಗೀತಾ ತಾತ್ಪರ್ಯ’ ಮುಂತಾದ ಜನಪ್ರಿಯ ಕೃತಿಗಳನ್ನು ರಚಿಸಿದ್ದರೂ, ‘ಮಂಕುತಿ ಮ್ಮನ ಕಗ್ಗ’ ಎಂಬ ತಮ್ಮ ವಿಸ್ಮಯಕಾರಿ ಕೃತಿಯಿಂದಾಗಿಯೇ
ವಿಶ್ವಕ್ಕೆಲ್ಲಾ ಪರಿಚಿತರಾದವರು. ಅವರ ಕಗ್ಗವನ್ನು ಓದದ ಅಥವಾ ಕೇಳದ ಕನ್ನಡಿಗನೇ ಇಲ್ಲವೆನ್ನಬಹುದು. ಅಷ್ಟು ಜನಜನಿತವಾದ ಸಾಹಿತ್ಯ ಪುಂಜ ಅದು.

ಪತ್ರಕರ್ತರಾಗಿಯೂ ಕೆಲಸ ಮಾಡಿರುವ ಗುಂಡಪ್ಪನವರು, ಮಾಧ್ಯಮಗಳಿಗೆ ಇಷ್ಟೊಂದು ಸ್ವಾತಂತ್ರ್ಯ ಇಲ್ಲದ ಕಾಲದಲ್ಲೂ ಚುನಾವಣಾ ರಾಜಕೀಯವನ್ನು ಮತ್ತು ರಾಜಕಾರಣಿಗಳನ್ನು ಅತ್ಯಂತ ನಿರ್ಭೀತಿಯಿಂದ ವಿಡಂಬನೆ ಮಾಡಿದಂಥವರು. ಚುನಾವಣಾ ರಾಜಕೀಯ ಮತ್ತು ರಾಜಕಾರಣಿಗಳ ಬಗ್ಗೆ ಇಂದಿಗೂ ಪ್ರಸ್ತುತ ಎನಿಸುವ ಅನೇಕ ಪದ್ಯಸಾಹಿತ್ಯವನ್ನು ಅವರು ರಚಿಸಿದ್ದಾರೆ ಎನ್ನುವುದು ಬಹಳ ಜನ ಕನ್ನಡಿಗರಿಗೆ
ತಿಳಿದಿರಲಿಕ್ಕಿಲ್ಲ. ಸುಮಾರು ಐದು ದಶಕಗಳಿಗೂ ಹಿಂದೆ ಅವರು ಬರೆದ ಇಂಥ ಪದ್ಯಗಳು ಇಂದಿಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ ಎಂದಾದರೆ,
ಡಿವಿಜಿಯವರಿಗೆ ಎಂಥಾ ದೂರದರ್ಶಿತ್ವ ಇತ್ತು ಎನ್ನುವುದು ತಿಳಿಯುತ್ತದೆ ಮತ್ತು ಭಾರತದ ರಾಜಕಾರಣ ಅಂದಿನಿಂದ ಇಂದಿನವರೆಗೂ ಹಾಗೆಯೇ ಇದೆ, ಬದಲಾಗೇ ಇಲ್ಲ ಎಂತಲೂ ಅರ್ಥವಾಗುತ್ತದೆ.

‘ಬಿಡಿಸೆನ್ನ ಈ ರಾಜ್ಯಕರ (ರಾಜಕಾರಣಿಗಳ) ಹಿಡಿತದಿಂದ ವಿಧಿಯೇ’ ಎಂದು ಶುರುವಾಗುವ ಪದ್ಯದಲ್ಲಿ ಅವರು, ‘ರಾಜಕೀಯ ಇಕ್ಕಟ್ಟಿನ ಪರಿಸ್ಥಿತಿಯೊಳಗೆ ಮತ್ತು ದುಷ್ಟ ರಾಜಕಾರಣಿಗಳ ಹಿಡಿತದೊಳಗೆ ಸಿಕ್ಕಿಬಿದ್ದಿರುವ ದೇಶದ ಪ್ರಜಾಪ್ರಭುತ್ವವನ್ನು ಹೇಗಾದರೂ ಪಾರುಮಾಡು’ ಎಂದು ವಿಧಿಯಲ್ಲಿ ಕಳಕಳಿ ಯಿಂದ ಪ್ರಾರ್ಥಿಸುತ್ತಾರೆ. ‘ಮಾತು ನೂಲನು ಜೇಡ ಬಲೆಯಾಗಿ ನೆಯ್ದು, ವೋಟುನೊಣಗಳ ಪಿಡಿವ ಹೂಟವನು ಮಾಡಿ, ಊಟಕ್ಕೆ ಬಾಯ್ದೆರೆವ ಮಾಟ ಗಾರರಿಗೆ ನಾಂ ಚೇಟಿಯಾಗುವೆನೆ? ಈ ಕೋಟಲೆಯ ಹರಿಸೈ’ ಎಂಬ ಸಾಲಿನಲ್ಲಿ, ‘(ಉಚಿತ) ಊಟಕ್ಕೆ ಬಾಯಿಬಿಡುವ ಪ್ರಜೆಗಳ ಮತವೆಂಬ ನೊಣವನ್ನು ಬಂಧಿಸಲು ಮಾತೆಂಬ ದಾರದಿಂದ ಜೇಡರಬಲೆಯನ್ನು ಹೆಣೆದು ನಮ್ಮನ್ನು ನೊಣವೆಂದು ಭಾವಿಸುತ್ತಾ ಬಲೆಯಲ್ಲಿ ಸಿಕ್ಕಿಸುತ್ತಿದ್ದಾರೆ.

ಹಾಗಾಗಿ, ಇವರ ಈ ಕೋಟಲೆಗಳಿಂದ ದೇವರೇ ನೀನೇ ಪಾರುಮಾಡು’ ಎನ್ನುತ್ತಾರೆ ಡಿವಿಜಿ. ಅವರು ಮುಂದುವರಿದು, ‘ನಮ್ಮ ಫಲಲಿಪಿಯೋ ನೀನು- ಜನನಾಯಕಾ’ ಎನ್ನುವ ಮೂಲಕ, ‘ಇಂಥ ಜನಪ್ರತಿನಿಧಿಗಳನ್ನು ಬೈದು ಪ್ರಯೋಜನವಿಲ್ಲ, ಇವರನ್ನು ಹೊಂದಿರುವುದು ನಮ್ಮ ಹಣೆಬರಹವೇ ಸರಿ’ ಎನ್ನುತ್ತಾರೆ. ಹಳಸಲು ಚಿಂತನೆಗಳಿಂದ ನಾರುತ್ತಿರುವ ರಾಜಕಾರಣ ದಿನದಿಂದ ದಿನಕ್ಕೆ ಅಧೋಮುಖವಾಗಿ ಸಾಗುತ್ತಿದೆ ಎನ್ನುವುದನ್ನು ಸಾರುವ ಡಿವಿಜಿ ಯವರ ಪದ್ಯಗಳು ಇಂದಿಗೂ ಹೇಗೆ ಪ್ರಸ್ತುತವೆನಿಸುತ್ತವೆ ನೋಡಿ.

ಈಡೇರಿಸಲು ಸಾಧ್ಯವಿಲ್ಲದ ಸುಳ್ಳು ಆಶ್ವಾಸನೆಗಳನ್ನು ನೀಡುವುದು, ಉಚಿತ ಗ್ಯಾರಂಟಿಗಳು ಮುಂತಾಗಿ ಆಸೆ ತೋರಿಸಿ ಮತದಾರರನ್ನು ಮತ್ತು ದೇಶದ ಆರ್ಥಿಕ ಸ್ಥಿತಿಗತಿಯನ್ನು ಹಳ್ಳಕ್ಕೆ ತಳ್ಳುವ ಹುನ್ನಾರವನ್ನು ಇಂದೂ ನಾವು ನೋಡುತ್ತಿದ್ದೇವೆ. ಈ ಕುರಿತ ಅವರ ಇನ್ನೂ ಕೆಲವು ಸ್ವಾರಸ್ಯಕರ ಪದ್ಯಗಳನ್ನು ನೋಡೋಣ. ‘ಈ ನಾಟಕ, ದೇಶೋದ್ಧಾರಕ ಮೋಸ ನಿವಾರಕ ವೇಷದ ನಾಟಕವೋ, ಆಶಾದಾಯಕ ಘೋಷಣಕಾರಕ ಹಾಸ್ಯವಿಕಾರಕವೋ’ ಎಂದು ಡಿವಿಜಿ ಬಣ್ಣಿಸುತ್ತಾರೆ.

‘ದೇಶಸ್ವತಂತ್ರಕ್ಕೆ ಮೀಶೆಬಿಟ್ಟವ ನಾನು; ಕೊಡಿರೆನಗೆ ಮತವ, ಹಿಡಿಯಿರಿದೋ ಹಿತವ; ಎನ್ನುವುದೊಂದು ಪಕ್ಷವನ್ದರೆ; ರಷ್ಯ ಕಲ್ಪಕವೃಕ್ಷ ಕೃಷಿಯ ಬಲ್ಲವ ನಾನು, ಇತ್ತ ತಾ ಮತವ, ಎತ್ತಿಕೋ ಹಿತವ ಇಂತೆಂದು ಬಂದನಾ ಕಮ್ಯುನಿಸ್ಟವನು’ ಎಂದು ಕಮ್ಯುನಿಸ್ಟ್ ಸಿದ್ಧಾಂತವನ್ನು ಜರೆಯುತ್ತಾರೆ. ಬಣ್ಣಬಣ್ಣದ ಸುಳ್ಳು ಮಾತುಗಳಿಂದ ಚುನಾವಣೆಯಲ್ಲಿ ಗೆದ್ದು ಬಂದು ಮಂತ್ರಿಯಾಗಿ ಮೆರೆಯುವ ಪುಢಾರಿಗಳು, ತಾವು ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ನಂತರ ಮರೆತೇಬಿಡುತ್ತಾರೆ. ಅಂಥವರನ್ನು ಒಂದು ದಿನ ‘ರೋಸಿಹೋದ ಜನ ಕಡೆಗೂರ ಚೌಕದಲಿ’, ಔತಣಕ್ಕೆಂದು ಆಮಂತ್ರಿಸಿ ತರಾಟೆಗೆ ತೆಗೆದುಕೊಳ್ಳು ವಂತಾಗುತ್ತದೆ ಎಂದು ಇನ್ನೊಂದು ಪದ್ಯದಲ್ಲಿ ಎಚ್ಚರಿಸುತ್ತಾರೆ.

ಆ ಎಚ್ಚರಿಕೆಗೆ ಮಂತ್ರಿಯ ಉತ್ತರ ಇನ್ನೊಂದು ಪದ್ಯದ ರೂಪದಲ್ಲಿ ಹೀಗಿದೆ: ‘ವೇಷ ತೊಟ್ಟೆನು ನಿಮ್ಮ ಮನಮೆಚ್ಚಿಗಾಗಿ, ಭಾಷೆ ಕೊಟ್ಟೆನು ನಿಮ್ಮ ವರಪತ್ರಕಾಗಿ (ಮತಪತ್ರ). ಈ ಸಾರಿ ನೀಮೆನ್ನನಾರಿಸಿರಿ, ನಾನು ಮೂಸಲದ ಋಣಬಡ್ಡಿಯೆಲ್ಲ ತೀರಿಪೆನು’. ನಿಮ್ಮನ್ನು ಮೆಚ್ಚಿಸಲಿಕ್ಕಾಗಿಯೇ ನಾನು
ವರ್ಣರಂಜಿತವಾದ ವೇಷ ತೊಟ್ಟಿದ್ದು, ಭಾಷೆ ಇತ್ತಿದ್ದು. ಆದರೆ, ಇನ್ನೊಂದು ಸಲ ನನ್ನನ್ನು ಆರಿಸಿ ಕಳುಹಿಸಿ ನೋಡಿ, ನಿಮ್ಮ ಋಣವನ್ನು ಬಡ್ಡಿ ಸಮೇತ ತೀರಿಸುತ್ತೇನೆ ಎಂದಾಗ ನಾವು ಮತ್ತೆ ಅವನನ್ನು ನಂಬುತ್ತೇವೆ! ‘ದೂರ‍್ವುದೇಕವನ ನಾಮ್? ಅವನ ಮನಸೊಳಿತು; ಪೂರ್ವಕರ್ಮವು ನಮ್ಮದ ದರ ಫಲವಿನಿತು’, ಅಂದರೆ, ನಮ್ಮ ಪ್ರತಿನಿಧಿ ಒಳ್ಳೆಯವನೇ, ಅವನನ್ನು ಏಕೆ ದೂರುವುದು? ನಮ್ಮ ಪ್ರಾರಬ್ಧವನ್ನು ಜರೆಯಬೇಕಷ್ಟೇ ಎಂದುಕೊಳ್ಳುತ್ತಾ ಮುಂದಿನ ಚುನಾವಣೆಯಲ್ಲೂ ಆತನನ್ನೇ ನಾವು ಆರಿಸಿ ಕಳಿಸುತ್ತೇವೆ.

ಬಿದ್ದ ಪೆಟ್ಟುಗಳಿಂದ ಜನ ಪಾಠ ಕಲಿಯುವುದೇ ಇಲ್ಲ ಎನ್ನುವ ಕಳಕಳಿ ಡಿವಿಜಿ ಅವರದ್ದು. ‘ಕಲಿಯಿತೇಂ ಜನತೆಯಂಗೈಯ ವೈಕುಂಠದಿಂದ ರಾಜ್ಯ ಪಾಠವನು? ತಿಳಿಯಿತೇಂ ಕಂಡ ಮುಂಗೈಯ ಕೈಲಾಸದಿಂ ಭೋಜ್ಯದೂಟವನು? ಮರೆವು ಕವಿಯಿತು ಜನವನಿಶಿನಿದ್ದೆಯೊಡನೆ; ಕರಗಿತಾ ಕಹಿನೆನಪು ಬಿಸಿಮುದ್ದೆಯೊಡನೆ’- ಬಿಸಿ ಮುದ್ದೆಯೊಡನೆ ದುಷ್ಟ ರಾಜಕಾರಣಿಯ ಕುರಿತ ಮತದಾರನ ಎಲ್ಲ ಕಹಿ ನೆನಪುಗಳು ಕರಗಿಹೋಯಿತು ಎನ್ನುವ ಡಿವಿಜಿ ಅವರ ಈ ಮಾತು ಇಂದಿಗೂ ಎಷ್ಟು ಸತ್ಯ!

ಕೊನೆಯಲ್ಲಿ, ಹಿರಿತನವಿದ್ದರೂ, ಕ್ಷೇತ್ರದ ಕೆಲಸವನ್ನು ಎದ್ದೂ ಬಿದ್ದೂ ಮಾಡಿದ್ದರೂ, ವರಿಷ್ಠರ ನಿರ್ಧಾರದಿಂದ ಟಿಕೆಟ್ ವಂಚಿತರಾಗಿ ಬಂಡಾಯವನ್ನು ಚಿಂತಿಸುತ್ತಿರುವ ಆಕಾಂಕ್ಷೀ ನಾಯಕರುಗಳಿಗಾಗಿಯೇ ಹೇಳಿದ ಮಾತಿನಂತಿದೆ ಈ ಕಗ್ಗ: ‘ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು, ದೊರೆತುದು ಹಸಾದವೆಂದುಣ್ಣು ಗೊಣಗುಡದೆ, ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ; ಹೊರಡು ಕರೆಬರಲ್ ಅಳದೆ ಮಂಕುತಿಮ್ಮ’.

ಲೋಕಸಭೆಗಲ್ಲದಿದ್ದರೇನಂತೆ? ಮುಂದೆ ವಿಧಾನಸಭೆಗೋ, ಪರಿಷತ್ತಿಗೋ ನಿಮ್ಮನ್ನು ಸೇರಿಸೋಣ ಬಿಡಿ, ಅಥವಾ ಪಕ್ಷದ ಕೆಲಸಕ್ಕೆ ನಿಮ್ಮನ್ನು ನಿಯೋಜಿಸ ಲಾಗುತ್ತದೆ. ಪಕ್ಷಕ್ಕೆ ನಿಮ್ಮ ಅಗತ್ಯ ಈಗ ಬಹಳವಿದೆ ಎಂದು ವರಿಷ್ಠರು ಆದೇಶಿಸಿದಾಗ, ಆಕಾಂಕ್ಷಿಗೆ ತನಗೆ ದೊರಕಿದ್ದನ್ನು ದೇವರ ಪ್ರಸಾದ ಎಂದು ಭಾವಿಸಿ ಸ್ವೀಕರಿಸದೆ ಬೇರೆ ವಿಽಯಿರುವುದಿಲ್ಲ ಎಂದಂತಾಯಿತು. ಇನ್ನೂ ಮುಂದುವರಿದು, ‘ನಿಮಗೆ ವಯೋಮಿತಿ ಮೀರಿದೆ ಎನ್ನುವ ಕರೆ ವರಿಷ್ಠರಿಂದ ಏನಾದರೂ ಬಂದರೆ, ನೀವು ರಾಜಕೀಯ ನಿವೃತ್ತಿ ಘೋಷಿಸಿ ಗೊಣಗದೇ ಹೊರಡುವುದೇ ಲೇಸು’ ಎನ್ನುವಂತಿದೆ ಈ ಕಗ್ಗದ ಸಾರ.

ವಿಡಂಬನಾತ್ಮಕ ಎಂದು ಮೇಲ್ನೋಟಕ್ಕೆ ಕಾಣುವ ಡಿವಿಜಿ ಯವರ ಈ ಎಚ್ಚರಿಕೆಯ ಮಾತುಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ ಎಂದಿಗಿಂತ ಈಗ ಹೆಚ್ಚಿದೆ. ದುಷ್ಟರೂ-ಭ್ರಷ್ಟರೂ, ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ವಿಭಜಿಸಲು ಹೊರಟವರು ಮತ್ತು ದೇಶದ ನಿಜಗುರುತುಗಳಿಗೆ
(ಅಸ್ಮಿತೆ) ಅಭಿಮಾನಿಸದೇ ಅವಮಾನಿಸುವ ಜನಪ್ರತಿನಿಧಿಗಳನ್ನು ದೂರವಿಡುವ ಮತ್ತು ಇದ್ದಿದ್ದರೊಳಗೆ ಉತ್ತಮರನ್ನು ಹಾಗೂ ಪ್ರಜಾಪ್ರಭುತ್ವದ ಮೂಲಕ್ಕೆ ಧಕ್ಕೆಯುಂಟುಮಾಡ ದವರನ್ನು ನಮ್ಮ ಮುಂದಿರುವ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಮಾಡುವ ಅವಕಾಶ ಪ್ರಜೆಗಳಾದ ನಮಗಿದೆ.
ಈ ಬಾರಿಯಾದರೂ ಮತದಾರ ತನ್ನ ನಾಗರಿಕ ಪ್ರಜ್ಞೆಯಿಂದ ಅರ್ಹರಾದವರಿಗೆ ಮೌಲ್ಯಯುತ ಮತ ಚಲಾಯಿಸುವ ಮೂಲಕ ಉತ್ತಮ ಸರಕಾರ ಬರಲು ಸಹಕರಿಸುತ್ತಾನೋ ಅಥವಾ ಮನೆಯ ಕೆಳಗೇ ಮತಗಟ್ಟೆ ಇದ್ದರೂ ಮತದಾನ ಮಾಡದೇ ಚುನಾವಣೆಯ ದಿನ ಕುಟುಂಬ ಸಮೇತ ಪ್ರವಾಸಕ್ಕೆ ಹೋಗುತ್ತಾನೋ ಎನ್ನುವುದನ್ನು ಕಾದುನೋಡಬೇಕಾಗಿದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)