Thursday, 12th December 2024

ಇನ್ನೊಂದು ಪ್ರಾದೇಶಿಕ ಪಕ್ಷ: ಗಾಲಿ ಉರುಳಬಹುದೇ ?

ರಾಜಕಾರಣ

ರಮಾನಂದ ಶರ್ಮ

ರಾಜಕೀಯದಲ್ಲಿ ಅಪಾರ ಅನುಭವ ಇರುವ ರೆಡ್ಡಿಯವರಿಗೆ, ಕರ್ನಾಟಕವು ವಿವಿಧ ಭಾಷೆಗಳನ್ನು ಮಾತನಾಡುವ ೬ ರಾಜ್ಯ ಗಳಿಂದ ಸುತ್ತುವರಿಯಲ್ಪಟ್ಟಿದ್ದು, ಬದುಕನ್ನು ಹುಡುಕಿ ಈ ರಾಜ್ಯದವರು ಮತ್ತು ಉತ್ತರ ಭಾರತದಿಂದ ಕರ್ನಾಟಕಕ್ಕೆ ದಾಂಗುಡಿ ಇಡುತ್ತಿದ್ದು, ಪ್ರಾದೇಶಿಕ ಪಕ್ಷಗಳು ನೆಲೆಗೊಳ್ಳುವುದು ಕಷ್ಟ ಎನ್ನುವ ಸತ್ಯವನ್ನು ಅವರು ತಿಳಿಯದಿರುವುದು ಆಶ್ಚರ್ಯ.

ಅಸ್ಸಾಂ, ಗುಜರಾತ್ ಮತ್ತು ಕರ್ನಾಟಕ ಹೊರತು ಪಡಿಸಿ ಬಹುತೇಕ ಎಲ್ಲಾ ಹಿಂದಿಯೇತರ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಅಧಿಕಾರ ಇದೆ. ಕರ್ನಾಟಕದಲ್ಲೂ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನವಾಗಿದೆ. ಮೈಸೂರು ಮೂಲದ ಸಾಹುಕಾರ ಚೆನ್ನಯ್ಯನವರ ಪ್ರಜಾ ಪಕ್ಷ, ಶಾಂತವೇರಿ ಗೋಪಾಲಗೌಡರ ಸಂಯುಕ ಮತ್ತು ಪ್ರಜಾ ಸೋಷಿಯಲಿಸ್ಟ್ ಪಕ್ಷಗಳು, ಕೆಂಗಲ್ ಹನುಮಂತಯ್ಯನವರ ಸುರಾಜ್ಯ ಪಕ್ಷ, ಕೆ.ಎಚ್. ಪಾಟೀಲರ ರೆಡ್ಡಿ ಕಾಂಗ್ರೆಸ್ ಪಕ್ಷ, ದೇವರಾಜ ಅರಸು ಅವರ ಅರಸು ಕಾಂಗ್ರೆಸ್, ಗುಂಡೂರಾಯರ ಇಂದಿರಾ ಕಾಂಗ್ರೆಸ್, ಎ.ಕೆ. ಸುಬ್ಬಯ್ಯನವರ ಕನ್ನಡನಾಡು, ಬಂಗಾರಪ್ಪನವರ ಕರ್ನಾಟಕ ಕ್ರಾಂತಿ ರಂಗ- ಕರ್ನಾಟಕ ಕಾಂಗ್ರೆಸ್, ರಾಮಕೃಷ್ಣ ಹೆಗೆಡೆಯವರ ಲೋಕಶಕ್ತಿ, ಸಾರಿಗೆ ಮತ್ತು ಪತ್ರಿಕೋದ್ಯಮಿ ವಿಜಯ ಸಂಕೇಶ್ವರರ ಕನ್ನಡನಾಡು, ಶ್ರೀರಾಮುಲು ರವರ ಬಿಎಸ್‌ಅರ್. ಪಕ್ಷ, ಪ್ರಭಾಕರ ರೆಡ್ಡಿ ಯವರ ಕನ್ನಡ ಪಕ್ಷ, ವಾಟಾಳ ನಾಗರಾಜರ ವಾಟಾಳ ಚಳುವಳಿ ಪಕ್ಷ, ಲಂಕೇಶರ ಪ್ರಗತಿ ರಂಗ, ನೈಸ್ ರೋಡ್ ಖ್ಯಾತಿಯ ಅಶೋಕ್ ಖೇಣಿಯವರ ಕರ್ನಾಟಕ ಮಕ್ಕಳ ಪಕ್ಷ, ಪ್ರೊ. ನಂಜುಂಡ ಸ್ವಾಮಿಯವರ ಕರ್ನಾಟಕ ರೈತ ಪಕ್ಷ, ಕೆಲವು ಬುದ್ದಿಜೀವಿಗಳು ಮತ್ತು ಚಿಂತಕರಿಂದ ಸರ್ವೋದಯ ಕರ್ನಾಟಕ ಪಕ್ಷ, ಯಡಿಯೂರಪ್ಪ ನವರ ಕರ್ನಾಟಕ ಜನತಾ ಪಕ್ಷ, ಚಲನಚಿತ್ರ ನಟ ಉಪೇಂದ್ರರ ಪ್ರಜಾಕೀಯ ಪಕ್ಷ, ನಿವೃತ್ತ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರ ಭಾರತೀಯ ಜನಶಕ್ತಿ ಕಾಂಗ್ರೆಸ್, ಶಾಸಕ ವರ್ತೂರು ಪ್ರಕಾಶರ ನಮ್ಮ ಕಾಂಗ್ರೆಸ್, ಮಹದಾಯಿ- ಕಳಸಾ-ಬಂಡೂರಿ ಹೋರಾಟದ ಸಮಯದಲ್ಲಿ ಹುಟ್ಟಿದ ಜನಸಾಮಾನ್ಯ ಕಾಂಗ್ರೆಸ್, ರವಿಕೃಷ್ಣಾ ರೆಡ್ಡಿಯವರ ಕರ್ನಾಟಕ ರಾಷ್ಟ್ರೀಯ ಸಮಿತಿ ಇವು ಕಳೆದ ಆರು ದಶಕದಲ್ಲಿ ಕರ್ನಾಟಕದಲ್ಲಿ ಉದಯಿಸಿದ ಪ್ರಾದೇಶಿಕ ಪಕ್ಷಗಳು.

ಇವುಗಳಲ್ಲಿ ಬಹುತೇಕ ಪಕ್ಷಗಳು ಅಸ್ತಮಿಸಿವೆ, ಕೆಲವು ಕೇವಲ ಲೆಟರ್‌ಹೆಡ್ ನಲ್ಲಿ ಇವೆ, ಇನ್ನು ಕೆಲವು ಚುನಾವಣೆ ಸಮಯದಲ್ಲಿ ಬೋಡ್ ಗೆ ಬರುತ್ತವೆ ಮತ್ತು ನಾಲಾರು ಪಕ್ಷಗಳು ಅಸ್ತಿತ್ವಕ್ಕೆ ಹೋರಾಡುತ್ತಿವೆ. ದೇವೇಗೌಡರ ಜಾತ್ಯತೀತ ಜನತಾದಳವು ರಾಷ್ಟ್ರೀಯ ಪಕ್ಷವೋ, ಪ್ರಾದೇಶಿಕ ಪಕ್ಷವೋ ಎನ್ನುವ ಗೊಂದಲ ಇದೆ. ಈ ಪಟ್ಟಿಗೆ ಈಗ ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರಿದೆ. ಇದು ರಾಜ್ಯದಲ್ಲಿನ ರಾಜಕೀಯ ಪಕ್ಷಗಳ ಸಂಖ್ಯೆಯನ್ನು ೧೧೧ಕ್ಕೆ ಏರಿಸಿದೆ.

ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದು, ಕೇಂದ್ರದಲ್ಲಿ ಕಿಂಗ್ ಮೇಕರ್ ಆಗಿ, ದೆಹಲಿಗೆ ಸಡ್ಡು ಹೊಡೆದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದ್ದರೆ, ಇದು ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಅಧಿಕಾರ ಹೋಗಲಿ, ಚುನಾವಣೆಯಲ್ಲಿ ಒಂದು ಗೌರವಾನ್ವಿತ ಸೀಟುಗಳನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ? ಇವುಗಳಲ್ಲಿ ಕೆಲವು ಪಕ್ಷಗಳು ಖಾತೆ ಗಳನ್ನು ತೆರೆಯಲೂ ಅಸಮರ್ಥವಾಗಿ ಮುಳುಗಿವೆ. ಕೆಲವು ಪಕ್ಷಗಳು ಒಂದಂಕೆ ಸೀಟುಗಳಿಗೆ ತೃಪ್ತಿ ಪಟ್ಟರೆ, ಒಂದೆರಡು ಪಕ್ಷಗಳು ಕಷ್ಟದಲ್ಲಿ ಎರಡಂಕೆ ತಲುಪಿವೆ.

ಕೆಲವು ರಾಜಕೀಯ ವೀಕ್ಷಕರ ಪ್ರಕಾರ ಜನಪ್ರಿಯ ಮತ್ತು ಪ್ರಭಾವಿ ಧುರೀಣರ ಪಕ್ಷ ಗಳು ಸಂಪನ್ಮೂಲ ಕೊರತೆಯಿಂದ ಮೇಲೇಳ ಲಾಗಲಿಲ್ಲ. ಇನ್ನು ಕೆಲವು ಪಕ್ಷಗಳು ಸಂಪನ್ಮೂಲ ಸಾಕಷ್ಟು ಇದ್ದರೂ ಜನಪ್ರಿಯ ಮತ್ತು ಪ್ರಭಾವಿ ಧುರೀಣರು ಇಲ್ಲದಿರುವು ದರಿಂದ ವಿಫಲವಾದವು. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳ ವೈಫಲ್ಯಕ್ಕೆ ಇದು ಕಾರಣ ಎನ್ನುವುದರಲ್ಲಿ ಸಹಮತವಿದೆ. ಆದರೆ, ಪ್ರಾದೇಶಿಕ ಪಕ್ಷಗಳ ಸ್ಥಾಪನೆ ಗೆ ಮೂಲ ಕಾರಣವಾದ ನಾಡು-ನುಡಿ-ಸಂಸ್ಕ್ರತಿ, ಮಣ್ಣಿನ ಮಕ್ಕಳು, ಪ್ರಾದೇಶಿಕ ಅಸಮಾನತೆ, ಕೇಂದ್ರ ಸರ್ಕಾರದ ಪಕ್ಷಪಾತ ಧೋರಣೆ , ಕೇಂದ್ರ ವಿರೋಧಿ ನೀತಿ, ಭಾಷಾ ಹೇರಿಕೆ, ಒಕ್ಕೂಟ ವ್ಯವಸ್ಥೆಗೆ ಮಾರಕವಾದ ಕೇಂದ್ರ
ಸರ್ಕಾರದ ನೀತಿಗಳು , ಅಭಿವೃದ್ದಿಯಲ್ಲಿ ಹಿನ್ನಡೆ ಮುಂತಾದ ಭಾವನಾತ್ಮಕ ಮತ್ತು ಉದ್ವೇಗ ಕೆರಳಿಸುವ ವಿಷಯಗಳ ಮೇಲೆ
ಆಗದಿರುವುದು ಮತ್ತು ಇವುಗಳನ್ನು ಸರಿಯಾಗಿ ಇನ್ನಿತರ ರಾಜ್ಯಗಳಂತೆ ನಗದೀಕರಣ ಮಾಡಲಾಗದ ಚಾಕಚಕ್ಯತೆ ಪ್ರಾದೇಶಿಕ ಪಕ್ಷಗಳು ಕರ್ನಾಟಕದಲ್ಲಿ ಬೇರೂರದಂತೆ ಮಾಡಿವೆ.

ಅಕಸ್ಮಾತ್ ಇವು ಅವುಗಳ ಪ್ರಣಾಳಿಕೆಯಲ್ಲಿ ಇದ್ದರೂ, ಇನ್ನಿತರ ರಾಜ್ಯಗಳ ಪ್ರಾದೇಶಿಕ ಪಕ್ಷಗಳಂತೆ ಬದ್ಧತೆ ಇರಲಿಲ್ಲ. ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆಯನ್ನು ಜನಸಾಮಾನ್ಯರಲ್ಲಿ ಬಿಂಬಿಸುವಲ್ಲಿ, ಅಚ್ಚೊತ್ತುವುದರಲ್ಲಿ ಅವರ ಚಿಂತನೆಯನ್ನು ಬದಲಿಸುವು ದರಲ್ಲಿ ಈ ಪಕ್ಷಗಳ ಧುರೀಣರು ವಿಫಲರಾದದ್ದು ಈ ಪಕ್ಷಗಳ ಹಿನ್ನಡೆಗೆ ಕಾರಣವಾಯಿತು. ಮೇಲಾಗಿ ಈ ಯಾವ ಪಕ್ಷಗಳೂ ಒಂದು ಸದೃಢವಾದ ನೆಲೆಗಟ್ಟು, ಯೋಜನೆಗಳು, ತತ್ವ, ನೀತಿ -ನಿರೂಪಣೆಯ ಮೇಲೆ ಉದಯಿಸಲಿಲ್ಲ.

ಈ ಎಲ್ಲಾ ಪಕ್ಷಗಳ ಹಿಂದೆ ಇರುವವರು ಮತ್ತು ಇದ್ದವರು, ಅವರು ಈ ಹಿಂದೆ ಇದ್ದ ಪಕ್ಷಗಳಿಂದ ನಿರ್ಲಕ್ಷಿಸಲ್ಪಟ್ಟ, ಹೊರ ಹಾಕಲ್ಪಟ್ಟ, ವರ್ಚಸ್ಸನ್ನು ಕಳೆದು ಕೊಂಡವರಾಗಿದ್ದು, ತಮ್ಮ ಹಠ ಸಾಧಿಸಲು, ತಾವಿನ್ನೂ ರಾಜಕೀಯದಲ್ಲಿ ಪ್ರಸ್ತುತ ಎಂದು ತೋರಿಸಲು, ರಾಜಕೀಯ ಧ್ವೇಶ ಮತ್ತು ಪ್ರತಿಕಾರ ಸಾಧಿಸಲು, ಸೇಡು ತಿರಿಸಿಕೊಳ್ಳಲು ಪುನಃ ವೇದಿಕೆ ಏರಲು, ಕನಿಷ್ಟ ಕೆಲವು ಸೀಟುಗಳನ್ನಾದರೂ ಗಳಿಸಿ ಅಧಿಕಾರ ಹಂಚುವಿಕೆಯ ಚೌಕಾಶಿಯಲ್ಲಿ ಮೇಲುಗೈ ಸಾಧಿಸಲು, ಹೀಗೆ ಜನಸಾಮಾನ್ಯರಿಗೆ ಅರ್ಥವಾಗದ ರಾಜಕೀಯ ತಂತ್ರದ ಅಗೋಚರ ಅಜೆಂಡಾಗಳು ಇತ್ತೇ ವಿನಃ ಪ್ರಣಾಳಿಕೆಗಳಲ್ಲಿ ತೋರಿಸುವ ಕನ್ನಡ ನಾಡು, ನುಡಿ, ಅತ್ಮ ಗೌರವ, ನಾಡಿನ ಅಭಿವೃದ್ದಿ ಗಳೆಲ್ಲವೂ ತೋರಿಕೆಗೆ ಸೀಮಿತವಾಗಿದ್ದವು.

ರಾಮಕೃಷ್ಣ ಹೆಗಡೆ ಮತ್ತು ದೇವರಾಜ್ ಅರಸು ರವರು ತಮ ರಾಜ್ಯದಲ್ಲಿ ನೆಲೆಗಟ್ಟನ್ನು ಭದ್ರಗೊಳಿಸಿಕೊಂಡು ರಾಷ್ಟ್ರ ರಾಜಕಾರಣದಲ್ಲಿ ಕೈಆಡಿಸಲು ಇಂತಹ ಪ್ರಯತ್ನ ಮಾಡಿದ್ದರೇ ವಿನಃ ಅವರಲ್ಲಿ ಕನ್ನಡ, ಕರ್ನಾಟಕ ಎನ್ನುವ ಬದ್ಧತೆ ಇರಲಿಲ್ಲ. ಪ್ರಾದೇಶಿಕ ಭಾವನೆಗಳನ್ನು ನಗದೀಕರಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ರಾಮಕೃಷ್ಣ ಹೆಗಡೆಯವರು ತಮ್ಮ ಬದ್ಧತೆಯನ್ನು ನಮ್ಮ ಹೈಕಮಾಂಡ್ ಇ ಇರಬೇಕು, ದೆಹಲಿಯಲ್ಲಲ್ಲ ಎಂದರೇ ವಿನಹ ಅದಕ್ಕೂ ಮುಂದೆ ಹೋಗಲಿಲ್ಲ.

ಕರ್ನಾಟಕವು ಪ್ರಾದೇಶಿಕ ಪಕ್ಷಗಳ ರುದ್ರ ಭೂಮಿ. ಕರ್ನಾಟಕದ ರಾಜಕೀಯದ ಇತಿಹಾಸದ ಪುಟಗಳನ್ನು ತಿರುವಿದರೆ ಪುಟಗಟ್ಟಲೇ ಉದಾಹರಣೆಗಳು ದೊರಕುತ್ತವೆ. ರಾಜಕೀಯದಲ್ಲಿ ಅಪಾರ ಅನುಭವ ಇರುವ ಜನಾರ್ಧನ ರೆಡ್ಡಿಯವರಿಗೆ ಈ ವಾಸ್ತವ ಗಮನಕ್ಕೆ ಬರದಿರುವುದು ತೀರಾ ಆಶ್ಚರ್ಯ. ಕರ್ನಾಟಕವು ವಿವಿಧ ಭಾಷೆಗಳನ್ನು ಮಾತನಾಡುವ ೬ ರಾಜ್ಯಗಳಿಂದ ಸುತ್ತುವರಿಯಲ್ಪಟ್ಟಿದ್ದು, ಬದುಕನ್ನು ಹುಡುಕಿ ಈ ರಾಜ್ಯದವರು ಮತ್ತು ಉತ್ತರ ಭಾರತದಿಂದ ಕರ್ನಾಟಕಕ್ಕೆದಾಂಗುಡಿ ಇಡುತ್ತಿದ್ದು, ತಮ್ಮ ಹಿತಾಸಕ್ತಿಗಾಗಿ ಅವರು ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸುತ್ತಿದ್ದು, ಪ್ರಾದೇಶಿಕ ಪಕ್ಷಗಳು ನೆಲೆಗೊಳ್ಳುವುದು ಕಷ್ಟ ಎನ್ನುವ ಸತ್ಯವನ್ನು ಅವರು ತಿಳಿಯದಿರುವುದು ಆಶ್ಚರ್ಯ.

ಒಂದು ರಾಜಕೀಯ ಪಕ್ಷ ಪ್ರವರ್ಧಮಾನಕ್ಕೆ ಬರಲು ಮತ್ತು ನೆಲೆಗೊಳ್ಳಲು ಕೇವಲ ಧನಬಲ ಸಾಕಾಗದು. ಇದ ರೊಟ್ಟಿಗೆ ಜನಬಲ, ಜನಪ್ರಿಯ ಧುರೀಣತ್ವ ಮತ್ತು ಮಾತಿನಲ್ಲಿಯೇ ಮಹಲು ಕಟ್ಟುವ ಮತ್ತು ಮೋಡಿ ಮಾಡುವ ಮಾತುಗಾರಿಕೆ, ರಾಜ್ಯ ಅಥವಾ ರಾಷ್ಟ್ರಾದ್ಯಂತ ಇಮೇಜ್ ತೀರಾ ಅವಶ್ಯಕ ಮತ್ತು ಅನಿವಾರ್ಯ. ಅಣ್ಣಾ ದೊರೈ, ಎಂಜಿಅರ್, ಕರುಣಾನಿಧಿ, ಎನ್‌ಟಿಅರ್, ಬಾಳಾ ಠಾಕರೆ, ಮಮತಾ ಬ್ಯಾನರ್ಜಿ, ಕೇಜ್ರಿವಾಲ್, ಕೆಸಿಅರ್, ಮುಲಾಯಂ ಸಿಂಗ್, ರಾಮಕೃಷ್ಣ ಹೆಗಡೆ, ಎ.ಕೆ ಸುಬ್ಬಯ್ಯ, ಬಂಗಾರಪ್ಪ,
ಲಾಲೂ ಪ್ರಸಾದ್‌ರಂಥ ಮಾತಿನಲ್ಲಿಯೇ ಜನರನ್ನು ಮೋಡಿ ಮಾಡಿ ಸೆಳೆಯುವಂಥ ಜನಪ್ರಿಯ ಧುರೀಣರು ಬೇಕು.

ಜನಾರ್ಧನ ರೆಡ್ಡಿಯವರು ಈ ನೆಟ್ಟಿನಲ್ಲಿ ಚಿಂತಿಸಿದಂತೆ ಕಾಣುವದಿಲ್ಲ. ಸಕಲ ವನ್ನೂ ನೀಡಿದ ಇದ್ದ ಪಕ್ಷವನ್ನು ಬಿಟ್ಟು ತಳ ಮಟ್ಟದಿಂದ ಹೊಸ ಪಕ್ಷವನ್ನು ಕಟ್ಟುವುದು, ಅದನ್ನು ರಾಜ್ಯಾದ್ಯಂತ ಅಥವಾ ದೇಶಾದ್ಯಂತ ನೆಲೆಗೊಳಿಸಿ ಬೆಳೆಸುವುದು ಮಕ್ಕಳಾಟವಲ್ಲ. ಆಧಿಕಾರದ ಗದ್ದುಗೆ ಹೋಗಲಿ, ಗೌರವಾನ್ವಿತ ಹತ್ತಾರು ಸೀಟುಗಳನ್ನು ಪಡೆಯುವುದೂ ಕಷ್ಟ ಸಾಧ್ಯ.

ಚರಣ್ ಸಿಂಗ್‌ರ ಧಮಕಿ ಪಕ್ಷ ಮತ್ತು ಜಾರ್ಜ್ ಫೆರ್ನಾಂಡೀಸ್‌ರ ಸಮತಾ ಪಕ್ಷ ಗಳು ಇದಕ್ಕೆ ಜೀವಂತ ಉದಾಹರಣೆಗಳು. ಇಂತಹ ಅತಿರಥರೇ ಮಣ್ಣು ಮುಕ್ಕಿರುವಾಗ ರೆಡ್ಡಿಯವರ ಹೊಸ ಪಕ್ಷದ ಮುಂದೆ ಹಂಪ್‌ಗಳು ಮತ್ತು ರೆಡ್ ಸಿಗ್ನಲ್‌ಗಳು ಕಾಣುತ್ತವೆ. ರೆಡ್ಡಿಯವರಿಗೆ ಇವುಗಳ ಅರಿವು ಇಲ್ಲ ಎನ್ನಲಾಗದು. ಅವರ ಈ ಹೆಜ್ಜೆಯ ಹಿಂದೆ ಇನ್ನೇನೋ ರಾಜಕೀಯ ತಂತ್ರಗಾರಿಕೆ ಇರಬಹುದು ಎಂದು ರಾಜಕೀಯ ವಿಶ್ಲೇಷಕರು ಟಿಪ್ಪಣಿ ಬರೆಯುತ್ತಿzರೆ. ತೆಲುಗು ಭಾಷಿಕ ಗಡಿನಾಡಿನಲ್ಲಿ ಅವರಿಗೆ ಸಾಕಷ್ಟು ಜನ ಬೆಂಬಲವಿದೆ. ಹಾಗೆಯೇ ಧನ ಬಲವೂ ಇದೆ. ಪಕ್ಷ ಗೆದ್ದು ಬರದಿದ್ದರೂ, ಗೆಲ್ಲುವವರ ಓಟಕ್ಕೆ ತಡೆ ಹಾಕುವ ತಾಕತ್ ಅವರಿಗೆ ಇದೆ.

ಇದನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ರಾಜಕೀಯ ಚೌಕಾಶಿಯನ್ನು ಮಾಡಿ ಪುನಃ ಮುಖ್ಯ ಪ್ರವಾಹದಲ್ಲಿ ಕಾಣುವ
ಪ್ರಯತ್ನ ಇದು ಇರಬಹುದು ಎಂದೂ ವ್ಯಾಖ್ಯಾನಿಸುವವರು ಇದ್ದಾರೆ. ಹನ್ನೆರಡು ವರ್ಷಗಳ ಕಾಲ ಅವರು ತಾಳ್ಮೆಯಿಂದ ಮೌನ ವಾಗಿ ಕಾದಿದ್ದಾರೆ. ಸಮಯ ಒಡುತ್ತಿದೆ. ಅವರಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಅವರು ತಮ್ಮ ಟ್ರಂಪ್ ಕಾರ್ಡ್ ಎಸೆದಿದ್ದಾರೆ. ಕೆಂಪಾಗಿ ಕಾದಾಗಲೇ ಕಬ್ಬಿಣವನ್ನು ಬಡಿಯಬೇಕು ಎನ್ನುವಂತೆ ಚುನಾವಣಾ ಸಮಯದಲ್ಲಿ ತಮ್ಮ ಕಾರ್ಡ್‌ನ್ನು ಬಿಟ್ಟಿದ್ದಾರೆ.

ವಿಶೇಷವೆಂದರೆ, ರಾಜ್ಯ ರಾಜಕಾರಣದಲ್ಲಿ ಅವರ ಹೊಸ ಪಕ್ಷದ ಘೋಷಣೆ ಭಾರೀ ಸಂಚಲನವನ್ನು ಮೂಡಿಸ ಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರೆ, ಸಂಚಲನ ಹೋಗಲಿ, ಮಾಧ್ಯಮದಲ್ಲೂ ಹೆಚ್ಚು ಹೆಡ್ ಲೈನ್ ಅಗಲಿಲ್ಲ. ಹೊಸ ಪಕ್ಷದ ಸಾಧಕ ಬಾಧಕದ ಬಗೆಗೆ ವಿಶೇಷ ಚರ್ಚೆ ಕಾಣಿಸಲಿಲ್ಲ. ಪಕ್ಷ ಸ್ಥಾಪಿಸಿ ಎರಡು ವಾರಗಳಾದರೂ ಅ ಬಗೆಗೆ ವಿಶೇಷ ಗಮನ ಮತ್ತು ಅಸಕ್ತಿ ಕಾಣುತ್ತಿಲ್ಲ. ಯಾರೂ ಆ ಪಕ್ಷಕ್ಕೆ ಸೇರುವ ಉತ್ಸಾಹ ತೋರಿಸಿದಂತೆ ಕಾಣುವುದಿಲ್ಲ. ವಿಸ್ಮಯವೆಂದರೆ ರೆಡ್ಡಿಯವರ ಪ್ರಾಣ ಸ್ನೇಹಿತ ಶ್ರೀರಾಮುಲು ಕೂಡಾ ಏನೋ ಅಟ ಅಡುತ್ತಿರುವಂತೆ ಕಾಣುತ್ತಿದ್ದು ಬಹುಶಃ ಬೆಳವಣಿಗೆಯನ್ನು ಕಾದು ನೋಡಿ ಮುಂದಿನ ಹೆಜ್ಜೆಯನ್ನು ಇಡಬಹುದು.

ಅಂತೆಯೇ ರೆಡ್ಡಿಯವರ ಹೊಸ ಪಕ್ಷ ರಚನೆ ಹಿಂದೆ ಏನೋ ಒತ್ತಡ ತಂತ್ರ ಇದ್ದು, ಅದರಲ್ಲಿ ಬದ್ಧತೆ ಇಲ್ಲ ಎನ್ನುವ ರಾಜಕೀಯ ವಿಶ್ಲೇಷಕರ ಆಭಿಮತದಲ್ಲಿ ತೂಕ ಕಾಣುತ್ತಿದೆ. ಕಾಟಾಚಾರಕ್ಕಾಗಿ ಒಂದೆರಡು ರಾಜಕಾರಣಿಗಳು ಹಾವು ಸಾಯಬಾರದು ಕೋಲು ಮುರಿಯಬಾರದು ಎನ್ನುವಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ರಾಜಕೀಯ ಮುತ್ಸದ್ದಿತನ ತೋರಿಸಿದ್ದಾರೆ. ರಾಜಕೀಯವೇ ಹಾಗೆ, ಒಮ್ಮೆ ಕೊಂಡಿಯನ್ನು ಕಳಚಿಕೊಂಡರೆ, ಅದು ನಿಲುಕುವುದು ಕಷ್ಟಸಾಧ್ಯ.

 
Read E-Paper click here