Sunday, 24th November 2024

ಜನತಾ ದರ್ಶನ ಎಂಬ ನ್ಯಾಯದ ಗಂಟೆ

ಅಶ್ವತ್ಥಕಟ್ಟೆ

ranjith.hoskere@gmail.com

ಜನರಿಂದ ಜನರಿಗಾಗಿ ಜನರಿಗೋಸ್ಕರವಿರುವ ಸರಕಾರವೇ ಪ್ರಜಾಪ್ರಭುತ್ವದ ಸೌಂದರ್ಯ. ಜನಗಳ ಸೇವೆಯೇ ಎಲ್ಲ ಸರಕಾರಗಳ ಭರವಸೆಯಾಗಿದ್ದರೂ, ಕೆಲವೊಂದು ಸರಕಾರಗಳು ಈ ವಿಷಯದಲ್ಲಿ ಬಾಯಿ ಮಾತಿಗೆ ಸೀಮಿತವಾಗಿರುತ್ತವೆ. ಇನ್ನು ಕೆಲ ಸರಕಾರಗಳು ‘ಪ್ರೋ ಆಕ್ಟೀವ್’ ಆಗಿರುತ್ತವೆ. ಜನರ ಕೆಲಸ ಗಳಿಗೆ ಮೊದಲ ಆದ್ಯತೆ ಎನ್ನುವ ಸರಕಾರಗಳೇ ಜನಮಾನಸದಲ್ಲಿ ಕೊನೆಯವರೆಗೂ ಉಳಿಯುತ್ತವೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ಸದ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಜನತಾದರ್ಶನ ವನ್ನು ವಿಸ್ತರಣೆ ಮಾಡುವ ಮೂಲಕ ಜನರು ತಮ್ಮ ಸಮಸ್ಯೆಗಳನ್ನು ತಾವಿರುವಲ್ಲಿಯೇ ಹೇಳಿಕೊಂಡು, ಬಗೆಹರಿಸಿ ಕೊಳ್ಳಲಿ ಎನ್ನುವ ಕಾರಣಕ್ಕೆ ತಾಲೂಕು ಮಟ್ಟಕ್ಕೆ ತೆಗೆದುಕೊಂಡು ಹೋಗಲು ತೀರ್ಮಾನಿಸಿದ್ದಾರೆ.
ಜನತಾದರ್ಶನ ಎನ್ನುವ ಪರಿಕಲ್ಪನೆ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಹಳೆಯದ್ದಾದರೂ, ತಾಲೂಕು ಮಟ್ಟಕ್ಕೆ ಜಿಲ್ಲಾಧಿಕಾರಿಗಳು ಹೋಗಬೇಕು. ತಿಂಗಳಲ್ಲಿ ಎರಡು ದಿನ ಒಂದೊಂದು ತಾಲೂಕು ಕೇಂದ್ರದಲ್ಲಿ ನಡೆಸಬೇಕು ಎನ್ನುವ ಆಲೋಚನೆ ಹೊಸತು. ಸೋಮವಾರದಿಂದ ಜಿಲ್ಲಾ ಕೇಂದ್ರ ದಲ್ಲಿ ಶುರುವಾಗಿರುವ ಜನತಾದರ್ಶನ ಮೊದಲ ದಿನ ಅದ್ದೂರಿಯಾಗಿ ನಡೆದಿದೆ.

ಆದರೆ ಇದೇ ರೀತಿಯಲ್ಲಿ ನಿತ್ಯ ನಿರಂತರವಾಗಿ ನಡೆಯಬೇಕು ಎನ್ನುವುದು ಸಾರ್ವಜನಿಕರ ಆಕಾಂಕ್ಷೆಯಾಗಿದೆ. ಅಷ್ಟಕ್ಕೂ ಜನತಾದರ್ಶನವೆನ್ನುವುದು ಇಷ್ಟು ದಿನ ರಾಜಧಾನಿ ಬೆಂಗಳೂರಿಗೆ ಅಥವಾ ಮುಖ್ಯ ಮಂತ್ರಿಗಳಿಗೆ ಸೀಮಿತವಾಗಿತ್ತು. ತಮ್ಮ ಅಧಿಕೃತ ನಿವಾಸದ ಎದುರು ವಾರಕ್ಕೊಮ್ಮೆ ಅಥವಾ ವಾರಕ್ಕೆ ಎರಡು ಬಾರಿ ಬೆಳಗ್ಗೆ ಸಮಯದಲ್ಲಿ ಮುಖ್ಯಮಂತ್ರಿಗಳು ಬರುತ್ತಾರೆ. ನೆರೆದಿರುವ ನೂರಾರು ಮಂದಿ ತಮ್ಮ ತಮ್ಮ ಬೇಡಿಕೆಯ ಪಟ್ಟಿಯನ್ನು ಸಲ್ಲಿಸುತ್ತಾರೆ. ಅವುಗಳನ್ನು ಸಿಎಂ ಪಡೆದು, ಪಕ್ಕದಲ್ಲಿ ನಿಂತಿರುವ ಅಧಿಕಾರಿಗಳಿಗೆ ಹಸ್ತಾಂತ ರಿಸುತ್ತಾರೆ. ಇದು ಸಾಂಪ್ರದಾಯಿಕವಾಗಿ ನಡೆಯುವ ಜನತಾದರ್ಶನ ಕಾರ್ಯಕ್ರಮ.

ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಈ ಕಲ್ಪನೆ ಆರಂಭಗೊಂಡಿತ್ತು. ಕೇವಲ ಇದೊಂದೇ ಅಲ್ಲದೇ, ಅಧಿಕಾರ ವಿಕೇಂದ್ರೀಕರಣಕ್ಕೆ ಸಂಬಂಧಿಸಿದ ಹಲವು ಯೋಜನೆಗಳು ಹೆಗಡೆ ಅವರ ಆಲೋಚನೆಗಳಾಗಿದ್ದವು. ಗ್ರಾಮ ಸಭೆ, ಮಂಡಲ ಹಾಗೂ ಜಿಲ್ಲಾ ಸಭೆಗಳನ್ನು ಆಯೋಜಿಸುವ ಮೂಲಕ, ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲಿಯೇ ಇತ್ಯರ್ಥಗೊಳ್ಳಬೇಕು ಎನ್ನುವ ಯೋಜನೆಯನ್ನು ಆರಂಭಿಸಲಾಯಿತು. ಹೆಗಡೆ ಅವರ ಬಳಿಕ, ಜನತಾದರ್ಶನವನ್ನು ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಿದ್ದು ಎಚ್.ಡಿ ಕುಮಾರಸ್ವಾಮಿ ಅವರು ಎಂದರೆ ತಪ್ಪಿಲ್ಲ.

ಬಿಜೆಪಿಯೊಂದಿಗಿನ ಮೈತ್ರಿ ಸರಕಾರದ ಅವಧಿಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನಕ್ಕಾಗಿಯೇ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸುವ ಕೆಲಸವನ್ನು ಅವರು ಮಾಡಿದ್ದರು. ಆರಂಭದಲ್ಲಿ ಬೆಂಗಳೂರಿಗೆ ಮಾತ್ರ ಸೀಮಿತಗೊಂಡಿದ್ದ ಈ ಕಾರ್ಯಕ್ರಮವನ್ನು ಅವರು, ಬಳಿಕ ಪ್ರತಿ ತಿಂಗಳು ರಾಜ್ಯದ ಒಂದು ಹಿಂದುಳಿದ ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯದ ಮೂಲಕ ನಡೆಸಿ ಜನರನ್ನು ತಲುಪುವ ಕೆಲಸವನ್ನು ಮಾಡಿದ್ದರು. ಕುಮಾರಸ್ವಾಮಿ ಅವರ ಬಳಿಕ ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಒಂದು ಹಂತಕ್ಕೆ ಜನತಾದರ್ಶನವನ್ನು ಉತ್ತಮ ರೀತಿಯಲ್ಲಿ ಮಾಡಿದ್ದರೂ, ಎರಡನೇ ಬಾರಿಗೆ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಮುಖ್ಯಮಂತ್ರಿಗಳ ಹತ್ತು ಹಲವು ಶಿಷ್ಟಾಚಾರಗಳ ರೀತಿಯಲ್ಲಿ ಇದು ಮತ್ತೊಂದು ಎನ್ನುವಂತಾಗಿತ್ತು. ಅದಾದ ಬಳಿಕ ಮುಖ್ಯಮಂತ್ರಿಯಾದ ‘ಕಾಮನ್
ಮ್ಯಾನ್’ ಸಿಎಂ ಬಸವರಾಜ ಬೊಮ್ಮಾಯಿ ಅವರು ಜನರೊಂದಿಗೆ ಬೆರೆಯುವುದಾಗಿ ಹೇಳುತ್ತಿದ್ದರಷ್ಟೇ; ಹೀಗಾಗಿ ಜನತಾದರ್ಶನದಲ್ಲಿ ಬಂದ ಬಹುತೇಕ
ಅರ್ಜಿಗಳು ಸಿಎಂ ಕೈಯಿಂದ ಪಕ್ಕದಲ್ಲಿದ್ದ ಗನ್‌ಮ್ಯಾನ್ ಅಥವಾ ಆಪ್ತಕಾರ್ಯದರ್ಶಿಗೆ ಹೋಗುತ್ತಿತ್ತೇ ಹೊರತು, ತಾರ್ಕಿಕ ಅಂತ್ಯ ಕಾಣುತ್ತಿರಲಿಲ್ಲ. ಬೊಮ್ಮಾಯಿ ಅವರ ಕಾಲದಲ್ಲಿ ಸಹಾಯ ಕೇಳಿಕೊಂಡು ಬಂದ ಅನೇಕರ ಸಮಸ್ಯೆಯನ್ನು ಆಲಿಸುವ ಗೋಜಿಗೆ ಹೋಗದೇ ಅಧಿಕಾರಿಗಳಿಂದ ಪತ್ರ ಸ್ವೀಕರಿಸಿದ ಹಲವು ಘಟನೆಗಳಿವೆ.

ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಇನ್ನುಳಿದ ಬಹುತೇಕ ಮುಖ್ಯಮಂತ್ರಿ ಗಳಿಗೆ ಇದರ ಗಂಭೀರತೆಯೇ ಅರ್ಥವಾಗಲಿಲ್ಲ. ಧರ್ಮಸಿಂಗ್, ಸದಾನಂದಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಜನರನ್ನು ಭೇಟಿಯಾಗಿ, ಅರ್ಜಿ ಸ್ವೀಕರಿಸಿ ಒಂದೆರೆಡು ಫೋಟೋ ತೆಗೆಸಿಕೊಳ್ಳುವುದೇ ಜನತಾ ದರ್ಶನ ಎಂದುಕೊಂಡರು. ವಾರಕ್ಕೊಮ್ಮೆ ಅಧಿಕಾರಿಗಳು ನಿಗದಿಪಡಿಸಿದ ಸಮಯಕ್ಕೆ ಬಂದು ಒಂದಿಷ್ಟು ಅರ್ಜಿಗಳನ್ನು ಪಡೆದು ಪಕ್ಕದಲ್ಲಿದ್ದವರಿಗೆ ಕೊಟ್ಟು ತಮ್ಮ ಕೆಲಸ ಮುಗಿಯಿತು ಎನ್ನುವಂತೆ ವರ್ತಿಸಿದ್ದರು.

ಇನ್ನು ಎಸ್.ಎಂ. ಕೃಷ್ಣ ಅವರು ಜನತಾದರ್ಶನವನ್ನು ಮಾಡಬೇಕು ಎನ್ನುವ ಆಲೋಚನೆಯ ಲ್ಲಿದ್ದರೂ, ಅವರಿಗಿದ್ದ ‘ಎಲೈಟ್’ ವ್ಯಕ್ವಿತ್ವದಿಂದ ಜನರಿಗೆ ಕನೆಕ್ಟ್ ಆಗಲು ಸಾಧ್ಯವಾಗಲೇ ಇಲ್ಲ. ಆದರೆ ಈ ಎಲ್ಲವನ್ನೂ ಮೀರಿ ‘ಮಾಸ್ ನಾಯಕ’ನಾಗಿ ಜನರಲ್ಲಿ ಕಾಣಿಸಿಕೊಳ್ಳುವುದಕ್ಕೆ, ಎಲ್ಲ ಜಿಲ್ಲೆಗಳಲ್ಲಿಯೂ ತಮ್ಮದೇ ಆದ ಅಭಿಮಾನಿಗಳನ್ನು ಬೆಳೆಸಿಕೊಳ್ಳುವುದಕ್ಕೆ ಜನತಾದರ್ಶನವನ್ನು ಒಂದು ಅದ್ಭುತ ಅವಕಾಶವನ್ನಾಗಿ ಬಳಸಿಕೊಂಡಿದ್ದು ಕುಮಾರಸ್ವಾಮಿ. ಅವರನ್ನು ಹೊರತುಪಡಿ ಸಿದರೆ ಇದರ ಸಂಪೂರ್ಣ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು ಸಿದ್ದರಾಮಯ್ಯ. ೨೦೧೩ರಲ್ಲಿ ಮುಖ್ಯ ಮಂತ್ರಿಯಾಗಿದ್ದ ಅವಽಯಲ್ಲಿ ಜನತಾದರ್ಶನದ ಅರ್ಜಿ ಗಳನ್ನು ತೀರಾ ಗಂಭೀರವಾಗಿ ಪರಿಗಣಿಸಿ ತಾರ್ಕಿಕ ಅಂತ್ಯ ಕಾಣುವಂತೆ ಮಾಡಿದ್ದರು. ತಾವು ಹೋದಲೆಲ್ಲ ‘ಅನಧಿಕೃತ’ ಜನತಾದರ್ಶನ ವನ್ನು ಮಾಡಿಕೊಂಡೇ ಬಂದರು. ಇದೀಗ ಇದರ ಮುಂದುವರಿದ ಭಾಗವಾಗಿ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಜನತಾದರ್ಶನವನ್ನು ಮಾಡಬೇಕು ಎನ್ನುವ ಆದೇಶ ವನ್ನು ಹೊರಡಿಸಿದ್ದಾರೆ.

ಈ ರೀತಿಯ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರಷ್ಟೇ ಸಾಕಾಗುವುದಿಲ್ಲ. ಬದಲಿಗೆ ಫಾಲೋಅಪ್ ಮಾಡಬೇಕಾಗುತ್ತದೆ. ಜನರಿಂದ ಆಯ್ಕೆಯಾಗಿರುವ ಸರಕಾರಗಳು, ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಮನಸ್ಥಿತಿಯಿರುವ ನಾಯಕರಿಂದ ಮಾತ್ರ ಇಂಥ ಆಲೋಚನೆಗಳು ಬರಲು ಸಾಧ್ಯ. ಮುಖ್ಯಮಂತ್ರಿಗಳನ್ನೋ ಅಥವಾ ಸಚಿವರನ್ನೋ ಭೇಟಿಯಾಗಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಎಲ್ಲ ಕೆಲಸಗಳು ಮುಗಿಯುತ್ತವೆ ಎಂದಲ್ಲ. ಅದೆಷ್ಟೋ ಸಮಸ್ಯೆಗಳು ಮುಖ್ಯಮಂತ್ರಿಗಳ ತನಕ ಬರುವ ಅಗತ್ಯವೇ ಇರುವುದಿಲ್ಲ.

ಸ್ಥಳೀಯ ಮಟ್ಟದಲ್ಲಿ, ಗ್ರಾಮ ಪಂಚಾಯಿತಿ ಲೆಕ್ಕಿಗರ ಬಳಿಯೇ ಮುಗಿಯುವ ಕೆಲಸಗಳೂ ಮುಖ್ಯಮಂತ್ರಿ ಕಚೇರಿಗೆ ತಲುಪುವ ಅದೆಷ್ಟೋ ಉದಾಹರಣೆಗಳಿವೆ.
ಕೆಳಮಟ್ಟದಲ್ಲಿ ಅಽಕಾರಿಗಳು ಕೆಲಸ ಮಾಡದೇ ಇರುವಾಗಲೇ, ಸಾರ್ವಜನಿಕರು ಬೆಂಗಳೂರಿನ ಮುಖ್ಯಮಂತ್ರಿಯತ್ತ ಕಣ್ಣು ಹಾಯಿಸುವುದು. ಇದೀಗ ಎರಡನೇ ಸರದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೂಕು ಮಟ್ಟಕ್ಕೆ ಈ ಜನತಾದರ್ಶನವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಸ್ತರಿಸಿದ್ದಾರೆ. ಹಾಗೆ ನೋಡಿದರೆ, ಈ ರೀತಿಯ ಆದೇಶದ ಬಳಿಕವೇ ಜಿಲ್ಲಾಽಕಾರಿಗಳು ತಾಲೂಕು, ಹಳ್ಳಿಗಳಿಗೆ ಹೋಗಿ ಜನರ ಸಂಕಷ್ಟ ಆಲಿಸಬೇಕೆಂದಿಲ್ಲ. ಕೆಲ ಐಎಎಸ್
ಅಧಿಕಾರಿಗಳು, ಮೊದಲಿನಿಂದಲೂ ಇಂಥ ಕಾರ್ಯಕ್ರಮವನ್ನು ತಮ್ಮ ಮಟ್ಟದಲ್ಲಿಯೇ ಮಾಡಿಕೊಂಡು ಬಂದಿರುವ ಹಲವಾರು ಉದಾಹರಣೆಗಳಿವೆ. ಕ್ಯಾಪ್ಟನ್
ಮಣಿವಣ್ಣನ್, ದಯಾನಂದ್ ಸೇರಿದಂತೆ ಅನೇಕ ಐಎಎಸ್ ಅಧಿಕಾರಿಗಳು ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಸ್ಥಳೀಯ ಹಾಸ್ಟೆಲ್, ಸ್ಲಂ
ಸೇರಿದಂತೆ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿಯೇ ತಂಗಿರುವ ಹಲವು ನಿದರ್ಶನಗಳಿವೆ.

ಬಹುತೇಕ ಅಧಿಕಾರಿಗಳು ತಮಗೆ ತಾವೇ ಒಂದು ‘ಗೋಡೆ’ಯನ್ನು ಕಟ್ಟಿಕೊಂಡಿರುತ್ತಾರೆ. ಅಂಥ ಗೋಡೆಯನ್ನು ಕಳಚಿ ಜನರ ಬಳಿ ಹೋಗುವ ಆಸಕ್ತಿಯನ್ನು
ಅವರು ಬೆಳೆಸಿಕೊಳ್ಳುವುದಿಲ್ಲ. ಅದಕ್ಕೆ ಕೆಲವು ಪಟ್ಟಭದ್ರರು ಅವಕಾಶವನ್ನು ನೀಡುವುದಿಲ್ಲ. ಇಂಥ ಕಾರಣಗಳಿಗೆ, ಮುಖ್ಯಮಂತ್ರಿ ನೇತೃತ್ವದಲ್ಲಿ ಆರು ತಿಂಗಳಿ ಗೊಮ್ಮೆ, ವರ್ಷಕ್ಕೊಮ್ಮೆ ನಡೆಯುವ ಜಿಲ್ಲಾಽಕಾರಿಗಳ ಸಭೆಯಲ್ಲಿ, ‘ಎ.ಸಿ. ಕೊಠಡಿ ಬಿಟ್ಟು ಜನರ ಬಳಿಗೆ ಹೋಗಿ’ ಎನ್ನುವ ಸಾಂಪ್ರದಾಯಿಕ ಎಚ್ಚರಿಕೆಯನ್ನು ನೀಡುವ ಪರಿಸ್ಥಿತಿಯಿದೆ.

ಇದನ್ನು ಗಮನಿಸಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೀಗ ಏಕಕಾಲಕ್ಕೆ ಜಿಲ್ಲಾದ್ಯಂತ ಜನತಾದರ್ಶನ ಮಾಡಬೇಕು ಹಾಗೂ ಸ್ಥಳೀಯ ಜಿಲ್ಲಾಧಿಕಾರಿ ಗಳು ಪ್ರತಿ ೧೫ ದಿನಗಳಿಗೊಮ್ಮೆ ತಮ್ಮ ಜಿಲ್ಲೆಯ ಒಂದು ತಾಲೂಕಿನಲ್ಲಿ ಜನತಾದರ್ಶನವನ್ನು ಏರ್ಪಡಿಸಬೇಕು ಎನ್ನುವ ಆದೇಶವನ್ನು ನೀಡಿದ್ದಾರೆ. ಈ ರೀತಿ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ತಾಲೂಕು ಮಟ್ಟಕ್ಕೆ ಹೋಗುವುದರಿಂದ, ತಾಲೂಕು ಮಟ್ಟದ ಆಡಳಿತ ಚುರುಕಾಗಲಿದೆ. ಇದರಿಂದ ಜಿಲ್ಲೆ ಅಥವಾ ಬೆಂಗಳೂರಿಗೆ ಬಂದು ಜನರು ದೂರು ನೀಡುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.

ಸ್ಥಳೀಯ ಮಟ್ಟದಲ್ಲಿಯೇ ಸಮಸ್ಯೆ ಬಗೆಹರಿಸಿಕೊಂಡರೆ ಜನರ ಹಲವು ಸಮಸ್ಯೆಗಳು ಅಲ್ಲಿಯೇ ಇತ್ಯರ್ಥವಾಗಲಿದೆ ಎನ್ನುವುದು ಸರಕಾರದ ಆಲೋಚನೆಯಾಗಿದೆ.
ಇಂದಿನ ಈ ಆಲೋಚನೆ ‘ಅಧಿಕಾರ ವಿಕೇಂದ್ರೀಕರಣ’ದ ಮತ್ತೊಂದು ಭಾಗವಾಗಿದೆ. ಕಾಂಗ್ರೆಸ್ ಸರಕಾರ ಈಗ ಜಾರಿ ಮಾಡಿರುವ ಈ ಆದೇಶ ಈ ಹಿಂದೆ ವಿವಿಧ ರೀತಿಯಲ್ಲಿ ಅಥವಾ ಬೇರೆ ಸ್ವರೂಪದಲ್ಲಿ ಜಾರಿಯಲ್ಲಿತ್ತು. ಆದರೆ ಆಯಾ ಸರಕಾರಗಳು ಇರುವ ತನಕ ಅಥವಾ ಸಚಿವರ, ಮುಖ್ಯಮಂತ್ರಿಗಳ ಅಧಿಕಾರ ದಕ್ಷತೆಯ ಮೇಲೆ ಆಯಾ ಯೋಜನೆಗಳು ನಡೆದಿವೆ. ಎಲ್ಲ ಯೋಜನೆಯ ಒಟ್ಟು ತಾತ್ಪರ್ಯ, ಜನರ ಕೆಲಸಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಮುಗಿಸಬೇಕು ಎನ್ನುವುದಾಗಿದೆ. ಈ ರೀತಿ ಸ್ಥಳೀಯ ಮಟ್ಟದಲ್ಲಿಯೇ ಕೆಲಸಗಳು ನಡೆದಷ್ಟೂ, ಮೇಲಧಿಕಾರಿಗಳ ಅಥವಾ ರಾಜಧಾನಿಯ ಕಚೇರಿ ಮೇಲಿನ ಒತ್ತಡ ನಿವಾರಣೆಯಾಗುತ್ತದೆ. ಈ ಕಾರಣಕ್ಕಾಗಿಯೇ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಎನ್ನುವ ಸ್ಥಳೀಯ ಸಂಸ್ಥೆಗಳನ್ನು ಪರಿಚಯಿಸಿ ದರು. ಆದರೆ ಹಲವು ಸಮಯದಲ್ಲಿ ‘ಶಂಖದಿಂದ ಬಿದ್ದರೆ ತೀರ್ಥ’ ಎನ್ನುವ ಮನಸ್ಥಿತಿಯಲ್ಲಿ ಅಧಿಕಾರಿಗಳು ಜನರ ನ್ಯಾಯಯುತ ಕೆಲಸಗಳನ್ನು ಮಾಡದೇ ಬಾಕಿ ಉಳಿಸಿಕೊಳ್ಳುವುದರಿಂದ ಇಂಥ ಆದೇಶಗಳು ಅನಿವಾರ್ಯವಾಗುತ್ತವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೊಳಿಸಿರುವ ರಾಜ್ಯಾದ್ಯಂತ ಜನತಾದರ್ಶನ ‘ಜನರನ್ನು ತಲುಪಲು’ ಉತ್ತಮ ಯೋಜನೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಇದನ್ನು ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳು, ಇದನ್ನು ಕೇವಲ ಒಂದು ಕರ್ತವ್ಯ ಅಥವಾ ಸಿಎಂ ಆದೇಶವೆಂದು ತಿಳಿದು ಜನತಾದರ್ಶನ ಮಾಡಿದರೆ ಅದರಿಂದ ಜನರಿಗೆ ಬಹುದೊಡ್ಡ ಉಪಯೋಗವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಮನಸ್ಥಿತಿಯೊಂದಿಗೆ ಇಂಥ ಕಾರ್ಯಕ್ರಮಗಳನ್ನು ಆರಂಭಿಸಿದಾಗ ಮಾತ್ರ, ಜನರಿಗೆ ಸಹಾಯವಾಗುತ್ತದೆ.

ಆದರೆ ಸರಕಾರಗಳು ರೂಪಿಸುವ ಇಂಥ ಹಲವು ಯೋಜನೆ ಕಾರ್ಯಗತವಾಗದೆ ಹಾಗೇ ಕಾಣೆಯಾಗಿರುವ ಹಲವು ಉದಾಹರಣೆಗಳಿವೆ. ಈ ಹಿಂದಿನ ಯೋಜನೆ ಗಳಂತೆ ಈ ಯೋಜನೆ ಕಾಣೆಯಾಗದೇ ನಿರಂತರವಾಗಿರಬೇಕು ಎನ್ನುವುದಷ್ಟೇ ಹಲವರ ಆಶಯ. ಹಸಿವು ಎಂಬ ಕಾಯಿಲೆಗೆ ಮದ್ದಿಲ್ಲ