Sunday, 23rd June 2024

ಎಲ್ಲರಿಗೂ ಸ್ಥಾವರವಾಗಿರಲು ಆಸೆ, ಯಾರೂ ಜಂಗಮರಾಗಲೊಲ್ಲರು !

ಇದೇ ಅಂತರಂಗ ಸುದ್ದಿ

vbhat@me.com

ನಾನು ‘ವಿಜಯ ಕರ್ನಾಟಕ’ದಲ್ಲಿದ್ದಾಗ ‘ಟೈಮ್ಸ್ ಆಫ್ ಇಂಡಿಯಾ’ ಕನ್ನಡ ಆವೃತ್ತಿಯ ಪ್ರಕಟಣೆಯನ್ನು ಸ್ಥಗಿತಗೊಳಿಸಲಾಯಿತು. ಆ ಪತ್ರಿಕೆಯಲ್ಲಿದ್ದವರ ಪೈಕಿ ಕೆಲವರನ್ನು ‘ವಿಕ’ಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಯಿತು. ‘ನಾವು ಎಲ್ಲಿ ಹೇಳುತ್ತೇವೋ ಅಲ್ಲಿಗೆ ಹೋಗಲು ಒಪ್ಪಿದರೆ ಮಾತ್ರ ಸೇರಿಸಿಕೊಳ್ಳುತ್ತೇವೆ’ ಎಂಬ
ಷರತ್ತನ್ನು ಹಾಕಲಾಯಿತು. ತಕ್ಷಣ ನಾಲ್ವರು, ತಮಗೆ ಕೆಲಸ ಇಲ್ಲದಿದ್ದರೂ ಪರವಾಗಿಲ್ಲ, ತಾವು ಮಾತ್ರ ಬೆಂಗಳೂರು ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ ಎಂದು ಮುಖಕ್ಕೆ ಹೊಡೆಯುವಂತೆ ಹೇಳಿದರು. ಅವರ ದೃಷ್ಟಿಯಲ್ಲಿ ಬೆಂಗಳೂರು ಬಿಟ್ಟು ಕದಲುವುದೆಂದರೆ ಅಲ್ಲಿಗೆ ಬದುಕು ಮುಗಿದಂತೆ! ಬೇರೆ ಊರಿಗೆ ಹೋಗಲು
ಒಪ್ಪಿದವರು ಆರಂಭದಲ್ಲಿ ತಲೆದೂಗಿದರು. ಮರುಕ್ಷಣದಲ್ಲಿಯೇ ನಮಗೆ ಷರತ್ತು ಹಾಕಿದರು. ‘ಸರ್ ನೀವು ಹೇಳ್ತೀರೆಂದು ಹೋಗುತ್ತೇವೆ. ಆದರೆ ಒಂದು ವರ್ಷದೊಳಗೆ ವಾಪಸ್ ಕರೆಯಿಸಿಕೊಳ್ಳುವುದಾದರೆ ಮಾತ್ರ’ ಎಂದು ನೇರವಾಗಿ ಹೇಳಿದರು.

ಹೊಸದಾಗಿ ಯಾದಗಿರಿ ಜಿಲ್ಲೆ ಹುಟ್ಟಿಕೊಂಡು ಒಂದು ವರ್ಷವಾದರೂ ಅಲ್ಲಿಗೊಬ್ಬ ಜಿಲ್ಲಾ ವರದಿಗಾರರನ್ನು ನೇಮಿಸಲು ಸೂಕ್ತ ಅಭ್ಯರ್ಥಿ ಸಿಕ್ಕಿರಲಿಲ್ಲ. ಏನಿಲ್ಲ ವೆಂದರೂ ಇಪ್ಪತ್ತು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದಿರಬಹುದು. ನಿರುದ್ಯೋಗಿಯಾಗಿ ವರ್ಷಗಟ್ಟಲೇ ಅಲೆಯುವವರು ಕೆಲಸ ಕೇಳಿಕೊಂಡು ಬಂದಾಗ,
‘ಯಾದಗಿರಿಗೆ ಹೋಗ್ತೀರಾ’ ಅಂತ ಕೇಳಿದರೆ ಸಾಕು, ಒಂದೋ ಇಲ್ಲ ಎನ್ನುತ್ತಿದ್ದರು, ಇಲ್ಲಾಂದ್ರೆ ಒಂದೆರಡು ದಿನ ಬಿಟ್ಟು ತಿಳಿಸುತ್ತೇವೆ ಎಂದು ಹೇಳುತ್ತಿದ್ದರು. ಹಾಗೆ ಹೇಳಿ ಹೋದವರು ಅಪ್ಪಿ ತಪ್ಪಿಯೂ ಪತ್ರಿಕಾಲಯದ ಕಡೆಗೆ ಸುಳಿಯುತ್ತಿರಲಿಲ್ಲ. ಫೋನ್ ಮಾಡಿದರೆ ಎತ್ತುತ್ತಿರಲಿಲ್ಲ. ಎರಡನೆ ಕಾಲ್‌ಗೆ ಸ್ವಿಚ್ಡ್ ಆಫ್!

ಒಮ್ಮೆ ಪರಿಚಿತ ಪತ್ರಕರ್ತರೊಬ್ಬರು ದಯನೀಯ ಪರಿಸ್ಥಿತಿಯಲ್ಲಿದ್ದರು. ಅವರಿಗೆ ಕೆಲಸದ ಅವಶ್ಯಕತೆ ಇತ್ತು. ‘ಸರ್, ನನಗೆ ಕೆಲಸದ ಅಗತ್ಯವಿದೆ. ಎಲ್ಲಿಗೆ ಕಳಿಸಿದರೂ ಹೋಗುತ್ತೇನೆ. ಇಲ್ಲ ಅಂತ ಮಾತ್ರ ಹೇಳಬೇಡಿ’ ಎಂದರು. ನಾನು ತಡಮಾಡದೇ ‘ಯಾದಗಿರಿಗೆ ಹೋಗ್ತೀರಾ ?’ ಅಂತ ಕೇಳಿದೆ. ಯಾಕೋ ಅವರ
ಉತ್ತರ ಕೇಳಿ ನನಗೆ ಆಶ್ಚರ್ಯವಾಯಿತು. ‘ಅದೊಂದನ್ನು ಬಿಟ್ಟು ಬೇರೆ ಎಲ್ಲಾದರೂ ಹೋಗ್ತೇನೆ’ ಅಂದರು. ‘ಅಲ್ಲಾರಿ, ಯಾದಗಿರಿಯೇನು ಅಸ್ಸಾಮಿನಲ್ಲಿದೆಯಾ? ಅಂಡಮಾನಿನಲ್ಲಿ ದೆಯಾ? ಕರ್ನಾಟಕದಲ್ಲಿರುವ ಒಂದು ಊರಿಗೆ, ಅದೂ ಜಿಲ್ಲಾ ಕೇಂದ್ರಕ್ಕೆ ಹೋಗುವುದಿಲ್ಲ ಅಂತ ಹೇಳ್ತೀರಲ್ಲ’ ಎಂದು ಹೇಳಿದಾಗ, ‘ನನ್ನ ಹೆಂಡತಿಯನ್ನು ಕೇಳಿ ನಿಮಗೆ ತಿಳಿಸುತ್ತೇನೆ ’ ಎಂದು ಹೇಳಿ ಹೋದವರು ಮತ್ತೊಮ್ಮೆ ಮುಖ ಹಾಕಲಿಲ್ಲ.

ಯಾರನ್ನೇ ಕೇಳಿದರೂ ಒಲ್ಲೆ ಎನ್ನುತ್ತಿದ್ದರು. ಇನ್ನು ನೌಕರಿಗಾಗಿ ಪೀಡಿಸುವವರಿಗೆ, ಯಾರ‍್ಯಾರಿಂದಲೋ ಪ್ರಭಾವ ಬೀರುವವರಿಗೆ ಯಾದಗಿರಿ ನನಗೆ ತಡೆಗೋಡೆಯೂ ಆಗಿತ್ತು. ‘ಖಂಡಿತಾ ನೌಕರಿ ಕೊಡ್ತೇನೆ’ ಎಂದಾಗ ಸಂತಸದಿಂದ ಉಲಿಯುತ್ತಿದ್ದರು. ‘ಯಾದಗಿರಿಗೆ ಹೋಗುವುದಾದರೆ ಮಾತ್ರ ನೌಕರಿ ಕೊಡುತ್ತೇನೆ’ ಎನ್ನುತ್ತಿದ್ದಂತೆ ಅವರ ಉತ್ಸಾಹ ಭರ್ರನೆ ಇಳಿದು ಹೋಗುತ್ತಿತ್ತು. ನಾನು ಬಚಾವ್!

ಕೊನೆಗೆ ಒಬ್ಬರು ಸಿಕ್ಕಿದರು. ಹೋಗಲು ಒಪ್ಪಿದರು. ಯಾದಗಿರಿಗೆ ಹೋಗಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡರು. ಅದಾಗಿ ಹದಿನೈದು ದಿನಗಳಾಗಿರಲಿಲ್ಲ. ಒಂದು ಮುಂಜಾನೆ ಜೋರಾಗಿ ಫೋನಿನಲ್ಲಿ ಅಳುತ್ತಿದ್ದರು. ‘ನಿನ್ನೆ ರಕ್ತ ವಾಂತಿಯಾಯಿತು. ಇಲ್ಲಿನ ಬಿಸಿಲಿನ ಝಳದಿಂದ ತತ್ತರಿಸಿದ್ದೇನೆ. ನನಗೆ ಇಲ್ಲಿ ಇರಲು ಸಾಧ್ಯವಿಲ್ಲ. ಬೆಂಗಳೂರಿಗೆ ಕರೆಯಿಸಿಕೊಳ್ಳಿ’ ಎಂದು ಬಿಕ್ಕುತ್ತಿದ್ದರು. ‘ಎರಡು ವರ್ಷ ಅಲ್ಲಿ ಇರುತ್ತೇನೆ ಎಂದು ಹೇಳಿದಿರಿ, ಅದಾದ ಬಳಿಕವೇ ಕರೆಯಿಸಿಕೊಳ್ಳುವುದು ಎಂದು
ಹೇಳಿದ್ದಕ್ಕೆ ಒಪ್ಪಿದಿರಿ. ಈಗ ರಾಗ ಬದಲಿಸಿದರೆ ಒಪ್ಪುವುದಿಲ್ಲ. ಒಂದೋ ಕೆಲಸ ಮಾಡಿ, ಇಲ್ಲವೇ ರಾಜೀನಾಮೆ ಕೊಡಿ’ ಎಂದು ಖಡಕ್ಕಾಗಿ ಹೇಳಿದಾಗ, ಎರಡು ವಾರ ಸರಿ ಹೋಗುತ್ತಿದ್ದರು.

ಮುಂದಿನ ವಾರ ಪುನಃ ಅದೇ ಬಿಕ್ಕಳಿಕೆ. ಕನ್ನಡ ಪತ್ರಕರ್ತರು ವಲಸೆ ಹಕ್ಕಿಗಳಲ್ಲ. ಒಂದು ಪತ್ರಿಕೆಯಿಂದ ಮತ್ತೊಂದು ಪತ್ರಿಕೆಗೆ ಪದೇ ಪದೆ ಜಿಗಿಯುವುದು ಕಡಿಮೆ.
ಅವಕಾಶಗಳು ಕಡಿಮೆಯಿರುವುದು ಇದಕ್ಕೆ ಕಾರಣವಿರಬಹುದು. ರಾಜಧಾನಿ ಪತ್ರಕರ್ತರು ಬೇರೆ ಊರಿಗೆ ಹೋಗದಿರಲು ಕೌಟುಂಬಿಕ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸ, ಪತ್ರಿಕೆ ಕೆಲಸ, ತಂದೆ-ತಾಯಿ ಅನಾರೋಗ್ಯದಂಥ ಸಮಸ್ಯೆಗಳೂ ಕಾರಣವಿರಬಹುದು. ಬೇರೆ ಊರಿಗೆ ಹೋಗಬೇಕೆನಿಸಿದರೂ ಈ ಸಂಗತಿಗಳು ಕೈಹಿಡಿದು ಜಗ್ಗಬಹುದು. ಆದರೆ ಇಂಥವರ ಸಂಖ್ಯೆ ಕಮ್ಮಿ. ಮೂಲ ಸಮಸ್ಯೆಯೇನೆಂದರೆ ಬೆಂಗಳೂರನ್ನು ಬಿಟ್ಟು ಕದಲಬೇಕಲ್ಲ ಎಂಬ ‘ಬೇರು-ಪರ’ ಭಾವನೆ ಅಥವಾ ಸಿಂಡ್ರೋಮು.

ನಾನು ವರದಿಗಾರರ ಮೀಟಿಂಗ್ ಏರ್ಪಡಿಸಿದಾಗ ಕೊನೆಯಲ್ಲಿ ‘ವರ್ಷಗಟ್ಟಲೆ ಸುತ್ತಾಡಿ ಬಂದು, ಅಲ್ಲಿನ ಅನುಭವ ಗಳನ್ನು ಒಂದೆರಡು ತಿಂಗಳು ಬರೆಯುವು ದಾದರೆ, ಧಾರಾವಾಹಿ ರೂಪದಲ್ಲಿ ಪ್ರಕಟಿಸುತ್ತೇನೆ. ಇದೊಂದು ಗಂಭೀರ ಸ್ವರೂಪದ ಪತ್ರಿಕೋದ್ಯಮ. ನಿಮಗೂ ಅದ್ಭುತ ಸವಾಲು. ಯಾರು ಹೋಗ್ತೀರಿ ಹೇಳಿ’ ಎಂದು ಕೇಳುತ್ತಿದ್ದೆ. ಬಿಡಿ, ಅಂಥ ಮಾಲಿಕೆ ಯನ್ನು ಪ್ರಕಟಿಸುವ ಸದವಕಾಶ ಕೊನೆಗೂ ಸಿಗಲೇ ಇಲ್ಲ! ಬೆಂಗಳೂರು ಬಿಟ್ಟು ಹೋಗುವುದು ಹೇಗೆ? ಇಳಿಬಿಟ್ಟ ಬೇರುಗಳನ್ನು ಕಿತ್ತುಕೊಂಡು, ಬೇರೆ ಊರುಗಳಿಗೆ ಹೋಗಿ ನೆಡುವುದು ಹೇಗೆ? ಹಳ್ಳಿಗಳಿಗೆ ಹೋಗಿ ಯಾರು ಸಾಯ್ತಾರೆ? ಹೀಗಾಗಿ ಯಾರೂ ಪಟ್ಟಣ ಬಿಟ್ಟು ಹೋಗುವುದಿಲ್ಲ. ಪತ್ರಕರ್ತರಾದವರು ತಮ್ಮ ಬೀಟ್ ಬದಲಿಸಿದರೂ ಸಹಿಸಿಕೊಳ್ಳುವುದಿಲ್ಲ.

ವರದಿಗಾರರಿದ್ದವರನ್ನು ಡೆಸ್ಕ್‌ಗೆ ವರ್ಗಾಯಿಸಿದರೆ ‘ಕುಂಯೋ ಕುರೋ’ ಎನ್ನುತ್ತಾರೆ. ಸಂಪಾದಕರು ಪನಿಶ್‌ಮೆಂಟ್ ಕೊಟ್ಟರು ಎಂದು ಅಲವತ್ತುಕೊಳ್ಳುತ್ತಾರೆ. ಕ್ರೀಡಾ ವಿಭಾಗದಲ್ಲಿದ್ದವರನ್ನು ಗ್ರಾಮಾಂತರ ವಿಭಾಗಕ್ಕೆ ವರ್ಗ ಮಾಡಿದರೂ ಸೈ, ಒಂದು ಹಿಡಿಶಾಪ ಇದ್ದಿದ್ದೇ. ಅದಿರಲಿ, ಕ್ರೀಡಾ ವಿಭಾಗದಲ್ಲಿ ಬಹಳ ವರ್ಷ ಕ್ರಿಕೆಟ್ ರಿಪೋರ್ಟಿಂಗ್ ಮಾಡಿದವರನ್ನು ಅಥ್ಲೆಟಿಕ್ಸ್‌ಗೆ ವರ್ಗ ಮಾಡಿದರೂ ‘ಶಿಕ್ಷೆ’ ಎಂದು ಕೆಲವರು ಭಾವಿಸುವುದುಂಟು. ಎಲ್ಲರಿಗೂ ಸ್ಥಾವರವಾಗಿರಲು ಆಸೆ.
ಯಾರೂ ಜಂಗಮರಾಗಲೊಲ್ಲರು.

ಗದ್ದಲದಾಚೆ ಬದುಕುವ ಗೆದ್ದಲ ಜೀವಿ

ಅಲಸೂರಿನಲ್ಲಿ ನನ್ನ ಸ್ನೇಹಿತರೊಬ್ಬರಿದ್ದಾರೆ. ಅವರ ಹೆಸರು ಮಾಣಿಕ್ಯಮ್ ಅಂತ. ಈ ಮನುಷ್ಯನ ಹವ್ಯಾಸ ಅವರನ್ನು ಕನಿಷ್ಠ ೨೦ ದೇಶಗಳಿಗೆ ಕರೆದುಕೊಂಡು ಹೋಗಿದೆ. ಇವರು ಪ್ರಚಾರದಿಂದ ದೂರ. ತುಸು ಗಂಭೀರ ಸ್ವಭಾವದವರು. ನೀವು ಕರೆದರೆ ನಿಮ್ಮ ಮನೆಗೆ ಬಂದಾರು. ಆದರೆ ಒಂದು ಷರತ್ತು. ಅದೇನೆಂದರೆ ನಿಮ್ಮ ಮನೆಯಲ್ಲಿ ಗೆದ್ದಲು (termites) ಇರಬೇಕು. ಅಂದ ಹಾಗೆ ಇವರು ಗೆದ್ದಲು ಪರಿಣತ. ಇವರ ಪಿಎಚ್‌ಡಿ ವಿಷಯವೂ ಗೆದ್ದಲುಗಳೇ. ಪದವಿ ಪಡೆದು ಅವರು ಗೆದ್ದಲುಗಳ ಬಗ್ಗೆ ಅಧ್ಯಯನ ನಿಲ್ಲಿಸಲಿಲ್ಲ. ಆನಂತರವೇ ಜಾಸ್ತಿ ಮಾಡಿದರು. ನೂರಾರು ವಿಧಗಳ ಗೆದ್ದಲುಗಳನ್ನು ಪತ್ತೆ ಮಾಡಿರುವ ಅವರಿಗೆ ಗೆದ್ದಲುಗಳೆಂದರೆ ಮಾಣಿಕ್ಯವೇ.

ಗೆದ್ದಲು ಕಂಡರೆ ತಕ್ಷಣ ತಮ್ಮ ಜೇಬಿನಲ್ಲಿರುವ ಶೀತವಾದ ಬಾಟಲಿ ತೆಗೆದು ಅದರೊಳಗೆ ಮೆಲ್ಲನೆ ತುಂಬಿಸಿಕೊಳ್ಳುತ್ತಾರೆ. ಅದನ್ನು ಹಿಡಿದ ಜಾಗದ ವಿವರಗಳನ್ನೆಲ್ಲ ಬರೆದುಕೊಳ್ಳುತ್ತಾರೆ. ಅಲ್ಲಿಂದ ಶುರುವಾಗುತ್ತದೆ ಅವರ ಸಂಶೋಧನೆ. ಮುಂದಿನ ನಾಲ್ಕೈದು ದಿನ ಮಾಣಿಕ್ಯಮ್ ಅವರ ಮಾತುಕತೆಯೆಲ್ಲ ಬಂದ್. ಒಮ್ಮೊಮ್ಮೆ ಗೆದ್ದಲು ಹಿಡಿದ ಜಾಗಕ್ಕೆ ಎರಡನೇ ಸಲ, ಮೂರನೇ ಸಲ ಭೇಟಿ ಕೊಟ್ಟು ಆ ಜಾಗದ ಲಕ್ಷಣವನ್ನು ಪರೀಕ್ಷಿಸುತ್ತಾರೆ. ಅಲ್ಲಿ ಕುಳಿತು ನೋಟ್ಸ್ ಮಾಡಿಕೊಳ್ಳುತ್ತಾರೆ, ಅಲ್ಲಿ ಕಂಡ ದೃಶ್ಯಗಳನ್ನೆಲ್ಲ ಬರೆದುಕೊಳ್ಳುತ್ತಾರೆ, ಫೋಟೊ ಹೊಡೆದುಕೊಳ್ಳುತ್ತಾರೆ. ಆ ವಿವರಗಳನ್ನೆಲ್ಲ ಇಟ್ಟುಕೊಂಡು ಇನ್ನೆಲ್ಲೋ ಸಂಗ್ರಹಿಸಿದ ಗೆದ್ದಲು ಹಾಗೂ ಅದು ಸಿಕ್ಕ ಜಾಗವನ್ನು ಹೋಲಿಸುತ್ತಾರೆ, ತಾಳೆ ಹಾಕುತ್ತಾರೆ.

ತಲೆ ಕೆಟ್ಟು ಒಂದು ದಿನ ಮಾಣಿಕ್ಯಮ್ ಅವರ ಬಳಿ ಗೆದ್ದಲು ಕತೆಯನ್ನೂ ಕೆದಕಿದೆ. ಆ ದಿನ ಬಾಯ್ಬಿಟ್ಟರು- ‘ಜನರಿಗೆ ಬುದ್ಧಿ ಇಲ್ಲ. ಗೆದ್ದಲು ಹಿಡಿದು ಹಾಳಾಯಿತು ಅಂತಾರೆ. ಗೆದ್ದಲು ತಿಂದೋಯ್ತು ಅಂತಾರೆ. ಗೆದ್ದಲು ಕಂಡರೆ ಸೀಮೆ ಎಣ್ಣೆ ಸುರಿದು ಸಾಯಿಸುತ್ತಾರೆ. ಕಾಲಲ್ಲಿ ಜಜ್ಜಿ ಸಾಯಿಸುತ್ತಾರೆ. ಎಂಥ ಬುದ್ಧಿಗೇಡಿ ಜನ?
ಗೆದ್ದಲು ಅದ್ಭುತ ಸೃಷ್ಟಿ. ಯಾವ ಜಾಗದಲ್ಲಿ ಗೆದ್ದಲುಗಳಿವೆಯೋ ಅಲ್ಲಿ ನೀರಿದೆ ಅಂತ ಅರ್ಥ. ಅಲ್ಲಿನ ಮಣ್ಣು ಫಲವತ್ತಾಗಿದೆ ಅಂತ ಅರ್ಥ. ಅಂತರ್ಜಲಮಟ್ಟ ಮೇಲಿದೆ ಅಂತ ಅರ್ಥ. ಆ ಪ್ರದೇಶ ಕೃಷಿಗೆ ಯೋಗ್ಯ ಎಂದರ್ಥ. ಮರುಭೂಮಿಯಲ್ಲೂ ಗೆದ್ದಲುಗಳು ನೀರಿನ ಸೆಲೆ ಹುಡುಕಿಕೊಂಡು ಹೋಗುತ್ತವೆ. ಗೆದ್ದಲುಗಳಿರುವ
ಭೂಮಿಯಲ್ಲಿ ಸಣ್ಣ-ಸಣ್ಣ ತೂತುಗಳುಂಟಾಗಿ ನೀರು ಒಳಕ್ಕೆ ಹರಿದುಹೋಗಲು ಸಹಾಯಕವಾಗುತ್ತದೆ. ಇದರಿಂದ ಭೂ ಸವಕಳಿ ತಪ್ಪುತ್ತದೆ. ಗೆದ್ದಲು ರೈತನ ಮಿತ್ರ… ‘ ಮಾಣಿಕ್ಯಮ್ ಒಂದೇಸಮನೆ ಗೆದ್ದಲುಗಳ ರೋಮಾಂಚಕ ಪ್ರಪಂಚದ ಬಗ್ಗೆ ಹೇಳುತ್ತಿದ್ದರೆ ಆಸಕ್ತರಿಗೆ ಕುತೂಹಲದ ಗೆದ್ದಲು ಹತ್ತಿದರೆ ಆಶ್ಚರ್ಯವಿಲ್ಲ. ಅವರ ಬಳಿ ಅಷ್ಟೊಂದು ಮಾಹಿತಿಯಿದೆ.

ಗೆದ್ದಲೇ ಅವರ ವಿಶ್ವ. ತ್ರಿಕಾಲವೂ ಅವರಿಗೆ ಗೆದ್ದಲು ಹುಳುಗಳದ್ದೇ ಚಿಂತೆ. ಸದಾ ತಲೆಯಲ್ಲಿ ಗೆದ್ದಲ ಗದ್ದಲ. ಆಫ್ರಿಕಾದ ಕಾಡನ್ನು ಸಹ ಅವರು ಬಿಟ್ಟಿಲ್ಲ. ಈಜಿಪ್ಟ್‌ನ ಪಿರಮಿಡ್ಡುಗಳನ್ನು ನೋಡಿ ಬನ್ನಿ ಅಂದ್ರೆ ದರೊಳಗೆ ಗೆದ್ದಲುಗಳು ಇದ್ದಿರಬಹುದಾ ಎಂದು ಮಾಣಿಕ್ಯಮ್ ಹುಡುಕಲಾರಂಭಿಸುತ್ತಾರೆ. ಅವರಿಗೆ ಗೆದ್ದಲಿನಷ್ಟು ಸಂತೃಪ್ತಿಯನ್ನು ಮತ್ತೇನೂ ಕೊಡುವುದಿಲ್ಲ.

ಈ ಜಗತ್ತು ಇರುವುದೇ ಹೀಗೆ!
ಯೋಗಿ ದುರ್ಲಭಜೀ ಯಾವುದೇ ಗ್ಯಾಜೆಟ್ (ಇಲೆಕ್ಟ್ರಾನಿಕ್ ಉಪಕರಣ)ಗಳನ್ನು ಬಳಸುವುದಿಲ್ಲ. ಇಂದಿಗೂ ಅವರ ದೊಡ್ಡ ಲಕ್ಸುರಿ ಅಂದ್ರೆ ಲ್ಯಾಂಡ್‌ಲೈನ್ ಫೋನು. ಸುಮಾರು ಎಂಟು ವರ್ಷ ಅದನ್ನೂ ಬಳಸುತ್ತಿರಲಿಲ್ಲ. ಆದರೆ ಅದನ್ನು ಬಳಸುವಂತೆ ಮನವೊಲಿಸುವುದರಲ್ಲಿ ನನ್ನ ಪಾತ್ರವೂ ಇದೆ. ಈಗ ಅದನ್ನು
ಬಳಸಲಾರಂಭಿಸಿದ್ದಾರೆ. ಆದರೆ ನಾವು ಫೋನ್ ಮಾಡಿದಾಗ ಅವರು ಕರೆ ಸ್ವೀಕರಿಸುವುದಿಲ್ಲ. ಅವರಿಗೆ ಮಾತಾಡಬೇಕೆಂದೆನಿಸಿದಾಗ ಫೋನ್ ಮಾಡುತ್ತಾರೆ. ಕನಿಷ್ಠ ಅಷ್ಟರಮಟ್ಟಿಗಾದರೂ ಸಿಗುತ್ತಾರಲ್ಲ ಎಂಬುದಷ್ಟೇ ಸಮಾಧಾನ.

ಇಂದು ಅದೇನಾಗಿತ್ತೋ ಏನೋ? ಯೋಗಿ ತುಸು ಖಿನ್ನಮನಸ್ಕರಾಗಿಯೇ ಮಾತಿಗಾರಂಭಿಸಿದರು- ‘ನಮ್ಮನ್ನು, ಪ್ರತಿಯೊಬ್ಬರನ್ನು ಸದಾ ಬೇಸರ, ಹತಾಶೆ ಯಲ್ಲಿರಿಸುವುದೇ ಪರಮ ಉದ್ದೇಶವೆಂಬಂತೆ ಈ ಜಗತ್ತನ್ನು ರೂಪಿಸಲಾಗಿದೆ’. ನನಗೆ ಅವರ ಮಾತಿನ ಒಳದನಿ ಅರ್ಥವಾಗಲಿಲ್ಲ ಅಥವಾ ಅವರು ಹೇಳಿದ್ದಕ್ಕೆ ನನ್ನ ಸಹಮತವಿರಲಿಲ್ಲ. ‘ನಿಮ್ಮ ಮಾತನ್ನು ಒಪ್ಪಿಕೊಳ್ಳುವುದು ಕಷ್ಟ’ ಎಂದೆ. ಅದಕ್ಕೆ ಯೋಗಿಯವರು ಹೇಳಿದರು- ‘ಎಲ್ಲರೂ ಸುಖವಾಗಿ, ನೆಮ್ಮದಿಯಾಗಿ, ಸಂತಸ ದಿಂದ ಇರುವುದು ಯಾವುದೇ ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ. ಈಗ ನಮ್ಮಲ್ಲಿ ಏನಿದೆಯೋ, ಅದಕ್ಕೆ ನಾವು ಸಮಾಧಾನ ಹೊಂದುವಂತಾದರೆ, ನಮಗೆ ಯಾವುದೂ ಬೇಕಾಗುವುದಿಲ್ಲ.

ಆಗ ದೇಶದ ಆರ್ಥಿಕತೆ ಬೆಳೆಯುವುದಾದರೂ ಹೇಗೆ? ಆಗ ನೀವು anti-ageing ಕ್ರೀಮನ್ನು ಹೇಗೆ ಮಾರಾಟ ಮಾಡುತ್ತೀರಿ? ನಿಮಗೆ ವಯಸ್ಸಾಗುತ್ತಿದೆಯೆಂದು ಹೆದರಿಸಿದರೆ ಈ ಕ್ರೀಮನ್ನು ಮಾರಾಟ ಮಾಡಬಹುದು. ಜನರು ಯಾವಾಗ ಜೀವವಿಮೆ ಪಾಲಿಸಿಯನ್ನು ಮಾಡಿಸುತ್ತಾರೆ? ಏಕಾಏಕಿ ನೀವು ಸತ್ತುಹೋದರೆ ಏನೆಲ್ಲ ಅವಾಂತರಗಳಿಗೆ ಗುರಿಯಾಗುತ್ತೀರಿ ಎಂದು ಜನರನ್ನು ಹೆದರಿಸಿದಾಗ ವಿಮೆ ಮಾಡಿಸುತ್ತಾರೆ. ಜನರನ್ನು ಪ್ಲಾಸ್ಟಿಕ್ ಸರ್ಜರಿಗೆ ಹೇಗೆ ಪ್ರೇರೇಪಿಸುತ್ತೀರಿ? ನಿಮ್ಮ
ಸೌಂದರ್ಯ, ರೂಪದಲ್ಲಿ ಏನೋ ಐಬು ಇದೆ ಎಂದು ಅವರಲ್ಲಿ ಆತಂಕ ಮೂಡಿಸಿದಾಗ. ಜನರನ್ನು ಟಿವಿ ಕಾರ್ಯಕ್ರಮ ವೀಕ್ಷಿಸುವಂತೆ ಮಾಡುವುದು ಹೇಗೆ? ಟಿವಿ ನೋಡದಿದ್ದರೆ ನೀವು ಜೀವನದಲ್ಲಿ ಏನೋ ಮುಖ್ಯವಾಗಿ ಕಳೆದುಕೊಳ್ಳುತ್ತೀರಿ ಎಂಬ ಪಶ್ಚಾತ್ತಾಪವನ್ನು ಅವರಲ್ಲಿ ಉಂಟುಮಾಡಿದಾಗ. ಜನರು ಹೊಸ ಕಾರು, ಸ್ಮಾರ್ಟ್ ಫೋನ್ ಅನ್ನು ಖರೀದಿಸುವುದು ಯಾವಾಗ? ಅವುಗಳಿಲ್ಲದ ಜೀವನ ನಿರರ್ಥಕ ಎಂಬ ಭಾವನೆಯನ್ನು ಅವರಲ್ಲಿ ಬಿತ್ತಿದಾಗ. ತಲೆಗೆ ಹಚ್ಚುವ ಬಣ್ಣವನ್ನು ಹೇಗೆ ಮಾರಾಟ ಮಾಡುತ್ತೀರಿ? ಬಿಳಿ ಕೂದಲು ಕಾಣಿಸಿಕೊಂಡರೆ ವಯಸ್ಸಾಯ್ತು ಎಂದು ಎಲ್ಲರೂ ತಿರಸ್ಕರಿಸಬಹುದು ಎಂಬ ಭಯ  ಮೂಡಿಸಿದಾಗ ಮಾತ್ರ. ಒಂದು ರಾಜಕೀಯ ಪಕ್ಷಕ್ಕೆ ನೀವೇಕೆ ವೋಟು ಹಾಕುತ್ತೀರಿ? ಬೇರೆಯವರಿಗೆ ವೋಟು ಹಾಕಿದರೆ ನಿಮ್ಮ ಬದುಕು ಹೈರಾಣಾಗಬಹುದೆಂದು ಗೂಬೆ ಕೂರಿಸಿದಾಗ.
ಎಲ್ಲವೂ ಸರಿಯಿದೆ, ಎಲ್ಲರೂ ನೆಮ್ಮದಿಯಿಂದ ಇದ್ದಾರೆಂಬುದು ಯಾವುದೇ ಇಕಾನಮಿಗೂ ಒಳ್ಳೆಯದಲ್ಲ. ಜನರನ್ನು ಹೆದರಿಸಬೇಕು.

ಅವರಲ್ಲಿ ಸದಾ ಅತೃಪ್ತಿ ಮೂಡಿಸಬೇಕು. ಇದು ಜಗದ ನಿಯಮ. ಸರಕಾರದ ನಿಯಮ. ಎಲ್ಲ ಕಂಪನಿಗಳ ಧ್ಯೇಯ. ಇದೇ ಅಭಿವೃದ್ಧಿ ಮಾನದಂಡ.’ ನಾನು ಯೋಚಿಸಲಾರಂಭಿಸಿದೆ.

ಈ ವಿಷಯಗಳಲ್ಲಿ ಮಂಜ್ರೇಕರ್‌ಗೆ ಆಸಕ್ತಿಯಿಲ್ಲವಂತೆ
ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ ಆತ್ಮಕತೆ ಓದುವತನಕ ಅವರು ಹೀಗೂ ಇದ್ದಿರಬಹುದು ಎಂಬುದು ಗೊತ್ತಿರಲಿಲ್ಲ. ಅವರು ಇಲ್ಲಿಯ ತನಕ ಯಾವುದೇ ಕ್ರೀಡಾಪಟುವಿನ ಆತ್ಮಕತೆ ಓದಿಲ್ಲವಂತೆ. ಕ್ರೀಡೆಗೆ ಸಂಬಂಧಿಸಿದ ಪುಸ್ತಕವನ್ನೂ. ಅಂಥ ಪುಸ್ತಕದಲ್ಲಿ ಅವರಿಗೆ ಆಸಕ್ತಿ ಇಲ್ಲವಂತೆ. ಕಾರಣ ಯಾರೂ ನಿಜ ಬರೆಯುವುದಿಲ್ಲವಂತೆ. ಸಂಜಯ್ ಮಂಜ್ರೇಕರ್‌ಗೆ ಟೆನ್ನಿಸ್ ಲೋಕದಲ್ಲಿ ಏನಾಗುತ್ತಿದೆ ಎಂಬುದರ ಐಡಿಯಾವೇ ಇಲ್ಲವಂತೆ.

ಫುಟ್‌ಬಾಲ್ ಆಟಗಾರರ ಬಗ್ಗೆಯೂ ಅವರಿಗೆ ಗೊತ್ತಿಲ್ಲವಂತೆ. ಯಾರಾದರೂ ಟೆನ್ನಿಸ್, ಫುಟ್‌ಬಾಲ್, ಇಂಗ್ಲಿಷ್ ಪ್ರೀಮಿಯರ್ ಲೀಗ್.. ಹೀಗೆ ಯಾವುದಾದರೂ ಆಟದ ಬಗ್ಗೆ ಮಾತಾಡಿದರೆ, ಅವರು ಸುಮ್ಮನೆ ಒಂದು ಮೂಲೆಯಲ್ಲಿ ಕುಳಿತುಬಿಡುತ್ತಾರಂತೆ. ಅದೇ ಮಂಜ್ರೇಕರ್ ಜತೆ ಕಿಶೋರ್‌ಕುಮಾರ್, ಲತಾ ಮಂಗೇಶ್ಕರ್, ಮೆಹದಿ ಹಸನ್, ನುಸ್ರತ್ ಫತೇ ಅಲಿ ಖಾನ್ ಬಗ್ಗೆ ಪ್ರಸ್ತಾಪಿಸಿದರೆ ಗಂಟೆಗಟ್ಟಲೆ ಮಾತಾಡುತ್ತಾರಂತೆ. ಅವರ ಪಾಲಿಗೆ ಸಿನಿಮಾ ಮಂದಿ ಅದರಲ್ಲೂ ಸಿನಿಮಾ ನಿರ್ದೇಶಕರೆಂದರೆ ಮಹಾನ್ ವ್ಯಕ್ತಿಗಳಂತೆ. ಸಿನಿಮಾದಿಂದ ಅವರು ಅನೇಕ ಸಂಗತಿಗಳನ್ನು ಕಲಿತಿದ್ದಾರಂತೆ. ಐದು ನೂರು ರುಪಾಯಿಗೆ ಒಂದು ಸಿನಿಮಾ
ನೋಡುವುದಕ್ಕಿಂತ ಮಿಗಿಲಾದ ಅದ್ಭುತ ಡೀಲ್ ಮತ್ತೊಂದಿಲ್ಲವಂತೆ. ಅವರ ಮಕ್ಕಳೇನಾದರೂ ಒಳ್ಳೆಯ ಸಿನಿಮಾಗಳನ್ನು ಎಷ್ಟು ನೋಡಿದರೂ ಆಕ್ಷೇಪಿಸುವುದಿಲ್ಲವಂತೆ.

ನೀವು ಜಗತ್ತಿನ ಯಾವುದೇ ಭಾಷೆಯ ಸಿನಿಮಾಗಳ ಅಭಿಮಾನಿಯಾದರೆ, ಆ ಮೊದಲು ಮಂಜ್ರೇಕರ್ ಪರಿಚಯವಿಲ್ಲದಿದ್ದರೂ, ಅವರ ಸ್ನೇಹಿತರಾಗಬಹುದಂತೆ.
ಅದರಲ್ಲೂ ನೀವು ಕಿಶೋರ್ ಕುಮಾರ್ ಅಭಿಮಾನಿಯಾದರೆ, ಮಂಜ್ರೇಕರ್ ಅವರ ಆತ್ಮಸಂಗಾತಿಯಾಗಬಹುದಂತೆ.

ಅದ್ಯಾವ ಗುಣ?

ಸನ್ಯಾಸಿಯೊಬ್ಬ ನಡೆದು ಹೋಗುತ್ತಿರುವಾಗ ನದಿಯ ಪಕ್ಕ ಅವನಿಗೆ ಅಮೂಲ್ಯ ಹರಳುಗಳು ಸಿಕ್ಕವು. ವಜ್ರದ ಹರಳುಗಳೆಂದು ಯಾರಾದರೂ ಹೇಳಬಹುದಿತ್ತು. ಅದೇ ಹಾದಿಯಲ್ಲಿ ದಾರಿಹೋಕನೊಬ್ಬ ಹೋಗುತ್ತಿದ್ದ. ಆತ ವಿಪರೀತ ಹಸಿದಿದ್ದ. ಸನ್ಯಾಸಿಯ ಬಳಿ ಬಂದು ಏನಾದರೂ ತಿನ್ನಲು ಕೊಡುವಂತೆ ಕೇಳಿದ. ಸನ್ಯಾಸಿ ತನ್ನ ಜೋಳಿಗೆ ಚೀಲವನ್ನು ತೆರೆದಾಗ ದಾರಿಹೋಕನಿಗೆ ವಜ್ರದ ಹರಳುಗಳು ಕಣ್ಣಿಗೆ ಬಿದ್ದವು. ಅವುಗಳನ್ನೆಲ್ಲ ತನಗೆ ಕೊಡುವಂತೆ ದಾರಿಹೋಕ ಕೇಳಿದಾಗ
ಸನ್ಯಾಸಿ ಹಿಂದೆ-ಮುಂದೆ ನೋಡದೇ ಎಲ್ಲವನ್ನೂ ಕೊಟ್ಟುಬಿಟ್ಟ. ದಾರಿಹೋಕನಿಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನುವಷ್ಟು ಖುಷಿಯಾಯಿತು. ಇನ್ನು ಜೀವನದಲ್ಲಿ ದುಡಿಯಬೇಕಾಗಿಲ್ಲ, ಹಾಯಾಗಿರಬಹುದು ಎಂದು ಸಂತಸಪಟ್ಟ. ಸುಮಾರು ಐದಾರು ತಿಂಗಳು ಗತಿಸಿದವು. ಆ ದಾರಿಹೋಕ ಸನ್ಯಾಸಿಯನ್ನು ಹುಡುಕುತ್ತಾ ಬಂದ. ಅದೇ ಪ್ರದೇಶದಲ್ಲಿ ಸನ್ಯಾಸಿ ಸಿಕ್ಕ. ಸನ್ಯಾಸಿಯ ಪಾದಕ್ಕೆರಗಿ ದಾರಿಹೋಕ ಹೇಳಿದ ‘ಈ ಹರಳುಗಳನ್ನೆಲ್ಲ ನನಗೆ ಕೊಡಿ ಎಂದೆ. ಹೇಳಿದ್ದೇ ತಡ, ಎಲ್ಲವನ್ನೂ
ನನಗೆ ಕೊಟ್ಟುಬಿಟ್ಟರಿ. ಅವು ವಜ್ರದ ಹರಳುಗಳು ಎಂಬ ಸಂಗತಿ ನಿಮಗೆ ಗೊತ್ತಿರಲಿಲ್ಲವಾ?’ ಅದಕ್ಕೆ ಸನ್ಯಾಸಿ ಹೇಳಿದ ‘ನನಗೆ ಗೊತ್ತಿತ್ತು. ಚೆನ್ನಾಗಿ ಗೊತ್ತಿತ್ತು’. ಸನ್ಯಾಸಿಯ ಮಾತುಗಳಿಂದ ಅವಾಕ್ಕಾದ ದಾರಿಹೋಕ ಹೇಳಿದ ‘ಗುರೂಜೀ, ನೀವು ನನಗೆ ನೀಡಿದ ಹರಳುಗಳನ್ನು ನಿಮಗೆ ವಾಪಸ್ ಕೊಡುತ್ತಿದ್ದೇನೆ. ನನಗೆ
ಅವುಗಳ ಅವಶ್ಯಕತೆ ಇಲ್ಲ. ಆದರೆ ವಜ್ರದ ಹರಳುಗಳೆಂಬುದು ಗೊತ್ತಿದ್ದೂ, ಹಿಂದೆ-ಮುಂದೆ ನೋಡದೇ ಅವನ್ನು ನನಗೆ ಎತ್ತಿಕೊಟ್ಟಿರಲ್ಲ. ಆ ನಿಮ್ಮ ಗುಣವನ್ನು ನನಗೆ ಕೊಡುತ್ತೀರಾ?’.

Leave a Reply

Your email address will not be published. Required fields are marked *

error: Content is protected !!