ವಿದೇಶವಾಸಿ
ಕಿರಣ್ ಉಪಾಧ್ಯಾಯ ಬಹ್ರೈನ್
dhyapaa@gmail.com
ಜಪಾನ್ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರವಾ ಎಂದು ಕೇಳಿದರೆ ಖಂಡಿತ ಅಲ್ಲ. ಅಮೆರಿಕ ಅಥವಾ ಚೀನಾಕ್ಕೆ ಆರ್ಥಿಕವಾಗಿ ಪೈಪೋಟಿ ನೀಡುವಷ್ಟು ಅದು ಎಂದಿಗೂ ಬೆಳೆದಿಲ್ಲ.
ಜಾಗತಿಕ ದೃಷ್ಟಿಕೋನದಿಂದ ನೋಡಿದರೆ, ಪ್ರಪಂಚದ ಆಗುಹೋಗುಗಳ ಕುರಿತು ಪ್ರಭಾವ ಬೀರುವ ದೇಶಗಳ ಪಟ್ಟಿಗೆ ಜಪಾನ್ ಸೇರುವುದಿಲ್ಲ. ಹೋಗಲಿ, ಕೊನೆ ಪಕ್ಷ ದೊಡ್ಡಪ್ರಮಾಣದ ಭೂಮಿಯನ್ನು ಹೊಂದಿದೆಯಾ ಎಂದು ನೋಡಿದರೆ ಅದೂ ಇಲ್ಲ. ಇದ್ದ ಭೂಭಾಗವಾದರೂ ಸುರಕ್ಷಿತವಾಗಿದೆಯಾ ಎಂದರೆ, ಊಹೂಂ, ಇಲ್ಲವೇ ಇಲ್ಲ. ಜಪಾನ್ ಈ ಲೋಕದ ನೈಸರ್ಗಿಕ ದುರಂತದ ಕೇಂದ್ರ ಬಿಂದು ಎಂದರೂ ತಪ್ಪಾಗಲಾರದು.
ವಿಶ್ವದ ಭೂಪಟದಲ್ಲಿ ಅಂಗೈಗಿಂತಲೂ ಚಿಕ್ಕದು ಎಂದೇ ಹೇಳಬಹುದಾದ ಈ ದೇಶದಲ್ಲಿ ಎಂದು ಭೂಮಿ ನಡುಗುತ್ತದೆ, ಬಾನು ಗುಡುಗುತ್ತದೆ ಅಥವಾ ಎಂದು ಸುನಾಮಿ ಬಂದು ವಕ್ಕರಿಸುತ್ತದೆ ಎಂಬುದು ಬುದ್ಧ ದೇವನಿಗೂ ತಿಳಿಯಲಿಕ್ಕಿಲ್ಲ. ಆದರೆ ಅಲ್ಲಿಯ ಜನಮಾತ್ರ ಅದೆಷ್ಟೇ ದೊಡ್ಡ ಅನಾಹುತವಾದರೂ, ಪ್ರಾಕೃತಿಕ ವಿಕೋಪಗಳಾದರೂ ಎಳ್ಳೆನಿತೂ ಜಗ್ಗದೆ, ಬಗ್ಗದೆ, ಕುಗ್ಗದೆ ಮುನ್ನಡೆಯುವುದು ವಿಶ್ವದ ಅನೇಕ ವರ್ಚಸ್ಸೀ ರಾಷ್ಟ್ರಗಳಿಗೆ ಮಾದರಿಯೇ ಸೈ. ಯಾವ ಅನಾಹುತವೇ ಆದರೂ ಬಲು ಬೇಗ ಅಭಿವೃದ್ಧಿಯ ಪಥದ ಜಾಡು ಹಿಡಿದು ಜಪಾನ್ ಮುನ್ನಡೆಯುತ್ತದೆ.
ಜಾಗತಿಕವಾಗಿ ಬಲಿಷ್ಠ ಎಂದು ಕರೆಸಿ ಕೊಳ್ಳುವ ದೇಶಗಳಿಗೂ ರಾಷ್ಟ್ರೀಯ ಬಿಕ್ಕಟ್ಟನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬ ಅನೇಕ ಪಾಠಗಳನ್ನು ಜಪಾನ್ ಕಲಿಸಿದೆ. ಉಳಿದ ರಾಷ್ಟ್ರಗಳಿಗಿಂತ ಜಪಾನ್ ವಿಭಿನ್ನವಾಗಿ ನಿಲ್ಲುವುದೇ ಈ ಕಾರಣಕ್ಕೆ. ಇದು ಸುಮಾರು ಒಂದೂವರೆ ದಶಕದ ಹಿಂದೆ ನಡೆದ ಸಂಗತಿ. ವಿದ್ಯುಚ್ಛಕ್ತಿಯ ತೀವ್ರ ಅಭಾವಕ್ಕೆ ಒಳಗಾಗಿತ್ತು ಜಪಾನ್. ಮನೆ, ಕಾರ್ಖಾನೆಗಳ ನಿತ್ಯದ ಬಳಕೆಗೆ ದೇಶದಲ್ಲಿ ಉತ್ಪಾದನೆ ಯಾಗುವು ದಕ್ಕಿಂತ ಹೆಚ್ಚಿನ ಬೇಡಿಕೆ ಇತ್ತು. ಬೇಡಿಕೆ ಪೂರೈಸಲು ಸಾಧ್ಯವಾಗದಿದ್ದಾಗ ಸಾಮಾನ್ಯ ಸರಕಾರಗಳು ಮಾಡುವ ಕಾರ್ಯವೆಂದರೆ ಕಡಿತಗೊಳಿಸುವುದು, ಅಥವಾ ಪವರ್‌ಕಟ್!
ಒಂದು ವಿಷಯ ತಿಳಿದಿರಲಿ, ಯಾವುದಾದರೂ ದೇಶ ಇಂತಹ ಪರಿಸ್ಥಿತಿ ತಲುಪಿತು ಎಂದರೆ, ಆ ದೇಶ ತನ್ನ ಆರ್ಥಿಕತೆಯ ಮಹಡಿಯ ಮೆಟ್ಟಿಲು ಇಳಿಯುತ್ತಿದೆ
ಎಂದೇ ಅರ್ಥ. ಕಾರಣ, ಇಂದಿನ ದಿನಮಾನದಲ್ಲಿ ಮನುಷ್ಯ ಬದುಕಲು ಗಾಳಿ, ನೀರು, ಆಹಾರದ ನಂತರ ಪ್ರಮುಖವಾಗಿ ಬೇಕಾದದ್ದು ವಿದ್ಯುತ್. ಇಂದು
ಬಹುತೇಕ ಕಡೆಗಳಲ್ಲಿ ವಿದ್ಯುತ್ ಇಲ್ಲದಿದ್ದರೆ ನೀರೂ ಇಲ್ಲ, ಆಹಾರ ಪದಾರ್ಥಗಳೂ ಇಲ್ಲ. ಎಲ್ಲವೂ ಒಂದಕ್ಕೊಂದು ಅಷ್ಟು ಹಾಸು ಹೊಕ್ಕಾಗಿವೆ. ೨೦೦೫ರ ವೇಳೆಗೆ ಪುಟ್ಟ ಜಪಾನ್ ದೇಶ ವಿಶ್ವದಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸುವ ದೇಶಗಳ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನದಲ್ಲಿತ್ತು. ಆದರೆ ತನಗೆ ಬೇಕಾದಷ್ಟನ್ನುಉತ್ಪಾದಿಸಿ ಕೊಳ್ಳುವ ಸಾಮರ್ಥ್ಯ ಆ ದೇಶದಲ್ಲಿರಲಿಲ್ಲ.
ಜಲ ಸಂಪನ್ಮೂಲ ಮತ್ತು ಅಣುಸ್ಥಾವರದಿಂದ ಶೇ.ಇಪ್ಪತೈದರಷ್ಟು ಮಾತ್ರ ವಿದ್ಯುತ್ ಉತ್ಪಾದಿಸಿಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಉಳಿದ ಎಪ್ಪತ್ತೈದರಷ್ಟು ಭಾಗಕ್ಕೆ ಬೇಕಾದ ಕಲ್ಲಿದ್ದಲು, ಅನಿಲ, ತೈಲ ಇತ್ಯಾದಿಗಳನ್ನುವಿದೇಶದಿಂದ ಆಮದು ಮಾಡಿಕೊಳ್ಳುತ್ತಿತ್ತು. (ಇಂದು ಅಣು ವಿದ್ಯುತ್ ಪ್ರಮಾಣ ತೀರಾಕಮ್ಮಿ ಇದ್ದು, ಸೌರ, ಗಾಳಿ, ಜೀವರಾಶಿಯಿಂದ ನವೀಕರಿಸ ಬಹುದಾದ ಶಕ್ತಿಯ (ರಿನೆವಬಲ ಎನರ್ಜಿ) ಪ್ರಮಾಣವೇ ಶೇ. ಇಪ್ಪತ್ತರಷ್ಟಿದೆ.) ಆ ಕಾಲದಲ್ಲಿ ಜಪಾನ್ ನಿಜಕ್ಕೂ
ಆತಂಕದಲ್ಲಿತ್ತು. ಅದಕ್ಕೆ ಕಾರಣವೂ ಇತ್ತು.
ಒಂದು, ರ- ಮಾಡುವ ದೇಶಗಳು ಯಾವ ಸಂದರ್ಭದಲ್ಲಿ ಬೇಕಾದರೂ ಕಚ್ಚಾ ಸಾಮಗ್ರಿಯ ಬೆಲೆ ಏರಿಸಬಹುದು. ಅದು ಸಾಮಗ್ರಿ ಪೂರೈಸುವ ದೇಶದ
ಅವಶ್ಯಕತೆಯೇ ಇರಬಹುದು ಅಥವಾ ಜಪಾನ್ ದೇಶದ ಶೋಷಣೆಗೆಂದೇ ಇರಬಹುದು. ಕಾರಣಯಾವುದೇ ಆದರೂ ಪೆಟ್ಟು ಬೀಳುವುದು ಜಪಾನ್‌ಗೆ ಹೊರತು ಇನ್ಯಾರಿಗೂ ಅಲ್ಲ. ಜಪಾನ್ ದೇಶವನ್ನುವ್ಯವಸ್ಥಿತವಾಗಿ ಲೂಟಿ ಮಾಡುವ ಅವಕಾಶ ರ- ಮಾಡುವ ದೇಶಗಳಿಗೆ ಇರುತ್ತಿತ್ತು. ಇನ್ನೊಂದು, ವಿದ್ಯುತ್ ಇಲ್ಲದ ದೇಶಕ್ಕೆ ದೊಡ್ಡಮಟ್ಟದ ಅಂತಾರಾಷ್ಟ್ರೀಯ ಉದ್ದಿಮೆ ಆಕರ್ಷಿಸುವುದು ತೀರಾ ಕಷ್ಟ.
ವಿದ್ಯುತ್ ಪೂರೈಕೆ ಇಲ್ಲದ ದೇಶದಲ್ಲಿ ಹೊಸ ಕಾರ್ಖಾನೆ ಸ್ಥಾಪಿಸುವುದಕ್ಕೆ, ಹೊಸ ಉದ್ಯಮ ಕೈಗೊಳ್ಳುವುದಕ್ಕೆ ಯಾವುದೇ ಅಂತಾರಾಷ್ಟ್ರೀಯ ಸಂಸ್ಥೆಗಳು ಧೈರ್ಯ ಮಾಡುವುದಿಲ್ಲ. ತನ್ನ ದೇಶಕ್ಕೆ ಬೇಕಾದ ವಿದ್ಯುತ್ ಶಕ್ತಿಗೆ ಬೇರೆ ದೇಶವನ್ನು ಅವಲಂಬಿಸಿದ ದೇಶವನ್ನುನಂಬಿ ಉದ್ಯಮ ಆರಂಭಿಸಲು ಯಾರು ಮುಂದೆ ಬಂದಾರು? ಯಾವುದೇ ಕಾರ್ಖಾನೆಯಾದರೂ ಅದಕ್ಕೆ ವಿದ್ಯುಚ್ಛಕ್ತಿಯೇ ಉಸಿರು. ವಿದ್ಯುತ್ ಇಲ್ಲದ ಕಾರ್ಖಾನೆ ಜೀವ ವಿಲ್ಲದ ದೇಹಕ್ಕೆ ಸಮತಾನೆ? ಮತ್ತೊಂದು ಪ್ರಮುಖ ಅಂಶವೆಂದರೆ, ಒಂದು ವೇಳೆ ಅಂತಹ ದೇಶ ಯುದ್ಧಕ್ಕೆ ಹೊರಟರೆ, ಅದರ ಮೇಲೆ ಬಾಂಬ್ ಹಾಕುವುದೂ ಬೇಡ.
ವಿದ್ಯುತ್ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳ ಪೂರೈಕೆ ನಿಲ್ಲಿಸಿದರೆ ಸಾಕು. ಆದೇಶ ಮಂಡಿಯೂರಿ, ತಲೆತಗ್ಗಿಸಿ ಕುಳಿತುಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಜಪಾನ್ ದೇಶ ಒಂದು ನಯಾ ಪೈಸೆ ಖರ್ಚು ಮಾಡದೇ, ಬದಲಾಗಿ, ಐದುತಿಂಗಳ ಅವಧಿಯಲ್ಲಿ ದೇಶದ ನೂರು ಬಿಲಿಯನ್‌ಯೆನ್ (ಯೆನ್ ಅಂದರೆ ಜಪಾನಿನ ಕರೆನ್ಸಿ) ನಷ್ಟು ಹಣ (ಸುಮಾರು ನೂರು ಕೋಟಿ ರು.) ಉಳಿಸಿ ಮಾದರಿಯಾಯಿತು. ಆ ವರ್ಷ, ಎಲ್ಲಿ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ ಎಂದು ತಿಳಿಯಲು ದೇಶದಾದ್ಯಂತ ಸರ್ವೆ ನಡೆಸಿತು.
ಸರ್ವೆ ಪ್ರಕಾರ, ದೊಡ್ಡ ದೊಡ್ಡ ಸಂಸ್ಥೆಗಳ ಕಚೇರಿಗಳಲ್ಲಿ ಬಳಸುವ ಏರ್ ಕಂಡೀಶನ್ ಹೆಚ್ಚು ವಿದ್ಯುತ್ ಬಳಸುತ್ತಿದ್ದವು. ಆ ಸಮಸ್ಯೆಗೆ ಒಂದು ಉಪಾಯ
ಹುಡುಕಿದ ಅಂದಿನ ಪರಿಸರ ಸಚಿವೆ ಯೂರಿಕೊ ಕೋಯ್ಕ. ‘ಕೂಲ್ ಬಿಝ’ (ಇಟಟ್ಝ ಆಜ್ಢಿ) ಅಭಿಯಾನ ಆರಂಭಿಸಿದರು. ಅಲ್ಲಿಯವರೆಗೂ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಸೂಟ್ ಅಥವಾ ಕೋಟ್, ನೆಕ್ ಟೈ (ಕಂಠ ಬಂಧ) ತೊಟ್ಟು ಬರಬೇಕು ಎಂಬುದು ಅಲಿಖಿತ ಕಾನೂನಿನಂತಿತ್ತು. ಕೆಲವು ಸಂಸ್ಥೆಗಳು ಇದನ್ನುಕಡ್ಡಾಯ ಮಾಡಿದ್ದವು. ಜತೆಗೆ ಜಪಾನಿ ಜನರು ಹೆಚ್ಚಾಗಿ ಕಪ್ಪು ಬಣ್ಣದ ಉಡುಗೆ ತೊಡಲು ಇಷ್ಟಪಡುತ್ತಿದ್ದರು. ಇದರಿಂದಾಗಿ, ಕಚೇರಿಯ ಹವಾನಿಯಂತ್ರಣದಲ್ಲಿ ತಾಪಮಾನವನ್ನುತಗ್ಗಿಸಬೇ ಕಾಗುತ್ತಿತ್ತು. ಅದಕ್ಕೆ ಬಳಸುವ ವಿದ್ಯುತ್ ಪ್ರಮಾಣ ದೊಡ್ಡದು ಎಂದು ಅರಿತ ಪರಿಸರ ಸಚಿವಾ ಲಯ, ಬೇಸಿಗೆಯಲ್ಲಿ ನೌಕರರು ಸಾಮಾನ್ಯ ಉಡುಪು ತೊಡಲು ಅವಕಾಶ ಮಾಡಿಕೊಡುವಂತೆ ಸಂಸ್ಥೆಗಳಲ್ಲಿ ಮನವಿ ಮಾಡಿಕೊಂಡಿತು.
ಸರಕಾರಿ ಕಚೇರಿ ಗಳಲ್ಲಿ ಇದನ್ನು ಮೊದಲು ಜಾರಿಗೆ ತರಲಾಯಿತು. ಅಂದು ದೇಶದ ಪ್ರಧಾನಿಯಾಗಿದ್ದ ಜುನಿ ಚಿರೊಕೊಯಿ ಜುಮಿ ಸ್ವತಃ ಕೋಟು, ಟೈ
ತೊಡುವುದನ್ನು ಬಿಟ್ಟು, ಬೇಸಿಗೆಯ ಉಡುಪು ತೊಡಲು ಆರಂಭಿಸಿದರು. ಅರ್ಧ ತೋಳಿನ ಅಂಗಿಯನ್ನೂ ತೊಟ್ಟು ಮಾದರಿ ಯಾದರು. ಇಷ್ಟಾದ ಮೇಲೆ
ಖಾಸಗಿ ಸಂಸ್ಥೆಗಳು ಹಿಂದುಳಿಯಲು ಸಾಧ್ಯವೇ ಇರಲಿಲ್ಲ. ಟೊಯೋಟಾ ಸಂಸ್ಥೆಯಂತೂ ಸಭೆ, ಸಮ್ಮೇಳನಗಳಿಗೂ ಸಾಮಾನ್ಯ ಉಡುಗೆ ತೊಟ್ಟು ಬರುವಂತೆ
ಹೇಳಿತು. ಅನೇಕ ಖಾಸಗಿ -ಷನ್ ಶೋ ಆಯೋಜಿಸಲ್ಪಟ್ಟವು. ದೊಡ್ಡ ಸಂಸ್ಥೆಯ ಉನ್ನತ ಹುzಯಲ್ಲಿರುವವರೂ ಇದರಲ್ಲಿ ಪಾಲ್ಗೊಂ ಡರು. ಪರಿಣಾಮ ವಾಗಿ,
ಬೇಸಿಗೆಯ ಐದು ತಿಂಗಳು ಎ ಕಚೇರಿಗಳಲ್ಲೂ ಹವಾನಿಯಂತ್ರಣದ ತಾಪಮಾ ನವನ್ನು ಎರಡು ಡಿಗ್ರಿ (ಇಪ್ಪತ್ತಾರರಿಂದ ಇಪ್ಪತ್ತೆಂಟು ಡಿಗ್ರಿ ಸೆಂಟಿಗ್ರೇಡ್‌ಗೆ) ಏರಿಸಲು ಅನುಕೂಲವಾಯಿತು.
ಅಷ್ಟೇ ಅಲ್ಲ, ಇದರಿಂದ ಎಚ್ಚೆತ್ತ ಜನರು ತಮ್ಮ ಮನೆಯಲ್ಲೂ ವಿದ್ಯುತ್ತನ್ನು ಮಿತವಾಗಿ ಬಳಸಲು ಆರಂಭಿಸಿದರು. ಐದುತಿಂಗಳ ನಂತರ ಪುನಃ ಒಂದು ಸರ್ವೆ
ಮಾಡಿದಾಗ ಒಂದಷ್ಟು ಪರಿಣಾಮಕಾರಿ ಅಂಕಿ ಅಂಶಗಳು ಬೆಳಕಿಗೆ ಬಂದಿದ್ದವು. ಕೂಲ್‌ಬಿಝ್ ಅಭಿಯಾನ ದೇಶದ ಶೇ.ತೊಂಬತ್ತೇಳರಷ್ಟು ಜನರನ್ನು ತಲುಪಿತು. ಶೇ. ಅರವತ್ತರಷ್ಟು ಜನ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಉದ್ದ ಕೂದಲಿನವರು ಬೇಸಿಗೆಯಲ್ಲಿ ಕೂದಲನ್ನು ಸಣ್ಣದಾಗಿ ಕತ್ತರಿಸಿಕೊಂಡರು. ಸಿದ್ಧ ಉಡುಪು ತಯಾರಿಸುವ ಕಂಪನಿಗಳು ಹೊಸ ವಿನ್ಯಾಸದ ಬಟ್ಟೆಯನ್ನು ಮಾರುಕಟ್ಟೆಗೆ ಬಿಟ್ಟವು. ಮೊದಲ ಇಪ್ಪತ್ತು ದಿನದ ಈ ಅಭಿಯಾನ ದೇಶವ್ಯಾಪಿಯಾಗಿತ್ತು. ವಿದ್ಯುತ್
ಉಳಿತಾಯದ ಜತೆಗೆ, ಉತ್ಪಾದನೆಗೆ ತಗಲುವ ವೆಚ್ಚದಲ್ಲಿ ನೂರು ಬಿಲಿಯನ್ ಯೆನ್ ಉಳಿಸಿಕೊಂಡಿತ್ತು ಜಪಾನ್. ಹೊಸ ವಿನ್ಯಾಸದ ಉಡುಗೆಯ ಮಾರಿ ಸುಮಾರು ಇಪ್ಪತ್ತು ಬಿಲಿಯನ್ ಯೆನ್ ಕೊಡುಗೆಯನ್ನುಬಟ್ಟೆ ಉದ್ಯಮ ದೇಶಕ್ಕೆ ಕೊಡುಗೆ ನೀಡಿತು. (ಆ ಸಂದರ್ಭದಲ್ಲಿ ನೆಕ್ಟೈ ತಯಾರಿಸುವ ಕಂಪನಿಯ ಆದಾಯ ಮಾತ್ರ ಶೇ.ನಲವತ್ತರಷ್ಟು ಇಳಿಮುಖವಾಗಿತ್ತು).
ಇದರೊಂದಿಗೆ, ಸುಮಾರು ಐದುಲಕ್ಷ ಟನ್ ಕಾರ್ಬನ್ ಡೈಆಕ್ಸೈಡ್ ಪರಿಸರದೊಂದಿಗೆ ಸೇರುವುದು ಉಳಿಯಿತು. ಈ ಪ್ರಮಾಣ ಒಂದು ತಿಂಗಳಿನಲ್ಲಿ ಹತ್ತು
ಲಕ್ಷ ಮನೆಗಳಿಂದ ಹೊರ ಸೂಸುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣಕ್ಕೆ ಸಮ. ಅದರ ನಂತರದ ವರ್ಷ ಈ ಸಂಖ್ಯೆ ದ್ವಿಗುಣವಾಯಿತು. ಕಳೆದ ಹದಿನೈದು ವರ್ಷದಿಂದ ಜಪಾನ್ ಇದನ್ನುಮುಂದುವರಿಸಿಕೊಂಡು ಬಂದಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಎಲ್ಲ ತಾಂತ್ರಿಕ ಸಮಸ್ಯೆಗಳಿಗೂ ತಂತ್ರeನವೇ ಉತ್ತರ ಅಲ್ಲ ಎನ್ನುವುದು. ತಂತ್ರeನದಲ್ಲಿ ಸಾಕಷ್ಟು ಮುಂದುವರಿದ
ದೇಶ ಜಪಾನ್‌ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅಂದು ತನ್ನಸಮಸ್ಯೆಗೆ ಮಾನವ ಕೇಂದ್ರಿತ ಪರಿಹಾರ ಕಂಡು ಕೊಂಡಿತ್ತು ಜಪಾನ್. ಮನುಷ್ಯ ತನ್ನಜೀವನ ಶೈಲಿ ಬದಲಾಯಿಸಿ ಕೊಳ್ಳುವುದರೊಂದಿಗೆ ಪರಿಸರಕ್ಕೆ, ದೇಶಕ್ಕಷ್ಟೇ ಅಲ್ಲದೆ, ಏರುತ್ತಿರುವ ಜಾಗತಿಕ ತಾಪಮಾನಕ್ಕೂ, ಹವಾಮಾನ ಬದಲಾವಣೆಗೂ ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿತ್ತು ಜಪಾನ್. ಇನ್ನೊಂದು ಪ್ರಮುಖ ಅಂಶವೆಂದರೆ, ಜಪಾನ್ ಸರಕಾರದ
ಅಭಿಯಾನವನ್ನು ಯಾರೂ ವಿರೋಽಸಲಿಲ್ಲ.
ಅಸಮಾಧಾನಗೊಳ್ಳಲಿಲ್ಲ. ಬದಲಾಗಿ ಸರಕಾರದ ಜತೆ ಕೂಡಿಕೊಂಡರು. ಬೀದಿಗಿಳಿದು ಪ್ರತಿಭಟನೆ ಮಾಡಿ, ಕೂಗಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವು ದಕ್ಕಿಂತ ಸಮಸ್ಯೆ ಬಗೆ ಹರಿಸಲು ತಾನು ಯಾವ ರೀತಿಯ ಕೊಡುಗೆ ನೀಡಬಹುದು, ಹೇಗೆ ಸಹಕರಿಸಬಹುದು ಎನ್ನುವುದನ್ನು ಪ್ರಜೆಗಳೂ ಅರ್ಥೈಸಿ ಕೊಳ್ಳಬೇಕು
ಎಂಬುದಕ್ಕೆ ಉತ್ತಮ ಉದಾಹರಣೆ ಇದು. ಇಷ್ಟು ಹೇಳಿದ ಮೇಲೆ, ಇದೆಲ್ಲ ನೆನಪಾಗಲು ಕಾರಣ ಹೇಳದಿದ್ದರೆ ಆದೀತೇ? ಮೊನ್ನೆ ಮೊನ್ನೆ, ಅಂದರೆ ಸೆಪ್ಟೆಂಬರ್ ತಿಂಗಳಿನ ಕೊನೆಯವಾರ ಚೀನಾದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ದೇಶದ ಕೆಲವು ಪ್ರಮುಖ ನಗರ, ಪಟ್ಟಣಗಳು ಗಾಢಾಂಧಕಾರದಲ್ಲಿ ಕಳೆದು ಹೋದವು. ಟೆಲ್ಸಾ, ಆಪಲ್ ಸೇರಿದಂತೆ ಸಾವಿರಾರು ಕಾರ್ಖಾನೆಗಳು ಕೆಲವು ಸಮಯ ಸ್ಥಗಿತಗೊಂಡವು.
ಲಕ್ಷಾಂತರ ಮನೆಗಳು ಕತ್ತಲಲ್ಲಿ ಕಳೆದು ಹೋದವು. ಕೆಲವು ಪಟ್ಟಣಗಳಲ್ಲಿ ಪುರಸಭೆಯ ಅಽಕಾರಿಗಳು ಒಂದು ತಿಂಗಳಿಗೆ ಬೇಕಾಗುವಷ್ಟು ನೀರು ಶೇಖರಿಸಿ ಇಟ್ಟುಕೊಳ್ಳುವಂತೆ ಜನರಿಗೆ ಸೂಚಿಸಿದವು. ನೂರರಿಂದ ಇನ್ನೂ ರು ಜನ ಕಾರ್ಮಿಕರಿರುವ ಕಾರ್ಖಾನೆಗಳು ತಿಂಗಳಿಗೆ ಹತ್ತು ಸಾವಿರ ಡಾಲರ್ ಹಣ ಕೊಟ್ಟು ಜನರೇಟರ್ ಬಾಡಿಗೆಗೆ ತಂದು ಕೆಲಸ ಮುಂದುವರಿಸಿದವು. ಈ ಪರಿಸ್ಥಿತಿ ಇನ್ನೂ ಎಷ್ಟುದಿನ ಮುಂದುವರಿಯುತ್ತದೆಯೋ ಗೊತ್ತಿಲ್ಲ. ಅಷ್ಟಕ್ಕೂ ಇದಕ್ಕೆ ಕಾರಣ ಕಲ್ಲಿದ್ದಲಿನ ಕೊರತೆ.
ಚೀನಾದಲ್ಲಿ ಶೇ.ಎಪ್ಪತ್ತರಷ್ಟು ವಿದ್ಯುತ್ ಉತ್ಪಾದನೆಯಾಗುವುದು ಕಲ್ಲಿದ್ದಲಿನಿಂದ. ತನ್ನದೇಶದಲ್ಲಿ ಸಾಕಷ್ಟು ಕಲ್ಲಿದ್ದಲಿನ ನಿಕ್ಷೇಪ ಇದ್ದರೂ, ಪರಿಸರದ ಸಮತೋಲನೆ ಕಾಪಾಡಿಕೊಳ್ಳುವುದಕ್ಕಾಗಿ ಗಣಿಗಾರಿಕೆಗೆ ಅನುಮತಿ ನೀಡುತ್ತಿಲ್ಲ ಎಂಬುದು ಚೀನಾದ ಹೇಳಿಕೆ. ವಿದ್ಯುತ್ ಉತ್ಪಾದನೆಗೆ ಅವಶ್ಯಕವಾದ ಕಲ್ಲಿದ್ದಲಿನ ಬೇಡಿಕೆ ಹೆಚ್ಚಾಗಿದ್ದರಿಂದ ಸ್ವಾಭಾವಿಕವಾಗಿ ಬೆಲೆಹೆಚ್ಚಿದೆ. ಅದಕ್ಕೆ ಪರ್ಯಾಯವೆಂದರೆ ಆಮದು ಮಾಡಿಕೊಳ್ಳುವುದು. ಮೊದಲೆಲ್ಲ ಚೀನಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸುತ್ತಿದ್ದುದು ಆಸ್ಟ್ರೇಲಿಯಾ. ಆದರೆ ಇತ್ತೀಚೆಗೆ ಚೀನಾ ಆಸ್ಟ್ರೇಲಿಯಾದೊಂದಿಗೆ ಕಿರಿಕಿರಿ ಮಾಡಿಕೊಂಡು ಅಲ್ಲಿಯ ಕಲ್ಲಿದ್ದಲು, ಮದ್ಯ ಸೇರಿದಂತೆ ಅನೇಕ ವಸ್ತುಗಳಿಗೆ ನಿರ್ಬಂಧ ಹೇರಿದೆ.
ಇರಲಿ, ಬೇರೆ ಯಾವ ದೇಶದಿಂದ ಬಂದರೂ, ಅದಕ್ಕೂ ಬೆಲೆ ಹೆಚ್ಚು. ಗ್ರಾಹಕರಿಗೆ ಪೂರೈಸುವ ವಿದ್ಯುತ್ ದರ ಏರಿಸದಂತೆ ಸರಕಾರ ನಿರ್ಬಂಧ ಹೇರಿರುವು ದರಿಂದ ಕೆಲವು ವಿದ್ಯುತ್ ಕಂಪನಿಗಳು ರಿಪೇರಿಯ ನೆಪದಲ್ಲಿ ಬಾಗಿಲು ಹಾಕಿವೆ. ಕಂಡಕಂಡzಲ್ಲವೂ ಬೇಕು ಎಂದು ರಚ್ಚೆ ಹಿಡಿಯುವ, ಎಲ್ಲವೂ ತನ್ನ ಸ್ವಾಽನದಲ್ಲಿಯೇ ಇರಬೇಕು ಎಂದು ಬಯಸುವ, ತನ್ನ ಮಾತಿಗೆ ಸಹಕರಿಸದಿದ್ದರೆ ಕಚ್ಚಾಟಕ್ಕಿಳಿಯುವ ಚೀನಾ ಇಂದು ತನ್ನ ಕೊರಳ ಪಟ್ಟಿಯನ್ನು ಒಮ್ಮೆ ಇಣುಕಿ ನೋಡಬೇಕಿದೆ. ಜಪಾನ್ ನಂತಹ ಪುಟ್ಟ ದೇಶದಿಂದ ಚೀನಾ ಪಾಠ ಕಲಿಯಬೇಕಿದೆ.
ಜಪಾನ್ ಸಣ್ಣ ದೇಶ, ಜನಸಂಖ್ಯೆಯೂ ಕಡಿಮೆ, ಜನರ ಮನಸ್ಥಿತಿಯೂ ಬೇರೆ. ಚೀನಾ ಎ ವಿಷಯದಲ್ಲೂ ತದ್ವಿರುದ್ಧ. ಮಗುಚಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
ಎಂಬ ಮನೋಭಾವ ಹೊಂದಿದ, ತನ್ನನ್ನು ಮೀರಿಸುವವರು ಯಾರೂ ಇಲ್ಲ ಎಂಬ ಅಹಂಕಾರದ ಅಮಲಿನಲ್ಲಿ ತೇಲುತ್ತಿರುವ ಚೀನಾಕ್ಕೆ ಇದು ಸಾಧ್ಯವೇ?
ಈ ಸಂಕಷ್ಟದಿಂದ ಹೊರ ಬರಲು ಚೀನಾ ಯಾವ ಉಪಾಯ ಹುಡುಕುತ್ತದೆಯೋ ಕಾದು ನೋಡಬೇಕು.